Wednesday, July 23, 2014

ಮೀಮಾಂಸಾ ಶಾಸ್ತ್ರದ ಪರಿಚಯ

ಶಾಸ್ತ್ರ ಎಂದರೆ 
ಯಾವುದೇ ಒಂದು ವಿಷಯದ ಬಗ್ಗೆ ಬೀಜರೂಪದ ಮಾಹಿತಿಯನ್ನು  ನೀಡಿ.. ಅದಕ್ಕೆ ವಿರೋಧಗಳು/ಪ್ರತಿವಾದಗಳು ಅಥವಾ ಸಂದೇಹಗಳು ಎದುರಾದಲ್ಲಿ ಆ ಎಲ್ಲ ರೀತಿಯ ವಿರೋಧಗಳಿಗೂ, ಸಂದೇಹಗಳಿಗೂ ತರ್ಕಬದ್ಧವಾದ ಆಧಾರ ಸಹಿತ ಸಮಾಧಾನವನ್ನು ನೀಡಿ ತಾನು ಮೊದಲು ಮಂಡಿಸಿದ ಬೀಜರೂಪ ವಿಷಯನ್ನು ಸಂಪೂರ್ಣವಾಗಿ ಸಾಬೀತು ಮಾಡಿ ಸಿದ್ಧಾಂತವನ್ನು ಮಂಡಿಸುವ (ವಾದ-ಪ್ರತಿವಾದಗಳನ್ನೊಳಗೊಂಡ)   ಸಂಪೂರ್ಣ ಪ್ರಕ್ರಿಯೆಗೆ ''ಶಾಸ್ತ್ರ'' ಎಂದು ಹೆಸರು. ಅದು ಹಾಗಿದ್ದಾಗ ಮಾತ್ರ ಅದಕ್ಕೆ ''ಶಾಸ್ತ್ರತ್ವ'' ಬರುತ್ತದೆ.  ಶಾಸ್ತ್ರವು ಪ್ರತ್ಯಕ್ಷ ಪ್ರಮಾಣ, ಅನುಮಾನ ಪ್ರಮಾಣ, ಉಪಮಾನ ಪ್ರಮಾಣ, ಅರ್ಥಾಪತ್ತಿ ಪ್ರಮಾಣ, ಅನುಪಲಬ್ಧಿ ಪ್ರಮಾಣ ಹಾಗೂ ಶಬ್ದ ಪ್ರಮಾಣ ಎಂಬ ಆರು ಪ್ರಮಾಣಗಳ ಆಧಾರದ ಮೇಲೆ ಶಾಸ್ತ್ರಪ್ರಕ್ರಿಯೆ ನಡೆಯುತ್ತದೆ.  ಇಂತಹ ಒಟ್ಟು ಆರು ಶಾಸ್ತ್ರಗಳು ಇವೆ. ಸಾಂಖ್ಯ ಶಾಸ್ತ್ರ, ಯೋಗ ಶಾಸ್ತ್ರ, ನ್ಯಾಯ ಶಾಸ್ತ್ರ, ವೈಶೆಷಿಕ ಶಾಸ್ತ್ರ,  ಮೀಮಾಂಸಾ ಶಾಸ್ತ್ರ ಹಾಗೂ ವೇದಾಂತ ಶಾಸ್ತ್ರ ಎಂಬುವವೇ ಆ ಆರು ಶಾಸ್ತ್ರಗಳು. ಈ ಆರು ಶಾಸ್ತ್ರಗಳಿಗೆ ''ದರ್ಶನಗಳು'' ಎಂಬ ಹೆಸರು ಕೂಡ ಪ್ರಸಿದ್ಧ. 

ಮೀಮಾಂಸೆಯ ವಿಶೇಷತೆ 
 ಈ ಆರು ಶಾಸ್ತ್ರಗಳು ಮೊದಲು ಪ್ರತ್ಯೇಕವಾಗಿದ್ದರೂ ಕಾಲಕ್ರಮೇಣ ಅವುಗಳ ಬೆಳವಣಿಗೆ ಆದಂತೆ ಸಾಂಖ್ಯ ಮತ್ತು ಯೋಗ ಗಳು ಸಮಾನ ತಂತ್ರಗಳಾದವು. ಅದೇ ರೀತಿ ನ್ಯಾಯ ಮತ್ತು ವೇಶೇಷಿಕಗಳೆರಡೂ ಸೇರಿಹೋದವು. (ಅಂದರೆ ಒಂದರಂತೆ ಇನ್ನೊಂದು ಇವೆ, ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.) ಆದರೆ ಮೀಮಾಂಸಾ ಮತ್ತು ವೆದಾಂತಗಳು ಈ ರೀತಿಯಾಗಿಲ್ಲ. ಮೀಮಾಂಸಾ ಶಾಸ್ತ್ರವು ಇತರ ಶಾಸ್ತ್ರಗಳಿಗಿಂತ ಮೂರು ವಿಚಾರಗಳಲ್ಲಿ ತೀರ ಭಿನ್ನವಾಗಿದೆ. ಇತರ ಶಾಸ್ತ್ರಗಳು ವೇದವು ಅಪೌರುಷೇಯ ಎಂದು ಒಪ್ಪಿದರೂ ವೇದವು ಈಶ್ವರಕೃತ.  ಆದ್ದರಿಂದಲೇ ಅದು ಪ್ರಮಾಣ ಎನ್ನುತ್ತವೆ. ಆದರೆ ಪೂರ್ವಮೀಮಾಂಸಾ ಶಾಸ್ತ್ರವು ಭಗವಂತ ಇರಲಿ-ಇಲ್ಲದಿರಲಿ, ವೇದವು ಸ್ವತಃ ಪ್ರಮಾಣವು ಎನ್ನುತ್ತದೆ. ಈ ದೃಷ್ಟಿಯಲ್ಲಿ ಮೀಮಾಂಸೆಯು ಉಳಿದ ಶಾಸ್ತ್ರಗಳಿಗಿಂತ ವೈದಿಕತರವು ಎನ್ನಬಹುದು.  ಅದೇ ರೀತಿ ಮಿಕ್ಕ ಶಾಸ್ತ್ರಗಳು ಜೀವ, ಮೋಕ್ಷ, ಪ್ರಪಂಚ ಇತ್ಯಾದಿಗಳನ್ನು ಹೆಚ್ಚಾಗಿ ವಿಮರ್ಶಿಸುತ್ತವೆ. ಆದರೆ ಮೀಮಾಂಸೆಯು ಈ ವಿಷಯಗಳಲ್ಲಿ ಹೆಚ್ಚು ಗಮನ ಕೊಡದೇ ''ಧರ್ಮ'' ಎಂಬ ಒಂದೇ ವಿಷಯವನ್ನು ಪ್ರಧಾನವಾಗಿ ವಿಚಾರಿಸುತ್ತದೆ. ಮೂರನೇಯದಾಗಿ ನಿತ್ಯ ಜೀವನಕ್ಕೆ ಬೇಕಾದ ಎಷ್ಟೋ ವ್ಯವಹಾರಗಳನ್ನು ಮೀಮಾಂಸೆಯು ಚರ್ಚಿಸಿ ನಿರ್ಣಯಿಸುತ್ತದೆ.

ಮೀಮಾಂಸಾ ಶಬ್ದದ ಅರ್ಥ
"ಮೀಮಾಂಸಾ" ಎಂದರೆ ವಿಚಾರಿಸುವುದು, ಚಿಂತಿಸುವುದು, ಆಲೋಚಿಸುವುದು ಎಂದರ್ಥ. ಆದರೆ ಎಲ್ಲ ವಿಚಾರಗಳು-ಚರ್ಚೆಗಳೂ ಮೀಮಾಂಸೆಯಲ್ಲ. ಪೂಜನೀಯವಾದ (ಧರ್ಮಸಂಬಂಧವಾದ) ವಿಚಾರವನ್ನು ಅದರ ಗೌರವಕ್ಕೆ ತಕ್ಕಂತೆ ಮರ್ಯಾದೆಗಳಿಗೆ(ಚರ್ಚಾ ನಿಯಮಗಳಿಗೆ)  ಒಳಪಟ್ಟು ವಿಚಾರಿಸುವುದು ಮಾತ್ರ ಮೀಮಾಂಸೆ. ಈ ಶಬ್ದವನ್ನು 'ನ್ಯಾಯ' ಎಂಬ ಅರ್ಥದಲ್ಲಿಯೂ ಉಪಯೋಗಿಸುವುದು ಉಂಟು. 
ಮೀಮಾಂಸಾ ಎಂಬ ಶಬ್ದವು ಮೊದಲು ವೇದದ ಕರ್ಮಕಾಂಡಗಳಲ್ಲಿ "ಸಂದಿಗ್ಧವಾದ ಕರ್ಮವನ್ನು ಕುರಿತು ನಡೆದ ವಿಮರ್ಶೆ" ಎಂಬ ಅರ್ಥದಲ್ಲಿ ಬಂದಿದೆ. ಅಂತಹ ಧರ್ಮದ ಕುರಿತ ವಿಮರ್ಶೆಗಳೆಲ್ಲ ಒಟ್ಟು ಸೇರಿ ಒಂದು ನಿಯತ ರೂಪವನ್ನು ಪಡೆದು ಅದು ಮೀಮಾಂಸಾ ಶಾಸ್ತ್ರವಾಯಿತು.  ಶಾಸ್ತ್ರದಲ್ಲಿಯೂ ಮೀಮಾಂಸಾ ಎಂಬ ಶಬ್ದಕ್ಕೆ ಅದೇ ಅರ್ಥವಿದೆ. ಆದರೆ ಕಾಲಕ್ರಮೇಣ ಈ ಶಬ್ದಕ್ಕೆ ಸಾಧಾರಣ, ವಿಶಿಷ್ಟ ಅರ್ಥಗಳೆರಡೂ ಅರೋಪಿಸಲ್ಪಟ್ಟು ಇಂದು "ಮೀಮಾಂಸಾ" ಎಂದರೆ ಮೀಮಾಂಸಾ ಶಾಸ್ತ್ರ  ಎಂಬ ವಿಶಿಷ್ಟ ಅರ್ಥದಲ್ಲಿಯೂ  ಚರ್ಚೆ ಎಂಬ ಸಾಧಾರಣ ಅರ್ಥದಲ್ಲಿಯೂ ಬಳಕೆಗೆ ಬಂದಿದೆ. (ಕಾವ್ಯ ಮೀಮಾಂಸೆ, ಚಿತ್ರ ಮೀಮಾಂಸೆ ಇತ್ಯಾದಿ. 

ಇದರ ಪ್ರಾಚೀನತೆ
ಈ ಶಾಸ್ತ್ರವು ಪುರಾತನವಾದದ್ದು.  "ಈ ಶಾಸ್ತ್ರವನ್ನು ಮೊದಲು ಪ್ರಜಾಪತಿಯು ರಚಿಸಿದನು. ಆತನಿಂದ ಕ್ರಮವಾಗಿ ಇಂದ್ರ, ಆದಿತ್ಯ, ವಸಿಷ್ಠ, ಪರಾಶರ, ಕೃಷ್ಣದ್ವೈಪಾಯನ, ಜೈಮಿನಿಗಳು ಕಲಿತರು. ಜೈಮಿನಿಯು ಇದನ್ನು ಸೂತ್ರರೂಪದಲ್ಲಿ ಬರೆದಿಟ್ಟರು'' ಎಂದು ಸಾಂಪ್ರದಾಯಿಕ ನಂಬಿಕೆಯಿದೆ.  ನಮ್ಮ ಶಾಸ್ತ್ರಗಳೆಲ್ಲ ಬೀಜರೂಪವಾಗಿ ವೇದದಲ್ಲಿ ಇವೆ. ಅವುಗಳನ್ನು ಆಯಾ ಆಚಾರ್ಯರು ತಮ್ಮ ಶಿಷ್ಯರಿಗೆ ಬೋಧಿಸುವಾಗ ವಿಸ್ತರಿಸಿದರು. ಬರುಬರುತ್ತ ಜನರಲ್ಲಿ ಗ್ರಹಣಶಕ್ತಿಯು ಕಡಿಯಾಗುತ್ತ ಬಂದುದರಿಂದ ಗ್ರಂಥಗಳ ಅವಶ್ಯಕತೆಯು ಹೆಚ್ಚಾಗಿ ಆಯಾ ಶಾಸ್ತ್ರಗಳು ಗ್ರಂಥಸ್ಥವಾಗುತ್ತ ಬಂದವು.  

ಮೊದಲು ಜಾತವೇದರ ಕಾಲದಲ್ಲಿ ಜನರು ಹುಟ್ಟುತ್ತಲೇ ಸತ್ಯ-ಧರ್ಮಗಳು ಅವರಿಗೆ ಸ್ವಯಂ ಗೋಚರವಾಗುತ್ತಿದ್ದವು. ಅವರಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ.  ಅವರ ನಂತರ ಜಾತವೇದರ ಉಪದೇಶಮಾತ್ರದಿಂದ ಸತ್ಯ-ಧರ್ಮಗಳ ದರ್ಶನವನ್ನು ಪಡೆಯುವ ಕಾಲವಾಯಿತು. ಆಗ ಗುರುಗಳ ಅವಶ್ಯಕತೆಯು ಹುಟ್ಟಿ ಆಚಾರ್ಯರು ಬರಬೇಕಾಯಿತು.  ಆ ಯುಗವೂ ಕಳೆದು ಆಚಾರ್ಯರಿಂದ ಉಪದೇಶ ಪಡೆದು ಅದನ್ನು ಅನುಷ್ಠಾನ ಮಾಡಿ ಸತ್ಯ-ಧರ್ಮಗಳ ಸಾಕ್ಷಾತ್ಕಾರವನ್ನು ಪಡೆದವರ ಕಾಲ ಬಂದಿತು. ಆಗ ಸಂಪ್ರದಾಯಗಳು ಹುಟ್ಟಿದವು.  ಆ ಕಾಲದ ನಂತರ ಉಪದೇಶವಾದರೂ  ''ಬುದ್ಧಿಂ ವ್ಯಾಮೋಹಯಸೀವ ಮೇ ಏಕಂ ವದ ನಿಶ್ಚಿತ್ಯಂ" ಎನ್ನುವಂತಹ ಸಂದೇಹಗ್ರಸ್ತರ ಕಾಲವಾಗಿ ಆಗ ಬಾಯಲ್ಲಿ ಹೇಳಿದ್ದನ್ನು ನಂಬಿಸಲಿಕ್ಕಾಗಿ ಅಲೌಕಿಕ ಪ್ರಭಾವವನ್ನು ತೋರಿಸಬೇಕಾದಂತಹ ಕಾಲವಾಯಿತು. ಅನಂತರ ಆ ಕಾಲವೂ ಕಳೆದು ಶ್ರದ್ಧಾಹೀನರ ಕಾಲವು ಬಂದಿತು'' ಎಂದು ಸಂಪ್ರದಾಯಶರಣರು ಹೇಳುತ್ತಾರೆ.   

