Tuesday, September 24, 2013

 ಚತುರ್ಥ ದತ್ತಾವತಾರಿ, ಸಕಲಮತ ಸಂಪ್ರದಾಯದ ಸ್ಥಾಪಕ ಸದ್ಗುರು ಶ್ರೀ ಮಾಣಿಕಪ್ರಭು ಮಹಾರಾಜರ ಪರಂಪರೆಯ ಆರನೇಯ ತಲೆಮಾರಿನ ವಂಶಸ್ಥರು ಹಾಗೂ ಪ್ರಸಕ್ತ  ಪೀಠಾಧಿಪತಿಗಳಾದ ಶ್ರೀ ಜ್ಞಾನರಾಜ ಮಾಣಿಕಪ್ರಭು ಮಹಾರಾಜ್ ರವರು ಮೊದಲ ಬಾರಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸಂದರ್ಶನ.
 

1. ನಾಲ್ಕನೇಯ ದತ್ತಾವತಾರಿಗಳಾದ ಸದ್ಗುರು ಶ್ರೀ ಮಾಣಿಕಪ್ರಭು ಮಹಾರಾಜ್ ರವರ ಹೆಸರು ಕರ್ನಾಟಕದಲ್ಲಿ ಕೇವಲ ಕೆಲ ದತ್ತಭಕ್ತರಿಗೆ ಮಾತ್ರ ಪರಿಚಿತ. ಅವರ ಬಗ್ಗೆ ಹೇಳಿ.

# 1817 ರಲ್ಲಿ ಲಾಡವಂತಿ ಗ್ರಾಮದಲ್ಲಿ ಜನಿಸಿದ ಪ್ರಭುಗಳು ಬಾಲ್ಯದಿಂದಲೇ ಅವಧೂತ ಸ್ಥಿತಿಯಲ್ಲಿದ್ದರು. ಬಾಲ್ಯದಲ್ಲೇ ಮನೆ ತೊರೆದು ಕನ್ಯಾ ಕುಮಾರಿಯಿಂದ ಕಾಶ್ಮೀರದ ವೆರೆಗೆ ಎಲ್ಲಕಡೆಗಳಲ್ಲಿ ಸಂಚರಿಸಿ .. ಅನೇಕ ಭಾಷೆ ಹಾಗೂ ವಿದ್ಯೆಗಳನ್ನು ಕಲಿತರು. 1845 ರಲ್ಲಿ ಮತ್ತೆ ಬೀದರ್ ಜಿಲ್ಲೆಗೆ ಮರಳಿ ಬಂದು ಒಂದು ಚಿಕ್ಕ ಗುಡಿಸಲಿನಲ್ಲಿ ದತ್ತಪಾದುಕೆಗಳನ್ನು ಸ್ಥಾಪಿಸಿ ಅಲ್ಲಿಯೇ ವಾಸ ಮಾಡತೊಡಗಿದರು. ಆ ಪ್ರದೇಶವೇ ಈಗ ಮಾಣಿಕನಗರ ಎಂದು ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಹೈದರಾಬಾದಿನ ದೊರೆಗಳಾದ ನಿಜಾಮರು ಕೂಡ ಗುಡಿಸಲಿನಲ್ಲಿದ್ದ ಪ್ರಭುಗಳ ದರ್ಶನಕ್ಕಾಗಿ ಬರುತ್ತಿದ್ದರು. ಮಾಣಿಕ ಪ್ರಭುಗಳು ಆ ಪ್ರಾಂತ್ಯದಲ್ಲಿ ಹೆಚ್ಚುತ್ತಿದ್ದ ಪರಸ್ಪರ ಮತದ್ವೇಷವನ್ನು ಹೋಗಲಾಡಿಸಿ ''ಪರಮಾತ್ಮನು ಒಬ್ಬನೇ ಹಾಗೂ ಅಖಂಡನಾಗಿದ್ದಾನೆ'' ಎಂದು ಮನವರಿಕೆ ಮಾಡಿಸಿ ''ಸಕಲಮತ ಸಂಪ್ರದಾಯ'' ವನ್ನು ಸ್ಥಾಪಿಸಿದರು. ಅವರ ಲೀಲೆಗಳು, ಅಪಾರ ಮಹಿಮೆ ಹಾಗೂ ತತ್ವಬೋಧನೆಗಳಿಂದಾಗಿ ವೀರಶೈವರು ಮಾಣಿಕಪ್ರಭುಗಳಲ್ಲಿ ಬಸವೇಶ್ವರರನ್ನು, ಸಿಖ್ಖರು ಗುರುನಾನಕರನ್ನು, ಮುಸಲ್ಮಾನರು ಮೊಹಬೂಬ್ ಸುಬ್ಹಾನಿಯನ್ನು, ಹಾಗೂ ಹಿಂದೂಗಳು ಸಾಕ್ಷಾತ್ ದತ್ತಾತ್ರೇಯನನ್ನು ಕಾಣುತ್ತಿದ್ದರು. ದ್ವೈತ ಮತ್ತು ಅದ್ವೈತಿಗಳೇಲ್ಲರೂ ಇಲ್ಲಿ ಒಂದಾಗಿದ್ದಾರೆ. ಇಂದಿಗೂ ಕೂಡ ಈ ಎಲ್ಲ ಧರ್ಮಗಳ ಭಕ್ತರು ಮಾಣಿಕ ಪ್ರಭುಗಳ ಸಮಾಧಿಯ ದರ್ಶನಕ್ಕಾಗಿ ಬರುತ್ತಾರೆ. ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಹಾಗೂ ಗುಜರಾತ್ ಮುಂತಾದ ಪ್ರಾಂತ್ಯಗಳಲ್ಲಿರುವ ಸಾವಿರಾರು ಜನರು ಸಕಲಮತ ಸಂಪ್ರದಾಯದ ಅನುಯಾಯಿಗಳಾಗಿದ್ದಾರೆ. ಪ್ರತೀ ವರ್ಷ ನಡೆಯುವ ದತ್ತಜಯಂತಿಯ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಮಾಣಿಕನಗರದಲ್ಲಿ ಸೇರುತ್ತಾರೆ. ತಲೆಮಾರುಗಳಿಂದ ಗುರುಮಂತ್ರವನ್ನು ಉಪದೇಶ ಪಡೆಯುತ್ತ ಬರುತ್ತಿರುವ ಹಾಗೂ  ಈ ಸಂಪ್ರದಾಯದ ಉಪಾಸನಾ ಪದ್ಧತಿಯನ್ನು ಪ್ರತಿದಿನ ಅನುಸರಿಸುವ ಸಾವಿರಾರು ಕುಟುಂಬಗಳು ಇವೆ.

