Tuesday, January 14, 2014

''ಈ ದೇಶಕ್ಕಾಗಿ ನನ್ನ ಗಂಡನನ್ನೇ ಕೊಟ್ಟವಳಪ್ಪಾ ನಾನು…'' ಎನ್ನುವ ಮಾತಿನ ಹಿಂದೆ

ಈ ಫೆಸ್ ಬುಕ್ಕಿನಲ್ಲಿ ಬೇಕಾದದ್ದು ಮತ್ತು ಬೇಡವಾದದ್ದು ಎಲ್ಲ ಬಂದು ಪೋಸ್ಟ್ ಗಳ ರೂಪದಲ್ಲಿ ನಮ್ಮ ಕಣ್ಣುಗಳಿಗೆ ರಾಚುತ್ತಿರುತ್ತದೆ. ಕೆಲವೊಮ್ಮೆ ಅವುಗಳಿಗೆ ಪ್ರತಿಕ್ರಯಿಸದೇ ನಮ್ಮತನವನ್ನು ಕಾಯ್ದುಕೊಳ್ಳುವುದೇ ಒಂದು ಸವಾಲಾಗಿಬಿಡುತ್ತದೆ. ಕೆಟ್ಟದ್ದಕ್ಕಿಂತ ಒಳಿತು ಹೆಚ್ಚು ದಕ್ಕುವುದರಿಂದ ಈ ಜಾಲತಾಣಗಳನ್ನು ಬಿಟ್ಟು ಬಿಡುವಂತೆಯೂ ಇಲ್ಲ. ವೈಯಕ್ತಿಕ ಅಭಿವ್ಯಕ್ತಿಗೆ ವಿಪುಲವಾದ ಅವಕಾಶವನ್ನು ಈ ವೇದಿಕೆ ನೀಡುವುದರಿಂದ ತಮ್ಮ ಪ್ರತಿಷ್ಠೆ ಹೆಚ್ಚಿಸುವ ಚಿತ್ರಗಳು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ವೈಯಕ್ತಿಕ ನೋವು ತೋಡಿಕೊಂಡು ಗೋಳಾಡುವವರು ಕೂಡ ಪುಷ್ಕಳವಾಗಿ ಕಂಡು ಬರುತ್ತಾರೆ.   ಚಿಕ್ಕ ಮಕ್ಕಳು ತಮ್ಮ ಕಡೆಗೆ ಯಾರೂ ಗಮನ ಕೊಡುತ್ತಿಲ್ಲ ಎಂದೆನಿಸಿದಾಗೆಲ್ಲ ಜೋರಾಗಿ ದ್ವನಿ ಏರಿಸಿ ''ಅಬ್ಬೂ''  ಅಂತ ಅತ್ತು ಎಲ್ಲರನ್ನೂ ತಮ್ಮೆಡೆಗೆ ಸೆಳೆದುಕೊಂಡುಬಿಡುತ್ತವೆ. ಹಾಗೆಯೇ ಈ ಗೋಳು ತೋಡಿಕೊಳ್ಳುವ ಯವಸ್ಕರದ್ದೂ ಒಂಥರಾ ''ಅಬ್ಬೂ'' ಸಿಂಡ್ರೋಮ್. ನಾನು ಕೂಡ ಈ ಗೋಳಿನ ಗೀಳಿನಿಂದ ಹೊರತಾದವನಲ್ಲ. ನಮ್ಮೆಲ್ಲರ ಮನಸ್ಸು ಸ್ವಾನುಕಂಪ ಮತ್ತು ಪರರ ಸಾಂತ್ವನವನ್ನು ಎಂಜಾಯ್ ಮಾಡುತ್ತದೆ. ಜೊತೆಗೆ ಸ್ವಾನುಕಂಪ ಯಥೇಚ್ಚವಾಗಿ ಸುಳ್ಳುಗಳನ್ನು ಕೂಡ ಹೇಳಿಸುತ್ತದೆ. ಹೀಗಾಗಿ ಬಹುತೇಕರು ಹೇಳಿಕೊಳ್ಳುವ ಗೋಳಿನಲ್ಲಿ ಸುಳ್ಳಿನ ಅಂಶ ಎಷ್ಟಿರುತ್ತದೆಯೋ, ಅದಕ್ಕೆ ಪ್ರತಿಯಾಗಿ ಸಿಗುವ ಅನುಕಂಪವೂ ಅದಕ್ಕಿಂತ ಹೆಚ್ಚು ಕೃತಕವಾದ ಸುಳ್ಳಿನ ಮುಖವಾಡವನ್ನು ಹೊಂದಿರುತ್ತದೆ. ಆದರೆ ಆ ಕ್ಷಣದಲ್ಲಿ ಅನುಕಂಪ ಬಯಸಿದ ಮತ್ತು ನೀಡಿದ ವ್ಯಕ್ತಿಗಳಿಬ್ಬರಿಗೂ ಒಂದು ರೀತಿಯ ಸಮಾಧಾನದಂತಹ ಅನುಭವ ಆಗಿರುತ್ತದೆ.
ಮೊನ್ನೆ ಫೆಸ್ ಬುಕ್ ನಲ್ಲಿ ಟಿವಿ ಪತ್ರಕರ್ತರೊಬ್ಬರು ಹಾಕಿದ ಒಂದು ಪೋಸ್ಟ್  ಬಂದು ನನ್ನನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ಕದಡಿ ಹಾಕಿತು. ಮುಂಬೈ ಮೇಲೆ ಉಗ್ರರ ದಾಳಿ ನಡೆದ ದಿನಾಂಕ ಕ್ಯಾಲೆಂಡರಿನಲ್ಲಿ ಮರುಕಳಿಸಿದ ಸಂದರ್ಭವಾಗಿ ಆ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪೋಲಿಸ್ ಅಧಿಕಾರಿ ಸಲಾಸ್ಕರ್ ಅವರ ಪತ್ನಿಯನ್ನು ಈ ಪತ್ರಕರ್ತರು ತಮ್ಮ ಟಿವಿಗಾಗಿ ಸಂದರ್ಶಿಸಲು ಹೋದಾಗ ನಡೆದ ಘಟನೆಯನ್ನು ಅವರು ಫೆಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು.