ಮೀಮಾಂಸಾ ಶಾಸ್ತ್ರದ ಹುಟ್ಟು. 
ಈ ಶಾಸ್ತ್ರವು ಈಗ ಜೈಮಿನಿ ಮಹರ್ಷಿ ಬರೆದಿರುವ ಸೂತ್ರಗಳ ರೂಪದಲ್ಲಿದೆ. ವ್ಯಾಸರಿಗಿಂತ ಮುಂಚೆ ಅನೇಕ ಜನ  ಜೈಮಿನಿ ಎಂಬ ಹೆಸರಿನ ಋಷಿಗಳು ಇದ್ದಾಗಿಯೂ ಈ ಸೂತ್ರಗಳನ್ನು ಬರೆದು ಜೈಮಿನಿಯು ವ್ಯಾಸರ ಶಿಷ್ಯ ಎಂಬ ಸಾಂಪ್ರದಾಯಿಕ ಪರಿಗಣನೆಯ ಪ್ರಕಾರ ಮೀಮಾಂಸಾ ಸೂತ್ರಗಳು ಕ್ರಿ. ಪೂ. 3100 ರಲ್ಲಿ ರಚಿತವಾದವು ಎಂದು ಹೇಳಬಹುದು.  ಜೈಮಿನಿಯು ಈ ಸೂತ್ರಗಳನ್ನು ಬರೆಯುವುದಕ್ಕಿಂತ ಮುಂಚೆಯೇ ಈ ಶಾಸ್ತ್ರ ಪ್ರಚಾರದಲ್ಲಿತ್ತು. ಬಾದರಿ, ಕಾರ್ಷ್ಣಾರ್ಜನಿ, ಆತ್ರೇಯ, ಬಾದರಾಯಣ, ಐತಿಶಾಯನ, ಕಾಮಕಾಯನ ಮೊದಲಾದ ಆಚಾರ್ಯರಿದ್ದರು. ಆದರೂ ಜೈಮಿನಿ ಬರೆದ ಸೂತ್ರಗಳೇ ಈಗ ಉಪಲಬ್ಧವಿದೆ.  
ವೇದದ ಕರ್ಮಕಾಂಡ ವಿಭಾಗದಲ್ಲಿ ಋಷಿಗಳು ಕರ್ಮವನ್ನು ಕುರಿತು "ಹಾಗೆ ಮಾಡಬೇಕೇ? ಹೀಗೆ ಮಾಡಬೇಕೇ?" ಎಂದು ವಿಚಾರಿಸಿ ಸಿದ್ಧಾಂತ ನಿರ್ಣಯ ಮಾಡುತ್ತಿದ್ದುದು ಉಂಟು. ಆ ಚರ್ಚೆಗಳೇ ಮುಂದೆ ಶಾಸ್ತ್ರದ ಪೂರ್ವಪಕ್ಷ ಸಿದ್ಧಾಂತಗಳಾಗಿವೆ. ಅತೀ ಪ್ರಾಚೀನ ಕಾಲದಿಂದಲೂ ಅನೇಕ ಆಚಾರ್ಯರಿಂದ ಅನೇಕ ಮುಖವಾಗಿ ಶಾಸ್ತ್ರವು ಬೆಳೆದಿದೆ. ಹೀಗೆ ಅಪಾರವಾಗಿ ಬೆಳೆದ ಶಾಸ್ತ್ರವನ್ನೆಲ್ಲ ಅಧ್ಯಯನವನ್ನು ಮಾಡಲಾಗದ ಕಾಲದಲ್ಲಿ ಸೂತ್ರಗಳು ಹುಟ್ಟಿಕೊಂಡವು. ಕಾಲಕ್ರಮೇಣ ಸೂತ್ರಗಳು ತಪ್ಪಾಗಿ ಅರ್ಥೈಕೆಗೊಳಗಾಗಬಾರದು ಎಂಬ ಉದ್ದೇಶದಿಂದ  ವೃತ್ತಿಗಳು ಹಾಗೂ ಭಾಷ್ಯಗಳೂ ವಿರಚಿತಗೊಂಡವು. ಭಾಷ್ಯವು ಎಷ್ಟೇ ಸುಲಭವಿದ್ದರೂ ಕಾಲನ ಹೊಡೆತದಿಂದ ಮಾನವಕುಲ ಅಲ್ಪಮತಿಯಾದಮೇಲೆ ಅವುಗಳಿಗೆ ವ್ಯಾಖ್ಯಾನಗಳನ್ನು ಹಾಗೂ ವಾರ್ತಿಕಗಳನ್ನು  ಬರೆಯಬೇಕಾದ ಕಾಲ ಬಂದಿತು.   ಶಾಸ್ತ್ರವ್ಯಾಸಂಗವು ವಿಸ್ತಾರವಾದಮೇಲೆ ಒಂದೇ ಶಾಸ್ತ್ರವನ್ನು ಬೇರೆ ಬೇರೆ ಪರಿಪಾಠಿಯಿಂದ ನೋಡುವ ಪ್ರಕರಣಗ್ರಂಥಗಳು, ಹಾಗೂ ಶಾಸ್ತ್ರದೊಳಗಿನ ನಿರ್ದಿಷ್ಟ ಒಂದೇವಿಷಯವನ್ನು ವಿಸ್ತರಿಸಿ ಬರೆದ ವಾದಗ್ರಂಥಗಳೂ, ಕ್ರೋಢ ಪತ್ರಗಳೂ ಬಂದವು.  ಹಾಗೇಯೇ ಮೂಲ ಶಾಸ್ತ್ರಪ್ರಕ್ರಿಯೆಯು ಕೊಂಚ ಕೊಂಚ ಬದಲಾಗುತ್ತ ''ಪ್ರಾಚೀನ ಮತ'' ಹಾಗೂ ''ನವ್ಯಮತ'' ಎಂಬ ಪ್ರಭೇದಗಳು ಮೈದಳೆದವು. ಅವುಗಳಷ್ಟೇ ಅಲ್ಲದೇ ಪ್ರಾಭಾಕರ ಮತ ಮತ್ತು ಭಾಟ್ಟ ಮತ ಎಂಬ ಕವಲು ಉಂಟಾಯಿತು. ಪ್ರಾಭಾಕರ ಮತವು ಈಗ ಪ್ರಚಲಿತದಲ್ಲಿಲ್ಲ.


ಮೀಮಾಂಸೆಯ ಸ್ವರೂಪ
''ಅಥಾತೋ ಧರ್ಮಜಿಜ್ಞಾಸಾ'' ಎಂಬ ಸೂತ್ರದೊಂದಿಗೆ ಈ ಇದು ಪ್ರಾರಂಭವಾಗುತ್ತದೆ. ಧರ್ಮ ಮತ್ತು ಅಧರ್ಮಗಳನ್ನು ಜಿಜ್ಞಾಸೆಗೊಳಪಡಿಸಿ ಚರ್ಚಿಸಿ ನಿರ್ಣಯಿಸುವುದಕ್ಕೆಂದೇ ಈ ಶಾಸ್ತ್ರ ಹೊರಟಿದೆ.   ಇಂತಹ ಒಟ್ಟು 2644 ಸೂತ್ರಗಳು ಇದರಲ್ಲಿವೆ. ಸೂತ್ರಗಳು ''ಪೂರ್ವಪಕ್ಷ'', ''ಸಮಾಧಾನ'' ಹಾಗೂ ''ಸಿದ್ಧಾಂತ'' ಎಂಬ ಮೂರು ವಿಷಯ ಒಳಗೊಂಡಿವೆ. ''ಅಭ್ಯುಪೇತ್ಯವಾದ'' ಮತ್ತು ''ಅನುಗ್ರಹವಾದ'' ಎಂಬ ಎರಡು ವಾದ ಪ್ರಕಾರಗಳಿವೆ. ''ಆಭಾಷಾಂತ ಸೂತ್ರ'', ''ಪ್ರಯೋಜನ ಸೂತ್ರ'', ''ಪದೋತ್ತರ ಸೂತ್ರ'' ಇತ್ಯಾದಿ ಸೂತ್ರಪ್ರಕಾರಗಳಿವೆ.   ಇವುಗಳನ್ನು ಹನ್ನೆರಡು ಅಧ್ಯಾಯ ಹಾಗೂ ಅರವತ್ತು ಪಾದಗಳಲ್ಲಿ ವಿಷಯಗಳಿಗೆ ಅನುಸಾರವಾಗಿ ವಿಂಗಡಿಸಲಾಗಿದೆ. ಕುಮಾರಿಲ ಭಟ್ಟರು ಇದ್ದಕ್ಕೆ ವಾರ್ತಿಕವನ್ನು ಬರೆದಿದ್ದಾರೆ. ಅದೇ ಭಾಟ್ಟಮತವಾಗಿದೆ.

ಧರ್ಮಶಾಸ್ತ್ರ
"ಧರ್ಮಶಾಸ್ತ್ರ" ಎಂಬ ಮತ್ತೊಂದು ಶಾಸ್ತ್ರವು ಹುಟ್ಟಿದೆ. ಅದೂ ಕೂಡ ಧರ್ಮವನ್ನು ಬೋಧಿಸಲಿಕ್ಕೇ ಹೊರಟಿದ್ದು.  ಆದರೆ ಅದು ಶಾಸ್ತ್ರಪ್ರಕ್ರಿಯೆಯ ಮೂಲಕ ಧರ್ಮದ ಜಿಜ್ಞಾಸೆಯನ್ನು ಮಾಡುವುದಿಲ್ಲ. ಧರ್ಮಶಾಸ್ತ್ರವು ಮೀಮಾಂಸೆಯು ನಿರ್ಣಯಿಸಿದ ಧರ್ಮವನ್ನು ಆಚರಿಸುವ ಸಮಯ, ಅಧಿಕಾರ, ನಿಯಮ, ವಿಧಿ-ನಿಷೇಧ ಮುಂತಾದವುಗಳನ್ನು ಹೇಳುತ್ತದೆ.  ಆರು ದರ್ಶನಗಳು ಜಿಜ್ಞಾಸೆಯ ಮೂಲಕ ಸಿದ್ಧಾಂತಗಳನ್ನು ಮಂಡಿಸಿದರೆ ಧರ್ಮಶಾಸ್ತ್ರವು ಅವುಗಳಿಗೆ ಅನುಗುಣವಾಗಿ ಮಾಡಬೇಕಾದ ಅನುಷ್ಠಾನವನ್ನು ಹೇಳುತ್ತದೆ.  ಈ ಧರ್ಮಶಾಸ್ತ್ರವು ಪೂರ್ಣವಾಗಿ ಪೌರುಷೇಯವಾಗಿದೆ. ದರ್ಶನಗಳಿಗಿಂತ ಅರ್ವಾಚೀನವಾಗಿದೆ. ಧರ್ಮಶಾಸ್ತ್ರದಲ್ಲಿ ''ಸೂತ್ರಗಳು'' ಹಾಗೂ ''ಸ್ಮೃತಿಗಳು'' ಎಂಬ ಎರಡು ರೀತಿಯ ಗ್ರಂಥಗಳಿವೆ. ''ಧರ್ಮಸೂತ್ರಗಳು'', ''ಗೃಹ್ಯಸೂತ್ರಗಳು'', ಹಾಗೂ ''ಕಲ್ಪಸೂತ್ರಗಳು'' ಎಂಬ ಮೂರು ಪ್ರಕಾರದ ಸೂತ್ರಗಳಿವೆ. ಎಲ್ಲ ಸ್ಮೃತಿಗಳೂ ಈ ಸೂತ್ರಗಳನ್ನು ಆಧರಿಸಿಯೇ ಬರೆದದ್ದಾಗಿವೆ.
(ಗ್ರಂಥಋಣ - ದೇವುಡು ಅವರ ಮೀಮಾಂಸಾ ದರ್ಪಣ)

ಧರ್ಮದ ಕುರಿತು ( ಗುರುವಾಣಿ)

1925-1927 ರ ನಡುವೆ ಎರಡು ವರ್ಷಗಳ ಕಾಲ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ತಮಿಳುನಾಡಿನ ವಿವಿಧ ಊರುಗಳಿಗೆ ಭೇಟಿ ಕೊಟ್ಟಾಗ ಅನೇಕ ಜಿಜ್ಞಾಸುಗಳು-ಭಕ್ತರು ಸ್ವಾಮೀಜೀಯವರನ್ನು ಭೇಟಿ ಮಾಡಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಸ್ವಾಮಿಗಳ ಜೊತೆ ಇದ್ದ ಕೃಷ್ಣಸ್ವಾಮಿ ಐಯ್ಯರ್ ಎಂಬುವರು ಅಲ್ಲಿ ನಡೆದ ಸಂಭಾಷಣೆಯನ್ನು ಬರೆದುಕೊಂಡು ಆ ಬರಹಗಳನ್ನು  ಇಂಗ್ಲೀಷ್ ನಲ್ಲಿ '' From the master's lips'' ಎಂಬ ಹೆಸರಿನಲ್ಲಿ 1930 ರಲ್ಲಿ ಪ್ರಕಟಿಸಿದ್ದರು. ಅದೇ ಆಮೇಲೆ Dialogues with the Guru ಎಂಬ ಹೆಸರಿನಲ್ಲಿ ಮುಂಬೈನಲ್ಲಿ ಪುನರ್ಮುದ್ರಿತವಾಗಿತ್ತು. ಈಗ ಆ ಪುಸ್ತಕ ಸಿಗುವುದಿಲ್ಲ. ಆ ಪುಸ್ತಕದಲ್ಲಿ ಹನ್ನೆರಡು ಅಧ್ಯಾಯಗಳಿವೆ. ಆವುಗಳಲ್ಲಿ ಮೊದಲ ಅಧ್ಯಾಯ ಅಥವಾ ಮೊದಲ ಸಂಭಾಷಣೆಯನ್ನು ಜಿಜ್ಞಾಸುಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ.  ಚಂದ್ರಶೇಖರಭಾರತಿ ಸ್ವಾಮಿಗಳು ಕೇವಲ ಒಬ್ಬ ಪೀಠಾಧಿಪತಿಗಳಾಗಿರಲಿಲ್ಲ. ಪೀಠದ ಮೇಲಿದ್ದರು ಎನ್ನುವ ಕಾರಣಕ್ಕೆ ಮಾತ್ರವಲ್ಲದೇ ಶಾಸ್ತ್ರಾಧ್ಯಯನ, ತಪಸ್ಸು ಮುಂತಾದ ಅನೇಕ ಕಾರಣಗಳಿಂದಾಗಿ ವಿಶಿಷ್ಟವಾಗಿ ಗುರ್ತಿಸಲ್ಪಡುವ ಮಹಾತ್ಮರು. ಹೀಗಾಗಿ ಅವರ ಮಾತುಗಳಿಗೆ ವಿಶೇಷವಾದ ಮಹತ್ವವಿದೆ. ''ಶಾರದಾ ಪೀಠದ ಮಾಣಿಕ್ಯ'' ಎಂಬ ಪುಸ್ತಕ ಓದಿದರೆ ನಿಮಗೆ ಅವರ ವ್ಯಕ್ತಿತ್ವದ ಪರಿಚಯವಾದೀತು. ಇಲ್ಲಿನ ಮೊದಲ ಬರಹ ಸ್ವಲ್ಪ ಉದ್ದವಿದೆ. ಓದಲು ಸ್ವಲ್ಪ ಸಹನೆ-ಸಮಯ ಬೇಕು.

 ಧರ್ಮದ ಕುರಿತು. 

 ಸ್ವಾಮಿಗಳು ತಮಿಳುನಾಡಿನ ಹಳ್ಳಿಯೋಂದರಲ್ಲಿ 1926 ರಲ್ಲಿ ಬಿಡಾರ ಹೂಡಿದ್ದಾಗ ಅವರನ್ನು ಭೇಟಿ ಮಾಡಲು ಶ್ರೀ ‘’ಎ’’ ಎಂಬ ಯುರೋಪಿಯನ್ ದೇಶದ ವ್ಯಕ್ತಿಯೊಬ್ಬರು ಬಂದಿದ್ದರು. ವೇದಾಂತಶಾಸ್ತ್ರದ ಕುರಿತು ಕೆಲ ಜನಪ್ರಿಯ ಪುಸ್ತಕಗಳನ್ನು ಅವರು ಈಗಾಗಲೇ ಓದಿ ಅದರ ಬೋಧೆಗಳಿಂದ ಪ್ರಭಾವಕ್ಕೊಳಗಾಗಿದ್ದರು.  ಅವರು ಸ್ವಾಮಿಗಳನ್ನು ಭೇಟಿಯಾದಾಗ ನಡೆದ ಸಂಬಾಷಣೆ ಇಲ್ಲಿದೆ.

*****
ಶ್ರೀ ಎ: ಸ್ವಾಮಿಗಳೇ, ನನ್ನನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಿ ಸೇರಿಸಿಕೊಳ್ಳುಲು ತಾವು ಸಿದ್ಧರಿದ್ದೀರಾ..? ನನ್ನ ಹಾಗೆಯೇ ಹಿಂದೂ ಆಗಿ ಪರಿವರ್ತನೆಗೊಳ್ಳುವ ಆಸೆ ಇರುವ ಅನೇಕ ಮಿತ್ರರಿದ್ದಾರೆ. ಅವರನ್ನೂ ಕೂಡ ಕರೆತರುತ್ತೇನೆ. ನಮಗೆಲ್ಲಾ ಈ ಹಿಂದೂ ಧರ್ಮದಿಂದ ಪ್ರಯೋಜನ ಇದೆ ಅನ್ನುವುದು ಮನವರಿಕೆ ಆಗಿದೆ.

ಸ್ವಾಮಿಗಳು: ಹಿಂದೂ ಧರ್ಮವು ಜಗತ್ತಿನ ವಿಚಾರಪರ ಜಿಜ್ಞಾಸುಗಳನ್ನೆಲ್ಲ ತನ್ನ ಕಡೆಗೆ ಆಕರ್ಷಿಸುವುದು ಸಹಜ. ಆದರೆ ನಾವು  ಮತಾಂತರಿಗಳನ್ನು ಸ್ವೀಕರಿಸುವುದಿಲ್ಲ.

ಎ: ನಿಮ್ಮ ಹಿಂದೂ ಧರ್ಮವು ಮಾನವ ಕುಲಕ್ಕೆ ಹಿತಕಾರಿ ಎಂಬುದನ್ನು ಒಪ್ಪಿಕೊಂಡಲ್ಲಿ ತಾವು ಮತಾಂತರಗೊಳ್ಳಲು ಬಯಸುವವರನ್ನು ಅದರಲ್ಲಿ ಸೇರಲು ಅವಕಾಶ ಕೊಡಬೇಕು ಅನ್ನುವುದು ಸ್ಪಷ್ಟವಾಗುತ್ತದೆ ಅಲ್ಲವೇ..? ಮತ್ತೇಕೆ ಮತಾಂತರ ಬೇಡ ಅನ್ನುತ್ತೀರಿ?