2) ನೀವು ಈಗ ಬೆಂಗಳೂರಿಗೆ ಆಗಮಿಸುತ್ತಿರುವ ಉದ್ದೇಶವೇನು.. ಎಲ್ಲಿ ಮತ್ತು ಎಷ್ಟು ದಿನ ತಂಗಲಿದ್ದೀರಿ?
# ನಮ್ಮ ಬೀದರ್ ಜಿಲ್ಲೆಯ ಸಾವಿರಾರು ಭಕ್ತರು.. ಹಾಗೂ ಮಹಾರಾಷ್ಟ್ರದ ಸಕಲಮತ ಸಾಂಪ್ರದಾಯಿಕರು ಈ ಮಹಾನಗರದಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಕೋರಿಕೆಯ ಮೇರೆಗೆ ಈ ಎರಡುದಿನಗಳ ಯಾತ್ರೆ ಕೈಗೊಂಡಿದ್ದೇವೆ. ಭಗವದ್ಗೀತೆಯ ಬಗೆಗೆ ಪ್ರವಚನವನ್ನು ಭಕ್ತರು ಹಮ್ಮಿಕೊಂಡಿದ್ದಾರೆ. ನಾವು ನಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಗಾಗಿ ಅನೇಕಬಾರಿ ಇಲ್ಲಿಗೆ ಬಂದುಹೋಗಿದ್ದರೂ ಕೂಡ ಪೀಠಾಚಾರ್ಯರಾಗಿ ಪ್ರಭುಗಳ ಪವಿತ್ರ ಪಾದುಕೆಗಳೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿರುವುದು ಇದೇ ಮೊದಲು.

3. ಸಕಲಮತ ಸಂಪ್ರದಾಯದ ವಾಸ್ತವಿಕ ಅರ್ಥವೇನು?  ಹಾಗೂ ಹತ್ತೊಂಭತ್ತನೇಯ ಶತಮಾನದಲ್ಲಿ ಸ್ಥಾಪಿಸಿದ ಈ ಸಂಪ್ರದಾಯ ಇಂದಿನ  ಕಾಲದಲ್ಲಿ ಎಷ್ಟು ಪ್ರಸ್ತುತ?

# ವಿಭಿನ್ನತೆಗಳಿಂದ ಕೂಡಿದ ಅನೇಕ ಸಂಪ್ರದಾಯಗಳ ಏಕನಿಷ್ಠೆಯೇ ಸಕಲಮತ ಸಂಪ್ರದಾಯದ ಮೂಲ. ಈ  ಸಂಪ್ರದಾಯ ಯಾವುದೇ ಅನ್ಯ ಸಂಪ್ರದಾಯಗಳಿಗೆ ವಿರೋಧಿಯಾಗಿಲ್ಲ. ಬದಲಾಗಿ ಉಳಿದ ಎಲ್ಲ ಸಂಪ್ರದಾಯಗಳಿಗೆ ಪೂರಕವಾಗಿಯೇ ಇದೆ. ಎಲ್ಲ ಮತಗಳಲ್ಲಿ, ಸಂಪ್ರದಾಯಗಳಲ್ಲಿ ತಮ್ಮದೇ ಆದ ವಿಶಿಷ್ಟ ಸಿದ್ಧಾಂತಗಳು ಮತ್ತು ಆಚರಣೆಗಳಿರುತ್ತವೆ. ಅವುಗಳ ಹೊರತಾಗಿ ಉಳಿದವುಗಳನ್ನೆಲ್ಲ ನಿಕೃಷ್ಟವಾಗಿ, ಅಥವಾ ವಿರೋಧಿ ತತ್ವಗಳಾಗಿ ಭಾವಿಸಲಾಗುತ್ತದೆ. ಅನ್ಯ ಮತದ  ಉಪಾಸನಾ ಸಂಪ್ರದಾಯದ ಅವಲಂಬನೆ ಅಥವಾ ಅವುಗಳ ಬಗೆಗಿನ ವಿಚಾರವನ್ನು ಕೂಡ ದೋಷವೆಂದು ಪರಿಗಣಿಸಿ ನಿಷೇಧಿಸಲಾಗಿದೆ. ಆದರೆ ಜಗತ್ತಿನ ಎಲ್ಲ ಮತ-ಸಂಪ್ರದಾಯಗಳೂ ಕೂಡ ತಮ್ಮ ತಮ್ಮ ಅನುಯಾಯಿಗಳನ್ನು  ಪರಮಾತ್ಮನ ಬಳಿಗೆ ತಲುಪಿಸುವಲ್ಲಿ ಪೂರ್ಣಪ್ರಮಾಣದಲ್ಲಿ ಸಮರ್ಥವಾಗಿಯೇ ಇವೆ. ಅವುಗಳಲ್ಲಿ ಪರಸ್ಪರ ನಿಂದನೆ ಸಲ್ಲ ಎಂಬುದು ಸಕಲಮತಾಚಾರ್ಯರಾಗಿದ್ದ ಮಾಣಿಕಪ್ರಭುಗಳ ನಂಬಿಕೆ. ಏಕೆಂದರೆ, ''ಬುದ್ಧಿ''ಯು ''ಜಡ'' ವಸ್ತು. ಜಡವಾದ ಆ ಬುದ್ಧಿಯು ಪರಮಾತ್ಮರೂಪವಾದ ಚೈತನ್ಯದ ಹೊರತಾಗಿ  ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಮತ್ತು ಯಾವುದೇ ಮತ-ಸಂಪ್ರದಾಯಗಳನ್ನು ಪ್ರತಿಪಾದಿಸಲೂ ಸಾಧ್ಯವಿಲ್ಲ. ಹೀಗೆ ವಿವಿಧ ಸಿದ್ಧಾಂತಗಳ ಪ್ರತಿಪಾದನೆ ಇದ್ಧಾಗಿಯೂ ಆ ಪ್ರತಿಪಾದನೆ ಮಾಡುವ ಬುದ್ಧಿಯ ಹಿಂದಿನ ''ಚೈತನ್ಯ'' ಎಲ್ಲರಲ್ಲಿಯೂ ಒಂದೇ ಆದಕಾರಣ ಎಲ್ಲ ಮತ-ಸಿದ್ಧಾಂತಗಳೂ ಪರಮಾತ್ಮನಿಂದಲೇ ಉತ್ಪನ್ನವಾದವುಗಳು. ಅವುಗಳಲ್ಲಿ ಶ್ರೇಷ್ಠವಾದದ್ದೂ ಹಾಗೂ ನಿಕೃಷ್ಟವಾದ್ದು ಯಾವುದೂ ಇಲ್ಲ...ಎನ್ನುವ ಸಿದ್ಧಾಂತದೊಂದಿಗೆ ಸಕಲಮತ ಸಂಪ್ರದಾಯದ ಸ್ಥಾಪನೆಯಾಗಿದೆ. ಈ ಸಂಪ್ರದಾಯದಲ್ಲಿ ಯಾವುದೇ ಮತ-ಸಂಪ್ರದಾಯಗಳನ್ನು ದೋಷಪೂರಿತ ಅಥವಾ ವಿರೋಧಿ ಎಂದು ಪರಿಗಣಿಸದೇ ಅವುಗಳಲ್ಲಿನ ತತ್ವಗಳನ್ನು ಹಾಗೂ ಆಚರಣೆಗಳಲ್ಲಿನ ಗುಣದೋಷಗಳನ್ನು ಉಪಕಾರಬುದ್ಧಿಯಿಂದ ವಿಮರ್ಶಿಸಿ ''ಗುಣ''ಗಳನ್ನು ಸ್ವೀಕರಿಸಿ 'ದೋಷ''ಗಳನ್ನು ತ್ಯಾಗ ಮಾಡಲಾಗುತ್ತದೆ.

ಇನ್ನು ಈ ಸಂಪ್ರದಾಯ ಈಗಿನ ಕಾಲಕ್ಕೆ ಹೇಗೆ ಉಪಯುಕ್ತ ಮತ್ತು ಪ್ರಸ್ತುತ ಎಂದರೆ..
ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲೆಡೆ, ಅಸೂಯೆ, ಪರನಿಂದೆ, ಅಸಹಿಷ್ಣುತೆ, ಮತಭೇದ ಮುಂತಾದವುಗಳು ಹೆಚ್ಚು ಹರಡಿಕೊಂಡಿವೆ. ಇವೆಲ್ಲವೂ ಅಜ್ಞಾನದ ಕಾರಣದಿಂದಾಗಿಯೇ ಉಂಟಾಗಿವೆ. ಪರಮಾತ್ಮ ಎನ್ನುವ ಯಾವ ಶಾಶ್ವತ ಸತ್ಯವಿದೆಯೋ, ಅದು ಒಂದೇ. ಆ ಪರಮಾತ್ಮನ ಕಡೆಗಿನ ದಾರಿಗಳು ಬೇರೆ ಬೇರೆ ಯಾಗಿದ್ದರೂ ಕೂಡ ಎಲ್ಲ ಗುರಿ ಒಂದೇ ಆಗಿದೆ ಎಂಬ ಅರಿವು ಹಿಂದಿಗಿಂತಲೂ ಈಗ ಹೆಚ್ಚು ಬೇಕಾಗಿದೆ. ಒಂದು ವೃತ್ತವಿದೆಯೆಂದಿಟ್ಟುಕೊಳ್ಳೋಣ. ಆ ವೃತ್ತದ ಪರಿಧಿಯಿಂದ ಮಧ್ಯದ ಕೇಂದ್ರಬಿಂದುವಿನ ಕಡೆಗೆ ಎರಡು ಗೆರೆಗಳನ್ನು ದುಂಡಾಗಿ ಎಳೆಯುತ್ತಾ ಹೋದರೆ ಪರಿಧಿಯ ಬಳಿ ಆ ಎರಡೂ ಗೆರೆಗಳ ನಡುವೆ ಅಂತರ ಹೆಚ್ಚಾಗಿರುತ್ತದೆ. ಕೇಂದ್ರದ ಕಡೆಗೆ ಹೋದಂತೆಲ್ಲ ಅವುಗಳ ನಡುವಿನ ದೂರ ಕಡಿಮೆಯಾಗುತ್ತಾ ಹೋಗಿ ಕೇಂದ್ರಬಿಂದುವಿನಲ್ಲಿ ಬಂದು ಎರಡು ಸಮಾಗಮಗೊಳ್ಳುತ್ತವೆ. ಎಲ್ಲಿ ಎರಡೂ ಗೆರೆಗಳ ಪಯಣ ಮುಗಿಯುತ್ತದೆ. ಅವುಗಳ ನಡುವಿನ ಅಂತರವೂ ಇಲ್ಲವಾಗಿರುತ್ತದೆ. ಅದೇ ರೀತಿ ಈ ವಿವಿಧ ಮತಗಳು ಮತ್ತು ಸಂಪ್ರದಾಯಗಳು ಭಗವಂತನೆಂಬ ಕೇಂದ್ರದ ಕಡೆಗಿನ ರೇಖೆಗಳು. ನಾವು ಪರಿಧಿಯ ಹೊರಗೆ ನಿಂತು ನೋಡಿದಾಗ ಅವುಗಳಲ್ಲಿ ಪರಸ್ಪರ ವಿರೋಧಾಭಾಸ ಅಥವಾ ಅಂತರ ಕಂಡು ಬರುತ್ತದೆ. ಆ ಗೆರೆಗಳನ್ನು ಅನುಸರಿಸಿ ಮುಂದುವರೆದು ಕೇಂದ್ರದ ಸಮೀಪಕ್ಕೆ ಹೋಗಿ ನೋಡಿದರೆ ಎಲ್ಲ ಮಾರ್ಗಗಳೂ ಒಂದಕ್ಕೊಂದು ಬಹಳ ಹತ್ತಿವಿರುವುದು ಅನುಭವಕ್ಕೆ ಬರುತ್ತದೆ. ಹಾಗೆಯೇ ಕೇಂದ್ರಬಿಂದುವನ್ನು ತಲುಪಿದಮೇಲಂತೂ ಮಾರ್ಗಗಳೆಲ್ಲವೂ ಅದೃಶ್ಯವಾಗಿ ಬಿಂದುವೊಂದೇ ಉಳಿದಿರುತ್ತದೆ. ಇಂದಿನ ಈ ಸಮಾಜದಲ್ಲಿ ಈ ಸತ್ಯದ ಬಗೆಗಿನ ತಿಳುವಳಿಕೆ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಭಾರತದ ಏಕತೆ ಮತ್ತು ಸಾರ್ವಭೌಮತ್ವ ಮೊದಲಿನಂತೆ ಮರಳಿ ಪಡೆಯಬೇಕಾದರೆ ಈ ತಿಳುವಳಿಕೆ ಅನಿವಾರ್ಯವಾಗಿದೆ. ವಿಶೇಷವಾಗಿ ಮತಭೇದಗಳನ್ನು ಉದ್ದೀಪಿಸಿ ರಾಜಕೀಯ ಲಾಭ ಪಡೆಯುವ ರಾಜಕಾರಣಿಗಳು ಈ ಸತ್ಯ ಅರಿತು ನಡೆದರೆ ಸಮಾಜದ ಸ್ವರೂಪವೇ ಬದಲಾಗಿ ಹೋಗುತ್ತದೆ.
4.  ಮಾರ್ತಾಂಡ ಮಾಣಿಕಪ್ರಭುಗಳವರ ಬಗ್ಗೆ ಮತ್ತು ಅವರ ತತ್ವಪದ ರಚನೆಯ ಬಗ್ಗೆ ವೇದಾಂತಿಗಳ ವಲಯದಲ್ಲಿ ಬಹಳವೇ ಪ್ರಸಿದ್ಧಿ ಇದೆ. ಅದಕ್ಕೆ ಕಾರಣವೇನು.
ಮಾಣಿಕಪ್ರಭುಗಳ ನಂತರ ಮೂರನೆಯ ಪೀಠಾಧೀಶರಾದ ಮಾರ್ತಾಂಡ ಮಾಣಿಕಪ್ರಭುಗಳು(1861-1936) ಪೀಠಸ್ಥರಾಗಿದ್ದ ಕಾಲ ಶ್ರೀ ಪ್ರಭುಸಂಸ್ಥಾನದ ಸುವರ್ಣಯುಗವೆಂದೇ ಹೇಳಬೇಕಾಗುತ್ತದೆ. ಅವರು ಅರವತ್ತು ವರ್ಷಗಳಕಾಲ ಪೀಠದ ಮೇಲಿದ್ದರು. ಆ ಕಾಲದಲ್ಲಿ ಅವರು ಶ್ರೀಪ್ರಭುಸಂದೇಶವನ್ನು ಹಾಗೂ ಈ ಸಕಲಮತಸಂಪ್ರದಾಯವನ್ನು ಭಾರತದಾದ್ಯಂತ ಪಸರಿಸುವಂತೆ ಮಾಡಿದರು. ತಮ್ಮ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯ ಹೊರತಾಗಿ ಸಂಪ್ರದಾಯದ ಭಕ್ತರ ಐಹಿಕ ಏಳಿಗೆ ಮತ್ತು ಪಾರಲೌಕಿಕ ಶ್ರೇಯಸ್ಸಿಗಾಗಿ ಅವಿರತವಾಗಿ ಶ್ರಮಿಸಿದರು. ಅವರು ವೇದಾಂತಶಾಸ್ತ್ರವನ್ನು ಬಹಳ ಆಳವಾಗಿ ಅಭ್ಯಾಸ ಮಾಡಿದ್ದರು. ಮಂತ್ರ ಶಾಸ್ತ್ರ, ಸಂಗೀತ, ಸಾಹಿತ್ಯ ಮುಂತಾದ ಅನೇಕ ಸಂಗತಿಗಳಲ್ಲಿ ಅಸಾಧಾರಣ ಪ್ರಾವೀಣ್ಯ ಹೊಂದಿದ್ದರು. ಅವರು ಫಾರಸೀ, ಉರ್ದೂ, ಮರಾಠೀ ಹಿಂದೀ ಮುಂತಾದ ಆರು ಭಾಷೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು, ಪದ್ಯಗಳನ್ನು ರಚಿಸಿ ಅವುಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಆ ಎಲ್ಲ ಪದ್ಯಗಳಲ್ಲಿ ವೇದಾಂತದ, ಮಂತ್ರಶಾಸ್ತ್ರದ, ಆಧ್ಯಾತ್ಮದ ಗಹನವಾದ ಸಂಗತಿಗಳನ್ನು ಸರಳ ಭಾಷೆ ಮತ್ತು ಉದಾಹರಣೆಳ ಜೊತೆಗೆ ಹೇಳಿದ್ದಾರೆ. ಅವುಗಳನ್ನೆಲ್ಲ ಜನ ಇಂದಿಗೂ ಹಾಡಿಕೊಳ್ಳುತ್ತಾರೆ. ''ಈ ತತ್ವಜ್ಞಾನ ಅಥವಾ ವೇದಾಂತದ ಸಂಗತಿಗಳು ಕಹಿಯಾದ ಔಷಧಿ ಇದ್ದಂತೆ. ಕಹಿ ಔಷಧಿ ಯಾರಿಗೂ ಇಷ್ಟವಾಗುವುದಿಲ್ಲ. ಹೀಗಾಗಿ ಕಹಿ ಔಷಧಿಯಂಥ ತತ್ವಜ್ಞಾನವನ್ನು  ಜನರಿಗೆ ಕೊಡುವಾಗ  ಆಕರ್ಷಕ ಸಂಗೀತ ಮತ್ತು ಸರಳವಾದ ಹಾಡುಗಳಂತಹ ಜೇನುತುಪ್ಪವನ್ನು ಬೆರೆಸಿಯೇ ಕೊಡಬೇಕು.  ಆಗಲೇ ಅದು ಮುಟ್ಟಬೇಕಾದವರಿಗೆ ಮುಟ್ಟುತ್ತದೆ'' ಎಂದು ಅವರು ಹೇಳುತ್ತಿದ್ದರು.
ಹೀಗೆ ಸಾಮಾನ್ಯ ಜನರಿಗಾಗಿ ಭಜನೆಗಳ, ತತ್ವಪದಗಳ ರಚನೆಯಲ್ಲದೇ ವಿದ್ವಾಂಸರಿಗಾಗಿ ''ಜ್ಞಾನಮಾರ್ತಾಂಡ''  'ಸುಧಾಂಶು'  'ರಾಜಾ ಚೆ ಘರ್ ಉನ್ಹಾತ್'  ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದರು. ಅವರ ಗ್ರಂಥಗಳಿಂದ ಉಪಕೃತರಾದ ವಿದ್ವಾಂಸರು ಕಾಶಿಯಲ್ಲಿ ಅವರಿಗೆ ಗಜಾರೋಹಣದ ಸನ್ಮಾನವನ್ನೂ ಮಾಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಮಾರ್ತಾಂಡಮಾಣಿಕ ಪ್ರಭುಗಳ ಪ್ರಸಿದ್ಧಿ ಎಲ್ಲೆಡೆ ಹರಡಿತ್ತು ಹಾಗೂ ಇಂದಿಗೂ ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತಿದೆ.
5. ಇಷ್ಟು ಆಳವಾದ ತಾತ್ವಿಕ ಹಾಗೂ ವೇದಾಂತ ಶಾಸ್ತ್ರದ ವಿಷಯಗಳನ್ನು ಸಾಮಾನ್ಯ ಭಾಷೆಯ ಮೂಲಕ ಅತಿ ಸಾಮಾನ್ಯ ವ್ಯಕ್ತಿಯೂ ಹಾಡಿಕೊಳ್ಳುವಂತೆ ಮಾಡಿದ ಉದಾಹರಣೆ  ಮತ್ತೆಲ್ಲಾದರೂ ಇದೆಯೇ ಅಥವಾ ಇದು ಅನ್ಯಾದೃಶವೇ?
