Monday, April 22, 2013

ಅಭಿವೃದ್ಧಿ ಎಂಬ ದಾರಿಯ ಮುಳ್ಳುಗಳು

ಒಂದು ವಾರದ ಹಿಂದೆ NDTV ಯವರು ಪ್ರಧಾನ ಮಂತ್ರಿಯನ್ನು ವೇದಿಕೆಯ ಮೇಲೆ ಕೂರಿಸಿಕೊಂಡು ಪ್ರತಿ ವರ್ಷ ಕೊಡುವ ಒಂದಷ್ಟು ಅವಾರ್ಡ್ ಗಳನ್ನು ಕೊಟ್ಟು ತಮ್ಮನ್ನು ತಾವು ದೊಡ್ಡವರನ್ನಾಗಿ ತೋರಿಸಿಕೊಳ್ಳುತ್ತಿದ್ದರು. ಯಾರ್ ಯಾರಿಗೂ, ಯಾತ್ಯಾತಕ್ಕೋ ಅವಾರ್ಡ್ ಗಳು. ನಗು ತಡೆದುಕೊಂಡು ನೊಡುತ್ತಿದ್ದೆ.   ಆದರೆ ಒಮ್ಮೆಲೇ  ಟಿವಿಯವರ ಮೇಲೆ ಅಸಹ್ಯವಾಗತೊಡಗಿತು. ಏಕೆಂದರೆ ಅವರು ಕೊಟ್ಟ ಒಂದು ಅವಾರ್ಡ್. ಕೆಲ ತಿಂಗಳ ಹಿಂದೆ ದಿಲ್ಲಿಯಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೊಳಗಾದ ಯುವತಿಯ ತಂದೆ ತಾಯಿಯರನ್ನು ವೇದಿಕೆಗೆ ಕರೆಸಿ ದುಃಖದಲ್ಲಿ ಮುಳುಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದ ಅವರ ಕೈ ಗೆ ಮೈಕ್ ಕೊಟ್ಟು ಮಾತಾಡಿ ಮಾತಾಡಿ ಅಂತ ಅವರ ಪ್ರಾಣ ತಿಂದು ಅವರ ಕೈಗೆ ''ಅವಾರ್ಡ್'' ಎಂಬ ಹೆಸರಿನ ಒಂದು ಕಬ್ಬಿಣದ ತುಂಡನ್ನು ನೀಡಿದರು. ಆ ಕಬ್ಬಿಣದ ತುಂಡು ಆ ವೃದ್ಧ ದಂಪತಿಗಳಿಗೆ ಯಾವ ರೀತಿ ಉಪಯೋಗಕ್ಕೆ ಬರಬಹುದು ಎಂದು ನಾನು ಯೊಚಿಸಿದೆ. ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚುಅನಿಸಿತು. ಈ ಎಲ್ಲ ಚಾನೆಲ್ ಗಳಿಗೆ  ತಿಂಗಳುಗಟ್ಟಲೆ ಅತಿ ಹೆಚ್ಚು  TRP ಎಂಬ ಕನಸನ್ನು ನನಸಾಗಿಸಿ ಕೋಟಿಗಟ್ಟಲೆ ಹಣವನ್ನು ಈ ಚಾನೆಲ್ ನವರಿಗೆ ನೀಡಿ ಹೋದ ನಿರ್ಭಾಗ್ಯ ಹುಡುಗಿಯ ಹೆತ್ತವರು ಅವರು.

ಹತ್ತು ನಿಮಿಷಗಳ ನಂತರ ಅದೇ ವೇದಿಕೆಯಲ್ಲಿ ಕರೀನಾ ಕಪೂರ್ ಳನ್ನು ಕರೆದು ಹೋಗಳಿ ''ಎಂಟರ್ ಟೈನರ್ ಆಫ್  ದಿ ಡೆಕೇಡ್'' ಅವಾರ್ಡ್ ಪ್ರದಾನ ಮಾಡಲಾಯಿತು. ಶ್ರೀದೆವಿಗೆ ''ಐವತ್ತು ವರ್ಷ ವಯಸ್ಸಿನಲ್ಲಿಯೂ ಕೂಡ ಸೆಕ್ಸಿಯಾಗಿ ಕಾಣಿಸುತ್ತಾಳೆ'' ಅನ್ನುವ ಕಾರಣಕ್ಕಾಗಿ ಅವಾರ್ಡ್  ಕೊಡಲಾಯಿತು. ಪ್ರೇಕ್ಷಕರಾಗಿ ಕುಳಿತಿದ್ದ ದೇಶದ ಮಹಾ ಮಹಿಮರೆಲ್ಲ ಚಪಾಳೆ ತಟ್ಟಿ  ಕರೀನಾ ಮತ್ತು ಶ್ರಿದೆವಿಯರನ್ನು ಅಭಿನಂದಿಸುತ್ತಿದ್ದರು. (ಸಮಾಜದ ಮೇಲೆ ಇದರ ಪರಿಣಾಮದ ಬಗ್ಗೆ ಮುಂದೆ ಬರೆಯುತ್ತೆನೆ.)

