Thursday, December 18, 2014

ಕುಣಿತ

     
ನಾನು ಕುಣಿಯುವುದು ಎರಡು ಕಂಬಗಳ ನಡುವೆ
ಬಿಗಿದು  ಕಟ್ಟಿರುವ  ಹಗ್ಗದ ಮೇಲೆ
ನಾಲ್ಕು ರಸ್ತೆಗಳು ಸೇರುವ ಚೌಕಿನ ನಡುವೆ
ಸುರಿಯುವ ಬೀದಿದೀಪದ ಕೆಳಗೆ

ನೋಡುವವರು ಕಂಬಗಳನ್ನು  ನೋಡುವುದಿಲ್ಲ
ಕಂಬಕ್ಕೆ ಬಿಗಿದ ಹಗ್ಗವನ್ನು ಅಲ್ಲ
ಸುರಿಯುವ ಬೆಳಕೂ ಅವರಿಗೆ ಕಾಣುವುದಿಲ್ಲ
ಅವರು ಬರೀ ಕುಣಿತ ನೋಡುತ್ತಾರೆ

ಆದರೆ ನಾನು ಅಲ್ಲಿ ಕುಣಿಯುವುದೇ ಇಲ್ಲ
ಬರೀ ಈ ತುದಿಯಿಂದ ಆ ತುದಿಗೆ ಓಡುತ್ತೇನೆ
ಕಂಬದಲ್ಲಿ ಹಗ್ಗದ ಬಿಗುವು ಸಡಿಲಗೊಂಡರೆ
ನೆಪ ಹೇಳಿ ಓಟ ನಿಲ್ಲಿಸಬಹುದೆಂದು

ಆದರೆ ಅದರ ಬಿಗುವು ಸರಿಯುವುದೇ ಇಲ್ಲ
ಕಂಬ ಬಾಗುವುದೂ ಇಲ್ಲ  ಹಗ್ಗ ಜಾರುವುದೂ ಇಲ್ಲ
ನಾನು ಆಸೆಯಿಂದ   ಓಡುತ್ತಲೇ ಇರುತ್ತೇನೆ
ಜನರು ಮಾತ್ರ ಕುಣಿತವನ್ನು ನೋಡುತ್ತಾರೆ .. ಬರೀ ಕುಣಿತವನ್ನು

Tuesday, August 12, 2014

ಭಗವದ್ಗೀತೆಯೆಂದರೆ

ಭಗವದ್ಗೀತೆಯು ಮತಗ್ರಂಥ ಅಲ್ಲ.  ಆದರೂ ಲೋಕದಲ್ಲಿ ಅದು ಆ ರೀತಿ ತಪ್ಪು ಅಭಿಪ್ರಾಯಕ್ಕೆ ಒಳಗಾಗಿದೆ. ಅಷ್ಟು ಮಾತ್ರವಲ್ಲದೇ ಇದು ವೈರಾಗ್ಯ ಉಂಟುಮಾಡುವ ಗ್ರಂಥವಾದ್ದರಿಂದ ಇದನ್ನು ಓದಿ ತಮ್ಮ ಹುಡುಗರಿಗೆ ಎಲ್ಲಿ ವೈರಾಗ್ಯ ಗಂಟು ಬಿದ್ದುಬಿಡುತ್ತದೋ ಎಂದು ಕೆಲ ಅರೆಮರುಳರು, ಬೆಪ್ಪರು ತಮ್ಮ ಹೊಟ್ಟೆಯನ್ನು ತಾವೇ ಕಿವುಚಿಕೊಳ್ಳುತ್ತಾರೆ. ವೈರಾಗ್ಯ ಎನ್ನುವುದು ಅಷ್ಟು ಸುಲಭವಾಗಿ ಗಂಟುಬೀಳುವಂಥದ್ದಲ್ಲ. ಒಂದು ವೇಳೆ ಯಾರಲ್ಲಾದರೂ ವೈರಾಗ್ಯದ ಲಕ್ಷಣ ಕಾಣಿಸಿದರೆ ಆತನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲ.  ಜಗತ್ತಿನಲ್ಲಿ ವಿರಕ್ತಿಗೆ ಸಮಾನವಾದ ಭಾಗ್ಯವೇ ಇಲ್ಲ.  ವೈರಾಗ್ಯವೆಂದರೆ ಯಾವ ಪ್ರಾಪಂಚಿಕ ಸುಖ-ಸಾಧನಗಳೂ ಇಲ್ಲದೇ ದಾರಿದ್ರ್ಯದಿಂದ, ನಿರಾಶೆಯಿಂದ ಒಂದು ಮೂಲೆಯಲ್ಲಿ ಮುದುರಿಕೊಂಡು ಸಾವಿಗೆ ಕಾಯುವ ವ್ಯಕ್ತಿಯಲ್ಲಿ ಇರಬೇಕಾದ್ದು ಎಂದು ಜನರು ತಿಳಿದಿದ್ದಾರೆ. ಸಾವಿಗೆ ಕಾಯುವ ಅಂಥ ಕೈಲಾಗದ ನಿರ್ಜೀವ  ಮೂರ್ಖರ ಬಾಯಿಗೆ ನೀರು ಹಾಕಬೇಕೇ ಹೊರತು ಭಗವದ್ಗೀತೆಯನ್ನಲ್ಲ.

ಬೇಕು ಬೇಕೆನಿಸಿದ ಸಾಧನಗಳನ್ನು ಸಂಪಾದಿಸಿ ಅವುಗಳು ತನ್ನ ಪಾದದಡಿಯಲ್ಲಿ ಉರುಳಾಡುತ್ತಿದ್ದರೂ ಅವುಗಳ ಜೊತೆಗೆ ತಾದಾತ್ಮ್ಯ ಹೊಂದದೇ ಇರುವುದು ವೈರಾಗ್ಯ. ಈ ಲೋಕದಲ್ಲಿ ಬದುಕಲಿಕ್ಕೆ ಬೇಕಾದ ಮೂಲಭೂತ ತುತ್ತುಗಳನ್ನು ಸಂಪಾದಿಸಿಕೊಳ್ಳಲಿಕ್ಕೆ ಆಗದ ಹೇಡಿಯು ಪರಲೋಕದ ಬುತ್ತಿಯನ್ನೇನು ಸಾಧಿಸಿಯಾನು..? ಅಟ್ಟಕ್ಕೆ ಹಾರಲಾಗದವನು ಬೆಟ್ಟಕ್ಕೆ ಹಾರಿಯಾನೇ..? ಆದ್ದರಿಂದ ಪ್ರಾಪಂಚಿಕ ಸುಖ-ಸಾಧನಗಳನ್ನು ಗಳಿಸಲಾರದವನು ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲಿಕ್ಕಾಗಿ ಪರಮಾರ್ಥವನ್ನು ಸಾಧಿಸುತ್ತಾನೆ ಎನ್ನುವುದು ಹಗಲು ಕನವರಿಕೆಯ ಮಾತು. ಈ ಅರ್ಥವನ್ನು ಸಮರ್ಥ ರಾಮದಾಸರು ತಮ್ಮ ದಾಸಬೋಧ ಗ್ರಂಥದಲ್ಲಿ ಬಹಳ ಕಡೆ ಎತ್ತಿ ಹೇಳಿದ್ದಾರೆ.  ಆದ್ದರಿಂದ ತನ್ನ ಮನುಷ್ಯತ್ವವು ಸಾರ್ಥಕವಾಗಬೇಕಾದರೆ ತನ್ನ ಮತ್ತು ತನ್ನ ಕುಟುಂಬದ ಹೊಟ್ಟೆ-ಬಟ್ಟೆಯನ್ನು ಸಂಪಾದಿಸಲು ಶಕ್ತನಾಗಿರುವುದು ಮಾತ್ರವಲ್ಲದೇ ಸಾರ್ವಜನಿಕವಾದ ಯಾವುದೇ ವ್ಯವಹಾರದಲ್ಲಿ - ಜೀವನದಲ್ಲಿ ಏನು ಎದುರು ಬಂದರೂ ದಕ್ಷತೆಯಿಂದ ಬಡಿದಾಡಿ ವಿಜಯಿಯಾಗಬಲ್ಲ ಗಟ್ಟಿಗುಂಡಿಗೆಯವನಾಗಿರಬೇಕು. ಜೀವನದಲ್ಲಿ ಯಾವ ಪರಿಸ್ಥಿತಿ ಎದುರಾದರೂ ಮುಗುಳ್ನಕ್ಕು ಎದುರಿಸುವ ಧೈರ್ಯಶಾಲಿಯಾಗಿರಬೇಕು. ಸಾಮರ್ಥ್ಯ ಹೊಂದಿರಬೇಕು. ಅಂಥವನೇ ಆಧ್ಯಾತ್ಮಕ್ಕೆ ಸರಿಯಾದ ಅಧಿಕಾರಿ.

ಹಾಗೆಯೇ ಲೋಕದಲ್ಲಿ ಬೇಕಾದಷ್ಟು ಸಾಮರ್ಥ್ಯವಂತರು, ಧೈರ್ಯಶಾಲಿಗಳು, ತುಂಬಾ ಐಶ್ವರ್ಯ ಉಳ್ಳವರು  ಸಾಕಷ್ಟು ಜನ ಇದ್ದಾರೆ. ಆದರೆ ಅವರೆಲ್ಲರೂ ಭಗವದ್ಗೀತೆಗೆ ಅಧಿಕಾರಿಗಳಾಗುವುದಿಲ್ಲ. ಅವರೆಲ್ಲರಲ್ಲೂ ಅದರ ಬಗ್ಗೆ ಆಸಕ್ತಿಯೂ ಇರುವುದಿಲ್ಲ ಅಧಿಕಾರವೂ ಇರುವುದಿಲ್ಲ.  ಕೇವಲ ಸಾಮರ್ಥ್ಯ-ಐಶ್ವರ್ಯಗಳಿಂದಾಗಿ ಅವರಿಗೆ ಅದರ ಅಧಿಕಾರ ಬರುವುದು ಸಾಧ್ಯವಿಲ್ಲ. ಬರೀ ಈ ಹೊತ್ತಿನ ಅಂದರೆ ಈ ಜಗತ್ತಿನಲ್ಲಿ ಇರುವಷ್ಟು ದಿನ ಹೊಟ್ಟೆ-ಬಟ್ಟೆಗಳ ಸಮೃದ್ಧಿ ಇರಬೇಕು. ವಸ್ತು-ವಾಹನ ಸೇವಕರು ಮೊದಲಾದ ಐಶ್ವರ್ಯವಿರಬೇಕು. ಈ ಲೋಕದ ಸುಖವನ್ನೆಲ್ಲ ಅನುಭವಿಸಬೇಕು- ಎಂದೆಲ್ಲ ಈ ಲೋಕದಿಂದ ಮತ್ತು ಈ ದೇಹದಿಂದ ಸಿಗುವ ಸುಖಗಳಿಗೆ ಮಾತ್ರ ಸೀಮಿತರಾಗಿ ಅದರಲ್ಲಿಯೇ ಬಿದ್ದು ಒದ್ದಾಡುವವರ ಮುಂದೆ ಭಗವದ್ಗೀತೆಯು ತನ್ನ ಬಾಯಿಯ ಬೀಗವನ್ನು ತೆಗೆಯುವುದಿಲ್ಲ. ಮುತ್ತನ್ನುದುರಿಸುವುದಿಲ್ಲ. ಈ ಲೋಕದ ಎಲ್ಲ ಸುಖಗಳೂ ಬೇಕು.. ಮತ್ತು ಆ ಎಲ್ಲ ಸುಖಗಳನ್ನೂ ಮೀರಿದ,, ಇನ್ನೂ ಹೆಚ್ಚಿನ ಗಾಢವಾದ ಶಾಶ್ವತವಾದ ಸುಖ ಬೇಕು ಎಂದು ಬಯಸುವ "ಧೀರ''ನಾದರೆ ಮಾತ್ರ ಅವನಿಗೆ ಗೀತಾದೇವಿಯ ಕರುಣೆಯಾದೀತು.(ಅವನಿಗೆ ಗೀತೆ ಅರ್ಥವಾದೀತು).  ಆದ್ದರಿಂದ ಭಗವದ್ಗೀತೆ ಅರ್ಥವಾಗಬೇಕಾದರೆ  ಅರ್ಥ ಮಾಡಿಕೊಳ್ಳ ಬಯಸುವವನ ಹೃದಯದಲ್ಲಿ ಸುಖದ ಆಶೆ ತುಂಬಾ ತೀವ್ರವಾಗಿರಬೇಕು.   ಈ ವಸ್ತುಗಳಿಂದ ಸಿಗುತ್ತಿರುವ ಸುಖಕ್ಕಿಂತ ಹೆಚ್ಚಿನ ಮಟ್ಟದ ಸುಖವನ್ನು ಪಡೆಯಬೇಕೆಂದು ಅವನ ಮನಸ್ಸು ಆತುರಗೊಳ್ಳಬೇಕು. ಹೆಚ್ಚು ಹೆಚ್ಚು ಸುಖದ ರಾಶಿಯನ್ನು ಕೊಳ್ಳೆ ಹೊಡೆಯಬೇಕೆಂಬ ಮಹತ್ತರ ಆಸೆ ಉಳ್ಳವನೇ ಗೀತೆಯ ಅರ್ಥ ಅರಿಯಲು ಅಧಿಕಾರಿಯು.  ವೈರಾಗ್ಯವೆಂದರೆ ಎಲ್ಲ ಸುಖಸಾಧನಗಳನ್ನೂ ತೊರೆಸುವಂಥದ್ದೆಂದು ತಿಳಿಯಬಾರದು. ಇನ್ನಿಲ್ಲವೆನಿಸುವಂಥ ಹೆಚ್ಚಿನ ಸುಖದ ಬಯಕೆಯೆಂದು ತಿಳಿಯಬೇಕು.

ಇನ್ನು ಕೆಲವರು ಭಗವದ್ಗೀತೆಯೆಂದರೆ ಮುಪ್ಪಿನ ಕಾಲದಲ್ಲಿ ಓದತಕ್ಕ ಗ್ರಂಥವೆಂದು ತಿಳಿಯುವರು. ಮೊದಲೇ ಹೇಳಿದಂತೆ ವಿರಕ್ತಿ ಎಂಬ ವಿಷಯದ ತಪ್ಪು ತಿಳುವಳಿಕೆ ಕಾರಣ. ಅದಲ್ಲದೇ  ಭಗವದ್ಗೀತೆ ಪಾರಮಾರ್ಥಿಕ ಗ್ರಂಥವಾದ್ದರಿಂದ ಲೋಕ ವ್ಯವಹಾರದಲ್ಲಿ ಅದರ ಉಪಯೋಗವೇನೂ ಇಲ್ಲವೆಂಬ ಬೆಪ್ಪುತನ ಇನ್ನೊಂದು ಕಾರಣ. ಇದು ಪಾರಮಾರ್ಥಿಕ ಗ್ರಂಥವೇನೋ ನಿಜವೇ. ಆದರೆ ವ್ಯವಹಾರದಲ್ಲಿ ಅದರ ಉಪಯೋಗವಿಲ್ಲದೇ ಇಲ್ಲ. ಜಗತ್ತಿನಲ್ಲಿ ಸರ್ವೈಶ್ವರ್ಯ ಸಂಪನ್ನರೂ ಕೂಡ ತಮ್ಮ ಜೀವನದ ತಾಪತ್ರಯಳಿಂದ ಬೆಂದು ನಿಟ್ಟುಸಿರು ಬಿಡುವುದನ್ನು ನಾವು ನೋಡುತ್ತಲೇ ಇದ್ದೇವೆ. ಅಂಥವರಿಗೆ ಯಾವ ಸುಖಕ್ಕೆ ಏನು ಕೊರತೆ..? ಆದರೂ ಇರಬೇಕಾದಷ್ಟು ಸಮಾಧಾನವಿಲ್ಲ.  ತಮ್ಮ ಐಶ್ವರ್ಯಾದಿ ಸಾಧನಗಳೆಲ್ಲ ಎಂದೆಂದಿಗೂ ತಮ್ಮವೇ.. ತಾವೇ ಉತ್ಪತ್ತಿ ಮಾಡಿದ್ದು.. ತಮಗೇ ಸೇರಿದ್ದು ಎಂಬ ತಾದಾತ್ಮ್ಯದಿಂದಾಗಿ ಅಶಾಂತಿಯಿರುತ್ತದೆ. ಗೀತೆಯು ಆ ತಪ್ಪು ತಿಳುವಳಿಕೆಗಳ ಬೇರನ್ನು ಕಿತ್ತೊಗೆಯುತ್ತದೆ. ಜಗತ್ತೆಂಬುದು ತುದಿ-ಮೊದಲು ಕಾಣದ ಸಮುದ್ರದಂತಿದೆ. ಆ ಸಮುದ್ರದಲ್ಲಿ ಈಜುವ ಮರ್ಮವನ್ನು ನಾವು ತಿಳಿಯದೇ ಹೋದರೆ ಪದೇ ಪದೇ ಮುಳುಗಿ ಮೂಗು-ಬಾಯಿಗಳಲ್ಲೆಲ್ಲ ಉಪ್ಪು ನೀರು ತುಂಬುತ್ತದೆ.  ಮೀನು ಮೊಸಳೆಗಳ ಭಯ ಕಾಡುತ್ತದೆ. ಇಂತಹ ಜಗತ್ತೆಂಬ ಸಮುದ್ರದಲದಲ್ಲಿ ಸಮರ್ಥವಾಗಿ ಈಜಲಿಕ್ಕೆ ಭಗವದ್ಗೀತೆಯೇ ಸದ್ಗುರು.  ಈಗಲೋ ಆಗಲೋ ಸಾಯಲು ಸಿದ್ಧರಾಗಿರುವವರು ಈಜು ಕಲಿತರೂ ನೀರಿನ ಮೇಲೆ ತೇಲುವ ಆನಂದವನ್ನು ಹೆಚ್ಚು ಕಾಲ ಅನುಭವಿಸಲಾರರು.  ಹುಡುಗರು ಈ ವಿದ್ಯೆಯನ್ನು ಕಲಿತರೆ ಹಾಯಾಗಿ ಸಾಕಷ್ಟು ಸಮಯ ಈಜಬಹುದು.  ಮುದುಕರಿಗಿಂತಲೂ ಹುಡುಗರಿಗೆ ಈ ಈಜು ಕಲಿಯುವ ಅಗತ್ಯವಿದೆ. ಹಾಗಾಗಿ ಬಾಲಕ-ಬಾಲಕಿಯರೇ ಈ ಭಗವದ್ಗೀತೆಯ ಅಧ್ಯಯನಕ್ಕೆ ಸರಿಯಾದ ಅಧಿಕಾರಿಗಳು.
ಲೇಖಕರು- ಹೊಸಕೆರೆ ಚಿದಂಬರಯ್ಯ. (1929 ರಲ್ಲಿ ಗೀತಾರ್ಥ ಚಂದ್ರಿಕೆಯ ಮುನ್ನುಡಿಯಲ್ಲಿ.)


Wednesday, July 23, 2014

ಮೀಮಾಂಸಾ ಶಾಸ್ತ್ರದ ಪರಿಚಯ

ಶಾಸ್ತ್ರ ಎಂದರೆ 
ಯಾವುದೇ ಒಂದು ವಿಷಯದ ಬಗ್ಗೆ ಬೀಜರೂಪದ ಮಾಹಿತಿಯನ್ನು  ನೀಡಿ.. ಅದಕ್ಕೆ ವಿರೋಧಗಳು/ಪ್ರತಿವಾದಗಳು ಅಥವಾ ಸಂದೇಹಗಳು ಎದುರಾದಲ್ಲಿ ಆ ಎಲ್ಲ ರೀತಿಯ ವಿರೋಧಗಳಿಗೂ, ಸಂದೇಹಗಳಿಗೂ ತರ್ಕಬದ್ಧವಾದ ಆಧಾರ ಸಹಿತ ಸಮಾಧಾನವನ್ನು ನೀಡಿ ತಾನು ಮೊದಲು ಮಂಡಿಸಿದ ಬೀಜರೂಪ ವಿಷಯನ್ನು ಸಂಪೂರ್ಣವಾಗಿ ಸಾಬೀತು ಮಾಡಿ ಸಿದ್ಧಾಂತವನ್ನು ಮಂಡಿಸುವ (ವಾದ-ಪ್ರತಿವಾದಗಳನ್ನೊಳಗೊಂಡ)   ಸಂಪೂರ್ಣ ಪ್ರಕ್ರಿಯೆಗೆ ''ಶಾಸ್ತ್ರ'' ಎಂದು ಹೆಸರು. ಅದು ಹಾಗಿದ್ದಾಗ ಮಾತ್ರ ಅದಕ್ಕೆ ''ಶಾಸ್ತ್ರತ್ವ'' ಬರುತ್ತದೆ.  ಶಾಸ್ತ್ರವು ಪ್ರತ್ಯಕ್ಷ ಪ್ರಮಾಣ, ಅನುಮಾನ ಪ್ರಮಾಣ, ಉಪಮಾನ ಪ್ರಮಾಣ, ಅರ್ಥಾಪತ್ತಿ ಪ್ರಮಾಣ, ಅನುಪಲಬ್ಧಿ ಪ್ರಮಾಣ ಹಾಗೂ ಶಬ್ದ ಪ್ರಮಾಣ ಎಂಬ ಆರು ಪ್ರಮಾಣಗಳ ಆಧಾರದ ಮೇಲೆ ಶಾಸ್ತ್ರಪ್ರಕ್ರಿಯೆ ನಡೆಯುತ್ತದೆ.  ಇಂತಹ ಒಟ್ಟು ಆರು ಶಾಸ್ತ್ರಗಳು ಇವೆ. ಸಾಂಖ್ಯ ಶಾಸ್ತ್ರ, ಯೋಗ ಶಾಸ್ತ್ರ, ನ್ಯಾಯ ಶಾಸ್ತ್ರ, ವೈಶೆಷಿಕ ಶಾಸ್ತ್ರ,  ಮೀಮಾಂಸಾ ಶಾಸ್ತ್ರ ಹಾಗೂ ವೇದಾಂತ ಶಾಸ್ತ್ರ ಎಂಬುವವೇ ಆ ಆರು ಶಾಸ್ತ್ರಗಳು. ಈ ಆರು ಶಾಸ್ತ್ರಗಳಿಗೆ ''ದರ್ಶನಗಳು'' ಎಂಬ ಹೆಸರು ಕೂಡ ಪ್ರಸಿದ್ಧ. 

ಮೀಮಾಂಸೆಯ ವಿಶೇಷತೆ 
 ಈ ಆರು ಶಾಸ್ತ್ರಗಳು ಮೊದಲು ಪ್ರತ್ಯೇಕವಾಗಿದ್ದರೂ ಕಾಲಕ್ರಮೇಣ ಅವುಗಳ ಬೆಳವಣಿಗೆ ಆದಂತೆ ಸಾಂಖ್ಯ ಮತ್ತು ಯೋಗ ಗಳು ಸಮಾನ ತಂತ್ರಗಳಾದವು. ಅದೇ ರೀತಿ ನ್ಯಾಯ ಮತ್ತು ವೇಶೇಷಿಕಗಳೆರಡೂ ಸೇರಿಹೋದವು. (ಅಂದರೆ ಒಂದರಂತೆ ಇನ್ನೊಂದು ಇವೆ, ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.) ಆದರೆ ಮೀಮಾಂಸಾ ಮತ್ತು ವೆದಾಂತಗಳು ಈ ರೀತಿಯಾಗಿಲ್ಲ. ಮೀಮಾಂಸಾ ಶಾಸ್ತ್ರವು ಇತರ ಶಾಸ್ತ್ರಗಳಿಗಿಂತ ಮೂರು ವಿಚಾರಗಳಲ್ಲಿ ತೀರ ಭಿನ್ನವಾಗಿದೆ. ಇತರ ಶಾಸ್ತ್ರಗಳು ವೇದವು ಅಪೌರುಷೇಯ ಎಂದು ಒಪ್ಪಿದರೂ ವೇದವು ಈಶ್ವರಕೃತ.  ಆದ್ದರಿಂದಲೇ ಅದು ಪ್ರಮಾಣ ಎನ್ನುತ್ತವೆ. ಆದರೆ ಪೂರ್ವಮೀಮಾಂಸಾ ಶಾಸ್ತ್ರವು ಭಗವಂತ ಇರಲಿ-ಇಲ್ಲದಿರಲಿ, ವೇದವು ಸ್ವತಃ ಪ್ರಮಾಣವು ಎನ್ನುತ್ತದೆ. ಈ ದೃಷ್ಟಿಯಲ್ಲಿ ಮೀಮಾಂಸೆಯು ಉಳಿದ ಶಾಸ್ತ್ರಗಳಿಗಿಂತ ವೈದಿಕತರವು ಎನ್ನಬಹುದು.  ಅದೇ ರೀತಿ ಮಿಕ್ಕ ಶಾಸ್ತ್ರಗಳು ಜೀವ, ಮೋಕ್ಷ, ಪ್ರಪಂಚ ಇತ್ಯಾದಿಗಳನ್ನು ಹೆಚ್ಚಾಗಿ ವಿಮರ್ಶಿಸುತ್ತವೆ. ಆದರೆ ಮೀಮಾಂಸೆಯು ಈ ವಿಷಯಗಳಲ್ಲಿ ಹೆಚ್ಚು ಗಮನ ಕೊಡದೇ ''ಧರ್ಮ'' ಎಂಬ ಒಂದೇ ವಿಷಯವನ್ನು ಪ್ರಧಾನವಾಗಿ ವಿಚಾರಿಸುತ್ತದೆ. ಮೂರನೇಯದಾಗಿ ನಿತ್ಯ ಜೀವನಕ್ಕೆ ಬೇಕಾದ ಎಷ್ಟೋ ವ್ಯವಹಾರಗಳನ್ನು ಮೀಮಾಂಸೆಯು ಚರ್ಚಿಸಿ ನಿರ್ಣಯಿಸುತ್ತದೆ.

ಮೀಮಾಂಸಾ ಶಬ್ದದ ಅರ್ಥ
"ಮೀಮಾಂಸಾ" ಎಂದರೆ ವಿಚಾರಿಸುವುದು, ಚಿಂತಿಸುವುದು, ಆಲೋಚಿಸುವುದು ಎಂದರ್ಥ. ಆದರೆ ಎಲ್ಲ ವಿಚಾರಗಳು-ಚರ್ಚೆಗಳೂ ಮೀಮಾಂಸೆಯಲ್ಲ. ಪೂಜನೀಯವಾದ (ಧರ್ಮಸಂಬಂಧವಾದ) ವಿಚಾರವನ್ನು ಅದರ ಗೌರವಕ್ಕೆ ತಕ್ಕಂತೆ ಮರ್ಯಾದೆಗಳಿಗೆ(ಚರ್ಚಾ ನಿಯಮಗಳಿಗೆ)  ಒಳಪಟ್ಟು ವಿಚಾರಿಸುವುದು ಮಾತ್ರ ಮೀಮಾಂಸೆ. ಈ ಶಬ್ದವನ್ನು 'ನ್ಯಾಯ' ಎಂಬ ಅರ್ಥದಲ್ಲಿಯೂ ಉಪಯೋಗಿಸುವುದು ಉಂಟು. 
ಮೀಮಾಂಸಾ ಎಂಬ ಶಬ್ದವು ಮೊದಲು ವೇದದ ಕರ್ಮಕಾಂಡಗಳಲ್ಲಿ "ಸಂದಿಗ್ಧವಾದ ಕರ್ಮವನ್ನು ಕುರಿತು ನಡೆದ ವಿಮರ್ಶೆ" ಎಂಬ ಅರ್ಥದಲ್ಲಿ ಬಂದಿದೆ. ಅಂತಹ ಧರ್ಮದ ಕುರಿತ ವಿಮರ್ಶೆಗಳೆಲ್ಲ ಒಟ್ಟು ಸೇರಿ ಒಂದು ನಿಯತ ರೂಪವನ್ನು ಪಡೆದು ಅದು ಮೀಮಾಂಸಾ ಶಾಸ್ತ್ರವಾಯಿತು.  ಶಾಸ್ತ್ರದಲ್ಲಿಯೂ ಮೀಮಾಂಸಾ ಎಂಬ ಶಬ್ದಕ್ಕೆ ಅದೇ ಅರ್ಥವಿದೆ. ಆದರೆ ಕಾಲಕ್ರಮೇಣ ಈ ಶಬ್ದಕ್ಕೆ ಸಾಧಾರಣ, ವಿಶಿಷ್ಟ ಅರ್ಥಗಳೆರಡೂ ಅರೋಪಿಸಲ್ಪಟ್ಟು ಇಂದು "ಮೀಮಾಂಸಾ" ಎಂದರೆ ಮೀಮಾಂಸಾ ಶಾಸ್ತ್ರ  ಎಂಬ ವಿಶಿಷ್ಟ ಅರ್ಥದಲ್ಲಿಯೂ  ಚರ್ಚೆ ಎಂಬ ಸಾಧಾರಣ ಅರ್ಥದಲ್ಲಿಯೂ ಬಳಕೆಗೆ ಬಂದಿದೆ. (ಕಾವ್ಯ ಮೀಮಾಂಸೆ, ಚಿತ್ರ ಮೀಮಾಂಸೆ ಇತ್ಯಾದಿ. 

ಇದರ ಪ್ರಾಚೀನತೆ
ಈ ಶಾಸ್ತ್ರವು ಪುರಾತನವಾದದ್ದು.  "ಈ ಶಾಸ್ತ್ರವನ್ನು ಮೊದಲು ಪ್ರಜಾಪತಿಯು ರಚಿಸಿದನು. ಆತನಿಂದ ಕ್ರಮವಾಗಿ ಇಂದ್ರ, ಆದಿತ್ಯ, ವಸಿಷ್ಠ, ಪರಾಶರ, ಕೃಷ್ಣದ್ವೈಪಾಯನ, ಜೈಮಿನಿಗಳು ಕಲಿತರು. ಜೈಮಿನಿಯು ಇದನ್ನು ಸೂತ್ರರೂಪದಲ್ಲಿ ಬರೆದಿಟ್ಟರು'' ಎಂದು ಸಾಂಪ್ರದಾಯಿಕ ನಂಬಿಕೆಯಿದೆ.  ನಮ್ಮ ಶಾಸ್ತ್ರಗಳೆಲ್ಲ ಬೀಜರೂಪವಾಗಿ ವೇದದಲ್ಲಿ ಇವೆ. ಅವುಗಳನ್ನು ಆಯಾ ಆಚಾರ್ಯರು ತಮ್ಮ ಶಿಷ್ಯರಿಗೆ ಬೋಧಿಸುವಾಗ ವಿಸ್ತರಿಸಿದರು. ಬರುಬರುತ್ತ ಜನರಲ್ಲಿ ಗ್ರಹಣಶಕ್ತಿಯು ಕಡಿಯಾಗುತ್ತ ಬಂದುದರಿಂದ ಗ್ರಂಥಗಳ ಅವಶ್ಯಕತೆಯು ಹೆಚ್ಚಾಗಿ ಆಯಾ ಶಾಸ್ತ್ರಗಳು ಗ್ರಂಥಸ್ಥವಾಗುತ್ತ ಬಂದವು.  

ಮೊದಲು ಜಾತವೇದರ ಕಾಲದಲ್ಲಿ ಜನರು ಹುಟ್ಟುತ್ತಲೇ ಸತ್ಯ-ಧರ್ಮಗಳು ಅವರಿಗೆ ಸ್ವಯಂ ಗೋಚರವಾಗುತ್ತಿದ್ದವು. ಅವರಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ.  ಅವರ ನಂತರ ಜಾತವೇದರ ಉಪದೇಶಮಾತ್ರದಿಂದ ಸತ್ಯ-ಧರ್ಮಗಳ ದರ್ಶನವನ್ನು ಪಡೆಯುವ ಕಾಲವಾಯಿತು. ಆಗ ಗುರುಗಳ ಅವಶ್ಯಕತೆಯು ಹುಟ್ಟಿ ಆಚಾರ್ಯರು ಬರಬೇಕಾಯಿತು.  ಆ ಯುಗವೂ ಕಳೆದು ಆಚಾರ್ಯರಿಂದ ಉಪದೇಶ ಪಡೆದು ಅದನ್ನು ಅನುಷ್ಠಾನ ಮಾಡಿ ಸತ್ಯ-ಧರ್ಮಗಳ ಸಾಕ್ಷಾತ್ಕಾರವನ್ನು ಪಡೆದವರ ಕಾಲ ಬಂದಿತು. ಆಗ ಸಂಪ್ರದಾಯಗಳು ಹುಟ್ಟಿದವು.  ಆ ಕಾಲದ ನಂತರ ಉಪದೇಶವಾದರೂ  ''ಬುದ್ಧಿಂ ವ್ಯಾಮೋಹಯಸೀವ ಮೇ ಏಕಂ ವದ ನಿಶ್ಚಿತ್ಯಂ" ಎನ್ನುವಂತಹ ಸಂದೇಹಗ್ರಸ್ತರ ಕಾಲವಾಗಿ ಆಗ ಬಾಯಲ್ಲಿ ಹೇಳಿದ್ದನ್ನು ನಂಬಿಸಲಿಕ್ಕಾಗಿ ಅಲೌಕಿಕ ಪ್ರಭಾವವನ್ನು ತೋರಿಸಬೇಕಾದಂತಹ ಕಾಲವಾಯಿತು. ಅನಂತರ ಆ ಕಾಲವೂ ಕಳೆದು ಶ್ರದ್ಧಾಹೀನರ ಕಾಲವು ಬಂದಿತು'' ಎಂದು ಸಂಪ್ರದಾಯಶರಣರು ಹೇಳುತ್ತಾರೆ.   

ಮೀಮಾಂಸಾ ಶಾಸ್ತ್ರದ ಹುಟ್ಟು. 
ಈ ಶಾಸ್ತ್ರವು ಈಗ ಜೈಮಿನಿ ಮಹರ್ಷಿ ಬರೆದಿರುವ ಸೂತ್ರಗಳ ರೂಪದಲ್ಲಿದೆ. ವ್ಯಾಸರಿಗಿಂತ ಮುಂಚೆ ಅನೇಕ ಜನ  ಜೈಮಿನಿ ಎಂಬ ಹೆಸರಿನ ಋಷಿಗಳು ಇದ್ದಾಗಿಯೂ ಈ ಸೂತ್ರಗಳನ್ನು ಬರೆದು ಜೈಮಿನಿಯು ವ್ಯಾಸರ ಶಿಷ್ಯ ಎಂಬ ಸಾಂಪ್ರದಾಯಿಕ ಪರಿಗಣನೆಯ ಪ್ರಕಾರ ಮೀಮಾಂಸಾ ಸೂತ್ರಗಳು ಕ್ರಿ. ಪೂ. 3100 ರಲ್ಲಿ ರಚಿತವಾದವು ಎಂದು ಹೇಳಬಹುದು.  ಜೈಮಿನಿಯು ಈ ಸೂತ್ರಗಳನ್ನು ಬರೆಯುವುದಕ್ಕಿಂತ ಮುಂಚೆಯೇ ಈ ಶಾಸ್ತ್ರ ಪ್ರಚಾರದಲ್ಲಿತ್ತು. ಬಾದರಿ, ಕಾರ್ಷ್ಣಾರ್ಜನಿ, ಆತ್ರೇಯ, ಬಾದರಾಯಣ, ಐತಿಶಾಯನ, ಕಾಮಕಾಯನ ಮೊದಲಾದ ಆಚಾರ್ಯರಿದ್ದರು. ಆದರೂ ಜೈಮಿನಿ ಬರೆದ ಸೂತ್ರಗಳೇ ಈಗ ಉಪಲಬ್ಧವಿದೆ.  
ವೇದದ ಕರ್ಮಕಾಂಡ ವಿಭಾಗದಲ್ಲಿ ಋಷಿಗಳು ಕರ್ಮವನ್ನು ಕುರಿತು "ಹಾಗೆ ಮಾಡಬೇಕೇ? ಹೀಗೆ ಮಾಡಬೇಕೇ?" ಎಂದು ವಿಚಾರಿಸಿ ಸಿದ್ಧಾಂತ ನಿರ್ಣಯ ಮಾಡುತ್ತಿದ್ದುದು ಉಂಟು. ಆ ಚರ್ಚೆಗಳೇ ಮುಂದೆ ಶಾಸ್ತ್ರದ ಪೂರ್ವಪಕ್ಷ ಸಿದ್ಧಾಂತಗಳಾಗಿವೆ. ಅತೀ ಪ್ರಾಚೀನ ಕಾಲದಿಂದಲೂ ಅನೇಕ ಆಚಾರ್ಯರಿಂದ ಅನೇಕ ಮುಖವಾಗಿ ಶಾಸ್ತ್ರವು ಬೆಳೆದಿದೆ. ಹೀಗೆ ಅಪಾರವಾಗಿ ಬೆಳೆದ ಶಾಸ್ತ್ರವನ್ನೆಲ್ಲ ಅಧ್ಯಯನವನ್ನು ಮಾಡಲಾಗದ ಕಾಲದಲ್ಲಿ ಸೂತ್ರಗಳು ಹುಟ್ಟಿಕೊಂಡವು. ಕಾಲಕ್ರಮೇಣ ಸೂತ್ರಗಳು ತಪ್ಪಾಗಿ ಅರ್ಥೈಕೆಗೊಳಗಾಗಬಾರದು ಎಂಬ ಉದ್ದೇಶದಿಂದ  ವೃತ್ತಿಗಳು ಹಾಗೂ ಭಾಷ್ಯಗಳೂ ವಿರಚಿತಗೊಂಡವು. ಭಾಷ್ಯವು ಎಷ್ಟೇ ಸುಲಭವಿದ್ದರೂ ಕಾಲನ ಹೊಡೆತದಿಂದ ಮಾನವಕುಲ ಅಲ್ಪಮತಿಯಾದಮೇಲೆ ಅವುಗಳಿಗೆ ವ್ಯಾಖ್ಯಾನಗಳನ್ನು ಹಾಗೂ ವಾರ್ತಿಕಗಳನ್ನು  ಬರೆಯಬೇಕಾದ ಕಾಲ ಬಂದಿತು.   ಶಾಸ್ತ್ರವ್ಯಾಸಂಗವು ವಿಸ್ತಾರವಾದಮೇಲೆ ಒಂದೇ ಶಾಸ್ತ್ರವನ್ನು ಬೇರೆ ಬೇರೆ ಪರಿಪಾಠಿಯಿಂದ ನೋಡುವ ಪ್ರಕರಣಗ್ರಂಥಗಳು, ಹಾಗೂ ಶಾಸ್ತ್ರದೊಳಗಿನ ನಿರ್ದಿಷ್ಟ ಒಂದೇವಿಷಯವನ್ನು ವಿಸ್ತರಿಸಿ ಬರೆದ ವಾದಗ್ರಂಥಗಳೂ, ಕ್ರೋಢ ಪತ್ರಗಳೂ ಬಂದವು.  ಹಾಗೇಯೇ ಮೂಲ ಶಾಸ್ತ್ರಪ್ರಕ್ರಿಯೆಯು ಕೊಂಚ ಕೊಂಚ ಬದಲಾಗುತ್ತ ''ಪ್ರಾಚೀನ ಮತ'' ಹಾಗೂ ''ನವ್ಯಮತ'' ಎಂಬ ಪ್ರಭೇದಗಳು ಮೈದಳೆದವು. ಅವುಗಳಷ್ಟೇ ಅಲ್ಲದೇ ಪ್ರಾಭಾಕರ ಮತ ಮತ್ತು ಭಾಟ್ಟ ಮತ ಎಂಬ ಕವಲು ಉಂಟಾಯಿತು. ಪ್ರಾಭಾಕರ ಮತವು ಈಗ ಪ್ರಚಲಿತದಲ್ಲಿಲ್ಲ.


