Wednesday, July 18, 2012

ಸ್ತ್ರೀಯರು ದುರ್ಗಾ ಸಪ್ತಶತಿ ಪಾರಾಯಣ ಮಾಡಬಹುದೇ?

This question is asked by sri.. shanakr hegade.. a famous astrologer - from Bangalore
This was my  answer to him ( I hope it will be helpful for many. that's why posting here)
ಶಂಕರ್ ಹೆಗಡೆಯವರೇ.. ಇಲ್ಲಿ ಬಹಳ ಗಂಭೀರ ಸಮಸ್ಯೆಯೇ ಆಗಿರುವ ವಿಷಯವನ್ನು ಒಂದೇ ಸಾಲಿನ ಪ್ರಶ್ನೆಯ ಮೂಲಕ ಎತ್ತಿದ್ದೀರಿ. ನನಗೆ ತಿಳಿದಂತೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಅನೇಕರು ಇಂತಹ ವಿಷಯ ಬಂದಕೂಡಲೇ ವೇದಕಾಲೀನ ಸ್ತ್ರೀಯರು ಕೆಲವರು ಮಂತ್ರಗಳನ್ನು ದರ್ಶನ ಮಾಡಿದ್ದನ್ನು ಉದಾಹರಿಸುತ್ತಾರೆ. ಸ್ತ್ರೀಯರಿಗೆ ಉಪನಯನ ನಡೆಯುತ್ತಿದ್ದ ಉದಾಹರಣೆಗಳನ್ನೂ ನೀಡುತ್ತಾರೆ. ಆದರೆ ಎಲ್ಲ ಸ್ತ್ರೀಯರಿಗೂ ಉಪನಯನ ನಡೆಯುತ್ತಿತ್ತೆ? ಯಾವ ಕಾಲಮಾನದಲ್ಲಿ ನಡೆಯುತ್ತಿತ್ತು? ಮತ್ತು ಕನ್ಯಾ ಉಪನಯನ ಯಾವಾಗ ನಿಂತು ಹೋಯಿತು..? ಯಾಕೆ ನಿಂತು ಹೋಯಿತು ಎಂಬುದರ ಬಗ್ಗೆ ಯಾರೂ ವಿವರಣೆ ಕೊಡುವುದಿಲ್ಲ. ಯುಗಧರ್ಮ ಎಂಬುದು ಒಂದು ಇದೆ, ಇವರು ಸ್ತ್ರೀಯರಿಗೆ ಉಪನಯನ ವೇದಾಧ್ಯಯನ ಎಲ್ಲ ಇತ್ತು ಎಂದು ಹೇಳುವ ಕಾಲದಲ್ಲಿ...ಅಂದರೆ ಕೃತ ಮತ್ತು ತ್ರೇತಾ ಯುಗಗಳಲ್ಲಿ ದೇವರೆಣ ಸುತೊತ್ಪತ್ತಿ - ಅಂದರೆ ಪತಿಯಿಂದ ಮಕ್ಕಳಾಗದೇ ಹೋದಲ್ಲಿ ಮೈದುನನ ಜೊತೆ ಮಿಥುನ ನಡೆಸಿ ಗಂಡು ಸಂತಾನ ಪಡೆದರೆ ಅದನ್ನು ಧರ್ಮ ಎಂದು ಒಪ್ಪುವ ಕಾಲ ಅದಾಗಿತ್ತು. ಮತ್ತು ಬ್ರಾಹ್ಮಣರು ನೇರವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಕಾಲಕ್ರಮೇಣ ಇವುಗಳೆಲ್ಲ ಅಧರ್ಮ ಎಂದು ಪರಿಗಣಿಸಲಾಯಿತು. ಜ್ಞಾನ ಬೆಳೆದಂತೆ ನಾಗರೀಕತೆ ಬೆಳೆಯಿತು. ಅದರ ಅಂಗವಾಗಿ ಕಲಿಯುಗಧರ್ಮದಲ್ಲಿ ಸ್ತ್ರೀಯರಿಗೆ ಮಂತ್ರೋಪಾಸನೆ ಬೇಡ. ಅದರಿಂದ ಕೆಡಕು ಹೆಚ್ಚು ಎಂದು ತೀರ್ಮಾನಿಸಲಾಯಿತು. ಮಾಂಸಾಹಾರವನ್ನು ಹೇಯವಾಗಿ ತಿಳಿಯಲಾಯಿತು. ಆದರೆ ಹಳೆಯದನ್ನು ಪೂರ್ತಿ ಬಿಡುವಂತೆಯೂ ಇರಲಿಲ್ಲ. ಹಾಗಾಗಿ ಮಾಂಸದ ಬದಲಿಗೆ ಉದ್ದಿನ ಒಡೆಯನ್ನು ಶ್ರಾದ್ಧಾದಿ ವೈದಿಕ ಕ್ರಿಯೆಗಳಲ್ಲಿ ಕಾಣುತ್ತೇವೆ. ಇನ್ನು ದುರ್ಗಾ ಸಪ್ತಶತಿಯ ವಿಷಯಕ್ಕೆ ಬರುವುದಾದರೆ ಅದು ಮಾರ್ಕಂಡೇಯ ಪುರಾಣದಲ್ಲಿ ಬರುವ ಏಳು ನೂರು ಶ್ಲೋಕಗಳ ಒಂದು ಕಥಾ ಭಾಗ ಭಾಗ ಅಷ್ಟೇ.ಅದನ್ನು ಕಥೆಯ ರೂಪದಲ್ಲಿ ಯಾರು ಬೇಕಾದರೂ ಓದಬಹುದು. ಅದು ಕನ್ನಡದಲ್ಲಿಯೂ ಸಿಗುತ್ತದೆ  ಆದರೆ ಆ ಏಳು ನೂರು ಶ್ಲೋಕಗಳಿಗೆ ಮೂರು ಬೀಜಾಕ್ಷರ ಸೇರಿದಂತೆ ಒಂಭತ್ತು ಅಕ್ಷರಗಳುಳ್ಳ ಒಂದು ಮೂಲ ಮಂತ್ರವನ್ನು ಉಪದೇಶ ಪಡೆದು. ಕವಚ ಅರ್ಗಳ ಕೀಲಕ...