ಆ ಪೋಸ್ಟ್ ಹೀಗಿದೆ..
''ಅಶೋಕ್ ಚಕ್ರ ಪುರಸ್ಕೃತರ ಮನೆಯವರೊಬ್ಬರಿಗೆ ಭಾರತದ ಎಲ್ಲಾ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಇರತ್ತೆ. ಅದಕ್ಕೊಂದು ಐಡೆಂಟಿಟಿ ಕಾರ್ಡ್ ಕೊಟ್ಟಿರ್ತಾರೆ. ಅದನ್ನ ಟೋಲ್ನಲ್ಲಿ ಕುಳಿತಿದ್ದ ಹುಡುಗನಿಗೆ ತೋರಿಸಿದೆ.
’ನಿಮ್ಮ ಕಾರಿಗೆ ರೆಡ್ ಲೈಟ್ ಇಲ್ಲ, ಮತ್ತೆ ನೀವ್ಹೆಂಗೆ ವಿ.ಐ.ಪಿ ಆಗ್ತೀರಿ..?’ ಅಂತ ಕೇಳಿದ...
ಏನುತ್ತರ ಕೊಡಬೇಕೋ ಅರ್ಥ ಆಗಲಿಲ್ಲ... ’ನಾನು, ವಿ.ಐ.ಪಿ ಅಲ್ಲಪ್ಪಾ... ಮರಣೋತ್ತರ ಅಶೋಕ ಚಕ್ರ ಪಡೆದ ಅಧಿಕಾರಿಯ ಹೆಂಡತಿ. ನಮಗೆ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಟ್ಟಿರೋ ಸರಕಾರಿ ಆದೇಶ ಇಲ್ಲಿದೆ ನೋಡು’ ಅಂದೆ...

’ಇಲ್ಲಾರೀ... ಇಂಥವಕ್ಕೆಲ್ಲ ಅಲವ್ ಮಾಡಲ್ಲ... ಐವತ್ತು ರುಪಾಯಿ ಕೊಡಿ’ ಅಂದ ಅವನು...

’ಈ ದೇಶಕ್ಕಾಗಿ ಗಂಡನ್ನೇ ಕೊಟ್ಟವಳಪ್ಪಾ ನಾನು... ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ ಅಂತಂದು ದುಡ್ಡು ಕೊಟ್ಟು ಟಿಕೆಟ್ ತಗೊಂಡೆ... ಅದೇ ಕೊನೆ... ಮತ್ಯಾವತ್ತೂ ನಾನು ಯಾವ ಟೋಲ್ನಲ್ಲೂ ನನ್ನ ಗಂಡನ ಅಶೋಕ ಚಕ್ರದ ಕಾರ್ಡ್ ತೋರೀಸಲಿಲ್ಲ ಅಂದರು’

ಯಾಕೋ ಕಣ್ಣೀರು ತಡೆಯಲೇ ಇಲ್ಲ... ಕ್ಯಾಮರಾ ಮ್ಯಾನ್ಗೆ ಶೂಟಿಂಗ್ ನಿಲ್ಲಿಸು ಅಂತಂದುಬಿಟ್ಟೆ... ಕೆಲವು ನಿಮಿಷ ಬೇಕಾದವು ಯಥಾಸ್ಥಿತಿಗೆ ಬರೋದಕ್ಕೆ...

’ನಿಮ್ಮ ಗಂಡ ಒಂದು ನಿಯತ್ತಿಲ್ಲದ ಸಮಾಜಕ್ಕಾಗಿ ಬಡಿದಾಡಿ ಸತ್ತು ಹೋದರು ಅಂತ ಈ ಐದು ವರ್ಷಗಳಲ್ಲಿ ಯಾವತ್ತಾದರೂ ಅನ್ನಿಸಿದೆಯಾ..?’ ಮ್ಲಾನವಾಗಿ ಕೇಳಿದೆ...''  


ಹೀಗೆ  ಆ ಪತ್ರಕರ್ತರು ಹಂಚಿಕೊಂಡ ಸಂಗತಿ ಎಂಥವರನ್ನೂ ಕೂಡ ಒಂದು ಕ್ಷಣ ಕಲಕಿ ಹಾಕಬಲ್ಲ ಶಕ್ತಿ ಹೊಂದಿದೆ.  ದೇಶಕ್ಕಾಗಿ ಪ್ರಾಣ ತೆತ್ತ ಒಬ್ಬ ವ್ಯಕ್ತಿಯ ಕುಟುಂಬವನ್ನು ನಮ್ಮ ಭಾರತ ನಡೆಸಿಕೊಳ್ಳುವ ರೀತಿ ಇದೇನಾ ..? ಎಂದು ನಮ್ಮ ಬಗ್ಗೆ ನಮಗೇ  ಕೀಳರಿಮೆ ಮತ್ತು ಆ ಹೆಣ್ಣುಮಗಳ ಬಗ್ಗೆ ಹೆಮ್ಮೆ ಆ ಕ್ಷಣದಲ್ಲಿ ಮೂಡುತ್ತವೆ. ನಮ್ಮ ಭಾರತ ಸರ್ಕಾರದ ಬಗ್ಗೆ, ನಮ್ಮ  ವ್ಯವಸ್ಥೆಯ ಬಗ್ಗೆ ನಮಗೆ ಸಿಟ್ಟು ಬರುತ್ತದೆ. ಇದೆಲ್ಲ ಸರಿ... ನಮ್ಮ ಭಾರತದೇಶ ತನ್ನ ನೆಲದ ಹುತಾತ್ಮರನ್ನು ಎಂದೂ ಸರಿಯಾಗಿ ಗೌರವಿಸಿಲ್ಲ ಅಂತಲೇ ಭಾವಿಸೋಣ, ಈ ಟಿವಿ ಪತ್ರಕರ್ತರ ಪ್ರಕಾರ ''ನಮ್ಮದು ನಿಯತ್ತಿಲ್ಲದ ದೇಶ''. ಅದನ್ನೂ ನಾವು ಒಪ್ಪಿಕೊಳ್ಳೋಣ.  ಭಾರತೀಯ ಪ್ರಜೆಯ ಸ್ಥಾನದಲ್ಲಿ ನಿಂತು ನೋಡಿದರೆ ಇದು ನಿಜಕ್ಕೂ ದುಃಖದ ಸಂಗತಿ. 