ಇದು ಹೇಗೆಂದರೆ, ತತ್ವಜ್ಞಾನ ಬೌದ್ಧಿಕ ಮಟ್ಟದಲ್ಲಿಯೇ ಉಳಿದಾಗ ಅದನ್ನು ಸರಳವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಾಮಾನ್ಯರಿಗೆ ತಿಳಿಸುವುದು, ಹಾಗೂ ಅವರಿಗೆ ಅದನ್ನು ಅರ್ಥಮಾಡಿಕೊಳ್ಳವುದು ಈ ಎರಡೂ ಅತ್ಯಂತ ಕಠಿಣವಾಗುತ್ತವೆ. ಆದರೆ ಅದೇ ಗಹನವಾದ ಜ್ಞಾನವನ್ನು ಚೆನ್ನಾಗಿ ಅನುಸಂಧಾನ ಮಾಡಿಕೊಂಡ  ಮಹನೀಯರಿಗೆ ಅದು ನೀರು ಕುಡಿದಷ್ಟು ಸುಲಭದ ಕೆಲಸ. ಅವರುಗಳು ಅದನ್ನು ತಮ್ಮ ದಿನನಿತ್ಯದ ಕ್ರಿಯೆಗಳಿಂದಲೂ ಅದನ್ನು ಜನರಿಗೆ ಮನವರಿಕೆ ಮಾಡಿಕೊಡಬಲ್ಲವರಾಗಿರುತ್ತಾರೆ. ಒಂದು ಪಶುವಿನ ಮುಂದೆ ಕುಳಿತು ವೇದಾಂತ ಹೇಳಿದರೆ ಅದಕ್ಕೆ ಏನೂ ತಿಳಿಯುವುದಿಲ್ಲ. ಆದರೆ ಅದೇ ಪಶುವಿನ ಹತ್ತಿರ ಹೋಗಿ ಕುಳಿತು ಪ್ರೇಮದಿಂದ ಅದರ ಮೈದಡವಿದಕೂಡಲೇ ಆ ಪಶುವೂ ಸಹ ಈ ಮನುಷ್ಯನ ಪ್ರೇಮವನ್ನು ಅನುಭವಿಸಿ ಪ್ರತಿಕ್ರಯಿಸುತ್ತದೆ.  ಹೃದಯದ ಭಾಷೆಯನ್ನು ಮಾತಾಡಿದರೆ ಅದು ಪಶುಗಳನ್ನೂ ತಲುಪುತ್ತದೆ.  ಬುದ್ಧಿಮತ್ತೆಯ ಪ್ರದರ್ಶನದ ಮಾತುಗಳು ಅಷ್ಟು ಸುಲಭವಾಗಿ ಎಲ್ಲರಿಗೂ ತಿಳಿಯುವುದಿಲ್ಲ. ಶ್ರೀ ಮಾಣಿಕ ಪ್ರಭು ಮತ್ತು ಅವರ ನಂತರದ ನಾಲ್ಕೂ ಜನ ಪೀಠಾಧಿಪತಿಗಳು ತಾವು ಅನುಭವಿಸಿ, ಸಾಕ್ಷಾತ್ಕರಿಸಿಕೊಂಡ, ಹಾಗೂ ಅಳವಡಿಸಿಕೊಂಡ ಸಂಗತಿಗಳನ್ನು ಪ್ರೇಮದ ಭಾಷೆಯಲ್ಲಿ ತಮ್ಮ ಸ್ವಂತಕ್ಕೇ ತಮ್ಮ ಅನುಭವದ ಉದ್ಗಾರ ಎಂಬಂತೆ ವಿಷಯಗಳನ್ನು ಅಭಿವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಅದು ಜನರನ್ನು ಸರಳವಾಗಿ ತಟ್ಟುತ್ತದೆ. ಆನಂದಿತಗೊಳಿಸುತ್ತದೆ.  ಇಂತಹ ಜ್ಞಾನದಿಂದ ಕೂಡಿದ ಭಕ್ತಿಸಾಹಿತ್ಯದ ಸೃಷ್ಟಿಯ ಉದಾಹರಣೆಗಳು ಅನ್ಯ ಕೆಲ ಭಕ್ತಿಪಂಥಗಳಲ್ಲಿ ಕಂಡು ಬರುತ್ತದಾದರೂ ಅವುಗಳ ಸಂಖ್ಯೆ ಅತಿ ವಿರಳ ಎಂದು ಹೇಳಬಹುದು.

6. ಈ ಭಜನೆ-ಕೀರ್ತನೆ ಇತ್ಯಾದಿಗಳು ಭಕ್ತಿಮಾರ್ಗದ ಪ್ರಾರಂಭಿಕ ಸಾಧನಗಳು. ವೇದಾಂತ ಶಾಸ್ತ್ರ ಜ್ಞಾನಮಾರ್ಗಿಗಳ ವಿಷಯ. ಈ ಎರಡೂ ಮಾರ್ಗಳ ಸಮನ್ವಯ ಹೇಗೆ ಸಾಧ್ಯವಾಯಿತು?