ಮೀಮಾಂಸೆಯ ಸ್ವರೂಪ
''ಅಥಾತೋ ಧರ್ಮಜಿಜ್ಞಾಸಾ'' ಎಂಬ ಸೂತ್ರದೊಂದಿಗೆ ಈ ಇದು ಪ್ರಾರಂಭವಾಗುತ್ತದೆ. ಧರ್ಮ ಮತ್ತು ಅಧರ್ಮಗಳನ್ನು ಜಿಜ್ಞಾಸೆಗೊಳಪಡಿಸಿ ಚರ್ಚಿಸಿ ನಿರ್ಣಯಿಸುವುದಕ್ಕೆಂದೇ ಈ ಶಾಸ್ತ್ರ ಹೊರಟಿದೆ.   ಇಂತಹ ಒಟ್ಟು 2644 ಸೂತ್ರಗಳು ಇದರಲ್ಲಿವೆ. ಸೂತ್ರಗಳು ''ಪೂರ್ವಪಕ್ಷ'', ''ಸಮಾಧಾನ'' ಹಾಗೂ ''ಸಿದ್ಧಾಂತ'' ಎಂಬ ಮೂರು ವಿಷಯ ಒಳಗೊಂಡಿವೆ. ''ಅಭ್ಯುಪೇತ್ಯವಾದ'' ಮತ್ತು ''ಅನುಗ್ರಹವಾದ'' ಎಂಬ ಎರಡು ವಾದ ಪ್ರಕಾರಗಳಿವೆ. ''ಆಭಾಷಾಂತ ಸೂತ್ರ'', ''ಪ್ರಯೋಜನ ಸೂತ್ರ'', ''ಪದೋತ್ತರ ಸೂತ್ರ'' ಇತ್ಯಾದಿ ಸೂತ್ರಪ್ರಕಾರಗಳಿವೆ.   ಇವುಗಳನ್ನು ಹನ್ನೆರಡು ಅಧ್ಯಾಯ ಹಾಗೂ ಅರವತ್ತು ಪಾದಗಳಲ್ಲಿ ವಿಷಯಗಳಿಗೆ ಅನುಸಾರವಾಗಿ ವಿಂಗಡಿಸಲಾಗಿದೆ. ಕುಮಾರಿಲ ಭಟ್ಟರು ಇದ್ದಕ್ಕೆ ವಾರ್ತಿಕವನ್ನು ಬರೆದಿದ್ದಾರೆ. ಅದೇ ಭಾಟ್ಟಮತವಾಗಿದೆ.

ಧರ್ಮಶಾಸ್ತ್ರ
"ಧರ್ಮಶಾಸ್ತ್ರ" ಎಂಬ ಮತ್ತೊಂದು ಶಾಸ್ತ್ರವು ಹುಟ್ಟಿದೆ. ಅದೂ ಕೂಡ ಧರ್ಮವನ್ನು ಬೋಧಿಸಲಿಕ್ಕೇ ಹೊರಟಿದ್ದು.  ಆದರೆ ಅದು ಶಾಸ್ತ್ರಪ್ರಕ್ರಿಯೆಯ ಮೂಲಕ ಧರ್ಮದ ಜಿಜ್ಞಾಸೆಯನ್ನು ಮಾಡುವುದಿಲ್ಲ. ಧರ್ಮಶಾಸ್ತ್ರವು ಮೀಮಾಂಸೆಯು ನಿರ್ಣಯಿಸಿದ ಧರ್ಮವನ್ನು ಆಚರಿಸುವ ಸಮಯ, ಅಧಿಕಾರ, ನಿಯಮ, ವಿಧಿ-ನಿಷೇಧ ಮುಂತಾದವುಗಳನ್ನು ಹೇಳುತ್ತದೆ.  ಆರು ದರ್ಶನಗಳು ಜಿಜ್ಞಾಸೆಯ ಮೂಲಕ ಸಿದ್ಧಾಂತಗಳನ್ನು ಮಂಡಿಸಿದರೆ ಧರ್ಮಶಾಸ್ತ್ರವು ಅವುಗಳಿಗೆ ಅನುಗುಣವಾಗಿ ಮಾಡಬೇಕಾದ ಅನುಷ್ಠಾನವನ್ನು ಹೇಳುತ್ತದೆ.  ಈ ಧರ್ಮಶಾಸ್ತ್ರವು ಪೂರ್ಣವಾಗಿ ಪೌರುಷೇಯವಾಗಿದೆ. ದರ್ಶನಗಳಿಗಿಂತ ಅರ್ವಾಚೀನವಾಗಿದೆ. ಧರ್ಮಶಾಸ್ತ್ರದಲ್ಲಿ ''ಸೂತ್ರಗಳು'' ಹಾಗೂ ''ಸ್ಮೃತಿಗಳು'' ಎಂಬ ಎರಡು ರೀತಿಯ ಗ್ರಂಥಗಳಿವೆ. ''ಧರ್ಮಸೂತ್ರಗಳು'', ''ಗೃಹ್ಯಸೂತ್ರಗಳು'', ಹಾಗೂ ''ಕಲ್ಪಸೂತ್ರಗಳು'' ಎಂಬ ಮೂರು ಪ್ರಕಾರದ ಸೂತ್ರಗಳಿವೆ. ಎಲ್ಲ ಸ್ಮೃತಿಗಳೂ ಈ ಸೂತ್ರಗಳನ್ನು ಆಧರಿಸಿಯೇ ಬರೆದದ್ದಾಗಿವೆ.
(ಗ್ರಂಥಋಣ - ದೇವುಡು ಅವರ ಮೀಮಾಂಸಾ ದರ್ಪಣ)

ಧರ್ಮದ ಕುರಿತು ( ಗುರುವಾಣಿ)

1925-1927 ರ ನಡುವೆ ಎರಡು ವರ್ಷಗಳ ಕಾಲ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ತಮಿಳುನಾಡಿನ ವಿವಿಧ ಊರುಗಳಿಗೆ ಭೇಟಿ ಕೊಟ್ಟಾಗ ಅನೇಕ ಜಿಜ್ಞಾಸುಗಳು-ಭಕ್ತರು ಸ್ವಾಮೀಜೀಯವರನ್ನು ಭೇಟಿ ಮಾಡಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಸ್ವಾಮಿಗಳ ಜೊತೆ ಇದ್ದ ಕೃಷ್ಣಸ್ವಾಮಿ ಐಯ್ಯರ್ ಎಂಬುವರು ಅಲ್ಲಿ ನಡೆದ ಸಂಭಾಷಣೆಯನ್ನು ಬರೆದುಕೊಂಡು ಆ ಬರಹಗಳನ್ನು  ಇಂಗ್ಲೀಷ್ ನಲ್ಲಿ '' From the master's lips'' ಎಂಬ ಹೆಸರಿನಲ್ಲಿ 1930 ರಲ್ಲಿ ಪ್ರಕಟಿಸಿದ್ದರು. ಅದೇ ಆಮೇಲೆ Dialogues with the Guru ಎಂಬ ಹೆಸರಿನಲ್ಲಿ ಮುಂಬೈನಲ್ಲಿ ಪುನರ್ಮುದ್ರಿತವಾಗಿತ್ತು. ಈಗ ಆ ಪುಸ್ತಕ ಸಿಗುವುದಿಲ್ಲ. ಆ ಪುಸ್ತಕದಲ್ಲಿ ಹನ್ನೆರಡು ಅಧ್ಯಾಯಗಳಿವೆ. ಆವುಗಳಲ್ಲಿ ಮೊದಲ ಅಧ್ಯಾಯ ಅಥವಾ ಮೊದಲ ಸಂಭಾಷಣೆಯನ್ನು ಜಿಜ್ಞಾಸುಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ.  ಚಂದ್ರಶೇಖರಭಾರತಿ ಸ್ವಾಮಿಗಳು ಕೇವಲ ಒಬ್ಬ ಪೀಠಾಧಿಪತಿಗಳಾಗಿರಲಿಲ್ಲ. ಪೀಠದ ಮೇಲಿದ್ದರು ಎನ್ನುವ ಕಾರಣಕ್ಕೆ ಮಾತ್ರವಲ್ಲದೇ ಶಾಸ್ತ್ರಾಧ್ಯಯನ, ತಪಸ್ಸು ಮುಂತಾದ ಅನೇಕ ಕಾರಣಗಳಿಂದಾಗಿ ವಿಶಿಷ್ಟವಾಗಿ ಗುರ್ತಿಸಲ್ಪಡುವ ಮಹಾತ್ಮರು. ಹೀಗಾಗಿ ಅವರ ಮಾತುಗಳಿಗೆ ವಿಶೇಷವಾದ ಮಹತ್ವವಿದೆ. ''ಶಾರದಾ ಪೀಠದ ಮಾಣಿಕ್ಯ'' ಎಂಬ ಪುಸ್ತಕ ಓದಿದರೆ ನಿಮಗೆ ಅವರ ವ್ಯಕ್ತಿತ್ವದ ಪರಿಚಯವಾದೀತು. ಇಲ್ಲಿನ ಮೊದಲ ಬರಹ ಸ್ವಲ್ಪ ಉದ್ದವಿದೆ. ಓದಲು ಸ್ವಲ್ಪ ಸಹನೆ-ಸಮಯ ಬೇಕು.

 ಧರ್ಮದ ಕುರಿತು. 

 ಸ್ವಾಮಿಗಳು ತಮಿಳುನಾಡಿನ ಹಳ್ಳಿಯೋಂದರಲ್ಲಿ 1926 ರಲ್ಲಿ ಬಿಡಾರ ಹೂಡಿದ್ದಾಗ ಅವರನ್ನು ಭೇಟಿ ಮಾಡಲು ಶ್ರೀ ‘’ಎ’’ ಎಂಬ ಯುರೋಪಿಯನ್ ದೇಶದ ವ್ಯಕ್ತಿಯೊಬ್ಬರು ಬಂದಿದ್ದರು. ವೇದಾಂತಶಾಸ್ತ್ರದ ಕುರಿತು ಕೆಲ ಜನಪ್ರಿಯ ಪುಸ್ತಕಗಳನ್ನು ಅವರು ಈಗಾಗಲೇ ಓದಿ ಅದರ ಬೋಧೆಗಳಿಂದ ಪ್ರಭಾವಕ್ಕೊಳಗಾಗಿದ್ದರು.  ಅವರು ಸ್ವಾಮಿಗಳನ್ನು ಭೇಟಿಯಾದಾಗ ನಡೆದ ಸಂಬಾಷಣೆ ಇಲ್ಲಿದೆ.

*****
ಶ್ರೀ ಎ: ಸ್ವಾಮಿಗಳೇ, ನನ್ನನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡಿ ಸೇರಿಸಿಕೊಳ್ಳುಲು ತಾವು ಸಿದ್ಧರಿದ್ದೀರಾ..? ನನ್ನ ಹಾಗೆಯೇ ಹಿಂದೂ ಆಗಿ ಪರಿವರ್ತನೆಗೊಳ್ಳುವ ಆಸೆ ಇರುವ ಅನೇಕ ಮಿತ್ರರಿದ್ದಾರೆ. ಅವರನ್ನೂ ಕೂಡ ಕರೆತರುತ್ತೇನೆ. ನಮಗೆಲ್ಲಾ ಈ ಹಿಂದೂ ಧರ್ಮದಿಂದ ಪ್ರಯೋಜನ ಇದೆ ಅನ್ನುವುದು ಮನವರಿಕೆ ಆಗಿದೆ.

ಸ್ವಾಮಿಗಳು: ಹಿಂದೂ ಧರ್ಮವು ಜಗತ್ತಿನ ವಿಚಾರಪರ ಜಿಜ್ಞಾಸುಗಳನ್ನೆಲ್ಲ ತನ್ನ ಕಡೆಗೆ ಆಕರ್ಷಿಸುವುದು ಸಹಜ. ಆದರೆ ನಾವು  ಮತಾಂತರಿಗಳನ್ನು ಸ್ವೀಕರಿಸುವುದಿಲ್ಲ.

ಎ: ನಿಮ್ಮ ಹಿಂದೂ ಧರ್ಮವು ಮಾನವ ಕುಲಕ್ಕೆ ಹಿತಕಾರಿ ಎಂಬುದನ್ನು ಒಪ್ಪಿಕೊಂಡಲ್ಲಿ ತಾವು ಮತಾಂತರಗೊಳ್ಳಲು ಬಯಸುವವರನ್ನು ಅದರಲ್ಲಿ ಸೇರಲು ಅವಕಾಶ ಕೊಡಬೇಕು ಅನ್ನುವುದು ಸ್ಪಷ್ಟವಾಗುತ್ತದೆ ಅಲ್ಲವೇ..? ಮತ್ತೇಕೆ ಮತಾಂತರ ಬೇಡ ಅನ್ನುತ್ತೀರಿ?

ಸ್ವಾಮಿಗಳು: ಅದು ಹಾಗಲ್ಲ. ಒಬ್ಬ ವ್ಯಕ್ತಿ ತಾನು ಮತಾಂತರ ಹೊಂದಬೇಕೆಂಬ ಆಸೆಯನ್ನು ಹೊಂದಿರುವ ಧರ್ಮಕ್ಕೆ ಸೇರದೇ ಇದ್ದಾಗ ಮಾತ್ರ ಮತಾಂತರದ ಪ್ರಶ್ನೆ ಉದ್ಭವಿಸುತ್ತದೆ.

ಎ: ಅದು ಹೇಗೆ? ಹಿಂದೂಗಳಾಗಿ ಪರಿವರ್ತನೆ ಹೊಂದಬಯಸುವ ನನ್ನಂಥವರು ಕೇವಲ  ಆ ಬಯಕೆಯಿಂದ ಪರಿವರ್ತನೆ ಆಗಿಬಿಡುತ್ತಾರೆಯೇ?  ಅದಕ್ಕೆ ಯಾವುದೇ ಸಾಂಪ್ರದಾಯಿಕ ವಿಧಿಯ ಅಗತ್ಯ ಇಲ್ಲ ಅನ್ನುವುದು ಸ್ವಾಮಿಗಳ ಅಭಿಪ್ರಾಯವೇ?

ಸ್ವಾಮಿಗಳು: ಅಲ್ಲ. ಹಿಂದೂಗಳು ಎಂದು ಕರೆದುಕೊಳ್ಳಲು ಬಯಸುವವರು ಹಾಗೂ ಆ ರೀತಿ ಬಯಸದೇ ಇರುವವರೂ ಕೂಡ ಹಿಂದೂಗಳೇ ಎಂಬುದು ನನ್ನ ಅಭಿಪ್ರಾಯ.

ಎ: ಇದು ಹೇಗೆ ಸಾಧ್ಯ?

ಸ್ವಾಮಿಗಳು: ನಮ್ಮ  ಧರ್ಮಕ್ಕೆ “ಹಿಂದೂ” ಎಂಬ ಹೆಸರು ಬಂದಿದ್ದು ತೀರ ಇತ್ತೀಚೆಗೆ. ಅದರ ನಿಜವಾದ ಹೆಸರು ಸನಾತನ ಧರ್ಮ. ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಪ್ರಾರಂಭವಾಗಲಿಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ –ಅವು ಒಪ್ಪಲಿ-ಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ನಾವು ಅರಿತು ಒಪ್ಪಿಕೊಂಡಲ್ಲಿ ನಮಗೆ ಒಳಿತು. ಇಲ್ಲದಿದ್ದಲ್ಲಿ ಕೆಡುಕು ನಮಗೇ. ಸನಾತನ ಧರ್ಮವು ಈ ರೀತಿಯಾದದ್ದು.

ಎ: ಜಗತ್ತಿನ ಎಲ್ಲರೂ ಹಿಂದೂಗಳೇ ಎಂದು ತಾವು ಹೇಳಿದಲ್ಲಿ ಜಾತಿಪದ್ಧತಿಯನ್ನು ತಾವು ಹೇಗೆ ಸಮರ್ಥಿಸುವಿರಿ. ?

ಸ್ವಾಮಿಗಳು: ಎಲ್ಲರೂ ಹಿಂದೂಗಳೇ ಎಂದರೆ ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ಮಾರ್ಗದರ್ಶನ ಪಡೆಯಲು ಅರ್ಹರು ಎಂದರ್ಥ.  ಆದರೆ ಈ ಮಾರ್ಗದರ್ಶನವು ಎಲ್ಲರಿಗೂ ಒಂದೇ ರೀತಿ ಇರುತ್ತದೆ ಎಂದರ್ಥವಲ್ಲ. ಮನುಷ್ಯನಿಗೆ ಹುಟ್ಟಿನಿಂದ ಬಂದ ಒಲವು, ಸ್ವಭಾವ, ಪೂರ್ವಜನ್ಮದ ಸಂಸ್ಕಾರ, ಪರಿಸರ ಮತ್ತು ಅವನು ಹುಟ್ಟಿದ ಮೇಲೆ ಪಡೆದುಕೊಳ್ಳುವ ತರಬೇತು ಇವೆಲ್ಲವೂ ಒಂದೇ ಆಗಿರಲು ಸಾಧ್ಯವಿಲ್ಲ. ಈ ಅವಿರೋಧ ಸತ್ಯವನ್ನು ಗಣನೆಗೆ ತೆಗೆದುಕೊಂಡು ಸನಾತನ ಧರ್ಮವು ಸಾಮಾನ್ಯಧರ್ಮ ಮತ್ತು ವಿಶೇಷಧರ್ಮಗಳು ಎಂದು ವಿಂಗಡಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.  ಮೊದಲನೆಯದು(ಸಾಮಾನ್ಯ ಧರ್ಮ) ಇಡೀ ಮಾನವಕುಲಕ್ಕೆ ಸಹಕಾರಿಯಾದರೆ ಎರಡನೆಯದು ಮತ್ತು ಮೊದಲನೆಯದು (ಸಾಮಾನ್ಯ ಧರ್ಮ ಮತ್ತು ವಿಶೇಷ ಧರ್ಮ) ಎರಡೂ ಸೇರಿ ಜಾತಿ ಚೌಕಟ್ಟಿನೊಳಗೆ ಬರುವವರಿಗೆ ಉಪಯುಕ್ತವಾಗಿವೆ.

ಎ: ಈ “ವಿಶೇಷ ಧರ್ಮ” ಗಳಿಗೆ ಆಧ್ಯಾತ್ಮಿಕ ಮೌಲ್ಯಗಳಿವೆ,  ಅದು ಹೆಚ್ಚು ಪ್ರಯೋಜನಕಾರಿ  ಎಂದಾದಲ್ಲಿ ಅವುಗಳ ಪ್ರಯೋಜನವನ್ನು ವರ್ಣವ್ಯವಸ್ಥೆಯ ಹೊರಗಿನವರು ಏಕೆ ಪಡೆಯಬಾರದು?

ಸ್ವಾಮಿಗಳು: ನೀರು ಎಲ್ಲ ಜೀವಿಗಳಿಗೂ ಪ್ರಯೋಜನಕಾರಿ. ಆದರೆ ಬಿಸಿಲಿನಿಂದ ದಣಿದಿರುವ ವ್ಯಕ್ತಿಗೆ ಹಾಗೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಒಂದೇ ರೀತಿಯಲ್ಲಿ ಪ್ರಯೋಜನಕಾರಿಯೇ ? ಸಂದರ್ಭಕ್ಕೆ ತಕ್ಕಂತೆ ಪ್ರಯೋಜನ ಬದಲಾಗುತ್ತದೆ.

ಎ: ತಮ್ಮ ಉದಾಹರಣೆ ನನಗೆ ಅಷ್ಟಾಗಿ ಒಪ್ಪಿಗೆಯಾಗುತ್ತಿಲ್ಲ. ನಿರ್ದಿಷ್ಟ ವರ್ಗಕ್ಕೆ ಅನ್ವಯಿಸುವ ನಿಯಮವು ಆ ವರ್ಗಕ್ಕೆ ಅಥವಾ ಯಾವುದೇ ವರ್ಗಕ್ಕೆ ಸೇರದೇ ಇರುವವರಿಗೆ ಹಾನಿಕಾರಕ ಎಂದು ಸಮರ್ಥಿಸಲು ಯಾವುದೇ ಆಧಾರವಿಲ್ಲ.

ಸ್ವಾಮಿಗಳು: ಅದೇ ರೀತಿ ಆ ನಿಯಮಗಳು ''ಎಲ್ಲರಿಗೂ ಪ್ರಯೋಜನಕಾರಿ'' ಎಂಬುದನ್ನೂ ಕೂಡ ಸಮರ್ಥಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಒಂದು ನಿರ್ದಿಷ್ಟ ಜಾತಿಗೆ ಸೇರಿದ ನಿಯಮವಾಗಿದೆ ಎಂಬ ಕಾರಣಕ್ಕಾಗಿಯೇ ಅದು ಪ್ರಯೋಜನಕಾರಿಯಾಗಿದೆ. ಆ ಕಾರಣಕ್ಕಾಗಿಯೇ ಅದು “ವಿಶೇಷ ನಿಯಮ’’ ಅನ್ನಿಸಿಕೊಂಡಿದೆ. ಆದ್ದರಿಂದ ಆ ನಿಯಮಕ್ಕೆ ಸಾರ್ವತ್ರಿಕ ಅನ್ವಯವಿರಲು ಸಾಧ್ಯವಿಲ್ಲ.   ಈ ನೀತಿ ನಿಯಮಗಳ ಬಗ್ಗೆ (ಧರ್ಮದ ಬಗ್ಗೆ) ನಮಗೆ ಶಾಸ್ತ್ರಗಳು ಮಾತ್ರ ತಿಳಿಸುತ್ತವೆ. ಇದನ್ನು ನಾವು ಒಪ್ಪಿಕೊಂಡಲ್ಲಿ (ಶಾಸ್ತ್ರ ತಿಳಿಸುವ ಧರ್ಮವು ಪ್ರಯೋಜನಕಾರಿ ಎಂದು ಒಪ್ಪಿಕೊಂಡಲ್ಲಿ) ಆ ನಿಯಮವು ಯಾರಿಗೆ  ಪ್ರಯೋಜನಕಾರಿ.. ಮತ್ತು ಯಾರಿಗೆ ಪ್ರಯೋಜನಕಾರಿ ಅಲ್ಲ ಎನ್ನುವುದನ್ನೂ  ಕೂಡ ತಿಳಿಸುವ ಅವೇ ಶಾಸ್ತ್ರಗಳ ಆದೇಶವನ್ನು ಪೂರ್ಣವಾಗಿ ಒಪ್ಪಬೇಕಾಗುತ್ತದೆ. ಶಾಸ್ತ್ರಗಳ ಮೂಲಕ ಧರ್ಮದಿಂದ ಪ್ರಯೋಜನ ಇದೆ ಎಂದು ತಿಳಿದ ನೀವು (ಎಲ್ಲರಿಗೂ ಏಕರೂಪ ಧರ್ಮ ಹೇಳಲಾಗಿಲ್ಲ ಅನ್ನುವ ಕಾರಣಕ್ಕೆ) ಅವೇ ಶಾಸ್ತ್ರಗಳನ್ನು ನೀರಾಕರಿಸುವಿರೋ?  ಆದರೆ ಹಾಗೆ ಮಾಡಲು ಬರುವುದಿಲ್ಲ. (ಶಾಸ್ತ್ರದ ಒಂದು ಆದೇಶ ಸರಿ ಮತ್ತೊಂದು ತಪ್ಪು ಆಗಿರಲು ಸಾಧ್ಯವಿಲ್ಲ) ಮನುಷ್ಯನ ನಡವಳಿಕೆಯ ನಿಯಂತ್ರಣವೇ ಶಾಸ್ತ್ರಗಳ ಉದ್ದೇಶವಾಗಿದೆ. ಸನಾತನ ಧರ್ಮವಾಗಲಿ ಅಥವಾ ಇನ್ನಾವುದೇ ಧರ್ಮವಾಗಲಿ ಎಲ್ಲವೂ ಅಧಿಕಾರಸಿದ್ಧಾಂತವನ್ನು ಅವಲಂಬಿಸಿವೆ. (ಅಧಿಕಾರ ಎಂದರೆ ಅರ್ಹತೆ) ಧರ್ಮವನ್ನು ಪಾಲಿಸಲು ಅಧಿಕಾರದ ಸ್ವರೂಪವನ್ನು ನಿರ್ಣಯಿಸುವುದು ಅಗತ್ಯ.  ವರ್ಣದ ಚೌಕಟ್ಟಿನೊಳಗೆ ಬರುವವರು ವಿಶೇಷ ಧರ್ಮವನ್ನು ಪಾಲಿಸಲು ಅಧಿಕಾರವಿದೆ. ಉಳಿದವರು ಕೇವಲ ಸಾಮಾನ್ಯಧರ್ಮವನ್ನು ಪಾಲಿಸಲು ಅಧಿಕಾರಿಗಳು.

ಎ: ಸನಾತನ ಶಾಸ್ತ್ರಗಳು ಇಡೀ ಮನುಕುಲಕ್ಕೆ ಹಿತಕಾರಿಯಾಗಿದ್ದಲ್ಲಿ, ಮತ್ತು ತಾವೀಗ ಹೇಳಿದಂತೆ ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ನಿಮ್ಮ ಧರ್ಮಕ್ಕೆ ಸೇರಿದವರಾದಲ್ಲಿ ಜಗತ್ತಿನ ಇತರ ಧರ್ಮಗಳ ಬಗ್ಗೆ ತಮ್ಮ ಅಭಿಪ್ರಾಯವೇನು?

ಸ್ವಾಮಿಗಳು: ಆ ಧರ್ಮಗಳಿಗೆ ಸೇರಿದವರು ತಮ್ಮ ಧರ್ಮಗಳು ಸನಾತನ ಧರ್ಮದಿಂದಲೇ ಉದಿಸಿದವುಳು, ಅದರ ಅಂಗಗಳು ಎಂದು ತಿಳಿಯದೇ ಇರುವುದು ಅವರ ತಪ್ಪು.  ಇತರ ಎಲ್ಲ ಧರ್ಮಗಳ ಉತ್ಕೃಷ್ಟ ಬೋಧನೆಗಳು ತಮ್ಮ ಸ್ಥಾನವನ್ನು ಸನಾತನ ಧರ್ಮದಲ್ಲಿಯೂ ಪಡೆದುಕೊಂಡಿವೆ. ಅವು ಸನಾತನಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ.

ಎ: ಸ್ವಾಮಿಗಳೇ. ತಮ್ಮ  ಈ ಹೇಳಿಕೆ ಉತ್ಪ್ರೇಕ್ಷೆಯಲ್ಲವೇ? ಇತರರು ಅದನ್ನು ಒಪ್ಪಿಕೊಳ್ಳದೇ ಇರಬಹುದು.

ಸ್ವಾಮಿಗಳು: ಪ್ರಸ್ತುತ ನಮ್ಮ ಚರ್ಚೆಯು ಸನಾತನ ಧರ್ಮದ ಬಗ್ಗೆ ಇತರರಿಗೆ ಇರಬಹುದಾದ ಮಾನ್ಯತೆಗಳಿಗೆ ಸಂಬಂಧಿಸಿದ್ದಲ್ಲ.  ಯಾವುದೇ ಒಂದು ಒಂದು ವಸ್ತುವಿನಲ್ಲಿ ಅಂತಸ್ಥವಾಗಿರುವ ಮೌಲ್ಯವು ಅದನ್ನು ಬೇರೆಯವರು ಒಪ್ಪಲಿ-ಬಿಡಲಿ, ಅದು ಇದ್ದೇ ಇರುತ್ತದೆ. ಮೂಲತಃ ಶಾಸ್ತ್ರವಚನವು ಔದಾರ್ಯದ ಮಟ್ಟದಲ್ಲಿ ಇರುವುದರಿಂದ ಅನ್ನು ಇನ್ನೂ ಕೆಳದರ್ಜೆಗೆ ಇಳಿಸಲು ಸಾಧ್ಯವೇ ಇಲ್ಲ.

ಎ: ಹೇಗೆ?

ಸ್ವಾಮಿಗಳು: ನಾನು ಕ್ರೈಸ್ತ ಧರ್ಮದ ಉದಾಹರಣೆ ತೆಗೆದುಕೊಂಡು ವಿವರಿಸಿದರೆ ತಾವು ನನ್ನನ್ನು ಕ್ಷಮಿಸುವಿರೆಂದು ಭಾವಿಸುತ್ತೇನೆ.  ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ(ಧರ್ಮ) ಎಂದಾದಲ್ಲಿ ಆತನಿ(ಕ್ರಿಸ್ತನಿ)ಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ(ಧರ್ಮದ) ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಜೀಸಸ್ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ.

ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನಿಗೆ ಅಷ್ಟು ಉಚಿತವಲ್ಲ(ಅದು ಅವನ ಲಕ್ಷಣವಲ್ಲ) ಎಂದು ನಿಮಗನಿಸುವುದಿಲ್ಲವೇ?  ಆ ಭಗವಂತನು ಜೀಸಸ್ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮ ಇದ್ದವು, ಅವುಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ?  ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಆಜ್ಞೆಯು(ಮುಕ್ತಿಸಾಧನವು) ಮುಂದೆ ಜನಿಸುವ ಜೀಸಸ್ ನಲ್ಲಿನ ನಂಬಿಕೆಯು ಅದಕ್ಕೆ  ಕಡ್ಡಾಯ ಎಂಬ ನಿಯಮ ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ.

ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ(ಧರ್ಮದ) ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ ಎಂಬುದು ನಮ್ಮ ನಂಬಿಕೆ (ಶಾಸ್ತ್ರಪ್ರಕ್ರಿಯೆಯ ಅಧಿಕರಣಗಳ ಮೂಲಕ ಈ ಮಾತನ್ನು ಸಾಬೀತು ಪಡಿಸಬಹುದು).  ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. (ವೇದದ ಮೂಲವನ್ನು, ಅಪೌರುಷೇಯತ್ವನ್ನು ಅರ್ಥಮಾಡಿಕೊಳ್ಳಲು ಮೀಮಾಂಸಾ ಶಾಸ್ತ್ರವನ್ನು ನೋಡಿ) ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ.

ಎ: ಅರ್ಥವಾಯಿತು.  ಮಾನವನು ಮುಕ್ತಿಸಾಧನವನ್ನು ಅಥವಾ ಧರ್ಮವನ್ನು ಸ್ವತಃ ಕಂಡುಕೊಳ್ಳಲು ಅಸಮರ್ಥ. ಅವನಿಗೆ ಬೇರೆಯವರ ನೆರವು ಬೇಕೇಬೇಕು  ಎಂದು  ನೀವೇ ಹೇಳುತ್ತಿದ್ದೀರಲ್ಲ. ಅಂತಹ ನೆರವನ್ನು ಅವನಿಗೆ ನೀಡಿದವರು ದೇವರೇ ಆಗಿರಬಹುದು ಅಥವಾ ಬೇರೆ ಯಾರೇ ಆಗಿರಬಹುದು.

ಸ್ವಾಮಿಗಳು:  ಹಾಗೆ ಮಾಡಲಿಕ್ಕೆ ಆ ವ್ಯಕ್ತಿಗೆ ತಾನು ಹೊಂದಬೇಕಾದ ಒಂದು ''ವಸ್ತು'' ಅಥವಾ ''ಗುರಿ''  ಎಂಬುದು ಒಂದು ಇದೆ ಎಂಬ ತಿಳುವಳಿಕೆ ಇರಬೇಕು. ಅಂತಹ ವಸ್ತುವಿನ "ನೈಜ ಅನುಭವದಲ್ಲಿ" ಪಾಲ್ಗೊಂಡಾಗ ಮಾತ್ರ "ಅಂತಹ ವಸ್ತು ಇದೆ" ಎಂದು ಅವನು ತಿಳಿಯಲು ಸಾಧ್ಯ. ಗುರಿಯ ತಿಳುವಳಿಕೆ ಇಲ್ಲದೇ ಪ್ರಯತ್ನ ಹೇಗೆ ಪ್ರಾರಂಭವಾಗುತ್ತದೆ..?

 ಅಲ್ಲದೇ ನಿರ್ದಿಷ್ಟ ಸಾಧನವೊಂದು ಮುಕ್ತಿಗೆ ಒಯ್ಯಬಲ್ಲದೆಂದು ಒಬ್ಬನಿಗೆ ಖಚಿತವಾಗಿ ಮನವರಿಕೆಯಾಗಬೇಕಾದರೆ ಅವನು ಅದನ್ನು ಮೊದಲು ಅನುಸರಿಸಿರಬೇಕು. ಅಥವಾ ಅವನು ಸರ್ವಜ್ಞತ್ವದಿಂದ ''ಗುರಿ'' ಹಾಗೂ ''ಸಾಧನೆಯ ಮಾರ್ಗ''ಗಳೆರಡನ್ನೂ ಏಕಕಾಲದಲ್ಲಿ ನೋಡುವ ಸಾಮರ್ಥ್ಯ ಹೊಂದಿದವನಾಗಿರಬೇಕು. ಅಥವಾ ಅವನು ಸಾಕ್ಷಾತ್ ಗುರಿಯೇ ಆಗಿದ್ದು ತನ್ನನ್ನು ಹೊಂದುವ ವಿಧಾನವನ್ನು ಜಗತ್ತಿಗೆ ಬೋಧಿಸಬೇಕು.
ಮೇಲೆ ಹೇಳಿದವುಗಳಲ್ಲಿ ಮೊದಲನೇಯ ಆಯ್ಕೆಯನ್ನು ಒಪ್ಪಿಕೊಂಡರೆ, ಒಬ್ಬ ವ್ಯಕ್ತಿಯು ತಾನು ಅನುಸರಿಸಿ ಯಶಸ್ವಿಯಾಗುವ ಮೊದಲೇ ಆ ಮಾರ್ಗವನ್ನು ಹೇಗೆ ತಿಳಿದ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಎರಡನೇಯದನ್ನು ಒಪ್ಪಿಕೊಂಡರೆ ಆತನು ತನ್ನಲ್ಲಿ ಈ ಮೊದಲು ಇರದ ಸರ್ವಜ್ಞತ್ವವನ್ನು ಎಲ್ಲಿಂದ ಪಡೆದ? ಮತ್ತು ಹೇಗೆ ಪಡೆದ? ಎಂಬ ಅಡ್ಡಿ ಉಂಟಾಗುತ್ತದೆ.  ಆದ್ದರಿಂದ ಶೃತಿಯು ತನ್ನ ಮೂಲವನ್ನು ಭಗವಂತನಲ್ಲಿಯೇ ಹೊಂದಿದೆ ಎಂಬ ಮೂರನೇಯ ಆಯ್ಕೆಯನ್ನು ಮಾತ್ರ ನಾವು ತಾರ್ಕಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. (ಸಾಮಾನ್ಯ ಇಂದ್ರಿಯ ಮತ್ತು ಮನೋಬುದ್ಧಿಗಳ ಅನುಭವದ ಪರಿಧಿಯನ್ನು ಮೀರಿ ಬರುವ ಈ ಜ್ಞಾನವೇ ಶೃತಿ ಅಥವಾ ವೇದ ಎನಿಸಿಕೊಳ್ಳುವುದು.)

ಎ: ಭಗವಂತನ್ನು ತಿಳಿವುದು ಕಷ್ಟವಿರಬಹುದು. ಅಲ್ಲದೇ ಅದನ್ನು ತಿಳಿಯಲು ಒಬ್ಬನಿಗೆ ಅದನ್ನು ತಿಳಿದ ಇನ್ನೊಬ್ಬನ ಮಾರ್ಗದರ್ಶನದ ಅಗತ್ಯವೂ ಇರಬಹುದು. ಆದರೆ ಆತನಿಗೆ ಭಗವಂತ ಇರಬಹುದು ಎಂಬ ತಿಳುವಳಿಕೆ ಮೂಡಲಿಕ್ಕೆ ಶೃತಿಯ ಸಹಾಯ ಬೇಕಿಲ್ಲವಲ್ಲ?   ನಮ್ಮ ಬುದ್ಧಿಶಕ್ತಿಯಿಂದಲೇ ನಾವು ಅದನ್ನು ಊಹಿಸಬಹುದಲ್ಲ?