 ಆದರೆ ಸದರಿ ಪತ್ರಕರ್ತರು ವಿವರಿಸಿದ ಘಟನೆಯಲ್ಲಿನ ಮಹಿಳೆಯ ಬಗ್ಗೆ ನನಗೆ ತುಂಬಾ ಗಾಢವಾಗಿ ಅನಿಸಿದ್ದು ''ಈ ಹೆಣ್ಣುಮಗಳು ಅನಗತ್ಯವಾಗಿ ಇಲ್ಲದ ದುಃಖವನ್ನು ಮೈಮೇಲೆ ಎಳೆದುಕೊಂಡು ಅದರಲ್ಲಿ ಮುಳುಗುಹಾಕುವುದರಲ್ಲಿ ನಿರತಳಾಗಿದ್ದಾಳೆ'' ಅಂತ.  ಹಾಗೆ ಅನಿಸಿದ ಕೂಡಲೇ ನನ್ನ ಮನಸ್ಸು ಈ ದೇಶಭಕ್ತಿಯಿಂದ,  ಭಾವುಕತೆಯಿಂದ ಅಥವಾ ಕನಿಕರದ ಭಾವದಿಂದ ಹೊರಬಂದುಬಿಟ್ಟಿತು. 
ಆ ತಾಯಿಯ ಜೊತೆಗೆ ನಡೆದದ್ದು ಸರಿಯೋ ತಪ್ಪೋ ಅನ್ನುವುದರ ವಿಮರ್ಶೆಗೆ ಹೋಗುವುದರ ಬದಲಾಗಿ ನನ್ನ ಮನಸ್ಸು '' ಈ ಹೆಣ್ಣುಮಗಳ ದುಃಖಕ್ಕೆ ಕಾರಣವೇನು, ಮತ್ತು ಆ ದುಃಖದ ನಿವೃತ್ತಿ ಹೇಗೆ ..? '' ಅನ್ನುವುದರ ಬಗ್ಗೆ ಮಾತ್ರ ಆಲೋಚಿಸುತ್ತಿತ್ತು. 
ಸಾವುಗಳು ಎಲ್ಲರ ಮನೆಯಲ್ಲೂ ಸಂಭವಿಸುತ್ತವೆ. ಮನೆಯ ಯಜಮಾನ ಯಾವುದೇ ಕಾರಣದಿಂದಾಗಿ ತೀರಿಕೊಂಡರೂ  ಮನೆಯ ಸದಸ್ಯರು ಕಂಗಾಲಾಗುವುದು ಸಹಜ. ಆದರೆ ಇಲ್ಲಿ ಈಕೆಯ ಗಂಡ ಮಡಿದದ್ದು ಉಗ್ರವಾದಿಗಳ ದಾಳಿಯಲ್ಲಿ. ಹೀಗಾಗಿ ಆಕೆಯ ದುಃಖದ ಪ್ರಮಾಣ ಹೆಚ್ಚೋ? ಅಥವಾ ಅವಳ ದುಃಖವನ್ನು ಗಮನಿಸುವವರು, ಅನುಕಂಪ ತೋರುವವರು ಇದ್ದಾರೆ  ಅನ್ನುವ ಕಾರಣಕ್ಕೆ ಇಷ್ಟು ದುಃಖವೋ?  ಇಲ್ಲಿನ ದುಃಖಕ್ಕೆ ಕಾರಣ ಆ ಟೋಲ್ ಗೇಟಿನ ಹುಡುಗನ ಅಜ್ಞಾನವೊ, ಅಥವಾ ಈಕೆಯ ಅಜ್ಞಾನವೊ ? ಮುಂತಾಗಿ ನನ್ನ ಮನಸ್ಸು ಪ್ರಶ್ನೆಗಳನ್ನು ಕೇಳುತ್ತಾ ಅವುಗಳಿಗೆ ತಾನೇ ಉತ್ತರಿಸಿಕೊಳ್ಳುತ್ತಾ ಹೋಯಿತು. 

 ನನ್ನ ಆ ಕ್ಷಣದ ವಿಚಾರಧಾರೆಯನ್ನಿ ಇಲ್ಲಿ ನಿಮ್ಮ ಮುಂದಿಡುತ್ತೇನೆ.. 
( ನನ್ನ ಆಲೋಚನೆ ಅಮಾನವೀಯ, ಅವಿವೇಕ ಹಾಗೂ ಮುರ್ಖತೆಯಿಂದ ಕೂಡಿದ್ದು, Judicially wrong, ಅಥವಾ ಹುತಾತ್ಮರ ಬಗ್ಗೆ ಕೃತಘ್ನ ಭಾವ ಹೀಗೆ ಬೇರೆ ಬೇರೆ ರೀತಿಯಲ್ಲಿ ನಿಮಗೆ ತೋರಬಹುದು. ಆದರೆ ನಾನು ಮೊದಲೇ ಹೇಳಿದಂತೆ ನನ್ನ ಆ ಕ್ಷಣದ ಆಲೋಚನೆಯ ಉದ್ದೇಶ ಕೇವಲ ಆ ಹೆಣ್ಣುಮಗಳ ದುಃಖದ ನಿವಾರಣೆಯಷ್ಟೇ. ಉಳಿದದ್ದೆಲ್ಲ ನನಗೆ ನಗಣ್ಯವಾಗಿತ್ತು.)

