Tuesday, August 12, 2014

ಭಗವದ್ಗೀತೆಯೆಂದರೆ

ಭಗವದ್ಗೀತೆಯು ಮತಗ್ರಂಥ ಅಲ್ಲ.  ಆದರೂ ಲೋಕದಲ್ಲಿ ಅದು ಆ ರೀತಿ ತಪ್ಪು ಅಭಿಪ್ರಾಯಕ್ಕೆ ಒಳಗಾಗಿದೆ. ಅಷ್ಟು ಮಾತ್ರವಲ್ಲದೇ ಇದು ವೈರಾಗ್ಯ ಉಂಟುಮಾಡುವ ಗ್ರಂಥವಾದ್ದರಿಂದ ಇದನ್ನು ಓದಿ ತಮ್ಮ ಹುಡುಗರಿಗೆ ಎಲ್ಲಿ ವೈರಾಗ್ಯ ಗಂಟು ಬಿದ್ದುಬಿಡುತ್ತದೋ ಎಂದು ಕೆಲ ಅರೆಮರುಳರು, ಬೆಪ್ಪರು ತಮ್ಮ ಹೊಟ್ಟೆಯನ್ನು ತಾವೇ ಕಿವುಚಿಕೊಳ್ಳುತ್ತಾರೆ. ವೈರಾಗ್ಯ ಎನ್ನುವುದು ಅಷ್ಟು ಸುಲಭವಾಗಿ ಗಂಟುಬೀಳುವಂಥದ್ದಲ್ಲ. ಒಂದು ವೇಳೆ ಯಾರಲ್ಲಾದರೂ ವೈರಾಗ್ಯದ ಲಕ್ಷಣ ಕಾಣಿಸಿದರೆ ಆತನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲ.  ಜಗತ್ತಿನಲ್ಲಿ ವಿರಕ್ತಿಗೆ ಸಮಾನವಾದ ಭಾಗ್ಯವೇ ಇಲ್ಲ.  ವೈರಾಗ್ಯವೆಂದರೆ ಯಾವ ಪ್ರಾಪಂಚಿಕ ಸುಖ-ಸಾಧನಗಳೂ ಇಲ್ಲದೇ ದಾರಿದ್ರ್ಯದಿಂದ, ನಿರಾಶೆಯಿಂದ ಒಂದು ಮೂಲೆಯಲ್ಲಿ ಮುದುರಿಕೊಂಡು ಸಾವಿಗೆ ಕಾಯುವ ವ್ಯಕ್ತಿಯಲ್ಲಿ ಇರಬೇಕಾದ್ದು ಎಂದು ಜನರು ತಿಳಿದಿದ್ದಾರೆ. ಸಾವಿಗೆ ಕಾಯುವ ಅಂಥ ಕೈಲಾಗದ ನಿರ್ಜೀವ  ಮೂರ್ಖರ ಬಾಯಿಗೆ ನೀರು ಹಾಕಬೇಕೇ ಹೊರತು ಭಗವದ್ಗೀತೆಯನ್ನಲ್ಲ.