ದೆಹಲಿಯ ನಿರ್ಭಯಾ ರೇಪ್ ಪ್ರಕರಣದ ಸಂದರ್ಭದಲ್ಲಿ  ಕೆಲ NGO ಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳು ಉಗ್ರವಾಗಿ  ಪ್ರತಿಭಟಿಸಿದರು. ಅದನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಜ್ಞಾವಂತರು ಕೇವಲ ತಮ್ಮ ಫೆಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ''ಎಲ್ಲದಕ್ಕೂ ಕೇವಲ ದೆಹಲಿ ಪೊಲಿಸರು ಮತ್ತು ಸರ್ಕಾರಗಳು ಹೊಣೆ'' ಅಂತ ಬರೆದದ್ದೇ ಬರೆದದ್ದು.  ತಮ್ಮ ಪ್ರೊಫೈಲ್ ಚಿತ್ರಗಳ ಬದಲಿಗೆ ಕಪ್ಪು ಚುಕ್ಕೆ ಇಟ್ಟು ಪ್ರತಿಭಟಿಸುವುದು, ರೇಪ್ ಗೆ ಸಂಬಂಧಿಸಿದ ಮಾಹಿತಿಗಳನ್ನು, ಪ್ರತಿಭಟನೆಯ ಫೋಟೋಗಳನ್ನು ಶೇರ್ ಮಾಡುವುದು ಮುಂತಾಗಿ ಎಲ್ಲರೂ ತಮ್ಮ ತಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಸ್ಪಂದಿಸಿದರು. ಆದರೆ ಇವರೆಲ್ಲ ಗಮನಿಸದ ವಿಷಯವೆಂದರೆ ಪೋಲೀಸಿನವರು ಮತ್ತು ಸರ್ಕಾರ ಇಬ್ಬರೂ ಕೂಡ ಇಂತಹ ಆನ್ ಲೈನ್ ಪ್ರತಿಭಟನೆಗಳಿಗೆ ಜಗ್ಗುವುದಿಲ್ಲ. ಅದು ಏಕೆಂದರೆ ಈ ಆನ್ ಲೈನ್ ಪ್ರತಿಟನೆ ಮಾರನೆ ದಿನದ ಹೊತ್ತಿಗೆ ಸ್ಪಾಮ್ ಆಗಿ ಹೋಗುತ್ತದೆ  . ಹಾಗೂ ಭಾರತದಲ್ಲಿ ನೂರಿಪ್ಪೈತೈದು ಕೋಟಿಗೂ ಮಿಗಿಲಾದ ಜನಸಂಖ್ಯೆಗೆ  ಕೇವಲ ಆರು ಕೋಟಿ ಫೆಸ್ ಬುಕ್  ಪ್ರೊಫೈಲ್ ಗಳು ಇವೆ . ಅವುಗಳಲ್ಲಿ  ನೂರಕ್ಕೆ ಮೂವತ್ತ ರಷ್ಟು ಫ್ಲರ್ಟಿಂಗ್ ಗಾಗಿ ಮಾಡಿಕೊಂಡ ಫೇಕ್ ಪ್ರೊಫೈಲ್ ಗಳು. ಈ ಕಮೆಂಟು ಕುಟ್ಟುವ ಜನ ಆನ್ ಲೈನ್ ನಲ್ಲಿ ಮಾತ್ರ ಶೂರರು. ಇವರೆಂದಿಗೂ  ರಸ್ತೆಗಿಳಿಯಲಾರರು ಮತ್ತು ಇಂಥವರು ಮತ ಚಲಾಯಿಸುವುದು ಕೂಡ ಅಪರೂಪ ಆದ್ದರಿಂದ ಆ ಪ್ರತಿಭಟನೆಯನ್ನು ತನ್ನಷ್ಟಕ್ಕೆ ಸತ್ತುಹೊಗಲು  ಬಿಟ್ಟು ಸರ್ಕಾರ ಸುಮ್ಮನಾಯಿತು. ಸಾಮಾಜಿಕ ಜಾಲತಾಣಗಳಿಂದ ಕೆಲವೊಂದು ವಿಷಯಗಳಲ್ಲಿ ಪರಿಣಾಮಕಾರಿ ಫಲಿತಾಂಶ ಬಂದಿದ್ದು ನಿಜವಾದರೂ ಈ ರೇಪ್ ಪ್ರಕರಣದಲ್ಲಿ ಎನೂ ನಡೆಯಲಿಲ್ಲ. ಮಾಧ್ಯಮದವರು ಉಂಟು ಮಾಡಿದ ಒತ್ತಡಕ್ಕೆ ಮತ್ತು ಪ್ರತಿಪಕ್ಷಗಳ ಗಲಾಟೆಯಿಂದಾಗಿ  ಸಂಸತ್ತಿನಲ್ಲಿ anti rape bill ಪಾಸ್ ಆಯಿತು. (ಅನುಮೋದನೆಗೊಂಡ ಬಿಲ್ ಪರಿಣಾಮಕಾರಿಯಾಗಿಲ್ಲ,  ಅಂತ ಸುಷ್ಮಾ ಸ್ವರಾಜ್ ಈಗ ಮತ್ತೆ ಕೋಗೆಬ್ಬಿಸಿದ್ದಾರೆ.) ಆದರೆ ಮಾಧ್ಯಮಗಳು ಎಲ್ಲವನ್ನೂ ಬಿಟ್ಟು ಈ ಪ್ರಕರಣ ಹಿಂದೆ ಬೀಳುವುದಕ್ಕೂ ಮತ್ತು ಪ್ರತಿಪಕ್ಷಗಳಿಗೂ ಇದರ ಹಿಂದೆ ಅವರದೇ ಆದ  ಹಿತಾಸಕ್ತಿಯ ಕಾರಣಗಳಿವೆ. ರಾಜಕೀಯ ಹಿತಾಸಕ್ತಿಗಾಗಿ ಹಾಗೂ ವಿರೋಧಿಗಳನ್ನು ಹಣಿಯಲು ಮಾಧ್ಯಮಗಳ ಉಪಯೋಗ ಹೇರಳವಾಗಿ ಹೆಚ್ಚಿದೆ.  (ಕರ್ನಾಟಕ ದಲ್ಲಂತೂ ಅತ್ಯಂತ ಭ್ರಷ್ಟ ನ್ಯೂಸ್ ಚಾನಲ್ ಗಳ ಮುಖ್ಯಸ್ಥರು ಜನಸಾಮಾನ್ಯರಿಗೆ ನೈತಿಕತೆಯ ಪಾಠ ಹೇಳಿಕೊಡುತ್ತಿದ್ದಾರೆ.)

