Monday, September 23, 2013

ಆನಂದೋಬ್ರಹ್ಮ

ಹುಟ್ಟಿದ ಹಬ್ಬದಂತಹ ಸಂದರ್ಭಗಳಲ್ಲಿ ಗೆಳೆಯ ಗೆಳತಿಯರು ''ಯಾವಾಗಲೂ ಸಂತೋಷವಾಗಿರು'' ಅಂತ ಹಾರೈಸ್ತಾರೆ. ಸಂತೋಷಪಡುವುದೇ ಜೀವನದ ಗುರಿ ಅಂತ ನಾವೆಲ್ಲ ನಂಬಿದ್ದೇವೆ. ''ಸಂತೋಷ ಪಡುವುದು ಹೇಗೆ?'' ''ಜೀವನದ ಮಾಡುವ ಕಲೆ'' ಮುಂತಾದ ವಿಷಯಗಳನ್ನು ಹೇಳಿಕೊಡಲಿಕ್ಕಾಗಿಯೇ ಅನೇಕ ಜನ ಗಡ್ಡಬಿಟ್ಟುಕೊಂಡ ಗುರೂಜೀಗಳಿದ್ದಾರೆ. ''ನಿನಗೆ ಯಾವ ಕೆಲಸದಲ್ಲಿ ಸಂತೋಷ ಸಿಗುತ್ತದೆಯೋ ಆ ಕೆಲಸವನ್ನೇ ಮಾಡು'' ಅಂತ ಬೋಧಿಸು ಮ್ಯಾನೇಜ್ ಮೆಂಟ್ ಗುರುಗಳು ಎಲ್ಲ ಕಡೆ ತುಂಬಿದ್ದಾರೆ. ಇವರೆಲ್ಲರ ಬ್ಯುಸಿನೆಸ್ ಚೆನ್ನಾಗಿಯೇ ನಡೆಯುತ್ತಿದೆ. ನಾನು ಇದನ್ನೆಲ್ಲ ನೆನಪಿಗೆ ತಂದುಕೊಂಡು ''ಏನಪ್ಪಾ ಇದು..ಸಂತೋಷಪಡುವುದನ್ನೂ ಕಲಿಯುವ ಕಾಲ ಬಂತಲ್ಲ? ಇಂತಹ ಬೋಧಕರಿಲ್ಲದ, ಇಷ್ಟು ಸಂವಹನ ಸಾಧನಗಳಿಲ್ಲದ ಕಾಲದಲ್ಲಿ ಜೀವಿಸಿದ ನಮ್ಮ ಪೂರ್ವಜರು ಸಂತೋಷವನ್ನೇ ಪಡದೇ ಸತ್ತು ಹೋದರಾ..? ಅಥವಾ ಅವರು ಪಟ್ಟ ಸಂತೋಷಕ್ಕಿಂತ, ಕಲಿತುಕೊಂಡು ಪಡುತ್ತಿರುವ ಈಗಿನ ಸಂತೋಷವೇ ಶ್ರೇಷ್ಠ ಗುಣಮಟ್ಟ ಹೊಂದಿದೆಯಾ..?'' ಅಂತ ಅಲೋಚಿಸುತ್ತಿದ್ದ ದಿನಗಳಲ್ಲಿ ಸ್ನೇಹಿತೆಯೊಬ್ಬರು ಸಂತರೊಬ್ಬರು ಬರೆದ ಒಂದಷ್ಟು ಸಾಲುಗಳನ್ನು ಹಂಚಿಕೊಂಡರು. "ಸಂತೋಷವಿರಲಿ.. ಅಥವಾ ದುಃಖವೇ ಇರಲಿ, ಎಲ್ಲವನ್ನೂ ಸಂಭ್ರಮದಿಂದ ಅನುಭವಿಸುವುದನ್ನು ರೂಢಿಸಿಕೋ'' ಎಂಬರ್ಥದ ಮಾತುಗಳವು.

ಇಂತಹ ಮಾತುಗಳು ಒಂದೇ ಏಟಿಗೆ ನಮ್ಮನ್ನು ಸೆಳೆದು ''ಹೌದಲ್ವಾ.?'' ಅಂತನ್ನಿಸುವಂತೆ ಮಾಡಿಬಿಡುತ್ತವೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಉಮೇದಿಯೂ ಮೂಡುತ್ತದೆ. ಆದರೆ ಅದರಲ್ಲಿ ಎಲ್ಲರೂ ಸಫಲರಾಗುವುದಿಲ್ಲ. ಅದರಲ್ಲಿ ವಿಫಲರಾದವರು ಅಥವಾ ವಿಫಲವಾಗುವ ಸೂಚನೆಯನ್ನು ಹೊಂದಿದವರು  ''ಇಂತಹ ಮಾತುಗಳು ಕೇಳಲಿಕ್ಕಷ್ಟೇ ಚೆಂದ,  ದುಃಖ ಬಂದರೂ ಸಂಭ್ರಮದಿಂದ ಅನುಭವಿಸಲಿಕ್ಕೆ ಹೇಗೆ ಸಾಧ್ಯ..?'' ಎಂಬಂತಹ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಅಥವಾ ನಮ್ಮ ಮನಸ್ಸೇ ಅಂತಹ ಪ್ರಶ್ನೆಯನ್ನು ಕೇಳುತ್ತದೆ. ಹೀಗೇಕೆ ಅಂದರೆ,  ಇಂತಹ ಮಾತುಗಳನ್ನಾಡುವ ಸಂತರು ಅಥವಾ ಅವರಂತಹ ಅನುಭಾವಿಗಳು ಎಲ್ಲರೂ ಬೇರೆ ಯಾವುದೋ ವಿಷಯವನ್ನು ಮಂಡಿಸುವಾಗ ಪೂರಕವಾಗಿ ಇಂತಹ ಮಾತುಗಳನ್ನು ಹೇಳಿರುತ್ತಾರೆ, ಮತ್ತು ಅವರು ತಮ್ಮ ವೈಯಕ್ತಿಕ  ಅನುಭವದ ನೆಲಗಟ್ಟಿನಲ್ಲಿ ಹೇಳಿರುತ್ತಾರೆ. ಅವರು ಅಂತಹುದನ್ನು ಅನುಭವಿಸಿರುತ್ತಾರೆ. ಆದರೆ, ಅವರಂತೆ ಅನುಭವದ ಹಿನ್ನೆಲೆ ಇರದ ನಾವು, ಆ ಮಾತಿನ ಜೊತೆಗೆ ಅವರು ಹೇಳಿದ ಹಿಂದು-ಮುಂದಿನ ಸಂಗತಿಗಳನ್ನೆಲ್ಲ ಬದಿಗೊತ್ತಿ ನಮಗೆ ಆಕರ್ಷಕವಾಗಿ ಕಂಡ ಆ ಮಾತನ್ನು ಮಾತ್ರ ಎತ್ತಿಕೊಂಡು ಅದನ್ನು ಅಳವಡಿಸಿಕೊಳ್ಳುವುದೋ ಅಥವಾ ವಿಮರ್ಶೆಯನ್ನೋ ಮಾಡಿದಾಗ  ''ಇಂತಹ ಮಾತುಗಳು ಕೇಳಲಿಕ್ಕಷ್ಟೇ ಚೆಂದ'' ಅನ್ನಿಸುತ್ತೆ. ಆನಂದ ಅನ್ನೋದು ಮರೀಚಿಕೆ ಅಂತ ಮನಸಿಗೆ ಅನ್ನಿಸುತ್ತೆ. ಆದರೆ ವಾಸ್ತವವಾಗಿ ಆನಂದ ಅಥವಾ ಸಂತೋಷದ ಮೂಲವಿರುವುದು ಆತ್ಮದಲ್ಲಿ

ಪಶ್ಚಿಮದೇಶಗಳ, ಆಂಗ್ಲಭಾಷೆಯ ಮೇಲೆ ಅವಲಂಬಿತ ''ವಿಜ್ಞಾನ'' ಮನುಷ್ಯನ ದೇಹದಲ್ಲಿಯ ಆತ್ಮದ ಅಸ್ತಿತ್ವವನ್ನು ಇನ್ನೂ ಅರಿತಿಲ್ಲ, ಹೀಗಾಗಿ ಆತ್ಮದ ಮರುಹುಟ್ಟಿನ ವಿಷಯದಲ್ಲೂ ಆ ವಿಜ್ಞಾನ ಇನ್ನೂ ಅಜ್ಞಾನಿಯೇ. ಆದರೆ ''ಧೃವಂ ಜನ್ಮ ಮೃತಸ್ಯ ಚ'' ಎಂಬ, ಅಂದರೆ ''ಯಾವುದು ಸಾಯುತ್ತದೆಯೋ ಅದರ ಮರುಹುಟ್ಟು ಖಚಿತ'' ಎಂಬ ''ವಾಸ್ತವ'' ವನ್ನು ಹಿಮಾಲಯದ ಇಳಿಜಾರಿನಿಂದ ದಂಡಕಾರಣ್ಯದವರೆಗೆ ವಾಸಿಸುತ್ತಿದ್ದ ಜನರು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಅವರೆಲ್ಲರೂ ''ಚೈತನ್ಯ''ದ ಮೂಲಸ್ವಭಾವಕ್ಕೆ ಮರಳುವ ನಿಟ್ಟಿನಲ್ಲಿ ಶ್ರಮಿಸತೊಡಗಿದರು. ಹೀಗಾಗಿ ಅವರು ತಾವು ವಾಸಿಸುವ ಪ್ರದೇಶಕ್ಕೆ ''ಭಾರತ'' ಅನ್ನುವ ಹೆಸರು ಇಟ್ಟುಕೊಂಡಿದ್ದರು. 
"ಭಾಃ''
ಅಂದರೆ ಬೆಳಕು. ಬೆಳಕು ಕೊಡೋ ಸೂರ್ಯನಿಗೆ ನಾವು ''ಭಾಸ್ಕರ'' ಅಂತೀವಲ್ಲಾ.. ಅದು ಇದೇ ಕಾರಣಕ್ಕೆ. ಹಾಗೆಯೇ ಸೃಷ್ಟಿಯ ಮೂಲಚೈತನ್ಯವಾದ ಆತ್ಮದ ಸ್ವರೂಪವೂ ಬೆಳಕು. ಆ ಬೆಳಕನ್ನು ಪಡೆಯುವುದರಲ್ಲಿ  ನಿರತವಾಗಿರುವ ಅಥವಾ ಆಸಕ್ತವಾಗಿದ್ದ ಜನರು ತಮ್ಮನ್ನು ತಾವು ''ಭಾರತೀಯರು'' ಅಂತ ಕರೆದುಕೊಂಡರು. ''ಭಾಸಿ, ಭಾಯಾಂ ವಾ ರತಃ ಭಾರತಃ''  ಮತ್ತು ''ಭಾರೂಪಂ ಪರಂ ಬ್ರಹ್ಮ, ತಸ್ಮಿನ್ ಭಾರೂಪೇ ಬ್ರಹ್ಮಣಿ ರತಃ, ಸಕ್ತಃ = ಭಾರತಃ"!  ಎಂಬೆರಡು ವ್ಯುತ್ಪತ್ತಿಗಳು ಭಾರತ ಶಬ್ದದ ಅರ್ಥವನ್ನು ಸ್ಪಷ್ಟಪಡಿಸುತ್ತವೆ. 