ಬೇಕು ಬೇಕೆನಿಸಿದ ಸಾಧನಗಳನ್ನು ಸಂಪಾದಿಸಿ ಅವುಗಳು ತನ್ನ ಪಾದದಡಿಯಲ್ಲಿ ಉರುಳಾಡುತ್ತಿದ್ದರೂ ಅವುಗಳ ಜೊತೆಗೆ ತಾದಾತ್ಮ್ಯ ಹೊಂದದೇ ಇರುವುದು ವೈರಾಗ್ಯ. ಈ ಲೋಕದಲ್ಲಿ ಬದುಕಲಿಕ್ಕೆ ಬೇಕಾದ ಮೂಲಭೂತ ತುತ್ತುಗಳನ್ನು ಸಂಪಾದಿಸಿಕೊಳ್ಳಲಿಕ್ಕೆ ಆಗದ ಹೇಡಿಯು ಪರಲೋಕದ ಬುತ್ತಿಯನ್ನೇನು ಸಾಧಿಸಿಯಾನು..? ಅಟ್ಟಕ್ಕೆ ಹಾರಲಾಗದವನು ಬೆಟ್ಟಕ್ಕೆ ಹಾರಿಯಾನೇ..? ಆದ್ದರಿಂದ ಪ್ರಾಪಂಚಿಕ ಸುಖ-ಸಾಧನಗಳನ್ನು ಗಳಿಸಲಾರದವನು ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲಿಕ್ಕಾಗಿ ಪರಮಾರ್ಥವನ್ನು ಸಾಧಿಸುತ್ತಾನೆ ಎನ್ನುವುದು ಹಗಲು ಕನವರಿಕೆಯ ಮಾತು. ಈ ಅರ್ಥವನ್ನು ಸಮರ್ಥ ರಾಮದಾಸರು ತಮ್ಮ ದಾಸಬೋಧ ಗ್ರಂಥದಲ್ಲಿ ಬಹಳ ಕಡೆ ಎತ್ತಿ ಹೇಳಿದ್ದಾರೆ.  ಆದ್ದರಿಂದ ತನ್ನ ಮನುಷ್ಯತ್ವವು ಸಾರ್ಥಕವಾಗಬೇಕಾದರೆ ತನ್ನ ಮತ್ತು ತನ್ನ ಕುಟುಂಬದ ಹೊಟ್ಟೆ-ಬಟ್ಟೆಯನ್ನು ಸಂಪಾದಿಸಲು ಶಕ್ತನಾಗಿರುವುದು ಮಾತ್ರವಲ್ಲದೇ ಸಾರ್ವಜನಿಕವಾದ ಯಾವುದೇ ವ್ಯವಹಾರದಲ್ಲಿ - ಜೀವನದಲ್ಲಿ ಏನು ಎದುರು ಬಂದರೂ ದಕ್ಷತೆಯಿಂದ ಬಡಿದಾಡಿ ವಿಜಯಿಯಾಗಬಲ್ಲ ಗಟ್ಟಿಗುಂಡಿಗೆಯವನಾಗಿರಬೇಕು. ಜೀವನದಲ್ಲಿ ಯಾವ ಪರಿಸ್ಥಿತಿ ಎದುರಾದರೂ ಮುಗುಳ್ನಕ್ಕು ಎದುರಿಸುವ ಧೈರ್ಯಶಾಲಿಯಾಗಿರಬೇಕು. ಸಾಮರ್ಥ್ಯ ಹೊಂದಿರಬೇಕು. ಅಂಥವನೇ ಆಧ್ಯಾತ್ಮಕ್ಕೆ ಸರಿಯಾದ ಅಧಿಕಾರಿ.