ಈ ಬೆಳವಗಿಗಳ ನಂತರ ಈಗ ದಿಲ್ಲಿಯಲ್ಲಿ ಮತ್ತೊಂದು ರೇಪ್ ಆಗಿದೆ, ಅದು ಕೂಡ ಚಿಕ್ಕ ಮಗುವಿನ ಮೇಲೆ. ಮತ್ತೊಂದು ಪ್ರತಿಭಟನೆ. ಮತ್ತಷ್ಟು ಫೆಸ್ ಬುಕ್ ಸ್ಟೇಟಸ್ ಅಪ್ಡೇಟ್ ಗಳು. ಕಾನೂನು ಗಟ್ಟಿ ಮಾಡಬೇಕು, ಸರ್ಕಾರ ಹೊಣೆ ಹೊತ್ತುಕೊಬೇಕು, ಘೋರ ಶಿಕ್ಷೆ ಆಗಬೇಕು ಅನ್ನೋ ಬೆಡಿಕೆಗಳು, ಪೋಲೀಸರ ಅಸಮರ್ಥತೆಯ ಅನಾವರಣಗಳು, ದೊಡ್ಡ ದೊಡ್ಡ ಲೇಖನಗಳು, ಟೀವಿಯವರಿಗೆ ಹೀರೋ ಆಗಲು ಹೊಸ ಚರ್ಚೆಗಳು.
ಈ ದೆಹಲಿಯ ''ಗುಡಿಯಾ'' ರೇಪ್ ನ ವರದಿಗಳು ಹಾಗೂ ಪ್ರತಿಭಟನೆಗಳು ಶುರುವಾದಕೂಡಲೇ ದೇಶದ ವಿವಿಧ ಭಾಗಗಳಿಂದ ಇನ್ನೂ ಏಳು ಮಕ್ಕಳ ಅತ್ಯಾಚಾರಗಳ ಮಾಹಿತಿ ಬರತೊಡಗಿತು. ಎಲ್ಲ ಎಂಟೂ ಘಟನೆಗಳನ್ನು ಒಮ್ಮೆ ಕಾಟಾಚಾರಕ್ಕೆ ವರದಿ ಮಾಡಿ ಮತ್ತೆ ದೆಹಲಿಯ ಪೋಲೀಸರ ಮತ್ತು ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹ ಮುಂದುವರೆಯಿತು. (ಅಂದರೆ ವಾಸ್ತವವಾಗಿ ದೇಶದಾದ್ಯಂತ ಪ್ರತಿನಿತ್ಯ ರೇಪ್ ಗಳು ದೊಡ್ಡ  ಸಂಖ್ಯೆಯಲ್ಲಿ ನಡೆಯುತ್ತವೆ. ಆದರೆ ಮಾಧ್ಯಮದವರ ಬಿಡುವಿಗೆ ಅನುಸಾರವಾಗಿ ಹಾಗೂ ಲಾಭದ ಆಧಾರದ ಮೇಲೆ ಕೆಲ ಪ್ರಕರಣಗಳು ಪ್ರಾಮುಖ್ಯತೆ ಪಡೆದು ದೇಶದಾದ್ಯಂತ ವರದಿಯಾಗುತ್ತವೆ.  NGO ಒಂದಕ್ಕೆ ಸೇರಿದ ಬಾಡಿಗೆ ಪ್ರತಿಭಟನೆಗಾತಿಯೋಬ್ಬಳು ಆಸ್ಪತ್ರೆಯಲ್ಲಿ ಪೊಲೀಸರು ನಿರ್ಬಂಧಿಸಿದ ಪ್ರದೇಶವನ್ನು ಪ್ರವೇಶಿಸಿದಾಗ ಆ ಅಧಿಕಾರಿ  ಆ ಹುಡುಗಿಯನ್ನು ಹಿಂದಕ್ಕೆ ತಳ್ಳಿದರು. ಅಷ್ಟಕ್ಕೇ ಅವಾಚ್ಯ ಶಬ್ದ ಬಳಸಿದ ತನ್ನ ಮೊಮ್ಮಗಳ ವಯವಸಿನ ಹುಡುಗಿಯ ಕೆನ್ನೆಗೆ ಏಟು ನೀಡಿದ್ದಾರೆ. ಪೋಲೀಸ್ ಕೆನ್ನೆಗೆ ಹೊಡೆಯುವ ದೃಶ್ಯಗಳನ್ನು ಮಾತ್ರ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಒತ್ತಡ ತಂದು ಆ ಅಧಿಕಾರಿಯನ್ನು ಅಮಾನತುಗೊಳಿಸಲಾಯಿತು. ಆದರೆ ಆ ಹುಡುಗಿಯ ವರ್ತನೆಯ ಮತ್ತು ಹಿನ್ನೆಲೆಯ ಬಗ್ಗೆ ಯಾರು ಬಾಯಿ ಬಿಡುವುದಿಲ್ಲ. ಕೆನ್ನೆಗೆ ಏಟು ತಿಂದ ಆ ಹುಡುಗಿ ತನ್ನ ಮೂರ್ನಾಲ್ಕು ಗೆಳತಿಯರನ್ನು ಕರೆದುಕೊಂಡು ಮತ್ತೆ ಬಂದು ಆ ಏಟು ನೀಡಿದ ಅಧಿಕಾರಿಗೆ ಮತ್ತೆ ಅವಾಚ್ಯ ಶಬ್ದಗಳಲ್ಲಿ ಬೈದು ಕೊರಳ ಪಟ್ಟಿಗೆ ಕೈ ಹಾಕಿ ಎಳೆದಾಡಿ ಹಲ್ಲೆ ಮಾಡಿದ ವಿಡಿಯೋ ಆ ಆಸ್ಪತ್ರೆಯ ಸಿ ಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅದನ್ನು ತೆಗೆದು ಪೊಲೀಸರು ಇಂಟರ್ನೆಟ್ಟಿಗೆ ಕೂಡ ಹಾಕಿದ್ದಾರೆ. ಆದರೆ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಅದನ್ನು ತೊರಿಸುವುದಿಲ್ಲ. ಈ  ಆಟ ತಿಳಿಯದ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಅಮಾಯಕತೆಯಿಂದ ಪೋಲೀಸರ ವಿರುದ್ಧ ಆಕ್ರೋಷದಿಂದ ಪ್ರತಿಕ್ರಯಿಸುತ್ತಾರೆ)

ಇದೆಲ್ಲ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿದ್ದರೂ ಕೂಡ ಇದರ ಬಗ್ಗೆ ಯಾರೂ ಹಗುರವಾಗಿ ಮಾತಾಡುವಂತೆ ಇಲ್ಲ. ಈ ಸಾಮಾಜಿಕ ತಾಣಗಳಲ್ಲಿನ ಕೆಲ ಸೊ-ಕಾಲ್ಡ್ ಪ್ರಜ್ಞಾವಂತರು ಅಂಥವರ ಮೇಲೆ ಯುದ್ಧವನ್ನೇ ಸಾರಿಬಿಡುತ್ತಾರೆ. ಟಿವಿಯವರ ಕೈಗೆ ಯಾರಾದರೂ ಇಂಥ ಘಟನೆಗಳ ಬಗ್ಗೆ ವಾಸ್ತವದ ನೆಲೆಯಲ್ಲಿ ಮಾತಾಡಿ ಸಿಕ್ಕಿಬಿದ್ದರೆ  ಅವರನ್ನೇ ರೇಪ್ ಮಾಡಿದ ಅಪರಾಧಿ ಎಂಬಂತೆ ಚಿತ್ರಿಸಿ ತೇಜೋವಧೆ ಮಾಡಿಹಾಕಿದ ಉದಾಹರಣೆಗಳು ಇರುವುದರಿಂದ ಯಾರೂ ಕ್ಯಾಮರಾಗಳ ಮುಂದೆ ಬಾಯಿ ಬಿಡುವುದಿಲ್ಲ.

ಇಂತಹ ಅತ್ಯಾಚಾರದ ಘಟನೆಗಳನ್ನು ಸ್ವಲ್ಪ ಕಾಮನ್ ಸೆನ್ಸ್ ಇಟ್ಟುಕೊಂಡು ಗಮನಿಸಿ ನೋಡುವುದಾದರೆ, ಈ ತರಹದ ಪಾಶವಿಕ ರೇಪ್ ಗಳನ್ನು ಮಾಡುವ ಜನ ಸಮಾಜದ ಕೆಳಮಟ್ಟದವರಾಗಿದ್ದಾರೆ. (ಉಳಿದವರು ಮಾಡುವ ಅನೇಕ ಪ್ರಕರಣಗಳು ಹೊರಬರುವುದಿಲ್ಲ ಅನ್ನೋದು ನಗ್ನ ಸತ್ಯ) ದೆಹಲಿಯ ನಿರ್ಭಯಾ  ರೇಪ್ ಪ್ರಕರಣವನ್ನೇ ನೋಡುವುದಾದರೆ ಅಪರಾಧಿಗಳೆಲ್ಲ ವಿದ್ಯೆ, ಸಂಸ್ಕಾರ, ಜವಾಬ್ದಾರಿ ಯಾವುದೂ ಇಲ್ಲದ, ಹಾಗೂ  ಕುಟುಂಬದಿಂದ ದೂರದಲ್ಲಿ ಬದುಕುತ್ತಿದ್ದ ನಿಮ್ನವರ್ಗಕ್ಕೆ ಸೆರಿದವರು.  ನಶೆ, ಸಂಸ್ಕಾರ ಹೀನತೆ, ಸಮಾಜದ  ಒಂದು ವರ್ಗದೆಡೆಗಿನ  ಅನಗತ್ಯ ಆಕ್ರೋಶ, ಲೈಂಗಿಕ ಸುಖದ ಆಸೆಗಿಂತ ಹೆಚ್ಚಾಗಿ ಪಾಶವಿಕವಾಗಿ ವರ್ತಿಸುವಂತೆ ಮಾಡುವ ಮಾನಸಿಕ ದೌರ್ಬಲ್ಯ - ಪುರುಷತ್ವದ ಬಗೆಗಿನ ತಪ್ಪು ಕಲ್ಪನೆಗಳು, ಅಸಹನೆ ಮುಂತಾದ ಅನೇಕ ಕಾರಣಗಳು ಅದರ ಹಿಂದೆ ಇರುತ್ತವೆ.