ಸ್ವಾಮಿಗಳು: ಭಗವಂತನ ಅಸ್ತಿತ್ವವನ್ನು ಅಷ್ಟು ಸ್ವತಂತ್ರವಾಗಿ ಹಾಗೂ ಸುಲಭವಾಗಿ ಊಹಿಸಬಹುದಾದಲ್ಲಿ ಪ್ರಪಂಚದಲ್ಲಿರುವ ನಾಸ್ತಿಕರ ಬಗ್ಗೆ ಏನು ಹೇಳುತ್ತೀರಿ? ನಿಮಗಿಂತಲೂ ಅವರ ವಿಚಾರ ಶಕ್ತಿ ಕಡಿಮೆ ದರ್ಜೆಯದ್ದು ಎಂಬುದು ನಿಮ್ಮ ಅಭಿಪ್ರಾಯವೇ? ದೇವರ ಇರುವಿಕೆಯ ಬಗ್ಗೆ ಆಲೋಚಿಸುವ ತೊಂದೆಯನ್ನು ತೆಗೆದುಕೊಂಡು ಆ ಯತ್ನದಲ್ಲಿ ವಿಫಲರಾದವರೂ ಕೂಡ ಅಸಾಮಾನ್ಯ ಬುದ್ಧಿಶಕ್ತಿಯಿಂದ ಕೂಡಿರುತ್ತಾರೆ. ಅವರ ವೈಫಲ್ಯಕ್ಕೆ ಬುದ್ಧಿಸಲಕರಣೆಯ ದೋಷ ಕಾರಣವಲ್ಲ. ''ಭಗವಂತನು ಮೂಲತಃ ವಿಚಾರಕ್ಕೆ ನಿಲುಕುವವನಲ್ಲ'' ಎಂಬುದೇ ಅದಕ್ಕೆ ಕಾರಣ. ಒಂದು ಪಕ್ಷ ತರ್ಕದಿಂದ ಭಗವಂತನ್ನು ಊಹಿಸಬಹುದಾದಲ್ಲಿ ಹಾಗೆ ಊಹೆಗೆ ನಿಲುಕುವ ''ದೇವರು'' ಎಂಬ ವಸ್ತು ಇದೆ ಎಂದು ನಿಮಗೆ ಯಾರು ಹೇಳಿದರು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇವರನ್ನು ಕುರಿತು ತರ್ಕಿಸುವ ಅಥವಾ ಊಹಿಸುವ ಮೊದಲು ನೀವು ಖಂಡಿತವಾಗಿಯೂ ದೇವರನ್ನು ಕುರಿತು ಹೇಳುವ ಯಾವುದೋ ಒಂದು ಮೂಲದಿಂದ ಅದರ ಬಗ್ಗೆ ಕೇಳಿರಲೇಬೇಕು. ಮೂಲವನ್ನು ಅವಲಂಬಿಸಿರಲೇ ಬೇಕು. ದೇವರು ಇದ್ದಾನೆ ಎಂದು ಯಾರಾದರೂ ಮೊದಲು ಹೇಳಿದಮೇಲೆ ಮಾತ್ರ ಆ ಮಾತನ್ನು ಒಪ್ಪಿಕೊಳ್ಳಲು ಅಥವಾ ವಿಮರ್ಶಿಸಲು ಮಾತ್ರ ನೀವು ನಿಮ್ಮ ಬುದ್ಧಿಶಕ್ತಿಯನ್ನು ವಿಚಾರ ಮಾಧ್ಯಮವನ್ನು ಬಳಸಲು ಸಾಧ್ಯ. ದೇವರ ಬಗ್ಗೆ ನೀವು ಕೇಳಿಯೇ ಇರದಿದ್ದಲ್ಲಿ ನಿಮ್ಮ ಬುದ್ಧಿಶಕ್ತಿಯು ಆ ನಿಟ್ಟಿನತ್ತ ಹರಿಯುವ ಪ್ರಸಂಗವೇ ಉಂಟಾಗುವುದಿಲ್ಲ.   

ಎ: ನನ್ನ ಬುದ್ಧಿಶಕ್ತಿಯನ್ನು ಬಳಸುವ ಮುನ್ನ ನಾನು ದೇವರ ಬಗ್ಗೆ ಕೇಳಿರಲೇಬೇಕೆಂದೇನಿಲ್ಲ. ದೇವರು ಎಂಬ ಪದ ನನ್ನ ಮನಸ್ಸಿನಲ್ಲಿ ಇಲ್ಲದೇ ಇರಬಹುದು. ಆದರೆ ಸತತವಾಗಿ ಬದಲಾವಣೆ ಹೊಂದುತ್ತಿರುವ ಈ ಜಗತ್ತಿನ ಹಿನ್ನೆಲೆಯಲ್ಲಿ ಇರುವ ನಿತ್ಯವೂ, ಅವಿಕಾರಿಯೂ ಆದ ವಸ್ತುವೊಂದು ಇದೆ ಎಂಬುದು ಸಹಜವಾಗಿಯೇ ನನ್ನ ಬುದ್ಧಿಗೆ ವಿಷಯವಾಗಿ ಗೋಚರಿಸುತ್ತದೆ.

ಸ್ವಾಮಿಗಳು: ಸ್ವಲ್ಪ ವಿವರಿಸಿ.

ಎ:  ಜಗತ್ತಿನಲ್ಲಿ ಬೆಳಕು-ಕತ್ತಲೆ, ಕ್ರಿಯಾತ್ಮಕತೆ-ಜಡತ್ವ, ಸುಖ-ದುಃಖ, ಹುಟ್ಟು ಮತ್ತು ಸಾವು ಮುಂತಾದ ಅನೇಕ ವೈರುಧ್ಯಗಳನ್ನು ಅಥವಾ ದ್ವಂದ್ವಗಳನ್ನು ಅಲ್ಲಗಳೆಯುವಂತಿಲ್ಲ. ನನ್ನ ಊಹೆ ಈ ರೀತಿಯದ್ದು. ಜಗತ್ತಿನಲ್ಲಿ ಬದಲಾವಣೆ ಇರುವಂತೆಯೇ ಅದಕ್ಕೆ ವಿರುದ್ಧವಾದ ಬದಲಾವಣೆ ಇಲ್ಲದ ಅವಿಕಾರಿ ವಸ್ತುವೊಂದು ಅದರ ಹಿನ್ನೆಲೆಯಲ್ಲಿ ಇರಬೇಕು. ಪ್ರತಿಕ್ಷಣವೂ ಪ್ರತಿ ವಸ್ತುವೂ ನಾಶವಾಗುತ್ತಿರುವಂತೆ ಆ ನಾಶದ ಹಿನ್ನೆಲೆಯಲ್ಲಿ ನಾಶರಹಿತವಾದ ವಸ್ತುವೊಂದು ಇರಲೇಬೇಕು, ಹೀಗೆ ನಾನು ಅನೇಕ, ಅನಿತ್ಯ, ಅಸಮರೂಪ ಹಾಗೂ ಹಾಗೂ ವಿಕಾರಿಯಾದ ವಸ್ತುಗಳ ಆಧಾರದಿಂದ ಏಕ, ನಿತ್ಯ, ಸಮರೂಪ ಹಾಗೂ ಅವಿಕಾರಿಯಾದ ವಸ್ತುವನ್ನು ತರ್ಕಿಸುತ್ತೇನೆ. ನನ್ನ ಈ ರೀತಿಯ ಊಹೆ ಜಗತ್ತಿನ ಎಲ್ಲ ವಸ್ತುಗಳಿಗೂ ಅನ್ವಯಿಸುತ್ತದೆ.

 ಸ್ವಾಮಿಗಳು: ಹಾಗಾದೆ ಕುದುರೆ ಎಂಬ ವಸ್ತುವಿನ ವಿರುದ್ಧವೇನು?  ಕುದುರೆ ಎಂಬುದು ಇಂದ್ರಿಯಗಳಿಗೆ ಗೋಚರವಾಗುವ ಒಂದು ಭಾವಾತ್ಮಕ ವಿಷಯ. ಆದ್ದರಿಂದ ಅದಕ್ಕೆ ವಿರುದ್ಧವಾದ ಅಸ್ತಿತ್ವವನ್ನು ಊಹಿಸಲು ನಿಮಗೆ ಸಾಧ್ಯವಿರಬೇಕಲ್ಲವೇ? ಆ ವಿರುದ್ಧ ವಸ್ತುವಾದರೂ ಏನು? ನನ್ನ ಪ್ರಶ್ನೆ ಸ್ವಲ್ಪ ಅಸಂಗತವಾದರೂ ಇದಕ್ಕೆ ಉತ್ತರ ನೀಡುವ ಅಗತ್ಯವಿದೆ.

ಎ: ಕುದುರೆಗೆ ''ಅಕುದುರೆ'' ಅಥವಾ ಕುದುರೆ ಇಲ್ಲದಿರುವುದೇ ಅದರ ವಿರುದ್ಧ.

ಸ್ವಾಮಿಗಳು: ಸರಿಯಾಗಿ ಹೇಳಿದಿರಿ. ಆದರೆ ಈ ''ಅಕುದುರೆ''ಯು ಒಂದು ಭಾವಾತ್ಮಕ ನೈಜ ವಸ್ತುವೋ? ಅಥವಾ ನಿಷೇಧಾತ್ಮಕ ಮಿಥ್ಯಾವಸ್ತುವೋ?  ಅದೊಂದು ಪ್ರಾಣಿಯೋ ಅಥವಾ ನಿಮ್ಮ ಈ ''ಅಕುದುರೆ''ಯ ಕಲ್ಪನೆಯು ಜಗತ್ತಿನ ಉಳಿದ (ಕುದುರೆಯ ಹೊರತಾದ) ಎಲ್ಲ ವಸ್ತುಗಳನ್ನು ಒಳಗೊಂಡಿದೆಯೋ?

ಎ: ಖಚಿತವಾಗಿ ಹೇಳಬೇಕೆಂದರೆ ಅದು ಜಗತ್ತಿನ ಇತರ ಎಲ್ಲ ವಸ್ತುಗಳನ್ನೂ ಒಳಗೊಂಡಿದೆ. ಈ ಅರ್ಥದಲ್ಲಿ ಒಂದು ಕಲ್ಲು ಕೂಡ ''ಅಕುದುರೆ''ಯಾಗುತ್ತದೆ. ಆದರೆ ನಾವು ಅನ್ವಯಿಸುತ್ತಿರುವ ನಿಷೇಧವು ಕೇವಲ ಕುದುರೆಗೆ ಸಂಬಂಧಿಸಿರುವುದರಿಂದ ''ಅಕುದುರೆ'' ಎಂಬುದು ಒಂದು ಭಾವಾತ್ಮಕ ವಸ್ತುವೆಂದೇ ಹೇಳಬೇಕಾಗುತ್ತದೆ. ಅಂದರೆ ಕುದುರೆಯಲ್ಲಿರುವ ''ಅಶ್ವತ್ವ'' ಎಂಬ ವಿಶೇಷಣವನ್ನು ಅದರ ವಿರುದ್ಧದಲ್ಲಿ ನಿಷೇಧಿಸುವುದು ಸಾಕು ಎನಿಸುತ್ತದೆ. ಹಾಗೆ ಮಾಡಿದಾಗ ''ಅಕುದುರೆ''ಯು ''ಕುದುರೆ ಅಲ್ಲದಿರುವ ಪ್ರಾಣಿ'' ಎಂದಾಗುತ್ತದೆ.

ಸ್ವಾಮಿಗಳು: ಅಂದರೆ ವಸ್ತುವೊಂದರ ವಿರುದ್ಧವು ಆ ವಸ್ತುವಿನ ವರ್ಗಕ್ಕೆ ಸೇರಿದ್ದು, ಅದು ಆ ವಸ್ತುವು ಹೊಂದಿರಬಹುದಾದ ಯಾವುದೋ ಒಂದು ವಿಶೇಷಣದ ವಿಷಯದಲ್ಲಿ ವಸ್ತುವಿಗಿಂತಲೂ ಭಿನ್ನವಾಗಿರುತ್ತದೆ. ಅಲ್ಲವೇ?
ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಆ ವಸ್ತುವಿಗೆ ಪ್ರಪಂಚದಲ್ಲಿರುವ ಬೇರೆ ಯಾವುದೇ ವಸ್ತುವಿಗೆ ''ಸಂಪೂರ್ಣವಾದ ವಿರೋಧ'' ''ಇರುವುದೇ ಇಲ್ಲ''. ವಸ್ತುವೊಂದರಲ್ಲಿ ಇರುವ ಹಾಗೂ ಇನ್ನೊಂದರಲ್ಲಿ ಇಲ್ಲದಿರುವ ''ವಿಶೇಷವೇ'' ನಮ್ಮನ್ನು ಅವೆರಡು ''ಪರಸ್ಪರ ವಿರುದ್ಧ'' ಗಳೆಂದು ಚಿಂತಿಸುವಂತೆ ಮಾಡುತ್ತದೆ. 
ಬೆಳಕಿನ ಪ್ರಖರತೆಯನ್ನು ನಾವು ಕತ್ತಲೆಯ ದೃಷ್ಟಿಕೋನದಿಂದ ನೋಡಲು ಸಾಧ್ಯ. ಹಾಗೆಯೇ ಕತ್ತಲೆಯನ್ನು ಬೆಳಕಿನ ಮಾನದಿಂದ ಅಳೆಯಲೂ ಸಾಧ್ಯ. ಹೀಗೆ ಬೆಳಕು ಕತ್ತಲೆಗಳು ಸಂಪೂರ್ಣ ದ್ವಂದ್ವಗಳಾಗದೇ ಪರಸ್ಪರ ಸಾಪೇಕ್ಷ ವಸ್ತುಗಳಾಗಿ ಪರಿಣಮಿಸಿ ನಿಮ್ಮ ವೈರುಧ್ಯ ಸಿದ್ಧಾಂತವು ಕುಸಿದು ಬೀಳುತ್ತದೆ.

ಅಲ್ಲದೇ ತರ್ಕದ ಎಲ್ಲೆಯ ಬಗ್ಗೆ ನಿವು ತಪ್ಪು ತಿಳಿದಿರುವಿರೆಂದು ತೋರುತ್ತದೆ. ನಾನು ಈ ಮೊದಲೇ ಹೇಳಿದಂತೆ ''ತರ್ಕಿಸಬಹುದಾದ ವಸ್ತುವೊಂದಿದೆ'' ಎಂಬ ಪೂರ್ವಜ್ಞಾನವಿಲ್ಲದೇ ತರ್ಕದ ಪ್ರಕ್ರಿಯೆಯೇ ಪ್ರಾರಂಭವಾಗುವುದಿಲ್ಲ. ತನ್ನ ಜೀವನದಲ್ಲಿ ಎಂದೂ ಬೆಂಕಿಯನ್ನು ಕಂಡು ಕೇಳದೇ ಇದ್ದವನು ದೂರದಿಂದ ಹೊಗೆಯನ್ನು ನೋಡಿದ ಕೂಡಲೇ ಅಲ್ಲಿ ಬುಡದಲ್ಲಿ ಬೆಂಕಿ ಇದೆ ಎಂದು ಊಹಿಸಲಾರ. (ಹಾಗೆ ಊಹಿಸಬೇಕಾದರೆ ಅವನು ಈ ಮೊದಲು ಒಮ್ಮೆಯಾದರೂ  ಬೆಂಕಿಯನ್ನು ನೋಡಿರಬೇಕು ಹಾಗೂ ಅದರಿಂದ ಹೊರಡುವ ಹೊಗೆಯ ಬಗ್ಗೆ ಅವನಿಗೆ ಗೊತ್ತಿರಲೇಬೇಕು.)  ಆ ಸ್ಥಿತಿಯಲ್ಲಿ ಅವನ ಇಂದ್ರಿಯಗಳಿಗೆ  ಗೋಚರವಾಗುತ್ತಿರುವ ವಸ್ತುವು(ಹೊಗೆಯು)  ತನ್ನ ಬಗ್ಗೆ ಮಾತ್ರ ಅವನಿಗೆ ವಿವರಣೆ ನೀಡಬಲ್ಲದ್ದಾಗಿರುತ್ತದೆ.(ಅದಕ್ಕೆ ಕಾರಣವಾದ ಬೆಂಕಿಯ ಸೂಚನೆಯನ್ನು ಅದು ನೀಡುವುದಿಲ್ಲ)  ಇದನ್ನು ಬೇರೆ ರೀತಿ ಹೇಳಬೇಕೆಂದರೆ (ಬೆಂಕಿಯನ್ನು ನೋಡಿಯೇ ಇರದ) ನೋಡುಗನಿಗೆ ಹೊಗೆಯೇ ಸತ್ಯವಾಗಿರುತ್ತದೆ. ಬೆಂಕಿಯಲ್ಲ.  ''ಗೋಚರವಾಗುತ್ತಿರುವ ವಸ್ತುವು ನಿರಪೇಕ್ಷವಲ್ಲ. ಅದು ತನ್ನ ಅಸ್ತಿತ್ವಕ್ಕೆ ಇನ್ನೊಂದು ವಸ್ತುವನ್ನು ಅವಲಂಬಿಸಿದೆ'' ಎಂದು ಈ ಮೊದಲೇ ನಿಮಗೆ ತಿಳಿಯದೇ ಇದ್ದಾಗ, ಆ ವಸ್ತುವಿನ ಹಿಂದೆ ಇರಬಹುದಾದ ಮತ್ತೊಂದು ವಸ್ತುವನ್ನು ತಿಳಿಯಬೇಕೆಂಬ ಆಸಕ್ತಿ ನಿಮ್ಮಲ್ಲಿ ಮೂಡುವುದೇ ಇಲ್ಲ. ಹಾಗೆಯೇ, ನಾವು ಅವಿಕಾರಿಯಾದ ವಸ್ತುವಿನ ಬಗ್ಗೆ ಕೇಳದೇ ಇದ್ದಲ್ಲಿ, ನಾವು ಪ್ರಪಂಚವನ್ನು ಅದು ನಮ್ಮ ಇಂದ್ರಿಯಗಳಿಗೆ ಗೋಚರಿಸುವ ರೀತಿಯಲ್ಲಿಯೇ ಗ್ರಹಿಸುತ್ತೇವೆ.  ಈ ವಿಕಾರಿಯಾದ ಜಗತ್ತೇ ನಮಗೆ ಅಂತಿಮ ಸತ್ಯವಾಗಿ ತೋರುತ್ತಾ ಇರುತ್ತದೆ. ಅಂತಹ ಜಗತ್ತೇ ಎಲ್ಲರ ಇಂದ್ರಿಯಗಳಿಗೆ ಗೋಚರವಾಗುವುದರಿಂದ ಅದರ ಅಸ್ತಿತ್ವಕ್ಕೆ ಹೆಚ್ಚಿನ ವಿವವರಣೆ ಬೇಕಾಗಿರುವುದಿಲ್ಲ. ಬದಲಾವಣೆ ಹೊಂದುವ ಅದರಲ್ಲಿ ಹೆಚ್ಚಿನದು ಏನು ತಾನೇ ಇದ್ದೀತು?  ವಿಕಾರವು ಅದರ ಸ್ವಭಾವ. ತನ್ನ ಆ ''ಸ್ವಭಾವ''ವನ್ನು ಕಳೆದುಕೊಂಡರೆ ಅದು ''ಪ್ರಪಂಚ'' ಅನ್ನಿಸಿಕೊಳ್ಳುವುದಿಲ್ಲ. ನಮಗೆ ಅವಿಕಾರಿ ವಸ್ತುವಿನ ಪೂರ್ವಜ್ಞಾನವಿದ್ದಲ್ಲಿ ಮಾತ್ರ ಅದಕ್ಕೂ ಮತ್ತು ಈ ಜಗತ್ತಿಗೂ ಇರುವ ಸಂಬಂಧವನ್ನು ನಾವು ಸಾಬೀತುತುಪಡಿಸಬಹುದು. ಅವಿಕಾರೀ ವಸ್ತುವಿನ ಅಸ್ತಿತ್ವವನ್ನು ತಿಳಿಸಿ ತನ್ಮೂಲಕ ನಮ್ಮನ್ನು ವಿಚಾರದ ಜಾಡಿನಲ್ಲಿ ಪ್ರೇರೇಪಿಸಲು ನಮಗೆ ಶೃತಿಯ ಅಗತ್ಯ ಇದೆ. ತರ್ಕ, ವಿಚಾರ, ಬುದ್ಧಿ, ಯುಕ್ತಿ, ಅಥವಾ ಅನುಮಾನ- ಇವುಗಳು ಈ ನಿಟ್ಟಿನಲ್ಲಿ ನಮಗೆ ಸಹಕಾರಿಯೇನೋ ಹೌದು. ಆದರೆ ಶೃತಿಯ ಸುರಕ್ಷಿತ ಮಾರ್ಗದರ್ಶನವಿಲ್ಲದೇ ಬರಿಯ ತರ್ಕ ಕತ್ತಲೆಯಲ್ಲಿನ ಅನ್ವೇಷಣೆಯಂತೆ.

ಅಲ್ಲದೇ ''ಈ ಜಗತ್ತಿನ ಪ್ರತಿ ವಸ್ತುವೂ ವಿಕಾರಕ್ಕೆ ಒಳಗಾಗುತ್ತಿದೆ'' ಎಂಬ ಇಂದ್ರಿಯಗೋಚರ ವಿಷಯದ ಆಧಾರದಿಂದ ನೀವು ಮತ್ತೇನ್ನೋ ತರ್ಕಿಸಲು ಬಯಸಿದರೆ ನಿಮ್ಮ ಆ ತರ್ಕವು ಈ  ಮಾದರಿಗೆ ಸೇರುತ್ತದೆ.
ಜಗತ್ತಿನ ಪ್ರತಿಯೊಂದು ವಸ್ತುವೂ ವಿಕಾರಕ್ಕೆ ಒಳಗಾಗುತ್ತಿರುತ್ತದೆ. ಆದ್ದರಿಂದ ಅದರ ಹಿನ್ನೆಲೆಯಲ್ಲಿ ಇರಬಹುದಾದ ಇನ್ನೊಂದು ವಸ್ತುವೂ ವಿಕಾರಿ'' ಅಂದರೆ ನಿಮ್ಮ ಅನುಭವವು ನಿಮಗೆ ಇರುವುದೆಲ್ಲವೂ ವಿಕಾರಿಯೆಂದು ಹೇಳಿದಲ್ಲಿ ನಿಮ್ಮ ತರ್ಕವು ವಿಕಾರಿಯಲ್ಲದ ಮತ್ತಾವುದೋ ವಸ್ತುವಿನ ಬಗ್ಗೆ ತಿಳಿಸಲು ಸಾಧ್ಯವಿಲ್ಲ. ಬದಲಾಗಿ ಆ ಮತ್ತಾವುದೋ ವಸ್ತುವು ಕೂಡ ಇಂದ್ರಿಯಪ್ರಪಂಚದಂತೆಯೇ ವಿಕಾರಿಯೆಂದು ಆ ತರ್ಕ ಹೆಳುತ್ತದೆ. ಹೀಗೆ ತರ್ಕದ ಎಲ್ಲೆಯಲ್ಲಿಯೂ ಕೂಡ ನೀವು ಇಂದ್ರಿಯವಿಷಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ತರ್ಕವು ಇಂದ್ರಿಯಗ್ರಾಹ್ಯ ವಿಷಯಗಳ ವ್ಯಾಪ್ತಿಯಲ್ಲೇ ಸುತ್ತುತ್ತದೆ. (ಅದು ಇಂದ್ರಿಯಗಳಿಂದ ಪಡೆದ ಜ್ಞಾನದ ಆಧಾರದ ಮೇಲೆ ನಿಂತಿರುತ್ತದೆ.)
ಹೆಚ್ಚೆಂದರೆ ತರ್ಕವು ನಿಮ್ಮನ್ನು '' ಅವಿಕಾರಿಯಾದ ಯಾವುದೋ ಒಂದು ವಸ್ತುವು ಇರಬಹುದು'' ಎಂಬ ಮಟ್ಟಕ್ಕೆ ಒಯ್ಯಬಹುದೇ ಹೊರತು ಅದು (ತರ್ಕವು) ಖಚಿತವಾಗಿ '' ಅಂತಹ ವಸ್ತುವೊಂದಿದೆ'' ಎಂದು ಹೇಳಲಾರದು.

ಎ: ''ಶೃತಿಯು ಅಪೌರುಷೇಯ'', ವೇದವೇ ಜಗತ್ತಿನ ಎಲ್ಲಧರ್ಮಗಳಿಗೆ ಮೂಲ (ವೇದೋsಖಿಲೋ ಧರ್ಮಮೂಲಂ)  ಎಂಬ ಮಾತುಗಳು ಉತ್ಪ್ರೇಕ್ಷೆ ಎಂದು ನಾನು ಇಷ್ಟು ದಿನ ಭಾವಿಸಿದ್ದೆ. ಅದರ ಕುರಿತು ಈ ರೀತಿಯ ವಿವರಣೆಯನ್ನು ನಾನು ಕೇಳಿರಲೇ ಇಲ್ಲ. ಈ ವಿವರಣೆಗಾಗಿ ನಿಮಗೆ ನಾನು ಋಣಿಯಾಗಿದ್ದೇನೆ.
 ಆದರೆ ನನ್ನ ಮೊದಲ ಸಮಸ್ಯೆಯೇ ಪುನಃ ಉದ್ಭವಿಸುತ್ತದಲ್ಲಾ..?  ವಾಸ್ತವವಾಗಿ ಈ ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ. ಇವೆಲ್ಲವೂ ಮನುಷ್ಯನನ್ನು ''ಬೆಳಕಿಗೆ ಒಯ್ಯುವುದು ತಮ್ಮ ಧರ್ಮವೊಂದೇ'' ಎಂದು ಸ್ವಯಂ ಘೋಷಿಸಿಕೊಳ್ಳುತ್ತವೆ. ಹೀಗೆ ಪರಸ್ಪರ ವಿರೋಧವಾಗಿರುವ ಈ ಅನೇಕ ಧರ್ಮಗಳ ಔಚಿತ್ಯವನ್ನು  ಕುರಿತ ನನ್ನ ಮೊದಲ ಪ್ರಶ್ನೆಯು ಪರಿಹರಿಯದೇ ಹಾಗೆಯೇ ಉಳಿಕೊಂಡುಬಿಡುತ್ತದೆ.

ಸ್ವಾಮಿಗಳು:  ಈ ವೈವಿಧ್ಯವು ''ಅಧಿಕಾರತತ್ವ''ದ ಮೇಲೆ ನಿಂತಿದೆಯೆಂದು ನಾನು ಈ ಮೊದಲೇ ನಿಮಗೆ ಹೇಳಿದ್ದೇನೆ.  ವಾಸ್ತವವಾಗಿ ಅಧಿಕಾರವೇ ಮಾನವನ ಕ್ರಿಯೆಗಳನ್ನು ನಿಯಂತ್ರಿಸುವುದು. ಈ ಅಧಿಕಾರದಲ್ಲಿ ವಿವಿಧ ಹಂತಗಳಿವೆ. ಅವುಗಳಿಗೆ ಅನುಸಾರವಾಗಿ ವಿವಿಧ ಧರ್ಮಗಳಿವೆ.

ಎ: ಅರ್ಥವಾಯಿತು. ಆದರೆ ಯಾವ ಧರ್ಮವೂ ತನ್ನನ್ನು ನಿರ್ದಿಷ್ಟ ಮಟ್ಟದ ಜನರಿಗೆ ಸೀಮಿತಗೊಳಿಸಿಕೊಳ್ಳಲು ಸಿದ್ಧವಿರುವುದಿಲ್ಲ. ಪ್ರತಿಯೊಂದು ಧರ್ಮವೂ(Religion) ತನ್ನನ್ನು ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಿಕೊಳ್ಳುತ್ತದೆ.

ಸ್ವಾಮಿಗಳು: ಬಾಲಕನೊಬ್ಬನಿಗೆ ಒಂದೇ ಸಮಯದಲ್ಲಿ ನಾಲ್ಕು ಜನರು ನಾಲ್ಕು ರೀತಿ ಆದೇಶಿಸಿದರು ಅಂತಿಟ್ಟುಕೊಳ್ಳೋಣ. ಒಬ್ಬರು ''ದೀಪ ಹಚ್ಚು'' ಎಂದರೆ ಮತ್ತೊಬ್ಬರು ''ಬತ್ತಿಯನ್ನು ಸರಿಮಾಡು'' ಎನ್ನುತ್ತಾರೆ. ಮೂರನೇಯವನು ''ಎಣ್ಣೆ ತುಂಬಿಸು'' ಅಂದರೆ ನಾಲ್ಕನೇಯವನು ''ದೀಪ ಆರಿಸು'' ಎನ್ನುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಬಾಲಕನಿಗೆ ಏನು ಮಾಡಬೇಕೆಂದು ತೋರುವುದಿಲ್ಲ. ಅವನಿಗೆ ಇವೆಲ್ಲವನ್ನೂ ಏಕಕಾಲದಲ್ಲಿ ಮಾಡಲು ಸಾಧ್ಯವಿರುವುದಿಲ್ಲ. ಆದರೆ ನಾಲ್ವರಲ್ಲಿ ಪ್ರತಿಯೊಬ್ಬರೂ ತಮ್ಮ ಆಜ್ಞೆಯನ್ನೇ ಪಾಲಿಸಬೇಕೆಂದು ಲಂಬಿಸಿ ಹೇಳುತ್ತಾರೆ. ಆಗ ಆ ಬಡಪಾಯಿ ಏನು ಮಾಡಬೇಕು? ಅಂತಹ ಸಮಯದಲ್ಲಿ ಈ ನಾಲ್ವರ ಹೊರತಾಗಿ ಐದನೇವನೊಬ್ಬ ಬಂದು ''ಒಂದು ಕತ್ತಿ ತೆಗೆದುಕೊಂಡು ಬಾ'' ಅಂತ ಹೇಳಿದರೆ ಈಗಾಗಲೇ ಇರುವ ನಾಲ್ಕು ಆಜ್ಞೆಗಳಿಗೆ ಐದನೇಯದನ್ನು ಸೇರಿಸಿದ ಹಾಗಾಗುತ್ತದೆ. ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ಆಜ್ಞೆಗಳಿಂದ ಬಾಲಕನ ಮನಸ್ಸು ಈಗಾಗಲೇ ಗೊಂದಲಕ್ಕೊಳಗಾಗಿರುತ್ತದೆ. ಅವನು ಈಗ ನಾಲ್ಕರ ಬದಲು ಐದರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ.  ಈ ಐದನೆಯವನ ಆಗಮನದಿಂದ ಆ ಬಾಲಕನ ಗೊಂದಲ ಪರಿಹಾರವಾಗುವುದರ ಬದಲಾಗಿ ಅದು ಹೆಚ್ಚಾಗುತ್ತದೆ.  ಆದರೆ ಐದನೇಯವರಿಗೆ ಆ ಹುಡುಗನ ಮೇಲೆ ಕನಿಕರ ಮೂಡಿ,  ಹುಡುಗನ್ನು ಆ ಇಕ್ಕಟ್ಟಿನಿಂದ ಪಾರು ಮಾಡಬೇಕು ಅಂತ ಐದನೇಯವನಿಗೆ  ಅನ್ನಿಸಿದಲ್ಲಿ, ಹಾಗೂ ಆ ಹುಡುಗನೂ ಕೂಡ ಐದನೇವನೆಡೆಗೆ ಉಳಿದ ನಾಲ್ವರ ಕಡೆಗೆ ತೋರಿದ ಶ್ರದ್ಧೆಗಿಂತ ಅಧಿಕ ಶ್ರದ್ಧೆಯನ್ನು ತೋರಿದಲ್ಲಿ ''ಕತ್ತರಿಯನ್ನು ಮಾತ್ರ ತೆಗೆದುಕೊಂಡು ಬಾ, ಉಳಿದವರ ಆಜ್ಞೆಗಳನ್ನು ಪಾಲಿಸುವ ಅಗತ್ಯವಿಲ್ಲ'' ಎಂದು ಒತ್ತಿ ಹೇಳಬೇಕಾಗುತ್ತದೆ. ಅಂದರೆ ತಬ್ಬಿಬ್ಬಾಗಿರುವ ಬಾಲಕನಿಗೆ ಮಾರ್ಗದರ್ಶನ ಸೂಚಿಸುವ ಸಲುವಾಗಿ ಅವರು ತಮ್ಮ ಆಜ್ಞೆಯ ಹೊರತಾಗಿ ಇತರ ಯಾವ ಆಜ್ಞೆಯೂ ಪಾಲಿಸಲು ಯೋಗ್ಯವಲ್ಲ ಎಂದು ಹೇಳಲೇಬೇಕಾಗುತ್ತದೆ. ಶ್ರದ್ಧೆಯಿಂದ ತಮ್ಮನ್ನು ಆಶ್ರಯಿಸಿರುವ ಸಾಧಕನಿಗೆ ಮಾರ್ಗದರ್ಶನ ನೀಡಬಯಸುವ ಯಾವುದೇ ಗುರುವು(ಶಿಷ್ಯನ ಮೇಲೆ ಕನಿಕರದಿಂದ ಅವನ ಗೊಂದಲ ನಿವಾರಿಸಲು, ಸಮಯದ ವ್ಯರ್ಥತೆಯನ್ನು ತಪ್ಪಿಸಲು) ''ಇತರರ ಆದೇಶಗಳನ್ನು ತೊರೆದು ನಾನು ಹೇಳಿದ ಹಾಗೆ ಮಾತ್ರ ಮಾಡು..ಸಾಕು'' ಎನ್ನಬೇಕಾಗುತ್ತದೆ.

ಎ: ಅಂದರೆ ಇವರೆಲ್ಲರೂ (Religion ಗಳ ಪ್ರವರ್ತಕರು, ಮತಪ್ರವರ್ತಕರುಗಳು)  ತಮ್ಮಲ್ಲಿಗೆ ಬುವವರ ಯೋಗ್ಯತೆ, ಕಾಲ ಹಾಗೂ ಸಂದರ್ಭಗಳಿಗೆ ಅನುಸಾರವಾಗಿ ತಮ್ಮ ಬೋಧನೆಗಳನ್ನು ನೀಡಿದ್ದಾರೆ. ಬೇರೆ ರೀತಿ ಹೇಳಬೇಕೆಂದರೆ  ಸ್ವತಃ ನಿರಪೇಕ್ಷ ಸತ್ಯವನ್ನು ಅರಿತವರಾಗಿದ್ದರೂ ಅವರುಗಳು ಜನರಿಗೆ ಸಾಪೇಕ್ಷವಾದ ಸತ್ಯವನ್ನು ಮಾತ್ರ ಹೇಳುತ್ತಿದ್ದರು. ಜನರಿಗೆ ಏನು ಬೋಧಿಸಬೇಕು, ಏನು ಬೋಧಿಸಬಾರದು ಎಂಬುದನ್ನು ನಿರ್ಧರಿಸುವಲ್ಲಿ ಇವರು ಸತ್ಯನಿಷ್ಠೆಗಿಂತಲೂ ಹೆಚ್ಚಾಗಿ ಅನುಕೂಲಸಿಂಧು ಮಾರ್ಗವನ್ನೇ ಅನುಸರಿಸಿದರು... ಅಲ್ಲವೇ?

ಸ್ವಾಮಿಗಳು: ಅವರುಗಳು ಜನರ ಅರ್ಹತೆ ಮತ್ತೆ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಹಾಗೆ ಮಾಡಿದರು. (ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಅಲ್ಲ) ನಾನು ಈ ಮೊದಲೇ ಹೇಳಿದಂತೆ ತಣ್ಣೀರು ಆರೋಗ್ಯವಂತನ ದಣಿವನ್ನು ನೀಗಿದರೆ, ಜ್ವರಪೀಡಿತನಾದವನ ಖಾಯಿಲೆಯನ್ನು ಅದು ಹೆಚ್ಚು ಮಾಡುತ್ತದೆ. ವೈದ್ಯನು ಒಬ್ಬನಿಗೆ ತಣ್ಣೀರನ್ನು ಕುಡಿಯಲು ಹೇಳಿ, ಇನ್ನೊಬ್ಬನಿಗೆ ಅದನ್ನು ನಿಷೇಧಿಸಿದರೆ ಅವನನ್ನು(ವೈದ್ಯನನ್ನು) ಪಕ್ಷಪಾತಿ ಅಥವಾ ಮೋಸಗಾರ ಎನ್ನಲಾಗುವುದಿಲ್ಲ. ಒಬ್ಬ ವ್ಯಕ್ತಿಯ ಆಯಾಸವನ್ನು ಪರಿಹರಿಸಿ, ಮತ್ತೊಬ್ಬನ ರೋಗವನ್ನು ಹೆಚ್ಚು ಮಾಡಿತೆಂಬ ಕಾರಣಕ್ಕೆ ನೀರನ್ನೂ ದೂಷಿಸುವಂತಿಲ್ಲ.

ಎ:  ಹಾಗಾದರೆ ಒಬ್ಬ ''ಗುರು'' ಬೋಧನೆ ಮಾಡುತ್ತಿರುವ  ಸತ್ಯವು(ಧರ್ಮವು) ಸಾಪೇಕ್ಷವೋ ನಿರಪೇಕ್ಷವೋ ಎಂದು ಕಂಡುಕೊಳ್ಳುವುದು ಹೇಗೆ?

ಸ್ವಾಮಿಗಳು: ಅದನ್ನು ನೀವು ಯಾಕೆ ತಿಳಿಯಬೇಕು? ನಿಮ್ಮ ಉದ್ದೇಶ ಜಗತ್ತಿನಲ್ಲಿರುವ ವಿವಿಧ ಗುರುಗಳಲ್ಲಿ ಇರುವ ಉಚ್ಚ-ನೀಚ  ಅಂತರವನ್ನು ಅಳೆಯುವುದೋ?  ನಿಮ್ಮ ಬದುಕಿನ ನಿಯಂತ್ರಣದ ಮೂಲಕ ''ಸುಖಶಾಂತಿಗಳನ್ನು ಪಡೆಯುವ ಮಾರ್ಗ''ವನ್ನು ಕಂಡುಕೊಳ್ಳುವುದೋ?