ಇಲ್ನೋಡಿ, 'ಭಕ್ತಿ' ಮತ್ತು 'ಜ್ಞಾನ' ಇವು ಎರಡೂ ಬೇರೆ ಬೇರೆ ಅಥವಾ ತದ್ವಿರುದ್ಧ ವಿಷಯಗಳು ಅಲ್ಲವೇ ಅಲ್ಲ. ಅವು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಭಕ್ತಿಯಿಲ್ಲದ ಜ್ಞಾನ ಇದ್ದೂ ಇಲ್ಲದಂತೆಯೇ. ಅದೇ ರೀತಿ ಜ್ಞಾನವಿಲ್ಲದ ಮೂಢಭಕ್ತಿಯೂ ಉಪಯೋಗಕ್ಕೆ ಬರುವುದಿಲ್ಲ. ಜ್ಞಾನಮಾರ್ಗದ ಅತ್ಯಂತ ಮಹಾನ್ ವ್ಯಾಖ್ಯಾನಕಾರರಾದ ಶ್ರೀ ಶಂಕರಾಚಾರ್ಯರು ''ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ! ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೆ!!''   ಎಂದು ಹೇಳಿದ್ದಾರೆ. ಮೋಕ್ಷಸಾಧನೆಗಿರುವ ಸಾಮಗ್ರಿಗಳಲ್ಲಿ ಭಕ್ತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನಿಃಸಂದೇಹ, ಆದರೆ ಸ್ವಸ್ವರೂಪದ ಅನುಸಂಧಾನವೇ ಭಕ್ತಿಯೆನಿಸಿಕೊಳ್ಳುತ್ತದೆ ಎನ್ನುವುದು ಆ ಮಾತಿನ ಅರ್ಥ. ಇಲ್ಲಿ ಅವರು ಭಕ್ತಿ ಮತ್ತು ಜ್ಞಾನವನ್ನು ಪರಸ್ಪರ ಪೂರಕ ಎಂದೇ ಹೇಳಿದ್ದಾರೆ. ಪರಮಾತ್ಮನ ಬಗೆಗಿನ ಪ್ರೇಮ ನಮ್ಮ ಕಣ್ಣು ತೆರೆಸಿದಾಗ ಅದು ಜ್ಞಾನವೆನಿಸಿಕೊಳ್ಳುತ್ತದೆ. ಹಾಗೆಯೇ ಪರಮಾತ್ಮನ ಬಗೆಗಿನ ಜ್ಞಾನ ಪ್ರೇಮದಿಂದ ತುಂಬಿಕೊಂಡು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಾಗ ಅದೇ ಭಕ್ತಿಯಾಗುತ್ತದೆ. ಈ ಎರಡರಲ್ಲೂ ಭೇದವಿಲ್ಲ. ಶ್ರೀ ಪ್ರಭು ಅದನ್ನು ತಮ್ಮ ರಚನೆಗಳ ಮೂಲಕ ಮತ್ತು ತಮ್ಮ ಆಚರಣೆಯ ಮೂಲಕ ಸಾರಿ ಹೇಳಿದ್ದಾರೆ.
7. ಸಮಸ್ತ ಜೀವಿಗಳಲ್ಲೂ ಆತ್ಮ ಇದೆ.  ಮನುಷ್ಯನೂ ಕೂಡ  ಒಂದು ಪ್ರಾಣಿಯೇ. ಆದರೆ ಮಾನವನಿಗೆ ಮಾತ್ರ ಜೀವನದಲ್ಲಿ ಗುರುವಿನ ಅಗತ್ಯ ಯಾಕೆ ಇದೆ?  ಅಥವಾ,  ನಿಜವಾಗಿಯೂ ಗುರುವಿನ ಅಗತ್ಯಇದೆಯೇ.?

ನಿಜ, ನೀವು ಹೇಳಿದಂತೆ ಮನುಷ್ಯನೂ ಉಳಿದ ಜೀವಿಗಳಂತೆ ಒಂದು ಜೀವಿ. ಉಳಿದೆಲ್ಲಾ ಪ್ರಾಣಿಕೋಟಿಗಳಿಗೆ ಗುರು ಇಲ್ಲ. ಆದರೆ ಮನುಷ್ಯ ಪ್ರಾಣಿಗಳಂತೆ ಪರಿಪೂರ್ಣನಾಗಿ ಹುಟ್ಟಿರುವುದಿಲ್ಲ. ಮನುಷ್ಯ ಜನ್ಮ ಅಪೂರ್ಣ ಮನುಷ್ಯ ಜನ್ಮವಾಗಿರುತ್ತದೆ. ಹೇಗೆಂದರೆ, ಇಲ್ಲಿ ನೋಡಿ, ಆನೆಯ ಮರಿ ಹುಟ್ಟುತ್ತಲೇ ಆನೆಯಾಗಿಯೇ ಹುಟ್ಟಿರುತ್ತದೆ. ಹುಲಿಯ ಮರಿ ಹುಲಿಯ ಎಲ್ಲ ಗುಣಲಕ್ಷಣಗಳನ್ನು ಪರಿಪೂರ್ಣವಾಗಿ ಪಡೆದುಕೊಂಡೇ ಹುಟ್ಟಿರುತ್ತದೆ. ಹುಟ್ಟಿದ ಮೇಲೆ ಹುಲಿಯಾಗಲಿಕ್ಕೆ ಅದಕ್ಕೆ ಯಾವುದೇ ತರಬೇತಿಗಳನ್ನು ಕೊಡುವ ಅಗತ್ಯವಿರುವುದಿಲ್ಲ. ಮೀನಿಗೆ ಯಾರೂ ಈಜುವುದನ್ನು ಕಲಿಸಿಕೊಡುವುದಿಲ್ಲ. ಪಶುಗಳು ಜನ್ಮತಃ ಪರಿಪೂರ್ಣವಾಗಿ ಪಶುತ್ವದೊಂದಿಗೇ ಹುಟ್ಟುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನಿಗೆ ಆರೈಕೆಯ ಅಗತ್ಯ ಇರುತ್ತದೆ. ಶಿಕ್ಷಣದ ಅಥವಾ ತರಬೇತಿಯ ಅಗತ್ಯ ಇರುತ್ತದೆ. ಹುಟ್ಟಿದ ''ಶಿಶು'' ಮನುಷ್ಯನೂ ಅಲ್ಲದ ಪ್ರಾಣಿಯೂ ಅಲ್ಲದ ಸ್ಥಿತಿಯಲ್ಲಿರುತ್ತದೆ. ಅದಕ್ಕೆ ಹಂತಹಂತವಾಗಿ ಮನುಷ್ಯತ್ವವನ್ನು ತುಂಬಬೇಕಾಗುತ್ತದೆ. ಸಂಸ್ಕಾರ, ವಿದ್ಯೆ, ಮಾಹಿತಿ ಮುಂತಾದ ಅನೇಕ ಸಂಗತಿಗಳನ್ನು ತಲೆಯಲ್ಲಿ ತಂದುಕೊಂಡ ನಂತರ ಆ ಮಾನವತ್ವ-ಪಶುತ್ವದ ಮಧ್ಯದ ಸ್ಥಿತಿಯಲ್ಲಿದ್ದ ಜೀವಿ ಮನುಷ್ಯನಂತೆ ವರ್ತಿಸತೊಡಗುತ್ತಾನೆ. ಈ ಎಲ್ಲ ಹಂತಗಳಲ್ಲಿ ಅವನಿಗೆ ಗುರುವಿನ ಅಗತ್ಯವಿರುತ್ತದೆ. ತಾಯಿಯೇ ಅವನ ಮೊದಲ ಗುರುವಾಗಿರುತ್ತಾಳೆ. ಸೈಕಲ್ ಕಲಿಯುವುದು, ಬಟ್ಟೆ ಹಾಕಿಕೊಳ್ಳುವುದು, ಓದುವುದು, ಬರೆಯುವುದರಿಂದ ಹಿಡಿದು ಪ್ರೌಢನಾದ ಮೇಲೆ ಲೌಕಿಕದ ಉನ್ನತ ಶಿಕ್ಷಣವನ್ನು ಪಡೆದು ಉದ್ಯೋಗದ ತರಬೇತಿ ಪಡೆಯುವ ವರೆಗೆ ಎಲ್ಲೆಡೆ ಗುರು ಬೇಕಾಗುತ್ತಾನೆ. ಆದರೆ ಇಂತಹ ಗುರುವಿನ ಅವಶ್ಯಕತೆ ಪಶುಗಳಿಗೆ ಇರುವುದಿಲ್ಲ. ಗುರುವು ಇಲ್ಲದೇ ನಾವು ಭಾಷೆಯನ್ನೂ ಕಲಿಯುವುದಿಲ್ಲ. ಹೀಗಿರುವಾಗ ಮನುಷ್ಯ ತನ್ನ ಮನುಷ್ಯತ್ವಕ್ಕಿಂತ ಮೇಲ್ಮಟ್ಟಕ್ಕೆ ಏರಲಿಕ್ಕೆ ಅಂದರೆ ಆತ್ಮದ ಬಗೆಗಿನ ಚಿಂತನೆಯನ್ನು ಮಾಡಲಿಕ್ಕೆ ಗುರು ಇಲ್ಲದಿದ್ದರೆ ಹೇಗೆ ಸಾಧ್ಯ..? ಗುರುವಿಲ್ಲದೇ ಆಧ್ಯಾತ್ಮವನ್ನು ತಿಳಿಯ ಹೊರಟರೆ ಅದಕ್ಕಿಂತ ಮೂರ್ಖತೆ ಮತ್ತೊಂದಿಲ್ಲ. ಸಾಮಾನ್ಯ ಮನುಷ್ಯಜೀವನವನ್ನು ನಡೆಸಲಿಕ್ಕೆ ಅನೇಕ ರೀತಿಯ ಗುರುಗಳು ಅಥವಾ ತರಬೇತುದಾರರು ಬೇಕಾಗುತ್ತಾರೆ. ಆದರೆ ಮುಮುಕ್ಷುಗಳಿಗೆ ಅಂದರೆ ಆತ್ಮಜ್ಞಾನದ ಕಡೆಗೆ ಆಸಕ್ತಿ ಇರುವವರಿಗೆ ''ಸದ್ಗುರುವಿನ'' ಅಗತ್ಯ ಇರುತ್ತದೆ. ನಿಮ್ಮ ಜೀವನದ 'ಗುರಿ' ಏನು ಎಂಬುದರ ಮೇಲೆ ನೀವು ಎಂತಹ ಗುರುವನ್ನು ಹುಡುಕಿಕೊಳ್ಳುತ್ತೀರಿ ಎನ್ನುವುದು ಆಧಾರಪಟ್ಟಿರುತ್ತದೆ.


No comments:

Post a Comment