Friday, October 25, 2013

ದುಃಖ


 
ನಾನು ಬರೆದ ಕವಿತೆಗಳು
ನನ್ನೊಂದಿಗೆ
ಕದನಕ್ಕಿಳಿಯುತ್ತವೆ
ಕನಲಿ
ಕಣ್ಣೀರಾಗುತ್ತವೆ
ನಾನು
ಅವುಗಳಲ್ಲಿ ತುಂಬುವ
ದುಃಖವನ್ನು
ಹೊತ್ತುಕೊಂಡು
ಕಾಗದದ
ಮೇಲೆ ನಿಲ್ಲಲಾಗುವುದಿಲ್ಲವೆಂದು.

ಕೊನೆ ಮಗಳು ನಾನು


ಕನಸುಗಳ ಕೊಂದು ತಲೆ ಬಗ್ಗಿಸಿಯೇ ಕೂತು
ಕಟ್ಟಿಸಿಕೊಂಡಾಗ ಮಾಂಗಲ್ಯದಾ ಉರುಳ
ಕಳೆದರೆ ಸಾಕಿತ್ತು ಅಮ್ಮನಿಗೆ ಎದೆಮೇಲಿನಾ ಭಾರ
ಅಪ್ಪನದ್ದಂತೂ... ಮಾತೇ ವಿರಳ

ಹಾದರದ ಮನೆಯವರು ಹೊಲಸೆಲ್ಲ ಮುಚ್ಚಿಟ್ಟು
ದಡಬಡಿಸಿ ಮುನ್ನುಗ್ಗಿ ಮೋಸದಾಟವ ಆಡೆ
ಗಂಡಸಿನ ವೇಷದ ಅಣ್ಣ ಹೇಲು ತಿನ್ನುತ್ತಿದ್ದ
ಕನಸು ಕಂಗಳ ತಮ್ಮ ಹೊಸ ಅಂಗಿ ತೊಟ್ಟಿದ್ದ

ಅಪ್ಪನ ದುಡಿಮೆಯನೆಲ್ಲ ಬರಿದು ಮಾಡಿಯೇ ಹೋದ
ಸಿರಿವಂತರಾ ಮನೆ ಸೇರಿ ಸುಖದ ಸುಪ್ಪತ್ತಿಗೆ ಕಂಡ
ಅಕ್ಕಂದಿರೆಂಬ ಗರತಿಯರಿಗೆ ಸಾಗಹಾಕುವ ತವಕ
ತಂಗಿ ಬಾಳಿನಾ ಬಗೆಗೆ ಒಳಗೊಳಗೆ ಕುಹಕ

ನರಕದಂತಹ ಮನೆ ಸೇರಿ ಕಡುಕಷ್ಟ ಉಂಡರೂ
ಗಂಡನೆಂಬ ಕೀಚಕನ ವಂಶವನೂ ಬೆಳಗಿ
ತವರು-ತಾಯಿಯ ಹೇಲು ಉಚ್ಚಯನೂ ಬಳಿದು
ಬಯಸಿಲ್ಲ ಏನನ್ನೂ ..ಕೊನೆಮಗಳು ನಾನು


ಕನ್ನಡಿಯ ಸಖ್ಯದಲಿ

ಮೊಲೆಯುಂಡ ಕೂಸು
ಜೋಳಿಗೆಯಲಿ ನಿದ್ರಿಸಿರಲು
ಮಧ್ಯಾನ್ಹದಾ ಬಿಡುವಿನಲಿ
ಗುಡಿಸಿಲಿನಾ ಮಧ್ಯದಲಿ
ಕುಳಿತಿರುವೆ ನಾ ನಿನ್ನ ಹಿಡಿದು
ಹೊರಸಿನಾ ಕಾಲಿಗೊರಗಿ

ತಲೆಗೆ ಎಣ್ಣೆಯನು ಹಚ್ಚಿ
ಜಗ್ಗಿ ಬೈತಲವ ಬಾಚಿ
ಜಡೆ ಹಾಕುವಾ ಗೆಳತಿ
ಗಂಡು ಹೆರದ ಕಾರಣಕೆ
ಹೋಗಿಹಳು ತವರಿಗೆ
ಕತ್ತೆಯಂತೆ ತಾ ಬಡಿಸಿಕೊಂಡು

ಎನ ಹೇಳಲಿ ನಾ ನನ್ನ ಕಥೆಯನ್ನು ಕನ್ನಡಿಯೇ
ನೀ ಎನ್ನ ಕೆನ್ನೆಗಳ ಕೆಂಪನ್ನು ತೋರುತಿಹೆ
ಇನಿಯ ಬರುವನು ರಾತ್ರಿ ಕುಡಿಧೆಂಡದಾ ಅಮಲಿನಲಿ
ದೇಹದಾಟದಿ ಬವಳಿ ನಿದ್ರಿಸುವ ಸೋಗಿನಲಿ
ನನ್ನೊಲುಮೆ ಮಾತನ್ನು ಅವ ಕೇಳ ಎಂದೆಂದೂ
ನೀನಾದರೂ ಕೇಳು ನನ್ನೆದೆಯ ಪೇಳು

ಪೆದ್ದರಾಯನ ಪದ್ಯ

ಕೊಡುವಾಗ ಸ್ವಾರ್ಥವಿಲ್ಲದೇ ಕೊಟ್ಟರೂ
ಪಡೆದವನ ಬೆಳವಣಿಗೆಯಾದ ಮೇಲೆ
ಕೊಟ್ಟವನು ಅದು ತನ್ನ ಕೊಡುಗೆಯೆಂಬ
ವಾಸ್ತವವನ್ನು ಸಾಬೀತು ಪಡಿಸಿ
ಸಂತೋಷ ಪಡುವ ಬಯಕೆಯಲ್ಲಿದ್ದರೆ

ಪಡೆದವನು ಇದು ನನ್ನ ಭಾಗ್ಯದ
ಕೊಡುಗೆಯೆಂದೆಣಿಸಿ ತನ್ನ ಏಳಿಗೆಯ
ಕಾರಣ ತನ್ನನ್ನೇ ಮತ್ತು ತನ್ನ ಭಾಗ್ಯವನ್ನೇ
ಆಗಿಸಿಕೊಂಡು ಮತ್ತಷ್ಟು ಪಡೆಯುವ
ತವಕದಲ್ಲಿ ಕಳೆದಿರುತ್ತಾನೆ

ಇಬ್ಬರಿಗೂ ಇರುವ ಭ್ರಮೆಗಳು
ಇಬ್ಬರನ್ನೂ ದುಃಖಿ-ಸುಖಿಗಳಾಗಿ
ವಿಂಗಡಿಸಿ ಹಾಕುವ ಈ ಆಟ
ಬಲು ಸೊಗಸು ಲೋಕದಲಿ - ಪೆದ್ದರಾಯ