ಎ: ನನ್ನ ಉದ್ದೇಶ ಎರಡೂ ಆಗಿವೆ. ಯಾವ ಗುರುವು ಅಥವಾ ಧರ್ಮವು(religion) ಸತ್ಯಕ್ಕೆ ಸಮೀಪವಾಗಿದೆ? ಎಂದು ನಾನು ಮೊದಲು ತಿಳಿಯಬೇಕು. ಹಾಗೆ ತಿಳಿದ ನಂತರವೇ ಆ ಧರ್ಮದ ಹಾಗೂ ಆ ಗುರುವಿನ ಬೋಧನೆಗೆ ಅನುಗುಣವಾಗಿ ನಾನು ನನ್ನ ಬದುಕನ್ನುಮಾರ್ಪಡಿಸಿಕೊಳ್ಳಲು ಸಾಧ್ಯ.

ಸ್ವಾಮಿಗಳು: ಇಬ್ಬರು ವ್ಯಕ್ತಿಗಳ ಸಾಮರ್ಥ್ಯವನ್ನು ತುಲನೆ ಮಾಡಲು ಬಯಸುವ ವ್ಯಕ್ತಿ ಆ ಇಬ್ಬರೂ ವ್ಯಕ್ತಿಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆದಿರಬೇಕು. ಹಾಗಿಲ್ಲದೇ ಇದ್ದಲ್ಲಿ ಅವರಲ್ಲಿರುವ ಅನೇಕ ದೋಷಗಳು ಅಳೆಯುವವನ ಗಮನಕ್ಕೆ ಬರುವುದೇ ಇಲ್ಲ. ಕ್ರಿಸ್ತ, ಮೊಹಮ್ಮದ್, ಬುದ್ಧ ಮುಂತಾದ ಮತಪ್ರವರ್ತಕರ ಬುದ್ಧಿಗಳ ಮೇಲೆ ನಿರ್ಣಯ ಕೊಡುವಷ್ಟು ಬುದ್ಧಿಸಾಮರ್ಥ್ಯವನ್ನು ನಿಮಗೆ ದೇವರು ಕರುಣಿಸಿದ್ದಾನೆ ಅಂತ ನೀವು ಭಾವಿಸಿದ್ದೀರೋ?  ಎರಡು ಧರ್ಮಗಳಲ್ಲಿ ಯಾವುದು ಶ್ರೇಷ್ಠ ಎಂದು ತಿಳಿಯಬೇಕಾದರೆ ಆ ಎರಡನ್ನೂ ಕೂಲಂಕುಶವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಎರಡು ಧರ್ಮಗಳ ಮಾತು ಆಚೆಗಿರಲಿ. ಒಂದೇ ಒಂದು ಧರ್ಮವನ್ನು ಸಂಪೂರ್ಣವಾಗಿ ನೀವು ತಿಳಿದಿದ್ದೀರೋ? ನಮ್ಮ ಜೀವನವು ಧರ್ಮದ ಒಂದು ಹಂತವನ್ನು ಅರ್ಥಮಾಡಿಕೊಳ್ಳುವಷ್ಟೂ ದೀರ್ಘವಲ್ಲ. (ಆಯುಸ್ಸು ಸಾಕಾಗುವುದಿಲ್ಲ). ಹೀಗಿರುವಾಗ ನಿಮ್ಮ ಎಲ್ಲ ಅಧ್ಯಯನ ಮುಗಿದ ಮೇಲೆ ಅದನ್ನು(ಅಧ್ಯಯನಮಾಡಿ ಒಪ್ಪಿಕೊಂಡ ಧರ್ಮವನ್ನು) ಕಾರ್ಯರೂಪಕ್ಕೆ ತರಲಿಕ್ಕೆ ನಿಮ್ಮ ಬಳಿ ಕಾಲ ಇರುತ್ತದೆಯೇ?

ಎ: ಹಾಗಾದರೆ ಈಗ ನೀವು ನನಗೆ ನೀಡುವ ಅನುಷ್ಠಾನಯೋಗ್ಯವಾದ ಉಪದೇಶವೇನು? (ನಾನೇನು ಮಾಡಲಿ?)

 ಸ್ವಾಮಿಗಳು:  ನೀವು ದೇವರನ್ನು ನಂಬುತ್ತೀರಲ್ಲವೇ?

ಎ: ಹೌದು. ನಂಬುತ್ತೇನೆ

ಸ್ವಾಮಿಗಳು: ಆ ದೇವರು ಸರ್ವಜ್ಞ(ಎಲ್ಲ ತಿಳಿದವನು) ಎಂದು ನಂಬುತ್ತೀರೋ?

ಎ:  ಹೌದು. ಖಂಡಿತವಾಗಿ.

ಸ್ವಾಮಿಗಳು:  ಜಗತ್ತಿನಲ್ಲಿ ನಡೆಯುವ ಎಲ್ಲ ಸಂಘಟನೆಗಳಲ್ಲೂ ಆತನ ಸರ್ವಜ್ಞತ್ವವು ಪ್ರಕಟವಾಗುತ್ತದೆ ಎಂಬುದನ್ನು ಮನಗಂಡಿದ್ದೀರೊ?

ಎ: ಹೌದು. ನಾನು ಗಮನಿಸಿದ್ದೇನೆ.

ಸ್ವಾಮಿಗಳು: ಹಾಗಾದರೆ ಆ ಸರ್ವಜ್ಞತ್ವವು ನಿಮ್ಮ ಜೀವನದಲ್ಲೂ ವ್ಯಕ್ತವಾಗಿದೆ. ಅಲ್ಲವೇ?

ಎ: ಹೌದು.

ಸ್ವಾಮಿಗಳು: ನಿಮಗೆ ಜನ್ಮ ನೀಡುವಲ್ಲಿ ಭಗವಂತನಿಗೆ ಒಂದು ಉದ್ದೇಶ, ಅದರಲ್ಲೂ ಸದುದ್ದೇಶವೇ ಇದ್ದಿರಬೇಕಲ್ಲವೇ?

ಎ: ಹೌದು. ಈ ಜಗತ್ತಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕ ಅಲ್ಲ ಅನ್ನುವುದು ನನ್ನ ಗಮನಕ್ಕೆ ಬಂದಿದೆ.

ಸ್ವಾಮಿಗಳು: ಹಾಗಾದರೆ, ಭಗವಂತನ ದೃಷ್ಟಿಯಲ್ಲಿ  ಕ್ರೈಸ್ತ ಧರ್ಮವೊಂದೇ ನಿಮ್ಮ ಅರ್ಹತೆಗೆ ಸರಿಯಾಗಿ ಹೊಂದುತ್ತದೆ. ಕ್ರೈಸ್ತರಾದ ದಂಪತಿಗಳ ಹೊಟ್ಟೆಯಲ್ಲಿ ನೀವು ಹುಟ್ಟಿದುದರ ಹಿಂದೆ ಇರಬಹುದಾದ ಉದ್ದೇಶದ ವಿವರಣೆಯನ್ನು ಅರಸುವ ಅಗತ್ಯವಿಲ್ಲ. ನಾವು ಪಾಲಿಸಬೇಕಾದ ಧರ್ಮದ ಕುರಿತು ನಾವು ಭಗವಂತನಲ್ಲಿ ವಿಶ್ವಾಸ ಇಡುವುದೇ ಲೇಸು.  ನಮ್ಮ ಹಾದಿಯನ್ನು ನಿರ್ಣಯಿಸಲು ನಮ್ಮ ಬಡಬುದ್ಧಿಗೆ ಸಾಧ್ಯವಿಲ್ಲವೆಂದು ಆತನಿಗೆ ಗೊತ್ತು. ಆದ್ದರಿಂದ ಆತನೇ ನಮ್ಮ ಮಾರ್ಗವನ್ನು ನಿರ್ಧರಿಸುವ ಹೊಣೆ ಹೊತ್ತಿದ್ದಾನೆ. ನಮ್ಮ ಮನೋಭಾವಕ್ಕೆ ಚೆನ್ನಾಗಿ ಒಗ್ಗುವ ದೇಶ, ಕಾಲ ಮತ್ತು ಪರಿಸರ ಹಾಗೂ ಧರ್ಮದಲ್ಲಿ  ನಮಗೆ ಜನ್ಮ ನೀಡಿದ್ದಾನೆ. ಆತನು ಈ ರೀತಿ ನಮ್ಮ ಮೇಲೆ ಕರುಣೆಯಿಂದ ನಮ್ಮ ಅನುಕೂಲಕ್ಕಾಗಿಯೇ ಮಾಡಿರುವ ಯೋಜನೆಯನ್ನು ನಾವು ಏಕೆ ತಿರಸ್ಕರಿಸಬೇಕು? ''ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನ'' ಎಂಬ ಅಸಾಧ್ಯ ಸಾಹಸಕ್ಕೆ ಕೈ ಹಾಕಿ ಸಮಯ ಏಕೆ  ಹಾಳು ಮಾಡಿಕೊಳ್ಳಬೇಕು?

ಎ: ಕ್ರೈಸ್ತ ಧರ್ಮವನ್ನು ಅರ್ಥಮಾಡಿಕೊಳ್ಳಲು ಹಾಗೂ ಅದನ್ನು ಅನುಸರಿಸಲು ನಾನು ಸಾಧ್ಯವಿದ್ದಷ್ಟು ಶ್ರಮಿಸಿದ್ದೇನೆ. ಆದರೆ ಪುನಃ ಪುನಃ ಸಂದೇಹಗಳು ಸುಳಿಯುತ್ತವೆ. ಅವುಗಳನ್ನು ಪರಿಹರಿಸುವಂತಹ ವ್ಯಕ್ತಿಗಳನ್ನು ಸಂಧಿಸುವಲ್ಲಿ ವಿಫಲನಾಗಿದ್ದೇನೆ.  ಆ ಕಾರಣದಿಂದಲೇ ನಾನು ನನ್ನ ಗಮನವನ್ನು ಇತರ ಧರ್ಮಗಳೆಡೆಗೆ ಹರಿಸಿದ್ದು.

ಸ್ವಾಮಿಗಳು. ಕೇವಲ ಧರ್ಮವನ್ನು ಅಧ್ಯಯನ ಮಾಡಿದವರನ್ನು(ಪಂಡಿತರನ್ನು) ಸಂಧಿಸಿದರೆ ಪ್ರಯೋಜನವಿಲ್ಲ. ತಮ್ಮ ದೈನಂದಿನ ಧರ್ಮವನ್ನು ಕಾರ್ಯರೂಪಕ್ಕೆ ತಂದವರನ್ನು(ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡವರನ್ನು.. ಅನುಷ್ಠಾನ ಮಾಡುತ್ತಿರುವವರನ್ನು)  ಕಾಣುವವರೆಗೂ ನಿಮಗೆ ಧರ್ಮದ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವೇ ಇಲ್ಲ. ಲೌಕಿಕ ಉದ್ದೇಶಗಳಿಗಾಗಿ ನೀವು ಸಮುದ್ರ ಮತ್ತು ಆಕಾಶಗಳನ್ನು ದಾಟಲು ಸಿದ್ಧರಾಗಿಬಿಡುತ್ತೀರಿ. ಆದರೆ ಸತ್ಯದ ಕುರಿತ ಸಂದೇಹಗಳನ್ನು ಪರಿಹರಿಸುವ ಗುರುಗಳು ನಿಮ್ಮ ಮನೆಯ ಬಾಗಿಲಿಗೇ ಬರಬೇಕೆಂದು ಬಯಸುತ್ತೀರಿ. ''ಧರ್ಮ ಎನ್ನುವುದು ಬದುಕಿನ ಒಂದು ಕುತೂಹಲಕರ ಅಂಶ''  ಎಂಬ ನಿಮ್ಮ ಭಾವನೆ ಮೊದಲು ಬದಲಾಗಬೇಕು. ಯಾವಾಗ ನೀವು ''ಧರ್ಮ ಎನ್ನುವುದು ಬದುಕಿನ ಒಂದು ಅಂಗ ಮಾತ್ರ ಅಲ್ಲ, ಅದು ಇಡೀ ಬದುಕೇ ಆಗಿದೆ'' ಎಂಬ ತಿಳುವಳಿಕೆ ಪಡೆಯುತ್ತೀರೋ ಆಗ ಮಾತ್ರ ನೀವು ಸರಿಯಾದ ಗುರುವಿನ ಹುಡುಕಾಟ ಪ್ರಾರಂಭಿಸುತ್ತೀರಿ. ಅಲ್ಲಿಯ ವರೆಗೆ ಅಂತಹ ಅನಿವಾರ್ಯತೆ ಕಾಣುವುದಿಲ್ಲ. ಆ ತಿಳುವಳಿಕೆ ಬಂದಮೇಲೆ ಹುಡುಕಾಟ ತೀವ್ರವಾಗುತ್ತದೆ. ಗುರುವೂ ಸಿಕ್ಕೇ ಸಿಗುತ್ತಾನೆ. ಏಕೆಂದರೆ ಗುರು ಯಾವಾಗಲೂ ಸಿದ್ಧನೇ ಆಗಿರುತ್ತಾನೆ. ನಮ್ಮ ಪರಿಸರದಲ್ಲಿಯೇ ಇರುತ್ತಾನೆ.  ಆದರೆ ನಮ್ಮಲ್ಲಿ ಜ್ಞಾನದ ಹಸಿವು ತೀವ್ರವಾಗಿ ನಾವು ಪ್ರಾಮಾಣಿಕವಾಗಿ  ಹುಡುಕುವವರೆಗೂ ಅವನು ಸಿಗುವುದಿಲ್ಲ. (ಕಣ್ಣಿಗೆ ಬಿದ್ದಿದ್ದರೂ ಅರಿವಿಗೆ ಬಂದಿರುವುದಿಲ್ಲ).
ಕ್ರೈಸ್ತ ಧರ್ಮದಲ್ಲಿ ಅಂತಹ ಗುರುಗಳು ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಅಂಥವರು ಸದ್ದುಗದ್ದಲಗಳ ಈ ಪ್ರಪಂಚದಲ್ಲಿ ನಿಮ್ಮ ಪರಿಸರದಲ್ಲೇ ಇದ್ದಿರಬಹುದು. ಗಮನಕ್ಕೆ ಬಂದಿರಲಿಕ್ಕಿಲ್ಲ. ಏಕೆಂದರೆ ಅಂಥವರು ಈ ಜಗತ್ತಿಗೆ ಬೇಕಾಗಿರುವುದಿಲ್ಲ. ಅವರಿಗೂ ಈ ಜಗತ್ತಿನ ಗುರುತಿಸುವಿಕೆ ಬೇಕಾಗಿರುವುದಿಲ್ಲ. ಅವರಿಗೆ ಅದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಆದ್ದರಿಂದ ನೀವು ಅಂತಹ ಗುರುವನ್ನು ನಿಮ್ಮ ಪರಿಸರದಲ್ಲೇ ಹುಡುಕಿ. ''ದಯಮಾಡಿ ನನ್ನ ಸಂದೇಹಗಳನ್ನು ಪರಿಹರಿಸಿ'' ಅಂತ ವಿನೀತರಾಗಿ ಕೇಳಿಕೊಳ್ಳಿ. ಆ ಕ್ಷಣವೇ ಅವರು ನಿಮ್ಮೆಲ್ಲ ಸಂಶಯಗಳನ್ನು ದೂರ ಮಾಡುತ್ತಾರೆ. ಕ್ರಮೇಣ ಕ್ರೈಸ್ತ ತಂದೆ ತಾಯಿಯಲ್ಲೇ ನಿಮ್ಮ ಜನ್ಮ ಏಕೆ ಆಯಿತು? ಅದರಲ್ಲಿ ಭಗವಂತನ ಉದ್ದೇಶ ಏನು ಅನ್ನೋದು ನಿಮ್ಮ ಅರಿವಿಗೆ ಬರುತ್ತದೆ.

ಎ: ನಿಮ್ಮ ಕೃಪಾಪೂರಿತ ಉಪದೇಶಗಳಿಗಾಗಿ ನಾನು ತಮ್ಮನ್ನು ಎಷ್ಟು ವಂದಿಸಿದರೂ ಕಡಿಮೆಯೇ. ದಯವಿಟ್ಟು ಇದೊಂದು ಮಾತು ಹೇಳಲು ನನಗೆ ಅನುಮತಿ ಕೊಡಿ. ನಾನು ಇಲ್ಲಿಗೆ ಬರುವಾಗ ನಾನು ಮೊದಲು ಇದ್ದದ್ದಕ್ಕಿಂತ ಉತ್ತಮ ಕ್ರೈಸ್ತನಾಗುವ ಅಭಿಲಾಷೆ ಹೊಂದಿರಲಿಲ್ಲ. ನನ್ನ ಅಭಿಲಾಷೆ ಹಿಂದೂ ಆಗಿ ಬದಲಾಗುವದಾಗಿತ್ತು. ಆದರೆ ತಮ್ಮ ಉಪದೇಶವು ನನ್ನನ್ನು ಇನ್ನೂ ಉತ್ತಮ ಕ್ರೈಸ್ತನಾಗುವಂತೆ ಮಾಡಿದೆ. ಕ್ರೈಸ್ತನನ್ನು, ಉತ್ತಮ ಕ್ರೈಸ್ತನನ್ನಾಗಿ, ಮುಸಲ್ಮಾನನನ್ನು ಇನ್ನೂ ಉತ್ತಮ ಮುಸಲ್ಮಾನನಾಗಿ, ಹಿಂದೂವನ್ನು ಉತ್ತಮ ಹಿಂದೂವನ್ನಾಗಿ ಮಾಡುವ, ಹೀಗೆ ಆಯಾ ಧರ್ಮದವರನ್ನು ಆಯಾ ಧರ್ಮದ ಚೌಕಟ್ಟಿನೊಳಗೆ ಇನ್ನೂ ಉತ್ತಮಗೊಳಿಸುವುದೇ ಸನಾತನ ಧರ್ಮವಾಗಿದ್ದಲ್ಲಿ ನಿಮ್ಮ ಈ ಸನಾತನ ಧರ್ಮವು ನಿಶ್ಚಿತವಾಗಿಯೂ ನಾನು ಈ ಹಿಂದೆ ಭಾವಿಸಿದ್ದಂಕ್ಕಿಂತಲೂ ವಿಶಾಲವಾಗಿದೆ.

ತಮ್ಮಿಂದ ಬೀಳ್ಕೊಳ್ಳುವ ಮುನ್ನ ಮತ್ತೊಮ್ಮೆ ತಮ್ಮ ಆಶೀರ್ವಾದ ಬೇಡುತ್ತೇನೆ.

ಸ್ವಾಮಿಗಳು: ಆಶೀರ್ವಾದ ನೀಡುವ ಯೋಗ್ಯತೆ ಇರುವುದು ಭಗವಂತನಿಗೆ ಮಾತ್ರ. ಆತನ ಕೃಪಾಶೀರ್ವಾದಗಳಿಗಾಗಿ ನಾವೆಲ್ಲರೂ ಆತನನ್ನು ಪ್ರಾರ್ಥಿಸಬೇಕು. ''ಆತನು ನಿಮಗೆ ದೃಢವಾದ ಶರೀರವನ್ನು ಮತ್ತು ಹರಿತವಾದ ಬುದ್ಧಿಶಕ್ತಿಯನ್ನು ಕರುಣಿಸಿದ್ದಾನೆ.'' ಎನ್ನುವುದನ್ನು ನಾನು ನಿಮಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಬಯಸುತ್ತೇನೆ.
ಒಬ್ಬನು ಅತ್ಯುತ್ತಮ ಕಲಾವಿದನಾಗಿದ್ದು ಅವನಿಗೆ ಅತ್ಯುತ್ತಮ ದರ್ಜೆಯ ಬಣ್ಣ ಹಾಗೂ ಕುಂಚಗಳ ಸೌಲಭ್ಯ ಇರಬಹುದು. ಅವನು ತನ್ನ ಕಲಾಕೃತಿ ರಚಿಸಲು ಉತ್ತಮವಾದ ವಸ್ತು-ವಿಷಯವನ್ನೇ ಆಯ್ದುಕೊಂಡಿರಬಹುದು. ಆದರೆ ಅವನು ಯಾವ ಆಧಾರವೂ ಇಲ್ಲದೇ ಬರಿಯ ಗಾಳಿಯಲ್ಲಿ ಚಿತ್ರವನ್ನು ಬರೆಯಲಾರ. ಚಿತ್ರವನ್ನು ಬರೆಯಲು ಅವನಿಗೆ ಒಂದು ಸ್ಥಿರವಾದ ಹಿನ್ನೆಲೆಯ ಅಗತ್ಯ ಇರುತ್ತದೆ. ಆ ಹಿನ್ನೆಲೆಯು ಬಟ್ಟೆ, ಗೋಡೆ, ಅಥವಾ ಉಪಯೋಗಕ್ಕೆ ಬಾರದ ಒಂದು ಒರಟು ವಸ್ತುವಾಗಿರಬಹುದು. ಆದ್ದರಿಂದ ನೀವು ದೈವದತ್ತವಾದ ನಿಮ್ಮ ಬುದ್ಧಿಶಕ್ತಿಯನ್ನು ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನಕ್ಕೆ, ಮೌಲ್ಯಗಳ ಕುರಿತ ಹುರುಳಿಲ್ಲದ ವ್ಯರ್ಥ ಚರ್ಚೆಗಳಿಗೆ ಉಪಯೋಗಿಸಬೇಡಿ. ಆ ಬುದ್ಧಿಯನ್ನು ನಿಮ್ಮ ಜನ್ಮಜಾತವಾಗಿ ಲಬ್ಧವಾದ ಕ್ರೈಸ್ತಧರ್ಮದ ಹಿನ್ನೆಲೆಯನ್ನು ಸ್ಥಿರಗೊಳಿಸುವ ಕಡೆ ಗಮನ ಹರಿಸಿ. ಆ ಕ್ರೈಸ್ತ ಹಿನ್ನೆಲೆಯ ಮೇಲೆ ಸಾಧನೆಯ ಚಿತ್ರವು ಪೂರ್ಣವಾದಮೇಲೆ, ನೀವು ಅದರ ಸೌಂದರ್ಯವನ್ನು ಧ್ಯಾನಿಸಲು ಸಮರ್ಥರಾದಾಗ ನಿಮ್ಮ ದೃಷ್ಟಿಯಿಂದ ಹಿನ್ನೆಲೆಯು ತನ್ನಿಂತಾನೇ ಅಳಿಸಿ ಹೋಗುತ್ತದೆ. ಆದರೆ ''ಅದಕ್ಕಿಂತ ಮೊದಲು ಅದು ಸಾಧ್ಯವಿಲ್ಲ''. ಈ ಕೊನೆಯ ಮಾತು ನೆನಪಿನಲ್ಲಿರಲಿ.

Thursday, July 17, 2014

ಇತಿಹಾಸ ಪುರಾಣಗಳಲ್ಲಿ ಮಕ್ಕಳ ಹಕ್ಕುಗಳು

ಹದಿನೆಂಟು ಪುರಾಣಗಳು ಹಾಗೂ ಅವುಗಳ ಉಪಪುರಾಣಗಳು ಭಾರತೀಯ ಇತಿಹಾಸಗ್ರಂಥಗಳೇ ಆಗಿದ್ದರೂ  ಕೆಲ ಪುರಾಣಗಳಲ್ಲಿ ಪರಸ್ಪರ ವಿರೋಧಗಳಿರುವುದರಿಂದ, ಅನೇಕ ಪ್ರಕ್ಷಿಪ್ತತೆಗಳು ಇರುವುದರಿಂದ ಅವುಗಳನ್ನು ಸಂಪೂರ್ಣವಾಗಿ ಸತ್ಯವಾದ ಇತಿಹಾಸಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ರಾಮಾಯಣ ಮತ್ತು ಮಹಾಭಾರತ ಇವೆರಡನ್ನುಯಥಾರ್ಥ ಇತಿಹಾಸ ಗ್ರಂಥಗಳು ಎಂದು ಗುರುತಿಸಲಾಗಿದೆ. ಈ ಇತಿಹಾಸ ಪುರಾಣಗಳನ್ನು ಅವಲೋಕಿಸಿದಾಗ  ಪ್ರಾಚೀನ ಭಾರತದ ಜನರು ಎಂತಹ ಜೀವನ ನಡೆಸುತ್ತಿದ್ದರು.. ಸಮಾಜದ ಆರ್ಥಿಕ-ಪಾರಿವಾರಿಕ ಸ್ಥಿತಿಗತಿಗಳು ಹೇಗಿದ್ದವು ಎನ್ನುವುದು ಅರಿವಿಗೆ ಬರುತ್ತದೆ. ಹಾಗಾಗಿ ಪ್ರಾಚೀನ ಭಾರತದಲ್ಲಿಯೂ ಮಕ್ಕಳ ಮೇಲೆ ಇಂದಿನಂತೆ ದೌರ್ಜನ್ಯಗಳು ನಡೆಯುತ್ತಿದ್ದವಾ..?  ಆಗಿನ ಕಾಲದ ಜನಜೀವನದಲ್ಲಿ ಮಕ್ಕಳ ಹಕ್ಕುಗಳೇನಾಗಿದ್ದವು..? ಎಂದು ನೋಡುತ್ತ ಹೋದರೆ ಬಹಳ ಆಸಕ್ತಿಕರ ಸಂಗತಿಗಳು ಸಿಗುತ್ತವೆ. ಸಮಾಜದಲ್ಲಿ ಧರ್ಮದಲ್ಲಿ ಮಕ್ಕಳಿಗೆ ವಿಶೇಷ ಹಕ್ಕುಗಳು ಇರುವುದು ಕಂಡು ಬರುತ್ತದೆ.

ಇತಿಹಾಸ-ಪುರಾಣಗಳ ಅಪರಾಧಿಗಳನ್ನು ಶಿಕ್ಷಿಸುವ ಸಂದರ್ಭಗಳಲ್ಲಿ ಅವರು ಬಾಲ್ಯಾವಸ್ಥೆಯಲ್ಲಿ ಮಾಡಿದ ತಪ್ಪುಗಳನ್ನು ''ಶಿಕ್ಷಾರ್ಹ'' ಎಂದು ಪರಿಗಣಿಸುವುದಿಲ್ಲ.  ಬಾಲ್ಯದಲ್ಲಿ ನಡೆಯುವ ಅಚಾತುರ್ಯಗಳಿಂದ ಯಾವುದೇ ಪಾಪಗಳು ಅಂಟುವುದಿಲ್ಲ ಎಂದು ಅನೇಕ ಕಡೆ ತಿಳಿಸಲಾಗಿದೆ. ಇತಿಹಾಸ ಪುರಾಣಗಳಿಗಿಂತ ಧರ್ಮಶಾಸ್ತ್ರದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚು ವಿವರ ಕಂಡು ಬರುತ್ತದೆ. ತಂದೆ ತಾಯಂದರು ಪೂಜಾ-ಯಜ್ಞಾದಿಗಳಲ್ಲಿ ತೊಡಗಿದಾಗ ತಮ್ಮ ಮಕ್ಕಳನ್ನು ಉಪವಾಸ ಇಡಬಾರದು, ಮಕ್ಕಳಿಗೆ ಯಾವುದೇ ನಿಯಮಗಳಿರುವುದಿಲ್ಲ ಎಂದು ತಿಳಿಸಲಾಗಿದೆ.  ಮಡಿ-ಮೈಲಿಗೆ ಸೂತಕ-ಅಶೌಚ ಮುಂತಾದ ಆಚರಣೆಗಳನ್ನು ಮಕ್ಕಳು ಆಚರಿಸುವ ಅಗತ್ಯವೇ ಇಲ್ಲ. ಯಾವ ಮನೆಯಲ್ಲಿ ಮಕ್ಕಳು ಹಿಂಸಿಸಲ್ಪಡುತ್ತಾರೋ, ಕಣ್ಣೀರು ಸುರಿಸುತ್ತಾರೋ ಅಂತಹ ಮನೆ ಅಮಂಗಳಕರ . ಮಕ್ಕಳ ಕಣ್ಣೀರು ಆ ಮನೆಯ ಯಜಮಾನನಿಗೆ ಹಾನಿ ಉಂಟುಮಾಡುತ್ತದೆ  ಎಂದು ತಿಳಿಸಲಾಗಿದೆ. ವಯಸ್ಕರು ಯಾವುದೇ ಕಾರ್ಯಗಳನ್ನು ಮಾಡುವಾಗ ಮಕ್ಕಳ ವಯೋಸಹಜ ಹುಡುಗಾಟಿಕೆಯಿಂದಾಗಿ  ಆ ಕೆಲಸದಲ್ಲಿ ತೊಂದರೆ ಉಂಟಾದರೆ  ಅದಕ್ಕೆ ಪ್ರತಿಯಾಗಿ ಮಕ್ಕಳನ್ನು ದಂಡಿಸಬಾರದು. ತಮ್ಮ ಆರ್ಥಿಕ ಶಕ್ತಿ ಮೀರಿ ಮಕ್ಕಳನ್ನು ಪಡೆಯಬಾರದು, ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು ಮುಂತಾದ ನಿಯಮಗಳನ್ನು ಪರಾಶರ ಸ್ಮೃತಿ ವಿಧಿಸುತ್ತದೆ.

''ಮಕ್ಕಳು'' ಎನ್ನುವುದು ಕೇವಲ ವಯಸ್ಸಿಗೆ ಸಂಬಂಧಪಟ್ಟಿದ್ದು ಅಲ್ಲ. ಯಾರಲ್ಲಿ ಅಮಾಯಕತೆ ಇದೆಯೋ.. ವಿದ್ಯೆ, ಬುದ್ಧಿ, ಶಕ್ತಿ ಸಾಮರ್ಥ್ಯ ಯಾರಲ್ಲಿ ಕಡಿಮೆ ಇದೆಯೋ ಅವರೆಲ್ಲ ಬಾಲಕ ಬಾಲಕಿಯರೇ..  ಹಾಗೂ ಯಾರಲ್ಲಿ ವಿವೇಕ-ವಿದ್ಯೆ ಹಾಗೂ ಶಕ್ತಿ ಸಾಮರ್ಥ್ಯಗಳಿವೆಯೋ ಅವರು ಮಾತ್ರ ಪ್ರೌಢರು, ವಯಸ್ಕರು ಎಂದು ಪರಿಗಣಿಸಬೇಕು ಎಂದು ಧರ್ಮಶಾಸ್ತ್ರ ನಿರ್ದೇಶಿಸುತ್ತದೆ. ಇತಿಹಾಸ ಪುರಾಣಗಳಾಗಲಿ  ಅಥವಾ ಶಾಸ್ತ್ರಗಳೇ ಆಗಲಿ, ಅವೆಲ್ಲವೂ ಧರ್ಮದ  ಮೂಲಕ ಜೀವಿಯ ಅಲೌಕಿಕ ಸಾಧನೆಯ ಮಾರ್ಗವನ್ನು ತೋರಿಸುವ ಗ್ರಂಥಗಳೆ  ಅದ್ದರಿಂದ ಅವುಗಳಲ್ಲಿ ನಿರ್ದಿಷ್ಟವಾಗಿ ಇಂಥವರ ಹಕ್ಕು ಇಷ್ಟು ಎಂದು ಕಾನೂನಿನಂತೆ ವಿವರಿಸುವುದಿಲ್ಲ. ಆದರೆ ವಯಸ್ಕ ಪ್ರಜೆಗಳಿಗೆ ಧರ್ಮವನ್ನು ವಿಧಿಸುವಾಗ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಅನೇಕ ನಿರ್ದೇಶನಗಳಿವೆ.
ಲಾಲಯೇತ್ ಪಂಚ ವರ್ಷಾಣಿ ದಶ ವರ್ಷಾಣಿ ತಾಡಯೇತ್
ಪ್ರಾಪ್ತೇ ತು ಶೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್
ಎನ್ನುವ ಸುಭಾಷಿತದಲ್ಲಿ ''ಮಕ್ಕಳು ಐದು ವರ್ಷದವರಾಗುವವ ವರೆಗೆ ಯಾವುದೇ ಕಾರಣಕ್ಕೂ ಅವರನ್ನು ಗದರಿಸಬಾರದು, ಐದರಿಂದ ಹದಿನಾರನೇಯ ವಯಸ್ಸಿನ ವರೆಗೆ ಶಿಕ್ಷಣ ನೀಡಬೇಕು, ಹದಿನಾರರ ನಂತರ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು'' ಎಂಬ ಸಂದೇಶವಿದೆ.
ಇನ್ನು ಋಗ್ವೇದದ ಕರ್ಮಕಾಂಡದ  ಮಹಾಪ್ರಾಯಶ್ಚಿತ್ತ ಭಾಗದಲ್ಲಿ ''ಬಾಲ ಹನನ'' ಅಂದರೆ ಮಕ್ಕಳ ಮೇಲಿನ ಹಲ್ಲೆಯನ್ನು  ಐದು ಮಹಾಪಾತಕ ಮತ್ತು ಏಳು ಉಪಪಾತಕಗಳಲ್ಲಿ ಒಂದು ಎಂದೇ ಪರಿಗಣಿಸಿ ಅದನ್ನು ಒಂದು ಗಂಭೀರ ಅಪರಾಧವೆಂದು ತಿಳಿಸಿದ್ದಾರೆ. ಅದಕ್ಕೆ ಘೋರವಾದ ಪ್ರಾಯಶ್ಚಿತ್ತಗಳನ್ನು ವಿಧಿಸಿದ್ದಾರೆ.
ತಮ್ಮ ಸ್ವಂತ ಮಕ್ಕಳಲ್ಲದೇ  ಅನ್ಯರ ಮಕ್ಕಳ ಬಗೆಗೂ ಇದೇ  ನಿಯಮಗಳು ವರ್ತಿಸುತ್ತವೆ. ಗುರುಕುಲದಲ್ಲಿ ವಿದ್ಯಾರ್ಥಿಗಳು ತಂದೆ ತಾಯಂದಿರ ನೆನಪಿನಲ್ಲಿ ಓದು ಬರಹದಲ್ಲಿ ಆಸಕ್ತಿ ತೋರಿಸದೇ  ಹೋದಲ್ಲಿ ಅಂತಹ ಮಕ್ಕಳನ್ನು ದಂಡಿಸಬಾರದು ಎಂದು ಶಿಕ್ಷಾ ಶಾಸ್ತ್ರವು ಹೇಳಿದೆ.

ಪ್ರಾಚೀನ  ಭಾರತದಲ್ಲಿ ಎಲ್ಲರೂ ಒಂದೇ ರೀತಿಯ ಉದ್ಯೋಗಗಳನ್ನು ಮಾಡುತ್ತಿರಲಿಲ್ಲವಾದ್ದರಿಂದ ಎಲ್ಲ ಮಕ್ಕಳಿಗೂ ಒಂದೇ ರೀತಿಯ  ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಈಗ  ಇರುವಂತೆ ಇತಿಹಾಸ, ಸಮಾಜಶಾಸ್ತ್ರ ವಿಜ್ಞಾನ, ಗಣಿತ ಮುಂತಾದವುಗಳನ್ನೊಳಗೊಂಡ ಸರ್ಕಾರದಿಂದ ನಿರ್ದೇಶಿತ ಪ್ರೌಢಶಾಲೆಯ ವರೆಗಿನ ಏಕರೂಪ ಶಿಕ್ಷಣ  ಎಲ್ಲರಿಗೂ ಕಡ್ಡಾಯ ಇರಲಿಲ್ಲ. ಬಹುತೇಕ ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಬಳಿ  ಅಥವಾ ಮನೆಯವರ ಬಳಿಯೇ ತಮ್ಮ ತಮ್ಮ ಕುಲ ಕಸುಬುಗಳನ್ನು ಕಲಿಯುತ್ತಿದ್ದರು. ತಮ್ಮ ಕುಲವೃತ್ತಿಗೆ ಅಗತ್ಯವಿಲ್ಲದ ವಿದ್ಯೆಯನ್ನು ಯಾರೂ ಕಲಿಯುತ್ತಿರಲಿಲ್ಲ.. ಹಾಗೂ ಅದನ್ನು ಕಲಿಯಲಿಕ್ಕಾಗಿ ಮನೆ ಬಿಟ್ಟು ಹೆಚ್ಚು ದೂರ ಹೋಗುತ್ತಿರಲಿಲ್ಲ.  ಆಡಳಿತಕ್ಕೆ ಬೇಕಾದ ರಾಜಧರ್ಮದ ತಿಳುವಳಿಕೆ ಮತ್ತು ಧರ್ಮದ ತಿಳುವಳಿಕೆ ಹೊಂದಿರಬೇಕಾದ ಕೆಲವೇ ವರ್ಗದ ಮಕ್ಕಳನ್ನು ಗುರುಕುಲಗಳಿಗೆ ಕಳುಹಿಸಲಾಗುತ್ತಿತ್ತು.  ಉಳಿದಂತೆ ವೃತ್ತಿಶಿಕ್ಷಣವೆಲ್ಲವೂ ಮನೆಯಲ್ಲಿಯೇ ಅಥವಾ ಸ್ವಗ್ರಾಮದಲ್ಲಿಯೇ ನಡೆಯುತ್ತಿತ್ತು. ಹೀಗಾಗಿ  ಈಗಿನಂತೆ ಮಕ್ಕಳು ಬೇರೆಯವರ ಸುಪರ್ದಿಯಲ್ಲಿ ಬೆಳೆಯುವ ಸಂದರ್ಭಗಳು ಕಡಿಮೆ ಇದ್ದವು.  ಆದ ಕಾರಣ ಮಕ್ಕಳು ಈಗಿನಂತೆ ಕುಟುಂಬದವರ ಹೊರತಾಗಿ ಬೇರೆಯವರಿಂದ ಅತ್ಯಾಚಾರ, ಹಲ್ಲೆಗೊಳಗಾಗುವ ಸಂದರ್ಭಗಳು ಅಪರೂಪ. ಆದರೆ ಕುಟುಂಬಿಕರಿಂದಲೇ ನಡೆಯುವ ಹಿಂಸೆ ಪ್ರಾಚೀನವಾದದ್ದೇ ಆಗಿದ್ದರೂ ಪ್ರಾಚೀನ ಭಾರತದಲ್ಲಿ ಧರ್ಮಭೀರತೆ ಹೆಚ್ಚು ಇತ್ತು ಹಾಗೂ ಲೌಕಿಕ ಮಹತ್ವಾಕಾಂಕ್ಷೆ  ಕಡಿಮೆ ಇದ್ದ ಕಾರಣ ಅದರ ಪ್ರಮಾಣ ಈಗಿನಷ್ಟಿರಲಿಲ್ಲ.