ಸ್ವಾಮಿಗಳು: ಅದು ಹಾಗಲ್ಲ. ಒಬ್ಬ ವ್ಯಕ್ತಿ ತಾನು ಮತಾಂತರ ಹೊಂದಬೇಕೆಂಬ ಆಸೆಯನ್ನು ಹೊಂದಿರುವ ಧರ್ಮಕ್ಕೆ ಸೇರದೇ ಇದ್ದಾಗ ಮಾತ್ರ ಮತಾಂತರದ ಪ್ರಶ್ನೆ ಉದ್ಭವಿಸುತ್ತದೆ.

ಎ: ಅದು ಹೇಗೆ? ಹಿಂದೂಗಳಾಗಿ ಪರಿವರ್ತನೆ ಹೊಂದಬಯಸುವ ನನ್ನಂಥವರು ಕೇವಲ  ಆ ಬಯಕೆಯಿಂದ ಪರಿವರ್ತನೆ ಆಗಿಬಿಡುತ್ತಾರೆಯೇ?  ಅದಕ್ಕೆ ಯಾವುದೇ ಸಾಂಪ್ರದಾಯಿಕ ವಿಧಿಯ ಅಗತ್ಯ ಇಲ್ಲ ಅನ್ನುವುದು ಸ್ವಾಮಿಗಳ ಅಭಿಪ್ರಾಯವೇ?

ಸ್ವಾಮಿಗಳು: ಅಲ್ಲ. ಹಿಂದೂಗಳು ಎಂದು ಕರೆದುಕೊಳ್ಳಲು ಬಯಸುವವರು ಹಾಗೂ ಆ ರೀತಿ ಬಯಸದೇ ಇರುವವರೂ ಕೂಡ ಹಿಂದೂಗಳೇ ಎಂಬುದು ನನ್ನ ಅಭಿಪ್ರಾಯ.

ಎ: ಇದು ಹೇಗೆ ಸಾಧ್ಯ?

ಸ್ವಾಮಿಗಳು: ನಮ್ಮ  ಧರ್ಮಕ್ಕೆ “ಹಿಂದೂ” ಎಂಬ ಹೆಸರು ಬಂದಿದ್ದು ತೀರ ಇತ್ತೀಚೆಗೆ. ಅದರ ನಿಜವಾದ ಹೆಸರು ಸನಾತನ ಧರ್ಮ. ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಪ್ರಾರಂಭವಾಗಲಿಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ –ಅವು ಒಪ್ಪಲಿ-ಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ನಾವು ಅರಿತು ಒಪ್ಪಿಕೊಂಡಲ್ಲಿ ನಮಗೆ ಒಳಿತು. ಇಲ್ಲದಿದ್ದಲ್ಲಿ ಕೆಡುಕು ನಮಗೇ. ಸನಾತನ ಧರ್ಮವು ಈ ರೀತಿಯಾದದ್ದು.

ಎ: ಜಗತ್ತಿನ ಎಲ್ಲರೂ ಹಿಂದೂಗಳೇ ಎಂದು ತಾವು ಹೇಳಿದಲ್ಲಿ ಜಾತಿಪದ್ಧತಿಯನ್ನು ತಾವು ಹೇಗೆ ಸಮರ್ಥಿಸುವಿರಿ. ?

ಸ್ವಾಮಿಗಳು: ಎಲ್ಲರೂ ಹಿಂದೂಗಳೇ ಎಂದರೆ ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ಮಾರ್ಗದರ್ಶನ ಪಡೆಯಲು ಅರ್ಹರು ಎಂದರ್ಥ.  ಆದರೆ ಈ ಮಾರ್ಗದರ್ಶನವು ಎಲ್ಲರಿಗೂ ಒಂದೇ ರೀತಿ ಇರುತ್ತದೆ ಎಂದರ್ಥವಲ್ಲ. ಮನುಷ್ಯನಿಗೆ ಹುಟ್ಟಿನಿಂದ ಬಂದ ಒಲವು, ಸ್ವಭಾವ, ಪೂರ್ವಜನ್ಮದ ಸಂಸ್ಕಾರ, ಪರಿಸರ ಮತ್ತು ಅವನು ಹುಟ್ಟಿದ ಮೇಲೆ ಪಡೆದುಕೊಳ್ಳುವ ತರಬೇತು ಇವೆಲ್ಲವೂ ಒಂದೇ ಆಗಿರಲು ಸಾಧ್ಯವಿಲ್ಲ. ಈ ಅವಿರೋಧ ಸತ್ಯವನ್ನು ಗಣನೆಗೆ ತೆಗೆದುಕೊಂಡು ಸನಾತನ ಧರ್ಮವು ಸಾಮಾನ್ಯಧರ್ಮ ಮತ್ತು ವಿಶೇಷಧರ್ಮಗಳು ಎಂದು ವಿಂಗಡಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.  ಮೊದಲನೆಯದು(ಸಾಮಾನ್ಯ ಧರ್ಮ) ಇಡೀ ಮಾನವಕುಲಕ್ಕೆ ಸಹಕಾರಿಯಾದರೆ ಎರಡನೆಯದು ಮತ್ತು ಮೊದಲನೆಯದು (ಸಾಮಾನ್ಯ ಧರ್ಮ ಮತ್ತು ವಿಶೇಷ ಧರ್ಮ) ಎರಡೂ ಸೇರಿ ಜಾತಿ ಚೌಕಟ್ಟಿನೊಳಗೆ ಬರುವವರಿಗೆ ಉಪಯುಕ್ತವಾಗಿವೆ.

ಎ: ಈ “ವಿಶೇಷ ಧರ್ಮ” ಗಳಿಗೆ ಆಧ್ಯಾತ್ಮಿಕ ಮೌಲ್ಯಗಳಿವೆ,  ಅದು ಹೆಚ್ಚು ಪ್ರಯೋಜನಕಾರಿ  ಎಂದಾದಲ್ಲಿ ಅವುಗಳ ಪ್ರಯೋಜನವನ್ನು ವರ್ಣವ್ಯವಸ್ಥೆಯ ಹೊರಗಿನವರು ಏಕೆ ಪಡೆಯಬಾರದು?

ಸ್ವಾಮಿಗಳು: ನೀರು ಎಲ್ಲ ಜೀವಿಗಳಿಗೂ ಪ್ರಯೋಜನಕಾರಿ. ಆದರೆ ಬಿಸಿಲಿನಿಂದ ದಣಿದಿರುವ ವ್ಯಕ್ತಿಗೆ ಹಾಗೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಒಂದೇ ರೀತಿಯಲ್ಲಿ ಪ್ರಯೋಜನಕಾರಿಯೇ ? ಸಂದರ್ಭಕ್ಕೆ ತಕ್ಕಂತೆ ಪ್ರಯೋಜನ ಬದಲಾಗುತ್ತದೆ.

ಎ: ತಮ್ಮ ಉದಾಹರಣೆ ನನಗೆ ಅಷ್ಟಾಗಿ ಒಪ್ಪಿಗೆಯಾಗುತ್ತಿಲ್ಲ. ನಿರ್ದಿಷ್ಟ ವರ್ಗಕ್ಕೆ ಅನ್ವಯಿಸುವ ನಿಯಮವು ಆ ವರ್ಗಕ್ಕೆ ಅಥವಾ ಯಾವುದೇ ವರ್ಗಕ್ಕೆ ಸೇರದೇ ಇರುವವರಿಗೆ ಹಾನಿಕಾರಕ ಎಂದು ಸಮರ್ಥಿಸಲು ಯಾವುದೇ ಆಧಾರವಿಲ್ಲ.

ಸ್ವಾಮಿಗಳು: ಅದೇ ರೀತಿ ಆ ನಿಯಮಗಳು ''ಎಲ್ಲರಿಗೂ ಪ್ರಯೋಜನಕಾರಿ'' ಎಂಬುದನ್ನೂ ಕೂಡ ಸಮರ್ಥಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಒಂದು ನಿರ್ದಿಷ್ಟ ಜಾತಿಗೆ ಸೇರಿದ ನಿಯಮವಾಗಿದೆ ಎಂಬ ಕಾರಣಕ್ಕಾಗಿಯೇ ಅದು ಪ್ರಯೋಜನಕಾರಿಯಾಗಿದೆ. ಆ ಕಾರಣಕ್ಕಾಗಿಯೇ ಅದು “ವಿಶೇಷ ನಿಯಮ’’ ಅನ್ನಿಸಿಕೊಂಡಿದೆ. ಆದ್ದರಿಂದ ಆ ನಿಯಮಕ್ಕೆ ಸಾರ್ವತ್ರಿಕ ಅನ್ವಯವಿರಲು ಸಾಧ್ಯವಿಲ್ಲ.   ಈ ನೀತಿ ನಿಯಮಗಳ ಬಗ್ಗೆ (ಧರ್ಮದ ಬಗ್ಗೆ) ನಮಗೆ ಶಾಸ್ತ್ರಗಳು ಮಾತ್ರ ತಿಳಿಸುತ್ತವೆ. ಇದನ್ನು ನಾವು ಒಪ್ಪಿಕೊಂಡಲ್ಲಿ (ಶಾಸ್ತ್ರ ತಿಳಿಸುವ ಧರ್ಮವು ಪ್ರಯೋಜನಕಾರಿ ಎಂದು ಒಪ್ಪಿಕೊಂಡಲ್ಲಿ) ಆ ನಿಯಮವು ಯಾರಿಗೆ  ಪ್ರಯೋಜನಕಾರಿ.. ಮತ್ತು ಯಾರಿಗೆ ಪ್ರಯೋಜನಕಾರಿ ಅಲ್ಲ ಎನ್ನುವುದನ್ನೂ  ಕೂಡ ತಿಳಿಸುವ ಅವೇ ಶಾಸ್ತ್ರಗಳ ಆದೇಶವನ್ನು ಪೂರ್ಣವಾಗಿ ಒಪ್ಪಬೇಕಾಗುತ್ತದೆ. ಶಾಸ್ತ್ರಗಳ ಮೂಲಕ ಧರ್ಮದಿಂದ ಪ್ರಯೋಜನ ಇದೆ ಎಂದು ತಿಳಿದ ನೀವು (ಎಲ್ಲರಿಗೂ ಏಕರೂಪ ಧರ್ಮ ಹೇಳಲಾಗಿಲ್ಲ ಅನ್ನುವ ಕಾರಣಕ್ಕೆ) ಅವೇ ಶಾಸ್ತ್ರಗಳನ್ನು ನೀರಾಕರಿಸುವಿರೋ?  ಆದರೆ ಹಾಗೆ ಮಾಡಲು ಬರುವುದಿಲ್ಲ. (ಶಾಸ್ತ್ರದ ಒಂದು ಆದೇಶ ಸರಿ ಮತ್ತೊಂದು ತಪ್ಪು ಆಗಿರಲು ಸಾಧ್ಯವಿಲ್ಲ) ಮನುಷ್ಯನ ನಡವಳಿಕೆಯ ನಿಯಂತ್ರಣವೇ ಶಾಸ್ತ್ರಗಳ ಉದ್ದೇಶವಾಗಿದೆ. ಸನಾತನ ಧರ್ಮವಾಗಲಿ ಅಥವಾ ಇನ್ನಾವುದೇ ಧರ್ಮವಾಗಲಿ ಎಲ್ಲವೂ ಅಧಿಕಾರಸಿದ್ಧಾಂತವನ್ನು ಅವಲಂಬಿಸಿವೆ. (ಅಧಿಕಾರ ಎಂದರೆ ಅರ್ಹತೆ) ಧರ್ಮವನ್ನು ಪಾಲಿಸಲು ಅಧಿಕಾರದ ಸ್ವರೂಪವನ್ನು ನಿರ್ಣಯಿಸುವುದು ಅಗತ್ಯ.  ವರ್ಣದ ಚೌಕಟ್ಟಿನೊಳಗೆ ಬರುವವರು ವಿಶೇಷ ಧರ್ಮವನ್ನು ಪಾಲಿಸಲು ಅಧಿಕಾರವಿದೆ. ಉಳಿದವರು ಕೇವಲ ಸಾಮಾನ್ಯಧರ್ಮವನ್ನು ಪಾಲಿಸಲು ಅಧಿಕಾರಿಗಳು.

ಎ: ಸನಾತನ ಶಾಸ್ತ್ರಗಳು ಇಡೀ ಮನುಕುಲಕ್ಕೆ ಹಿತಕಾರಿಯಾಗಿದ್ದಲ್ಲಿ, ಮತ್ತು ತಾವೀಗ ಹೇಳಿದಂತೆ ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ನಿಮ್ಮ ಧರ್ಮಕ್ಕೆ ಸೇರಿದವರಾದಲ್ಲಿ ಜಗತ್ತಿನ ಇತರ ಧರ್ಮಗಳ ಬಗ್ಗೆ ತಮ್ಮ ಅಭಿಪ್ರಾಯವೇನು?

ಸ್ವಾಮಿಗಳು: ಆ ಧರ್ಮಗಳಿಗೆ ಸೇರಿದವರು ತಮ್ಮ ಧರ್ಮಗಳು ಸನಾತನ ಧರ್ಮದಿಂದಲೇ ಉದಿಸಿದವುಳು, ಅದರ ಅಂಗಗಳು ಎಂದು ತಿಳಿಯದೇ ಇರುವುದು ಅವರ ತಪ್ಪು.  ಇತರ ಎಲ್ಲ ಧರ್ಮಗಳ ಉತ್ಕೃಷ್ಟ ಬೋಧನೆಗಳು ತಮ್ಮ ಸ್ಥಾನವನ್ನು ಸನಾತನ ಧರ್ಮದಲ್ಲಿಯೂ ಪಡೆದುಕೊಂಡಿವೆ. ಅವು ಸನಾತನಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ.

ಎ: ಸ್ವಾಮಿಗಳೇ. ತಮ್ಮ  ಈ ಹೇಳಿಕೆ ಉತ್ಪ್ರೇಕ್ಷೆಯಲ್ಲವೇ? ಇತರರು ಅದನ್ನು ಒಪ್ಪಿಕೊಳ್ಳದೇ ಇರಬಹುದು.

ಸ್ವಾಮಿಗಳು: ಪ್ರಸ್ತುತ ನಮ್ಮ ಚರ್ಚೆಯು ಸನಾತನ ಧರ್ಮದ ಬಗ್ಗೆ ಇತರರಿಗೆ ಇರಬಹುದಾದ ಮಾನ್ಯತೆಗಳಿಗೆ ಸಂಬಂಧಿಸಿದ್ದಲ್ಲ.  ಯಾವುದೇ ಒಂದು ಒಂದು ವಸ್ತುವಿನಲ್ಲಿ ಅಂತಸ್ಥವಾಗಿರುವ ಮೌಲ್ಯವು ಅದನ್ನು ಬೇರೆಯವರು ಒಪ್ಪಲಿ-ಬಿಡಲಿ, ಅದು ಇದ್ದೇ ಇರುತ್ತದೆ. ಮೂಲತಃ ಶಾಸ್ತ್ರವಚನವು ಔದಾರ್ಯದ ಮಟ್ಟದಲ್ಲಿ ಇರುವುದರಿಂದ ಅನ್ನು ಇನ್ನೂ ಕೆಳದರ್ಜೆಗೆ ಇಳಿಸಲು ಸಾಧ್ಯವೇ ಇಲ್ಲ.

ಎ: ಹೇಗೆ?

ಸ್ವಾಮಿಗಳು: ನಾನು ಕ್ರೈಸ್ತ ಧರ್ಮದ ಉದಾಹರಣೆ ತೆಗೆದುಕೊಂಡು ವಿವರಿಸಿದರೆ ತಾವು ನನ್ನನ್ನು ಕ್ಷಮಿಸುವಿರೆಂದು ಭಾವಿಸುತ್ತೇನೆ.  ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ(ಧರ್ಮ) ಎಂದಾದಲ್ಲಿ ಆತನಿ(ಕ್ರಿಸ್ತನಿ)ಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ(ಧರ್ಮದ) ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಜೀಸಸ್ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ.

ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನಿಗೆ ಅಷ್ಟು ಉಚಿತವಲ್ಲ(ಅದು ಅವನ ಲಕ್ಷಣವಲ್ಲ) ಎಂದು ನಿಮಗನಿಸುವುದಿಲ್ಲವೇ?  ಆ ಭಗವಂತನು ಜೀಸಸ್ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮ ಇದ್ದವು, ಅವುಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ?  ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಆಜ್ಞೆಯು(ಮುಕ್ತಿಸಾಧನವು) ಮುಂದೆ ಜನಿಸುವ ಜೀಸಸ್ ನಲ್ಲಿನ ನಂಬಿಕೆಯು ಅದಕ್ಕೆ  ಕಡ್ಡಾಯ ಎಂಬ ನಿಯಮ ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ.

ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ(ಧರ್ಮದ) ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ ಎಂಬುದು ನಮ್ಮ ನಂಬಿಕೆ (ಶಾಸ್ತ್ರಪ್ರಕ್ರಿಯೆಯ ಅಧಿಕರಣಗಳ ಮೂಲಕ ಈ ಮಾತನ್ನು ಸಾಬೀತು ಪಡಿಸಬಹುದು).  ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. (ವೇದದ ಮೂಲವನ್ನು, ಅಪೌರುಷೇಯತ್ವನ್ನು ಅರ್ಥಮಾಡಿಕೊಳ್ಳಲು ಮೀಮಾಂಸಾ ಶಾಸ್ತ್ರವನ್ನು ನೋಡಿ) ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ.

ಎ: ಅರ್ಥವಾಯಿತು.  ಮಾನವನು ಮುಕ್ತಿಸಾಧನವನ್ನು ಅಥವಾ ಧರ್ಮವನ್ನು ಸ್ವತಃ ಕಂಡುಕೊಳ್ಳಲು ಅಸಮರ್ಥ. ಅವನಿಗೆ ಬೇರೆಯವರ ನೆರವು ಬೇಕೇಬೇಕು  ಎಂದು  ನೀವೇ ಹೇಳುತ್ತಿದ್ದೀರಲ್ಲ. ಅಂತಹ ನೆರವನ್ನು ಅವನಿಗೆ ನೀಡಿದವರು ದೇವರೇ ಆಗಿರಬಹುದು ಅಥವಾ ಬೇರೆ ಯಾರೇ ಆಗಿರಬಹುದು.

ಸ್ವಾಮಿಗಳು:  ಹಾಗೆ ಮಾಡಲಿಕ್ಕೆ ಆ ವ್ಯಕ್ತಿಗೆ ತಾನು ಹೊಂದಬೇಕಾದ ಒಂದು ''ವಸ್ತು'' ಅಥವಾ ''ಗುರಿ''  ಎಂಬುದು ಒಂದು ಇದೆ ಎಂಬ ತಿಳುವಳಿಕೆ ಇರಬೇಕು. ಅಂತಹ ವಸ್ತುವಿನ "ನೈಜ ಅನುಭವದಲ್ಲಿ" ಪಾಲ್ಗೊಂಡಾಗ ಮಾತ್ರ "ಅಂತಹ ವಸ್ತು ಇದೆ" ಎಂದು ಅವನು ತಿಳಿಯಲು ಸಾಧ್ಯ. ಗುರಿಯ ತಿಳುವಳಿಕೆ ಇಲ್ಲದೇ ಪ್ರಯತ್ನ ಹೇಗೆ ಪ್ರಾರಂಭವಾಗುತ್ತದೆ..?

 ಅಲ್ಲದೇ ನಿರ್ದಿಷ್ಟ ಸಾಧನವೊಂದು ಮುಕ್ತಿಗೆ ಒಯ್ಯಬಲ್ಲದೆಂದು ಒಬ್ಬನಿಗೆ ಖಚಿತವಾಗಿ ಮನವರಿಕೆಯಾಗಬೇಕಾದರೆ ಅವನು ಅದನ್ನು ಮೊದಲು ಅನುಸರಿಸಿರಬೇಕು. ಅಥವಾ ಅವನು ಸರ್ವಜ್ಞತ್ವದಿಂದ ''ಗುರಿ'' ಹಾಗೂ ''ಸಾಧನೆಯ ಮಾರ್ಗ''ಗಳೆರಡನ್ನೂ ಏಕಕಾಲದಲ್ಲಿ ನೋಡುವ ಸಾಮರ್ಥ್ಯ ಹೊಂದಿದವನಾಗಿರಬೇಕು. ಅಥವಾ ಅವನು ಸಾಕ್ಷಾತ್ ಗುರಿಯೇ ಆಗಿದ್ದು ತನ್ನನ್ನು ಹೊಂದುವ ವಿಧಾನವನ್ನು ಜಗತ್ತಿಗೆ ಬೋಧಿಸಬೇಕು.
ಮೇಲೆ ಹೇಳಿದವುಗಳಲ್ಲಿ ಮೊದಲನೇಯ ಆಯ್ಕೆಯನ್ನು ಒಪ್ಪಿಕೊಂಡರೆ, ಒಬ್ಬ ವ್ಯಕ್ತಿಯು ತಾನು ಅನುಸರಿಸಿ ಯಶಸ್ವಿಯಾಗುವ ಮೊದಲೇ ಆ ಮಾರ್ಗವನ್ನು ಹೇಗೆ ತಿಳಿದ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಎರಡನೇಯದನ್ನು ಒಪ್ಪಿಕೊಂಡರೆ ಆತನು ತನ್ನಲ್ಲಿ ಈ ಮೊದಲು ಇರದ ಸರ್ವಜ್ಞತ್ವವನ್ನು ಎಲ್ಲಿಂದ ಪಡೆದ? ಮತ್ತು ಹೇಗೆ ಪಡೆದ? ಎಂಬ ಅಡ್ಡಿ ಉಂಟಾಗುತ್ತದೆ.  ಆದ್ದರಿಂದ ಶೃತಿಯು ತನ್ನ ಮೂಲವನ್ನು ಭಗವಂತನಲ್ಲಿಯೇ ಹೊಂದಿದೆ ಎಂಬ ಮೂರನೇಯ ಆಯ್ಕೆಯನ್ನು ಮಾತ್ರ ನಾವು ತಾರ್ಕಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. (ಸಾಮಾನ್ಯ ಇಂದ್ರಿಯ ಮತ್ತು ಮನೋಬುದ್ಧಿಗಳ ಅನುಭವದ ಪರಿಧಿಯನ್ನು ಮೀರಿ ಬರುವ ಈ ಜ್ಞಾನವೇ ಶೃತಿ ಅಥವಾ ವೇದ ಎನಿಸಿಕೊಳ್ಳುವುದು.)

ಎ: ಭಗವಂತನ್ನು ತಿಳಿವುದು ಕಷ್ಟವಿರಬಹುದು. ಅಲ್ಲದೇ ಅದನ್ನು ತಿಳಿಯಲು ಒಬ್ಬನಿಗೆ ಅದನ್ನು ತಿಳಿದ ಇನ್ನೊಬ್ಬನ ಮಾರ್ಗದರ್ಶನದ ಅಗತ್ಯವೂ ಇರಬಹುದು. ಆದರೆ ಆತನಿಗೆ ಭಗವಂತ ಇರಬಹುದು ಎಂಬ ತಿಳುವಳಿಕೆ ಮೂಡಲಿಕ್ಕೆ ಶೃತಿಯ ಸಹಾಯ ಬೇಕಿಲ್ಲವಲ್ಲ?   ನಮ್ಮ ಬುದ್ಧಿಶಕ್ತಿಯಿಂದಲೇ ನಾವು ಅದನ್ನು ಊಹಿಸಬಹುದಲ್ಲ?

ಸ್ವಾಮಿಗಳು: ಭಗವಂತನ ಅಸ್ತಿತ್ವವನ್ನು ಅಷ್ಟು ಸ್ವತಂತ್ರವಾಗಿ ಹಾಗೂ ಸುಲಭವಾಗಿ ಊಹಿಸಬಹುದಾದಲ್ಲಿ ಪ್ರಪಂಚದಲ್ಲಿರುವ ನಾಸ್ತಿಕರ ಬಗ್ಗೆ ಏನು ಹೇಳುತ್ತೀರಿ? ನಿಮಗಿಂತಲೂ ಅವರ ವಿಚಾರ ಶಕ್ತಿ ಕಡಿಮೆ ದರ್ಜೆಯದ್ದು ಎಂಬುದು ನಿಮ್ಮ ಅಭಿಪ್ರಾಯವೇ? ದೇವರ ಇರುವಿಕೆಯ ಬಗ್ಗೆ ಆಲೋಚಿಸುವ ತೊಂದೆಯನ್ನು ತೆಗೆದುಕೊಂಡು ಆ ಯತ್ನದಲ್ಲಿ ವಿಫಲರಾದವರೂ ಕೂಡ ಅಸಾಮಾನ್ಯ ಬುದ್ಧಿಶಕ್ತಿಯಿಂದ ಕೂಡಿರುತ್ತಾರೆ. ಅವರ ವೈಫಲ್ಯಕ್ಕೆ ಬುದ್ಧಿಸಲಕರಣೆಯ ದೋಷ ಕಾರಣವಲ್ಲ. ''ಭಗವಂತನು ಮೂಲತಃ ವಿಚಾರಕ್ಕೆ ನಿಲುಕುವವನಲ್ಲ'' ಎಂಬುದೇ ಅದಕ್ಕೆ ಕಾರಣ. ಒಂದು ಪಕ್ಷ ತರ್ಕದಿಂದ ಭಗವಂತನ್ನು ಊಹಿಸಬಹುದಾದಲ್ಲಿ ಹಾಗೆ ಊಹೆಗೆ ನಿಲುಕುವ ''ದೇವರು'' ಎಂಬ ವಸ್ತು ಇದೆ ಎಂದು ನಿಮಗೆ ಯಾರು ಹೇಳಿದರು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇವರನ್ನು ಕುರಿತು ತರ್ಕಿಸುವ ಅಥವಾ ಊಹಿಸುವ ಮೊದಲು ನೀವು ಖಂಡಿತವಾಗಿಯೂ ದೇವರನ್ನು ಕುರಿತು ಹೇಳುವ ಯಾವುದೋ ಒಂದು ಮೂಲದಿಂದ ಅದರ ಬಗ್ಗೆ ಕೇಳಿರಲೇಬೇಕು. ಮೂಲವನ್ನು ಅವಲಂಬಿಸಿರಲೇ ಬೇಕು. ದೇವರು ಇದ್ದಾನೆ ಎಂದು ಯಾರಾದರೂ ಮೊದಲು ಹೇಳಿದಮೇಲೆ ಮಾತ್ರ ಆ ಮಾತನ್ನು ಒಪ್ಪಿಕೊಳ್ಳಲು ಅಥವಾ ವಿಮರ್ಶಿಸಲು ಮಾತ್ರ ನೀವು ನಿಮ್ಮ ಬುದ್ಧಿಶಕ್ತಿಯನ್ನು ವಿಚಾರ ಮಾಧ್ಯಮವನ್ನು ಬಳಸಲು ಸಾಧ್ಯ. ದೇವರ ಬಗ್ಗೆ ನೀವು ಕೇಳಿಯೇ ಇರದಿದ್ದಲ್ಲಿ ನಿಮ್ಮ ಬುದ್ಧಿಶಕ್ತಿಯು ಆ ನಿಟ್ಟಿನತ್ತ ಹರಿಯುವ ಪ್ರಸಂಗವೇ ಉಂಟಾಗುವುದಿಲ್ಲ.   

ಎ: ನನ್ನ ಬುದ್ಧಿಶಕ್ತಿಯನ್ನು ಬಳಸುವ ಮುನ್ನ ನಾನು ದೇವರ ಬಗ್ಗೆ ಕೇಳಿರಲೇಬೇಕೆಂದೇನಿಲ್ಲ. ದೇವರು ಎಂಬ ಪದ ನನ್ನ ಮನಸ್ಸಿನಲ್ಲಿ ಇಲ್ಲದೇ ಇರಬಹುದು. ಆದರೆ ಸತತವಾಗಿ ಬದಲಾವಣೆ ಹೊಂದುತ್ತಿರುವ ಈ ಜಗತ್ತಿನ ಹಿನ್ನೆಲೆಯಲ್ಲಿ ಇರುವ ನಿತ್ಯವೂ, ಅವಿಕಾರಿಯೂ ಆದ ವಸ್ತುವೊಂದು ಇದೆ ಎಂಬುದು ಸಹಜವಾಗಿಯೇ ನನ್ನ ಬುದ್ಧಿಗೆ ವಿಷಯವಾಗಿ ಗೋಚರಿಸುತ್ತದೆ.

ಸ್ವಾಮಿಗಳು: ಸ್ವಲ್ಪ ವಿವರಿಸಿ.

ಎ:  ಜಗತ್ತಿನಲ್ಲಿ ಬೆಳಕು-ಕತ್ತಲೆ, ಕ್ರಿಯಾತ್ಮಕತೆ-ಜಡತ್ವ, ಸುಖ-ದುಃಖ, ಹುಟ್ಟು ಮತ್ತು ಸಾವು ಮುಂತಾದ ಅನೇಕ ವೈರುಧ್ಯಗಳನ್ನು ಅಥವಾ ದ್ವಂದ್ವಗಳನ್ನು ಅಲ್ಲಗಳೆಯುವಂತಿಲ್ಲ. ನನ್ನ ಊಹೆ ಈ ರೀತಿಯದ್ದು. ಜಗತ್ತಿನಲ್ಲಿ ಬದಲಾವಣೆ ಇರುವಂತೆಯೇ ಅದಕ್ಕೆ ವಿರುದ್ಧವಾದ ಬದಲಾವಣೆ ಇಲ್ಲದ ಅವಿಕಾರಿ ವಸ್ತುವೊಂದು ಅದರ ಹಿನ್ನೆಲೆಯಲ್ಲಿ ಇರಬೇಕು. ಪ್ರತಿಕ್ಷಣವೂ ಪ್ರತಿ ವಸ್ತುವೂ ನಾಶವಾಗುತ್ತಿರುವಂತೆ ಆ ನಾಶದ ಹಿನ್ನೆಲೆಯಲ್ಲಿ ನಾಶರಹಿತವಾದ ವಸ್ತುವೊಂದು ಇರಲೇಬೇಕು, ಹೀಗೆ ನಾನು ಅನೇಕ, ಅನಿತ್ಯ, ಅಸಮರೂಪ ಹಾಗೂ ಹಾಗೂ ವಿಕಾರಿಯಾದ ವಸ್ತುಗಳ ಆಧಾರದಿಂದ ಏಕ, ನಿತ್ಯ, ಸಮರೂಪ ಹಾಗೂ ಅವಿಕಾರಿಯಾದ ವಸ್ತುವನ್ನು ತರ್ಕಿಸುತ್ತೇನೆ. ನನ್ನ ಈ ರೀತಿಯ ಊಹೆ ಜಗತ್ತಿನ ಎಲ್ಲ ವಸ್ತುಗಳಿಗೂ ಅನ್ವಯಿಸುತ್ತದೆ.

 ಸ್ವಾಮಿಗಳು: ಹಾಗಾದೆ ಕುದುರೆ ಎಂಬ ವಸ್ತುವಿನ ವಿರುದ್ಧವೇನು?  ಕುದುರೆ ಎಂಬುದು ಇಂದ್ರಿಯಗಳಿಗೆ ಗೋಚರವಾಗುವ ಒಂದು ಭಾವಾತ್ಮಕ ವಿಷಯ. ಆದ್ದರಿಂದ ಅದಕ್ಕೆ ವಿರುದ್ಧವಾದ ಅಸ್ತಿತ್ವವನ್ನು ಊಹಿಸಲು ನಿಮಗೆ ಸಾಧ್ಯವಿರಬೇಕಲ್ಲವೇ? ಆ ವಿರುದ್ಧ ವಸ್ತುವಾದರೂ ಏನು? ನನ್ನ ಪ್ರಶ್ನೆ ಸ್ವಲ್ಪ ಅಸಂಗತವಾದರೂ ಇದಕ್ಕೆ ಉತ್ತರ ನೀಡುವ ಅಗತ್ಯವಿದೆ.

ಎ: ಕುದುರೆಗೆ ''ಅಕುದುರೆ'' ಅಥವಾ ಕುದುರೆ ಇಲ್ಲದಿರುವುದೇ ಅದರ ವಿರುದ್ಧ.

ಸ್ವಾಮಿಗಳು: ಸರಿಯಾಗಿ ಹೇಳಿದಿರಿ. ಆದರೆ ಈ ''ಅಕುದುರೆ''ಯು ಒಂದು ಭಾವಾತ್ಮಕ ನೈಜ ವಸ್ತುವೋ? ಅಥವಾ ನಿಷೇಧಾತ್ಮಕ ಮಿಥ್ಯಾವಸ್ತುವೋ?  ಅದೊಂದು ಪ್ರಾಣಿಯೋ ಅಥವಾ ನಿಮ್ಮ ಈ ''ಅಕುದುರೆ''ಯ ಕಲ್ಪನೆಯು ಜಗತ್ತಿನ ಉಳಿದ (ಕುದುರೆಯ ಹೊರತಾದ) ಎಲ್ಲ ವಸ್ತುಗಳನ್ನು ಒಳಗೊಂಡಿದೆಯೋ?

ಎ: ಖಚಿತವಾಗಿ ಹೇಳಬೇಕೆಂದರೆ ಅದು ಜಗತ್ತಿನ ಇತರ ಎಲ್ಲ ವಸ್ತುಗಳನ್ನೂ ಒಳಗೊಂಡಿದೆ. ಈ ಅರ್ಥದಲ್ಲಿ ಒಂದು ಕಲ್ಲು ಕೂಡ ''ಅಕುದುರೆ''ಯಾಗುತ್ತದೆ. ಆದರೆ ನಾವು ಅನ್ವಯಿಸುತ್ತಿರುವ ನಿಷೇಧವು ಕೇವಲ ಕುದುರೆಗೆ ಸಂಬಂಧಿಸಿರುವುದರಿಂದ ''ಅಕುದುರೆ'' ಎಂಬುದು ಒಂದು ಭಾವಾತ್ಮಕ ವಸ್ತುವೆಂದೇ ಹೇಳಬೇಕಾಗುತ್ತದೆ. ಅಂದರೆ ಕುದುರೆಯಲ್ಲಿರುವ ''ಅಶ್ವತ್ವ'' ಎಂಬ ವಿಶೇಷಣವನ್ನು ಅದರ ವಿರುದ್ಧದಲ್ಲಿ ನಿಷೇಧಿಸುವುದು ಸಾಕು ಎನಿಸುತ್ತದೆ. ಹಾಗೆ ಮಾಡಿದಾಗ ''ಅಕುದುರೆ''ಯು ''ಕುದುರೆ ಅಲ್ಲದಿರುವ ಪ್ರಾಣಿ'' ಎಂದಾಗುತ್ತದೆ.

ಸ್ವಾಮಿಗಳು: ಅಂದರೆ ವಸ್ತುವೊಂದರ ವಿರುದ್ಧವು ಆ ವಸ್ತುವಿನ ವರ್ಗಕ್ಕೆ ಸೇರಿದ್ದು, ಅದು ಆ ವಸ್ತುವು ಹೊಂದಿರಬಹುದಾದ ಯಾವುದೋ ಒಂದು ವಿಶೇಷಣದ ವಿಷಯದಲ್ಲಿ ವಸ್ತುವಿಗಿಂತಲೂ ಭಿನ್ನವಾಗಿರುತ್ತದೆ. ಅಲ್ಲವೇ?
ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಆ ವಸ್ತುವಿಗೆ ಪ್ರಪಂಚದಲ್ಲಿರುವ ಬೇರೆ ಯಾವುದೇ ವಸ್ತುವಿಗೆ ''ಸಂಪೂರ್ಣವಾದ ವಿರೋಧ'' ''ಇರುವುದೇ ಇಲ್ಲ''. ವಸ್ತುವೊಂದರಲ್ಲಿ ಇರುವ ಹಾಗೂ ಇನ್ನೊಂದರಲ್ಲಿ ಇಲ್ಲದಿರುವ ''ವಿಶೇಷವೇ'' ನಮ್ಮನ್ನು ಅವೆರಡು ''ಪರಸ್ಪರ ವಿರುದ್ಧ'' ಗಳೆಂದು ಚಿಂತಿಸುವಂತೆ ಮಾಡುತ್ತದೆ. 
ಬೆಳಕಿನ ಪ್ರಖರತೆಯನ್ನು ನಾವು ಕತ್ತಲೆಯ ದೃಷ್ಟಿಕೋನದಿಂದ ನೋಡಲು ಸಾಧ್ಯ. ಹಾಗೆಯೇ ಕತ್ತಲೆಯನ್ನು ಬೆಳಕಿನ ಮಾನದಿಂದ ಅಳೆಯಲೂ ಸಾಧ್ಯ. ಹೀಗೆ ಬೆಳಕು ಕತ್ತಲೆಗಳು ಸಂಪೂರ್ಣ ದ್ವಂದ್ವಗಳಾಗದೇ ಪರಸ್ಪರ ಸಾಪೇಕ್ಷ ವಸ್ತುಗಳಾಗಿ ಪರಿಣಮಿಸಿ ನಿಮ್ಮ ವೈರುಧ್ಯ ಸಿದ್ಧಾಂತವು ಕುಸಿದು ಬೀಳುತ್ತದೆ.

ಅಲ್ಲದೇ ತರ್ಕದ ಎಲ್ಲೆಯ ಬಗ್ಗೆ ನಿವು ತಪ್ಪು ತಿಳಿದಿರುವಿರೆಂದು ತೋರುತ್ತದೆ. ನಾನು ಈ ಮೊದಲೇ ಹೇಳಿದಂತೆ ''ತರ್ಕಿಸಬಹುದಾದ ವಸ್ತುವೊಂದಿದೆ'' ಎಂಬ ಪೂರ್ವಜ್ಞಾನವಿಲ್ಲದೇ ತರ್ಕದ ಪ್ರಕ್ರಿಯೆಯೇ ಪ್ರಾರಂಭವಾಗುವುದಿಲ್ಲ. ತನ್ನ ಜೀವನದಲ್ಲಿ ಎಂದೂ ಬೆಂಕಿಯನ್ನು ಕಂಡು ಕೇಳದೇ ಇದ್ದವನು ದೂರದಿಂದ ಹೊಗೆಯನ್ನು ನೋಡಿದ ಕೂಡಲೇ ಅಲ್ಲಿ ಬುಡದಲ್ಲಿ ಬೆಂಕಿ ಇದೆ ಎಂದು ಊಹಿಸಲಾರ. (ಹಾಗೆ ಊಹಿಸಬೇಕಾದರೆ ಅವನು ಈ ಮೊದಲು ಒಮ್ಮೆಯಾದರೂ  ಬೆಂಕಿಯನ್ನು ನೋಡಿರಬೇಕು ಹಾಗೂ ಅದರಿಂದ ಹೊರಡುವ ಹೊಗೆಯ ಬಗ್ಗೆ ಅವನಿಗೆ ಗೊತ್ತಿರಲೇಬೇಕು.)  ಆ ಸ್ಥಿತಿಯಲ್ಲಿ ಅವನ ಇಂದ್ರಿಯಗಳಿಗೆ  ಗೋಚರವಾಗುತ್ತಿರುವ ವಸ್ತುವು(ಹೊಗೆಯು)  ತನ್ನ ಬಗ್ಗೆ ಮಾತ್ರ ಅವನಿಗೆ ವಿವರಣೆ ನೀಡಬಲ್ಲದ್ದಾಗಿರುತ್ತದೆ.(ಅದಕ್ಕೆ ಕಾರಣವಾದ ಬೆಂಕಿಯ ಸೂಚನೆಯನ್ನು ಅದು ನೀಡುವುದಿಲ್ಲ)  ಇದನ್ನು ಬೇರೆ ರೀತಿ ಹೇಳಬೇಕೆಂದರೆ (ಬೆಂಕಿಯನ್ನು ನೋಡಿಯೇ ಇರದ) ನೋಡುಗನಿಗೆ ಹೊಗೆಯೇ ಸತ್ಯವಾಗಿರುತ್ತದೆ. ಬೆಂಕಿಯಲ್ಲ.  ''ಗೋಚರವಾಗುತ್ತಿರುವ ವಸ್ತುವು ನಿರಪೇಕ್ಷವಲ್ಲ. ಅದು ತನ್ನ ಅಸ್ತಿತ್ವಕ್ಕೆ ಇನ್ನೊಂದು ವಸ್ತುವನ್ನು ಅವಲಂಬಿಸಿದೆ'' ಎಂದು ಈ ಮೊದಲೇ ನಿಮಗೆ ತಿಳಿಯದೇ ಇದ್ದಾಗ, ಆ ವಸ್ತುವಿನ ಹಿಂದೆ ಇರಬಹುದಾದ ಮತ್ತೊಂದು ವಸ್ತುವನ್ನು ತಿಳಿಯಬೇಕೆಂಬ ಆಸಕ್ತಿ ನಿಮ್ಮಲ್ಲಿ ಮೂಡುವುದೇ ಇಲ್ಲ. ಹಾಗೆಯೇ, ನಾವು ಅವಿಕಾರಿಯಾದ ವಸ್ತುವಿನ ಬಗ್ಗೆ ಕೇಳದೇ ಇದ್ದಲ್ಲಿ, ನಾವು ಪ್ರಪಂಚವನ್ನು ಅದು ನಮ್ಮ ಇಂದ್ರಿಯಗಳಿಗೆ ಗೋಚರಿಸುವ ರೀತಿಯಲ್ಲಿಯೇ ಗ್ರಹಿಸುತ್ತೇವೆ.  ಈ ವಿಕಾರಿಯಾದ ಜಗತ್ತೇ ನಮಗೆ ಅಂತಿಮ ಸತ್ಯವಾಗಿ ತೋರುತ್ತಾ ಇರುತ್ತದೆ. ಅಂತಹ ಜಗತ್ತೇ ಎಲ್ಲರ ಇಂದ್ರಿಯಗಳಿಗೆ ಗೋಚರವಾಗುವುದರಿಂದ ಅದರ ಅಸ್ತಿತ್ವಕ್ಕೆ ಹೆಚ್ಚಿನ ವಿವವರಣೆ ಬೇಕಾಗಿರುವುದಿಲ್ಲ. ಬದಲಾವಣೆ ಹೊಂದುವ ಅದರಲ್ಲಿ ಹೆಚ್ಚಿನದು ಏನು ತಾನೇ ಇದ್ದೀತು?  ವಿಕಾರವು ಅದರ ಸ್ವಭಾವ. ತನ್ನ ಆ ''ಸ್ವಭಾವ''ವನ್ನು ಕಳೆದುಕೊಂಡರೆ ಅದು ''ಪ್ರಪಂಚ'' ಅನ್ನಿಸಿಕೊಳ್ಳುವುದಿಲ್ಲ. ನಮಗೆ ಅವಿಕಾರಿ ವಸ್ತುವಿನ ಪೂರ್ವಜ್ಞಾನವಿದ್ದಲ್ಲಿ ಮಾತ್ರ ಅದಕ್ಕೂ ಮತ್ತು ಈ ಜಗತ್ತಿಗೂ ಇರುವ ಸಂಬಂಧವನ್ನು ನಾವು ಸಾಬೀತುತುಪಡಿಸಬಹುದು. ಅವಿಕಾರೀ ವಸ್ತುವಿನ ಅಸ್ತಿತ್ವವನ್ನು ತಿಳಿಸಿ ತನ್ಮೂಲಕ ನಮ್ಮನ್ನು ವಿಚಾರದ ಜಾಡಿನಲ್ಲಿ ಪ್ರೇರೇಪಿಸಲು ನಮಗೆ ಶೃತಿಯ ಅಗತ್ಯ ಇದೆ. ತರ್ಕ, ವಿಚಾರ, ಬುದ್ಧಿ, ಯುಕ್ತಿ, ಅಥವಾ ಅನುಮಾನ- ಇವುಗಳು ಈ ನಿಟ್ಟಿನಲ್ಲಿ ನಮಗೆ ಸಹಕಾರಿಯೇನೋ ಹೌದು. ಆದರೆ ಶೃತಿಯ ಸುರಕ್ಷಿತ ಮಾರ್ಗದರ್ಶನವಿಲ್ಲದೇ ಬರಿಯ ತರ್ಕ ಕತ್ತಲೆಯಲ್ಲಿನ ಅನ್ವೇಷಣೆಯಂತೆ.

ಅಲ್ಲದೇ ''ಈ ಜಗತ್ತಿನ ಪ್ರತಿ ವಸ್ತುವೂ ವಿಕಾರಕ್ಕೆ ಒಳಗಾಗುತ್ತಿದೆ'' ಎಂಬ ಇಂದ್ರಿಯಗೋಚರ ವಿಷಯದ ಆಧಾರದಿಂದ ನೀವು ಮತ್ತೇನ್ನೋ ತರ್ಕಿಸಲು ಬಯಸಿದರೆ ನಿಮ್ಮ ಆ ತರ್ಕವು ಈ  ಮಾದರಿಗೆ ಸೇರುತ್ತದೆ.
ಜಗತ್ತಿನ ಪ್ರತಿಯೊಂದು ವಸ್ತುವೂ ವಿಕಾರಕ್ಕೆ ಒಳಗಾಗುತ್ತಿರುತ್ತದೆ. ಆದ್ದರಿಂದ ಅದರ ಹಿನ್ನೆಲೆಯಲ್ಲಿ ಇರಬಹುದಾದ ಇನ್ನೊಂದು ವಸ್ತುವೂ ವಿಕಾರಿ'' ಅಂದರೆ ನಿಮ್ಮ ಅನುಭವವು ನಿಮಗೆ ಇರುವುದೆಲ್ಲವೂ ವಿಕಾರಿಯೆಂದು ಹೇಳಿದಲ್ಲಿ ನಿಮ್ಮ ತರ್ಕವು ವಿಕಾರಿಯಲ್ಲದ ಮತ್ತಾವುದೋ ವಸ್ತುವಿನ ಬಗ್ಗೆ ತಿಳಿಸಲು ಸಾಧ್ಯವಿಲ್ಲ. ಬದಲಾಗಿ ಆ ಮತ್ತಾವುದೋ ವಸ್ತುವು ಕೂಡ ಇಂದ್ರಿಯಪ್ರಪಂಚದಂತೆಯೇ ವಿಕಾರಿಯೆಂದು ಆ ತರ್ಕ ಹೆಳುತ್ತದೆ. ಹೀಗೆ ತರ್ಕದ ಎಲ್ಲೆಯಲ್ಲಿಯೂ ಕೂಡ ನೀವು ಇಂದ್ರಿಯವಿಷಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ತರ್ಕವು ಇಂದ್ರಿಯಗ್ರಾಹ್ಯ ವಿಷಯಗಳ ವ್ಯಾಪ್ತಿಯಲ್ಲೇ ಸುತ್ತುತ್ತದೆ. (ಅದು ಇಂದ್ರಿಯಗಳಿಂದ ಪಡೆದ ಜ್ಞಾನದ ಆಧಾರದ ಮೇಲೆ ನಿಂತಿರುತ್ತದೆ.)
ಹೆಚ್ಚೆಂದರೆ ತರ್ಕವು ನಿಮ್ಮನ್ನು '' ಅವಿಕಾರಿಯಾದ ಯಾವುದೋ ಒಂದು ವಸ್ತುವು ಇರಬಹುದು'' ಎಂಬ ಮಟ್ಟಕ್ಕೆ ಒಯ್ಯಬಹುದೇ ಹೊರತು ಅದು (ತರ್ಕವು) ಖಚಿತವಾಗಿ '' ಅಂತಹ ವಸ್ತುವೊಂದಿದೆ'' ಎಂದು ಹೇಳಲಾರದು.

ಎ: ''ಶೃತಿಯು ಅಪೌರುಷೇಯ'', ವೇದವೇ ಜಗತ್ತಿನ ಎಲ್ಲಧರ್ಮಗಳಿಗೆ ಮೂಲ (ವೇದೋsಖಿಲೋ ಧರ್ಮಮೂಲಂ)  ಎಂಬ ಮಾತುಗಳು ಉತ್ಪ್ರೇಕ್ಷೆ ಎಂದು ನಾನು ಇಷ್ಟು ದಿನ ಭಾವಿಸಿದ್ದೆ. ಅದರ ಕುರಿತು ಈ ರೀತಿಯ ವಿವರಣೆಯನ್ನು ನಾನು ಕೇಳಿರಲೇ ಇಲ್ಲ. ಈ ವಿವರಣೆಗಾಗಿ ನಿಮಗೆ ನಾನು ಋಣಿಯಾಗಿದ್ದೇನೆ.
 ಆದರೆ ನನ್ನ ಮೊದಲ ಸಮಸ್ಯೆಯೇ ಪುನಃ ಉದ್ಭವಿಸುತ್ತದಲ್ಲಾ..?  ವಾಸ್ತವವಾಗಿ ಈ ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ. ಇವೆಲ್ಲವೂ ಮನುಷ್ಯನನ್ನು ''ಬೆಳಕಿಗೆ ಒಯ್ಯುವುದು ತಮ್ಮ ಧರ್ಮವೊಂದೇ'' ಎಂದು ಸ್ವಯಂ ಘೋಷಿಸಿಕೊಳ್ಳುತ್ತವೆ. ಹೀಗೆ ಪರಸ್ಪರ ವಿರೋಧವಾಗಿರುವ ಈ ಅನೇಕ ಧರ್ಮಗಳ ಔಚಿತ್ಯವನ್ನು  ಕುರಿತ ನನ್ನ ಮೊದಲ ಪ್ರಶ್ನೆಯು ಪರಿಹರಿಯದೇ ಹಾಗೆಯೇ ಉಳಿಕೊಂಡುಬಿಡುತ್ತದೆ.