ಹೀಗೆ ಹುಟ್ಟು ಸಾವಿನ ಚಕ್ರಲ್ಲಿರುವ ಆತ್ಮನಿಗೆ ''ಮನುಷ್ಯದೇಹ'' ಬರುವುದು ಹುಟ್ಟಸಾವಿನ ಚಕ್ರದಿಂದ ಬಿಡುಗಡೆಗಿರುವ ಏಕೈಕ ಅವಕಾಶ, ಹೀಗಾಗಿ ''ಆ ನಿಟ್ಟಿನ ಪ್ರಯಾಸವೇ ಮನುಷ್ಯಜೀವನದ ಧ್ಯೇಯೋಧ್ಯೇಶಗಳಾಗಿರಬೇಕು'' ಅನ್ನೋದು ಭಾರತೀಯ ತತ್ವಶಾಸ್ತ್ರಗಳ ಸಾರಾಂಶವಾಗಿದ್ದರೂ ಕೂಡ  ಆ ತತ್ವ ಎಲ್ಲರ ಗಮನಕ್ಕೆ ಬರುವುದೇ ಇಲ್ಲ.  ಗಮನಕ್ಕೆ ಬಂದರೂ ತಕ್ಷಣ ಮರೆತು ಹೋಗುವಷ್ಟು ಜಗತ್ತು ಭ್ರಾಮಕತೆಯ ಸೆಳೆತಕ್ಕೆ ಎಳೆದುಕೊಂಡಿರುತ್ತದೆ. ಹೀಗಾಗಿ ಸಂತೋಷದ ಹುಡುಕಾಟದಲ್ಲಿ ಮನುಷ್ಯ ಊರಿನಿಂದ ಊರಿಗೆ, ಸಂಬಂಧಗಳಿಂದ ಸಂಬಂಧಗಳಿಗೆ, ಕೆಲಸಗಳಿಂದ ಕೆಲಸಕ್ಕೆ ಅಲೆಯುತ್ತಾ ತಾತ್ಕಾಲಿಕ engagement ಗಳಲ್ಲಿ ಮನಸ್ಸನ್ನು ದುಡಿಸುತ್ತಾ ಆಯುಷ್ಯ ಕಳೆಯುತ್ತಾನೆ. ಹೀಗಾಗಿ ಒಳ್ಳೆಯ ಜೀವನ ಅಂದ್ರೆ ಏನು ಅಂತ ಇಲ್ಲಿಯ ವರೆಗೂ ಯಾರಿಗೂ ಸರಿಯಾಗಿ ಹೇಳಲಿಕ್ಕೆ ಸಾಧ್ಯವಾಗಿಲ್ಲ.

ವಾಸ್ತವವಾಗಿ ಆನಂದ ಅಥವಾ ಸಂತೋಷದ ಮೂಲವಿರುವುದು ಆತ್ಮದಲ್ಲಿ. ಈ ಆತ್ಮವನ್ನೇ ಅಥವಾ ಆತ್ಮದ ಅಸ್ತಿತ್ವವನ್ನೇ ''ಅಹಂ'' ಅಥವಾ ''ನಾನು'' ಎಂದು ಕರೆಯೋದು. ಕರ್ಮಗಳನ್ನು ಮಾಡುವುದು ಮತ್ತು ಅವುಗಳ ಫಲವನ್ನು ಅಪೇಷ್ಕಿಸುವುದು ''ನಾನು'' ಅಲ್ಲ.  ಈ ಎರಡೂ ಕೆಲಸಗಳನ್ನು ಮಾಡುವುದು ಮನಸ್ಸು ಮತ್ತು ಬುದ್ಧಿ. ಈ "ನಾನು'' ಎನ್ನುವುದು ಮನಸ್ಸು, ದೇಹ, ಬುದ್ಧಿ ಮತ್ತು ಚಿತ್ತಗಳಿಗೆ ಹೊರತಾದದ್ದು. ಸ್ಡಲ್ಪ ಗಮನಿಸಿ ನೋಡಿ. ನನ್ನ ದೇಹ, ನನ್ನ ಮನಸ್ಸು, ನನ್ನ ಬುದ್ಧಿ.. ನನ್ನ ಚಿತ್ತ ಹೀಗೆ ನಾವು ಹೇಳುತ್ತೇವೆ. ''ನಾನು'' ಎನ್ನುವುದು ಎಲ್ಲದಕ್ಕೂ ಸಾಕ್ಷಿ. ಅದು ಏನೂ ಮಾಡುವುದಿಲ್ಲ. ಮನಸ್ಸು, ದೇಹ, ಬುದ್ಧಿ ಮತ್ತು ಚಿತ್ತಗಳಿಗೆ ಹೊರತಾದ ಒಂದು ಅಸ್ತಿತ್ವ ನಮ್ಮಲ್ಲಿದೆ. ನಾವು ಥೇಟರಿನಲ್ಲಿ ಕುಳಿತು ಸಿನೆಮಾ ನೋಡುವಂತೆ ಆ ಅಸ್ತಿತ್ವ(existence) ನಮ್ಮ ಮನಸಿನ, ಬುಧ್ಧಿಯ ವೃತ್ತಿಗಳನ್ನು ಗಮನಿಸುತ್ತಿರುತ್ತದೆ. ಅದು ನಮ್ಮ ಅನುಭವಕ್ಕೆ ಯಾಕೆ ಬರುವುದಿಲ್ಲವೆಂದರೆ, ನಮ್ಮ ಮನಸ್ಸು ಬುದ್ಧಿ ಮುಂತಾದವುಗಳು ಸದಾಕಾಲ active