Tuesday, May 20, 2014

ಸಿದ್ಧಾಂತ ಮತ್ತು ಅನುಷ್ಠಾನ

ಸಿದ್ಧಾಂತ ಮತ್ತು ಅನುಷ್ಠಾನ 
ಧರ್ಮ ಅಥವಾ ಆಧ್ಯಾತ್ಮಿಕವಿಜ್ಞಾನ ಎಂಬುದು ಸೈದ್ಧಾಂತಿಕವಲ್ಲ. ಸಿದ್ಧಾಂತಗಳ ಚಿಂತನೆಯಿಂದ ಯಾವುದೇ ಆಧ್ಯಾತ್ಮಿಕ ಪ್ರಯೋಜನವಾಗುವುದಿಲ್ಲ.  ಆದ್ದರಿಂದಲೇ ಭಾರತೀಯ ಆಧ್ಯಾತ್ಮವಿದ್ಯೆಗೆ ಸಿದ್ಧಾಂತ ಮತ್ತು ಅನುಷ್ಠಾನ ಎಂಬ ಎರಡು ಮುಖಗಳಿವೆ.  ಭಾರತದ ಪ್ರಾಚೀನರು ಧಾರ್ಮಿಕ ಅನುಷ್ಠಾನಗಳನ್ನು ಆಚರಣೆಗೆ ತರಲಿಕ್ಕೆ ಸಿದ್ಧಾಂತಗಳ ಪ್ರತಿಪಾದನೆಯ ಮೂಲಕ ವಿವರಣೆ ನೀಡಿದ್ದಾರೆ. ಸಿದ್ಧಾಂತಗಳ ಅಡಿಪಾಯದ ಮೇಲೆಯೇ ಅನುಷ್ಠಾನವಿಧಾನಗಳು ನಿಂತಿವೆ. ಸಿದ್ಧಾಂತಗಳ ಚಿಂತನೆ ಹಾಗೂ ಅವುಗಳ ಫಲಿತಾಂಶಗಳ ಅನುಷ್ಠಾನದಿಂದ ಯೋಗಗಳೆಂಬ ನಾಲ್ಕು ಸಾಧನಾ ಮಾರ್ಗಗಳು ಹುಟ್ಟಿಕೊಂಡಿವೆ. ಆದರೆ ದುರ್ದೈವದಿಂದ ಈ ಸೈದ್ಧಾಂತಿಕ ತತ್ವಗಳು ಬೇರೆ ಬೇರೆ ರೀತಿಯಾಗಿ ಅರ್ಥೈಸಲ್ಪಟ್ಟು ಅನೇಕ ತತ್ವ-ಮತಗಳಿಗೆ ಸೆಮೆಟಿಕ್ ಮತಗಳ ಹುಟ್ಟುವಿಕೆಗೆ ಎಡೆಮಾಡಿಕೊಟ್ಟಿವೆ. 

ಸಿದ್ಧಾಂತ ವಿಭಾಗ (ಆರು ಶಾಸ್ತ್ರಗಳು)
ಭಾರತೀಯ ಆಧ್ಯಾತ್ಮವಿದ್ಯೆಯ ಅಥವಾ ಧರ್ಮದ ಶಾಖೆಗಳು ಆರು. ಅವುಗಳೇ ಷಡ್ದರ್ಶನಗಳು ಅಥವಾ ಆರು ಶಾಸ್ತ್ರಗಳೆಂದು ಕರೆಯಲ್ಪಟ್ಟಿವೆ. ನಾಯಶಾಸ್ತ್ರ(ಗೌತಮ), ವೇಶೇಷಿಕ(ಕಣಾದ), ಸಾಂಖ್ಯ(ಕಪಿಲ),  ಯೋಗ(ಪತಂಜಲಿ), ಮೀಮಾಂಸಾ(ಜೈಮಿನಿ) ಹಾಗೂ ವೇದಾಂತಶಾಸ್ತ್ರ(ಬಾದರಾಯಣ) ಇವುಗಳೇ ಆ ಆರು ದರ್ಶನಗಳಾಗಿವೆ. ಇವುಗಳಿಗೆಲ್ಲ ವೇದವೇ ಆಧಾರವಾಗಿದೆ. ಆದ್ದರಿಂದ ಇವುಗಳನ್ನು ವೈದಿಕ ದರ್ಶನಗಳೆಂದು ಗುರುತಿಸಲಾಗುತ್ತದೆ.

ನ್ಯಾಯ ಮತ್ತು ವೈಶೇಷಿಕ  
ಗೌತಮನ ನ್ಯಾಯ ಹಾಗೂ ಕಣಾದನ ವೈಶೇಷಿಕ ಪದ್ಧತಿಗಳ ಪ್ರಕಾರ ಅಳಿವಿಲ್ಲದ ಅಣುಗಳಿಂದ ಈ ಸೃಷ್ಟಿ ನಿರ್ಮಾಣವಾಗಿದೆ. ಎಲ್ಲ ಜೀವಿಗಳ ಬಾಳಿನ ಆಗುಹೋಗುಗಳು  ಹಿಂದಿನ ಸೃಷ್ಟಿಯಲ್ಲಿ ಮುಕ್ತವಾಗದೇ ಉಳಿದ ಆಯಾ ಜೀವಿಯ ‘’ಅದೃಷ್ಟ’’ ವನ್ನು (ದೃಷ್ಟಿಗೆ ಕಾಣದ್ದನ್ನು, ಅರ್ಹತೆಯನ್ನು) ಅವಲಂಬಿಸಿದೆ.  ಈ ಅಣುಗಳ ಸಂಯೋಗದಿಂದ ವಿಶ್ವದ ಸೃಷ್ಟಿಕ್ರಿಯೆ ನಡೆಯುತ್ತದೆ. ಹಾಗೆಯೇ ಅವುಗಳ ವಿಯೋಗದಿಂದ ಲಯ ಸಂಭವಿಸುತ್ತದೆ. ಜೀವಿಗಳಿಗೆ ತಾನು ದೇಹ-ಇಂದ್ರಿಯಸಮೂಹ ಹಾಗೂ ಮನಸ್ಸಿಗಿಂತ ಭಿನ್ನವಾದ ಶಾಶ್ವತ ವಸ್ತು ಎಂಬ ತಿಳುವಳಿಕೆ ಇಲ್ಲದ ಕಾರಣದಿಂದಲೇ ಜೀವಿಗಳು ಮತ್ತೆ ಮತ್ತೆ ಹುಟ್ಟುವ ಸಾಯುವ ಚಕ್ರಕದಲ್ಲಿ ಸಿಲುಕಿಕೊಂಡಿರುತ್ತವೆ.  ಈ ಚಕ್ರದಿಂದ ಅಂದರೆ ಎಲ್ಲ ರೀತಿಯ ದುಃಖಗಳಿಂದಲೂ ಶಾಶ್ವತ ಬಿಡುಗಡೆ ಹೊಂದಲು ಆ ಜೀವಿಯು ‘’ಶ್ರವಣ’’(ಶಾಸ್ತ್ರವು ವಿವರಿಸುವ ಸತ್ಯದ ತಿಳುವಳಿಕೆಯ ಆಲಿಸುವಿಕೆ), ಮನನ(ಆ ಸತ್ಯದ ಕುರಿತಾದ ಚಿಂತನೆ-ತನ್ಮೂಲಕ ತನ್ನ ನಿಜಸ್ವೂಪದ ಜ್ಞಾನ) ಹಾಗೂ ನಿಧಿಧ್ಯಾಸನ(ತನ್ನ ನಿಜಸ್ವರೂಪದ ಬಗ್ಗೆ ಧ್ಯಾನ)  ಎಂಬ ಕ್ರಿಯೆಗಳನ್ನು ಅವಲಂಬಿಸಬೇಕು ಎಂದು ನ್ಯಾಯ- ವೈಶೇಷಿಕ  ಶಾಸ್ತ್ರಗಳು ಪ್ರತಿಪಾದಿಸುತ್ತವೆ. 
ಸಾಂಖ್ಯ ಮತ್ತು ಯೋಗ
ಕಪಿಲನ ಸಾಂಖ್ಯ ಮತ್ತು ಪತಂಜಲಿಯ ಯೋಗಪದ್ಧತಿಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಕೃತಿ ಎನ್ನುವುದು ವಿಶ್ವದ ಮೂಲವಸ್ತುಗಳ ಸಂಗ್ರಹ ಎನ್ನುವುದು ಈ ಎರಡೂ ಶಾಸ್ತ್ರಗಳ ಕಾಣ್ಕೆಯಾಗಿದೆ.  ಪುರುಷರು(ಮನುಷ್ಯರು ಅಥವಾ ಜೀವಾತ್ಮರು) ಪ್ರೇರಕ ಶಕ್ತಿಗಳಂತೆ ವರ್ತಿಸುತ್ತಾರೆ. ಜೀವಿಗಳ ಉಪಸ್ಥಿತಿಯಲ್ಲಿ  ಈ ಪ್ರಕೃತಿ ವಿಶ್ವವಾಗಿ ಸೃಷ್ಟಿಗೊಳ್ಳುತ್ತದೆ. ವಾಸ್ತವವಾಗಿ, ಈ ಇಡೀ ಸೃಷ್ಟಿಕ್ರಿಯೆಯೇ ಜೀವಿಗಳ ಆತ್ಮಿಕ ಉನ್ನತಿಗಾಗಿ ಹಾಗೂ ಅಂತಿಮವಾಗಿ ಜೀವಿಗಳ ಮುಕ್ತಿಗಾಗಿ ಉಂಟಾಗಿದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶವೆಂಬ ಪಂಚಭೂತಗಳ ನಾನಾ ವಿಧಧ ಜೋಡಣೆಗಳಿಂದಲೇ ಈ ವಿಶ್ವದ ಅಥವಾ ಪ್ರಕೃತಿಯ ರಚನೆಯಾಗಿದೆ. ಜೀವಾತ್ಮನು ವಾಸ್ತವದಲ್ಲಿ ಈ ಪ್ರಕೃತಿಗಿಂತ ‘’ಭಿನ್ನವಾದ ಅಸ್ತಿತ್ವ’’ವಾಗಿದ್ದರೂ ಕೂಡ ಪ್ರಕೃತಿಗೂ ಹಾಗೂ ಅದರ ಉತ್ಪನ್ನಗಳಾದ ಶರೀರ ಮತ್ತು ಸತ್ವ ರಜ ತಮಗಳೆಂಬ ಮೂರು ಗುಣಗಳ ಪ್ರಭಾವಕ್ಕೆ ಒಳಗಾಗುವುದರ ಮೂಲಕ ಅವುಗಳ ಬಂಧನದಲ್ಲಿರುತ್ತಾನೆ. ಅದರ ಫಲವೇ ಮತ್ತೆ ಮತ್ತೆ ಜನ್ಮ ಉಂಟಾಗುವುದು. ‘’ವಿವೇಕಖ್ಯಾತಿ’’ಯ ಸಂಪಾದನೆ ಅಂದರೆ ವಿವೇಚನೆ ಮತ್ತು ಮತ್ತು ಜ್ಞಾನಗಳ ಮೂಲಕ ವೈರಾಗ್ಯ ಸಂಪಾದನೆ, ಹಾಗೂ ಯೋಗದ ಎಂಟು ಹಂತಗಳ ಮೂಲಕ ಅಂತಿಮವಾಗಿ ಆತನಿಗೆ ಬಿಡುಗಡೆ ಉಂಟಾಗುತ್ತದೆ ಎಂಬುದು ಸಾಂಖ್ಯ ಮತ್ತು ಯೋಗಗಳ ಪ್ರತಿಪಾದನೆಯಾಗಿದೆ.  
ಮೀಮಾಂಸಾ ಶಾಸ್ತ್ರ
ಜೈಮಿನಿಯ ಮೀಮಾಂಸಾ ದರ್ಶನದ ಪ್ರಕಾರ ಪ್ರಕೃತಿಯು ಅಚೇತನವಾಗಿದ್ದು ಈ ವಿಶ್ವವಾಗಿ ತನ್ನಿಂತಾನೆ ವಿಕಾಸ ಹೊಂದುತ್ತದೆ. ಜೀವಿಗಳು ಪೂರ್ವಜನ್ಮದಲ್ಲಿ ಎಸಗಿದ ಕರ್ಮಗಳು ಮತ್ತು ಈಗ ಫಲ ಕೊಡಲಿರುವ ಪ್ರಾರಬ್ಧ ಕರ್ಮಗಳು ವಿಶ್ವದ ವಿಕಾಸಕ್ಕೆ ಕಾರಣ ಮತ್ತು ಪ್ರೇರಣೆಗಳಾಗಿವೆ. ಈ ಜೀವಿಗಳು ಯಜ್ಞಯಾಗಾದಿ ವೇದಗಳಲ್ಲಿ ಹೇಳಿದ ಅನುಷ್ಠಾನಗಳನ್ನು ಪ್ರತಿನಿತ್ಯದ ಜೀವನದಲ್ಲಿ ಆಚರಿಸಬೇಕು. ಅವುಗಳ ನಿರಂತರ ಆಚರಣೆಯಿಂದ  ಚಿತ್ತಶುದ್ಧಿಯನ್ನು ಪಡೆಯುದರಮೂಲಕ ಬ್ರಹ್ಮತ್ವದ ಅನುಭವವನ್ನು ಹೊಂದಿ ತಮ್ಮ ಎಲ್ಲ ಸಂಕಟಗಳಿಂದ ಬಿಡುಗಡೆ ಹೊಂದಿ ಮುಕ್ತವಾಗಬೇಕು ಎಂದು ಮೀಮಾಂಸಾ ಶಾಸ್ತ್ರ ಹೇಳುತ್ತದೆ. 
ವೇದಾಂತ ಶಾಸ್ತ್ರ
ಬಾದರಾಯಣರ(ಇವರಿಗೆ ವ್ಯಾಸರು ಎಂಬ ಹೆಸರೂ ಇದೆ) ವೇದಾಂತ ದರ್ಶನದ ಪ್ರಕಾರ ಪ್ರತಿಯೊಂದು ಕಲ್ಪದ ಆದಿಯಲ್ಲಿ ನಿರ್ಗುಣ ಪರಬ್ರಹ್ಮವು ತನ್ನೊಳಗಿನಿಂದಲೇ ಈ ವಿಶ್ವವನ್ನು ಸೃಷ್ಟಿಸುತ್ತದೆ ಹಾಗೂ ಅದನ್ನು ವಿಷ್ಣುತತ್ವವಾಗಿದ್ದುಕೊಂಡು ಪೋಷಿಸುತ್ತದೆ. ಕೊನೆಗೆ ಕಲ್ಪಾಂತ್ಯದಲ್ಲಿ ರುದ್ರತತ್ವವಾಗಿ ಈ ಸೃಷ್ಟಿಯನ್ನೆಲ್ಲ ತನ್ನೊಳಗೆ ಎಳೆದುಕೊಂಡುಬಿಡುತ್ತದೆ. ವೇದಾಂತದಲ್ಲಿ ಈ ಸೃಷ್ಟಿಕ್ರಿಯೆಯನ್ನು ಜೇಡರ ಹುಳದ ಬಾಯಿಂದ ಹೊರಬಂದಿರುವ ಅದರ ಬಲೆಗೆ ಹಾಗೂ ಉರಿಯುವ ಬೆಂಕಿಯಿಂದ ಸಿಡಿಯುವ ಕಿಡಿಗಳಿಗೆ ಹೋಲಿಸಲಾಗಿದೆ. ಅದು ಹೊರಸಿಡಿದ ಕೆಲಹೊತ್ತಿನಲ್ಲಿಯೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆದರೆ ಅದಕ್ಕೆ ಕಾರಣವಾದ ಅಗ್ನಿ ಮೂಲದಲ್ಲಿ ಹಾಗೆಯೇ ಶಾಶ್ವತವಾಗಿ ಉಳಿದಿರುತ್ತದೆ. ಈ ಕಿಡಿಯ ಅಸ್ತಿತ್ವವನ್ನು ನಿರಾಕರಿಸಲೂ ಸಾಧ್ಯವಿಲ್ಲ.. ಹಾಗೆಯೇ ಅದು ಶಾಶ್ವತವೂ ಅಲ್ಲ. ಬೆಂಕಿಯಿಂದ ಸಿಡಿದ ಕಿಡಿಯೂ ಬೆಂಕಿಯೇ ಆಗಿರುವಂತೆ ಪರಬ್ರಹ್ಮದಿಂದ ಉಂಟಾದ ಈ ಜಗತ್ತೆಲ್ಲವೂ ಬ್ರಹ್ಮವೇ ಆಗಿದೆ. ಬ್ರಹ್ಮತತ್ವವಲ್ಲದ್ದು ಇಲ್ಲಿ ಏನೂ ಇಲ್ಲ. ಜೀವಿಯು ಜ್ಞಾನದ(ತನ್ನ ಅಸ್ತಿತ್ವದ, ನಿಜಸ್ವಭಾವದ ಅರಿವು) ಹಾಗೂ ಭಕ್ತಿಯ ಮೂಲಕ ತನ್ನ ಅನಂತ ಆನಂದದ ಮೂಲಸ್ಥಿತಿಯನ್ನು ಪುನಃ ಗಳಿಸುತ್ತಾನೆ ಎಂದು ಸಾರುವ ವೇದಾಂತವು ಅದರ ಸಾಧನೆಗಳನ್ನು ವಿವರಿಸುತ್ತದೆ. 

ಅನುಷ್ಠಾನ ವಿಭಾಗ ( ನಾಲ್ಕು ಯೋಗಗಳು)
ಯೋಗ ಎಂಬುದು ಅನುಷ್ಠಾನಕ್ಕೆ ಸಂಬಂಧಿಸಿದ್ದು. ಈ ಯೋಗದಲ್ಲಿ ನಾಲ್ಕು ವಿಧ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ರಾಜಯೋಗ. ಇವೆಲ್ಲವೂ ಮನಸ್ಸನ್ನು-ಚಿತ್ತವನ್ನು ಹಂತ ಹಂತವಾಗಿ ಶುದ್ಧಗೊಳಿಸುವ ಉಪಾಯಗಳು. ಈ ಯೋಗಗಳ ಅನುಷ್ಠಾದಿಂದ ಮನಸ್ಸು ಎಷ್ಟು ಪರಿಶುದ್ಧವಾಗುವುದೆಂದರೆ ತನ್ನೊಳಗಿನ ಆತ್ಮ ಅಥವಾ ಭಗವಂತನು ಜೀವಿಗೆ ತಾನಾಗಿಯೇ ಮೈದೋರುತ್ತಾನೆ. 

ಕರ್ಮಯೋಗ
ಪೂಜೆ, ಉಪಾಸನೆ ಇತ್ಯಾದಿ ಧಾರ್ಮಿಕ ಆಚರಣೆಗಳು, ಧರ್ಮಶಾಸ್ತ್ರದ ವಿಧಿ-ನಿಷೇಧಗಳು, ನಿಯಮಗಳು, ಹಾಗೂ ನಿತ್ಯ, ನೈಮಿತ್ತಿಕ, ಪ್ರಾಯಶ್ಚಿತ್ತ ಮತ್ತು ಕಾಮ್ಯವೆಂಬ ನಾಲ್ಕು ಪ್ರಕಾರದ ವೈದಿಕ ಅನುಷ್ಠಾನಗಳು, ಯಜ್ಞಗಳು ಇವೆಲ್ಲ ಕರ್ಮಯೋಗದ ಭಾಗಗಳಾಗಿವೆ. ವೈದಿಕ ಅನುಷ್ಠಾನಗಳು ಮಾತ್ರವಲ್ಲದೇ ಉದ್ಯೋಗ, ವ್ಯಾಪಾರ ಮುಂತಾದ ಎಲ್ಲ ಕ್ರಿಯೆಗಳೂ ಕರ್ಮವೇ ಆಗಿವೆ. ವಾಸ್ತವವಾಗಿ ಜೀವಿಗಳ ಮಾನಸಿಕ ಆಲೋಚನೆ ಮತ್ತು ಉಸಿರಾಟವೂ ಕೂಡ ಕರ್ಮವೇ ಆಗಿದೆ. ಕರ್ಮ ಮಾಡದೇ ಜೀವಿಯು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಆ ಕರ್ಮದಿಂದ ಕರ್ಮಫಲ, ಕರ್ಮಫಲದಿಂದ ವಾಸನೆ..ವಾಸನೆಯಿಂದ ಪ್ರವೃತ್ತಿ, ಪ್ರವೃತ್ತಿಯಿಂದ ಮತ್ತೆ ಕರ್ಮ, ಕರ್ಮದಿಂದ ಮತ್ತೆ ಕರ್ಮಫಲ ಆ ಕರ್ಮಫಲ ಅನುಭವಿಸಲಿಕ್ಕೆ ಮತ್ತೆ ಪುನರ್ಜನ್ಮ, ಜನ್ಮಿಸಿದ ಮೇಲೆ ಮತ್ತೆ ಕರ್ಮ ಹೀಗೆ ಈ ಚಕ್ರ ನಡೆಯುತ್ತಿದೆ. ಇದರಿಂದ ಬಿಡುಗಡೆ ಹೊಂದಲಿಕ್ಕೆ ಮಾನವನು ತನ್ನ ಕರ್ತವ್ಯವಾದ ಕರ್ಮಗಳನ್ನು ‘’ಕರ್ತೃತ್ವಭಾವ’’ ಅಂದರೆ ‘’ನಾನು ಆ ಕರ್ಮವನ್ನು ಮಾಡಿದೆ’’ ಎಂಬ ಭಾವ ಮತ್ತು ಅದರಿಂದುಂಟಾಗುವ ‘’ಫಲವು ನನ್ನದೇ’’ ಎಂಬ ‘’ಫಲಾಪೇಕ್ಷೆಯ ಭಾವ’’ ಈ ಎರಡು ವಿಷಕಾರಕ ಭಾವಗಳನ್ನು ಬಿಟ್ಟು ಭಗವಂತನಿಗೆ ಅವುಗಳನ್ನು ಸಮರ್ಪಿಸಿಬಿಡುವುದರಿಂದ ಆ ಕರ್ಮಫಲ ಮತ್ತು ಅದರಿಂದುಂಟಾಗುವ ವಾಸನೆಯಿಂದ ಮುಕ್ತನಾಗುತ್ತಾನೆ. 
‘’ನೀನು ಈ ಕರ್ಮವನ್ನು ಮಾಡುತ್ತಿರುವಿ ಎಂಬ ಭಾವವನ್ನು ಬಿಟ್ಟು ಬಿಡು.. ಮತ್ತು ಅದರಿಂದುಂಟಾಗುವ ಫಲವು ನಿನ್ನದು ಎಂದುಕೊಳ್ಳಬೇಡ. ಅವೆರಡೂ ನನ್ನವೇ ಆಗಿವೆ. ನಿನ್ನದೇನೂ ಇಲ್ಲ. ಆದರೂ ನೀನು ನಿನ್ನ ಕರ್ತವ್ಯವಾದ ಕರ್ಮವನ್ನು (ಯುದ್ಧವನ್ನು) ಮಾಡಬೇಕು ಮತ್ತು ಅದನ್ನು ಚೆನ್ನಾಗಿ ಶ್ರದ್ಧೆಯಿಂದ ಮಾಡಬೇಕು, ಅದರ ಕರ್ತೃತ್ವ ಮತ್ತು ಫಲವನ್ನು ನನ್ನಮೇಲೆ ಹಾಕಿಬಿಡು ’’ ಎಂಬ ಕೃಷ್ಣನ  ಮಾತು ಅರ್ಜುನನಿಗೆ ಮಾತ್ರವಲ್ಲ,  ಇಡೀ ಜಗತ್ತಿಗೇ ಹೇಳಿದ್ದಾಗಿದೆ ಮತ್ತು ಅದು ಕೇವಲ ಯುಧ್ಧದ ಕುರಿತಾದ ಮಾತಲ್ಲ, ಉಸಿರಾಟ, ಆಲೋಚನೆ ಮೊದಲುಗೊಂಡು ಎಲ್ಲ ರೀತಿಯ ಕರ್ಮಗಳಿಗೆ ಅನ್ವಯಿಸುತ್ತದೆ. 

ಭಕ್ತಿಯೋಗ
ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು ಆತನ ಕೃಪೆಯಿಂದಲೇ ಆತನನ್ನು ಸೇರಬೇಕೆಂಬುದು ಭಕ್ತಿಯೋಗದ ಮಾರ್ಗ. ನಾರದನ ಭಕ್ತಿಸೂತ್ರಗಳಲ್ಲಿ ಒಂಭತ್ತು ವಿಧವಾದ ಭಕ್ತಿಗಳನ್ನು ವಿವರಿಸಿದ್ದು ರಾಮಾಯಣದಲ್ಲಿ ಅವುಗಳನ್ನೇ ರಾಮನು ಶಬರಿಗೆ ಬೋಧಿಸಿದ್ದಾನೆ. ಇಲ್ಲಿ ಭಕ್ತಿಯೆಂದರೆ ದೇವರೆಡೆಗಿನ ಮೂಢ ವಿಶ್ವಾಸವಲ್ಲ. ಅಂಧಾಭಿಮಾನವಲ್ಲ.
ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸಿ |
 ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೆ || 
ಮೋಕ್ಷಸಾಧನೆಗಿರುವ ಮಾರ್ಗಗಳಲ್ಲಿ ಭಕ್ತಿಯೇ ಉತ್ತಮವಾದದ್ದು. ಆದರೆ ಸ್ವಸ್ವೂಪದ ಅನುಸಂಧಾನವೇ ಭಕ್ತಿಯಾಗಿದೆ ಎಂದು ಶಂಕರಾಚಾರ್ಯರು ಭಕ್ತಿಯ ಸ್ವರೂಪವನ್ನು ವಿವರಿಸಿದ್ದಾರೆ.  ಈ ಸ್ವಸ್ವರೂಪದ ಅನುಸಂಧಾನಕ್ಕೆ ಹಾಗೂ ಭಗವಂತನ ಮೇಲೆ ಭಕ್ತಿಯನ್ನು ಹೊಂದಲಿಕ್ಕೆ ಭಗಂವಂತನ ಅನಂತತೆ, ಅಗಾಧತೆ, ಸೃಷ್ಟಿಯ ನಶ್ವರತೆ, ಜೀವದ ಚೈತನ್ಯ ಸ್ವಭಾವ ಮುಂತಾದವುಗಳ ಸ್ಪಷ್ಟ ಜ್ಞಾನ ಇರಲೇಬೇಕಾಗುತ್ತದೆ. ಹೀಗಾಗಿ ಭಕ್ತಿಯು ಜ್ಞಾನದ ಅಡಿಪಾಯದ ಮೇಲೆಯೇ ನಿಂತಿರುತ್ತದೆ. ಜ್ಞಾನವಿಲ್ಲದ ಮೂಢ ಅಭಿಮಾನವು ಅಥವಾ ಅವಲಂಬನೆಯು ಭಕ್ತಿಯೆನಿಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ. 

ಜ್ಞಾನಯೊಗ
ಆತ್ಮಸ್ವರೂಪದ, ಬ್ರಹ್ಮತತ್ವದ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡು ನಿರಂತರವೂ ಮನಸ್ಸನ್ನು ಅಂತರ್ಮುಖಿಯಾಗಿಸಿಕೊಂಡು ತನ್ನನ್ನು ತಾನು ಆತ್ಮನೆಂಬ ವಾಸ್ತವವನ್ನು ಧ್ಯಾನಿಸುತ್ತಿದ್ದರೆ ಅಂತಿಮವಾಗಿ ಅದು ಅನುಭವಕ್ಕೆ ಬರುತ್ತದೆ ಎಂಬುದು ಜ್ಞಾನಯೋಗದ ಅನುಷ್ಠಾನ ವಿಧಾನ. 

ರಾಜಯೋಗ
ಪತಂಜಲಿಯ ಅಷ್ಟಾಂಗಯೋಗ ಪದ್ಧತಿಯನ್ನು ರಾಜಯೋಗವು ಅವಲಂಬಿಸಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ ಎಂಬ ಎಂಟು ಸಾಧನೆಯ ಮೆಟ್ಟಿಲುಗಳನ್ನು ಕ್ರಮವಾಗಿ ಹತ್ತಿಕೊಂಡು ಹೋದಾಗ ಆತ್ಮಾನುಭವದ ಫಲ ಉಂಟಾಗಿ ತನ್ಮೂಲಕ ಬಿಡುಗಡೆ ಸಿದ್ಧಿಸುತ್ತದೆ. ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ಪ್ರಕಾರದ ಕರ್ಮಗಳೂ ಮತ್ತು ಅವುಗಳ ಫಲದಿಂದುಂಟಾಗುವ ಪುನರ್ಜನ್ಮದ ಕೊಂಡಿ ತಪ್ಪುತ್ತದೆ.

Tuesday, May 6, 2014

# ಕರೆ #


ದೇಹಕಿರುವ ಹೆಸರು, ಮೆದುಳಿನಲ್ಲಿಯ ವಿದ್ಯೆ
ಅವುಗಳೆರಡರ ಒಟ್ಟು ಸುಳ್ಳು ಮುಖವಾಡ
ಎಲ್ಲ ಕಳಚಿ ಬೆತ್ತಲಾಗಿ ನಿಲ್ಲಲಾಗುವುದಿಲ್ಲ . 
ಬರಿಯ ನಾನಾಗಿ ನಾ ಸುಖಿಸಲಾಗುವುದಿಲ್ಲ 

ಸತ್ವ ರಜ ತಮಗಳ ಆಟ ಮನಸು ಪರದೆಯ ಮೇಲೆ
ವೃತ್ತಿ ಹಿಡಿತದಿ ಚಿತ್ತ ಮುಳು ಮುಳಗಿ ಏಳುತಿರೆ 
ಬುದ್ಧಿಯರಿವಿನ ನಿಲುಕಿನಲಿ ವಿಜ್ಞಾನವಿಲ್ಲ
ಹೊಟ್ಟೆಪಾಡಿನ ಓಟ  ಹೊಟ್ಟೆಗೇ ನಿಲ್ಲುವುದಿಲ್ಲ  

ಮೂರು ಗುಣಗಳ ಚಕ್ರದಲಿ ದೇಹಗಳಿಗೆ ಅಲೆದಲೆದು 
ಹೊತ್ತ ಭ್ರಮೆಗಳ ಭಾರ ಜನ್ಮ ಜನ್ಮಾಂತರದ್ದು
ಹೊರೆ ಇಳಿಸಿ ನೀರುಣಿಸೊ ದಾರಿಹೋಕನು ನೀನು 
ಅಡಗಿರುವೆ ಏಕಿನ್ನೂ ದಣಿದಿರುವೆ ನಾನು 

ಗುಲ್ಜಾರ್


ಬೇರುಗಳನ್ನು ಕತ್ತರಿಸಿ ನನ್ನನ್ನು ಹಾರಾಡಿಸುತ್ತಿದ್ದ 
ಗಾಳಿಯೊಡನೆ ಸಖ್ಯ ಮಾಡಿಸಿಬಿಟ್ಟಿದ್ದ 
ಅದಷ್ಟೇ ಅಲ್ಲ ಕೇಳಿಲ್ಲಿ ಇನ್ನೊಂದು ಆಶ್ಚರ್ಯ 
ನಾ ನನ್ನ ವಿಧಿಯನ್ನೇ ಬದಲಿಸುವಂತೆ ಮಾಡಿದ್ದ 

ಅವನದೇ ನಿಯತ್ತು ಬದಲಾಗಿ ಹೋಗಿದೆ ಈಗ 
ನನ್ನ ಬಾಳಿನ ದೇವರಾಗಿದ್ದ  ಅವನು 
ಮೊನ್ನೆ ಯಾರೋ ಅಪರಿಚಿತನಿಗೆ  
ನನ್ನದೇ  ಕಥೆ ಹೇಳುತ್ತಿದ್ದ 

ಆವ ನನ್ನ ಉಳಿದ ಆಯುಸ್ಸು ಎಣಿಸುತ್ತಿದ್ದ 
ನಾ ನನ್ನ ಉಸಿರುಗಳ ಅಂತರವ ಬೆಳೆಸುತ್ತಿದ್ದೆ  

ಕರ್ತೃತಂತ್ರ ಹಾಗೂ ವಸ್ತು-ತಂತ್ರ

ವೇದ-ವೇದಾಂತಗಳಿಗೆ ವ್ಯಾಖ್ಯಾನ ಬರೆದ ಬಹುತೇಕ ಮಹನೀಯರು ವೇದವೆಲ್ಲವೂ ಕೂಡ‘ ವಿಧಿಪರವೇ ಅಂದರೆ ಯಜ್ಞಾದಿ ದೈಹಿಕ ಕ್ರಿಯೆಗಳ, ಹಾಗೂ ಉಪಾಸನೆಯೆಂಬ ಮಾನಸಿಕಕ್ರಿಯಾ ಸಮುಚ್ಚಯದ ‘’ವಿಧಿ-ವಿಧಾನ’’ಗಳನ್ನು ತಿಳಿಸುವುದೇ ಆಗಿದೆಎಂದು ವ್ಯಾಖ್ಯಾನಿಸಿದ್ದಾರೆ. ವಿಧಿಗೆ ಸಂಬಂಧಪಡ ದಉಪನಿಷತ್ತುಗಳನ್ನು ಕೂಡ ಉಪಾಸನಾವಿಧಿಗೆ ಒಳಪಡಿಸಿಕೊಳ್ಳಬೇಕೆಂಬುದೂ ಕೆಲವರ ಮತವಾಗಿದೆ.  ಆದ್ದರಿಂದಲೇ ಅವರುಗಳು ಆತ್ಮಜ್ಞಾನದ ಪ್ರಾಪ್ತಿಯಾದ ಬಳಿಕವೂ ಕೂಡ ಕೇವಲ ಆತ್ಮಜ್ಞಾನಪ್ರಾಪ್ತಿ ಮೋಕ್ಷಕ್ಕೆ ಸಾಕಾಗುವುದಿಲ್ಲ. ಆತ್ಮಜ್ಞಾನ ಉಂಟಾದ ಬಳಿಕ ಮೋಕ್ಷಕ್ಕಾಗಿ ಪ್ರಸಂಖ್ಯಾನ, ಉಪಾಸನೆ, ಸಾಕ್ಷಾತ್ಕಾರ, ಮನೋನಾಶ, ವಾಸನಾಕ್ಷಯ, ಪ್ರಪಂಚಪ್ರವಿಲಯ ಮುಂತಾದ ಅನೇಕಸಾಧನೆಗಳನ್ನು ಮಾಡಬೇಕೆಂದು ಪ್ರತಿಪಾದಿಸಿದ್ದಾರೆ. ಆದರೆ ಶಂಕರರು ಕೇವಲ ಆತ್ಮಜ್ಞಾನವೇ ಮೋಕ್ಷಕ್ಕೆ ಸಾಕಾಗಿದೆ- ಇನ್ನೇನೂ ಮಾಡಬೇಕಾದ ಅಗತ್ಯವಿಲ್ಲ ಎಂದು ಸಾರಿದ್ದಾರೆ. ಅವರ ಮಾತನ್ನು ಸರಿಯಾಗಿ ತಿಳಿಯಲು ಕರ್ತೃತಂತ್ರ ಹಾಗೂ ವಸ್ತು-ತಂತ್ರ ಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಕರ್ತೃತಂತ್ರ
ಕರ್ತೃ ಎಂದರೆ ಮಾಡುವವನು ಎಂದರ್ಥ. ಮಾಡುವವನ ಇಚ್ಛೆಗೆ ಅಧೀನವಾಗಿರುವ ಕ್ರಿಯೆ ಅಥವಾ ಕೆಲಸವೇ ‘’ಕರ್ತೃತಂತ್ರ’’.  ಕರ್ತವ್ಯ ಅಥವಾಕ್ರಿಯೆ – ಎಂಬುದು ಮಾಡುವವನಿಗೆ ಅಧೀನವಾಗಿಯೇ ಹುಟ್ಟುತ್ತದೆ. ಕರ್ತೃವು ಆ ಕ್ರಿಯೆಯನ್ನು ಮಾಡಬಹುದು-ಮಾಡದೇ ಇರಬಹುದು, ಅಥವಾ ಮತ್ತೊಂದು ಬಗೆಯಿಂದಲೂ ಮಾಡಬಹುದು. ಹೀಗೆ ಲೌಕಿಕ-ವೈದಿಕ ಕರ್ಮಗಳೆಲ್ಲವೂ ಕರ್ತೃತಂತ್ರವಾಗಿಯೇ ಇರುತ್ತವೆ.
ಉದಾ:- ಒಬ್ಬನು ಒಂದು ಊರಿಗೆ ಹೋಗಬೇಕಾಗಿದೆ ಎಂದಿಟ್ಟುಕೊಳ್ಳೋಣ. ಅವನು ಆ ಊರಿಗೆ. ನಡೆದುಕೊಂಡು ಹೋಗಬಹುದು. ವಾಹನದಲ್ಲಿ ಹೋಗಬಹುದು, ಅಥವಾ ಹೋಗದೆಯೂ ಇರಬಹುದು. ಹೀಗೆಯೇ ವೈದಿಕ ಕರ್ಮಗಳಲ್ಲಿಯೂ ಉತ್ಸರ್ಗ(ಸಾಮಾನ್ಯನಿಯಮ), ವಿಕಲ್ಪ (ಪರ್ಯಾಯನಿಯಮ), ಅಪವಾದ(ವಿಶೇಷನಿಯಮ) ಎಂಬ ಭೇದಗಳು ಇವೆ.
ಒಟ್ಟಿನಲ್ಲಿ ಕರ್ತೃವಿಗೆ ಅಧೀನವಾಗಿದ್ದುಕೊಂಡು ನಡೆಯುವ ದೇಹೇಂದ್ರಿಯ ಪ್ರಧಾನವಾದ ಕಾರ್ಯಗಳಾಗಲಿ ಹಾಗೂ ಮನಃಪ್ರಧಾನವಾದ ಉಪಾಸನೆ-ಧ್ಯಾನಾದಿಗಳಾಗಲಿ- ಎಲ್ಲವೂ ಕರ್ತೃತಂತ್ರವಾಗಿವೆ.