ರಹಸ್ಯತ್ರಯ ಸೇರಿಸಿ... ನ್ಯಾಸಗಳನ್ನು ಮಾಡಿ.....ವಿಧಿಪೂರ್ವಕವಾಗಿ ಪಾರಾಯಾಣ ಮಾಡುವ ವಿಧಾನ ..ದಾಮರೀ ತಂತ್ರ ಮತ್ತು..ಕಾತ್ಯಾಯನಿ ತಂತ್ರ ಎಂಬ ಎರಡು ಗ್ರಂಥಗಳಲ್ಲಿ ಹೇಳಲಾಗಿದೆ. ಇಲ್ಲಿ ನೀವು ಕೇಳಿದ್ದು ಸ್ತ್ರೀಯರು ''ಪಾರಾಯಣ'' ಮಾಡಬಹುದೇ ಎಂದು.. ಪಾರಾಯಣಕ್ಕೂ ಮತ್ತು ಓದುವುದಕ್ಕೋ ವ್ಯತ್ಯಾಸವಿದೆ. ಮಂತ್ರದ ಉಪದೇಶ ಪಡೆಯಲು ಇರುವ ವಿಧಾನಗಳನ್ನು ಅನುಸರಿಸಿ ಉಪದೇಶ ಪಡೆದು, ನಿರ್ದಿಷ್ಟ ಗ್ರಂಥಗಳ ಅನುಸಾರ ನಿರ್ದಿಷ್ಟ ಫಲಕ್ಕಾಗಿ ನಡೆಸುವ ಜಪವಿಧಾನವೆ ಪಾರಾಯಣ. ಮತ್ತು ವೈದಿಕ ಅದ್ಯಯನಕ್ಕೆ ಉಪನಯನಾದಿಗಳ ಅವಶ್ಯಕತೆ ಇದೆ. ಸಪ್ತಶತಿ ಪುರಾಣದಲ್ಲಿದೆ. ಪೌರಾಣಿಕ ಉಪಾಸನೆಗಳು ಸ್ತ್ರೀಯರಿಗೆ ವಿಶೇಷವಾಗಿ ಇವೆ ಅಲ್ಲವೇ..ಎಂಬ ಸಂಶಯ ಬರುತ್ತದೆ. ಆದರೆ.. ಆ ಕಥಾ ಭಾಗ ಪುರಾಣದಲ್ಲಿರುವುದು ನಿಜ. ಆದರೂ ಕೂಡ... ಆ ಕಥೆಯ ಭಾಗವನ್ನು ಎತ್ತಿಕೊಂಡು ಅದನ್ನು ಹೇಗೆ ಉಪಾಸನೆ ಮಾಡಿದರೆ ಯಾವ ಫಲ... ಎಂದು ತಂತ್ರ ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗಾಗಿ ಇದು ತಾಂತ್ರಿಕ ಉಪಾಸನೆ. ತಾಂತ್ರಿಕ ಉಪಾಸನೆ ಸ್ತ್ರೀಯರಿಗೆ ನಿಷಿದ್ಧ. ತಾಂತ್ರಿಕದಲ್ಲಿ ಸಾತ್ವಿಕ ತಂತ್ರಗಳ ಜೊತೆ... ಕ್ಷುದ್ರ ತಂತ್ರಗಳನ್ನೂ ಹೇಳಲಾಗಿದೆ. ತಾಂತ್ರಿಕ ಬೀಜಾಕ್ಷರ ಸೇರಿದ ಮಂತ್ರಗಳ ಜಪವನ್ನೂ ಮತ್ತು ನ್ಯಾಸವಿಧಾನ.. ಭೂತ ಶುದ್ಧಿ... ಅಂತರ್ಮಾತ್ರುಕಾ ನ್ಯಾಸ..ಬಹಿರ್ಮಾತ್ರುಕಾ ನ್ಯಾಸ...ಮುಂತಾಗಿ ಹೇಳಿದೆ. ಈ ದುರ್ಗಾ ಸಪ್ತಶತಿ ಪಾರಾಯಣದ ಬಗ್ಗೆ ಅದರ ರಹಸ್ಯಗಳ ಮತ್ತು ವಿಧಾನಗಳ ಬಗ್ಗೆ. ಒಂದು ಸಾವಿರ ಪುಟಗಳ ಬೃಹತ್ ಗ್ರಂಥ ಇದೆ. ಮುಂಬಯಿಯ ಐತಿಹಾಸಿಕ ಮತ್ತು ಪ್ರಸಿದ್ಧ ವೆಂಕಟೇಶ್ವರ ಪ್ರೆಸ್ ೧೯೨೬ ರಲ್ಲಿ ಅದನ್ನು ಪ್ರಕಟಿಸಿದೆ.

ಇಂತಹ.. ಸಾತ್ವಿಕ ಮತ್ತು ತಾಮಸಿಕ ಎರಡೂ ರೀತಿಯ ತಾಂತ್ರಿಕ ವಿಧಾನಗ ಹೊಂದಿರುವ ಸಪ್ತಶತಿಯ ಪಾರಾಯನವನ್ನು ಮೂಲ ಮಂತ್ರದ ಉಪದೇಶ ಪಡೆದು... ಒಂಭತ್ತು ಲಕ್ಷ ಜಪ ಮಾಡಿ... ಆಮೇಲೆ ನ್ಯಾಸ ಸಹಿತವಾಗಿ ಪಾರಾಯಣ ಮಾಡುವ ಶ್ರದ್ದೆ ಮತ್ತು ಅದರಿಂದಾಗುವ ಎಲ್ಲ ರೀತಿಯ ಪರಿಣಾಮಗಳನ್ನು ಎದುರಿಸುವ ಧೈರ್ಯ...ಯಾವುದಾದರೂ ಹೆಂಗಸಿಗೆ ಇದ್ದರೆ... ಅವರನ್ನು ತಡೆಯಬೇಡಿ.. ಮಾಡಲು ಹೇಳಿ... ಧೈರ್ಯ ಮತ್ತು ಶ್ರದ್ದೆ ಎರಡೂ ಇಲ್ಲದೇ... ನಾನ್ಯಾಕೆ ಮಾಡಬಾರದು..? ಎಂಬ ಹುಂಬತನ ಅವರಲ್ಲಿದ್ದರೆ ಅಂಥವರು ಮಾಡದೇ ಇರುವುದು ಉತ್ತಮ ಎಂಬುದು ನನ್ನ ಭಾವನೆ. ತಾಂತ್ರಿಕ ಸಿದ್ಧಿಗಾಗಿ ಹಂಬಲಿಸಿ...ಮಂತ್ರೋಪಾಸನೆಗೆ ಇಳಿದು ಜೀವನವನ್ನು ನರಕ ಮಾಡಿಕೊಂಡ ಅನೇಕ ಸ್ತ್ರೀಯರನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ.
ಕಥೆ ಓದಲು ಅಡ್ಡಿ ಇಲ್ಲ. ಪಾರಾಯಣ ಬೇಡ ಅಷ್ಟೇ.