ಆಗಿರುತ್ತವೆ. ಅವುಗಳೆಲ್ಲವನ್ನೂ deactivate ಮಾಡಿದರೆ ಅಥವಾ ಸ್ತಬ್ಧಗೊಳಿಸಿದರೆ ಆ ಆತ್ಮದ ಅಸ್ತಿತ್ವದ ಅನುಭವವಾಗುತ್ತದೆ. ಆ ಅನುಭವವೇ  ಬ್ರಮ್ಹಾನಂದ. ಆ ಬ್ರಮ್ಹಾನಂದದ ಒಂದು ಸಣ್ಣ sample ನಮ್ಮ ಸುಷುಪ್ತಿ( ಕನಸುಗಳಿಲ್ಲದ ಗಾಢ ನಿದ್ರೆ) ಅವಸ್ಥೆ. ಆದರೆ ಆ ಅವಸ್ಥೆ ನಮ್ಮ ಹಿಡಿತದಲ್ಲಿಲ್ಲ. ಅದು ತನ್ನಿಂತಾನೆ ಶುರುವಾಗುತ್ತದೆ ಮತ್ತು ತನ್ನಷ್ಟಕ್ಕೇ ಮುಗಿದು ಹೋಗುತ್ತದೆ. ಆ ಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಲು ನಮ್ಮಿಂದಾಗುವುದಿಲ್ಲ.

ಆ ಆತ್ಮ ಯಾವಾಗಲೂ ಅನಂದದಿಂದ ಇರುತ್ತದೆ. ಈ ಸುಖ- ದುಃಖ ಅನ್ನೋದು ಮನಸಿನ ಒಂದು ಪ್ರವೃತ್ತಿಯಷ್ಟೇ. ಸಂಸ್ಕೃತದಲ್ಲಿ "ಖ'' ಅಂದರೆ ಇಂದ್ರಿಯ. ''ಸುಖ'' ಅಂದರೆ ಇಂದ್ರಿಯಗಳಿಗೆ ಸಹ್ಯವಾದದ್ದು, ಒಗ್ಗುವಂಥದ್ದು ಅಥವಾ ಬೇಕಾದದ್ದು. ಅದೇ ರೀತಿ ''ದುಃಖ'' ಇಂದ್ರಿಯಗಳಿಗೆ ಬೇಡವಾದದ್ದು ಅಥವಾ ಅಸಹ್ಯವಾದದ್ದು. ಮನಸ್ಸು ಕೂಡ ಒಂದು ಇಂದ್ರಿಯವೆಂದೇ ಹೇಳಲಾಗಿದೆ. ಸತ್ವ, ರಜ ಮತ್ತು ತಮ ಈ ಮೂರು ಪ್ರಕೃತಿದತ್ತ ಗುಣಗಳಿಗೆ ಅನುಗುಣವಾಗಿ ಈ ಮನಸ್ಸೆಂಬ ಇಂದ್ರಿಯ ಕೆಲಸ ಮಾಡುತ್ತೆ. ಈ ಮೂರು ಗುಣಗಳಲ್ಲಿ ಯಾವ ಗುಣವನ್ನು ಹೆಚ್ಚಿಕೊಳ್ಳಬೇಕು, ಯಾವುದನ್ನು ಕಡಿಮೆ ಮಾಡಿಕೊಳ್ಳಬೇಕೆಂಬುದನ್ನು ನಮ್ಮ ಬುದ್ಧಿಯಿಂದ ಚಿಂತಿಸಿ ಅದರ ಅನುಗುಣವಾಗಿ ಅವುಗಳಲ್ಲಿ ಏರು ಪೇರು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆದರೆ ಮನಸ್ಸನ್ನು ಕೆಲಸ ಮಾಡದಂತೆ ತಡೆಯುವುದು ಬುದ್ಧಿಗೆ ಅಸಾಧ್ಯ. ಆತ್ಮ ಈ ಎಲ್ಲ ವ್ಯವಹಾರಗಳಲ್ಲಿ ತಲೆ ತೂರಿಸುವುದೇ ಇಲ್ಲ. ಅದು ''ಸಾಕ್ಷೀ, ಚೇತಾ, ಕೇವಲೋ ನಿರ್ಗುಣಶ್ಚ''. ಅದು ಕೇವಲ ಸಾಕ್ಷಿ, ಚೈತನ್ಯ, ಕೇವಲ ಮತ್ತು ನಿರ್ಗುಣ. ಅದಕ್ಕೆ ಸಾತ್ವಿಕ, ರಾಜಸಿಕ, ತಾಮಸಿಕ ಗುಣಗಳಿಲ್ಲ. ಅದೇ ಎಲ್ಲದರ ಮೂಲ ಚೈತನ್ಯ. ಅದನ್ನೇ ಸಚ್ಚಿದಾನಂದ ಅನ್ನೋದು. ಸತ್+ ಚಿತ್ + ಆನಂದ = ಸಚ್ಚಿದಾನಂದ. 
 ಸತ್ = ಯಾವಾಗಲೂ ಇರುವುದು. ಚಿತ್ = ಬೆಳಕಿನ ರೂಪದಲ್ಲಿರುವುದು. ಆನಂದ= ಆನಂದವೇ ತಾನಾಗಿರುವುದು.
