Saturday, August 3, 2013

ಪುರುಷಸೂಕ್ತದ ಅರ್ಥ


ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃಸಹಸ್ರಪಾತ್ 
  ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ ।।1।।

ಆದಿ ಪುರುಷನು ಅಸಂಖ್ಯಕವಾದ ಶಿರಸ್ಸುಗಳಿಂದ ಕೂಡಿದವನು. ಅಸಂಖ್ಯಕವಾದ ಕಣ್ಣುಗಳುಳ್ಳವನು. ಅಸಖ್ಯಕವಾದ ಪಾದಗಳುಳ್ಳವನು.   ಪುರುಷನು ಬ್ರಮ್ಹಾಂಡಗೋಳರೂಪವಾದಸಮಸ್ತ ವಿಶ್ವವನ್ನು ಸುತ್ತಲೂ ಸುತ್ತುವರಿದು ಅದಕ್ಕಿಂತಲೂ ಹತ್ತು ಅಂಗುಲದಷ್ಟು ಅತಿಕ್ರಮಿಸಿಯೂ ಸ್ಥಾಪಿತನಾಗಿದ್ದಾನೆ.

ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಂ
ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ।।2।।

ನಮಗೆ ಗೋಚರವಾಗುವ ಸಕಲ ಜಗತ್ತೂ  ಆದಿಪುರುಷನೇ(ಅವನ ಭಾಗವೇ). ಯಾವುದು ಹಿಂದೆ ಇತ್ತೋ,ಯಾವುದು ಮುಂದೆ ಸಂಭವಿಸುವುದೋ (ಅದೆಲ್ಲವೂ ಅವನೇ ಆಗಿರುತ್ತಾನೆ) ತ್ತು ಅಮೃತತ್ವಕ್ಕೆ ಅವನೇ ಪ್ರಭುವು. ಯಾವನಿಮಿತ್ತವಾಗಿ ಅನ್ನದಿಂದ ಅವನು ಬೆಳೆಯುವನೋ (ದುದರಿಂದ ಅವನು ಈಗ ಕಾಣಿಸಿಕೊಳ್ಳುವುದಕ್ಕಿಂತಲೂ ಆಧಿಕ ಮಹತ್ತು ಉಳ್ಳವನು)

  ಏತಾವಾನಸ್ಯ ಮಹಿಮಾತೋ ಜ್ಯಾಯಾಂಶ್ಚ ಪೂರುಷಃ
   ಪಾದೋಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ।।3।।

ಭೂತವರ್ತಮಾನ ಮತ್ತು ಭವಿಷ್ಯದ್ರೂಪವಾದ ಸಕಲ ಜಗತ್ತೂ ಇವನ ಸಾಮರ್ಥ್ಯವಿಶೇಷವೇ ಆಗಿದೆ. ಅಲ್ಲದೇ ಆದಿ ಪುರುಷನು  ಸಕಲ ಜಗತ್ತಿಗಿಂತಲೂ ಅಧಿಕನು. ಭೂಮಿ, ಆಕಾಶ ಮೊದಲಾದ ಸಕಲ ಭೂತಗಳೂ ಪುರುಷನ ಪಾದಃ- ಕಾಲು ಭಾಗ ಮಾತ್ರ.  ಮಹಾಪುರುಷನ (ಉಳಿದ)ಮುಕ್ಕಾಲು ಪಾಲು ಗೋಚರಾತೀತವಾದ (ಸ್ವಪ್ರಕಾಶರೂಪದಲ್ಲಿ)ದ್ಯುಲೋಕದಲ್ಲಿದೆ. (ಅದು) ವಿಕೃತಿಯನ್ನು ಹೊಂದದೇ ಇರುತ್ತದೆ. ( ಯಾವ ಬದಲಾವಣೆ  ಹೊಂದದೇ  ಸಹಜ ಸ್ಥಿತಿಯಲ್ಲಿರುತ್ತದೆ.)