Wednesday, July 11, 2012

ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ಇತ್ತೇಚೆಗೆ ಫೆಸ್ ಬುಕ್ ನ ವೇದಿಕೆಯೊಂದರಲ್ಲಿ ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಯಾರೋ ನನ್ನನ್ನು ಅಲ್ಲಿ ಎಳೆದುಕೊಂಡು ಹೋಗಿ ಸೇರಿಸಿದರು. ನನಗೆ ಅಂತಹ ಚರ್ಚೆಗಳು ಅನಾವಶ್ಯಕ ಅನಿಸಿದ್ದರಿಂದ ನಿರಾಸಕ್ತನಾಗಿದ್ದೆ. ಆದರೆ ಅಲ್ಲಿ ನಡೆಯುವ ಕೆಲ ಅಸಂಬದ್ಧ ವಿಷಯ ಮಂಡನೆಯನ್ನು ನೋಡಿ ಸಹಿಸಲಾಗದೇ ನಾನೂ ಚರ್ಚೆಯಲ್ಲಿ ಧುಮುಕಿದೆ. ಅನೇಕ ವಿಷಯಗಳ ಚರ್ಚೆಯಾದ ನಂತರ ಮತ್ತು ಇತ್ತೀಚಿನ ಕೆಲ ವಿದ್ವಾಂಸರ ಜನಪ್ರಿಯ ಪ್ರವಚನ ಮತ್ತು ಪುಸ್ತಕಗಳನ್ನು ಓದಿದಾಗ, ಹಾಗೂ ಬೆಂಗಳೂರಿನಂಥ ನಗರದ  ಮಧ್ಯಮ  ಮತ್ತು ಮೇಲ್ಮಧ್ಯಮ ವರ್ಗಗಳ ಜನರ ಜೊತೆ ಕೆಲ ದಿನಗಳಿಂದ ಒಡನಾಡಿದ ನಂತರ  ಗಮನಕ್ಕೆ ಬಂದ ವಿಷಯ ಏನೆಂದರೆ,  ಭಾರತದ ಬಹುತೇಕ ಅಕ್ಷರಸ್ಥರು ವಿಚಾರವಂತರು ನಮ್ಮ ಭಾರತೀಯ ಧಾರ್ಮಿಕ ಆಚರಣೆಗಳ ಹಿಂದಿನ ಮರ್ಮಗಳನ್ನು ಅಥವಾ  ಉದ್ದೇಶಗಳನ್ನು ತಿಳಿಯುವಲ್ಲಿ ಆಸಕ್ತರಾಗಿದ್ದಾರೆ. ನಗರಗಳಲ್ಲಿ ಅಂಥವರ ಸಂಖ್ಯೆ ತುಂಬಾ ಬೆಳೆಯುತ್ತಿದೆ. ಆದರೆ ಅಂಥವರಿಗೆ ಅವರಿಗೆ ಬೇಕಾದ ವಿಷಯಗಳನ್ನು ತಿಳಿಯುವ ಸರಿಯಾದ ''ದಾರಿ'' ಗೊತ್ತಿಲ್ಲದ ಕಾರಣ ದೇವಸ್ಥಾನಗಳ ಅರ್ಚಕರು ಹಾಗೂ ಟಿವಿ ಗಳಲ್ಲಿ ಬರುವ ಏನೂ ಓದಿಕೊಳ್ಳದ ನಿರ್ಲಜ್ಜ ಜ್ಯೋತಿಷಿಗಳನ್ನು ಆಶ್ರಯಿಸುತ್ತಿದ್ದಾರೆ.  ಇಂತಹ ಜನ ಸಮೂಹದ ದೃಷ್ಟಿಯಲ್ಲಿ ಟಿವಿಗಳಲ್ಲಿ ಅಲ್ಪ-ಸ್ವಲ್ಪ ಚೆನ್ನಾಗಿ ಮಾತಾಡುವವರು ಕೂಡ ಮಹಾತ್ಮರಾಗಿ ಕಾಣುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗೆ  ವಿಪರೀತ TRP ಬರುತ್ತಿದೆ ಮತ್ತು ಎಲ್ಲ ಚಾನೆಲ್ ಗಳು ಬೆಳಗಿನ ಹೊತ್ತು ಇಂತಹ  ಕಾರ್ಯಕ್ರಮಗಳಿಗೆ ಮೀಸಲಾಗುತ್ತಿವೆ.  ಇತ್ತೀಚಿನ ಶ್ರೀಮಂತ ಆಂಗ್ಲ ಶಾಲೆಗಳಲ್ಲಿ ಕೂಡ ಹಬ್ಬಗಳು ಯಾಕೆ ಮಾಡಬೇಕು ? ಮುಂತಾದ ವಿಷಯಗಳನ್ನು ಹಬ್ಬಗಳ ಮುನ್ನಾ ದಿನಗಳಲ್ಲಿ ಮಕ್ಕಳಿಗೆ ಹೇಳಿ  ಕಳಿಸುತ್ತಿರುವುದು ಆಶ್ಚರ್ಯದ ವಿಚಾರ. ಇತ್ತೀಚೆಗೆ ನಾನು ಭೇಟಿಯಾದ ಮಹಿಳೆಯೊಬ್ಬರು ''ಈ ಯುಗಾದಿ ಹಬ್ಬದ ಬಗ್ಗೆ ನನಗಿಂತ ನನ್ನ ಆರು ವರ್ಷದ ಮಗುವಿಗೆ ಚೆನ್ನಾಗಿ ಗೊತ್ತಿದೆ'' ಎಂದು ಹೇಳಿಕೊಳ್ಳುವಾಗ ಆಕೆಯ ಮುಖದಲ್ಲಿ ಕೀಳರಿಮೆಯ ಜೊತೆಗೆ..''ನನ್ನ ಮಗನನ್ನು ಅಂತಹ ಉತ್ತಮ ಶಾಲೆಯಲ್ಲಿ ಒದಿಸುತ್ತಿದ್ದೇವೆ'' ಎಂಬ ಜಂಬ ಹೆಚ್ಚಾಗಿ ಕಾಣುತ್ತಿತ್ತು. ನಿಮ್ಮ ಮಕ್ಕಳಿಗೆ ಇಂಥದ್ದನ್ನೆಲ್ಲ ಕಲಿಸುತ್ತಿದ್ದೇವೆ ಎಂಬ ಪ್ರಲೋಭನೆಯೊಂದಿಗೆ  ಹೆಚ್ಚಿನ ಡೊನೇಶನ್ ಪೀಕುತ್ತಿದ್ದೇವೆ ಎಂಬ ವಿಷವನ್ನು ಗಮನಕ್ಕೆ ಬಾರದ ಹಾಗೆ ಮಾಡುವ ಶಿಕ್ಷಣ ವ್ಯವಸ್ಥೆಯ ಹೊಸ ವ್ಯಾಪಾರ ತಂತ್ರ ಇದು ಎಂದು ಆಕೆಗೆ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ''ನೀನು ದುಡ್ಡು ಕೊಡು,  ನಾವು ಎಲ್ಲ ನೀಡುತ್ತೇವೆ'' ಎನ್ನುವ ವ್ಯಾಪಾರ ತಂತ್ರ.  ಮತ್ತು ''ನಾವು ದೊಡ್ದು ಕೊಡುತ್ತೇವೆ, ಹಾಗಾಗಿ  ನಮ್ಮ ಜವಾಬ್ದಾರಿ ಎಲ್ಲ ಮುಗಿಯಿತು'' ಎನ್ನುವ ಪೋಷಕರ ಮನಸ್ಥಿತಿ- ಈ ಎರಡೂ ಒಟ್ಟೊಟ್ಟಿಗೆ ಕಂಡು ಬರುತ್ತಿವೆ. ಈ ಸ್ಥಿತಿ ಶಿಕ್ಷಣದಲ್ಲಿ ಮಾತ್ರ ಅಲ್ಲ, ಇಡಿಯಾದ ಮಾರುಕಟ್ಟೆ....