ಇವು ಮೂರು ಆತ್ಮದ ಗುಣ, ಸ್ವರೂಪ ಮತ್ತು ಸ್ವಭಾವಗಳು. ಅದರ ''ಗುಣ'' ಅನಂತವಾದರೆ, ಚಿತ್ ಅದರ ''ಸ್ವರೂಪ'' ಮತ್ತು ಅದರ ''ಸ್ವಭಾವ'' ಆನಂದ.

ಆತ್ಮದ ಮೂಲಸ್ವಭಾವೇ ಆನಂದವಾಗಿರುವಾಗ ನಮಗೆ ಯಾಕೆ ಯಾವಾಗಲೂ ಆನಂದದ ಅನುಭೂತಿಯಾಗುವುದಿಲ್ಲ? ಅನ್ನುವ ಪ್ರಶ್ನೆ ಇಲ್ಲಿ ಹುಟ್ಟುತ್ತೆ.
ಹದಿನೆಂಟನೇ ಶತಮಾನದ ದಾರ್ಶನಿಕರೊಬ್ಬರು ತಮ್ಮ ಸರಳವಾದ ಪದ್ಯದ ಮೂಲಕ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.  
ಮನ ಕಂಜಾಲ್  ಹೈ ಚೇತನ ಜಲ ಕಾ
ಜಲ ಕೀ ನ ಲಾಭ ನ ಹಾನಿ ಹೈ ತಿನಕಾ

ಒಂದು ದೊಡ್ಡ ಸರೋವರದಲ್ಲಿ ನೀರಿನ ಮೇಲೆ ಜಮೆಯಾಗಿರುವ ಕಸ, ಕಡ್ಡಿ, ಪಾಚಿ ಮುಂತಾದವುಗಳಿಂದ ಒಂದು ತೆಳುವಾದ ಪದರ ನಿರ್ಮಾಣವಾಗಿರ್ತದೆ. ದಂಡೆಯ ಮೇಲೆ ನಿಂತು ನೋಡುವವನಿಗೆ ಅದು ಸಮತಟ್ಟಾದ ಪಾಚಿಯ ಅಥವಾ ಕಸದ ರಾಶಿಯಂತೆಯೇ ಕಾಣುತ್ತದೆ. ಆದರೆ ಆ ಕಸದ ಪರದೆಯ ಕೆಳಗೆ ಆಳವಾದ, ಶುದ್ಧವಾದ, ನಿರ್ಮಲವಾದ ನೀರು ತುಂಬಿರ್ತದೆ. ಈ ದಾರ್ಶನಿಕರು ಆತ್ಮವನ್ನು ಆಳವಾದ ಸರೋವರದ ನೀರಿಗೆ ಮತ್ತು ಆ ಕಸದ ಮೇಲ್ಪರದೆಯನ್ನು ಮನಸ್ಸಿಗೆಹೋಲಿಸಿದ್ದಾರೆ. ಅವರು ಮುಂದುವರೆದು, ''ಜಲ ಕಿ ನ ಲಾಭ ನ ಹಾನಿ ಹೈ ತಿನಕಾ'' ಈ ಕಸದ ಮೇಲ್ಪರದೆಯಿಂದ ಆ ನೀರಿಗೆ ಯಾವುದೇ ಲಾಭವಿಲ್ಲ ಮತ್ತು ಯಾವುದೇ ಹಾನಿಯೂ ಇಲ್ಲ ಅಂದಿದ್ದಾರೆ. ನೀರು ತನ್ನ ಮೇಲೆ ಯಾವುದೇ ಕಸವನ್ನು ಬಯಸುವುದಿಲ್ಲ, ಮತ್ತು ಅದಾಗಿಯೇ ಬಂದು ಬಿದ್ದರೂ ಕೂಡ ಮುಳುಗುವಂಥದ್ದನ್ನು ಮುಳುಗಿಸಿ, ತೇಲುವಂಥದ್ದನ್ನು ತೇಲಿಸಿ ನೀರು ತನ್ನ ಶುಧ್ಧತೆಗೆ ತಾನು ಮರಳಿ ತನ್ನ ಅಸ್ತಿತ್ವದಲ್ಲಿ ತಾನಿರುತ್ತದೆ. ಒಂದುವೇಳೆ ಮೇಲಿನ ಕಸದ ಪರದೆ ಹೊರಟುಹೋಗಿ ಬಿಸಿಲು ಬಿದ್ದರೆ ಆ ನೀರು ಆವಿಯಾಗಿ ಮತ್ತೊಂದು ಕಡೆ ಹೂಗುತ್ತದೆಯೇ ಹೊರತು ಆ ನೀರಿನ ಅಸ್ತಿತ್ವಕ್ಕ ಭಂಗ ಎಂದಿಗೂ ಬರುವುದಿಲ್ಲ. ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಆ ನೀರು ಸಂಚರಿಸುತ್ತಲೇ ಇರುತ್ತದೆ. ಆದರೆ ಆ ನೀರು ಎಂದಿಗೂ ''ಇಲ್ಲ'' ಅಂತಾಗುವುದಿಲ್ಲ. ಅದು ಯಾವಾಗಲೂ ''ಇರುತ್ತದೆ''.  ಅಂತಹ ಅಸ್ತಿತ್ವವೇ ಆದ ಆನಂದರೂಪಿಯಾದ ಆತ್ಮದ ಮೇಲೆ ಈ ''ಕಂಜಾಲ್'' ಅಂದರೆ ಕಸಕಡ್ಡಿಯಿಂದ ನಿರ್ಮಿತವಾದ ''ಮನಸ್ಸೆಂಬ ಮೇಲ್ಪದರ'' ಇರುವುದರಿಂದಾಗಿ ''ನಾನು'' ಅಂದರೆ ''ನನ್ನ ಮನಸ್ಸು'' ಎನ್ನುವ ಭ್ರಮೆಯನ್ನು ಉಂಟಾಗಿರ್ತದೆ. ಆ ಮನಸ್ಸೆಂಬ ''ಕಂಜಾಲ್'' ಅಂದರೆ ಕಸದಂತಹ ಮೇಲ್ಪರದೆಯನ್ನು  ಸರಿಸಿ ಇಣುಕಿ ಹಾಕಿದರೆ ಶುದ್ಧವಾದ ಆಳ ನೀರಿನಂತಹ ಆತ್ಮದ ಅನುಭವ ಉಂಟಾಗ್ತದೆ.