ಅನೇಕ ಭ್ರಮೆಗಳು ಆ ತಾಯಿಯ ಆ ಕ್ಷಣದ ದುಃಖಕ್ಕೆ ಕಾರಣ ಅಂತ ನನಗೆ ತೋರಿತು..
ಮೊದಲನೆಯದಾಗಿ.. ''ಈ ದೇಶಕ್ಕಾಗಿ ನನ್ನ ಗಂಡನನ್ನೇ ಕೊಟ್ಟವಳಪ್ಪಾ ನಾನು…'' ಎನ್ನುವ ಆಕೆಯ ಮಾತನ್ನು ತೆಗೆದುಕೊಂಡು ನೋಡುವುದಾದರೆ ತಾನು ''ಕೊಟ್ಟವಳು'' ಎನ್ನುವ  ಭಾವ ಆಕೆಯಲ್ಲಿ ಗಾಢವಾಗಿ ಬೆರೂರಿದಂತೆ ಕಾಣುತ್ತದೆ. ಹಾಗಾದರೆ ..ತಾನು ''ಕೊಟ್ಟ'' ಗಂಡನನ್ನು ಅವಳು ತಂದಿದ್ದು  ''ಎಲ್ಲಿಂದ'' ?  ಹೀಗಾಗಿ ಆಕೆಯ ''ಕೊಟ್ಟೆ'' ಎಂಬ ಭಾವವೇ ಅವಳ ಮೊದಲ ಶತ್ರುವಾಗಿ ಆಕೆಯ ದುಃಖದ ಮೂಲ ಕಾರಣ ಎಂದು ನನಗೆ ತೋರುತ್ತದೆ. 

ಇನ್ನು, ಉದ್ದೇಶಪೂರ್ವಕವಾಗಿ ಭಾರತ ದೇಶ ಸಂಚು ಮಾಡಿ  ಆಕೆಯ ಗಂಡನನ್ನು ಆಕೆಯಿಂದ  ಕಿತ್ತುಕೊಂಡಿದೆಯೇ ..? ಅಥವಾ ಆಕೆಯೇ ಸರ್ಕಾರವನ್ನು ಕರೆದು ನನ್ನ ಗಂಡನನ್ನು ''ತೆಗೆದುಕೊಂಡು ಹೋಗಿ'' ಅಂತ ''ದಾನ'' ಮಾಡಿದ್ದಾಳೆಯೇ ? .. ಇಲ್ಲ.. ಹಾಗೇನೂ ನಡೆದಿಲ್ಲ. ನಡೆದದ್ದು ಯಾರೂ  ಊಹಿಸಲಾಗದ ಒಂದು ಅಪಘಾತದಂತಹ ಘಟನೆ. ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವುದನ್ನೆಲ್ಲ ಮಾಡಿದೆ.

ಅದೂ ಅಲ್ಲದೆ ಆಕೆಯ ಗಂಡನಿಗೂ ಒಂದು ವ್ಯಕ್ತಿತ್ವ ಅಂತ ಇತ್ತು.. ಬುದ್ಧಿಶಕ್ತಿ ವಿವೇಕ ಎಲ್ಲ ಇತ್ತು. ಈ ಎಲ್ಲದರ ಆಧಾರದ ಮೇಲೆ ಆತ ''ಆ ಉದ್ಯೋಗವನ್ನೇ'' ಮಾಡಲು ಅಥವಾ ಅದೇ ಉದ್ಯೊಗದಲ್ಲೆ ಮುಂದುವರೆಯಲು ತನ್ನ ವಿವೆಚನಾಪುರ್ವಕವಾಗಿ ನಿರ್ಧಸಿರುತ್ತಾನೆ. ಹಾಗೂ ಆ ಉದ್ಯೋಗದಿಂದ ದೊರೆಯುವ ಎಲ್ಲ ರೀತಿಯ ಪ್ರಯೊಜನಗಳನ್ನೂ ಸಹ ವಿವೆಚನಾಪುರ್ವಕವಾಗಿ ಪಡೆದಿರುತ್ತಾನೆ. ಆತ ಆ ಉದ್ಯೋಗದಿಂದ ಪಡೆದ ಪ್ರಯೋಜನಗಳಲ್ಲಿ ಒಂದು ಭಾಗ ಆತನ ಹೆಂಡತಿಗೂ ಕೂಡ ಸಂದಿರುತ್ತದೆ. ಆತನ ಮರಣಾ ನಂತರವೂ ಕೂಡ ಪೆನ್ಶನ್ನು, ಫಂಡು, ಸಮಾಜದಲ್ಲಿ ಗೌರವ ಮುಂತಾಗಿ ಅನೇಕ ಸೌಲಭ್ಯಗಳು ಈಕೆಗೆ ಸಿಕ್ಕಿದೆ. ಹೀಗಾಗಿ ಆಕೆ ತಾನು ''ಗಂಡನನ್ನು ಕೊಟ್ಟೆ'' ಎಂದು ಭಾವಿಸುವುದು ಅತಾರ್ಕಿಕವಾಗುತ್ತದೆ. ಈ ರೀತಿಯ ಯಾವುದೇ ಸೌಲಭ್ಯಗಳನ್ನು ಹಾಗೂ ಸಂಬಳವನ್ನೂ ಆಕೆ ಮತ್ತು ಆಕೆಯ ಗಂಡ ಪಡೆಯದೇ ಇದ್ದಲ್ಲಿ ಆಕೆಯ ಭಾವ ಸರಿಯಾದದ್ದು. ಆದರೆ ಹಾಗಾಗಿಲ್ಲ. 