ಇದೇ  ದಾರಿಯಲ್ಲಿ ಮುನ್ನುಗ್ಗುತ್ತಿದೆ.  ಭಾರತೀಯ ಧಾರ್ಮಿಕ ಆಚರಣೆಗಳ ವಿಷಯಕ್ಕೆ ಮತ್ತೆ ಬರುವುದಾದರೆ,  ನಗರ ಜೀವನ ಹುಟ್ಟು ಹಾಕುವ ಅನೇಕ ಸಮಸ್ಯೆಗಳ ನಿವಾರಣೆ, ನಾಳಿನ ಬಗೆಗಿನ ಭಯ, ಜ್ಞಾನದ ಕೊರತೆ, ಅತಿ ಆಸೆ  ಮುಂತಾದ ಅನೇಕ ಕಾರಣಗಳಿಗಾಗಿ ಜನ ಜ್ಯೋತಿಷಿಗಳ ಮತ್ತು ದೇವಸ್ಥಾನಗಳ ಮುಂದೆ ತಂಡೋಪ ತಂಡವಾಗಿ ಕಾಣಿಸುತ್ತಿದ್ದಾರೆ. ಮಂತ್ರಗಳ -ಸ್ತೋತ್ರಗಳ ಕಲಿಯುವುವಿಕೆ ಮುಂತಾದವುಗಳು ಹೆಚ್ಚುತ್ತಿವೆ. ಇನ್ನು ಅನೇಕರು ಪೂಜಾ-ಆಚರಣೆಗಳ ಹಿನ್ನೆಲೆಯನ್ನು ತಿಳಿಯುವ   ನಿಟ್ಟಿನಲ್ಲಿ ಅತೀ ಉತ್ಸುಕರಾಗಿದ್ದಾರೆ.  ಈ ಎಲ್ಲ ಆಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆಯೇ ಇಲ್ಲವೇ ? ಎಂದು ತಿಳಿಯುವ ಕುತೂಹಲಿಗಳ ಸಂಖ್ಯೆಯೂ ದೊಡ್ಡದಿದೆ. ಈ ಉದ್ದೇಶದ ಹಿಂದೆ....ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಇಲ್ಲ . ಶ್ರದ್ಧೆ ಮತ್ತು ಆಸಕ್ತಿ ಇದ್ಯಾವುದೂ ಇಲ್ಲ. ಒಂದು ದೊಡ್ಡ ಸಮುದಾಯವೇ ಸಂಪೂರ್ಣವಾಗಿ ಒಂದು ಸನ್ನಿಗೆ ಒಳಗಾಗಿದೆ .. ಅದೇನೆಂದರೆ ಭಾರತೀಯೇತರ ಧರ್ಮಗಳಲ್ಲಿ ಅಥವಾ ಹಿಂದೂಯೇತರ ಧರ್ಮಗಳಲ್ಲಿ ಎಲ್ಲ ಪಾರದರ್ಶಕವಾಗಿದೆ,  ನೆರವಾಗಿದೆ.. ವೈಜ್ಞಾನಿಕವಾಗಿದೆ ಮತ್ತು ಎಲ್ಲ ಸರಿಯಾಗಿದೆ...ಎಂಬ ಭ್ರಮೆಯ ಜೊತೆಗೆ ಭಾರತೀಯ ಆಚರಣೆಗಳು ಕೂಡ ವೈಜ್ಞಾನಿಕ ಎಂದು ಸಾಬೀತು ಪಡಿಸುವ ಹುಕಿಗೆ ಬಿದ್ದು ಅವುಗಳ ಹಿನ್ನೆಲೆಯನ್ನು ತಿಳಿಯುವವರ ಸಂಖ್ಯೆ ಬೆಳೆಯುತ್ತಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವ ಜನರು ಹುಟ್ಟಿಕೊಂಡಿದ್ದಾರೆ.  ಕಳೆದ ಕೆಲ ಶತಮಾನಗಳಲ್ಲಿ ರಾಜನೈತಿಕ ದಾಸ್ಯದ ಪರಿಣಾಮವಾಗಿ....ಬೌದ್ಧಿಕ ಮತ್ತು ವೈಚಾರಿಕವಾಗಿಯೂ ನಮ್ಮ ಮನಸುಗಲ್ಲಿ ದಾಸ್ಯ ಬೇರೂರಿದೆ. ದಾಸ್ಯ ಮನೋಭಾವದ ಪರಿಣಾಮವಾಗಿ ಪಶ್ಚಿಮ ದೇಶಗಳ ಎಲ್ಲವೂ ಸಾಮಾನ್ಯ ಭಾರತೀಯರ ಕಣ್ಣಿಗೆ sophisticated ಆಗಿ ಕಾಣಿಸುತ್ತದೆ. ನಮ್ಮ ಋಷಿಗಳು ಹೇಳಿದ ಮಾತುಗಳು ನಮಗೆ ಕಾಲ ಕಸವಾದರೆ..ಅದೇ ಮಾತುಗಳನ್ನು ಇಂಗ್ಲಿಷ್ ನಲ್ಲಿ ಹೇಳಿದ ಮ್ಯಾಕ್ಸ್ ಮುಲ್ಲರ್  ಮಾತನ್ನು  ನಾವು ಹೆಮ್ಮೆಯಿಂದ ಕೊಟ್ ಮಾಡುತ್ತೇವೆ. ಕನ್ನಡದ ಒಳ್ಳೆ ಪುಸ್ತಕದ ಹೆಸರುಗಳು ಸರಿಯಾಗಿ ತಿಳಿಯದ ನಾವು ಇಂಗ್ಲಿಷ್ ನಲ್ಲಿ ಬರೆದ ತಲೆಹರಟೆ ಪುಸ್ತಕಗಳನ್ನು ದೊಡ್ಡ ಬುದ್ಧಿಜೀವಿಯಂತೆ ಪೋಸ್ ಕೊಟ್ಟುಕೊಂಡು ಓದುತ್ತೇವೆ. ''ನಾನು ಇಂಗ್ಲಿಷ್  ಪುಸ್ತಕ ಓದುತ್ತೇನೆ'' ಎನ್ನುವುದೇ ದೊಡ್ಡ ಹೆಮ್ಮೆ. ಅದರಲ್ಲಿ ಕಸ ತುಂಬಿದೆ ಎಂಬುದು ಅರ್ಥವಾಗುವುದಿಲ್ಲ. ಆದ್ದರಿಂದಲೇ...ಚೇತನ್ ಭಗತ್ ನನ್ನು  ''ನೀವು ಭಾರತೀಯರಗಿದ್ದೂ ಕೂಡ ನೀವು  ಹಿಂದಿಯಲ್ಲಿ ಯಾಕೆ ಬರೆಯುವುದಿಲ್ಲ''?  ಎಂದು ಕೇಳಿದಾಗ ''it's not considered cool to pick up a Hindi book in India '' ಅಂತ ಹೇಳಿದ್ದ... ಅವನಿಗೆ ಮಾರ್ಕೆಟ್ phycology ಚೆನ್ನಾಗಿ ಗೊತ್ತು. ಕಸ ತುಂಬಿ ಕೊಟ್ಟರೂ ನಮ್ಮ ಜನ ಇಂಗ್ಲಿಷ್ ಪುಸ್ತಕ ಓದುತ್ತಾರೆ. ರಸದ ಬಗ್ಗೆ ಅವರಿಗೆ ಗೊತ್ತಿಲ್ಲ.