ಹಾಗೆಯೇ ಲೋಕದಲ್ಲಿ ಬೇಕಾದಷ್ಟು ಸಾಮರ್ಥ್ಯವಂತರು, ಧೈರ್ಯಶಾಲಿಗಳು, ತುಂಬಾ ಐಶ್ವರ್ಯ ಉಳ್ಳವರು  ಸಾಕಷ್ಟು ಜನ ಇದ್ದಾರೆ. ಆದರೆ ಅವರೆಲ್ಲರೂ ಭಗವದ್ಗೀತೆಗೆ ಅಧಿಕಾರಿಗಳಾಗುವುದಿಲ್ಲ. ಅವರೆಲ್ಲರಲ್ಲೂ ಅದರ ಬಗ್ಗೆ ಆಸಕ್ತಿಯೂ ಇರುವುದಿಲ್ಲ ಅಧಿಕಾರವೂ ಇರುವುದಿಲ್ಲ.  ಕೇವಲ ಸಾಮರ್ಥ್ಯ-ಐಶ್ವರ್ಯಗಳಿಂದಾಗಿ ಅವರಿಗೆ ಅದರ ಅಧಿಕಾರ ಬರುವುದು ಸಾಧ್ಯವಿಲ್ಲ. ಬರೀ ಈ ಹೊತ್ತಿನ ಅಂದರೆ ಈ ಜಗತ್ತಿನಲ್ಲಿ ಇರುವಷ್ಟು ದಿನ ಹೊಟ್ಟೆ-ಬಟ್ಟೆಗಳ ಸಮೃದ್ಧಿ ಇರಬೇಕು. ವಸ್ತು-ವಾಹನ ಸೇವಕರು ಮೊದಲಾದ ಐಶ್ವರ್ಯವಿರಬೇಕು. ಈ ಲೋಕದ ಸುಖವನ್ನೆಲ್ಲ ಅನುಭವಿಸಬೇಕು- ಎಂದೆಲ್ಲ ಈ ಲೋಕದಿಂದ ಮತ್ತು ಈ ದೇಹದಿಂದ ಸಿಗುವ ಸುಖಗಳಿಗೆ ಮಾತ್ರ ಸೀಮಿತರಾಗಿ ಅದರಲ್ಲಿಯೇ ಬಿದ್ದು ಒದ್ದಾಡುವವರ ಮುಂದೆ ಭಗವದ್ಗೀತೆಯು ತನ್ನ ಬಾಯಿಯ ಬೀಗವನ್ನು ತೆಗೆಯುವುದಿಲ್ಲ. ಮುತ್ತನ್ನುದುರಿಸುವುದಿಲ್ಲ. ಈ ಲೋಕದ ಎಲ್ಲ ಸುಖಗಳೂ ಬೇಕು.. ಮತ್ತು ಆ ಎಲ್ಲ ಸುಖಗಳನ್ನೂ ಮೀರಿದ,, ಇನ್ನೂ ಹೆಚ್ಚಿನ ಗಾಢವಾದ ಶಾಶ್ವತವಾದ ಸುಖ ಬೇಕು ಎಂದು ಬಯಸುವ "ಧೀರ''ನಾದರೆ ಮಾತ್ರ ಅವನಿಗೆ ಗೀತಾದೇವಿಯ ಕರುಣೆಯಾದೀತು.(ಅವನಿಗೆ ಗೀತೆ ಅರ್ಥವಾದೀತು).  ಆದ್ದರಿಂದ ಭಗವದ್ಗೀತೆ ಅರ್ಥವಾಗಬೇಕಾದರೆ  ಅರ್ಥ ಮಾಡಿಕೊಳ್ಳ ಬಯಸುವವನ ಹೃದಯದಲ್ಲಿ ಸುಖದ ಆಶೆ ತುಂಬಾ ತೀವ್ರವಾಗಿರಬೇಕು.   ಈ ವಸ್ತುಗಳಿಂದ ಸಿಗುತ್ತಿರುವ ಸುಖಕ್ಕಿಂತ ಹೆಚ್ಚಿನ ಮಟ್ಟದ ಸುಖವನ್ನು ಪಡೆಯಬೇಕೆಂದು ಅವನ ಮನಸ್ಸು ಆತುರಗೊಳ್ಳಬೇಕು. ಹೆಚ್ಚು ಹೆಚ್ಚು ಸುಖದ ರಾಶಿಯನ್ನು ಕೊಳ್ಳೆ ಹೊಡೆಯಬೇಕೆಂಬ ಮಹತ್ತರ ಆಸೆ ಉಳ್ಳವನೇ ಗೀತೆಯ ಅರ್ಥ ಅರಿಯಲು ಅಧಿಕಾರಿಯು.  ವೈರಾಗ್ಯವೆಂದರೆ ಎಲ್ಲ ಸುಖಸಾಧನಗಳನ್ನೂ ತೊರೆಸುವಂಥದ್ದೆಂದು ತಿಳಿಯಬಾರದು. ಇನ್ನಿಲ್ಲವೆನಿಸುವಂಥ ಹೆಚ್ಚಿನ ಸುಖದ ಬಯಕೆಯೆಂದು ತಿಳಿಯಬೇಕು.