ಸ್ವಾಮಿಗಳು:  ಈ ವೈವಿಧ್ಯವು ''ಅಧಿಕಾರತತ್ವ''ದ ಮೇಲೆ ನಿಂತಿದೆಯೆಂದು ನಾನು ಈ ಮೊದಲೇ ನಿಮಗೆ ಹೇಳಿದ್ದೇನೆ.  ವಾಸ್ತವವಾಗಿ ಅಧಿಕಾರವೇ ಮಾನವನ ಕ್ರಿಯೆಗಳನ್ನು ನಿಯಂತ್ರಿಸುವುದು. ಈ ಅಧಿಕಾರದಲ್ಲಿ ವಿವಿಧ ಹಂತಗಳಿವೆ. ಅವುಗಳಿಗೆ ಅನುಸಾರವಾಗಿ ವಿವಿಧ ಧರ್ಮಗಳಿವೆ.

ಎ: ಅರ್ಥವಾಯಿತು. ಆದರೆ ಯಾವ ಧರ್ಮವೂ ತನ್ನನ್ನು ನಿರ್ದಿಷ್ಟ ಮಟ್ಟದ ಜನರಿಗೆ ಸೀಮಿತಗೊಳಿಸಿಕೊಳ್ಳಲು ಸಿದ್ಧವಿರುವುದಿಲ್ಲ. ಪ್ರತಿಯೊಂದು ಧರ್ಮವೂ(Religion) ತನ್ನನ್ನು ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಿಕೊಳ್ಳುತ್ತದೆ.

ಸ್ವಾಮಿಗಳು: ಬಾಲಕನೊಬ್ಬನಿಗೆ ಒಂದೇ ಸಮಯದಲ್ಲಿ ನಾಲ್ಕು ಜನರು ನಾಲ್ಕು ರೀತಿ ಆದೇಶಿಸಿದರು ಅಂತಿಟ್ಟುಕೊಳ್ಳೋಣ. ಒಬ್ಬರು ''ದೀಪ ಹಚ್ಚು'' ಎಂದರೆ ಮತ್ತೊಬ್ಬರು ''ಬತ್ತಿಯನ್ನು ಸರಿಮಾಡು'' ಎನ್ನುತ್ತಾರೆ. ಮೂರನೇಯವನು ''ಎಣ್ಣೆ ತುಂಬಿಸು'' ಅಂದರೆ ನಾಲ್ಕನೇಯವನು ''ದೀಪ ಆರಿಸು'' ಎನ್ನುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಬಾಲಕನಿಗೆ ಏನು ಮಾಡಬೇಕೆಂದು ತೋರುವುದಿಲ್ಲ. ಅವನಿಗೆ ಇವೆಲ್ಲವನ್ನೂ ಏಕಕಾಲದಲ್ಲಿ ಮಾಡಲು ಸಾಧ್ಯವಿರುವುದಿಲ್ಲ. ಆದರೆ ನಾಲ್ವರಲ್ಲಿ ಪ್ರತಿಯೊಬ್ಬರೂ ತಮ್ಮ ಆಜ್ಞೆಯನ್ನೇ ಪಾಲಿಸಬೇಕೆಂದು ಲಂಬಿಸಿ ಹೇಳುತ್ತಾರೆ. ಆಗ ಆ ಬಡಪಾಯಿ ಏನು ಮಾಡಬೇಕು? ಅಂತಹ ಸಮಯದಲ್ಲಿ ಈ ನಾಲ್ವರ ಹೊರತಾಗಿ ಐದನೇವನೊಬ್ಬ ಬಂದು ''ಒಂದು ಕತ್ತಿ ತೆಗೆದುಕೊಂಡು ಬಾ'' ಅಂತ ಹೇಳಿದರೆ ಈಗಾಗಲೇ ಇರುವ ನಾಲ್ಕು ಆಜ್ಞೆಗಳಿಗೆ ಐದನೇಯದನ್ನು ಸೇರಿಸಿದ ಹಾಗಾಗುತ್ತದೆ. ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ಆಜ್ಞೆಗಳಿಂದ ಬಾಲಕನ ಮನಸ್ಸು ಈಗಾಗಲೇ ಗೊಂದಲಕ್ಕೊಳಗಾಗಿರುತ್ತದೆ. ಅವನು ಈಗ ನಾಲ್ಕರ ಬದಲು ಐದರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ.  ಈ ಐದನೆಯವನ ಆಗಮನದಿಂದ ಆ ಬಾಲಕನ ಗೊಂದಲ ಪರಿಹಾರವಾಗುವುದರ ಬದಲಾಗಿ ಅದು ಹೆಚ್ಚಾಗುತ್ತದೆ.  ಆದರೆ ಐದನೇಯವರಿಗೆ ಆ ಹುಡುಗನ ಮೇಲೆ ಕನಿಕರ ಮೂಡಿ,  ಹುಡುಗನ್ನು ಆ ಇಕ್ಕಟ್ಟಿನಿಂದ ಪಾರು ಮಾಡಬೇಕು ಅಂತ ಐದನೇಯವನಿಗೆ  ಅನ್ನಿಸಿದಲ್ಲಿ, ಹಾಗೂ ಆ ಹುಡುಗನೂ ಕೂಡ ಐದನೇವನೆಡೆಗೆ ಉಳಿದ ನಾಲ್ವರ ಕಡೆಗೆ ತೋರಿದ ಶ್ರದ್ಧೆಗಿಂತ ಅಧಿಕ ಶ್ರದ್ಧೆಯನ್ನು ತೋರಿದಲ್ಲಿ ''ಕತ್ತರಿಯನ್ನು ಮಾತ್ರ ತೆಗೆದುಕೊಂಡು ಬಾ, ಉಳಿದವರ ಆಜ್ಞೆಗಳನ್ನು ಪಾಲಿಸುವ ಅಗತ್ಯವಿಲ್ಲ'' ಎಂದು ಒತ್ತಿ ಹೇಳಬೇಕಾಗುತ್ತದೆ. ಅಂದರೆ ತಬ್ಬಿಬ್ಬಾಗಿರುವ ಬಾಲಕನಿಗೆ ಮಾರ್ಗದರ್ಶನ ಸೂಚಿಸುವ ಸಲುವಾಗಿ ಅವರು ತಮ್ಮ ಆಜ್ಞೆಯ ಹೊರತಾಗಿ ಇತರ ಯಾವ ಆಜ್ಞೆಯೂ ಪಾಲಿಸಲು ಯೋಗ್ಯವಲ್ಲ ಎಂದು ಹೇಳಲೇಬೇಕಾಗುತ್ತದೆ. ಶ್ರದ್ಧೆಯಿಂದ ತಮ್ಮನ್ನು ಆಶ್ರಯಿಸಿರುವ ಸಾಧಕನಿಗೆ ಮಾರ್ಗದರ್ಶನ ನೀಡಬಯಸುವ ಯಾವುದೇ ಗುರುವು(ಶಿಷ್ಯನ ಮೇಲೆ ಕನಿಕರದಿಂದ ಅವನ ಗೊಂದಲ ನಿವಾರಿಸಲು, ಸಮಯದ ವ್ಯರ್ಥತೆಯನ್ನು ತಪ್ಪಿಸಲು) ''ಇತರರ ಆದೇಶಗಳನ್ನು ತೊರೆದು ನಾನು ಹೇಳಿದ ಹಾಗೆ ಮಾತ್ರ ಮಾಡು..ಸಾಕು'' ಎನ್ನಬೇಕಾಗುತ್ತದೆ.

ಎ: ಅಂದರೆ ಇವರೆಲ್ಲರೂ (Religion ಗಳ ಪ್ರವರ್ತಕರು, ಮತಪ್ರವರ್ತಕರುಗಳು)  ತಮ್ಮಲ್ಲಿಗೆ ಬುವವರ ಯೋಗ್ಯತೆ, ಕಾಲ ಹಾಗೂ ಸಂದರ್ಭಗಳಿಗೆ ಅನುಸಾರವಾಗಿ ತಮ್ಮ ಬೋಧನೆಗಳನ್ನು ನೀಡಿದ್ದಾರೆ. ಬೇರೆ ರೀತಿ ಹೇಳಬೇಕೆಂದರೆ  ಸ್ವತಃ ನಿರಪೇಕ್ಷ ಸತ್ಯವನ್ನು ಅರಿತವರಾಗಿದ್ದರೂ ಅವರುಗಳು ಜನರಿಗೆ ಸಾಪೇಕ್ಷವಾದ ಸತ್ಯವನ್ನು ಮಾತ್ರ ಹೇಳುತ್ತಿದ್ದರು. ಜನರಿಗೆ ಏನು ಬೋಧಿಸಬೇಕು, ಏನು ಬೋಧಿಸಬಾರದು ಎಂಬುದನ್ನು ನಿರ್ಧರಿಸುವಲ್ಲಿ ಇವರು ಸತ್ಯನಿಷ್ಠೆಗಿಂತಲೂ ಹೆಚ್ಚಾಗಿ ಅನುಕೂಲಸಿಂಧು ಮಾರ್ಗವನ್ನೇ ಅನುಸರಿಸಿದರು... ಅಲ್ಲವೇ?

ಸ್ವಾಮಿಗಳು: ಅವರುಗಳು ಜನರ ಅರ್ಹತೆ ಮತ್ತೆ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹಾಗೆ ಮಾಡಿದರು. (ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಅಲ್ಲ) ನಾನು ಈ ಮೊದಲೇ ಹೇಳಿದಂತೆ ತಣ್ಣೀರು ಆರೋಗ್ಯವಂತನ ದಣಿವನ್ನು ನೀಗಿದರೆ, ಜ್ವರಪೀಡಿತನಾದವನ ಖಾಯಿಲೆಯನ್ನು ಅದು ಹೆಚ್ಚು ಮಾಡುತ್ತದೆ. ವೈದ್ಯನು ಒಬ್ಬನಿಗೆ ತಣ್ಣೀರನ್ನು ಕುಡಿಯಲು ಹೇಳಿ, ಇನ್ನೊಬ್ಬನಿಗೆ ಅದನ್ನು ನಿಷೇಧಿಸಿದರೆ ಅವನನ್ನು(ವೈದ್ಯನನ್ನು) ಪಕ್ಷಪಾತಿ ಅಥವಾ ಮೋಸಗಾರ ಎನ್ನಲಾಗುವುದಿಲ್ಲ. ಒಬ್ಬ ವ್ಯಕ್ತಿಯ ಆಯಾಸವನ್ನು ಪರಿಹರಿಸಿ, ಮತ್ತೊಬ್ಬನ ರೋಗವನ್ನು ಹೆಚ್ಚು ಮಾಡಿತೆಂಬ ಕಾರಣಕ್ಕೆ ನೀರನ್ನೂ ದೂಷಿಸುವಂತಿಲ್ಲ.

ಎ:  ಹಾಗಾದರೆ ಒಬ್ಬ ''ಗುರು'' ಬೋಧನೆ ಮಾಡುತ್ತಿರುವ  ಸತ್ಯವು(ಧರ್ಮವು) ಸಾಪೇಕ್ಷವೋ ನಿರಪೇಕ್ಷವೋ ಎಂದು ಕಂಡುಕೊಳ್ಳುವುದು ಹೇಗೆ?

ಸ್ವಾಮಿಗಳು: ಅದನ್ನು ನೀವು ಯಾಕೆ ತಿಳಿಯಬೇಕು? ನಿಮ್ಮ ಉದ್ದೇಶ ಜಗತ್ತಿನಲ್ಲಿರುವ ವಿವಿಧ ಗುರುಗಳಲ್ಲಿ ಇರುವ ಉಚ್ಚ-ನೀಚ  ಅಂತರವನ್ನು ಅಳೆಯುವುದೋ?  ನಿಮ್ಮ ಬದುಕಿನ ನಿಯಂತ್ರಣದ ಮೂಲಕ ''ಸುಖಶಾಂತಿಗಳನ್ನು ಪಡೆಯುವ ಮಾರ್ಗ''ವನ್ನು ಕಂಡುಕೊಳ್ಳುವುದೋ?

ಎ: ನನ್ನ ಉದ್ದೇಶ ಎರಡೂ ಆಗಿವೆ. ಯಾವ ಗುರುವು ಅಥವಾ ಧರ್ಮವು(religion) ಸತ್ಯಕ್ಕೆ ಸಮೀಪವಾಗಿದೆ? ಎಂದು ನಾನು ಮೊದಲು ತಿಳಿಯಬೇಕು. ಹಾಗೆ ತಿಳಿದ ನಂತರವೇ ಆ ಧರ್ಮದ ಹಾಗೂ ಆ ಗುರುವಿನ ಬೋಧನೆಗೆ ಅನುಗುಣವಾಗಿ ನಾನು ನನ್ನ ಬದುಕನ್ನುಮಾರ್ಪಡಿಸಿಕೊಳ್ಳಲು ಸಾಧ್ಯ.

ಸ್ವಾಮಿಗಳು: ಇಬ್ಬರು ವ್ಯಕ್ತಿಗಳ ಸಾಮರ್ಥ್ಯವನ್ನು ತುಲನೆ ಮಾಡಲು ಬಯಸುವ ವ್ಯಕ್ತಿ ಆ ಇಬ್ಬರೂ ವ್ಯಕ್ತಿಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆದಿರಬೇಕು. ಹಾಗಿಲ್ಲದೇ ಇದ್ದಲ್ಲಿ ಅವರಲ್ಲಿರುವ ಅನೇಕ ದೋಷಗಳು ಅಳೆಯುವವನ ಗಮನಕ್ಕೆ ಬರುವುದೇ ಇಲ್ಲ. ಕ್ರಿಸ್ತ, ಮೊಹಮ್ಮದ್, ಬುದ್ಧ ಮುಂತಾದ ಮತಪ್ರವರ್ತಕರ ಬುದ್ಧಿಗಳ ಮೇಲೆ ನಿರ್ಣಯ ಕೊಡುವಷ್ಟು ಬುದ್ಧಿಸಾಮರ್ಥ್ಯವನ್ನು ನಿಮಗೆ ದೇವರು ಕರುಣಿಸಿದ್ದಾನೆ ಅಂತ ನೀವು ಭಾವಿಸಿದ್ದೀರೋ?  ಎರಡು ಧರ್ಮಗಳಲ್ಲಿ ಯಾವುದು ಶ್ರೇಷ್ಠ ಎಂದು ತಿಳಿಯಬೇಕಾದರೆ ಆ ಎರಡನ್ನೂ ಕೂಲಂಕುಶವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಎರಡು ಧರ್ಮಗಳ ಮಾತು ಆಚೆಗಿರಲಿ. ಒಂದೇ ಒಂದು ಧರ್ಮವನ್ನು ಸಂಪೂರ್ಣವಾಗಿ ನೀವು ತಿಳಿದಿದ್ದೀರೋ? ನಮ್ಮ ಜೀವನವು ಧರ್ಮದ ಒಂದು ಹಂತವನ್ನು ಅರ್ಥಮಾಡಿಕೊಳ್ಳುವಷ್ಟೂ ದೀರ್ಘವಲ್ಲ. (ಆಯುಸ್ಸು ಸಾಕಾಗುವುದಿಲ್ಲ). ಹೀಗಿರುವಾಗ ನಿಮ್ಮ ಎಲ್ಲ ಅಧ್ಯಯನ ಮುಗಿದ ಮೇಲೆ ಅದನ್ನು(ಅಧ್ಯಯನಮಾಡಿ ಒಪ್ಪಿಕೊಂಡ ಧರ್ಮವನ್ನು) ಕಾರ್ಯರೂಪಕ್ಕೆ ತರಲಿಕ್ಕೆ ನಿಮ್ಮ ಬಳಿ ಕಾಲ ಇರುತ್ತದೆಯೇ?

ಎ: ಹಾಗಾದರೆ ಈಗ ನೀವು ನನಗೆ ನೀಡುವ ಅನುಷ್ಠಾನಯೋಗ್ಯವಾದ ಉಪದೇಶವೇನು? (ನಾನೇನು ಮಾಡಲಿ?)

 ಸ್ವಾಮಿಗಳು:  ನೀವು ದೇವರನ್ನು ನಂಬುತ್ತೀರಲ್ಲವೇ?

ಎ: ಹೌದು. ನಂಬುತ್ತೇನೆ

ಸ್ವಾಮಿಗಳು: ಆ ದೇವರು ಸರ್ವಜ್ಞ(ಎಲ್ಲ ತಿಳಿದವನು) ಎಂದು ನಂಬುತ್ತೀರೋ?

ಎ:  ಹೌದು. ಖಂಡಿತವಾಗಿ.

ಸ್ವಾಮಿಗಳು:  ಜಗತ್ತಿನಲ್ಲಿ ನಡೆಯುವ ಎಲ್ಲ ಸಂಘಟನೆಗಳಲ್ಲೂ ಆತನ ಸರ್ವಜ್ಞತ್ವವು ಪ್ರಕಟವಾಗುತ್ತದೆ ಎಂಬುದನ್ನು ಮನಗಂಡಿದ್ದೀರೊ?

ಎ: ಹೌದು. ನಾನು ಗಮನಿಸಿದ್ದೇನೆ.