ವಸ್ತುತಂತ್ರ
ವಸ್ತುತಂತ್ರವೆಂದರೆ ವಸ್ತುವಿಗೆ ಅಧೀನವಾಗಿ ಅದುಇರುವಂತೆಯೇ ಉಂಟಾಗುವ ಜ್ಞಾನ. ಯಾವುದೇ ವಸ್ತುವಿನ ಜ್ಞಾನವು(ಅರಿವು) ಆ ವಸ್ತುಹೇಗಿದೆಯೋ ಹಾಗೆಯೇ ಆಗುತ್ತದೆಯೇ ವಿನಃ ಅದು ಜ್ಞಾತೃವಿನ(ತಿಳಿಯುವವನ) ಇಚ್ಛೆಯಂತೆ ಎಂದಿಗೂ ಹುಟ್ಟುವುದಿಲ್ಲ.
ಕಾಗೆಯು ಕಪ್ಪಾಗಿದೆ. ಆದ್ದರಿಂದ ನೋಡುಗನ ದೃಷ್ಟಿಗೆ ಅದು ಕಪ್ಪಾಗಿಯೇ ಕಾಣಿಸುತ್ತದೆ. ಅದು ಹೇಗಿದೆಯೋ ಹಾಗೆಯೇ ಜ್ಞಾನ ಉಂಟಾಗುತ್ತದೆಯೇ ಹೊರತು, ನೋಡುಗನ ಇಚ್ಛೆಯನ್ನು ಆಧರಿಸಿ ಅದು ಎಂದಿಗೂ ಇರುವುದಿಲ್ಲ. ನೋಡುವವನುನನಗೆಕಪ್ಪುಬಣ್ಣಇಷ್ಟವಿಲ್ಲ, ಹಾಗಾಗಿ ಕಾಗೆ ಬಿಳಿಯ ಬಣ್ಣ ಹೊಂದಿದೆ ಎಂದು ಭಾವಿಸಿ ಅದರಲ್ಲಿ ಬಿಳಿಯನ್ನು ನೋಡಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ.  ಹೀಗೆ,  ಕಾಗೆ ಎಂಬ ವಸ್ತು ಹೇಗಿದೆಯೋ ಹಾಗೆಯೇ ಅದರ ಜ್ಞಾನ ಉಂಟಾಗುವುದರಿಂದ ಈ ಜ್ಞಾನವು ವಸ್ತುತಂತ್ರವಾಗಿದೆ.
ಯಾವ ರೀತಿ ಕ್ರಿಯೆಯು ಕರ್ತೃವಿಗೆ ಅಧೀನವಾಗಿದ್ದು ಕರ್ತೃತಂತ್ರವಾಗಿದೆಯೋ ಅದೇ ರೀತಿ ಜ್ಞಾನವು ವಸ್ತುತಂತ್ರವಾಗಿದ್ದು. ವಸ್ತುವನ್ನು ಅವಲಂಬಿಸಿ ಅದು ಹೇಗಿದೆಯೋ ಹಾಗೆಯೇ ಜ್ಞಾನಉಂಟಾಗುತ್ತದೆಯೇ ಹೊರತು ಅದು ಜ್ಞಾತ್ರೃವಿಗೆ ಅಧಿನವಾಗಿ ಬದಲಾಗುವುದಿಲ್ಲ. ವಸ್ತುವಿನ ಸ್ವರೂಪವು ಅರಿಯುವವನ ಬುದ್ಧಿಯನ್ನು ಅವಲಂಬಿಸಿದ್ದಲ್ಲ.
ಹೀಗೆ ಮಾಡಿದರೆ ಇಂಥದ್ದು ಉಂಟಾಗುತ್ತದೆ,ಅಥವಾ ಇಂಥಾದ್ದು ಪ್ರಾಪ್ತವಾಗುತ್ತದೆ- ಎಂದೆಲ್ಲ ಬೋಧಿಸುವ ವೇದಭಾಗಗಳಲ್ಲಿ ಹೇಳಿದ ಕರ್ಮಗಳು, ಉಪಾಸನೆಗಳು ಎಲ್ಲ ವಿಧಿ-ವಿಧಾನಗಳು ಹಾಗೂ ಲೌಕಿಕ ಜೀವನದ ಕಾರ್ಯನಿಯಮಗಳು ಇವುಗಳೆಲ್ಲ ಕರ್ತೃತಂತ್ರವೇ ಆಗಿವೆ. ಆದರೆ ಉಪನಿಷತ್ತುಗಳಲ್ಲಿ ಹೇಳಿದ ಬ್ರಹ್ಮಜ್ಞಾನವು ವಸ್ತುತಂತ್ರವಾಗಿದೆ. ಹೇಗೆಂದರೆ ಈ ಬ್ರಹ್ಮತತ್ವವು ನಮ್ಮೆಲ್ಲರಲ್ಲಿಯೂ ಮೊದಲಿನಿಂದಲೂ ನಮ್ಮ ಸ್ವರೂಪವೇ ಆಗಿ ನಮ್ಮೊಳಗೇ ಇದ್ದುಬಿಟ್ಟಿರುವ ವಸ್ತುವಾಗಿದೆ.  ಅದರ ಬಗೆಯ ಜ್ಞಾನವು ವಸ್ತುತಂತ್ರವೇ ಅಗಿದೆ.  ಹೀಗಾಗಿ ಆತ್ಮಜ್ಞಾನವನ್ನು ದೈಹಿಕ ಅಥವಾ ಮಾನಸಿಕ ಕ್ರಿಯೆಯಾಗಿ ಪರಿಗಣಿಸಲು ಬರುವುದಿಲ್ಲ.
ಆಕ್ಷೇಪ;
ಲೋಕದಲ್ಲಿಯ ವ್ಯವಹಾರಕ್ಕಾಗಲಿ ಅಥವಾ ವೇದದಲ್ಲಿ ಹೇಳಿದ ಕರ್ಮ-ಉಪಾಸನಾದಿಗಳಿಗೇ ಆಗಲಿ, ಮೊದಲು ಅವುಗಳ ಬಗ್ಗೆ ಜ್ಞಾನವು ಬರಲೇ ಬೇಕು. ಆದರೆ ಅವುಗಳ ಜ್ಞಾನಮಾತ್ರದಿಂದ ನಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.  ಒಬ್ಬ ವೈದ್ಯನು ಎಲ್ಲ ಚಿಕಿತ್ಸಾಕ್ರಮಗಳನ್ನು ತಿಳಿದುಕೊಂಡು ಸುಮ್ಮನೇ ಕುಳಿತರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಿದಾಗಲಷ್ಟೇ ಆತನಿಗೆ ಆ ವಿದ್ಯೆಯ ಪ್ರಯೋಜನವಾಗುವುದು. ಹಾಗೆಯೇ ಪ್ರತಿಯೊಂದು ವ್ಯವಹಾರದಲ್ಲಿಯೂ ಇರುವುದಲ್ಲವೇ? ಆದ್ದರಿಂದ ಆತ್ಮಜ್ಞಾನವೂ ಕೂಡ ನಂತರದಲ್ಲಿ ಮಾಡಬೇಕಾಗಿರುವ ಕ್ರಿಯೆಗೆ ಅಧೀನವಾಗಿದ್ದಲ್ಲಿ ಮಾತ್ರ ಪ್ರಯೋಜನಕಾರಿಯಲ್ಲವೇ..? ಕೇವಲ ಜ್ಞಾನಮಾತ್ರದಿಂದ ಯಾವ ಪ್ರಯೋಜನವೂ ಆಗಲಾರದು ಎಂಬುದು ನಮ್ಮೆಲ್ಲರ ನಿತ್ಯಜೀವನದ ಅನುಭವಸಿದ್ಧ ಸತ್ಯವಲ್ಲವೇ? ಎಂಬ ಆಕ್ಷೇಪ ಇಲ್ಲಿ ಎದ್ದು ನಿಲ್ಲುತ್ತದೆ.
ಪರಿಹಾರ
ಒಬ್ಬನು ಮಬ್ಬುಗತ್ತಲೆಯಲ್ಲಿ ಬಿದ್ದಿರುವ ‘’ಹಗ್ಗ’’ವನ್ನು ನೋಡಿ ಅದರ ನಿಜರೂಪ ತಿಳಿಯದೇ ಅದು ‘’ಹಾವು’’ ಎಂದು ಭಾವಿಸಿ ಭಯದಿಂದ ನಡುಗುತ್ತ ನಿಂತಾಗ, ವಾಸ್ತವವನ್ನು ತಿಳಿದವನೊಬ್ಬನು ‘’ಇದುಹಾವಲ್ಲ, ಹಗ್ಗ’’ ಎಂದು ಹೇಳಿದ ಮಾತ್ರಕ್ಕೆ ಭೀತವ್ಯಕ್ತಿಯ ಭಯವು ನಿವಾರಣೆಯಾಗಿ ನಿರಾಳತೆ ಅನುಭಕ್ಕೆ ಬರುವುದು ಲೋಕದಲ್ಲಿ ಸಾಮಾನ್ಯವಾಗಿದೆ. ಆದ್ದರಿಂದ ಕೇವಲ ಜ್ಞಾನಮಾತ್ರದಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ ಎಂದು ಸಿದ್ಧಾಂತ ಮಾಡಲು ಬರುವುದಿಲ್ಲ. ಅದೇ ರೀತಿ ನಾವು ಒಂದು ಸ್ವಪ್ನದಲ್ಲಿದ್ದಾಗ ಅಲ್ಲಿ ದರೋಡೆಕೋರರ ಕೈಯಲ್ಲಿ ಸಿಕ್ಕಂತೆಯೋ, ಹುಲಿ ಅಥವಾ ಸಿಂಹದಂತಹ ಹಿಂಸ್ರಪಶುವಿನ ಆಕ್ರಮಣಕ್ಕೊಳಗಾಗಿರುವಂತೆಯೋ ತೋರಿದರೆ ಆಗ ನಾವು ಭಯ-ಕಂಪನಗಳಿಂದ ಕಂಗೆಟ್ಟು ಹೋಗುತ್ತೇವೆ. ಎಚ್ಚರಗೊಂಡು ನೋಡಿದರೆ ನಾವು ಯಾವುದೇ ಅಪಾಯದಲ್ಲಿ ಸಿಕ್ಕಿಬಿದ್ದಿಲ್ಲ ಎಂಬ ಅರಿವು ಉಂಟಾಗುತ್ತದೆ. ಈ ವಾಸ್ತವದ ಜ್ಞಾನಮಾತ್ರದಿಂದಲೇ ಭಯ ನಿವಾರಣೆಯಾಗಿ ಆ ಸ್ವಪ್ನದಲ್ಲಿ ತೋರಿದ ಭಯಾನಕ ಸನ್ನಿವೇಶಕ್ಕೆ ಯಾವುದೇ ಪರಿಹಾರೋಪಾಯವನ್ನು ಹುಡುಕುವ ಅಗತ್ಯವೂ ಇರುವುದಿಲ್ಲ.
ಆತ್ಮಜ್ಞಾನವು ಬಂದ ಕೂಡಲೇ ಆತ್ಮತತ್ವವೇ ಎಲ್ಲೆಲ್ಲಿಯೂ ವ್ಯಾಪಿಸಿರುವುದರ ಅನುಭ ವಬರುವುದರಿಂದ ಆತ್ಮದ ಹೊರತಾಗಿ ಬೇರೇನೂ ಉಳಿಯುವುದೇ ಇಲ್ಲ. ಆಗ ಪೂರ್ವಾಗ್ರಹದ ತಪ್ಪು ಅಭಿಪ್ರಾಯಗಳೂ, ಹೆಸರು-ರೂಪಗಳ ಆಧಾರದ ಮೇಲೆ ವಸ್ತುಗಳ ಗುರುತಿಸುವಿಕೆಯೂ ಇರುವುದಿಲ್ಲ. ಇತರರ ದೃಷ್ಟಿಯಲ್ಲಿ ಇನ್ನೊಂದೆಂಬುದು ಆತ್ಮನಲ್ಲಿದ್ದಂತೆ ತೋರಿದರೂ ಆತ್ಮಜ್ಞಾನಿಯ ದೃಷ್ಟಿಯಲ್ಲಿ ಅದೇಲ್ಲವೂ ಕೇವಲ ಹುಸಿತೋರಿಕೆಯಾಗುವುದರಿಂದ ಕರ್ತೃ-ಕ್ರಿಯೆ, ಕಾರಕ-ಫಲ ಮೊದಲಾದವುಗಳೆಲ್ಲ ಕೇವಲಾತ್ಮವೇ ಆಗಿ ಹೋಗಿರುತ್ತವೆ. ಆತ್ಮಜ್ಞಾನಿಯ ಅನುಭವದ ದೃಷ್ಟಿಯಲ್ಲಿ ಕಾಲವೇ ಇರುವುದಿಲ್ಲ. ಆದ್ದರಿಂದ ಕೇವಲ ಆತ್ಮಜ್ಞಾನ ಮಾತ್ರದಿಂದಲೇ ಮೋಕ್ಷವು ಪ್ರಾಪ್ತವಾಗುತ್ತದೆ ಎಂಬುದರಲ್ಲಿ ಸಂಶಯವೇ ಉಳಿಯುವುದಿಲ್ಲ.

ಕರೆ

ದೇಹಕಿರುವ ಹೆಸರು, ಮೆದುಳಿನಲ್ಲಿಯ ವಿದ್ಯೆ
ಅವುಗಳೆರಡರ ಒಟ್ಟು ಸುಳ್ಳು ಮುಖವಾಡ
ಎಲ್ಲ ಕಳಚಿ ಬೆತ್ತಲಾಗಿ ನಿಲ್ಲಲಾಗುವುದಿಲ್ಲ . 
ಬರಿಯ ನಾನಾಗಿ ನಾ ಸುಖಿಸಲಾಗುವುದಿಲ್ಲ 

ಸತ್ವ, ರಜ, ತಮಗಳ ಆಟ ಮನಸು ಪರದೆಯ ಮೇಲೆ
ವೃತ್ತಿ ಹಿಡಿತದಿ ಚಿತ್ತ ಮುಳು ಮುಳಗಿ ಏಳುತಿರೆ 
ಬುದ್ಧಿಯರಿವಿನ ನಿಲುಕಿನಲಿ ವಿಜ್ಞಾನವಿಲ್ಲ
ಹೊಟ್ಟೆಪಾಡಿನ ಓಟ ಹೊಟ್ಟೆಗೇ ನಿಲ್ಲುವುದಿಲ್ಲ 

ಮೂರು ಗುಣಗಳ ಚಕ್ರದಲಿ ದೇಹಗಳಿಗೆ ಅಲೆದಲೆದು
ಹೊತ್ತ ಭ್ರಮೆಗಳ ಭಾರ ಜನ್ಮ ಜನ್ಮಾಂತರದ್ದು
ಹೊರೆ ಇಳಿಸಿ ನೀರುಣಿಸೊ ದಾರಿಹೋಕನು ನೀನು
ಅಡಗಿರುವೆ ಏಕಿನ್ನೂ ದಣಿದಿರುವೆ ನಾನು 

Tuesday, April 8, 2014

# @ಯುಗಾದಿ ಲಹರಿ

ಕಣ್ಣುಗಳೊಳಗಿನಿಂದ
ಇಣುಕಿ ನೋಡುವ ಅದುವೇ
ಕಣ್ಣು ಕಾಣುವ ನೋಟದ
ಬೆರಗಿನರಮನೆಯಾಗಿ

ಕಾರ್ಯ-ಕಾರಣ ಸಂಬಂಧ
ಕರ್ತೃ-ಭೋರ್ಕ್ತ್ರುವೂ ಅದುವೇ
ಎಲ್ಲ ಕಾರ್ಯಗಳ ಕಾರಣವು
ಕಾರಣಕೂ ಕಾರಣವಾಗಿ

ಕಾಲಗಣನೆಯ ಮಾಡ್ವ
ಬುದ್ಧಿಗಾಧಾರ ಅದುವೇ
ನಿಮಿಷ ಘಂಟೆಗಳಾಗಿ
ಯುಗ ಯುಗಾದಿ-ಅಂತ್ಯಗಳಾಗಿ

ಆಡಿಹುದು ಕುಣಿದಿಹುದು
ದಣಿವು ತಿಳಿಯದ ಜ್ಯೋತಿ
ಹುಟ್ಟಿ ಸತ್ತು ನಕ್ಕು ಅತ್ತಂತೆ ನಟಿಸಿ
ತನ್ನಾಟದಲಿ ತಾ ರಮಿಸಿಹುದು ಕಾಣು

दिल में अब

हँसी आती है हमें उन ख़्वाबों पे
जो, कभी हमें दीवाना किया  करते थे 

अंजानेपन का नजानापन ही था वो
जिसे जानने की चाह  न रखते थे

चैन की  नीन्द पाने के सपने थे वो
जो हमें रात भर जगाया करते थे

वक्त ने उतारा है सारे नकाबों को
जिन्हे हम चेहरें माना करते थे

अब दिल में  उस मंजिल की चाह नहीं है
जिस की राह में हम काँटे  चुना करते थे 

ऐ खुदा ए- ज़ालिम…… !
तुम्हारी मेहरबानी तुम्ही को मुबारक हो
जिस की चाह में हम तुम से दुवा किया करते थे

Wednesday, March 5, 2014

ಮಾರ್ಕೆಟಿಂಗ್ ಮಾರ್ಕೆಟಿಂಗ್

(ಕಳೆದ ವರ್ಷದ ಬೇಸಿಗೆಯಲ್ಲಿ ಹೈದರಾಬಾದ್ ಗೆ ಹೋದಾಗ ರಾತ್ರಿಯ ಹೊತ್ತು ಮನೆಯ ತಾರಸಿಯ ಮೇಲೆ ಚಾಪೆ ಹಾಸಿಕೊಂಡು ಮಲಗಿ ಗೆಳೆಯರೆಲ್ಲ  ನರೇಂದ್ರ ಕಾಪರೇ ಅವರ ಅಧ್ಯಕ್ಷತೆಯಲ್ಲಿ ಹರಟೆ ಹೊಡೆಯುತ್ತಿದ್ದೆವು. ಬಟ್ಟೆಗಳನ್ನು ಒದ್ದೆ ಮಾಡಿ ಎದೆಯ ಮೇಲೆ ಹಾಕಿಕೊಂಡು ಮಲಗಿದರೂ ಸೆಕೆ ಕಡಿಮೆ ಆಗ್ತಿರಲಿಲ್ಲ. ನಿದ್ದೆ ಬರ್ತಿರಲಿಲ್ಲ.  ನರೇಂದ್ರ ಕಾಪರೇ ಅವರು ಇಡೀ ಆಂಧ್ರಪ್ರದೇಶವೇ ಗೌರವಿಸುವಂಥ ಸಂಸ್ಕೃತ ವಿದ್ವಾಂಸರಾಗಿದ್ದೂ ಕೂಡ ನಮ್ಮಂಥ ಸಾಮಾನ್ಯ ಹುಡುಗರ ಜೊತೆ ಸೇರಿ ಹುಡುಗರಾಗಿಯೇ ಬೆರೆಯುತ್ತಾರೆ. ಅವರು ಯಾವ ಸಂದರ್ಭದಲ್ಲಿ ಏನು ಮಾತಾಡಿದರೂ ಅದರಲ್ಲಿ ಒಂದು ಕಲಿಕೆ ಇರುತ್ತದೆ. ಅವರು ಎಕಾಂತದಲ್ಲಿರುವಾಗ ಹೇಗೆ ಮಾತಾಡುತ್ತಾರೋ, ತಮ್ಮ ಹೆಂಡತಿ ಮಕ್ಕಳ ಜೊತೆಗೆ ಮಾತಾಡುವಾಗ ಹೇಗೆ ಮಾತಾಡುತ್ತಾರೋ, ಸಭೆಗಳಲ್ಲಿ ಮಾತಾಡುವಾಗಲೂ ಕೂಡ ಅದೇ ಶೈಲಿ, ಭಾಷೆ, ಸರಳತೆ ಅವರ ಮಾತುಗಳಲ್ಲಿ ಇರುತ್ತವೆ. ವೇದಿಕೆ ಏರಿದಕೂಡಲೇ ಅಥವಾ ಮೈಕು ಹಿಡಿದ ಕೂಡಲೇ ಅನೇಕರಲ್ಲಿ ಕಂಡು ಬರುವ ಬದಲಾವಣೆಯನ್ನು ನಾನು ಕಾಪ್ರೆಯವರಲ್ಲಿ ಎಂದೂ ಕಂಡಿಲ್ಲ. (ಅದರ ಅರ್ಥ ಅವರು ವೇದಿಕೆಗಳಲ್ಲಿ ಮಾತಾಡುವಾಗಿನ ಸುಸಂಕೃತತೆ, ಸಭ್ಯತೆ, ಮತ್ತು ಶಿಷ್ಟಾಚಾರಗಳನ್ನು  ತಮ್ಮ ಇಡಿಯ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕೈಯಲ್ಲಿ ಮೈಕು  ಹಿಡಿದಕೂಡಲೇ ಬದಲಾಗುವ ಅಗತ್ಯವಿಲ್ಲ ಅನ್ನುವುದನ್ನು ನಾನು ಗಮನಿಸಿದ್ದೇನೆ. ) ಹೀಗೆಯೇ ಅವತ್ತಿನ ನಮ್ಮ ನಿದ್ದೆಬಾರದ ಮಧ್ಯರಾತ್ರಿ ಕೂಡ ಅವರು ತಮ್ಮ ಸಹಜ ಸರಳ ಹರಟೆಯಲ್ಲೂ ಕೂಡ ಗಹನ ವಿಷಯಗಳನ್ನು ಮಾತಾಡುತ್ತಿದ್ದರು.  ಮಧ್ಯರಾತ್ರಿ ದಾಟುವವರೆಗೂ ಏನೇನೋ ವಿಷಯಗಳನ್ನು ಸುತ್ತಿ ಹಾಕಿ ಬಂದಮೇಲೆ ಕೊನೆಯಲ್ಲಿ ಮಾರ್ಕೆಟಿಂಗ್ ಬಗ್ಗೆ ಮಾತಾಡುವಾಗ ನಾನು ನನ್ನ ಮೊಬೈಲ್ ಫೋನ್ ನಲ್ಲಿ voice recorder ಅನ್ನು On ಮಾಡಿದ್ದೆ. ಅಲ್ಲಿಯ ವರೆಗೂ ನನಗೆ ಹಾಗೆ ಮಾಡುವ ಯೋಚನೇ ಬಾರದೇ ಇದ್ದುದಕ್ಕೆ ನನ್ನನ್ನೇ ಹಳಿದುಕೊಂಡಿದ್ದೆ. ಇವತ್ತು ಬೆಳಿಗ್ಗೆ ನನ್ನ ಮೋಬೈಲ್ ನ ಮೆಮೋರಿಯನ್ನು format ಮಾಡುವ ಮುನ್ನ ಎಲ್ಲ ಆಡಿಯೋ ಕ್ಲಿಪ್ ಗಳನ್ನು ಚೆಕ್ ಮಾಡುತ್ತಿದ್ದಾಗ ಆ ಕ್ಲಿಪ್ ಕೂಡ ಸಿಕ್ತು. ಅದರಲ್ಲಿದ್ದ ತೆಲುಗು ಹರಟೆ-ಮಾತುಕತೆಯನ್ನು ಕನ್ನಡಕ್ಕಿಳಿಸಿದ್ದೇನೆ..ಇಲ್ಲಿದೋ..! )

# ಮಾರ್ಕೆಟಿಂಗ್ ಮಾರ್ಕೆಟಿಂಗ್ #


ಮನುಷ್ಯರಲ್ಲಿ ಒಬ್ಬರನ್ನು ತುಳಿದು ಇನ್ನೊಬ್ಬರು ಮೇಲೆ ಬರಲಿಕ್ಕೆ ಕಾರಣ ಈ ಮಾರ್ಕೆಟಿಂಗ್. ಎಲ್ಲಿ ನೋಡಿದ್ರೂ ಮಾರ್ಕೆಟಿಂಗ್. ಸರ್ಕಾರದವರೂ ಮಾರ್ಕೆಟಿಂಗ್ ಮಾಡ್ತಾರೆ. ನಲವತ್ತು ವರ್ಷಗಳ ಹಿಂದೆ government sector ನಲ್ಲಿ ಮಾರ್ಕೆಟಿಂಗ್ ಇತ್ತಾ.? ಈಗ ಸರ್ಕಾರವೇ ಎಲ್ಲರಿಗಿಂತ ಹೆಚ್ಚು ಅದನ್ನು ಮಾಡ್ತಾ ಇದೆ. ಆದರೆ ಸರ್ಕಾರ ಮಾಡುವ ಮಾರ್ಕೆಟಿಂಗ್ ನ ಸ್ವರೂಪ ಬೇರೆ. ಅದರ ಉದ್ದೇಶ ಬೇರೆ. ವೋಟು ಪಡೆಯಲಿಕ್ಕಾಗಿ ಅಷ್ಟೇ. ಈಗ ಈ ''ಅಮ್ಮ ಹಸ್ತಂ'' (ಆಂಧ್ರದ ಅನ್ನಭಾಗ್ಯ) ಅನ್ನೋ ಸ್ಕೀಮ್ ಬಂದಿದೆ. ಇದೆಲ್ಲಾ ಏನು.? ಮಾರ್ಕೆಟಿಂಗೇ ತಾನೇ..? ಒಂದು ರೂಪಾಯಿಗೆ ಕಿಲೋ ಅಕ್ಕಿ.. ಎಲ್ಲಿಂದ ಕೊಡ್ತಾ ಇದೀರಾ..? ಇದು ಸರ್ಕಾರ ಮಾಡಬೇಕಾಗಿರೋ ಕೆಲಸ ನಾ..?  
ಸರಿ. ನೀವು ಬಡವರಿಗೆ ಉಪಕಾರ ಮಾಡ್ತಾ ಇದ್ದೀರ. ಆದರೆ ಅದರಿಂದಾಗಿ ಎಷ್ಟು ಜನರಿಗೆ ಅಪಕಾರ ಆಗ್ತಾ ಇದೆ..?  ಸಮಾಜದ ಒಂದು ವರ್ಗವನ್ನು ಓಲೈಸಲಿಕ್ಕೆ, ಅವರಿಗೆ ಉಪಕಾರ ಮಾಡಲಿಕ್ಕೆ ಹೋಗಿ ಅದಕ್ಕಿಂತ ಹೆಚ್ಚು ಜನರಿಗೆ ಅಪಕಾರ ಆಗೋದಿಲ್ವಾ..? ಏಲ್ಲಾ ಕಡೆ ಮಾರ್ಕೆಟಿಂಗ್.  ಆಶ್ರಮಗಳಿಗೆ ಹೋಗಿ ನೋಡ್ರಿ.. ಮಾರ್ಕೆಟಿಂಗ್.  ಮಠಗಳಿಗೆ ಹೋದ್ರೆ.. ಮಾರ್ಕೆಟಿಂಗ್. ಯೂನಿವರ್ಸಿಟಿಗಳಲ್ಲಿ , UGC ಯಲ್ಲಿ ನೋಡಿ ಮಾರ್ಕೆಟಿಂಗ್. UGC ನಲ್ಲಿ ಮಾರ್ಕೆಟಿಂಗ್ ಅಗತ್ಯ ಇದೆಯಾ..? ಈ ಮಾರ್ಕೆಟಿಂಗ್ ಇಲ್ಲದ ಯಾವ ಕ್ಷೇತ್ರವೂ ಉಳಿದಿಲ್ಲ. ಗಂಡ ಹೆಂಡತಿಯರ ಸಂಬಂಧದ ನಡುವೆಯೂ ಮಾರ್ಕೆಟಿಂಗ್ ಬಂದುಬಿಟ್ಟಿದೆ. ತಾಯಿ-ಮಕ್ಕಳ ಸಂಬಂಧವೂ ಸಹಜವಾಗಿ ಉಳಿದಿಲ್ಲ. ಪರಿಸ್ಥಿತಿ ಘೋರವಾಗಿದೆ.  

ಸರಿ.. ನಾವೆಲ್ಲಾ  ಭಾರತೀಯರು.. ನಮ್ಮದು ಸನಾತನ ಧರ್ಮ.. ಹಾಗೆ ಹೀಗೆ ಅಂತೆಲ್ಲಾ ಬೊಗಳೇ ಬಿಡ್ತೀವಿ.  ಆದರೆ ನಮ್ಮ  ಈಗಿನ ಜೀವನದಲ್ಲಿ ಭಾರತೀಯ ಸನಾತನ ಧರ್ಮಕ್ಕಿಂತ ಕ್ರೈಸ್ತ ಮತದ ಪ್ರಭಾವ ಹೆಚ್ಚು ಇದೆ. ಹ್ಯಾಗೆ ಅಂದ್ರೆ.. ಈ ಮಾರ್ಕೆಟಿಂಗ್ ಅನ್ನೋದು ಕ್ರೈಸ್ತಮತದ ದೇಶಗಳಿಂದ ಬಂದದ್ದು. ಅವರ ದೇಶಗಳಲ್ಲಿ ಹೆಚ್ಚು ದುಡ್ಡು ಸಂಗ್ರಹಿಸಿರುವ ವ್ಯಕ್ತಿಯನ್ನು ಹೆಚ್ಚು ''ಯಶಸ್ವಿ'' ಅಥವಾ ಶ್ರೀಮಂತ ಅಂತ ಪರಿಗಣಿಸ್ತಾರೆ. ನಮ್ಮಲ್ಲಿ ಹಾಗಿರಲಿಲ್ಲ. ''ಶ್ರೀಮಂತ'' ಅನ್ನುವ ಶಬ್ದಕ್ಕೆ ನಮ್ಮ ದೇಶದಲ್ಲಿದ್ದ ಅರ್ಥವೇ ಬೇರೆ ಆಗಿತ್ತು.  ಈಗ ನಮ್ಮ ಶಬ್ದಗಳ ಅರ್ಥಗಳೂ ಕೂಡ ಕ್ರೈಸ್ತದೇಶದವರ ಅರ್ಥಗಳಿಗೆ ಸಮಾನವಾಗಿಬಿಟ್ಟಿವೆ. 

ನಮ್ಮಲ್ಲಿ ಈ ಮಾರ್ಕೆಟಿಂಗ್ ಮತ್ತು ಅದರ ಮೂಲಕ ಹೇಗಾದರೂ ಮಾಡಿ ''ಲಾಭ'' ಮಾಡಬೇಕು ಅನ್ನೋ ಪ್ರವೃತ್ತಿ ಇರಲಿಲ್ಲ. ಯಾಕೆಂದರೆ  ನಮ್ಮದೇಶದಲ್ಲಿ ''ನೀನು ಏನೇ ಮಾಡಿದರೂ, ಅದರ ಫಲವನ್ನು ನೀನೇ ಅನುಭವಿಸಬೇಕಾಗ್ತದೆ. ಅದನ್ನು ಇವತ್ತು ಅನುಭವಿಸು, ಅಥವಾ ವರ್ಷಗಳ ನಂತರ ಅನುಭವಿಸು, ನೂರುವರ್ಷಗಳ ನಂತರ ಅಥವಾ ನೂರು ಜನ್ಮಗಳ ನಂತರವಾದರೂ ನೀನು ಮಾಡಿದ ಕರ್ಮಗಳ ಫಲವನ್ನು ನೀನೇ ಅನುಭವಿಸಬೇಕು.'' ಅನ್ನುವ ಕರ್ಮಸಿದ್ಧಾಂತ ಭಾರತದಲ್ಲಿ ಅನಕ್ಷರಸ್ಥರಿಗೂ ಗೊತ್ತಿತ್ತು.  ''ನಾsಭುಕ್ತಂ ಕ್ಷೀಯತೆ ಕರ್ಮ ಕಲ್ಪಕೋಟಿ ಶತೈರಪಿ''  ಅನ್ನುವ ಸತ್ಯದ ಅರಿವಿನಿಂದಾಗಿ ಭಾರತೀಯರು ಏನು ಮಾಡಬೇಕಾದರೂ ಅದರಿಂದ ಉಂಟಾಗುವ ಫಲದ ಬಗ್ಗೆ ಭಯ ಹೊಂದಿದ್ದರಿಂದ ಭಾರತೀಯರಲ್ಲಿ ನೈತಿಕತೆ ಸಹಜವಾಗಿಯೇ ಮೈಗೂಡಿ ಹೋಗಿರುತ್ತಿತ್ತು. ಆದ್ದರಿಂದ ಸಮಾಜಕ್ಕೆ ಕಾನೂನಿನ ಅಗತ್ಯವೂ ಅತೀ ಕಡಿಮೆಯಾಗಿತ್ತು. ಆದರೆ ಈ ಕ್ರೈಸ್ತ ದೇಶಗಳಲ್ಲಿ ಹಾಗಿಲ್ಲ. ಪುನರ್ಜನ್ಮ ಅನ್ನೋದೇ ಇಲ್ಲ. ಈಗಿರುವ ಈ ಜೀವನದಲ್ಲಿ ಸುಖ ಪಡೆಯೋದಷ್ಟೇ  ಅವರ ಬದುಕಿನ ಮುಖ್ಯ ಗುರಿ. ಎಷ್ಟು ಅಧರ್ಮ ಮಾಡಿದರೂ, ಅನೈತಿಕ ಜೀವನ ನಡೆಸಿದ್ರೂ.. ಭಾನುವಾರ ಚರ್ಚಿಗೆ ಹೋಗಿ Oh God ... ಅಂತ ಕ್ಷಮೆ ಕೇಳಿಬಿಟ್ರೆ ದೇವರು ಎಲ್ಲಾ ಕ್ಷಮಿಸಿಬಿಡ್ತಾನೆ. all is well. 

ಹೀಗೆ ಅವರಲ್ಲಿ ಮತ್ತೆ ಹುಟ್ಟು ಅನ್ನೋದೇ ಇಲ್ಲ. ಕರ್ಮಫಲವೇ ಇಲ್ಲ... ಆದ್ದರಿಂದ ಅವರಿಗೆ  ಜೀವನದಲ್ಲಿ ''ಉನ್ನತ ಸ್ತರ'' ಅನ್ನೋ ಪರಿಕಲ್ಪನೆಯೂ ಇಲ್ಲ.   ನಮ್ಮಲ್ಲಿ ಜೀವನದ ''ಉನ್ನತ ಸ್ತರ ಅಥವಾ ಉನ್ನತ ಸ್ಥಿತಿ '' ಅಂತ ಒಂದಿದೆ.  ಸಾಮಾನ್ಯ ಸ್ತರ, ಮಧ್ಯಮ ಸ್ತರ, ಉನ್ನತ ಸ್ತರ ಅನ್ನುವ ಈ ಮೂರು ವಿಭಜನೆಗಳು ಭಾರತೀಯ ಜೀವನದಲ್ಲಿ ಇವೆ. ಈ ಉನ್ನತ ಸ್ಥಿತಿ ಅಂದ್ರೆ ಏನು..?  

ನಾವು ಅವಲಿಯಾ.. ಅಂತೀವಿ, ಅವಧೂತರು ಅಂತೀವಿ.. ಅಥವಾ ಪರಮಹಂಸರು ಅಂತ ಗುರ್ತಿಸ್ತೀವಿ. ಅದು ಜೀವನದ ಉನ್ನತ ಸ್ತರ. ಅಂದ್ರೆ.. ಸುಖ-ದುಃಖಗಳು ಬಂದರೂ, ಹರ್ಷ-ಶೋಕಗಳು ಬಂದರೂ, ರಾಗ-ದ್ವೇಷಗಳಿದ್ದರೂ ಛಳಿ-ಸೆಕೆಗಳಿದ್ದರೂ ಎಲ್ಲ ಸಮಯದಲ್ಲೂ ಒಂದೇ ರೀತಿ ಇರುವ, ಎಲ್ಲರನ್ನೂ, ಎಲ್ಲವನ್ನೂ  ಸಮಾನವಾಗಿ ಕಾಣುವ ಜನ ಅವರು. ಆದರೆ ಜೀವನದಲ್ಲಿಯ ಈ ''ಉನ್ನತ ಸ್ಥಿತಿ'' ಗೆ ಆಧಾರ ಶರೀರ ಅಲ್ಲ. ಹುಟ್ಟಿನ ವರ್ಣ ಅಥವಾ ಜಾತಿ ಅಲ್ಲ. ಕುಲ ಅಲ್ಲ. ಮತ ಅಲ್ಲ. ದೇಶ ಅಲ್ಲ.  ಭಾಷೆ ಅಲ್ಲ. ವಿದ್ಯೆ ಅಲ್ಲ. ಇದ್ಯಾವುದೂ ಅಲ್ಲ. ಉನ್ನತಸ್ಥಿತಿಯ ಜಿವನಕ್ಕೆ ಆಧಾರ ಏನಂದ್ರೆ.. ಆತ್ಮಬಲ, ಮತ್ತು ಆತ್ಮಜ್ಞಾನ.

ಅಂದ್ರೆ ''ನಾನು'' ಅಂದರೆ ಯಾರು ಅಥವಾ ಏನು ಅನ್ನುವುದರ ಬಗ್ಗೆ ಒಂದು ಸ್ಪಷ್ಟವಾದ, ಅನುಭವಸಿದ್ಧವಾದ ತಿಳುವಳಿಕೆ ಅಷ್ಟೇ. ಅದರ ಸಹಜ ಸ್ಥಿತಿಯಲ್ಲಿರಲು ಮಾಡುವ ಪ್ರಯತ್ನ, ಮತ್ತು ಬಾಹ್ಯ ವಿಷಯಗಳನ್ನು ಆಧರಿಸದೇ ತನ್ನಲ್ಲಿ ತಾನು  ಆನಂದ ಪಡೆಯೋದು. ಇವಿಷ್ಟೇ ಜೀವನದ ಉನ್ನತ ಸ್ಥತಿಗೆ  ಆಧಾರಗಳು. ಈಗಿನ ಕಾಲದಲ್ಲಿ ಪುರಾತನ  ನಾಲ್ಕು ವರ್ಣಗಳ ವ್ಯವಸ್ಥೆಯಂತೂ ಸಂಪೂರ್ಣವಾಗಿ ನಾಶ ಆಗಿದೆ. ಜೊತೆಗೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಅನ್ನೋ ಈ ನಾಲ್ಕೂ ಆಶ್ರಮಗಳೂ ಸಂಪೂರ್ಣವಾಗಿ ಅಳಿದು ಹೋಗಿವೆ.  ಆದರೆ ಈ ವರ್ಣ ಮತ್ತು ಆಶ್ರಮ ವ್ಯವಸ್ಥೆಯ ಪಳಿಯುಳಿಕೆಗಳು, ಮತ್ತು ಅದರ ಬಗೆಗಿನ ಹುಸಿ ಅಭಿಮಾನಗಳು ಮಾತ್ರ ಜನರಲ್ಲಿ ಉಳಿದುಕೊಂಡಿವೆ. ಆ ಹುಸಿ ಅಭಿಮಾನವೇ ದುರಭಿಮಾನ ಆದಾಗ ಈ ಜಾತಿಯ ಸಮಸ್ಯೆ ಹುಟ್ಟಿಕೊಂಡಿದೆ.