ಪ್ರಕೃತಿಯಿಂದ ಗ್ರಹಿಸಿದ ಮೂರು ಗುಣಗಳ ಆಧಾರದ ಮೇಲೆ ಕೆಲಸ ಮಾಡುವ ಮನಸ್ಸು ಜಾಗೃತಿ ಮತ್ತು ಸ್ವಪ್ನ ಈ ಎರಡೂ ಅವಸ್ಥೆಗಳಲ್ಲಿ ನಿರಂತರವಾಗಿ ಕಾರ್ಯಶೀಲವಾಗಿರುತ್ತದೆ. ಲೋಕದ ಸಂಗತಿಗಳ, ವಿಷಯಗಳ ಸಂಪರ್ಕಕ್ಕೊಳಗಾಗುತ್ತಿದ್ದಂತೆಯೇ ಮೂರರಲ್ಲಿ ಯಾವ ಗುಣ ಪ್ರಬಲವಾಗಿದೆಯೋ ಅದಕ್ಕೆ ತಕ್ಕಂತೆ ಆ ವಿಷಯ-ವಸ್ತುವನ್ನು ಬಯಸುತ್ತದೆ. ಮನಸಿನ ಬಯಕೆಯನ್ನು ಬುದ್ಧಿ ಪರಾಮರ್ಶಿಸುತ್ತದೆ. ಬುದ್ಧಿಯ ಪರಾಮರ್ಶೆಯನ್ನು ಗಮನಿಸಿದ ಚಿತ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಚಿತ್ತದ ನಿರ್ಧಾರಕ್ಕೆ ಅನುಗುಣವಾಗಿ ಅಂಗಾಂಗಗಳು ಕೆಲಸ ಮಾಡಲು, ಪ್ರತಿಕ್ರಯಿಸಲು ಶುರು ಮಾಡುತ್ತವೆ.ಅಂಗಾಂಗಗಳ ಕ್ರಿಯೆಗೆ ಸಿಗುವ ಪ್ರತಿಕ್ರಿಯೆಯನ್ನು ಗಮನಿಸಿದ ಮನಸ್ಸು ತನ್ನ ಮುಂದಿನ ಬಯಕೆಯನ್ನು ಮುಂದಿಡುತ್ತದೆ. ಬುದ್ಧಿ ಮತ್ತೆ ಪರಾಮರ್ಶಿಸುತ್ತದೆ..  ಇವೆಲ್ಲಾ ಕ್ಷಣಾರ್ಧಕ್ಕಿಂತಲೂ ವೇಗವಾಗಿ ನಡೆದು ಹೋಗುತ್ತವೆ. ಹೀಗೆ ಮನಸ್ಸು, ಬುದ್ಧಿ, ಚಿತ್ತ ಮತ್ತು ಶರೀರ ಇವೆಲ್ಲ ನಿರಂತರವಾಗಿ ಬಿಡುವಿಲ್ಲದೇ ಕಾರ್ಯಪ್ರವೃತ್ತವಾಗಿರುತ್ತವೆ. ಈ ಮನಸು-ದೇಹಗಳ  ಚಟುವಟಿಕೆ ವೃತ್ತದಂತೆ ತಿರುಗುತ್ತಲೇ ಇರುತ್ತದೆ.  ವಿಷಯದಿಂದ ವಿಷಯಕ್ಕೆ, ದೃಶ್ಯದಿಂದ ದೃಶ್ಯಕ್ಕೆ ಮನಸ್ಸು ಹಾರುತ್ತಲೇ ಇರುತ್ತದೆ.