ಸ್ವಾಮಿಗಳು: ಹಾಗಾದರೆ ಆ ಸರ್ವಜ್ಞತ್ವವು ನಿಮ್ಮ ಜೀವನದಲ್ಲೂ ವ್ಯಕ್ತವಾಗಿದೆ. ಅಲ್ಲವೇ?

ಎ: ಹೌದು.

ಸ್ವಾಮಿಗಳು: ನಿಮಗೆ ಜನ್ಮ ನೀಡುವಲ್ಲಿ ಭಗವಂತನಿಗೆ ಒಂದು ಉದ್ದೇಶ, ಅದರಲ್ಲೂ ಸದುದ್ದೇಶವೇ ಇದ್ದಿರಬೇಕಲ್ಲವೇ?

ಎ: ಹೌದು. ಈ ಜಗತ್ತಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕ ಅಲ್ಲ ಅನ್ನುವುದು ನನ್ನ ಗಮನಕ್ಕೆ ಬಂದಿದೆ.

ಸ್ವಾಮಿಗಳು: ಹಾಗಾದರೆ, ಭಗವಂತನ ದೃಷ್ಟಿಯಲ್ಲಿ  ಕ್ರೈಸ್ತ ಧರ್ಮವೊಂದೇ ನಿಮ್ಮ ಅರ್ಹತೆಗೆ ಸರಿಯಾಗಿ ಹೊಂದುತ್ತದೆ. ಕ್ರೈಸ್ತರಾದ ದಂಪತಿಗಳ ಹೊಟ್ಟೆಯಲ್ಲಿ ನೀವು ಹುಟ್ಟಿದುದರ ಹಿಂದೆ ಇರಬಹುದಾದ ಉದ್ದೇಶದ ವಿವರಣೆಯನ್ನು ಅರಸುವ ಅಗತ್ಯವಿಲ್ಲ. ನಾವು ಪಾಲಿಸಬೇಕಾದ ಧರ್ಮದ ಕುರಿತು ನಾವು ಭಗವಂತನಲ್ಲಿ ವಿಶ್ವಾಸ ಇಡುವುದೇ ಲೇಸು.  ನಮ್ಮ ಹಾದಿಯನ್ನು ನಿರ್ಣಯಿಸಲು ನಮ್ಮ ಬಡಬುದ್ಧಿಗೆ ಸಾಧ್ಯವಿಲ್ಲವೆಂದು ಆತನಿಗೆ ಗೊತ್ತು. ಆದ್ದರಿಂದ ಆತನೇ ನಮ್ಮ ಮಾರ್ಗವನ್ನು ನಿರ್ಧರಿಸುವ ಹೊಣೆ ಹೊತ್ತಿದ್ದಾನೆ. ನಮ್ಮ ಮನೋಭಾವಕ್ಕೆ ಚೆನ್ನಾಗಿ ಒಗ್ಗುವ ದೇಶ, ಕಾಲ ಮತ್ತು ಪರಿಸರ ಹಾಗೂ ಧರ್ಮದಲ್ಲಿ  ನಮಗೆ ಜನ್ಮ ನೀಡಿದ್ದಾನೆ. ಆತನು ಈ ರೀತಿ ನಮ್ಮ ಮೇಲೆ ಕರುಣೆಯಿಂದ ನಮ್ಮ ಅನುಕೂಲಕ್ಕಾಗಿಯೇ ಮಾಡಿರುವ ಯೋಜನೆಯನ್ನು ನಾವು ಏಕೆ ತಿರಸ್ಕರಿಸಬೇಕು? ''ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನ'' ಎಂಬ ಅಸಾಧ್ಯ ಸಾಹಸಕ್ಕೆ ಕೈ ಹಾಕಿ ಸಮಯ ಏಕೆ  ಹಾಳು ಮಾಡಿಕೊಳ್ಳಬೇಕು?

ಎ: ಕ್ರೈಸ್ತ ಧರ್ಮವನ್ನು ಅರ್ಥಮಾಡಿಕೊಳ್ಳಲು ಹಾಗೂ ಅದನ್ನು ಅನುಸರಿಸಲು ನಾನು ಸಾಧ್ಯವಿದ್ದಷ್ಟು ಶ್ರಮಿಸಿದ್ದೇನೆ. ಆದರೆ ಪುನಃ ಪುನಃ ಸಂದೇಹಗಳು ಸುಳಿಯುತ್ತವೆ. ಅವುಗಳನ್ನು ಪರಿಹರಿಸುವಂತಹ ವ್ಯಕ್ತಿಗಳನ್ನು ಸಂಧಿಸುವಲ್ಲಿ ವಿಫಲನಾಗಿದ್ದೇನೆ.  ಆ ಕಾರಣದಿಂದಲೇ ನಾನು ನನ್ನ ಗಮನವನ್ನು ಇತರ ಧರ್ಮಗಳೆಡೆಗೆ ಹರಿಸಿದ್ದು.

ಸ್ವಾಮಿಗಳು. ಕೇವಲ ಧರ್ಮವನ್ನು ಅಧ್ಯಯನ ಮಾಡಿದವರನ್ನು(ಪಂಡಿತರನ್ನು) ಸಂಧಿಸಿದರೆ ಪ್ರಯೋಜನವಿಲ್ಲ. ತಮ್ಮ ದೈನಂದಿನ ಧರ್ಮವನ್ನು ಕಾರ್ಯರೂಪಕ್ಕೆ ತಂದವರನ್ನು(ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡವರನ್ನು.. ಅನುಷ್ಠಾನ ಮಾಡುತ್ತಿರುವವರನ್ನು)  ಕಾಣುವವರೆಗೂ ನಿಮಗೆ ಧರ್ಮದ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವೇ ಇಲ್ಲ. ಲೌಕಿಕ ಉದ್ದೇಶಗಳಿಗಾಗಿ ನೀವು ಸಮುದ್ರ ಮತ್ತು ಆಕಾಶಗಳನ್ನು ದಾಟಲು ಸಿದ್ಧರಾಗಿಬಿಡುತ್ತೀರಿ. ಆದರೆ ಸತ್ಯದ ಕುರಿತ ಸಂದೇಹಗಳನ್ನು ಪರಿಹರಿಸುವ ಗುರುಗಳು ನಿಮ್ಮ ಮನೆಯ ಬಾಗಿಲಿಗೇ ಬರಬೇಕೆಂದು ಬಯಸುತ್ತೀರಿ. ''ಧರ್ಮ ಎನ್ನುವುದು ಬದುಕಿನ ಒಂದು ಕುತೂಹಲಕರ ಅಂಶ''  ಎಂಬ ನಿಮ್ಮ ಭಾವನೆ ಮೊದಲು ಬದಲಾಗಬೇಕು. ಯಾವಾಗ ನೀವು ''ಧರ್ಮ ಎನ್ನುವುದು ಬದುಕಿನ ಒಂದು ಅಂಗ ಮಾತ್ರ ಅಲ್ಲ, ಅದು ಇಡೀ ಬದುಕೇ ಆಗಿದೆ'' ಎಂಬ ತಿಳುವಳಿಕೆ ಪಡೆಯುತ್ತೀರೋ ಆಗ ಮಾತ್ರ ನೀವು ಸರಿಯಾದ ಗುರುವಿನ ಹುಡುಕಾಟ ಪ್ರಾರಂಭಿಸುತ್ತೀರಿ. ಅಲ್ಲಿಯ ವರೆಗೆ ಅಂತಹ ಅನಿವಾರ್ಯತೆ ಕಾಣುವುದಿಲ್ಲ. ಆ ತಿಳುವಳಿಕೆ ಬಂದಮೇಲೆ ಹುಡುಕಾಟ ತೀವ್ರವಾಗುತ್ತದೆ. ಗುರುವೂ ಸಿಕ್ಕೇ ಸಿಗುತ್ತಾನೆ. ಏಕೆಂದರೆ ಗುರು ಯಾವಾಗಲೂ ಸಿದ್ಧನೇ ಆಗಿರುತ್ತಾನೆ. ನಮ್ಮ ಪರಿಸರದಲ್ಲಿಯೇ ಇರುತ್ತಾನೆ.  ಆದರೆ ನಮ್ಮಲ್ಲಿ ಜ್ಞಾನದ ಹಸಿವು ತೀವ್ರವಾಗಿ ನಾವು ಪ್ರಾಮಾಣಿಕವಾಗಿ  ಹುಡುಕುವವರೆಗೂ ಅವನು ಸಿಗುವುದಿಲ್ಲ. (ಕಣ್ಣಿಗೆ ಬಿದ್ದಿದ್ದರೂ ಅರಿವಿಗೆ ಬಂದಿರುವುದಿಲ್ಲ).
ಕ್ರೈಸ್ತ ಧರ್ಮದಲ್ಲಿ ಅಂತಹ ಗುರುಗಳು ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಅಂಥವರು ಸದ್ದುಗದ್ದಲಗಳ ಈ ಪ್ರಪಂಚದಲ್ಲಿ ನಿಮ್ಮ ಪರಿಸರದಲ್ಲೇ ಇದ್ದಿರಬಹುದು. ಗಮನಕ್ಕೆ ಬಂದಿರಲಿಕ್ಕಿಲ್ಲ. ಏಕೆಂದರೆ ಅಂಥವರು ಈ ಜಗತ್ತಿಗೆ ಬೇಕಾಗಿರುವುದಿಲ್ಲ. ಅವರಿಗೂ ಈ ಜಗತ್ತಿನ ಗುರುತಿಸುವಿಕೆ ಬೇಕಾಗಿರುವುದಿಲ್ಲ. ಅವರಿಗೆ ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ನೀವು ಅಂತಹ ಗುರುವನ್ನು ನಿಮ್ಮ ಪರಿಸರದಲ್ಲೇ ಹುಡುಕಿ. ''ದಯಮಾಡಿ ನನ್ನ ಸಂದೇಹಗಳನ್ನು ಪರಿಹರಿಸಿ'' ಅಂತ ವಿನೀತರಾಗಿ ಕೇಳಿಕೊಳ್ಳಿ. ಆ ಕ್ಷಣವೇ ಅವರು ನಿಮ್ಮೆಲ್ಲ ಸಂಶಯಗಳನ್ನು ದೂರ ಮಾಡುತ್ತಾರೆ. ಕ್ರಮೇಣ ಕ್ರೈಸ್ತ ತಂದೆ ತಾಯಿಯಲ್ಲೇ ನಿಮ್ಮ ಜನ್ಮ ಏಕೆ ಆಯಿತು? ಅದರಲ್ಲಿ ಭಗವಂತನ ಉದ್ದೇಶ ಏನು ಅನ್ನೋದು ನಿಮ್ಮ ಅರಿವಿಗೆ ಬರುತ್ತದೆ.

ಎ: ನಿಮ್ಮ ಕೃಪಾಪೂರಿತ ಉಪದೇಶಗಳಿಗಾಗಿ ನಾನು ತಮ್ಮನ್ನು ಎಷ್ಟು ವಂದಿಸಿದರೂ ಕಡಿಮೆಯೇ. ದಯವಿಟ್ಟು ಇದೊಂದು ಮಾತು ಹೇಳಲು ನನಗೆ ಅನುಮತಿ ಕೊಡಿ. ನಾನು ಇಲ್ಲಿಗೆ ಬರುವಾಗ ನಾನು ಮೊದಲು ಇದ್ದದ್ದಕ್ಕಿಂತ ಉತ್ತಮ ಕ್ರೈಸ್ತನಾಗುವ ಅಭಿಲಾಷೆ ಹೊಂದಿರಲಿಲ್ಲ. ನನ್ನ ಅಭಿಲಾಷೆ ಹಿಂದೂ ಆಗಿ ಬದಲಾಗುವದಾಗಿತ್ತು. ಆದರೆ ತಮ್ಮ ಉಪದೇಶವು ನನ್ನನ್ನು ಇನ್ನೂ ಉತ್ತಮ ಕ್ರೈಸ್ತನಾಗುವಂತೆ ಮಾಡಿದೆ. ಕ್ರೈಸ್ತನನ್ನು, ಉತ್ತಮ ಕ್ರೈಸ್ತನನ್ನಾಗಿ, ಮುಸಲ್ಮಾನನನ್ನು ಇನ್ನೂ ಉತ್ತಮ ಮುಸಲ್ಮಾನನಾಗಿ, ಹಿಂದೂವನ್ನು ಉತ್ತಮ ಹಿಂದೂವನ್ನಾಗಿ ಮಾಡುವ, ಹೀಗೆ ಆಯಾ ಧರ್ಮದವರನ್ನು ಆಯಾ ಧರ್ಮದ ಚೌಕಟ್ಟಿನೊಳಗೆ ಇನ್ನೂ ಉತ್ತಮಗೊಳಿಸುವುದೇ ಸನಾತನ ಧರ್ಮವಾಗಿದ್ದಲ್ಲಿ ನಿಮ್ಮ ಈ ಸನಾತನ ಧರ್ಮವು ನಿಶ್ಚಿತವಾಗಿಯೂ ನಾನು ಈ ಹಿಂದೆ ಭಾವಿಸಿದ್ದಂಕ್ಕಿಂತಲೂ ವಿಶಾಲವಾಗಿದೆ.

ತಮ್ಮಿಂದ ಬೀಳ್ಕೊಳ್ಳುವ ಮುನ್ನ ಮತ್ತೊಮ್ಮೆ ತಮ್ಮ ಆಶೀರ್ವಾದ ಬೇಡುತ್ತೇನೆ.

ಸ್ವಾಮಿಗಳು: ಆಶೀರ್ವಾದ ನೀಡುವ ಯೋಗ್ಯತೆ ಇರುವುದು ಭಗವಂತನಿಗೆ ಮಾತ್ರ. ಆತನ ಕೃಪಾಶೀರ್ವಾದಗಳಿಗಾಗಿ ನಾವೆಲ್ಲರೂ ಆತನನ್ನು ಪ್ರಾರ್ಥಿಸಬೇಕು. ''ಆತನು ನಿಮಗೆ ದೃಢವಾದ ಶರೀರವನ್ನು ಮತ್ತು ಹರಿತವಾದ ಬುದ್ಧಿಶಕ್ತಿಯನ್ನು ಕರುಣಿಸಿದ್ದಾನೆ.'' ಎನ್ನುವುದನ್ನು ನಾನು ನಿಮಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಬಯಸುತ್ತೇನೆ.
ಒಬ್ಬನು ಅತ್ಯುತ್ತಮ ಕಲಾವಿದನಾಗಿದ್ದು ಅವನಿಗೆ ಅತ್ಯುತ್ತಮ ದರ್ಜೆಯ ಬಣ್ಣ ಹಾಗೂ ಕುಂಚಗಳ ಸೌಲಭ್ಯ ಇರಬಹುದು. ಅವನು ತನ್ನ ಕಲಾಕೃತಿ ರಚಿಸಲು ಉತ್ತಮವಾದ ವಸ್ತು-ವಿಷಯವನ್ನೇ ಆಯ್ದುಕೊಂಡಿರಬಹುದು. ಆದರೆ ಅವನು ಯಾವ ಆಧಾರವೂ ಇಲ್ಲದೇ ಬರಿಯ ಗಾಳಿಯಲ್ಲಿ ಚಿತ್ರವನ್ನು ಬರೆಯಲಾರ. ಚಿತ್ರವನ್ನು ಬರೆಯಲು ಅವನಿಗೆ ಒಂದು ಸ್ಥಿರವಾದ ಹಿನ್ನೆಲೆಯ ಅಗತ್ಯ ಇರುತ್ತದೆ. ಆ ಹಿನ್ನೆಲೆಯು ಬಟ್ಟೆ, ಗೋಡೆ, ಅಥವಾ ಉಪಯೋಗಕ್ಕೆ ಬಾರದ ಒಂದು ಒರಟು ವಸ್ತುವಾಗಿರಬಹುದು. ಆದ್ದರಿಂದ ನೀವು ದೈವದತ್ತವಾದ ನಿಮ್ಮ ಬುದ್ಧಿಶಕ್ತಿಯನ್ನು ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನಕ್ಕೆ, ಮೌಲ್ಯಗಳ ಕುರಿತ ಹುರುಳಿಲ್ಲದ ವ್ಯರ್ಥ ಚರ್ಚೆಗಳಿಗೆ ಉಪಯೋಗಿಸಬೇಡಿ. ಆ ಬುದ್ಧಿಯನ್ನು ನಿಮ್ಮ ಜನ್ಮಜಾತವಾಗಿ ಲಬ್ಧವಾದ ಕ್ರೈಸ್ತಧರ್ಮದ ಹಿನ್ನೆಲೆಯನ್ನು ಸ್ಥಿರಗೊಳಿಸುವ ಕಡೆ ಗಮನ ಹರಿಸಿ. ಆ ಕ್ರೈಸ್ತ ಹಿನ್ನೆಲೆಯ ಮೇಲೆ ಸಾಧನೆಯ ಚಿತ್ರವು ಪೂರ್ಣವಾದಮೇಲೆ, ನೀವು ಅದರ ಸೌಂದರ್ಯವನ್ನು ಧ್ಯಾನಿಸಲು ಸಮರ್ಥರಾದಾಗ ನಿಮ್ಮ ದೃಷ್ಟಿಯಿಂದ ಹಿನ್ನೆಲೆಯು ತನ್ನಿಂತಾನೇ ಅಳಿಸಿ ಹೋಗುತ್ತದೆ. ಆದರೆ ''ಅದಕ್ಕಿಂತ ಮೊದಲು ಅದು ಸಾಧ್ಯವಿಲ್ಲ''. ಈ ಕೊನೆಯ ಮಾತು ನೆನಪಿನಲ್ಲಿರಲಿ.