ಅದೇ ರೀತಿ ನಮ್ಮ ಈ ಧಾರ್ಮಿಕ ಆಚರಣೆಗಳು ಅವೈಜ್ಞಾನಿಕ, ಮತ್ತು ಮೂಢನಂಬಿಕೆಗಳಿಂದ ಕೂಡಿವೆ ಎಂದು ಬಲವಾಗಿ ನಂಬುವ ದಾಸ್ಯ ಮೊನೋಭಾವದ ಸಮೂಹ ಅವುಗಳ ಹಿನ್ನೆಲೆಯನ್ನು, ಮತ್ತು ವೈಜ್ನಾನಿಕತೆಯನ್ನು ತಿಳಿಯುವ ಮೂಲಕ ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರದ್ದೆಗೆ ಬದಲಾಗಿ ಕೀಳರಿಮೆ ಈ ಬೆಳವಣಿಗೆಗೆ ಕಾರಣವಾಗುತ್ತಿರುವುದು ನಾಚಿಕೆ ಪಡುವ ವಿಚಾರ. ''ಧರ್ಮ'' ಮತ್ತು ''ಆಧ್ಯಾತ್ಮ'' ಎಂಬ ಈ ಎರಡು ಶಬ್ದಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ಹಾಗೂ ದುರುಪಯೋಗಕ್ಕೊಳಗಾದ ಶಬ್ದಗಳು. ಅವುಗಳ ನಿಜವಾದ ಅರ್ಥ ಸಾಮಾನ್ಯರಿಗೆ ತಿಳಿಸಬೇಕಾದ,  ಆಧ್ಯಾತ್ಮ ಬೋಧಿಸಬೇಕಾದ ಪುರಾತನ ಗುರುಪೀಠಗಳು ಶುಲ್ಕ ವಿಧಿಸಿ ಪಾದಪೂಜೆ,  ಅಭಿಷೇಕ, ಕುಂಕುಮಾರ್ಚನೆ, ಶ್ರಾದ್ಧ ಮುಂತಾದವುಗಳನ್ನು ಮಾಡಿಸುವ ಸೇವಾ ಕೌಂಟರ್ ಗಳಾಗಿ ಪರಿವರ್ತನೆಗೊಂಡಿವೆ. ರಾಜರ ಆಶ್ರಯದಲ್ಲಿ ಜ್ಞಾನ ಕೇಂದ್ರ ಗಳಾಗಿ  ಕೆಲಸ ಮಾಡುತ್ತಿದ್ದ ದೇವಸ್ಥಾನಗಳು ಈಗಿಲ್ಲ.  ಈಗ ಸರ್ಕಾರಗಳ ಕೈಯಲ್ಲಿರುವ ಹಾಗೂ  ಶ್ರೀಮಂತರು ಮತ್ತು  ಮಾಡಲು ಕೆಲಸವಿಲ್ಲದ ವೃದ್ಧ ಟ್ರಸ್ಟಿಗಳು ಕಟ್ಟಿಸುವ ದೇವಸ್ಥಾನಗಳಲ್ಲಿ ಅಜ್ಞಾನದ  ಪೋಷಣೆ ನಡೆಯುತ್ತಿದೆಯೇ ಹೊರತು ಆಧ್ಯಾತ್ಮದ ಪರಿಚಯವೂ ಸಾಮಾನ್ಯರಿಗಾಗುತ್ತಿಲ್ಲ. ''ಧರ್ಮ'' ಎನ್ನುವ ಶಬ್ದ  ಹಿಂದೂ-ಮುಸ್ಲಿಂ ಜಗಳಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು, ಆಧ್ಯಾತ್ಮ- ಧರ್ಮ ಬೊಧಿಸದೇ ಹೋದರೂ ಕೂಡ ಅವುಗಳ ಮುಸುಕಿನಲ್ಲಿ  ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿಯಂತ್ರಿಸುವ,  ಯೋಗಾಸನ ಹೇಳಿಕೊಡುವ ಹಾಗೂ ಗಿಡಮೂಲಿಕೆ ಔಷಧಿ ಕೊಡುವ ಆಧುನಿಕ ಮಠಗಳು ಅಥವಾ ''ಮಲ್ಟಿ ಸ್ಪೆಷಾಲಿಟಿ ಆಶ್ರಮಗಳು'' ಶ್ರೀಮಂತರ ಜೇಬಿಗೆ ಮಾತ್ರ ನಿಲುಕುವಂಥವುಗಳು. ಈ ವಿಚಿತ್ರ ಸ್ಥಿತಿಯಲ್ಲಿರುವ  ''ಜನಸಾಮಾನ್ಯ'' ಗಲಿಬಿಲಿಗೊಂಡು ಸಿಕ್ಕ ಸಿಕ್ಕವರನ್ನು ''ಗುರೂಜಿ'' ''ಸ್ವಾಮೀಜಿ'' ಎಂದು ಕರೆಯುತ್ತಿದ್ದಾನೆ. ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವುದನ್ನೇ ''ಧಾರ್ಮಿಕತೆ'' ಮತ್ತು, ಹನುಮಾನ್ ಚಾಲೀಸಾ ಪಠಿಸುವುದನ್ನೇ ''ಆಧ್ಯಾತ್ಮಿಕತೆ''  ಎಂದು ತಿಳಿಯುತ್ತಿದ್ದಾನೆ. ಆದರೆ ಪ್ರಪಂಚದ ಎಲ್ಲ ಧರ್ಮಗಳಿಗಿಂತ ಭಾರತೀಯ ಸನಾತನ ಧರ್ಮ ಅತ್ಯಂತ ಪ್ರಾಚೀನವಾದದ್ದು. ಮತ್ತು ಅತೀ ಶ್ರೇಷ್ಠವಾದದ್ದು ಎಂದು ಭಾಷಣ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂಥವರನ್ನು ಪಕ್ಕಕ್ಕೆ ಕರೆದು ''ಸ್ವಾಮೀ, ಧರ್ಮ ಎಂದರೇನು ? ಎಂದು ಕೇಳಿ ನೋಡಿ...'' ನಿಮಗೆ ಸರಿಯಾದ ಉತ್ತರೆ ಸಿಕ್ಕರೆ ಅದು ಈ ದಶಕದ ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ .  


Thursday, June 21, 2012

ನಾವು ಎತ್ತ ಕಡೆಗೆ ಹೊರಟಿದ್ದೇವೆ...?

ವಿದ್ವಾಂಸರನ್ನು ಪಕ್ಕಕ್ಕಿಟ್ಟು ದೊಡ್ಡ ಸಂಖ್ಯೆಯಲ್ಲಿರುವ  ಸಾಮಾನ್ಯರ  ದೃಷ್ಟಿಯಿಂದ ನೋಡುವುದಾದರೆ"ಧರ್ಮಎಂಬಪದವನ್ನು ಮತ್ತು  ಅದರ ಸ್ವರೂಪವನ್ನು                     ನಾವುಗಳು ತಪ್ಪಾಗಿಯೇತಿಳಿದಿದ್ದೇವೆ ಎಂದುಹೇಳಬೇಕಾಗುತ್ತದೆ ಧರ್ಮದ ಬಗ್ಗೆ ನಮ್ಮಲ್ಲಿ ಇರುವಷ್ಟು ತೊಡಕು ತೊಡಕಾದ ಮಾಹಿತಿ ಬೇರೆ ದೇಶಗಳ ಜನರಲ್ಲಿ ಕಂಡು ಬರುವುದಿಲ್ಲ. (ಆಧ್ಯಾತ್ಮ, ಸಂಸ್ಕೃತಿ, ಯೋಗ, ಪೂಜೆ, ಯಜ್ಞ, ಹೋಮ, ಪಾಪ ಪುಣ್ಯ, ಮುಂತಾದ ಶಬ್ದಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ) ಇನ್ನೂ ಸ್ಪಷ್ಟವಾಗಿ ಅರ್ಥವಾಗಬೇಕಾದರೆ ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ. ನಿಮ್ಮ ಸಂಪರ್ಕದಲ್ಲಿನ ಅತ್ಯಂತ ಸುಶಿಕ್ಷಿತರಂತೆ ಕಾಣುವ ಹಾಗೂ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿ ಆ ಮೂಲಕ ತಮ್ಮ ವಲಯ ದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ವ್ಯಕ್ತಿಯೊಬ್ಬರನ್ನು ಚರ್ಚೆಗೆಳೆದು ಹಿಂದೂ ಧರ್ಮದ ಇಂದಿನ ಪರಿಸ್ಥಿತಿ ಏನು..? ನಮ್ಮ ಜೀವನದಲ್ಲಿ ಅದರ ಪಾತ್ರವೇನು ..? ಎಂದು ಒಮ್ಮೆಲೇ ಪ್ರಶ್ನಿಸಿ ನೋಡಿ. ನಿಮ್ಮ ಪ್ರಶ್ನೆಯಿಂದ ಆ ವ್ಯಕ್ತಿ ಕಂಗಾಲಾಗಿ ಏನು ಹೇಳಬೇಕೆಂದು ತಿಳಿಯದೆ ತಡಬಡಿಸುತ್ತಾನೆ. 