  ತ್ರಿಪಾದೂರ್ಧ್ವ ಉದೈತ್ ಪುರುಷಃ ಪಾದೋಸ್ಯೇಹಾಭವತ್ ಪುನಃ
   ತತೊ ವಿಷ್ವಙ್ ವ್ಯಕ್ರಾಮತ್ ಸಾಶನಾಶನೆ ಅಭಿ ।।4।।

ಇಂದ್ರಿಯಕ್ಕೆ ಗೋಚರವಲ್ಲದ ತನ್ನ ಮುಕ್ಕಾಲು ಭಾಗವನ್ನು ಸ್ವಪ್ರಕಾಶಲೋಕದಲ್ಲಿ ಸ್ಥಾಪಿಸಿರುವ ಪುರುಷನು ಉತ್ಕೃಷ್ಟವಾದ ದಿವ್ಯ ಲೋಕದಲ್ಲಿ ಸಂಸಾರಾತೀತನಾಗಿ ಸ್ಥಾಪಿತನಾಗಿದ್ದಾನೆ.  ಆದಿ ಪುರುಷನ ಉಳಿದ ನಾಲ್ಕನೆಯ ಒಂದು ಭಾಗವು ಸಂಸಾರ ರೂಪದಲ್ಲಿ ನಾನಾ ರೂಪಗಳಲ್ಲಿ  ಜಗತ್ತನ್ನುವ್ಯಾಪಿಸಿದನು


  ತಸ್ಮಾತ್ ವಿರಾಳಜಾಯತ ವಿರಾಜೋ ಅಧಿ ಪೂರುಷಃ
   ಜಾತೋ ಅತ್ಯರಿಚ್ಯತ ಪಶ್ಚಾತ್ ಭೂಮಿಮಥೋ ಪುರಃ।।5।।

ಆದಿಪುರುಷನಿಂದ ಅನೇಕ ಪ್ರಕಾರಗಳಲ್ಲಿ ಮೆರೆಯುವ ಬ್ರಮ್ಹಾಂಡವು ಉತ್ಪನ್ನವಾಯಿತು ವಿರಾಟ್ ದೇಹವನ್ನೇ ಆಶ್ರಯಿಸಿ  ದೇಹಾಭಿಮಾನಿಯಾದ ಪುರುಷನು ಕಾಣಿಸಿಕೊಂಡನು. ಚೇತನಾರೂಪದಲ್ಲಿ ಕಾಣಿಸಿಕೊಂಡ ಪುರುಷನು ತನಗಿಂತಲೂ ಬೇರೆಯಾದ (ದೇವತಾತಿರ್ಯಕ್, ಮನುಷ್ಯಪಶು ಮುಂತಾದ)ರೂಪಗಳನ್ನು ಧರಿಸಿದನು. ಅನಂತರ  ಭೂಮಿಯನ್ನೂ, ಅನಂತರ ಪಾಂಚ ಭೌತಿಕಶರೀರಾದಿಗಳನ್ನೂ ನಿರ್ಮಿಸಿದನು.

  ಯತ್ ಪುರುಷೇಣ ಹವಿಷಾ  ದೇವಾ ಯಜ್ಞಮತನ್ವತ
  ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ।।6।।

 ಪಾಂಚಭೌತಿಕ ಶರೀರಾದಿಗಳು ಉತ್ಪನ್ನವಾದ ನಂತರ ಪುರುಷನ ಅಂಶಗಳಾದ ದೇವತೆಗಳು ಪುರುಷಸಂಜ್ಞಕವಾದ ಹವಿಸ್ಸಿನಿಂದಯಜ್ಞವನ್ನು ನೆರವೇರಿಸಿದರು. ಈ ಯಜ್ಞಕ್ಕೆ ವಸಂತ ಋತುವು ಆಜ್ಯವಾಗಿತ್ತುಗ್ರೀಷ್ಮವು ಇಧ್ಮವಾಗಿತ್ತು ಹಾಗೂ ಶರತ್ತು ಹವಿಸ್ಸಾಗಿತ್ತು.

  ತಂ ಯಜ್ಞಃ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ
  ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೆ ।।7।।

ಸೃಷ್ಟಿಗಿಂತಲೂ ಮೊದಲು ಉತ್ಪನ್ನನೂ ಯಜ್ಞಕ್ಕೆ ಸಾಧನಭೂತನೂ ಆದ  ವಿರಾಟ್ಪುರುಷನನ್ನು ಬರ್ಹಿಸ್ಸಿನ ಮೇಲೆ ಸ್ಥಾಪಿಸಿ ಪ್ರೋಕ್ಷಣೆ ಮಾಡಿದರು.  ಪುರುಷಸ್ವರೂಪವಾದ ಪಶುವಿನಿಂದ ದೇವತೆಗಳೂ ಸಾಧ್ಯರೂ ಋಷಿಗಳೂ ಅನ್ಯರೂ ಸೇರಿ ಯಜ್ಞವನ್ನುಮಾಡಿದರು.