ಇನ್ನು ಆಕೆ ''ಕೊಟ್ಟೆ'' ಎಂದು ಒತ್ತಿ ಹೇಳುವಾಗ ಮರೆತು ಹೋಗುತ್ತಿರುವ ಸಂಗತಿ ಏನೆಂದರೆ ಆಕೆ ಮದುವೆ ಆಗುವುದಕ್ಕೂ ಮುಂಚಿನಿಂದಲೂ ಆಕೆಯ ಗಂಡ ಆ ಉದ್ಯೋಗವನ್ನು ಮಾಡುತ್ತಿದ್ದ ಮತ್ತು ಆತ ತನ್ನ ಸ್ವಂತ ನಿರ್ಧಾರದಿಂದ ಸಂತೋಷ ಪೂರ್ವಕವಾಗಿ ಆ ಉದ್ಯೋಗಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದ. ಹೀಗಾಗಿ ಆತ ತನ್ನನ್ನು ತಾನು ದೇಶಕ್ಕೆ 'ಕೊಟ್ಟುಕೊಂಡ' ಎನ್ನುವುದು ಒಂದು ಮಟ್ಟದಲ್ಲಿ ಸಮಂಜಸವಾಗಿ ತೋರುತ್ತದೆ. ಆದರೆ ಆತನ ಪತ್ನಿ ತಾನು ''ಆತನನ್ನು ಕೊಟ್ಟೆ' ಎಂದು ಹೇಳುವುದು ಅಷ್ಟು ಸಮಂಜಸವಲ್ಲ. ಆತನಿಗೆ ತನ್ನದೇ ಆದ ಅಸ್ತಿತ್ವ ಇತ್ತು. ಈಕೆ 'ತಾನು ಕೊಟ್ಟೆ' ಎಂದು ಹೇಳುವುದರ ಮೂಲಕ ಅದೆಲ್ಲವನ್ನು ನಿರಾಕರಿಸಿ ತನ್ನ ಪತಿಯನ್ನು ತನ್ನ ಸ್ವಂತ ಸೊತ್ತು ಅಥವಾ ತನ್ನ ಕೈಗೊಂಬೆ ಎಂದು ಭಾವಿಸಿದಂತಾಗುತ್ತದೆ. ಈ ಉದ್ಯೋಗದಲ್ಲಿ ಇಂತಹ ಅಪಾಯವಿದೆ ಅಂತ ಆಕೆಗೆ ಮೊದಲೇ ತಿಳಿದಿತ್ತು. ಹೀಗಾಗಿ ಮೊದಲೇ ಆ ಉದ್ಯೋಗ ಮತ್ತು ಆ ಉದ್ಯೋಗದ ಕಾರಣಕ್ಕಾಗಿ ದೊರೆಯುವ ಎಲ್ಲ ಸುಖ ಸೌಲಭ್ಯಗಳನ್ನು ನಿರಾಕರಿಸಿದ್ದರೆ ಇವತ್ತಿನ ಈ ದುಃಖದ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ.
 (ನಮಗೆ ಏನಾದರೂ ಅನಾಯಾಸವಾಗಿ ಸಿಕ್ಕರೆ ''ಇದು ಯಾಕೆ ? ನನಗೆ ಯಾಕೆ ಸಿಗುತ್ತಿದೆ? ನಾನು ಅದಕ್ಕೆ ಯೋಗ್ಯನೇ/ಳೇ ? ನಾನು ಸ್ವೀಕರಿಸಬಹುದೇ ? ಇದು ನಮಗೆ ಸಿಗಲಿಕ್ಕೆ ಯಾರು ಕಾರಣ ..? ಯಾರು ಜವಾಬ್ದಾರಿ ? '' ಮುಂತಾಗಿ ನಾವು ಯೋಚಿಸುವುದಿಲ್ಲ. ಕೈ ಚಾಚಿ ಎಲ್ಲವನ್ನೂ ಬಾಚಿಕೊಳ್ಳುತ್ತೆವೆ. ಆದರೆ ಕಷ್ಟ ಬಂದಾಗ ಮಾತ್ರ  ಇದು ಯಾಕೆ ಹೀಗೆ ..? ನಮಗೆ ಯಾಕೆ ಈ ಕಷ್ಟ ? ಇದಕ್ಕೆ ಅವರು ಜವಾಬ್ದಾರರು.. ಅವರಿಂದ ಹಿಂಗಾಯಿತು ಅನ್ನುವ ಆಪಾದನೆಗಳನ್ನು ಮಾಡ್ತೇವೆ. ''ಸುಖ ಬಂದಾಗ ಮೈ ಮರೆತು ವಿಮರ್ಶೆ ಮಾಡದೇ ಅನುಭವಿಸುವುದು''  ಮನುಷ್ಯ ಸಹಜ ಸ್ವಭಾವ ಮತ್ತು ಆ ಅಜ್ಞಾನವೇ ದುಃಖಕ್ಕೆ ಕಾರಣ.)


ಇನ್ನು, ಆಕೆ ತನ್ನ ಗಂಡನನ್ನು ದೇಶಕ್ಕೆ ''ಕೊಟ್ಟಿದ್ದಾಳೆ'' ಅಂತಲೇ ಒಪ್ಪಿಕೊಂಡು ನೋಡುವುದಾದರೆ ಅದಕ್ಕೆ ''ಪ್ರತಿಯಾಗಿ'' ಆಕೆಗೆ ದೇಶದಿಂದ ಎನೂ ಸಿಗಲೇ ಇಲ್ಲವೇ ..?  ಅಥವಾ ಆಕೆ ಸಿಕ್ಕಿದ್ದನ್ನು ತಿರಸ್ಕರಿಸಿದ್ದಾಳೆಯೇ ..?  ಇದರ ಬಗ್ಗೆ ಎಲ್ಲವೂ ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಿದೆ. 

ಇನ್ನು ಆ ಟೋಲ್  ಗೇಟಿನ ವಿಷಯಕ್ಕೆ ಸಂಬಂಧಿಸಿದಂತೆಯೂ ಕೂಡ ನೀಡಬೇಕಾದ ಗುರುತಿನ  ಪತ್ರವನ್ನೂ  ಸರ್ಕಾರ ನೀಡಿದೆ. ಸಾಮಾನ್ಯವಾಗಿ ಟೋಲ್  ಗೆಟ್ ಗಳಲ್ಲಿ ಯಾವ ಯಾವ ಅಧಿಕಾರಿಗಳ ವಾಹನಗಳನ್ನು ಉಚಿತವಾಗಿ ಬಿಡಬೇಕು ಎಂಬ ಬಗ್ಗೆ ಒಂದು ಪಟ್ಟಿ ಮಾಡಿ ಬೋರ್ಡ್ ಹಾಕಿರುತ್ತಾರೆ ಹಾಗೂ ಟೋಲ್ ನಲ್ಲಿ ಕೂರುವ ವ್ಯಕ್ತಿಗಳಿಗೆ ಅದರ ಬಗ್ಗೆ ಮಾಹಿತಿ ಇರುತ್ತದೆ. ಈ ಶ್ರೀಮತಿ ಸಲಸ್ಕರ್ ರವರು ಹೋದಾಗ ಅಲ್ಲಿ ಕುಳಿತಿದ್ದ ವ್ಯಕ್ತಿಗೆ ಅದರ ಬಗ್ಗೆ ಮಾಹಿತಿ ಇರಲಿಕ್ಕಿಲ್ಲ.. ಅಥವಾ ಅವರ ಮೇಲಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಅಶೋಕ ಚಕ್ರ ಪಡೆದವರಿಗೆ ಇರುವ ವಿನಾಯಿತಿಯ ಉಲ್ಲೇಖ ಇರಲಿಕ್ಕಿಲ್ಲ. ಆ ಒಂದು ಬಾರಿಗೆ ಟೋಲ್ ನಲ್ಲಿ ಹಣ ಪಾವತಿ ಮಾಡಿ  ಆಮೇಲೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಆ ತೊಡಕನ್ನು ಸರಿಪಡಿಸಬಹುದಿತ್ತು. ಅಲ್ಲಿನ ಟೋಲ್ ನಲ್ಲಿ ಹಾಕಿದ ವಿನಾಯಿತಿಯ ಫಲಾನುಭವಿಗಳ ಸಾಲಿನಲ್ಲಿ ಅಶೋಕ ಚಕ್ರ ಪಡೆದವರ ವರ್ಗವನ್ನು ಸೇರಿಸುವ ವ್ಯವಸ್ಥೆ ಮಾಡಲು ಕೋರಬಹುದಾಗಿತ್ತು.