ಆದರೆ ಅಂಥವರಿಗೆ ಉಗ್ರವಾದ ಶಿಕ್ಷೆ ನೀಡಬೇಕು, ಕೆಲ ಮುಸ್ಲಿಂ ದೇಶಗಳಂತೆ ಶಿಶ್ನಛೆದನ ಶಿಕ್ಷೆ ನೀಡಬೇಕು, ಮರಣದಂಡನೆ ನೀಡಬೇಕು, ಕಾನೂನು ಬದಲಾಯಿಸಬೇಕು ಪೊಲೀಸರು ಬಿಗಿಯಾಗಬೇಕು, ರಾಜಕಾರಣ ಬದಲಾಗಬೇಕು ಎಂದೆಲ್ಲ ಬರೆಯುವ, ಮಾತಾಡುವ ಜನ ಸಮೂಹ ತಮ್ಮ ಉದ್ವೇಗದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಮುನ್ನ ಮರೆತುಬಿಡುವ ಅಂಶವೆಂದರೆ, ಉಗ್ರವಾದ ಶಿಕ್ಷೆಯಿಂದ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ. ಇನ್ನೊಂದು ಪಾರ್ಶ್ವದಿಂದ ನೋಡಿದಾಗ ''ಉಗ್ರವಾದ ಶಿಕ್ಷೆ'' ಬಯಸುತ್ತಿರುವ ಮನಸುಗಳು ಕೂಡ ವಿಕೃತ ಆನಂದಕ್ಕಾಗಿ ಹಾತೊರೆಯುತ್ತಿವೆ ಅನಿಸುತ್ತದೆ.ಮತ್ತು ಒಬ್ಬ ರೇಪಿಸ್ಟ್ ಗೆ ಆದ ಉಗ್ರ ಶಿಕ್ಷೆಯ ಬಗ್ಗೆ ಮಾಹಿತಿ ಇರುವ ಇನ್ನೊಬ್ಬ ರೇಪಿಸ್ಟ್  ಆ ಶಿಕ್ಷೆಯನ್ನು ತನ್ನಂಥವನ ಮೇಲೆ ನಡೆದ ಅನ್ಯಾಯ ಎಂದು ಭಾವಿಸಿ ತಾನು ಇನ್ನೂ ಪಾಶವಿಕ ಉದ್ವೆಗಕ್ಕೊಳಗಾಗುವ ಸಂಭವವೂ ಇದೆ. ಹಿಂಸೆಯಿಂದ ಹಿಂಸೆ ಹೆಚ್ಚುತ್ತದೆಯೇ ಹೊರತು ನಿಲ್ಲುವುದಿಲ್ಲ. ಅದು ಕಾನೂನಿನ ರೂಪದಲ್ಲಿ ಅಥವಾ ಇನ್ಯಾವುದೇ ರೂಪದಲ್ಲಿರಲಿ


 ಇನ್ನು ರೇಪ್ ಮಾಡುವವರು ಕಾನೂನಿಗೆ ಹೆದರುವುದಿಲ್ಲ.. (ಬಹುತೇಕ ಪ್ರಕರಣಗಳಲ್ಲಿ ಕಾನೂನು ಗೊತ್ತಿರುವುದಿಲ್ಲ.) ಮತ್ತು ಅಂತಹ ಪಾಶವಿಕ ಅತ್ಯಾಚಾರಕ್ಕೆ ಮುಂದಾದ ವ್ಯಕ್ತಿ ಇದಕ್ಕಾಗಿ ನನಗೆ ಶಿಕ್ಷೆ ಆಗಬಹುದು ಎಂಬ ಭಯವನ್ನು ಆ ಸಮಯದಲ್ಲಿ ಹೊಂರುವುದಿಲ್ಲ. (''ಕಾಮಾತುರಾಣಾಂ ನ ಭಯಂ ನ ಲಜ್ಜಾ''.) ಮತ್ತು ಸಾಕ್ಷ್ಯ ನಾಶ ಪಡಿಸುವ ಆತ್ಮ ವಿಶ್ವಾಸದಲ್ಲಿ ಅವನಿರುತ್ತಾನೆ. ಅಥವಾ ರೇಪ್ ಮಾಡುವ ಮೊದಲೇ ತಕ್ಕ ಸಿದ್ಧತೆ ಮಾಡಿಕೊಂಡು ಚಾಣಾಕ್ಷತನದಿಂದ ಯಾರ ಕೈಗೂ ಸಿಗದಂತೆ ಪಾರಾಗುತ್ತಾನೆ. ಇನ್ನೊಂದು ಸತ್ಯಾಂಶವೆಂದರೆ ಈಗಿರುವುದಕ್ಕಿಂತ ಹೆಚ್ಚು ಉಗ್ರವಾದ ಶಿಕ್ಷೆಯ ಕಾನೂನು ಬಂದದ್ದೇ ಆದರೆ ಅತ್ಯಾಚಾರದ ಬಳಿಕ ಇನ್ನೂ ಬರ್ಬರವಾದ  ಹತ್ಯೆಗಳು ನಡೆಯುವ ಸಂಭಾವ್ಯತೆ ಹೆಚ್ಚುತ್ತದೆ.