ನಮ್ಮಲ್ಲಿ ಉಪನಿಷತ್ತುಗಳಲ್ಲಿ ಈ ಆನಂದದ ಸ್ತರಗಳನ್ನು ಮತ್ತು ಗುಣಮಟ್ಟಗಳನ್ನು ಹೇಳಿದ್ದಾರೆ. ತೈತ್ತಿರೀಯ ಉಪನಿಷತ್ತಿನಲ್ಲಿ ಆನಂದದ ವಿವರಣೆ.. ಇದೆಯಲ್ಲ..  ?   ಇಡೀ ಜಗತ್ತಿನ ವಿತ್ತವನ್ನೆಲ್ಲ ಒಬ್ಬ ವ್ಯಕ್ತಿ ಹೊಂದಿದರೆ ಎಷ್ಟು ಆನಂದ ಉಂಟಾಗ್ತದೋ.. ಅದು ಮನುಷ್ಯಾನಂದ. ಅದರ ನೂರು ಪಟ್ಟು.. ವಿದ್ಯಾನಂದ, ಆಮೇಲೆ ವಿಷಯಾನಂದ, ವಾಸನಾನಂದ, ಯೋಗಾನಂದ, ಸಹಜಾನಂದ,  ಪಿತೃಗಳ ಆನಂದ.. ಗಂಧರ್ವಾನಂದ.. ಬೃಹಸ್ಪತಿಯ  ಆನಂದ.. ಪ್ರಜಾಪತಿಯ ಆನಂದ..ಇಂದ್ರಾನಂದ, ಬ್ರಹ್ಮಾನಂದ..ಅಥವಾ ಪೂರ್ಣಾನಂದ ಹೀಗೆಲ್ಲಾ ಇದೆಯಲ್ಲಾ.? ಇವೆಲ್ಲ ಕೂಡ ವಿಷಯ-ವಸ್ತುಗಳನ್ನು ಆಧರಿಸಿದ ಆನಂದಗಳಲ್ಲ.

ಆದರೆ ಈಗಿನ ಕಾಲದಲ್ಲಿ ಆನಂದವನ್ನು ಅಳೆಯುವ ಸಾಧನಗಳೇನು..? ನಿಮ್ಮ ಹತ್ತಿರ ಎಷ್ಟು ಸಾಮಗ್ರಿ ಇದೆ. ಎಷ್ಟು ಬ್ಯಾಂಕ್ ಬ್ಯಾಲೆನ್ಸ್ ಇದೆ. ಎಷ್ಟು ಪ್ರಖ್ಯಾತಿ ಸಮಾಜದಲ್ಲಿ ಇದೆ. ನೀವು ಎಷ್ಟು ಸುಂದರವಾಗಿದೀರಿ.. ಎಂಥಾ ಬಟ್ಟೆ ಹಾಕ್ತೀರಿ ..  ಇಂಥಾ ಸಂಗತಿಗಳ ಆದಾರದ ಮೇಲೆ ನಾವು ನಮ್ಮ ಆನಂದವನ್ನು ಲೆಕ್ಕ ಹಾಕ್ತಾ ಇದ್ದೀವಿ. ಆದರೆ ಅದು ಸರಿಯಾದ ಅಳತೆಗೋಲಾ..?

ನಮ್ಮ ಗುರುಗಳು ಹೇಳ್ತಾ ಇದ್ರು.. ಏನಂದ್ರೆ,  ಬ್ರಾಹ್ಮಣರಿಗೆ ವಿದ್ಯಾನಂದ ಇರಬೇಕು.  ಬ್ರಾಹ್ಮಣನಾದವನಿಗೆ ಆನಂದ ಪಡಿಯಲಿಕ್ಕಾಗಿ ಹೆಸರು, ಪ್ರಸಿದ್ಧಿ, ದುಡ್ಡು, ಮತ್ತೊಂದು.. ಮಗದೊಂದು.. ಇವೆಲ್ಲವುಗಳೆಲ್ಲದರ ಅಗತ್ಯವಿರಬಾರದು. ಬಂದರೆ ಒಕೆ. ಆದರೆ ಬ್ರಾಹ್ಮಣನಾದವನು ಅವುಗಳನ್ನು ಪಡೆಯಲಿಕ್ಕೆ ಪ್ರಯತ್ನ ಮಾಡಬಾದು. ಅವನಲ್ಲಿ ವಿದ್ಯೆ ಇರಬೇಕು. ಆ ವಿದ್ಯೆಯ ಸ್ವಾಧ್ಯಾಯದಲ್ಲಿಯೇ ಅವನು ಆನಂದವನ್ನು ಹುಟ್ಟಿಸಿಕೊಳ್ಳಬೇಕು. ಸ್ವಾಧ್ಯಾಯದಲ್ಲಿಯೇ ಆನಂದ ಹುಟ್ಟಿಸಿಕೊಳ್ಳುವುದು ಯಾವಾಗ ಸಾಧ್ಯ ಆಗ್ತದೆ..?  ನೀವೇ ಯೋಚನೇ ಮಾಡಿ..
ಅದೇ ರೀತಿ ಉಳಿದ ವರ್ಣದವರೂ ಅವರವರ ಕರ್ಮಗಳು ಏನೇ ಆಗಿದ್ದರೂ ಆನಂದ ಅನ್ನೋದು ಅವರವರ ಸ್ವಭಾವದಲ್ಲಿಯೇ ಇರಬೇಕು. ಸ್ವಭಾವ ಅಂದರೆ ಸ್ವಚಾರಿತ್ರ್ಯ. ...  ಮತ್ತು ಎಲ್ಲರೂ ತಮ್ಮ ಆನಂದದ ಸ್ತರಗಳನ್ನು ಹೆಚ್ಚಿಸಿಕೊಳ್ಳಲಿಕ್ಕೆ ಆಂತರಿಕವಾಗಿ ಪ್ರಯತ್ನ ಮಾಡಬೇಕು. ಆನಂದದ ಅಂತಿಮ ಸ್ತರ ನಮ್ಮ ಟಾರ್ಗೆಟ್ ಆಯ್ತು ಅಂತಾದರೆ ಆಗ  ಮಾರ್ಕೆಟಿಂಗ್ ಬೇಕಾಗುವುದಿಲ್ಲ.
ಅದನ್ನು ಮಾಡಿದ್ರೆ ಸಂತೋಷ ಸಿಗುತ್ತೆ, ಇದನ್ನು ಮಾಡಿದ್ರೆ ಸಂತೋಷ ಸಿಗುತ್ತೆ... ಅದನ್ನು ಖರೀದಿಸಿದ್ರೆ ಆನಂದ ಆಗುತ್ತೆ.. ಆ ಊರಿಗೆ ಹೋದ್ರೆ ಆನಂದ ಸಿಗುತ್ತೆ.. ಇಂಥಾ ಹೊಟೆಲ್ ನಲ್ಲಿ ಇದ್ರೆ ಸಂತೋಷ ಸಿಗುತ್ತೆ..  ಮುಂತಾದ ಭ್ರಮೆಗಳು ಹೋಗ್ತವೆ. ಆನಂದದ ಉತ್ಪತ್ತಿಯನ್ನು ಕುಳಿತಲ್ಲಿಯೇ ಮಾಡಿಕೊಳ್ಳೋದೇ ಆದ್ರೆ, ಅದರ ಹುಡುಕಾಟಕ್ಕಾಗಿ ಈ ಮಾರ್ಕೆಟಿಂಗ್ ಜಾಲದಲ್ಲಿ ಬೀಳೋದು ತಪ್ಪುತ್ತೆ.  ಜೀವನದಲ್ಲಿ ಮತ್ತು ಸಮಾಜದಲ್ಲಿ ಭ್ರಷ್ಟತೆ ತಾನಾಗಿಯೇ ಕಡಿಮೆಯಾಗುತ್ತೆ. ಈ ಆನಂದದ ಹುಡುಕಾಟದಲ್ಲಿಯೇ ಮನುಷ್ಯ ಹೆಚ್ಚಿನ ವಸ್ತುಗಳು-ದುಡ್ಡು ಮುಂತಾದವುಗಳನ್ನು ಶೇಖರಣೆ ಮಾಡಲಿಕ್ಕೆ ಪ್ರಾರಂಭ ಮಾಡ್ತಾನೆ. ಆ ಶೇಖರಣೆ ಮಾಡುವ ಆಸೆಯೇ ಭ್ರಷ್ಟಾಚಾರದ ಮೂಲ ಅಲ್ವಾ..?  ಹೆಚ್ಚು ಶೇಖರಣೆ ಮಾಡಿದರೆ ಹೆಚ್ಚು ಆನಂದ ಸಿಗ್ತದೆ ಅನ್ನುವ ಭ್ರಮೆ ಇದೆ.. ಆ ಭ್ರಮೆನೇ ಚಿಕ್ಕ ಚಿಕ್ಕ ಭ್ರಷ್ಟಾಚಾರಗಳಿಂದ ಹಿಡಿದು ರಾಷ್ಟ್ರಮಟ್ಟದ ಭ್ರಷ್ಟಾಚಾರಗಳಿಗೆ ಕಾರಣ ಆಗೋದು.
ಎರಡನೇಯದಾಗಿ ಏನಪ್ಪಾ ಅಂದ್ರೆ...
ನಾನು ಏನು ಮಾಡಿದರೂ.. ಈ ದೇಹ ಹೊರಟುಹೋದರೂ  ಮತ್ತೆ ನಾನು ಹುಟ್ಟಬೇಕಾದ್ದೇ.. ಮತ್ತು ಮಾಡಿದ ಕರ್ಮಗಳಿಗೆ ತಕ್ಕ ಫಲ ಅನುಭವಿಸಬೇಕಾದದ್ದೇ .. ಆದ್ದರಿಂದ ನಾನು ಈಗ ಅಧರ್ಮ ಮಾಡೋದಿಲ್ಲ..  ಇದು ತಪ್ಪು.  ಅದರಲ್ಲಿ ಎಷ್ಟೇ ಲಾಭ ಕಾಣಿಸಿದರೂ ನಾನು ಮಾಡೋದಿಲ್ಲ. ಯಾಕಂದರೆ ಅದು ತಪ್ಪು.  ಅದು ಇವತ್ತು ತಪ್ಪು, ನಾಳೆ ತಪ್ಪು, ನಾಡಿದ್ದ ತಪ್ಪು, ಯಾವಾಗಲೂ ತಪ್ಪು, ನನಗೆ ತಪ್ಪು, ಅವನಿಗೆ ತಪ್ಪು, ಇವನಿಗೆ ತಪ್ಪು.. ಎಲ್ಲರಿಗೂ ಅದು ತಪ್ಪು..  ಆದ್ದರಿಂದ ಅದನ್ನು ನಾನು ಮಾಡೋದಿಲ್ಲ. ಬೇರೆಯವರೂ ಮಾಡದಂತೆ ಸಾಧ್ಯವಾದಷ್ಟೂ ತಡೀತೀನಿ .. ಅನ್ನೋ ಎಚ್ಚರಿಕೆ ವ್ಯಕ್ತಿತ್ವದಲ್ಲಿಯೇ/ಚಾರಿತ್ರ್ಯದಲ್ಲಿಯೇ  ಬಂದಾಗ ಸಹಜವಾಗಿಯೇ ಅವನು ಧರ್ಮದ ದಾರಿಯಲ್ಲಿ ನಡೀತಾನೆ. ಆದರೆ ಅಂಥಾ ಎಚ್ಚರಿಕೆ ಈಗಿನ ನಮ್ಮ ಜೀವನದಲ್ಲಿ ನಾಶವಾಗಿ ಹೋಗಿದೆ.  ಕಾನೂನಿನ ಚೌಕಟ್ಟಿನಲ್ಲಿಯೇ ಇದ್ದುಕೊಂಡು ಎಷ್ಟು ಬೇಕಾದರೂ ಅಧರ್ಮಗಳನ್ನು ನಾವು ಪ್ರತಿ ನಿತ್ಯ ಮಾಡ್ತಾನೆ ಇದೀವಿ. ಕಾನೂನಿನ ಚೌಕಟ್ಟು ದಾಟಿದಾಗ ಮಾತ್ರ.. ಮತ್ತು ಆ ತಪ್ಪು ಸಾಬೀತಾದಾಗ ಮಾತ್ರ ಅದಕ್ಕೆ ಶಿಕ್ಷೆ ಆಗ್ತದೆ ಅನ್ನೋದನ್ನು ಬಿಟ್ರೆ .. ಚಾರಿತ್ರ್ಯದಲ್ಲಿಯೇ ಇರಬೇಕಾದ ಧರ್ಮದ ಎಚ್ಚರಿಕೆ ಇಲ್ಲ.

ಚಾರಿತ್ರ್ಯದಲ್ಲಿಯೇ, ಸ್ವಧರ್ಮದಲ್ಲಿಯೇ ಆನಂದ ಸಿಗದೇ ಹೋದಾಗ  ಈ ಮಾರ್ಕೆಟಿಂಗ್ ನವರು ತೋರಿಸುವ ಸುಂದರ ಜೀವನದ ಕನಸುಗಳು ನಮ್ಮ ಚಾರಿತ್ರ್ಯ ಹರಣ ಮಾಡಿ ನಮ್ಮನ್ನು ಹಾದಿ ತಪ್ಪಿಸ್ತವೆ. ಈ ಮಾರ್ಕೆಟಿಂಗ್ ಅನ್ನೋದು ಒಂದು ಮಹಾ ಮಾರಿ...   ಸುಳ್ಳು ಸುಖದ  ಆಮಿಷ ತೋರಿಸಿ ಲಾಭ ಮಾಡಿಕೊಳ್ಳೋ ಈ ಮಾರ್ಕೆಟಿಂಗ್ ಎಲ್ಲಿಯವರೆಗೂ ನಿಲ್ಲೋದಿಲ್ಲವೂ ಅಲ್ಲಿಯ ವರೆಗೆ ಮನುಷ್ಯ ಸುಖಕ್ಕಾಗಿ ಹೊರಗಿನ ವಿಷಯ-ವಸ್ತುಗಳ ಹಿಂದೆ ಓಡ್ತಾನೇ ಇರ್ತಾನೆ. ತನ್ನ ಧರ್ಮವನ್ನು ಬಿಡ್ತಾನೇ ಇರ್ತಾನೆ.
ಇದೆಲ್ಲಾ ಇರಲಿ.. ಜೀವನದ ಆನಂದ ಅಂದರೆ ಏನು ಅಂತ ತಿಳಿಸಿಕೊಡ್ತೀವಿ ಅಂತ ಪೊಳ್ಳು ಭರವಸೆ ನೀಡಿ ಶ್ರೀಮಂತ ಜನಾಂಗವನ್ನು ಸುಲಿಯುವ ಆಧ್ಯಾತ್ಮಿಕ ಸಂಸ್ಥೆಗಳೂ ಕೂಡ ಮಾರ್ಕೆಟಿಂಗ್ ಅನ್ನು ಜೋರಾಗಿ ಮಾಡ್ತಾರೆ. ಅದರ ಪ್ರಭಾವಕ್ಕೊಳಗಾಗಿ ಅವರ ಬಳಿ ಹೋಗುವ ಜನ ಅದನ್ನೇ ಆನಂದ ಅಂದ್ಕೋತಾರೆ.  ಈಗೀಗ ಭಕ್ತಿಯಲ್ಲೂ ಮಾರ್ಕೆಟಿಂಗ್ ಬಂದಿದೆ. ದೋರ್ಭಲ ಪ್ರಭಾಕರ ಶರ್ಮಾ ಅವರಂತೂ ತುಂಬಾ ದುಃಖಪಟ್ಕೊಂಡು ಈ ವಿಷಯದ ಬಗ್ಗೆನೇ ಯಾವಾಗಲೂ ಮಾತಾಡ್ತಿರ್ತಾರೆ. ಪ್ರತೀ ವಿಷಯದಲ್ಲೂ ಮಾರ್ಕಟಿಂಗ್ ಅಗತ್ಯ ಇದೆಯಾ..?  ಆರ್ಥಿಕ ಲಾಭ ಮಾಡೋದೇ ಜೀವನದ ಪರಮೋದ್ದೇಶವಾ..? ಇದೇ ದಾರಿಯಲ್ಲಿ ಹೋದ್ರೆ ಎಲ್ಲಿಗೆ ಹೋಗಿ ಮುಟ್ತೀವಿ ನಾವು ..?
ಕೆಲವೊಂದು ವಿಷಯಗಳಲ್ಲಿ ಭಾರತ ಚೆನ್ನಾಗೇ ಡೆವಲಪ್ ಆಗ್ತಾ ಇದೆ. ನಿಜ. ಆದರೆ ಫೌಂಢೇಷನ್ ನಲ್ಲಿಯೇ ಸ್ಟ್ಟಾಂಗ್ ನೆಸ್ ಕಡಿಮೆ ಆಗಿದೆ.
(ನಮ್ಮ ಹರಟೆಯ ಮಧ್ಯದಲ್ಲಿ ಗೆಳೆಯ ಪ್ರಸನ್ನ ಎದ್ದು ಹೋಗಿ ಒಂದಿಷ್ಟು ತಂಪಾದ ಹಣ್ಣು- ಐಸ್ ಕ್ರೀಮ್ ಗಳನ್ನು ತಂದು ಎಲ್ಲರಿಗೂ ಹಂಚಿದ.)
ನೋಡಿ ಈ ಹಣ್ಣುಗಳು ನೋಡಲಿಕ್ಕೆ ಎಷ್ಟು ಚೆನ್ನಾಗಿವೆ. ರುಚಿಯಾಗಿಯೂ ಇವೆ. ಆದರೆ ಇವು ನಿಜವಾದ ಹಣ್ಣಗಳಲ್ಲ.  ನಾವು ಚಿಕ್ಕವರಿದ್ದಾಗ ಇಷ್ಟೆಲ್ಲ ಹಣ್ಣುಗಳನ್ನು ನೋಡಿಯೇ ಇರಲಿಲ್ಲ ಅಲ್ವಾ..? ಬಾಳೇ ಹಣ್ಣು ಒಂದನ್ನು ಬಿಟ್ಟು ಉಳಿದೆಲ್ಲ ಹಣ್ಣುಗಳು ಸೀಜನ್ ಗಳಲ್ಲಿ ಮಾತ್ರವೇ ಸಿಗ್ತಾ ಇದ್ವು. ತರಕಾರಿಗಳೂ ಅಷ್ಟೇ. ನಮ್ಮ ನಮ್ಮ ಊರುಗಳಲ್ಲಿ ಯಾವ ತರಕಾರಿ ಬೆಳೆಯುತ್ತವೋ ಅವುಗಳನ್ನು ಮಾತ್ರ ತಿಂತಾ ಇದ್ವಿ. ಕೆಲವೊಂದು ಸೀಜನ್ ಗಳಲ್ಲಿ ತರಕಾರಿಗಳೇ ಇರ್ತಿರಲಿಲ್ಲ. ಹಾಗೇಯೇ ಜನ ಊಟ ಮಾಡ್ತಾ ಇದ್ರು. ಆದರೆ ಈಗ ಈ ಹೈದರಾಬಾದ್ ನಂತಹ ಊರುಗಳಲ್ಲಿ ವಿದೇಶಗಳಲ್ಲಿ ಬೆಳೆಯುವ ಹಣ್ಣು-ತರಕಾರಿಗಳೂ ಎಲ್ಲಾ ಸೀಜನ್ ಗಳಲ್ಲಿ ಸಿಗ್ತವೆ. ಇಷ್ಟೆಲ್ಲಾ ತರಕಾರಿ.. ಹಣ್ಣುಗಳೂ ಮಾರ್ಕೆಟ್ ನಲ್ಲಿ ಲಭ್ಯವಿದ್ರೂ.. ಅವುಗಳಲ್ಲಿ ಸಹಜವಾಗಿ ಇರಬೇಕಾದ ಸತ್ವವೇ ಇಲ್ಲ. ಅವುಗಳೆಲ್ಲಾ ಬರೀ ನೋಡಲಿಕ್ಕೆ ತರಕಾರಿಗಳು.. ಅಷ್ಟೇ ಅಲ್ವಾ..? ಮೂಲ ರುಚಿಯೂ ಇಲ್ಲ.. ಸತ್ವವೂ ಇಲ್ಲ.
ಈ ಸೀಡ್ ಲೆಸ್ ದ್ರಾಕ್ಷಿ ನೂಡು ಇದನ್ನ. ಪ್ರಕೃತಿ ಸಹಜವಾದ ದ್ರಾಕ್ಷಿಗೆ ಇದ್ದಂತೆ ಬೀಜಗಳಿಲ್ಲ.. ಬಣ್ಣವಿಲ್ಲ. ರುಚಿಯಿಲ್ಲ.. ಸತ್ವವಿಲ್ಲ. ಆದರೂ ಸಹಜ ದ್ರಾಕ್ಷಿಗಿಂತ ಆಕರ್ಷಕ.. ಮತ್ತು ಕ್ವಾಂಟಿಟಿಯೂ ಹೆಚ್ಚು ಮತ್ತು ಎಲ್ಲಾ ಸೀಜನ್ ಗಳಲ್ಲಿ ಸಿಗುತ್ತೆ. ನಮ್ಮ ಜೀವನವೂ ಹೀಗೇ ಆಗಿದೆ. ಮೇಲ್ನೋಟಕ್ಕೆ ಎಲ್ಲಾ ಸುಸಜ್ಜಿತ, ಆಕರ್ಷಕ..ಹಾಗೂ ಕೃತಕವಾಗಿ ತನ್ನ ಮೂಲ ಸತ್ವವನ್ನೇ ಬಿಟ್ಟು ಹೋಗ್ತಾ ಇದೆ.

(ಅಷ್ಟರಲ್ಲೇ ನನ್ನ ಫೋನಿನ ಬ್ಯಾಟರೀ ಡೆಡ್ ಆಗಿ ರೆಕಾರ್ಡಿಂಗ್ ನಿಂತಿತ್ತು. ಈ ಮೇಲಿನ ಮಾತುಕತೆಯನ್ನು ಸುಮ್ಮನೇ ನಾನು ನನ್ನ ವೈಯಕ್ತಿಕ ದಾಖಲೆಗಾಗಿ ವಾಲ್ ನಲ್ಲಿ ಹಾಕಿಕೊಳ್ಳುತ್ತಿದ್ದೇನೆ. ಕಾಪರೇ ಅವರು ಅನೇಕ ವಿಷಯಗಳನ್ನು ಕ್ಲುಪ್ತವಾಗಿ ಸೂಚ್ಯವಾಗಿ ಹೇಳಿ ಮುಂದೆ ಮತ್ತೊಂದು ವಿಷಯಕ್ಕೆ ಹೋಗಿ ಮಾತಾಡಿದ್ದಾರೆ. ಹೀಗಾಗಿ ಎಲ್ಲವೂ ಎಲ್ಲರಿಗೂ ಅರ್ಥವಾಗುವುದಿಲ್ಲ, ಮತ್ತು ಅನೇಕರಿಗೆ ಇಷ್ಟವೂ ಆಗುವುದಿಲ್ಲ ಅನ್ನುವ ಅರಿವು ನನಗಿದೆ. ಅವರು ಕ್ಲುಪ್ತವಾಗಿ ಹೇಳಿ ಬಿಟ್ಟು ಬಿಟ್ಟ ಅನೇಕ ಸಂಗತಿಗಳ ಪೂರ್ವಾಪರಗಳನ್ನು ಸಮಗ್ರವಾಗಿ ವಿವವರಿಸಿ ಬರೆಯಹೊರಟರೆ ಅದು ಒಂದು ಪುಸ್ತಕವೇ ಆಗುತ್ತದೆ. ಇನ್ನು ಇವು ಅವರ ವೈಯಕ್ತಿಕ ಮಾತುಗಳಾದ್ದರಿಂದ ಅವರ ಈ ಮಾತುಗಳಗೆ ಎದುರಾಗುವ ಆಕ್ಷೇಪಗಳಿಗೆ, ಸಂಶಯಗಳಿಗೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ನನ್ನ ಸ್ನೇಹಿತರಲ್ಲಿ ಕೆಲವರಿಗೆ ಈ ಮೇಲಿನ ಸಾಲುಗಳಲ್ಲಿ ಕೆಲ ಉಪಯುಕ್ತ ಹೊಳಹುಗಳು ದಕ್ಕುವ ಸಾಧ್ಯತೆ ಇರುವುದರಿಂದ ಇದನ್ನು ಹೀಗೆ ಬಹಿರಂಗವಾಗಿ ಹಾಕುತ್ತಿದ್ದೇನೆ # - ದತ್ತು )

Tuesday, February 25, 2014

ಅವನೇ ನೋಡು

ಕಾಮಧೇನು ಕದಿಯಹೊಗಿ 
ಶಾಪ ಹೊತ್ತ ವಸುವು ಅವನು 
ದೇವವ್ರತನಾಗಿ ಹುಟ್ಟಿ 
ದಿವ್ಯ ವ್ರತವ ನಡೆಸಿದವನು 

ತನ್ನದೆಂಬ ಕನಸ ಬಿಟ್ಟು 
ಕರ್ತವ್ಯದ ಹೊರೆಯ ಹೊತ್ತು 
ರಾಜ್ಯ ಕಾಯ್ದ ಧೀರನವನು 
ಧರ್ಮಬದ್ಧ ಜೀವ ಅವನು 

ತಂದೆಗಾಗಿ ಹೆಣ್ಣು ತರಲು 
ತನಗೆ ಹೆಣ್ಣೇ ಬೇಡವೆಂದು 
ಭೀಷಣದ  ಭಾಷೆಯಿತ್ತು 
ಮಾತಿನಂತೆ ನಡೆದನವನು 

ಗಂಗೆಯಂಥ  ತಾಯಿ ಪಡೆದು 
ವಸಿಷ್ಠನಂಥ ಗುರುವ ಹೊಂದಿ
ವಾಸುದೇವನ ನಾಮಗಳನು 
ಲೋಕಕೆಲ್ಲ ಸಾರಿದವನು 

ಅವನೇ ನೋಡು..  ಭೀಷ್ಮನವನು 
ಕುರುಕುಲದ ತೆಜನವನು  
ಪರಶುರಾಮನ ಗೆಲಿದು ನಿಂತು 
ಸ್ವೆಚ್ಛೆಯಿಂದ ಮಡಿದನವನು 

Monday, February 10, 2014

ಗೀತೆಯಲ್ಲಿ ಯೋಗ (ಗೀತಾಭ್ಯಾಸ 2)

''ಯೋಗಶ್ಚಿತ್ತವೃತ್ತಿರ್ನಿರೋಧಃ'' ಎಂಬ ಈ ಯೋಗಸೂತ್ರದಲ್ಲಿ ಪತಂಜಲಿಯು (ಸಾತ್ವಿಕ, ರಾಜಸಿಕ, ತಾಮಸಿಕ) ಮೂರು ಗುಣಗಳ ಪ್ರಭಾವದಿಂದ ಕೆಲಸ ಮಾಡುವ ''ಚಿತ್ತ''ದ ಸಹಜಚಂಚಲ ವೃತ್ತಿಯ ನಿರೋಧಿಸುವಿಕೆಯೇ ''ಯೋಗ'' ೆಎಂದು ಹೇಳಿದ್ದಾನೆ.  ಚಿತ್ತವೃತ್ತಿಯ ನಿರೋಧ ಅಂದರೆ ಉದ್ದೇಶಿತ ಗುರಿಯೆಡೆಗಿನ ಅದರ ಕೇಂದ್ರೀಕರಣವೇ ಅಥವಾ ಜೋಡಿಸುವಿಕೆಯೇ ಆಗಿದೆ.  ಹೀಗಾಗಿ ''ಯೋಗ'' ಎಂಬ ಶಬ್ದಕ್ಕೆ ಜೋಡಿಸುವಿಕೆ ಅಥವಾ ಸೇರುವಿಕೆ ಎಂಬ ಅರ್ಥ ಬರುತ್ತದೆ. 

ಹೀಗೆ ಪರಮಾತ್ಮತತ್ವದಲ್ಲಿ ಚಿತ್ತದ ವೃತ್ತಿಯ ಲೀನಗೊಳಿಸುವಿಕೆ ಅಥವಾ ಸೇರಿಸುವಿಕೆಯಾದ ''ಯೋಗ''ವನ್ನು  ಸಾಧಿಸಲಿಕ್ಕೆ ಪತಂಜಲಿಯು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಎಂಬ  ಎಂಟು ಮೆಟ್ಟಿಲುಗಳ ಸಾಧನಾವಿಧಾನಗಳನ್ನು ಕ್ರಮವಾಗಿ ಹೇಳಿದ್ದಾನೆ. ಆ ಕ್ರಮವೇ ಅಷ್ಟಾಂಗಯೋಗ, ರಾಜಯೋಗ ಅಥವಾ ಪತಂಜಲಿಯೋಗ ಎಂದು ಪ್ರಖ್ಯಾತವಾಗಿದೆ.

ಪತಂಜಲಿಯ ಯೋಗಸೂತ್ರಗಳಲ್ಲದೇ ಭಗವದ್ಗೀತೆಯೂ ಕೂಡ ಯೋಗಶಾಸ್ತ್ರದ ವ್ಯಾಪ್ತಿಗೆ ಒಳಪಡುತ್ತದೆ.  ಭಗವದ್ಗೀತೆಯು ''ಪ್ರಸ್ಥಾನತ್ರಯ'' ಎಂಬ ವೇದಾಂತಶಾಸ್ತ್ರದ ಮೂರು ಮೆಟ್ಟಿಲುಗಳಲ್ಲಿ ಮೊದಲನೆಯದ್ದಾಗಿದ್ದರೂ ಅದು ಯೋಗಶಾಸ್ತ್ರವೂ ಕೂಡ ಆಗಿದೆ. ಇದೇ ಕಾರಣಕ್ಕೆ ಸಂಪ್ರದಾಯದಲ್ಲಿ ಗೀತಾ ಪಾರಾಯಣ ಮಾಡುವವರು ಎಲ್ಲ ಅಧ್ಯಾಯಗಳ ಕೊನೆಯಲ್ಲಿ ''ಇತಿ ಶ್ರೀಮದ್ಭಗವದ್ಗೀತಾಸು, ಉಪನಿಷತ್ಸು, ಬ್ರಹ್ಮವಿದ್ಯಾಯಾಂ, ಯೋಗಶಾಸ್ತ್ರೇ, ಶ್ರೀಕೃಷ್ಣಾರ್ಜುನ ಸಂವಾದೆ'' ಎಂದು ಹೇಳಿ ಅಧ್ಯಾಯದ ಸಂಖ್ಯೆಯನ್ನು ಹೇಳಿ ಮುಗಿಸುತ್ತಾರೆ.  ಹೀಗೆ ಭಗವದ್ಗೀತೆಯು ವೇದಾಂತಶಾಸ್ತ್ರ ಮತ್ತು ಯೋಗಶಾಸ್ತ್ರ  ಎರಡೂ ಕಡೆಗಳಲ್ಲಿ ಸಲ್ಲುವ ಅನನ್ಯ ಗ್ರಂಥವಾಗಿದ್ದು ಉಪನಿಷತ್ತುಗಳಿಗೆ ಸಮಾನವಾದ ಸ್ಥಾನವನ್ನು ಪಡೆದಿದೆ. 

ನಿರ್ದ್ವಂದ್ವೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್  # 2-15

ಎನ್ನುವ ಕೃಷ್ಣನ ಮಾತಿನ  ''ಯೋಗಕ್ಷೇಮ''  ಎಂಬ ಪದಬಳಕೆಯಲ್ಲಿ ''ಯೋಗ'' ಕ್ಕೆ ಬೇರೆಯದ್ದೇ ಆದ ಅರ್ಥವಿದೆ. ಇಲ್ಲಿ ಅಪ್ರಾಪ್ತ ವಸ್ತುವಿನ ಹೆಸರು - 'ಯೋಗ' ಮತ್ತು ಪ್ರಾಪ್ತವಾಗಿರುವ ವಸ್ತುವಿನ ರಕ್ಷಣೆಯ ಹೆಸರು 'ಕ್ಷೇಮ'. ಈ ಯೋಗ ಮತ್ತು ಕ್ಷೇಮಗಳೆರಡರ ಬಗೆಗೂ ನಿರಾಸಕ್ತಿಯನ್ನು ಹೊಂದಿ ನಿತ್ಯಸತ್ವಸ್ಥನಾಗಿರಬೇಕೆಂಬುದು  ಇಲ್ಲಿನ  ಕೃಷ್ಣನ ಮಾತಿನ ಆಶಯ.

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ.
ಸಿಧ್ಯಸಿಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ  ಉಚ್ಯತೆ. # 2-48

ಆಸಕ್ತಿಯನ್ನು ತ್ಯಜಿಸಿ ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ ''ಯೋಗ''ದಲ್ಲಿ ನೆಲೆ ನಿಂತು ಕರ್ತವ್ಯ-ಕರ್ಮಗಳನ್ನು ಮಾಡು. ಕರ್ಮಗಳು ಯಶಸ್ವಿಯಾಗಲಿ ಅಥವಾ ವಿಫಲವಾಗಲಿ, ಅವೆರಡರ ಕಡೆಗೂ ನೀನು 'ಸಮತ್ವ'ಭಾವವನ್ನು ಹೊಂದಿರು. ಈ ಸಮತ್ವವೇ ಯೋಗ ಎಂದು ಹೇಳಲ್ಪಟ್ಟಿದೆ. -ಎಂತಲೂ ಕೃಷ್ಣ ಹೇಳುತ್ತಾನೆ. ಚಿತ್ತವೃತ್ತಿಯ ನಿರೋಧವನ್ನೇ ಈ ಮೇಲಿನ ಮಾತಿನಲ್ಲಿ ಬೇರೆ ರೀತಿಯಲ್ಲಿ ಹೇಳಲಾಗಿದೆ. 