ಅದೇರೀತಿ ತನ್ನನ್ನು ತಾನುಧಾರ್ಮಿಕನೆಂದು ತಿಳಿಯದ ಒಬ್ಬ ಸಾಮಾನ್ಯ ದಾರಿಹೊಕನಲ್ಲಿ ನೀವು ಇದೇ ಪ್ರಶ್ನೆಯನ್ನು ಕೇಳಿದಾಗಸಿಗುವ ಉತ್ತರ ಮೊದಲಿನ ಸ್ವಯಂಘೋಷಿತ ಧಾರ್ಮಿಕ ವ್ಯಕ್ತಿಯ ಉತ್ತರಕ್ಕಿಂತ ಹೆಚ್ಚೇನೂಬೇರೆಯಾಗಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಧರ್ಮವು ತನ್ನ ಆಯಾಮ್ಗಳನು ಬದಲಿಸಿಕೊಳ್ಳುತ್ತದೆ.ಆದರೆ  ಬದಲಾವಣೆಯನ್ನು ನಾವು ಸ್ವೀಕರಿಸದೆ ಇರುವುದು ಮತ್ತು ಧರ್ಮದ ಬಗ್ಗೆ ತಪ್ಪುತಿಳುವಳಿಕೆಯ ಪರಂಪರೆ ನಡೆದು ಬಂದಿರುವುದೇ ಇಂದಿನ ಈ ಸ್ಥಿತಿಗೆ ಕಾರಣ ಅಂತ ಅನ್ನಿಸುತ್ತೆ.ಅನೇಕ ರೀತಿಯ ಧಾರ್ಮಿಕತೆಯ ವೇಷಧಾರಿಗಳು ಜನರ ತಪ್ಪು ತಿಳುವಳಿಕೆಯ ಮೇಲೆ ತಮ್ಮಬೇಳೆ ಬೇಯಿಸಿಕೊಂಡು ತಪ್ಪು ತಿಳುವಳಿಕೆಯ ಪರಂಪರೆಯನ್ನು ಪ್ರಯತ್ನಪೂರ್ವಕವಾಗಿಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಹಾಗೂ ಪರಿಸ್ಥಿತಿ ಇನ್ನೂ ಜಟಿಲವಾಗುತ್ತಾ ಹೋಗುತ್ತಿದೆ.ಕೆಲವರು ಧಾರ್ಮಿಕ ಶಿಕ್ಷಣ ನೀಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತೆ ಅಂತ ಹೇಳ್ತಾರೆ.ಆದರೆ ಆರ್ಥಿಕ ಪ್ರಯೋಜನವಿಲ್ಲದ ಶಿಕ್ಷಣವನ್ನು ಪಡೆಯುವ ಸ್ಥಿತಿಯಲ್ಲಿ ಇಂದು ಯಾರೂ ಇಲ್ಲ.ಕೇವಲ ಜೀವನದಲ್ಲಿ ಸಮಸ್ಯೆಗಳು ಬಂದಾಗ ಪರಿಹಾರಕ್ಕಾಗಿ ಮಾತ್ರ ನಾವ ದೇವರ ಮೊರೆಹೋಗುತ್ತಿದ್ದೇವೆ ಮತ್ತು ಅದನ್ನೇ ಧಾರ್ಮಿಕತೆ ಅಂತ ತಿಳಿದುಕೊಂಡಿದ್ದೇವೆ. ದೇವರ ಇರುವಿಕೆಯನ್ನು ನಂಬುವುದು ಮತ್ತು ಕಷ್ಟಕಾಲದಲ್ಲಿ ಅವುಗಳನ್ನು ಪರಿಹರಿಸೆಂದು ಅವನನ್ನು ಪ್ರಾರ್ಥಿಸುವುದು ಕೇವಲ ಆಸ್ತಿಕತೆ. (ದೇವರ ಅಸ್ತಿತ್ವವನ್ನು ಒಪ್ಪುವಿಕೆ ಅಷ್ಟೇ) ಅದು ಧಾರ್ಮಿಕತೆಯೂ ಅಲ್ಲ. ಆಧ್ಯಾತ್ಮಿಕತೆಯೂ ಅಲ್ಲ.ವಾಸ್ತವವಾಗಿ ಇಲ್ಲಿ ನಾವುಗಳು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯವಿಷಯವೇನೆಂದರೆ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ಎರಡು ವಿಭಿನ್ನ ವಿಷಯಗಳು. ಅಧ್ಯಾತ್ಮ ಅನ್ನೋದು ಶರೀರದೊಳಗಿನ ಆತ್ಮ, ಅದರ ಬಂಧನ, ವಿಮೋಚನೆಯ ವಿಧಾನ ಅಂದರೆ ಮುಕ್ತಿಯ ಮಾರ್ಗ, ಮಾಡಬೇಕಾದ ಸಾಧನೆ ಮುಂತಾದ ವಿಷಯಗಳನ್ನು ಒಳಗೊಂಡಿದೆ. ಇಲ್ಲಿ ಧರ್ಮದ ಪ್ರಸ್ತಾಪವೇ ಬರುವುದಿಲ್ಲ. ಭಕ್ತಿ ಮಾರ್ಗ, ಯೋಗ ಮಾರ್ಗ ಮುಂತಾದ ಅನೇಕ ದಾರಿಗಳು ಆತ್ಮ-ಪರಮಾತ್ಮ ಮಿಲನದ ದಿಕ್ಕಿನ ಕಡೆಗೆ ಹೋಗುತ್ತವೆ. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ತ್ಯಾಗವೇ ಮುಕ್ತಿ ಸಾಧನೆಯ ಏಕೈಕ ದಾರಿ (ತ್ಯಾಗೆನೈಕೆ ಅಮೃತತ್ವಮಾನಶು:) 
         ಇನ್ನು ಧರ್ಮದ ವಿಷಯಕ್ಕೆ ಬರುವುದಾದರೆ ನೈತಿಕತೆಯ ಜೀವನ ವಿಧಾನವೇ ಧರ್ಮ ಎಂದು ಹೇಳಬೇಕಾಗುತ್ತದೆ. ಆದರೆ ಧರ್ಮವನ್ನು ನಾವು ಒಂದು religion ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಇಲ್ಲಿ ಹಿಂದೂಮುಸ್ಲಿಂಕ್ರೈಸ್ತ ಮುಂತಾದವುಗಳು ಕೇವಲ ಸಿದ್ಧಾಂತಅಥವಾ ಮತದ ಹೆಸರುಗಳುಧರ್ಮ ಇವೆಲ್ಲವನ್ನೂ ಮೀರಿದ್ದು.