ಇನ್ನು ಕೆಲವರು ಭಗವದ್ಗೀತೆಯೆಂದರೆ ಮುಪ್ಪಿನ ಕಾಲದಲ್ಲಿ ಓದತಕ್ಕ ಗ್ರಂಥವೆಂದು ತಿಳಿಯುವರು. ಮೊದಲೇ ಹೇಳಿದಂತೆ ವಿರಕ್ತಿ ಎಂಬ ವಿಷಯದ ತಪ್ಪು ತಿಳುವಳಿಕೆ ಕಾರಣ. ಅದಲ್ಲದೇ  ಭಗವದ್ಗೀತೆ ಪಾರಮಾರ್ಥಿಕ ಗ್ರಂಥವಾದ್ದರಿಂದ ಲೋಕ ವ್ಯವಹಾರದಲ್ಲಿ ಅದರ ಉಪಯೋಗವೇನೂ ಇಲ್ಲವೆಂಬ ಬೆಪ್ಪುತನ ಇನ್ನೊಂದು ಕಾರಣ. ಇದು ಪಾರಮಾರ್ಥಿಕ ಗ್ರಂಥವೇನೋ ನಿಜವೇ. ಆದರೆ ವ್ಯವಹಾರದಲ್ಲಿ ಅದರ ಉಪಯೋಗವಿಲ್ಲದೇ ಇಲ್ಲ. ಜಗತ್ತಿನಲ್ಲಿ ಸರ್ವೈಶ್ವರ್ಯ ಸಂಪನ್ನರೂ ಕೂಡ ತಮ್ಮ ಜೀವನದ ತಾಪತ್ರಯಳಿಂದ ಬೆಂದು ನಿಟ್ಟುಸಿರು ಬಿಡುವುದನ್ನು ನಾವು ನೋಡುತ್ತಲೇ ಇದ್ದೇವೆ. ಅಂಥವರಿಗೆ ಯಾವ ಸುಖಕ್ಕೆ ಏನು ಕೊರತೆ..? ಆದರೂ ಇರಬೇಕಾದಷ್ಟು ಸಮಾಧಾನವಿಲ್ಲ.  ತಮ್ಮ ಐಶ್ವರ್ಯಾದಿ ಸಾಧನಗಳೆಲ್ಲ ಎಂದೆಂದಿಗೂ ತಮ್ಮವೇ.. ತಾವೇ ಉತ್ಪತ್ತಿ ಮಾಡಿದ್ದು.. ತಮಗೇ ಸೇರಿದ್ದು ಎಂಬ ತಾದಾತ್ಮ್ಯದಿಂದಾಗಿ ಅಶಾಂತಿಯಿರುತ್ತದೆ. ಗೀತೆಯು ಆ ತಪ್ಪು ತಿಳುವಳಿಕೆಗಳ ಬೇರನ್ನು ಕಿತ್ತೊಗೆಯುತ್ತದೆ. ಜಗತ್ತೆಂಬುದು ತುದಿ-ಮೊದಲು ಕಾಣದ ಸಮುದ್ರದಂತಿದೆ. ಆ ಸಮುದ್ರದಲ್ಲಿ ಈಜುವ ಮರ್ಮವನ್ನು ನಾವು ತಿಳಿಯದೇ ಹೋದರೆ ಪದೇ ಪದೇ ಮುಳುಗಿ ಮೂಗು-ಬಾಯಿಗಳಲ್ಲೆಲ್ಲ ಉಪ್ಪು ನೀರು ತುಂಬುತ್ತದೆ.  ಮೀನು ಮೊಸಳೆಗಳ ಭಯ ಕಾಡುತ್ತದೆ. ಇಂತಹ ಜಗತ್ತೆಂಬ ಸಮುದ್ರದಲದಲ್ಲಿ ಸಮರ್ಥವಾಗಿ ಈಜಲಿಕ್ಕೆ ಭಗವದ್ಗೀತೆಯೇ ಸದ್ಗುರು.  ಈಗಲೋ ಆಗಲೋ ಸಾಯಲು ಸಿದ್ಧರಾಗಿರುವವರು ಈಜು ಕಲಿತರೂ ನೀರಿನ ಮೇಲೆ ತೇಲುವ ಆನಂದವನ್ನು ಹೆಚ್ಚು ಕಾಲ ಅನುಭವಿಸಲಾರರು.  ಹುಡುಗರು ಈ ವಿದ್ಯೆಯನ್ನು ಕಲಿತರೆ ಹಾಯಾಗಿ ಸಾಕಷ್ಟು ಸಮಯ ಈಜಬಹುದು.  ಮುದುಕರಿಗಿಂತಲೂ ಹುಡುಗರಿಗೆ ಈ ಈಜು ಕಲಿಯುವ ಅಗತ್ಯವಿದೆ. ಹಾಗಾಗಿ ಬಾಲಕ-ಬಾಲಕಿಯರೇ ಈ ಭಗವದ್ಗೀತೆಯ ಅಧ್ಯಯನಕ್ಕೆ ಸರಿಯಾದ ಅಧಿಕಾರಿಗಳು.
ಲೇಖಕರು- ಹೊಸಕೆರೆ ಚಿದಂಬರಯ್ಯ. (1929 ರಲ್ಲಿ ಗೀತಾರ್ಥ ಚಂದ್ರಿಕೆಯ ಮುನ್ನುಡಿಯಲ್ಲಿ.)