ಗೀತೆಯಲ್ಲಿ ಮುಂದೆ ''ಜ್ಞಾನಯೋಗ'' ಹಾಗೂ ''ಕರ್ಮಯೋಗ'' ಎಂಬ ಎರಡು ಪ್ರಕಾರದ ಯೋಗಮಾರ್ಗಗಳನ್ನು ಕೃಷ್ಣ ಹೇಳುತ್ತಾನೆ. 
ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಂ # 3-3

ಈ ಲೋಕದಲ್ಲಿ ಎರಡು ಎರಡು ಪ್ರಕಾರದ ನಿಷ್ಠೆಗಳನ್ನು ನಾನೇ ಹಿಂದೆ ಹೇಳಿರುವೆನು.  ಸಾಂಖ್ಯರ ನಿಷ್ಠೆಯು ಜ್ಞಾನಯೋಗದಿಂದ, ಯೋಗಿಗಳ ನಿಷ್ಠೆಯು ಕರ್ಮಯೋಗದಿಂದ ಇರುತ್ತದೆ.
(ಸಾಧನೆಯ ಪರಾಕಾಷ್ಠೆ ಅಥವಾ ಪಕ್ವಾವಸ್ಥೆಯ ಹೆಸರೇ 'ನಿಷ್ಠೆ' ಎಂದಾಗಿದೆ.   # ನಮ್ಮ ಇಂದ್ರಿಯ-ದೇಹ, ಹಾಗೂ ಮನಸ್ಸಿನಿಂದ ನಡೆಯುವ  ಎಲ್ಲಾ ಕ್ರಿಯೆಗಳ ಕರ್ತೃ ನಾನು ಎಂಬ  ಅಭಿಮಾನವನ್ನು ಬಿಟ್ಟು ಸರ್ವವ್ಯಾಪೀ ಸಚ್ಚಿದಾನಂದಘನ ಪರಮಾತ್ಮನಲ್ಲಿ ಏಕಭಾವದಿಂದ ತಲ್ಲೀನನಾಗುವುದೇ ''ಜ್ಞಾನಯೋಗ''.  ಇದನ್ನೇ ಸಂನ್ಯಾಸ, ಸಾಂಖ್ಯಯೋಗ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಸಾಂಖ್ಯರ ಮಾರ್ಗವಾಗಿದೆ.  ## ಕರ್ಮಗಳಿಂದ ಫಲದ ಅಪೇಕ್ಷೆ ಹಾಗೂ ಕರ್ಮಗಳಲ್ಲಿನ ಮಮತೆಯನ್ನು ತ್ಯಜಿಸಿ ಕರ್ತವ್ಯವವನ್ನು ಭಗವದಾಜ್ಞೆಯಂತೆ ಭಾವಿಸಿ ಸಮತ್ವ ಬುದ್ಧಿಯಿಂದ ಕರ್ಮ ಮಾಡುವುದೇ ನಿಷ್ಕಾಮ ಕರ್ಮವನ್ನೇ ''ಕರ್ಮಯೋಗ'', ಸಮತ್ವಯೋಗ, ಅಥವಾ ತದರ್ಥಕರ್ಮ ಮುಂತಾಗಿ ಕರೆಯಲಾಗಿದೆ. ಇದು ಯೋಗಿಗಳ ಮಾರ್ಗವಾಗಿದೆ)Sunday, February 9, 2014

ಗೀತಾಭ್ಯಾಸ

ಭಾರತೀಯ ತತ್ವಜ್ಞಾನದ ಸರ್ವಾಂಗೀಣ ಅಭ್ಯಾಸ ಮಾಡುವವರು ಮೊದಲು ಭಗವದ್ಗೀತೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಗೀತೆ ನಿಜವಾಗಿಯೂ ಏನು ಹೇಳುತ್ತದೆ ಎಂದು ನಿಶ್ಚಿತವಾಗಿ ತಿಳಿದುಕೊಳ್ಳುವುದು ಸುಲಭವಲ್ಲ.  ಕಾರಣ: ಗೀತೆ ಪುರಾತನ ಸಂಸ್ಕೃತದಲ್ಲಿದೆ ಮತ್ತು  ಅದರಲ್ಲಿಯೂ ಛಂದೋಬದ್ಧವಾದ ಪದ್ಯದ ರೂಪದಲ್ಲಿದೆ.  ಎರಡನೆಯ ಕಾರಣ: ಗೀತೆಯನ್ನು ಕುರಿತು ಅನೇಕ ಭಾಷ್ಯಗಳು ಹಾಗೂ ಅವುಗಳ ಅನುವಾದಗಳೂ ಲಭ್ಯವಿವೆ. ಆದರೆ ಬಹುತೇಕ ಭಾಷ್ಯಕಾರರು ಹಾಗೂ ಅನುವಾದಕರು ಗೀತೆಯನ್ನು ಹೇಳುವಾಗ ಕೃಷ್ಣನ ಮನಸ್ಸಿನಲ್ಲಿ ಯಾವ ಭಾವವಿತ್ತೋ ಅದಕ್ಕೆ ಬದಲಾಗಿ ತಮ್ಮ ಮನಸ್ಸಿನಲ್ಲಿ ಯಾವ ಭಾವವಿದೆಯೋ ಅದನ್ನು ಗೀತೆಯ ಶ್ಲೋಕಗಳ ಮೇಲೆ ಹೇರುತ್ತಾರೆ. ಆದ್ದರಿಂದ ಗೀತಾಭ್ಯಾಸಿ ಗೊಂದಲಕ್ಕೀಡಾಗುತ್ತಾನೆ.  ಗೀತೆಗೆ ಅನೇಕ ಭಾಷ್ಯಗಳಿದ್ದಾಗಿಯೂ ಶಂಕರಾಚಾರ್ಯರು  ಬರೆದ ಸಂಸ್ಕೃತ ಭಾಷ್ಯ ಮತ್ತು ಜ್ಞಾನೇಶ್ವರರು ಮರಾಠಿಯಲ್ಲಿ ''ಜ್ಞಾನೇಶ್ವರಿ'' ಎಂಬ ಹೆಸರಿನಲ್ಲಿ ಬರೆದ ವ್ಯಾಖ್ಯೆ ಅತ್ಯಂತ ವ್ಯಾಪಕ ಮತ್ತು ಸಮರ್ಪಕವಾಗಿವೆ ಎಂದು ಬಹುಶೃತ ವಿದ್ವಾಂಸರನೇಕರು ಒಮ್ಮತದಿಂದ ಒಪ್ಪುತ್ತಾರೆ ಹಾಗೂ  ಪ್ರಾಚೀನ ಉಪನಿಷತ್ತುಗಳಲ್ಲಿ ಹೇಳಲಾದ ವಿಷಯಗಳನ್ನೇ ಸಾರವಾಗಿ ಗ್ರಹಿಸಿ ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ ಅನ್ನುವುದನ್ನು ಎಲ್ಲ ಭಾಷ್ಯಕಾರರೂ ಒಪ್ಪುತ್ತಾರೆ.

ವೈಖರೀ ಭಾಷೆಯಲ್ಲಿ ಬಳಕೆಯಾಗುವ ಶಬ್ದಗಳಿಗೆ ತಮ್ಮದೇ ಆದ ಒಂದು ಜೀವನವಿದೆ ಹಾಗೂ ಎಲ್ಲ ಶಬ್ದಗಳಿಗೂ ಅವುಗಳದ್ದೇ ಆದ ಒಂದು ಇತಿಹಾಸವಿರುತ್ತದೆ.  ಶಬ್ದಗಳ ಇತಿಹಾಸದಲ್ಲಿ ಜ್ಞಾನದ ಅಥವಾ ಸಂಕಲ್ಪಗಳ ವಿಕಾಸಕ್ರಮ ಆಕಲನವಾಗುತ್ತದೆ. ವಿಕಾಸಕ್ರಮದಲ್ಲಿ ಶಬ್ದಗಳ ಸಮಗ್ರ ಅರ್ಥ ಸೇರಿಕೊಂಡಿರುತ್ತದೆ ಹಾಗೂ ಶಬ್ದಗಳಿಗೆ ಅನೇಕ ಅರ್ಥಗಳ ಸೂಕ್ಷ್ಮಭಾವವಿದೆ. ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡಾಗ ಮಾತ್ರ ಗೀತೆಯಂತಹ ಗ್ರಂಥ ಸರಿಯಾಗಿ ಅರ್ಥವಾಗುತ್ತದೆ. 

ಮಹಾಭಾರತದ ಭೀಷ್ಮಪರ್ವದಲ್ಲಿನ  25ರಿಂದ 42 ರ ವರೆಗಿನ 18 ಅಧ್ಯಾಯಗಳೇ ಭಗವದ್ಗೀತೆ ಅಂತ ಗುರುತಿಸಲ್ಪಟ್ಟಿವೆ. ಈ ಹದಿನೆಂಟು ಎಂಬ ಸಂಖ್ಯೆ ವಿಶೇಷ ಮಹತ್ವ ಹೊಂದಿದೆ ಹಾಗೂ ಸಂಪೂರ್ಣ ಮಹಾಭಾರತ ಕಾವ್ಯವೂ ಕೂಡ ಹದಿನೆಂಟು ಪರ್ವಗಳಲ್ಲಿ ಹರಡಿಕೊಂಡಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧವು 18 ದಿನಗಳ ಕಾಲ ನಡೆದಿದತ್ತು, ಮತ್ತು ಕೌರವ- ಪಾಂಡವರ ಸೈನ್ಯ ಒಟ್ಟು 18 ಅಕ್ಷೌಹಿಣಿಯದ್ದಾಗಿತ್ತು.  ಮನುಷ್ಯನ ಸೂಕ್ಷ್ಮ ಶರೀರದ ತತ್ವಗಳೂ ಕೂಡ ಹದಿನೆಂಟೇ ಅಗಿವೆ. (ಮನಸ್ಸು, ಬುದ್ಧಿ, ಅಹಂಕಾರ,  5 ಜ್ಞಾನೇಂದ್ರಿಯಗಳು, 5 ಕರ್ಮೇಂದ್ರಿಯಗಳು ಹಾಗೂ 5 ತನ್ಮಾತ್ರೆಗಳು ಒಟ್ಟು ಸೇರಿ 18)

ಗೀತೆಯಲ್ಲಿರುವ ಒಟ್ಟು 700 ಶ್ಲೋಕಗಳಲ್ಲಿ 645 ಶ್ಲೋಕಗಳು ಅನುಷ್ಟುಪ್ ಛಂದಸ್ಸಿನಲ್ಲಿದ್ದು ಉಳಿದ 55 ಶ್ಲೋಕಗಳು ಇಂದ್ರವಜ್ರ, ಉಪೇಂದ್ರವಜ್ರ, ಉಪಜಾತಿ  ಹಾಗೂ ವಿಪರೀತಪೂರ್ವ ಎಂಬ ಛಂದಸ್ಸುಗಳಲ್ಲಿ ಇವೆ. 
ಉಪನಿಷತ್ತುಗಳ ನಂತರದ ಕಾಲದಲ್ಲಿ ಗೀತೆಯ ರಚನೆಯಾದ್ದರಿಂದ ಅದರ ಭಾಷೆಯ ಮೇಲೆ ಉಪನಿಷತ್ತುಗಳ ಛಾಯೆಯಿದೆ. ಉಪನಿಷತ್ತುಗಳ ಕಾಲದ ನಂತರ ಭಾರತೀಯ ಸಮಾಜದಲ್ಲಿ ಗಮನಾರ್ಹ ಬದಲಾವಣೆಗಳಾದವು. ಅದು ಬ್ರಹ್ಮವಿದ್ಯೆ, ಯೋಗಶಾಸ್ತ್ರ, ಸಾಂಖ್ಯಶಾಸ್ತ್ರಗಳ ರಚನೆ, ಹಾಗೂ ಸಗುಣಭಕ್ತಿಯನ್ನು ಪ್ರಾಚುರ್ಯಪಡಿಸಿದ ಭಾಗವತ ಪಂಥದ ಉದಯ ಮುಂತಾದವುಗಳು ಘಟಿಸುತ್ತಿದ್ದ ಸಮಯ ಅದಾಗಿತ್ತು. ಹೀಗಾಗಿ ಗೀತೆಯಲ್ಲಿನ ಭಾಷಾ ಶ್ರೀಮಂತಿಕೆ, ಶಬ್ದಬಳಕೆ ಅನನ್ಯವಾಗಿದೆ. ಗೀತೆಯಲ್ಲಿ ಕೆಲವು ಶಬ್ದಗಳ ಹಾಗೂ ವಾಕ್ಯಗಳ ಪುನರಾವೃತ್ತಿ ಆಗಿದ್ದು ಕಂಡುಬರುತ್ತದೆಯಾದರೂ ಅವು ಓದುಗನಿಗೆ ಬೇಸರ ಉಂಟುಮಾಡುವುದರ ಬದಲಾಗಿ ಆ ಜಾಗದಲ್ಲಿ ಹೇಳಲಾದ ವಿಷಯವನ್ನು ನಿಖರವಾಗಿ ಅರ್ಥ ಮಾಡಿಕೊಳ್ಳವಲ್ಲಿ ಸಹಕಾರಿಯಾಗಿವೆ. ಗೀತೆಯು ವಿಶೇಷಣ, ವಿಶೇಷನಾಮ ಹಾಗೂ ಕ್ರಿಯಾಪದಗಳ ಸಮೃದ್ಧ ಭಂಡಾರವಾಗಿದೆ. ವಿಷಯಗಳನ್ನು ಹೇಳುವ ಸಂದರ್ಭದಲ್ಲಿ ಗೀತೆಯು ಅರ್ಜುನ ಹಾಗೂ ಕೃಷ್ಣರ ಅನೇಕ ಸುಂದರ ಹಾಗೂ ಅರ್ಥಪೂರ್ಣ ಹೆಸರುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುತ್ತದೆ.  ಬ್ರಹ್ಮವಿದ್ಯಾ ಸಂಪನ್ನ ಪುರುಷನ ವರ್ಣನೆ ಮಾಡುವಾಗ, ಜ್ಞಾನದ ಲಕ್ಷಣಗಳನ್ನು ಹೇಳುವಾಗ, ದ್ವಂದ್ವಗಳ ಪ್ರಕಾರಗಳನ್ನು ಹೇಳುವಾಗ ಹಾಗೂ ದೈವೀ -ಅಸುರೀ ಸಂಪತ್ತುಗಳ ವಿವರಣೆ ನೀಡುವಾಗ ಗೀತೆಯು ಅನೇಕ ವಿಶೇಷಣಗಳನ್ನು ಸುಂದರವಾಗಿ ಬಳಸುತ್ತದೆ.

 ''ಮನಸ್ಸಿನ ಶಾಂತಿಯೇ ಜೀವನದ ಪರಮಶ್ರೇಷ್ಠ ಮೌಲ್ಯವಾಗಿದೆ, ಅದು ಜೀವನದಲ್ಲಿ ಸಾಕಾರಗೊಳ್ಳಲಿಕ್ಕೆ ಕರ್ಮವು ಸಹಕಾರಿಯಾಗಿದೆ. ಆದರೆ ಆ ಕರ್ಮವನ್ನು 'ಕರ್ತೃತ್ವಭಾವ' ವನ್ನು ಬಿಟ್ಟು 'ಕರ್ತವ್ಯಭಾವ'ದಿಂದ ಭಗವಂತನಿಗಾಗಿ ಹಾಗೂ ಭಗವತ್ ಸ್ಮರಣೆಯಲ್ಲಿಯೇ ಮಾಡಬೇಕು''  ಎಂಬ ಮಾತನ್ನು ಗೀತೆ ಪುನಃ ಪುನಃ ಹೇಳುತ್ತದೆ. 

 ಗೀತೆಯು ಆತ್ಮಸತ್ತಾವಾದವನ್ನು ಅಂದರೆ ಸೃಷ್ಟಿಯ ಎಲ್ಲ ಚರ-ಅಚರ ವಸ್ತುಗಳ ಒಳ-ಹೊರಗನ್ನು ವ್ಯಾಪಿಸಿರುವ ಆತ್ಮಸ್ವರೂಪವನ್ನು ಹೇಳುತ್ತದೆಯಾದರೂ ಅದನ್ನು ಹೇಳುವ ಕ್ರಮದಲ್ಲಿ ಒಂದು ಸಾಧನೆಯ ದೃಷ್ಟಿ ಇದೆ.  ಗೀತೆ ಕೇವಲ ತಾತ್ವಿಕ ವಿಚಾರ-ವಿಮರ್ಶೆಗೆ ಆಹಾರ ಒದಗಿಸುವ ಶುಷ್ಕ ತತ್ವವಾದದ ಗ್ರಂಥವಲ್ಲ.  ಉನ್ಮನೀ ಅವಸ್ಥೆ (ಉತ್ + ಮನ =ಉನ್ಮನ.  ಉತ್ - ಅಂದರೆ ಮೇಲೆ.  ಮನಸ್ಸಿನ ಎತ್ತರಿಸಿದ ಅಥವಾ ಮೇಲಕ್ಕೆತ್ತಲ್ಪಟ್ಟ ಸ್ಥಿತಿ) ಅಥವಾ ''ಬ್ರಾಹ್ಮೀ'' ಅವಸ್ಥೆಯ ಪ್ರತ್ಯಕ್ಷ ಅನುಭವ ಪಡೆಯಲಿಕ್ಕೆ ಜೀವನದಲ್ಲಿ ಎಂತಹ ಮಾರ್ಗವನ್ನು ಅನುಸರಿಸಬೇಕು ಎಂದು ಸ್ಪಷ್ಟವಾಗಿ ಗೀತೆ ಹೇಳುತ್ತದೆ. ನಮ್ಮ ಈ ''ಜಡ'' ದೇಹಕ್ಕೂ ಹಾಗೂ ಅದರಲ್ಲಿ ಸೇರಿಕೊಂಡಿರುವ ''ಚಿತ್'' ಅಥವಾ ''ಚೈತನ್ಯ''ಕ್ಕೂ ಇರುವ ಗಂಟನ್ನು (ಚಿಜ್ಜಡ ಗ್ರಂಥಿಯನ್ನು) ಬಿಚ್ಚುವ ನಿಟ್ಟಿನಲ್ಲಿ  ಅನೇಕ ವೈಜ್ಞಾನಿಕ ಸಾಧನಾಕ್ರಮಗಳ ವಿವರವನ್ನು  ಸಮಗ್ರವಾಗಿ ಹೇಳಲಾಗಿದೆ. ಈ ''ಚಿತ್'' ಹಾಗೂ ''ಜಡ''ಗಳ ಪರಸ್ಪರ ತಾದಾತ್ಮ್ಯವನ್ನು ಅಥವಾ ಬೆಸುಗೆಯನ್ನು ಬಿಡಿಸುವ ವಿಜ್ಞಾನವೇ ಆಧ್ಯಾತ್ಮಶಾಸ್ತ್ರವಾಗಿದೆ. ಅದೇ ''ಭಾರತೀಯ ವಿಜ್ಞಾನ''ದ ಸರ್ವೋಚ್ಚ ಸಂಶೋಧನೆಯಾಗಿದೆ.

Tuesday, January 28, 2014

ಸರ್ಟಿಫಿಕೇಟ್

ನಮಗೆ ಸಿಗುವ ಸೀಮಿತ ಅನುಭವ ಮತ್ತು ಅಲ್ಪ-ಸ್ವಲ್ಪ ಮಾಹಿತಿಯ ಆಧಾರದ ಮೇಲೆಯೇ ನಾವು ನಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡು ಆ ಅಭಿಪ್ರಾಯಗಳ ಮೇಲೆ ಪದ್ಮಾಸನ ಹಾಕ್ಕೊಂಡು ಕೂತ್ಕೊಂಡುಬಿಡ್ತೀವಿ. ಜಪ್ಪಯ್ಯ ಅಂದ್ರೂ ಅದರ ಮೇಲಿಂದ ಏಳೊದಿಲ್ಲ.
ನಾನು ಜ್ಯೋತಿಷ್ಯ ಶಾಸ್ತ್ರ ಓದಿಲ್ಲ.. ಜ್ಯೋತಿಷ್ಯ ನಂಬ್ತೀನಿ- ನಂಬೋದಿಲ್ಲ ಇತ್ಯಾದಿ ಇತ್ಯಾದಿ ಚರ್ಚೆಗಳಲ್ಲಿ ನಾನು ಭಾಗವಹಿಸೋದಿಲ್ಲ. ಅದನ್ನು ನಂಬಿ ಅಂತ ಯಾರಿಗೂ ಸಲಹೆನೂ ಕೊಡೋದಿಲ್ಲ. ನಂಬದೇ ಇದ್ದವರನ್ನು ತುಚ್ಛವಾಗಿಯೂ ಕಾಣೋದಿಲ್ಲ. ಮೊನ್ನೆ ಗೆಳೆಯರೊಬ್ಬರು ಇದ್ದಕ್ಕಿದ್ದ ಹಾಗೆ ಜ್ಯೋತಿಷ್ಯದ ಬಗ್ಗೆ ಮಾತು ಶುರು ಹಚ್ಕೊಂಡ್ರು.. ''ನಾನು ನಂಬೋದೇ ಇಲ್ಲ.. ಎಲ್ಲಾ ಕಳ್ಳರು.. ಜ್ಯೋತಿಷ್ಯ ಹೇಳೋ ವ್ಯಕ್ತಿ ತನ್ನ ಸ್ವಂತ ಜೀವನ ಸರಿ ಮಾಡ್ಕೊಳ್ಳೋಕಾಗಲ್ಲ, ಅವನ ಪ್ರಾಣ ಯಾವಾಗ ಹೋಗುತ್ತೋ ಅವನಿಗೇ ಗೊತ್ತಿರೋದಿಲ್ಲ.(ಲಗೇ ರಹೋ ಮುನ್ನಾಭಾಯ್ ಸಿನೆಮಾದಲ್ಲಿ ಹೇಳಿದಹಾಗೆ), ಹುಟ್ಟಿದ ಸಮಯ ಯಾರದ್ದೂ ಸರಿಯಾಗಿ ಯಾರಿಗೂ ಗೊತ್ತಿರೋದಿಲ್ಲ, ಹಿಂಗಾಗಿ ಎಲ್ಲರ ಜಾತಕಗಳೂ ತಪ್ಪಾಗಿಯೇ ಇರ್ತವೆ. etc etc.
ನಾನು ಅವರನ್ನು ''ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು ?'' ಅಂತ ಕೇಳಿದೆ. ಅದಕ್ಕೆ ಅವರು ''ನಾನು ಟೀವಿನಲ್ಲಿ ನೋಡಿದೀನಲ್ಲ, ಜ್ಯೋತಿಷ್ಯ ಹೇಳೋರನ್ನ. ಜ್ಯೋತಿಷ್ಯದ ತುಂಬಾ ಕಾರ್ಯಕ್ರಮ ನೋಡಿದೀನಿ'' ಅಂದ್ರು. ಅವರ ಅಭಿಪ್ರಾಯಗಳಿಗೆ ಆಧಾರ ಟಿವಿಯಲ್ಲಿ ಬರುವ ಬ್ರಹ್ಮಾಂಡಸಂತತಿ ಅಂತ ಗೊತ್ತಾಯ್ತು. ಅದಕ್ಕೆ ನಾನು ''ಟೀವಿ ಯಲ್ಲಿ ಬರೋ ಕೆಲ ಯಡವಟ್ಟುಗಳನ್ನು ನೋಡ್ಕೊಂಡು ಇಡೀ ಜ್ಯೋತಿಷ್ಯ ಅನ್ನುವ ಶಾಸ್ತ್ರಕ್ಕೇ ನೀವು ''ಇದು ಸರಿಯಾಗಿಲ್ಲ'' ಅನ್ನೋ ''ಸರ್ಟಿಫಿಕೇಟ್'' ಕೊಡ್ತಾ ಇದೀರಲ್ಲ..? ಇದು ಸರೀ ನಾ..? ಹೋಗ್ಲಿ, ಜ್ಯೋತಿಷ್ಯ ಅನ್ನೋದು ಯಾವ ಗ್ರಂಥದ ಆಧಾರದ ಮೇಲೆ ನಿಂತಿದೆ..? ಅದನ್ನೆಲ್ಲಾ ಬರೆದವರು ಯಾರು ಅಂತೆಲ್ಲಾ ಗೊತ್ತಾ ನಿಮಗೆ..?'' ಅಂತ ಕೇಳಿದೆ. ಅವರಿಗೆ ಅದ್ಯಾವುದೂ ಗೊತ್ತಿರಲಿಲ್ಲ. ಜ್ಯೋತಿಷ್ಯದಲ್ಲಿ ''ಸಂಹಿತೆ, ಸಿದ್ಧಾಂತ, ಹೋರಾ'' ಎಂಬ ಮೂರು ವಿಭಾಗಗಳಿವೆ, ಅದಲ್ಲದೇ ಕಾಲಕಾಲಕ್ಕೆ ಅನೇಕ ಸಂಶೋಧಕರು ಬರೆದ ನೂರಾರು ಗ್ರಂಥಗಳಿವೆ, ಜ್ಯೋತಿಷ್ಯ ಅಂದ್ರೆ ''ನಾಲ್ಕು ಲಕ್ಷ ಶ್ಲೋಕ'' ಗಳಿರುವ ಒಂದು ದೊಡ್ಡ ಶಾಸ್ತ್ರ. ಶಾಸ್ತ್ರ ಯಾವತ್ತೂ ಶಾಸ್ತ್ರೀಯ ನಿಯಮಗಳನ್ನು ಒಳಗೊಂಡಿರುತ್ತೆ. ಅದನ್ನು ಪೂರ್ತಿಯಾಗಿ ಅಧ್ಯಯನ ಮಾಡಲಿಕ್ಕೆ ಕನಿಷ್ಠ12 ರಿಂದ 15 ವರ್ಷಗಳ ಸಮಯಾವಕಾಶ ಬೇಕು. ಅದ್ಯಾವುದೂ ಗೊತ್ತಿಲ್ಲದೇ ಕೇವಲ ಇಪ್ಪತ್ತೇಳು ನಕ್ಷತ್ರ, ಹನ್ನೆರಡು ರಾಶಿ ಇಟ್ಕೊಂಡು ಟೀವಿಯಲ್ಲಿ ರಾಶೀಫಲ ಹೇಳೋರನ್ನು ನೋಡಿಬಿಟ್ಟು ಒಂದಿಡೀ ಶಾಸ್ತ್ರವನ್ನೇ ನೀವು ''ಸರಿಯಿಲ್ಲ'' ಅನ್ನೋದು ಎಷ್ಟು ಸರಿ..? ಒಂದು ವಿಷಯದ ಬಗ್ಗೆ ನಾವು ನಿರ್ಣಯ ಕೊಡಬೇಕು ಅಂದರೆ ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಬೇಕು ಅಥವಾ ಪೂರ್ತಿ ಮಾಹಿತಿ ಯಾರ ಬಳಿ ಇದೆಯೋ, ಅಂಥವರ ಬಳಿ ಚರ್ಚಿಸಿದ ಮೇಲೆ ನಮ್ಮ ಅಭಿಪ್ರಾಯ ನಿರ್ಮಾಣ ಮಾಡ್ಕೋಬೇಕಲ್ವಾ..? ಅಂದೆ. ನನ್ನ ಮಾತನ್ನು ಒಪ್ಪಿಕೊಳ್ಳಲಿಕ್ಕೆ ಅವರ ''ಇಗೋ'' ಅಡ್ಡ ಬಂತು. ಹಿಂಗಾಗಿ ಮತ್ತೇನೇನೋ ವಾದ ಮಾಡಿದರು. ಆದರೆ ಒಟ್ಟಾರೆ ಅವರ ಅಭಿಪ್ರಾಯಕ್ಕೆ ಆಧಾರವಾದ ಮಾಹಿತಿ ಮತ್ತು ಅನುಭವ ಎರಡೂ ಬಹಳ ನಗಣ್ಯವಾಗಿದ್ದವು. ಆದರೂ ತಮ್ಮ ಅಭಿಪ್ರಾಯ ಪರಮಸತ್ಯ ಅಂತಲೇ ಸಾಧಿಸಲಿಕ್ಕೆ ಅವರು ಪ್ರಯತ್ನ ಪಡ್ತಾ ಇದ್ರು.
ಅದೇ ರೀತಿ ಇನ್ನೊಬ್ಬ ಗೆಳೆಯರು ಸಿನೇಮಾಗಳ ಬಗ್ಗೆ ಮಾತಾಡುವಾಗ ''ನಾನು ಟಾಮ್ ಹಾಂಕ್ಸ್, ಲಿಯೋನಾರ್ಡೋ ಡಿಕಾಪ್ರಿಯೋ, ಕಮಲ್ ಹಾಸನ್ ಇವರನ್ನು ಮಾತ್ರ ನಟ ಅಂತ ಒಪ್ಕೊತೀನಿ. ಅವರ ಚಿತ್ರಗಳನ್ನು ಮಾತ್ರ ನೋಡ್ತೀನಿ'' ಅಂತೆಲ್ಲಾ ನಾನು ಅವರನ್ನು ಕೇಳದೇ ಇದ್ರೂ ಹೇಳ್ತಾ ಇದ್ರು. ''ಅಂದ್ರೆ ನಾನು ಅಷ್ಟು ಹೈ ಲೇವಲ್ಲಿನ ಪ್ರೇಕ್ಷಕ. ನಾನು ಅಷ್ಟು ದೊಡ್ಡ ಬುದ್ಧಿವಂತ, ಉಳಿದವರೆಲ್ಲಾ ನನ್ನ ರೇಂಜ್ ಗೆ ಸರಿ ಸಮಾನರು ಅಲ್ಲ'' ಅನ್ನೋ ಭಾವ ಅವರ ಮಾತಲ್ಲಿ ಢಾಳಾಗಿ ಇತ್ತು. ಹೀಗೆ ಆ ದೊಡ್ಡ ನಟರ ಹೆಸರು ಹೇಳುವುದರ ಮೂಲಕ ಆತ ತನ್ನ ಅಸ್ತಿತ್ವವನ್ನು ಅವರು ನನ್ನ ಮುಂದೆ ಸಾಬೀತು ಪಡಿಸಬೇಕಾಗಿತ್ತು. ಅದು ಆತನ ಸಧ್ಯದ ಅವಶ್ಯಕತೆ ಆಗಿತ್ತು. ನಿಜವಾಗಿಯೂ ಆತನಿಗೆ ಸಿನೆಮಾಗಳ ಬಗ್ಗೆ ಆಸಕ್ತಿ ಅಭಿರುಚಿ ಇದೆ ಅಂತ ನನಗೆ ಅನಿಸಲಿಲ್ಲ. ''ನಾನು ಈ ಜಗತ್ತಿನಲ್ಲಿ ಇದ್ದೀನಿ, ಮತ್ತು ನಾನು ಬಹಳ ಮಹತ್ವಪೂರ್ಣ ಅನ್ನೋದನ್ನು ನೀನು ಗುರುತಿಸಬೇಕು'' ಅನ್ನುವ ಕಾರಣಕ್ಕಾಗಿ ಇಂತಹ ನಟರ ಜೊತೆ, ಸಂಗತಿಗಳ ಜೊತೆ ತನ್ನನ್ನು Identify ಮಾಡಿಕೊಂಡು ಅದನ್ನು ನಾನು ಒಪ್ಪಬೇಕು ಅಂತ ಬಯಸುತ್ತಿದ್ದರು.
ಸ್ವಾಮಿಗಳನ್ನು, ಮಠಾಧಿಪತಿಗಳನ್ನು ಬೈಯುವುದರ ಮೂಲಕ ಕೂಡ ನಾವು ನಮ್ಮ ಅಸ್ತಿತ್ವವನ್ನು ಮತ್ತು ನಮ್ಮ ''ಸಾಚಾತನ''ವನ್ನು ಸಾಬೀತುಪಡಿಸಲಿಕ್ಕೆ ಹೋಗ್ತೀವಿ. ''ನಾನು ಆ ಸ್ವಾಮಿಗಳನ್ನು ನಂಬೋದಿಲ್ಲ ಅಥವಾ ಗೌರವಿಸೋದಿಲ್ಲ, ಅವರೆಲ್ಲ ಖದೀಮರು. ನಾನು ಇಂತಹ ಒಂದು ನಿರ್ದಿಷ್ಟ ಮಠದ ಸನ್ಯಾಸಿಗಳನ್ನು ಮಾತ್ರ ಗೌರವಿಸ್ತೇನೆ. ಯಾಕೆಂದರೆ ಈಗಿನ ಕಾಲದಲ್ಲಿ ಅವರು ಮಾತ್ರ ಸಾಚಾಗಳು'' ಅಂತ ಹೇಳುವ ಗೆಳೆಯರು ಅನೇಕರು ಇದ್ದಾರೆ. ಯಾವುದೋ ಒಬ್ಬ ಸ್ವಾಮಿಗಳಿಗೆ ಸಾಚಾತನದ ''ಸರ್ಟಿಫಿಕೇಟ್'' ನಾವೇ ಕೊಟ್ಟು, ನಾನು ಅವರನ್ನು ಮಾತ್ರ ಗೌರವಿಸ್ತೇನೆ ಅಂತ ಹೇಳುವ ಮೂಲಕ ''ನಾನು ಕೂಡ ಸಾಚಾ'' ಅಂತ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವ ಅನಿವಾರ್ಯತೆಗೆ ಅಂತಹ ಗೆಳೆಯರು ಬಿದ್ದಿರುತ್ತಾರೆ. ಯಾಕಂದರೆ ಯಾರಾದರೂ ಒಬ್ಬರು ಅವರನ್ನು ಅರ್ಜೆಂಟಾಗಿ ''ಇವನು ಸಾಚಾ..ಪ್ರಾಮಾಣಿಕ'' ಅಂತ ಒಪ್ಪಿಕೊಳ್ಳಬೇಕಾಗಿರುತ್ತದೆ. ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿರುವ ಪ್ರವಚನಕಾರ ಆಚಾರ್ಯರೊಬ್ಬರು ಒಂದು ತುಂಬಿದ ಸಭೆಯಲ್ಲಿ ಒಬ್ಬ ಮಹಾ ತಪಸ್ವಿಯಾದ ಪೀಠಾಧಿಪತಿಗಳ ಹೆಸರನ್ನು ಉಲ್ಲೇಖಿಸಿ '' ಈ ಪೀಠ ಪರಂಪರೆಯಲ್ಲಿ ಅಥವಾ ಆಸಿದ್ಧಾಂತದ ಯತಿಗಳಲ್ಲಿ ನಾನು ಅವರನ್ನು ಒಬ್ಬರನ್ನು ಮಾತ್ರ ಒಪ್ಪಿಕೊಳ್ತೇನೆ..ಅಂತ ಅಪ್ಪಣೆ ಕೊಡಿಸಿದರು. ವಾಸ್ತವವಾಗಿ ಈ ಆಚಾರ್ಯರು ಉಲ್ಲೇಖಿಸಿದ ಆ ತಪಸ್ವಿ ಯತಿಗಳು 1954 ರಲ್ಲೇ ತೀರಿಹೋಗಿದ್ದಾರೆ. ಅವರು ತೀರಿಕೊಂಡಾಗ ಈ ಆಚಾರ್ಯರಿನ್ನೂ 16-18 ವರ್ಷದ ಬಾಲಕರಾಗಿದ್ದರು. ಆ
ಆ ಮಹಾನ್ ತಪಸ್ವಿಯಾದ ಯತಿಗಳಿಗೆ ಇವರು ಕೊಡುವ ಈ ಸರ್ಟಿಫಿಕೇಟಿನ ಅಗತ್ಯ ಖಂಡಿತ ಇಲ್ಲ ಹಾಗೂ ಅವರಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ಈ ಆಚಾರ್ಯರಿಗೆ ಎಳ್ಳಷ್ಟೂ ಇಲ್ಲ. ಆದರೂ ತಮ್ಮ ಹೆಸರನ್ನು ಅಂಥ ಮಹಾತ್ಮರ ಹೆಸರಿನ ಜೊತೆ ಸೇರಿಸಿ, ಅವರನ್ನು ಮಾತ್ರ ಒಪ್ಪಿಕೊಳ್ತೇನೆ ಅಂತ ಹೇಳುವುದರ ಮೂಲಕ ಉಳಿದವರೆಲ್ಲ ನನ್ನ ಪಾಲಿಗೆ ತುಚ್ಛರು, ''ನನ್ನ ಲೇವಲ್ಲೇ ಬೇರೆ'' ಅಂತ ಹೇಳಿಕೊಳ್ಳುವುದರ ಮೂಲಕ ತಮ್ಮ ಬಾಲಬಡುಕರ ಮುಂದೆ ತಾವು ದೊಡ್ಡವರಾಗುವ ಪ್ರಯತ್ನವಲ್ಲದೇ ಮತ್ತೇನು..?

ನಿಜ. ನಮಗೆ ಕೆಲವರ ಬಗ್ಗೆ ವೈಯಕ್ತಿಕವಾಗಿ ಗೌರವವಿರುತ್ತದೆ, ಕೆಲವರ ಬಗ್ಗೆ ಇರುವುದಿಲ್ಲ. ನಮಗೂ ಆ ವ್ಯಕ್ತಿಗೂ ನಡುವೆ ಇರುವ ಸಂಬಂಧ, ನಮ್ಮ ತಿಳುವಳಿಕೆ, ಆ ವ್ಯಕ್ತಿಯ ಬಗೆಗಿನ ತಿಳುವಳಿಕೆ ಮುಂತಾದವುಗಳಿಂದಾಗಿ ನಮಗೆ ಕೆಲ ವ್ಯಕ್ತಿಗಳ ಮೇಲೆ ವಿಶೇಷವಾದ ಗೌರವ ಮೂಡಿರುತ್ತದೆ. ನಮ್ಮ ತಂದೆ ತಾಯಿಯರ ನಡುವೆಯೇ ತಂದೆಯ ಬಗ್ಗೆ ಅಥವಾ ತಾಯಿಯ ಬಗ್ಗೆ ಇಬ್ಬರಲ್ಲಿ ಒಬ್ಬರ ಬಗ್ಗೆ ಹೆಚ್ಚಿನ ಗೌರವ ನಮ್ಮಲ್ಲಿ ಇರುತ್ತದೆ. ಅವರಿಗೂ ನಮಗೂ ನಡುವಿನ ರಕ್ತ ಸಂಬಂಧದ ಹೊರತಾದ ಒಂದು ಹೊಂದಾಣಿಕೆಯಿಂದಾಗಿ ಆ ರೀತಿ ಒಬ್ಬರ ಮೇಲೆ ಹೆಚ್ಚಿನ ಶ್ರದ್ಧೆ ಮೂಡುತ್ತದೆ. ಆದರೆ ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲು ಹೋಗುವುದಿಲ್ಲ. ಏಕೆಂದರೆ ನಮ್ಮಪ್ಪ ತುಂಬಾ ಗ್ರೇಟ್ ಅಂತ ಹೇಳುವ ಮಾತಿನಲ್ಲೇ ನಮ್ಮ ಅಮ್ಮ ಅಷ್ಟೇನೂ ಗ್ರೇಟ್ ಅಲ್ಲ ಅನ್ನುವ ಅರ್ಥ ಧ್ವನಿಸುತ್ತದೆ. ಹೆತ್ತವರ ಬಗೆಗೆ ನಮ್ಮಲ್ಲಿ ಅಭಿಪ್ರಾಯಗಳು ಮೂಡುವಂತೆಯೇ ಹೊರಜಗತ್ತಿನ ವ್ಯಕ್ತಿ ಮತ್ತು ಸಂಗತಿಗಳ ಬಗ್ಗೆ ಗೌರವಾದರ ಅಥವಾ ತಿರಸ್ಕಾರಗಳು ಮೂಡುತ್ತವೆ. ಆದರೆ ಅವುಗಳನ್ನು ಬಹಿರಂಗವಾಗಿ ನಾನು ಇಂಥದ್ದನ್ನು ಮಾತ್ರ ಗೌರವಿಸುತ್ತೇನೆ ಅಂತ ಹೇಳಿಕೊಳ್ಳುವುದರ ಹಿಂದೆ ಆ ವ್ಯಕ್ತಿ ಅಥವಾ ಸಂಗತಿಯ ಜೊತೆಗೆ ನಮ್ಮನ್ನು ನಾವು ಜೋಡಿಸಿಕೊಳ್ಳುವುದರ ಮೂಲಕ ನಮ್ಮ ಅಸ್ತಿತ್ವವನ್ನು ಹಾಗೂ ತಮ್ಮ ವ್ಯಕ್ತಿತ್ವದ ಪೊಳ್ಳು ಔನ್ನತ್ಯವನ್ನು ಸಾಬೀತುಪಡಿಸುವ ಉದ್ದೇಶವಿರುತ್ತದೆ ಅಷ್ಟೇ. ವೈಯಕ್ತಿಕವಾಗಿ ನಾವು ಯಾರನ್ನು ಗೌರವಿಸುತ್ತೇವೆ, ಯಾರನ್ನು ಇಲ್ಲ ಅಂತ ಬಹಿರಂಗವಾಗಿ ಹೇಳಿಕೊಳ್ಳುವ ಅಗತ್ಯ ಇರುವುದಿಲ್ಲ. ಅದು ನಮ್ಮ ಮನಸ್ಸಿನಲ್ಲಿಯೇ ಇದ್ದರೆ ಚೆಂದ.