Tuesday, June 5, 2012

ಹೇಳಿದ್ದು ಪರರಿಗೆ. ಹೇಳುವುದೂ ಪರರಿಗೇ...!ಮೊನ್ನೆ ಸಭೆಯೊಂದರಲ್ಲಿ ವಿದ್ವಾಂಸರೊಬ್ಬರು ಮಾತನಾಡುತ್ತಿದ್ದರು..ಅವರು ಮೀಮಾಂಸಾ ಶಾಸ್ತ್ರವನ್ನು ಗುರು ಮುಖೇನ ಅದ್ಯಯನ ಮಾಡಿದವರು. ಶ್ರಿಂಗೇರಿ ಸಂಸ್ಥಾನದ ಈಗಿನ ಮತ್ತು ಹಿಂದಿನ ಪೀಠಸ್ಥ ಸ್ವಾಮಿಗಳಿಗೆ ಸನ್ನಿಹಿತರು.  ಶೃಂಗೇರಿ ಸ್ವಾಮಿಗಳು ಸ್ವತಃ ವೇದ ಶಾಸ್ತ್ರಗಳನ್ನು ತಿಳಿದವರಾದ್ದರಿಂದ ಅಲ್ಲಿ ನಿಂತು ಶಾಸ್ತ್ರ ವಿಷಯ ಚರ್ಚೆ ಮಾಡಲು ತಾಕತ್ತು ಬೇಕು.. ಅಂತಹ ಮಠದಲ್ಲಿ ಅನೇಕ ವರ್ಷ ಇದ್ದು ಸ್ವಾಮಿಗಳಿಂದ...ಭೇಷ್ ಅನಿಸಿಕೊಂಡ ವಿದ್ವಾಂಸರು ಅವರು.. ಅನೇಕ ಸಂಸ್ಥೆಗಳು ಅವರಿಗೆ ಕೈಗೆ ಬಂಗಾರದ ಕಡಗ ತೊಡಿಸಿ ಗೌರವಿಸಿವೆ. ಅವರು ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು.. ''ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ತೀಯತಾಂ'' ವೇದವನ್ನು ಅನುದಿನವೂ ಅಧ್ಯಯನ ಮಾಡಬೇಕು..ಮತ್ತು ಅದರಲ್ಲಿ ಹೇಳಿದ ಸ್ವಕರ್ಮಗಳನ್ನು ತಪ್ಪದೆ ಆಚರಿಸಬೇಕು..ಸತ್ಪ್ರಜೆಗಳನ್ನು(ಮಕ್ಕಳನ್ನು)  ಪಡೆಯಬೇಕು. ಅವರಿಗೂ ಒಳ್ಳೆಯ ಸಂಸ್ಕಾರ ನೀಡಿ ಅವರನ್ನೂ ಕೂಡ ವೈದಿಕ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ನಮ್ಮೆಲ್ಲರ ಮೇಲೆ ಮೂರು ವಿಧವಾದ ಋಣಗಳು ಇರುತ್ತವೆ.. ೧.ಋಷಿ-ಋಣ. ೨.ದೇವ-ಋಣ.. ೩.ಪಿತೃ-ಋಣ . ವೆದಾಧ್ಯಯನದಿಂದ ಋಷಿಗಳ ಋಣವನ್ನು , ಯಜ್ಞ ಕರ್ಮಗಳಿಂದ ದೇವ ಋಣವನ್ನು ಹಾಗೂ ಸತ್ಪ್ರಜೆಗಳ ಉತ್ಪತ್ತಿಯಿಂದ ಪಿತೃಗಳ ಋಣವನ್ನು ಕಳೆದುಕೊಳ್ಳಬೇಕು..ಲೌಕಿಕ ಮಾರ್ಗದಲ್ಲಿ ಹೋಗಬಾರದು. ಉದ್ಯೋಗಕ್ಕಾಗಿ ವೇದಾಧ್ಯಯನ ಅಲ್ಲ... ಕರ್ತವ್ಯ ನಿರ್ವಹಣೆಗಾಗಿ.  ''ಬ್ರಾಹ್ಮಣೆನ ನಿಷ್ಕಾರಣೆನ ಷಡಂಗೋ ವೇದೋ ಅಧ್ಯೇತವ್ಯಃ, ಜ್ನೆಯಶ್ಚ''   ನಿಷ್ಕಾರಣವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ವೇದವನ್ನು ಮತ್ತು ಅದರ ಆರು ಅಂಗಗಳನ್ನು ಅಧ್ಯಯನ ಮಾಡಬೇಕು ಮತ್ತು ತಿಳಿಯಬೇಕು.  ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಭ್ರಷ್ಟರ ಮನೆಗಳಿಗೆ ಹೋಗಬಾರದು..ಸಂಭಾವನೆ ಅಥವಾ ದಕ್ಷಿಣೆಗಾಗಿ  ಹಣವಂತರ ಮುಂದೆ ಹಲ್ಲು  ಕಿರಿಯಬಾರದು. ಮುಂತಾಗಿ ಮಾತನಾಡುತ್ತಾ ಹೋದರು...ಅವರ ಮಾತುಗಳೆಲ್ಲವೂ ಒಪ್ಪಬೇಕಾದವುಗಳೇ ಆಗಿದ್ದರೂ ಕೂಡ ಈ ಎಲ್ಲ ಮಾತುಗಳನ್ನು ನಾವುಗಳು ಬಾಲ್ಯದಿಂದಲೇ ಅನೇಕ ಬಾರಿ ಕೇಳಿ ಕೇಳಿ ರೋಸಿ ಹೋಗಿತ್ತು. ವಿದ್ವಾಂಸರು ತಮ್ಮ ಮಾತಿನುದ್ದಕ್ಕೂ ನನ್ನ ಕಡೆಗೇ ನೋಡಿಕೊಂಡು ಮಾತನಾಡುತ್ತಿದ್ದರು. ಏಕೆಂದರೆ ನಾನು ಅದೇ ದಿನ ಮಧ್ಯಾನ್ಹ ಅವರಲ್ಲಿ ಒಂದು ಮಾತು ಕೇಳಿದ್ದೆ.  ''ಇತ್ತೀಚೆಗೆ ಸಂಪೂರ್ಣ ವೇದಾಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ'' ಎಂಬ  ಮಾತು  ಚರ್ಚೆಗೆ ಬಂದಾಗ..''ಹನ್ನೆರಡು ಅಥವಾ ಹದಿನೈದು ವರ್ಷ ಕಷ್ಟ ಪಟ್ಟು ವೇದ ಓದುವವರಿಗೆ ಆ ವಿದ್ಯೆಗೆ ತಕ್ಕ ಸರಿಯಾದ ಉದ್ಯೋಗವೇ ಕರ್ನಾಟಕದಲ್ಲಿ ಇಲ್ಲ. ಇನ್ನು ಯಾರಾದ್ರು ಯಾಕೆ ಓದುತ್ತಾರೆ''?   ''ಬರೀ ಪೂಜೆ ಮಂತ್ರಗಳನ್ನು ಕಲಿತು ಹೊಟ್ಟೆ ಪಾಡಿಗೆ ಪುರೋಹಿತರಾಗುತ್ತಿದ್ದಾರೆ.. ಹೀಗಾಗಿ ಅವರ ತಪ್ಪು ಇಲ್ಲ''  ವೇದಾಧ್ಯಯನ ಮಾಡುವವರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಯೋಚಿಸಬೇಕು. ದೊಡ್ಡ ಮಠಗಳು ಕೂಡ ಪುರೋಹಿತರ ಮತ್ತು ಅರ್ಚಕರ (ಎರಡೂ ಬೇರೆ ಬೇರೆ ) ಸಮೂಹವನ್ನು ತಯಾರು ಮಾಡುತ್ತಿವೆಯೇ ಹೊರತು.. ವೇದ ವಿದ್ವಾಂಸರನ್ನು ತಯಾರು ಮಾಡುತ್ತಿಲ್ಲ. ಈ ಸಾವಿರಾರು ಕೋಟಿ ಆಸ್ತಿ ಹೊಂದಿರುವ, ವೈದಿಕ ಧರ್ಮ ಉಳಿಸಲಿಕ್ಕಾಗಿಯೇ ಹುಟ್ಟಿಕೊಂಡ ದೊಡ್ಡ ದೊಡ್ಡ ಮಠಗಳು.. ನಿಮ್ಮಂಥ ಹಿರಿಯರು.. ಹಾಗೂ ಸರ್ಕಾರ.. ಹೀಗೇ ಯಾರಿಂದಲೂ ''ಪೂರ್ಣವೆದಾಧ್ಯಯನ'' ಮಾಡಿಸುವ ಮತ್ತು ವೇದ ಓದಿದವರಿಗೆ ತಕ್ಕ ಉದ್ಯೋಗ ದೊರಕಿಸುವ ಪ್ರಯತ್ನ ನಡೆಯುತ್ತಿಲ್ಲ. ''ಈ ಬಗ್ಗೆ ಕಾಳಜಿ ಕಾಣಿಸುತ್ತಿಲ್ಲ'' ಎಂದು ತಿವಿದಿದ್ದೆ.  ಹೀಗಾಗಿ ಸಭೆಯಲ್ಲಿ ನನ್ನನ್ನು ಉದ್ದೇಶವಾಗಿಟ್ಟುಕೊಂಡು ಅನಗತ್ಯ ಧರ್ಮ ಬೋಧನೆ ಮಾಡತೊಡಗಿದ್ದರು. ನನಗೆ ಆಕ್ರೋಷ ತಾಳಲಾರದೆ ಅಲ್ಲೇ ವೇದಿಕೆಯಲ್ಲೇ ತಡವಿಕೊಂಡು ಚರ್ಚೆಗಿಳಿದೆ. ಆದರೆ ಅವರು,  ''ಆಮೇಲೆ ಮಾತಾಡೋಣ'', ''ಆಮೇಲೆ ಮಾತಾಡೋಣ'', ಎಂದು ಸಂಸೃತ ಭಾಷೆಯಲ್ಲಿ ನನಗಷ್ಟೇ ಅರ್ಥವಾಗುವಂತೆ ಹೇಳಿ ನುಣುಚಿಕೊಂಡರು.  ಆ ಸಭೆಯನ್ನು ಆಯೋಜಿಸಿದ ವ್ಯಕ್ತಿ ಒಂದು ಪ್ರಸಿದ್ಧ ದೇವಸ್ಥಾನದ  ಮಾಲೀಕ.   ಪರಮಾತ್ಮನ ಸೇವೆ ಎಂಬ ಸೋಗಿನಲ್ಲಿ ದೋಚಿದ ಹಣವೇ ಅವನ ಬಂಡವಾಳ.  ಆ ದೇವಸ್ಥಾನದ ಮಾಲೀಕ ಎಷ್ಟು ಧೂರ್ತ-ಅಧರ್ಮಿ ಭ್ರಷ್ಟ ಎಂಬುದು ನನಗಿಂತ ಅವರಿಗೇ ಚೆನ್ನಾಗಿ ಗೊತ್ತು. ಆದರೆ ..ಸಬೆ ಮುಗಿದಾಗ ''ಭಾರದ'' ಸಂಭಾವನೆಯ ಕವರ್  ಅನ್ನು  ವಿದ್ವಾಂಸರು ನಗುನಗುತ್ತಲೇ ಪಡೆದರು. ರಾತ್ರಿ ಊಟಕ್ಕೆ ಕುಳಿತಾಗ ಅವರನ್ನು ಮತ್ತೆ ತಡವಿ,  ಮೆಲ್ಲಗೆ ವಿಷಯಾಂತರ ಮಾಡಿ ವಿಶ್ವಾಸಕ್ಕೆ ತಂದುಕೊಂಡು ''ನಿಮ್ಮ ಮಕ್ಕಳು ಎಲ್ಲಿದ್ದಾರೆ ಏನು ಮಾಡಿಕೊಂಡಿದ್ದಾರೆ..? ಎಂದು ಕೇಳಿದೆ. ''ದೊಡ್ಡ ಮಗ ಇನ್ಫೋಸಿಸ್ ನಲ್ಲಿ ಇದಾನೆ. ಎರಡನೆಯವನು ಕೇಟರಿಂಗ್ ಮಾಡುತ್ತಾನೆ. ಮೂರನೆಯವನು ಕೂಡ ಸಾಫ್ಟ್ ವೇರ್ ಇಂಜಿನಿಯರ್..  ಅರವತ್ತು ಸಾವಿರ ಸಂಬಳ''. ಎಂದು ಹೇಳುವಾಗ ಅವರ ಮುಖದಲ್ಲಿ ಅಗತ್ಯಕ್ಕಿಂತ ಹೆಚ್ಚು ಗರ್ವ ಅಸಹ್ಯವಾಗಿ ಕಾಣುತ್ತಿತ್ತು. ನಾನು ಅವರ ಮಕ್ಕಳ ಉದ್ಯೋಗದ ಬಗ್ಗೆ ಯಾಕೆ ಕೇಳಿದೆ ಎಂದು ಅವರಿಗೆ ಗೊತ್ತಾದಂತೆ ತೋರಲಿಲ್ಲ.  ''ನೀವು ಪೂರ್ವ ಮೀಮಾಂಸಾ ಮತ್ತು ಉತ್ತರ ಮೀಮಾಂಸಾ ಎರಡನ್ನು ಓದಿದ್ದೀರಿ. ಆದರೆ ವೇದಾಧ್ಯಯನ ಎಲ್ಲಿಯ ವರೆಗೆ  ಆಗಿದೆ''?  ಎಂದು ಕೇಳಿದೆ.. '' ನಾವು ಓದುವ ಕಾಲದಲ್ಲಿ ಈಗಿನಂತೆ ಒಳ್ಳೆಯ ವೇದ ಪಾಠಶಾಲೆಗಳು  ಇರಲಿಲ್ಲ'' ಎಂಬುದಷ್ಟೇ ಅವರ ಉತ್ತರವಾಗಿತ್ತು. (ಏಕೆಂದರೆ ಕೇವಲ ಪೂಜೆ-ಪುನಸ್ಕಾರಗಳಿಗೆ,  ಹೋಮ-ಹವನಗಳಿಗೆ ಬೇಕಾಗುವಷ್ಟು ಮಂತ್ರಗಳು ಮಾತ್ರ ಅವರಿಗೆ ತಿಳಿದಿವೆ) ಊಟವಾದ ಮೇಲೆ ತಾಂಬೂಲ ಮೆಲ್ಲುತ್ತಾ ಅವರು ತಮಗೆ ಉಪರಾಷ್ಟ್ರಪತಿಗಳಿಂದ ದಿಲ್ಲಿಯಲ್ಲಿ ನಡೆದ ಸನ್ಮಾನದ ಕಥೆಯನ್ನು ಹೇಳತೊಡಗಿದರು. ನನಗೆ ಸಹಿಸಲಾಗದೆ..'' ಈ ಕಥೆಗಳನ್ನೆಲ್ಲಾ..ನಿಮ್ಮ ಮೊಮ್ಮಕ್ಕಳಿಗೆ ಹೇಳಿ..ಚೆನ್ನಾಗಿರುತ್ತೆ..'' ಎಂದು ಕಟುವಾಗಿ ಹೇಳಿ ಅಲ್ಲಿಂದ ಎದ್ದು ಹೊರಟೆ. ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವಮಾನವಾದಂತಾಗಿ ಅವರು ಅವಾಕ್ಕಾದರು. ಆದರೆ ಅವರಿಗೆ ಅವಮಾನ ಮಾಡಿದೆನೆಂಬ ಭಾವವೇ ನನಗೆ ಬರಲಿಲ್ಲ. ಬದಲಾಗಿ ''ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ'' ಎನ್ನುವ   ಶಾಪ  ನನ್ನ   ಮನಸಿನಲ್ಲಿ ತಾನೇ ತಾನಾಗಿ ಮೂಡಿ ನಿಂತಿತ್ತು.