  ತಸ್ಮಾದ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷದಾಜ್ಯಂ
  ಪಶೂನ್ತಾಂಶ್ಚಕ್ರೆ ವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚ ಯೆ ।।8।।


ಜಗದ್ರೂಪಿಯಾದ ವಿರಾಟ್ಪುರುಷನೇ ಆಹುತಿಯಾಗಿ ಉಳ್ಳ  ಯಜ್ಞದಿಂದ ದಧಿಮಿಶ್ರಿತವಾದ ಆಜ್ಯವು ಸಂಪಾದಿತವಾಯಿತು.ವಾಯು ದೇವತಾಕವಾದ ಯಾವ ಪಕ್ಷ್ಯಾದಿಗಳಿವೆಯೋ ಅವುಗಳನ್ನು ನಿರ್ಮಿಸಿದನು ಅರಣ್ಯವಾಸಿಗಳಾದ ಮೃಗಗಳನ್ನೂ ಗೋವು ಮೊದಲಾದ ಗ್ರಾಮವಾಸಿಗಳಾ ಪಶುಗಳನ್ನು ಉತ್ಪನ್ನ ಮಾಡಿದನು.
   

         ತಸ್ಮಾದ್ ಯಜ್ಞಾತ್ ಸರ್ವಹುತ ಋಚಃ ಸಾಮಾನಿ ಜಜ್ಞಿರೆ
         ಛಂದಾಂಸಿ ಜಜ್ಞಿರೆ ತಸ್ಮಾದ್ ಯಜುಸ್ತಸ್ಮಾದಜಾಯತ ।।9।।


ಸರ್ವಾತ್ಮಕವಾದ ವಿರಾಟ್ ಪುರುಷನೇ ಆಹಿತಿಯಾಗಿ ಉಳ್ಳ  ಯಜ್ಞದಿಂದಕ್ಕುಗಳು, ಸಾಮ ಮಂತ್ರಗಳೂಉತ್ಪನ್ನವಾದವು. ಅದರಿಂದಲೇ ಛಂದಸ್ಸುಗಳೂ ಉತ್ಪನ್ನವಾದವು  ಯಜ್ಞದಿಂದಲೇ ಯಜಯಸ್ಸೂ ಉತ್ಪನ್ನವಾಯಿತು

ತಸ್ಮಾದಶ್ವಾ ಅಜಾಯಂತ ಯೇ ಕೆ ಚೋಭದಯಾದತಃ
ಗಾವೋ ಹ ಜಜ್ಞಿರೆ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ ।। 10।।

ಆ ವಿಶ್ವಯಜ್ಞದಿಂದ ಅಶ್ವಗಳು ಉತ್ಪನ್ನವಾದವು ಮತ್ತು ಎರಡು ಸಾಲು ಹಲ್ಲುಗಳುಳ್ಳ ಯಾವ ಪ್ರಾಣಿಗಳಿವೆಯೋ, ಅವೂ ಉತ್ಪನ್ನವಾದವು. ಆಯಜ್ಞದಿಂದಲೇ ಗೋವುಗಳೂ ಹುಟ್ಟಿದವು. ಅದರಿಂದಲೇ ಆಡು ಕುರಿ ಮುಂತಾದವುಗಳು ಉತ್ಪನ್ನವಾದವು.


    ಯತ್ ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್
    ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾಧಾ ಉಚ್ಯೇತೆ ।। 11।।

ಯಾವಾಗ ಪುರುಷನನ್ನು ಯಜ್ಙಾಹುತಿಯನ್ನಾಗಿ ಸಂಕಲ್ಪಿಸಿದರೋ ಆಗ ಎಷ್ಟು ಪ್ರಕಾರವಾಗಿ ಅವನನ್ನು ವಿಭಾಗಿಸಿದರು?  ಪುರುಷನ ಮುಖವು ಯಾವುದು. ಇವನ ಬಾಹುಗಳು ಯಾವವು?  ತೊಡೆಗಳು ಪಾದಗಳು ಯಾವವು ಎಂದು ಹೇಳಲ್ಪಟ್ಟಿವೆ?