ಇನ್ನು ಪೊಲೀಸರು ಇಂತಹ ರೇಪ್ ಗಳನ್ನ ತಡೆಯಲು ಹೇಗೆ ಸಾಧ್ಯ?  ಯಾವ ಮನುಷ್ಯ ಎಲ್ಲಿ ವಿಕೃತವಾಗಿ ವರ್ತಿಸುತ್ತಾನೆ ಎಂದು ಹೇಗೆ ಪತ್ತೆ ಹಚ್ಚುವುದು? ಎಷ್ಟು ರಸ್ತೆಗಳಲ್ಲಿ ಮತ್ತು ಎಷ್ಟು ಕಡೆಗಳಲ್ಲಿ ರಕ್ಷಣೆ ಒದಗಿಸಲು ಸಾಧ್ಯ? ಅನೇಕ ರೇಪ್ ಗಳು ಮನೆಯಲ್ಲಿಯೇ ನಡೆಯುತ್ತವೆ. ಆದರೆ ಇಂತಹ ಘಟನೆ ನಡೆದಾಗ ಸಹಾಯಕ್ಕೆ ಮುಂದಾಗದ ಮತ್ತು ಪ್ರಕರಣ ದಾಖಲಿಸಿಕೊಳ್ಳದೇ ಪಾರಾಗಲು ಯತ್ನಿಸುವ ಪೊಲೀಸರದು ಅಕ್ಷಮ್ಮ್ಯ ಅಪರಾಧ. (ಅದಕ್ಕಾಗಿ  ಎಲೆಕ್ಟ್ರಾನಿಕ್ ದೂರು ನೀಡುವ ವ್ಯವಸ್ಥೆ ಮಾಡಬೇಕು. ಒಂದು ಸಹಾಯವಾಣಿಯನ್ನು ಮಾಡಿ ಅದಕ್ಕೆ ಕರೆ ಮಾಡಿ ದೂರು ನೀಡಿದ ಕೂಡಲೇ ಅದನ್ನೇ ''ಅಧಿಕೃತ ದೂರು'' ಎಂದು ಪರಿಗಣಿಸಿ  ಪೊಲೀಸರು ವಿಚಾರಣೆ ನಡೆಸಲೆಬೇಕಾದ ಅನಿವಾರ್ಯತೆ ಉಂಟು ಮಾಡಬೆಕು.ಆ ಫೋನ್ ಕರೆಯನ್ನು ದಾಖಲೆಯಾಗಿ ಬಳಸುವಂತಾಗಬೆಕು. )

ಇನ್ನು ಇದೆಲ್ಲವನ್ನು ಬದಿಗಿಟ್ಟು  ಅತ್ಯಾಚಾರಗಳು ಇಷ್ಟು ಯಾಕೆ ಹೆಚ್ಚಾಗಿವೆ ಎಂದು ನೋಡಿದರೆ, ಸಮಾಜದ ''ಏಕಮುಖೀ ಅಭಿವೃದ್ಧಿ'' ಮತ್ತು ''ತಂತ್ರಜ್ಞಾನದ ಮೂಲಕ ಮಾಹಿತಿಯ ಲಭ್ಯತೆ'' ಹೆಚ್ಚಾಗಿದ್ದು ಇದಕ್ಕೆಲ್ಲ ಕಾರಣ ಅಂತ ಅನಿಸದೆ ಇರುವುದಿಲ್ಲ.
ಭಾರತ ಜಾಗತೀಕರಣದ ಪರಿಣಾಮವಾಗಿ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವುದು ನಿಜವೇ ಆದರೂ, ಅದು ದೇಶದ ಕೆಲ ಭಾಗಗಳಲ್ಲಿ ಮಾತ್ರ.  ಕೆಲ ನಗರ ಪ್ರದೇಶಗಳು ಮತ್ತು ಅಲ್ಲಿ ವಾಸಿಸುವ ಕೆಲವೇ ಸಾಮಾಜಿಕ ವರ್ಗಗಳಿಗೆ ಮಾತ್ರವೇ ಒಮ್ಮೆಲೇ ಉತ್ತಮ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮುಂತಾದವುಗಳು ಹೇರಳವಾಗಿ ಹೆಚ್ಚಾಗಿ ಸಾಮಾಜಿಕ-ಆರ್ಥಿಕ ಅಸಮತೋಲನ ಅತಿಯಾಗಿದೆ. ಕೆಲ ವರ್ಗಗಳು ದಿಢೀರ್ ಶ್ರೀಮಂತವಾಗಿವೆ. ಗುರ್ಗಾವ್, ನವದೆಹಲಿ ಲಖನವ್, ಬೆಂಗಳೂರು ಮುಂತಾದ ನಗರಗಳಅಭಿವೃದ್ಧಿಯ ವೇಗ ಬರಾಕ್ ಒಬಾಮಾನಿಗೂ ಕೂಡ ಕಣ್ಣು ಕುಕ್ಕಿಸುವಂತಿವೆ. ಆದರೆ ಅವುಗಳಲ್ಲಿ ವಾಸಿಸುವ ಅನೇಕ ವರ್ಗಗಳ ಜೀವನ ಹಿಂದಿಗಿಂತಲೂ ಬರ್ಬರವಾಗಿ ಹೊಗಿದೆ.  ''ಅಭಿವೃದ್ಧಿ''  ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಎಂಬ ಪಶ್ಚಿಮದ ಚಿಂತನೆ ಭಾರತದ ಮಧ್ಯಮ ವರ್ಗದಲ್ಲಿ ಹೆಚ್ಚಾಯಿತು. ಏಕೆಂದರೆ ಇಂಟರ್ನೆಟ್ಟಿನ ಪ್ರಭಾವದಿಂದಾಗಿ ಪಶ್ಚಿಮದ ಮಾಹಿತಿ ತುಂಬಾ ಸುಲಭವಾಗಿ  ಸಿಗುತ್ತಿದೆ. ''ದೂರದ ಬೆಟ್ಟ ಕಣ್ಣಿಗೆ ನುಣ್ಣ'' ಅನ್ನೋ ಹಾಗೆ  ಆರ್ಥಿಕವಾಗಿ ಸಬಲವಾದ ದೇಶಗಳು ಸುಖವಾದ ದೇಶಗಳು ಎಂಬ ಭ್ರಮೆಗೆ ಬಿದ್ದ ''ಭಾರತದ ಮಧ್ಯಮ ವರ್ಗ '' ಎಲ್ಲ ರೀತಿಯಿಂದಲೂ ಅವರ ಅನುಕರಣೆಗಿಳಿದುಬಿಟ್ಟಿತು. ಅದರ ಪರಿಣಾಮವಾಗಿ ಆರ್ಥಿಕ ಅಭಿವೃದ್ಧಿಯೇ ಜೀವನದ ಅತಿ ಮುಖ್ಯ ಅಂಶವಾಯಿತು. ವರದಕ್ಷಿಣೆ ದಾಹ, ಹೆಣ್ಣು ಭ್ರೂಣ ಹತ್ಯೆ, ಮುಂತಾದ ಅನಿಷ್ಟಗಳು ಈ ಮಧ್ಯಮ ವರ್ಗದ ''ಆರ್ಥಿಕ ಉನ್ನತಿಯ ದಾಹ''ದ  ಕೊಡುಗೆಗಳೇ  ಆಗಿವೆ.  ದೇಶದ ಸಾರ್ವಾಧಿಕಾರಿಯಾದ ಚಕ್ರವರ್ತಿ ರಾಜರುಗಳು ಮೈ ಮೇಲೆ ಕೇವಲ ಲಂಗೋಟಿ ಧರಿಸಿ ಕಾಡಿನಲ್ಲಿ ಜೀವನ ನಡೆಸುತ್ತಿದ್ದ ವ್ಯಕ್ತಿಗಳ ಕಾಲಿಗೆ ಬಿದ್ದು ಅವರಿಂದ ಜೀವನದ ಪಾಠಗಳನ್ನು ಕಲಿಯುತ್ತಿದ್ದ ಈ ಭಾರತ ದೇಶದಲ್ಲಿ ಈಗ ಅತ್ಯಂತ ಶ್ರೀಮಂತರಾದ ಬಿಲ್ ಗೇಟ್ಸ್, ವಾರನ್ ಬಫೆಟ್ ಮುಂತಾದವರನ್ನೇ ಆದರ್ಶಪ್ರಾಯ ವ್ಯಕ್ತಿಗಳಾಗಿ ಪರಿಗಣಿಸಿ  (ಅವರುಗಳು ಕೂಡ ನಿಜವಾದ ಸುಖಕ್ಕಾಗಿ ಸರಳ ಜೀವನ, ತ್ಯಾಗ ಮತ್ತು ಆಧ್ಯಾತ್ಮಗಳ ದಾರಿಯಲ್ಲೇ ಹೊರಟಿದ್ದಾರೆ  ಎಂಬುದನ್ನು ಕಡೆಗಣಿಸಿ) ಕೇವಲ ಅವರ ಆರ್ಥಿಕ ಸಂಪತ್ತನ್ನು ನೋಡಿ ನಾವು ಮರುಳಾಗಿದ್ದೆವೆ.

ನಂಬರ್ 1  ಆಗುವುದು ಹೇಗೆ, ಯು ಕ್ಯಾನ್ ವಿನ್, ಐ ಲವ್ ಮನಿ  ನಂತಹ ವಿದೇಶಿ ಆಮದು ಚಿಂತನೆಗಳನ್ನು ಬೋಧಿಸುವ ಮ್ಯಾನೇಜಮೆಂಟ್  ಮತ್ತು ಆರ್ಥಿಕ ಪುಸ್ತಕಗಳನ್ನು ಮುಗಿಬಿದ್ದು ಓದುತ್ತೆವೆ. ಕೇವಲ ನಾನು ಶ್ರೀಮಂತನಾಗಬೇಕು, ನಾನು ಯಶಸ್ವಿಯಾಗಬೇಕು, ನಾನು ಚೆನ್ನಾಗಿರಬೇಕು ಅಥವಾ ನಮ್ಮವರು ಸುಖವಾಗಿ ಇದ್ದರೆ ಸಾಕು ಎಂಬ ಮನೋಭಾವ ಹೆಚ್ಚುತ್ತಿದೆ. ಶಿಕ್ಷಣದಲ್ಲಿನ ಅತಿಯಾದ ಸ್ಪರ್ಧೆ ಕೇವಲ ದೊಡ್ಡ ಸಂಬಳದ ಕೆಲಸ ಹಿಡಿಯಲು ಉಂಟಾಗಿದೆ. ಮತ್ತು ದೊಡ್ಡ ಸಂಬಳ ನೀಡುವ ಕೆಲಸವನ್ನು ಮಾತ್ರ ಉಚ್ಚ-ಶಿಕ್ಷಣ ಎಂದು ಕರೆಯುತ್ತಿದ್ದೆವೆ. ಅದು ಕೆಲವರಿಗೆ ಮಾತ್ರ  ಎಟಕುತ್ತಿದೆ. ಅದು ಏಟುಕದಿರುವ ವರ್ಗದ ಜನರುಗಳು ತಾವು ಅನ್ಯಾಯಕ್ಕೊಳಗಾಗಿದ್ದೇವೆ ಎಂಬ ಅಸಹನೆಯಲ್ಲಿದ್ದಾರೆ. ಈ ಅಸಹನೆ ಕೋಪದ ರೂಪದಲ್ಲಿ ಪ್ರಕಟವಾಗುತ್ತದೆ. ಮೊದಲು ಭಾರತ ಶ್ರೀಮಂತ ರಾಷ್ಟ್ರವಾಗಿರಲಿಲ್ಲ. ಭಾರತ ಸುಖಜೀವನ ನಡೆಸುವ ಸಂತೃಪ್ತ ಮನೋಭಾವದ ಜನರ ದೆಶವಾಗಿತ್ತು. ಈ ತಂತ್ರಜ್ಞಾನ ''ಆರ್ಥಿಕ ಅಭಿವೃದ್ಧಿ'' ಎಂಬ ಸ್ಟ್ರಾಂಗ್ ಮೆಡಿಸಿನ್ ನೀಡಿದೆ.  