ಆನಂದರೂಪಿಯಾದ ಆತ್ಮ ಎನ್ನುವುದು ಹುಣ್ಣಿಮೆ ಚಂದ್ರನಂತಾದರೆ ಈ ಮನಸ್ಸು ಒಂದು ಪಾತ್ರೆಯಲ್ಲಿರುವ ನೀರಿನಂತೆ. ಪಾತ್ರೆಯಲ್ಲಿರುವ ನೀರು ಯಾವುದೇ ಚಲನೆಯಿಲ್ಲದೇ ಶಾಂತವಾದಾಗ ಚಂದ್ರನಂತಹ ಆತ್ಮದ ಪ್ರತಿಬಿಂಬ ಆ ನೀರಿನ ಪಾತ್ರೆಯಲ್ಲಿ ಮೂಡುತ್ತದೆ. ''ಅಂದರೆ ಯಾವಾಗಲೂ ಇರುವ ಆನಂದವನ್ನು  ಸ್ವಲ್ಪ  ಹೊತ್ತಿನ ಮಟ್ಟಿಗೆ ಮನಸ್ಸು ಪ್ರತಿಫಲಿಸುತ್ತದೆ.'' ಮನಸ್ಸು ಪಾತ್ರೆಯಲ್ಲಿರುವ ನೀರಿನಂತೆ ಹೋಯ್ದಾಡುವಾಗ ಆ ಪ್ರತಿಬಿಂಬ ಕಾಣಿಸುವುದಿಲ್ಲ. ಆದರೆ ಆ ಚಂದ್ರ ಯಾವಾಗಲೂ ಅಲ್ಲಿಯೇ ಇರುತ್ತಾನೆ. ಮನಸ್ಸೆಂಬ ನೀರು ಸ್ಥಿರವಾದಕೂಡಲೇ ಬಿಂಬ ಕಾಣಿಸುತ್ತದೆ. ನೀರಿನಲ್ಲಿ ತೆರೆಗಳು ಮೂಡಿದ ಕೂಡಲೇ ಬಿಂಬ ಕಾಣಿಸುವುದಿಲ್ಲ. ಮನಸ್ಸಿನಲ್ಲಿನ ಪ್ರೀತಿ, ಕರುಣೆ, ಕೋಪ ಮುಂತಾದ ಭಾವನೆಗಳು ಎಂಬ ವಿಭಾಗ ಕೂಡ ಗುಣಗಳನ್ನು ಆಧರಿಸಿದ್ದು. (ಈ  emotion ಗಳ ಪ್ರಮಾಣವನ್ನು ಅಳೆಯುವ ವಿಧಾನವನ್ನು ಆಧುನಿಕ ವಿಜ್ಞಾನ ಕಂಡುಕೊಂಡಿದೆ) ಮನಸ್ಸನ್ನು ಹೇಗೆ ಚೆನ್ನಾಗಿ ಇಟ್ಟುಕೊಳ್ಳಬೇಕು, ಮನಸ್ಸಿನ ಬೆಳವಣಿಗೆ ಹೇಗಾಗುತ್ತದೆ, ಮನಸ್ಸಿನ ಸ್ವಭಾವವೇನು, ಎಂತಹ ಘಟನೆಗೆ ಮನಸ್ಸು ಹೇಗೆ ಪ್ರತಿಕ್ರಯಿಸುತ್ತದೆ..?  ಮುಂತಾದ ಸಂಗತಿಗಳನ್ನು ಮನಃಶಾಸ್ತ್ರ ತಿಳಿಸಿಕೊಡುತ್ತದೆಯಾದರೂ ಮನಸ್ಸಿಗೆ ಸಂತೋಷವಾಗಲು ಕಾರಣವಾಗುವ ''ಮೂಲ'' ವಸ್ತುನ್ನು ಗುರುತಿಸುವಲ್ಲಿ ಅದೂ ಕೂಡ ವಿಫಲವಾಗುತ್ತದೆ.
ಈ ಮನಸ್ಸಿನ ಭಾವನೆಗಳು ತರಂಗಗಳಂತೆ ಏಳುತ್ತ ಶಾಂತವಾಗುತ್ತ ಇರುವಾಗ ನಡು ನಡುವೆ ಅಸ್ಪಷ್ಟವಾದ ಆನಂದದ ಅನುಭೂತಿ ಎಲ್ಲ ಜೀವಿಗಳಿಗೂ ಆಗುತ್ತಲೇ ಇರುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟಗಳಿಂದ ಬೇಸತ್ತು ಹೋಗಿದ್ದರೂ, ಅನಾರೋಗ್ಯ ಅಥವಾ ಅಪಘಾತದಿಂದ ಹಾಸಿಗೆ ಹಿಡಿದು ಪರಾಧೀನವಾಗಿ, ಶರೀರ ಸಂಪೂರ್ಣವಾಗಿ ಜೀರ್ಣವಾಗಿ ಹೋಗಿದ್ದರೂ ಮನುಷ್ಯನಲ್ಲಿ  ಆ ಅನಂದದ ಅನುಭೂತಿಯಿಂದಾಗಿಯೇ ''ಜಿಜೀವಿಷಾ'' ಅಂದರೆ ಜೀವಿಸುವ ಆಸೆ ಉಳಿದುಕೊಂಡಿರುತ್ತದೆ. ಮನುಷ್ಯ ಏನೇ ಆದರೂ ಸಾಯಲು ಇಚ್ಛೆ ಪಡುವುದಿಲ್ಲ. ಯಾಕೆಂದರೆ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಮನಸ್ಸಿನಲ್ಲಿ ಆಗಾಗ ಆಗುವ ಆತ್ಮದ ಪ್ರತಿಫಲದ ಆನಂದ ಮನುಷ್ಯನನ್ನು ಬದುಕಿರುವಂತೆ ಮಾಡುತ್ತಿರುತ್ತದೆ. ಮನಸ್ಸು ಸಂಪೂರ್ಣವಾಗಿ ನಿಷ್ಕ್ರಿಯವಾಗಿರದ ಕಾರಣ ''ಪೂರ್ಣಾನಂದ'' ಅಥವಾ ಬ್ರಹ್ಮಾನಂದದ ಅನುಭವವಾಗುವುದಿಲ್ಲ ಅಷ್ಟೇ. (ಅತಿಯಾಗಿ ಉದ್ರೇಕಗೊಂಡ ಮನಸ್ಥಿತಿಯಲ್ಲಿ ಆತ್ಮಹತ್ಯೆ ಸಂಭವಿಸುತ್ತದೆ, ಆದರೆ ಆ ಉದ್ರೇಕವನ್ನು ಸ್ವಲ್ಪ ನಿಯಂತ್ರಿಸಿದರೆ ಸಾಕು, ಒಂದೆರಡು ಕ್ಷಣಗಳಲ್ಲಿ  ಮತ್ತೆ ಜಿಜೀವಿಷಾ ಶುರುವಾಗುತ್ತದೆ.)