Thursday, July 17, 2014

ಇತಿಹಾಸ ಪುರಾಣಗಳಲ್ಲಿ ಮಕ್ಕಳ ಹಕ್ಕುಗಳು

ಹದಿನೆಂಟು ಪುರಾಣಗಳು ಹಾಗೂ ಅವುಗಳ ಉಪಪುರಾಣಗಳು ಭಾರತೀಯ ಇತಿಹಾಸಗ್ರಂಥಗಳೇ ಆಗಿದ್ದರೂ  ಕೆಲ ಪುರಾಣಗಳಲ್ಲಿ ಪರಸ್ಪರ ವಿರೋಧಗಳಿರುವುದರಿಂದ, ಅನೇಕ ಪ್ರಕ್ಷಿಪ್ತತೆಗಳು ಇರುವುದರಿಂದ ಅವುಗಳನ್ನು ಸಂಪೂರ್ಣವಾಗಿ ಸತ್ಯವಾದ ಇತಿಹಾಸಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ರಾಮಾಯಣ ಮತ್ತು ಮಹಾಭಾರತ ಇವೆರಡನ್ನುಯಥಾರ್ಥ ಇತಿಹಾಸ ಗ್ರಂಥಗಳು ಎಂದು ಗುರುತಿಸಲಾಗಿದೆ. ಈ ಇತಿಹಾಸ ಪುರಾಣಗಳನ್ನು ಅವಲೋಕಿಸಿದಾಗ  ಪ್ರಾಚೀನ ಭಾರತದ ಜನರು ಎಂತಹ ಜೀವನ ನಡೆಸುತ್ತಿದ್ದರು.. ಸಮಾಜದ ಆರ್ಥಿಕ-ಪಾರಿವಾರಿಕ ಸ್ಥಿತಿಗತಿಗಳು ಹೇಗಿದ್ದವು ಎನ್ನುವುದು ಅರಿವಿಗೆ ಬರುತ್ತದೆ. ಹಾಗಾಗಿ ಪ್ರಾಚೀನ ಭಾರತದಲ್ಲಿಯೂ ಮಕ್ಕಳ ಮೇಲೆ ಇಂದಿನಂತೆ ದೌರ್ಜನ್ಯಗಳು ನಡೆಯುತ್ತಿದ್ದವಾ..?  ಆಗಿನ ಕಾಲದ ಜನಜೀವನದಲ್ಲಿ ಮಕ್ಕಳ ಹಕ್ಕುಗಳೇನಾಗಿದ್ದವು..? ಎಂದು ನೋಡುತ್ತ ಹೋದರೆ ಬಹಳ ಆಸಕ್ತಿಕರ ಸಂಗತಿಗಳು ಸಿಗುತ್ತವೆ. ಸಮಾಜದಲ್ಲಿ ಧರ್ಮದಲ್ಲಿ ಮಕ್ಕಳಿಗೆ ವಿಶೇಷ ಹಕ್ಕುಗಳು ಇರುವುದು ಕಂಡು ಬರುತ್ತದೆ.

ಇತಿಹಾಸ-ಪುರಾಣಗಳ ಅಪರಾಧಿಗಳನ್ನು ಶಿಕ್ಷಿಸುವ ಸಂದರ್ಭಗಳಲ್ಲಿ ಅವರು ಬಾಲ್ಯಾವಸ್ಥೆಯಲ್ಲಿ ಮಾಡಿದ ತಪ್ಪುಗಳನ್ನು ''ಶಿಕ್ಷಾರ್ಹ'' ಎಂದು ಪರಿಗಣಿಸುವುದಿಲ್ಲ.  ಬಾಲ್ಯದಲ್ಲಿ ನಡೆಯುವ ಅಚಾತುರ್ಯಗಳಿಂದ ಯಾವುದೇ ಪಾಪಗಳು ಅಂಟುವುದಿಲ್ಲ ಎಂದು ಅನೇಕ ಕಡೆ ತಿಳಿಸಲಾಗಿದೆ. ಇತಿಹಾಸ ಪುರಾಣಗಳಿಗಿಂತ ಧರ್ಮಶಾಸ್ತ್ರದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚು ವಿವರ ಕಂಡು ಬರುತ್ತದೆ. ತಂದೆ ತಾಯಂದರು ಪೂಜಾ-ಯಜ್ಞಾದಿಗಳಲ್ಲಿ ತೊಡಗಿದಾಗ ತಮ್ಮ ಮಕ್ಕಳನ್ನು ಉಪವಾಸ ಇಡಬಾರದು, ಮಕ್ಕಳಿಗೆ ಯಾವುದೇ ನಿಯಮಗಳಿರುವುದಿಲ್ಲ ಎಂದು ತಿಳಿಸಲಾಗಿದೆ.  ಮಡಿ-ಮೈಲಿಗೆ ಸೂತಕ-ಅಶೌಚ ಮುಂತಾದ ಆಚರಣೆಗಳನ್ನು ಮಕ್ಕಳು ಆಚರಿಸುವ ಅಗತ್ಯವೇ ಇಲ್ಲ. ಯಾವ ಮನೆಯಲ್ಲಿ ಮಕ್ಕಳು ಹಿಂಸಿಸಲ್ಪಡುತ್ತಾರೋ, ಕಣ್ಣೀರು ಸುರಿಸುತ್ತಾರೋ ಅಂತಹ ಮನೆ ಅಮಂಗಳಕರ . ಮಕ್ಕಳ ಕಣ್ಣೀರು ಆ ಮನೆಯ ಯಜಮಾನನಿಗೆ ಹಾನಿ ಉಂಟುಮಾಡುತ್ತದೆ  ಎಂದು ತಿಳಿಸಲಾಗಿದೆ. ವಯಸ್ಕರು ಯಾವುದೇ ಕಾರ್ಯಗಳನ್ನು ಮಾಡುವಾಗ ಮಕ್ಕಳ ವಯೋಸಹಜ ಹುಡುಗಾಟಿಕೆಯಿಂದಾಗಿ  ಆ ಕೆಲಸದಲ್ಲಿ ತೊಂದರೆ ಉಂಟಾದರೆ  ಅದಕ್ಕೆ ಪ್ರತಿಯಾಗಿ ಮಕ್ಕಳನ್ನು ದಂಡಿಸಬಾರದು. ತಮ್ಮ ಆರ್ಥಿಕ ಶಕ್ತಿ ಮೀರಿ ಮಕ್ಕಳನ್ನು ಪಡೆಯಬಾರದು, ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು ಮುಂತಾದ ನಿಯಮಗಳನ್ನು ಪರಾಶರ ಸ್ಮೃತಿ ವಿಧಿಸುತ್ತದೆ.

''ಮಕ್ಕಳು'' ಎನ್ನುವುದು ಕೇವಲ ವಯಸ್ಸಿಗೆ ಸಂಬಂಧಪಟ್ಟಿದ್ದು ಅಲ್ಲ. ಯಾರಲ್ಲಿ ಅಮಾಯಕತೆ ಇದೆಯೋ.. ವಿದ್ಯೆ, ಬುದ್ಧಿ, ಶಕ್ತಿ ಸಾಮರ್ಥ್ಯ ಯಾರಲ್ಲಿ ಕಡಿಮೆ ಇದೆಯೋ ಅವರೆಲ್ಲ ಬಾಲಕ ಬಾಲಕಿಯರೇ..  ಹಾಗೂ ಯಾರಲ್ಲಿ ವಿವೇಕ-ವಿದ್ಯೆ ಹಾಗೂ ಶಕ್ತಿ ಸಾಮರ್ಥ್ಯಗಳಿವೆಯೋ ಅವರು ಮಾತ್ರ ಪ್ರೌಢರು, ವಯಸ್ಕರು ಎಂದು ಪರಿಗಣಿಸಬೇಕು ಎಂದು ಧರ್ಮಶಾಸ್ತ್ರ ನಿರ್ದೇಶಿಸುತ್ತದೆ. ಇತಿಹಾಸ ಪುರಾಣಗಳಾಗಲಿ  ಅಥವಾ ಶಾಸ್ತ್ರಗಳೇ ಆಗಲಿ, ಅವೆಲ್ಲವೂ ಧರ್ಮದ  ಮೂಲಕ ಜೀವಿಯ ಅಲೌಕಿಕ ಸಾಧನೆಯ ಮಾರ್ಗವನ್ನು ತೋರಿಸುವ ಗ್ರಂಥಗಳೆ  ಅದ್ದರಿಂದ ಅವುಗಳಲ್ಲಿ ನಿರ್ದಿಷ್ಟವಾಗಿ ಇಂಥವರ ಹಕ್ಕು ಇಷ್ಟು ಎಂದು ಕಾನೂನಿನಂತೆ ವಿವರಿಸುವುದಿಲ್ಲ. ಆದರೆ ವಯಸ್ಕ ಪ್ರಜೆಗಳಿಗೆ ಧರ್ಮವನ್ನು ವಿಧಿಸುವಾಗ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಅನೇಕ ನಿರ್ದೇಶನಗಳಿವೆ.
ಲಾಲಯೇತ್ ಪಂಚ ವರ್ಷಾಣಿ ದಶ ವರ್ಷಾಣಿ ತಾಡಯೇತ್
ಪ್ರಾಪ್ತೇ ತು ಶೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್
ಎನ್ನುವ ಸುಭಾಷಿತದಲ್ಲಿ ''ಮಕ್ಕಳು ಐದು ವರ್ಷದವರಾಗುವವ ವರೆಗೆ ಯಾವುದೇ ಕಾರಣಕ್ಕೂ ಅವರನ್ನು ಗದರಿಸಬಾರದು, ಐದರಿಂದ ಹದಿನಾರನೇಯ ವಯಸ್ಸಿನ ವರೆಗೆ ಶಿಕ್ಷಣ ನೀಡಬೇಕು, ಹದಿನಾರರ ನಂತರ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು'' ಎಂಬ ಸಂದೇಶವಿದೆ.
ಇನ್ನು ಋಗ್ವೇದದ ಕರ್ಮಕಾಂಡದ  ಮಹಾಪ್ರಾಯಶ್ಚಿತ್ತ ಭಾಗದಲ್ಲಿ ''ಬಾಲ ಹನನ'' ಅಂದರೆ ಮಕ್ಕಳ ಮೇಲಿನ ಹಲ್ಲೆಯನ್ನು  ಐದು ಮಹಾಪಾತಕ ಮತ್ತು ಏಳು ಉಪಪಾತಕಗಳಲ್ಲಿ ಒಂದು ಎಂದೇ ಪರಿಗಣಿಸಿ ಅದನ್ನು ಒಂದು ಗಂಭೀರ ಅಪರಾಧವೆಂದು ತಿಳಿಸಿದ್ದಾರೆ. ಅದಕ್ಕೆ ಘೋರವಾದ ಪ್ರಾಯಶ್ಚಿತ್ತಗಳನ್ನು ವಿಧಿಸಿದ್ದಾರೆ.
ತಮ್ಮ ಸ್ವಂತ ಮಕ್ಕಳಲ್ಲದೇ  ಅನ್ಯರ ಮಕ್ಕಳ ಬಗೆಗೂ ಇದೇ  ನಿಯಮಗಳು ವರ್ತಿಸುತ್ತವೆ. ಗುರುಕುಲದಲ್ಲಿ ವಿದ್ಯಾರ್ಥಿಗಳು ತಂದೆ ತಾಯಂದಿರ ನೆನಪಿನಲ್ಲಿ ಓದು ಬರಹದಲ್ಲಿ ಆಸಕ್ತಿ ತೋರಿಸದೇ  ಹೋದಲ್ಲಿ ಅಂತಹ ಮಕ್ಕಳನ್ನು ದಂಡಿಸಬಾರದು ಎಂದು ಶಿಕ್ಷಾ ಶಾಸ್ತ್ರವು ಹೇಳಿದೆ.

ಪ್ರಾಚೀನ  ಭಾರತದಲ್ಲಿ ಎಲ್ಲರೂ ಒಂದೇ ರೀತಿಯ ಉದ್ಯೋಗಗಳನ್ನು ಮಾಡುತ್ತಿರಲಿಲ್ಲವಾದ್ದರಿಂದ ಎಲ್ಲ ಮಕ್ಕಳಿಗೂ ಒಂದೇ ರೀತಿಯ  ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಈಗ  ಇರುವಂತೆ ಇತಿಹಾಸ, ಸಮಾಜಶಾಸ್ತ್ರ ವಿಜ್ಞಾನ, ಗಣಿತ ಮುಂತಾದವುಗಳನ್ನೊಳಗೊಂಡ ಸರ್ಕಾರದಿಂದ ನಿರ್ದೇಶಿತ ಪ್ರೌಢಶಾಲೆಯ ವರೆಗಿನ ಏಕರೂಪ ಶಿಕ್ಷಣ  ಎಲ್ಲರಿಗೂ ಕಡ್ಡಾಯ ಇರಲಿಲ್ಲ. ಬಹುತೇಕ ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಬಳಿ  ಅಥವಾ ಮನೆಯವರ ಬಳಿಯೇ ತಮ್ಮ ತಮ್ಮ ಕುಲ ಕಸುಬುಗಳನ್ನು ಕಲಿಯುತ್ತಿದ್ದರು. ತಮ್ಮ ಕುಲವೃತ್ತಿಗೆ ಅಗತ್ಯವಿಲ್ಲದ ವಿದ್ಯೆಯನ್ನು ಯಾರೂ ಕಲಿಯುತ್ತಿರಲಿಲ್ಲ.. ಹಾಗೂ ಅದನ್ನು ಕಲಿಯಲಿಕ್ಕಾಗಿ ಮನೆ ಬಿಟ್ಟು ಹೆಚ್ಚು ದೂರ ಹೋಗುತ್ತಿರಲಿಲ್ಲ.  ಆಡಳಿತಕ್ಕೆ ಬೇಕಾದ ರಾಜಧರ್ಮದ ತಿಳುವಳಿಕೆ ಮತ್ತು ಧರ್ಮದ ತಿಳುವಳಿಕೆ ಹೊಂದಿರಬೇಕಾದ ಕೆಲವೇ ವರ್ಗದ ಮಕ್ಕಳನ್ನು ಗುರುಕುಲಗಳಿಗೆ ಕಳುಹಿಸಲಾಗುತ್ತಿತ್ತು.  ಉಳಿದಂತೆ ವೃತ್ತಿಶಿಕ್ಷಣವೆಲ್ಲವೂ ಮನೆಯಲ್ಲಿಯೇ ಅಥವಾ ಸ್ವಗ್ರಾಮದಲ್ಲಿಯೇ ನಡೆಯುತ್ತಿತ್ತು. ಹೀಗಾಗಿ  ಈಗಿನಂತೆ ಮಕ್ಕಳು ಬೇರೆಯವರ ಸುಪರ್ದಿಯಲ್ಲಿ ಬೆಳೆಯುವ ಸಂದರ್ಭಗಳು ಕಡಿಮೆ ಇದ್ದವು.  ಆದ ಕಾರಣ ಮಕ್ಕಳು ಈಗಿನಂತೆ ಕುಟುಂಬದವರ ಹೊರತಾಗಿ ಬೇರೆಯವರಿಂದ ಅತ್ಯಾಚಾರ, ಹಲ್ಲೆಗೊಳಗಾಗುವ ಸಂದರ್ಭಗಳು ಅಪರೂಪ. ಆದರೆ ಕುಟುಂಬಿಕರಿಂದಲೇ ನಡೆಯುವ ಹಿಂಸೆ ಪ್ರಾಚೀನವಾದದ್ದೇ ಆಗಿದ್ದರೂ ಪ್ರಾಚೀನ ಭಾರತದಲ್ಲಿ ಧರ್ಮಭೀರತೆ ಹೆಚ್ಚು ಇತ್ತು ಹಾಗೂ ಲೌಕಿಕ ಮಹತ್ವಾಕಾಂಕ್ಷೆ  ಕಡಿಮೆ ಇದ್ದ ಕಾರಣ ಅದರ ಪ್ರಮಾಣ ಈಗಿನಷ್ಟಿರಲಿಲ್ಲ.