ಈಗ ಆ ದೇಶದ ಚಿಂತನೆ ಬದಲಾಗುತ್ತಿದೆ. ಜೀವನದ ಗುರಿಗಳು, ಸುಖದ ಪರಿಕಲ್ಪನೆಗಳು ಬದಲಾಗಿವೆ. ಅದರ ಜೊತೆಯೇ  ಆ ಸ್ಟ್ರಾಂಗ್ ಮೆಡಿಸಿನ್ ನಿಂದ ಉಂಟಾಗುವ ''ಸೈಡ್ ಎಫೆಕ್ಟ್'' ಗಳು ಒಂದೊಂದಾಗಿ ಕಂಡು ಬರುತ್ತಿವೆ.. ಕಳೆದ ಎರಡು ದಶಕಗಳಿಂದ ಈ ಆರ್ಥಿಕತೆಯ ಹಿಂದೆ ಬಿದ್ದು ಭಾರತದ ಮಧ್ಯಮ ವರ್ಗ ಮಾಡಿದ ತಪ್ಪುಗಳಿಗೆ ಇಂದಿನ ಮಕ್ಕಳು ಮತ್ತು ಯುವಕ ಯುವತಿಯರು ದಂಡ ಕಟ್ಟುತ್ತಿದ್ದಾರೆ. ಅದು ಇನ್ನು ಮುಂದಿನ ಜೆನರೆಶನ್ ಗಳಲ್ಲಿ ಹೆಚ್ಚಾಗಲಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಸಮತೋಲನ, ಮತ್ತು ಲಿಂಗಾನುಪಾತದಲ್ಲಿನ ವ್ಯತ್ಯಾಸಗಳು ಮಾನಸಿಕ ವಿಕೃತಿ, ಕಳ್ಳತನ, ಮೋಸ, ದೌರ್ಜನ್ಯ ಮುಂತಾದವುಗಳ ಹೆಚ್ಚುವಿಕೆಗೆ ಕಾರಣವಾಗುತ್ತಿವೆ.  ಮುಖ್ಯಮಂತ್ರಿ ಮತ್ತು ಪೋಲೀಸ್ ಅಧಿಕಾರಿಗಳು ರಾಜೀನಾಮೆ ಕೊಟ್ಟುಬಿಟ್ಟರೆ ಇವೆಲ್ಲ ಒಮ್ಮೆಗೆ ಸರಿಹೊಗುವುದಿಲ್ಲ. ರೇಪ್ ಮಾಡಿದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಕೂಡಲೇ ರೇಪ್ ಗಳು ನಿಲ್ಲುವುದಿಲ್ಲ.

ಇನ್ನು ಮತ್ತೆ ಆ ದೆಹಲಿಯ ಬಾಲಕಿಯ ರೇಪ್ ವಿಷಯಕ್ಕೆ ಬರುವುದಾದರೆ ಭಾರತ ದೇಶಕ್ಕೆ ರೇಪ್ ಪ್ರಕರಣಗಳು, ಶಿಶುಕಾಮ, ಲೈಂಗಿಕ ವಿಕೃತಿ ಇದ್ಯಾವುದೂ ಹೊಸತಲ್ಲ. ಆದರೆ ಅವುಗಳು ನಿಮಿಷಾರ್ಧಗಳಲ್ಲಿ  ಟಿವಿಗಳ ಮೂಲಕ ಇಂಟರ್ನೆಟ್ ಮೂಲಕ ರಸವತ್ತಾಗಿ(ಭೀಭತ್ಸ ರಸವೆ ಹೆಚ್ಚು).ವರದಿಯಾಗುವುದರಿಂದ ಅವುಗಳ ಬಗೆಗಿನ ಭಯ ಹೆಚ್ಚಾಗುತ್ತಿದೆ. ಮತ್ತು  ಅಂತ ಘಟನೆಗಳ ವಿರೋಧಿಸುವ ಪ್ರತಿಭಟನೆ ಕೂಡ ಅಷ್ಟೇ ವೇಗವಾಗಿ ನಮಗೆ ತಿಳಿಯುತ್ತಿದೆ.  ಮೊದಲಾದರೆ ಇಂತಹ ಘಟನೆ  ಎರಡು ಮೂರು ದಿನಗಳ ನಂತರ ರೋಚಕತೆಯನ್ನು ಕಳೆದುಕೊಂಡು ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟ ವಾಗುತ್ತಿತು. ಈಗ ಮಾಹಿತಿಯ ಲಭ್ಯತೆಯ ವೇಗ  ಮತ್ತು ವರದಿ ಮಾಡುವ ರೀತಿ ನಮ್ಮಲ್ಲಿ ಭಯವನ್ನು ಹೆಚ್ಚಿಸುತ್ತಿವೆ. ಅಷ್ಟೇ ...