    ಬ್ರಾಮ್ಹಣೋಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ
     ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ।।12।।

ಬ್ರಾಮ್ಹಣನೇ  ಪುರುಷನ ಮುಖವಾಗಿಇದ್ದನು. ಬಾಹುಗಳು ಕ್ಷತ್ರಿಯ ರೂಪವಾಗಿ ಮಾಡಲ್ಪಟ್ಟವು. ಆಗ  ಪುರುಷನ ತೊಡೆಗಳುವೈಶ್ಯರೂಪದಲ್ಲಿ ಪರಿಣಮಿಸಿದವು ಪಾದಗಳಿಂದ ಶೂದ್ರನು ಉತ್ಪನ್ನನಾದನು.

         ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ
          ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾತ್ ವಾಯುರಜಾಯತ ।।13।।

ಮನಸ್ಸಿನಿಂದ ಚಂದ್ರನು ಹುಟ್ಟಿದನು, ಕಣ್ಣಿನಿಂದ ಸೂರ್ಯನು ಹುಟ್ಟಿದನು. ಮುಖದಿಂದ ಇಂದ್ರ ಮತ್ತು ಅಗ್ನಿಗಳು ಹುಟ್ಟಿದರು ಪ್ರಾಣದಿಂದ ವಾಯುವು ಹುಟ್ಟಿದನು.


  ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ
 ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ ತಥಾ ಲೋಕಾಙ್ ಅಕಲ್ಪಯನ್ ।।14।।

ಪುರುಷನ ಹೊಕ್ಕಳಿನಲ್ಲಿ ಅಂತರಿಕ್ಷವು ಇತ್ತು, ಶಿರಸ್ಸಿನಿಂದ ದ್ಯುಲೋಕವು ಪ್ರಾದುರ್ಭೂತವಾಯಿತು ಪಾದಗಳಿಂದ ಭೂಮಿಯೂ ಕಿವಿಗಳಿಂದ ದಿಕ್ಕುಗಳೂ ಉತ್ಪನ್ನವಾದವು. ಹಾಗೆಯೇ ಲೋಕಗಳನ್ನು (ದೇವತೆಗಳು ಪುರುಷನ ದೇಹದಿಂದನಿರ್ಮಿಸಿದರು

 ಸಪ್ತಾಸ್ಯಾಸನ್ ಪರಿಧಯಃ ತ್ರಿಃ ಸಪ್ತ ಸಮಿಧಃ ಕೃತಾಃ
 ದೇವಾ ಯತ್ ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಂ  ।15।।

 ಯಜ್ಞಕ್ಕೆ ಏಳುಛಂದಸ್ಸುಗಳು) ಪರಿಧಿಗಳಾಗಿ ಇದ್ದವು, ಇಪ್ಪತ್ತೊಂದು ತತ್ವಗಳು ಸಮಿತ್ತುಗಳಾಗಿ ಮಾಡಲ್ಪಟ್ಟಿದ್ದವು.  ದೇವತೆಗಳು ಯಾವ ಪುರುಷನನ್ನು ಯಜ್ಞಸಾಧನವನ್ನಾಗಿ ಮಾಡಲಪೇಕ್ಷಿಸಿದರೋ  ಪುರುಷನ್ನೇ ಪಶುಸ್ಥಾನದಲ್ಲಿ ಬಂಧಿಸಿದರು.

ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರರ್ಮಾಣಿ ಪ್ರಥಮಾನ್ಯಾಸನ್ 
ತೆ  ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ।16।।


ದೇವತೆಗಳು ಮಾನಸಿಕವಾದ ಸಂಕಲ್ಪರೂಪದ ಯಜ್ಞದಿಂದ ಯಜ್ಞರೂಪನಾದ ಪ್ರಜಾಪತಿಯನ್ನು ಯಜಿಸಿದರು.  ಯಜ್ಞಪ್ರಕಾರಗಳೇ ಆದಿಧರ್ಮಗಳಾಗಿ ಇದ್ದವು(ಪ್ರಸಿದ್ಧವಾದವು). ಯಾವ ಸ್ವರ್ಗದಲ್ಲಿ ಪುರಾತನರಾದ ದೇವತೆಗಳೂ, ಸಾಧ್ಯರೂ ಇರುವರೋ,  ಸ್ವರ್ಗವನ್ನು ವಿರಾಟ್ಪುರುಷನ ಪಾಸನೆ ಮಾಡುವ ಮಹಾತ್ಮರು ಪಡೆಯುತ್ತಾರೆ.