 ಇಷ್ಟು ಚಿಕ್ಕ ಘಟನೆಗೆ ಅಷ್ಟೊಂದು ಮಹತ್ವ ಕೊಟ್ಟು "ದೇಶಕ್ಕಾಗಿ ಗಂಡನನ್ನೇ ಕೊಟ್ಟವಳಪ್ಪಾ ನಾನು” ಎಂದೆಲ್ಲ ಅನಗತ್ಯವಾಗಿ  ಟಿವಿಯ ಕ್ಯಾಮೆರಾಗಳ ಮುಂದೆ ಹೇಳಿಕೊಂಡು ದುಃಖಿಸುವ ಅಗತ್ಯ ಇರಲಿಲ್ಲ. ಅದನ್ನು ನಮ್ಮ ವರದಿಗಾರರು ಅತಿರಂಜಕವಾಗಿ ಚಿತ್ರಿಸಿ, ಅದರ ಬಗ್ಗೆ ಬರೆದು ನಮ್ಮೆಲ್ಲರನ್ನು ಭಾವುಕ ಕಲಕುವಿಕೆಗೆ ಒಳಪಡಿಸುವ ಅಗತ್ಯವಿರಲಿಲ್ಲ.  ಆದರೆ ನಾನು ಮೊದಲೇ ಹೇಳಿದಂತೆ ನಾವೆಲ್ಲರೂ ಸ್ವಾನುಕಂಪದ ಗೀಳಿಗೆ ಬಿದ್ದು ಇಲ್ಲದ ದುಃಖವನ್ನು ಮೈ ಮೇಲೆ ಎಳೆದುಕೊಂಡು ಅದರಲ್ಲಿ ಹೊರಳಾಡಿ ಸುಖಿಸುತ್ತೇವೆ. ನಮಗೆ ''ಅಬ್ಬೂ'' ಸಿಂಡ್ರೋಮ್ ಬಹಳ ಇಷ್ಟ. ನಾವು ಅದನ್ನು ಎಂಜಾಯ್ ಮಾಡತೊಡಗಿದ್ದೇವೆ.


Tuesday, December 31, 2013

ತ್ಯಾಗದಿಂದ ಸಾಧನೆ


ಭಾರತೀಯ ಶಾಸ್ತ್ರ, ಸಾಹಿತ್ಯ, ಜಾನಪದ ಮುಂತಾದ ಎಲ್ಲ ಕಡೆಗಳಲ್ಲಿ ಆಧ್ಯಾತ್ಮಿಕ ಸಾಧನೆಯ ಅಂತಿಮ ಪಯೋಜನವಾದ "ಬಿಡುಗಡ" ಯನ್ನು ಮುಕ್ತಿ, ಭಗತ್ಪ್ರಾಪ್ತಿ, ನಿರ್ವಾಣ, ಮೋಕ್ಷ, ಕೈವಲ್ಯ  ಮುಂತಾದ ಅನೇಕ ಹೆಸರುಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಹೇಳಿದ್ದಾರೆ. ಅಂತಹ ಮುಕ್ತಿಯನ್ನು ಪಡೆಯಬೇಕಾದರೆ ಸಾಮಾಜಿಕ ಮತ್ತು ಸಾಂಸಾರಿಕ ಜೀವನವನ್ನು ಬಿಟ್ಟು ಕಾಡಿಗೆ ಹೋಗಿ  ಮೂಗು ಹಿಡ್ಕೊಂಡು ಕುಳಿತು ಏನೇನೋ ಮಾಡಬೇಕು, ತಪಸ್ಸು ಮಾಡಬೇಕು.. ಹಾಗೆ .. ಹೀಗೆ ಅನ್ನುವ ಅಭಿಪ್ರಾಯ ಸಾಮಾನ್ಯ ಜನಮಾನಸದಲ್ಲಿ ಇದೆ. ಆದರೆ ತಪಸ್ಸು ಅಂದರೆ ಏನು..?  ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನಮ್ಮಲ್ಲಿ ಯಾರಿಗೂ ಸರಿಯಾಗಿ ತಿಳಿದಿಲ್ಲ. ಮುಕ್ತಿ ಅಂದರೆ ಏನು ಅನ್ನುವುದರ ಬಗ್ಗೆಯೂ ಕೂಡ ನಮ್ಮಲ್ಲಿ ಸ್ಪಷ್ಟತೆ  ಇಲ್ಲ. 
ವಾಸ್ತವವಾಗಿ ಸಂಪೂರ್ಣವಾಗಿ ಲೌಕಿಕ ಜೀವನದಲ್ಲಿ ಇದ್ದುಕೊಂಡು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿಕೊಂಡೇ ಆ ಪರಮಾತ್ಮ ಸಾಕ್ಷಾತ್ಕಾರವನ್ನು ಅಥವಾ ಮುಕ್ತಿಯನ್ನು ಪಡೆಯಲಿಕ್ಕೆ ಸಾಧ್ಯ ಇದೆ. ತ್ಯಾಗವೇ ಆ ನಿಟ್ಟಿನ ಮುಖ್ಯ ಸಾಧನವಾಗಿದೆ. ಇಲ್ಲಿ ತ್ಯಾಗವೆಂದರೆ ಮತ್ತೆ ಅದೇ ಸಾಮ್ಸಾರಿಕ ಜೀವನದ ತ್ಯಾಗ ಅಥವಾ ಸನ್ಯಾಸ ಪಡೆಯುವುದು .. ಇತ್ಯಾದಿಗಳು ಅಲ್ಲ.  ನಮ್ಮ ಆಧ್ಯಾತ್ಮ ಶಾಸ್ತ್ರದಲ್ಲಿ ತ್ಯಾಗವನ್ನು ಏಳು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಆ ಎಳು ತ್ಯಾಗಗಳನ್ನು ಪ್ರಪಂಚದ ಪ್ರತಿಯೊಬ್ಬರೂ ಸಹ ಆಚರಿಸಬಹುದಾಗಿದೆ ಹಾಗೂ ತನ್ಮೂಲಕ ಮಾನವ ಜೀವನದ ಸರ್ವೋಚ್ಚ ಪ್ರಯೋಜನವಾದ ಮೋಕ್ಷವನ್ನು ಪಡೆಯಬಹುದಾಗಿದೆ.