ಮನಸ್ಸಿನ emotion ಗಳನ್ನೇ ನಾವು ಜೀವನದ ''ಸುಖ'' ಎನ್ನುವ ಅಭಿಪ್ರಾಯ ಹೊಂದಿರುವುದುರಿಂದ ಕೇವಲ ಮನಸ್ಸನ್ನು ಕೇಂದ್ರದಲ್ಲಿಟ್ಟುಕೊಂಡು ನಮ್ಮ ಜೀವನವನ್ನು ನಡೆಸುತ್ತಿದ್ದೇವೆ. man is nothing but mind ಅನ್ನುವುದು ಪಶ್ಚಿಮದ ಆಲೋಚನೆ. ಭಾರತದ ಆಲೋಚನೆ ಮತ್ತು ಸಂಶೋಧನೆ ಅದಕ್ಕಿಂತ ಎಷ್ಟೋ ಮುಂದಿದೆ. ಆದರೂ ನಾವು ನಮ್ಮವರ ವಿಚಾರಗಳಿಂದ disconnect ಆಗಿದ್ದೇವೆ.
 '' ಪ್ರಪಂಚದಲ್ಲಿ ಮೊದಲು ಪೂರ್ವದ ಚಿಂತನೆ, ಪಶ್ಚಿಮದ ಚಿಂತನೆ ಎನ್ನುವ ಎರಡು ವಿಭಿನ್ನ ವರ್ಗಗಳಿದ್ದವು. ಆದರೆ ಈಗೆ ಎಲ್ಲಾ ಒಂದೇ ಆಗಿದೆ. ಪೂರ್ವವೂ ಕೂಡ ಪಶ್ಚಿಮವೇ ಆಗಿ ಹೋಗಿದೆ. ಪಶ್ಚಿಮವೇ ಎಲ್ಲ ದಿಕ್ಕಿಗೂ ಹರಡಿದೆ'' ಅನ್ನುವ ಮಾತನ್ನು ಓಶೋ ಮೂವತ್ತು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಇಂತಹ ಪಶ್ಚಿಮದ ಪ್ರಭಾವದ, ಶಿಕ್ಷಣ, ಮಾಹಿತಿ ಮತ್ತು ಪ್ರೇರಣೆಗಳನ್ನು ಪಡೆಯುತ್ತಲೇ ಬೆಳೆಯುವ ವ್ಯಕ್ತಿ ''ಪೂರ್ವ''ದ ಚಿಂತನೆಯ ತಲೆ-ಬುಡ ಅರ್ಥ ಮಾಡಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. it's completely foreign for us now.
ಈ ಮೊಬೈಲ್ ಫೋನಿನ ಮೆಮೊರಿ ಕಾರ್ಡನ್ನು Format ಮಾಡುವಂತೆ ನಮ್ಮ ಮುಂಚಿನ ಗ್ರಹಿಕೆ, ಶಿಕ್ಷಣದ ಪ್ರಭಾವ ಮುಂತಾದವುಗಳನ್ನೆಲ್ಲ ಅಳಿಸಿ ಹಾಕಿ Unlearn ಮಾಡಿಕೊಂಡು ಹೊಸದಾಗಿ ನಾವು ಪೂರ್ವದ ಚಿಂತನೆಯ ಪರಿಚಯ ಮಾಡಿಕೊಂಡರೆ ಈ ಆತ್ಮ ಮತ್ತು ಆತ್ಮಾನಂದದ ಸಂಗತಿಗಳೆಲ್ಲ ಸ್ವಲ್ಪ ಮಟ್ಟಿಗೆ ತಿಳಿದಾವು.

ಇನ್ನು ಸಂತೋಷ ಅಥವಾ ನೆಮ್ಮದಿಯ ವಿಷಯಕ್ಕೆ ಮರಳುವುದಾದರೆ ಈ ದುಃಖ, ಸುಖ ಇವುಗಳೆಲ್ಲ ಕೇವಲ ಇಂದ್ರಿಯಗಳಿಗೆ ಸಂಬಂಧಿಸಿದ್ದು, ''ನಾನು'' ಈ ಇಂದ್ರಿಯಗಳಿಗೆ ಮತ್ತು ಮನಸ್ಸಿಗೆ ಹೊರತಾದ ಅಸ್ತಿತ್ವ ಎನ್ನುವ ಅನುಸಂಧಾನವನ್ನು ಬುದ್ಧಿಗೆ ಮನದಟ್ಟು ಮಾಡಿಸಿ ಚಿತ್ತವನ್ನು ಪಳಗಿಸಿಟ್ಟುಕೊಂಡರೆ  ನಮ್ಮದೇ ಶರೀರದ ಸುಖ-ದುಃಖ ಮತ್ತು ನಮ್ಮದೇ ಮನಸ್ಸಿನ emotion ಗಳನ್ನು ಥೇಟರಿನಲ್ಲಿ ಕುಳಿತು ಪರದೆಯ ಮೇಲಿನ ಚಿತ್ರಗಳನ್ನು ನಿರ್ಲಿಪ್ತವಾಗಿ ನಾವು ಹೇಗೆ ನೋಡಿ ಆನಂದಿಸುತ್ತೇವೆಯೋ ಹಾಗೆ ನಿರ್ಲಿಪ್ತವಾಗಿಯೇ ಉಳಿದು ಆನಂದಿಸಬಹುದು.

No comments:

Post a Comment