೧. ನಿಷಿದ್ಧ ಕರ್ಮಗಳ ಸಂಪೂರ್ಣ ತ್ಯಾಗ. 
ಕಳ್ಳತನ, ವ್ಯಭಿಚಾರ, ಸುಳ್ಳು, ಕಪಟ, ಹಠ, ಬಲಾತ್ಕಾರ, ಹಿಂಸೆ, ಅಭಕ್ಷ್ಯ-ಭೋಜನ ಮತ್ತು ಪ್ರಮಾದ ಮುಂತಾದ ನಿಷಿದ್ಧ ಕರ್ಮಗಳನ್ನು ಕಾಯಾ-ವಾಚಾ-ಮನಸಾ ಈ ಮೂರರಲ್ಲಿ ಯಾವ ರೀತಿಯಿಂದಲೂ ಸಹ ಮಾಡದೇ ಇರುವುದು ಮೊದಲನೇ ಶ್ರೇಣಿಯ ತ್ಯಾಗವಾಗಿದೆ.

೨. ಸಕಾಮ  ಕರ್ಮಗಳ ತ್ಯಾಗ 
ಹೆಂಡತಿ/ಗಂಡ,  ಮಕ್ಕಳು, ವಿದ್ಯೆ, ಉದ್ಯೋಗ, ಆಸ್ತಿ ಪಾಸ್ತಿ ಮುಂತಾದ  ಪ್ರಿಯ ವಸ್ತುಗಳನ್ನು ಪಡೆಯುವ ಉದ್ದೇಶದಿಂದ ಮತ್ತು ರೋಗ ರುಜಿನಾದಿಗಳಿಂದ ಪಾರಾಗುವ ಉದ್ದೇಶದಿಂದ ಮಾಡಲಾಗುವ ಪೂಜೆ, ಹೋಮ, ದಾನ, ಉಪಾಸನೆ, ಪ್ರಾರ್ಥನೆ, ದೇವರಲ್ಲಿ ಬೇಡಿಕೆಗಳನ್ನು ಸಲ್ಲಿಸುವುದು, ಹರಕೆ ಹೊತ್ತುಕೊಳ್ಳುವುದು, ದೇವರು ಒಳ್ಳೇದು ಮಾಡಲಿ ಅನ್ನುವ ಆಸೆಯಿಂದ ದೇವಸ್ಥಾನಗಳಿಗೆ ಹೋಗುವುದು ಇತ್ಯಾದಿ  ''ಸಕಾಮ'' ಅಂದರೆ ಫಲ ಪಡೆಯುವ ಕಾಮನೆಯನ್ನು ಇಟ್ಟುಕೊಂಡು ಮಾಡುವ ಕರ್ಮಗಳನ್ನು  ಆಚರಿಸದೇ ಇರುವುದು* ಎರಡನೇಯ ಶ್ರೇಣಿಯ ತ್ಯಾಗವಾಗಿದೆ.
(*ಲೌಕಿಕ ಅಥವಾ ಶಾಸ್ತ್ರೀಯವಾದ ಕರ್ಮವು, ಅದು ಸ್ವರೂಪತಃ ಸಕಾಮವಾಗಿದ್ದರೂ ಸಹ, ಅಂತಹ ಕರ್ಮ ಮಾಡಲೇಬೇಕಾಗಿ ಬಂದರೆ/ಅದನ್ನು ಮಾಡದೇ ಬಿಟ್ಟಲ್ಲಿ ಇತರರಿಗೆ ತೊಂದರೆಯಾಗಬಹುದಾದ ಸನ್ನಿವೇಶ ಇದ್ದಲ್ಲಿ ಅಥವಾ ಕರ್ಮೊಪಾಸನೆಯ ಪರಂಪರೆಗೆ ಭಂಗ ಬರುವಂತಿದ್ದರೆ, ತನ್ನ ಸ್ವಾರ್ಥವನ್ನು ಬಿಟ್ಟು ಲೋಕಹಿತಕ್ಕಾಗಿ ಅದನ್ನು ಮಾಡುವುದು ಸಕಾಮವಾಗುವುದಿಲ್ಲ.)

೩. ದುರಾಸೆಯ ಪೂರ್ಣ ತ್ಯಾಗ 
ಗೌರವ, ಹೊಗಳಿಕೆ, ಪ್ರತಿಷ್ಥೆ, ಉದ್ಯೋಗ, ಹೆಂಡತಿ/ಗಂಡ ಮಕ್ಕಳು ಐಶ್ವರ್ಯ ಮುಂತಾದವುಗಳು ಪ್ರಾರಬ್ಧಕ್ಕೆ ತಕ್ಕಂತೆ ಪ್ರಾಪ್ತವಾಗಿರುತ್ತವೆ. ಅವುಗಳನ್ನು ಹೆಚ್ಚಿಸಿಕೊಳ್ಳುವ ಅಸೆ ಮತ್ತು ತನ್ಮೂಲಕ ಅಡ್ಡದಾರಿ ಹಿಡಿಯುವಿಕೆ ''ದುರಾಸೆಯೇ'' ಆಗಿದೆ. ಅಂತಹ ದುರಾಸೆಯನ್ನು ತ್ಯಾಗ ಮಾಡುವುದು ಮೂರನೆಯ ಶ್ರೇಣಿಯ ತ್ಯಾಗವಾಗಿದೆ.

೪. ಸ್ವಾರ್ಥಕ್ಕಾಗಿ ಇತರರಿಂದ ಸೇವೆ ಮಾಡಿಸಿಕೊಳ್ಳುವುದರ ತ್ಯಾಗ 
ತನ್ನ ಶಾರೀರಿಕ ಹಾಗೂ ಮಾನಸಿಕ ಸುಖಕ್ಕಾಗಿ ಬೇರೆಯವರಿಂದ ಹಣ ಮುಂತಾದ ಪದಾರ್ಥಗಳನ್ನು ಯಾಚಿಸುವುದು, ಅಥವಾ ಸೇವೆ ಮಾಡುವಂತೆ ಯಾಚಿಸುವುದು, ಯಾಚಿಸದೇ ಇದ್ದರೂ ಅನಾಯಾಸವಾಗಿ ದೊರೆತ ಪದಾರ್ಥಗಳನ್ನು/ಉಡುಗೊರೆಗಳನ್ನು ಸ್ವೀಕರಿಸುವುದು, ಅನಾಯಾಸವಾಗಿ ಒದಗಿ ಬಂಡ ಸೇವೆ/ಉಪಚಾರ ಮುಂತಾದವುಗಳನ್ನು ಮಾಡಿಸಿಕೊಳ್ಳುವುದು, ಬೇರೆಯವರಿಂದ ತನಗೆ ಉಪಯೋಗವಾಗಬಹುದು ಎಂಬ ಉದ್ದೇಶವನ್ನು ಮನಸ್ಸಿನಲ್ಲಿ ಹೊಂದಿರುವುದು ಇವೆಲ್ಲವುಗಳ ತ್ಯಾಗ* ಮಾಡುವುದು ನಾಲ್ಕನೆಯ ಹಂತದ ತ್ಯಾಗವಾಗಿದೆ.
(* ಶರೀರ ಸಂಬಂಧೀ ಸೇವೆ ಅಥವಾ ಭೊಜನಾದಿ  ಪದಾರ್ಥಗಳನ್ನು ಸ್ವೀಕರಿಸದಿದ್ದರೆ ಇತರರಿಗೆ ತೊಂದರೆಯಾಗುವ ಅಥವಾ ಲೋಕಕ್ಕೆ ಮಾರ್ಗದರ್ಶನವಾಗುವುದಕ್ಕೆ ಅಡ್ಡಿಯಾಗುವುವಂತಹ  ಸಂದರ್ಭ ಯೋಗ್ಯತೆಯಿಂದ ಒದಗಿ ಬಂದರೆ ಅಂತಹ ಸಮಯದಲ್ಲಿ ಸ್ವಾರ್ಥವನ್ನು ತ್ಯಾಗ ಮಾಡಿ ಕೇವಲ ಪ್ರೀತಿಗಾಗಿ ಸೇವಾದಿಗಳನ್ನು ಸ್ವೀಕರಿಸುವುದು ದೋಷವಲ್ಲ. ಏಕೆಂದರೆ ಹೆಂಡತಿ-ಮಕ್ಕಳು ಮತ್ತು ಸೇವಕರಿಂದ ಒದಗಿ ಬರುವ ಪ್ರೀತಿಯ ಸೇವೆ ಹಾಗೂ ಬಂಧು ಬಾಂಧವರು/ಸ್ನೇಹಿತರು  ಪ್ರೀತಿಯಿಂದ ಕೊಡುವ ಭೊಜನಾದಿ ಪದಾರ್ಥಗಳನ್ನು ತಿರಸ್ಕರಿಸುವುದರಿಂದ ಅವರಿಗೆ ದುಃಖ ಉಂಟಾಗುವ ಅಥವಾ ಲೋಕ ಮರ್ಯಾದೆಗೆ ಅಡ್ಡಿ ಬರುವ ಸಂದರ್ಭವಿದ್ದಲ್ಲಿ ಅದನ್ನು ಸ್ವೀಕರಿಸಿ ಅವರಿಗೆ ಸಂತೋಷ ಉಂಟುಮಾಡುವುದೇ ಧರ್ಮವಾಗಿರುತ್ತದೆ.) 

೫. ಸಮಸ್ತ ಕರ್ತವ್ಯಗಳಲ್ಲಿ ಆಲಸ್ಯ ಮತ್ತು ಫಲದ ಇಚ್ಛೆಯ ತ್ಯಾಗ 
ಈಶ್ವರನಲ್ಲಿ ಭಕ್ತಿ , ದೇವತೆಗಳ ಪೂಜೆ, ತಂದೆ-ತಾಯಿ, ಗುರು ಹಿರಿಯರ ಶುಶ್ರೂಷೆ, ಯಜ್ಞ, ದಾನ, ತಪಸ್ಸು ಹಾಗೂ ವರ್ಣಾಶ್ರಮಕ್ಕೆ ಅನುಗುಣವಾದ ಉದ್ಯೋಗದ ಮೂಲಕ ಗೃಹಕೃತ್ಯಗಳ ನಿರ್ವಹಣೆ, ಶರೀರವನ್ನು ಸ್ವಸ್ಥವಾಗಿ ಇಟ್ಟುಕೊಳ್ಳಲು ಮಾಡಬೇಕಾದ ಕ್ರಿಯೆಗಳು ಮುಂತಾದ ಎಲ್ಲ ಕರ್ಮಗಳಲ್ಲಿ ಆಲಸ್ಯವನ್ನು ಹೊಂದಬಾರದು ಮತ್ತು ಅವುಗಳಿಂದ ಎನೂ ಪ್ರತಿಫಲಗಳನ್ನು ಅಪೇಕ್ಷಿಸಬಾರದು. ಇದು ತ್ಯಾಗದ ಐದನೆಯ ಹಂತವಾಗಿದೆ.

 ೬. ಪ್ರಾಪಂಚಿಕವಾದ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಆಸಕ್ತಿ ಮತ್ತು ಮಮತ್ವದ ತ್ಯಾಗ 
ಪ್ರಾಪಂಚಿಕವಾದ   ಸಮಸ್ತ ವಸ್ತುಗಳು ಅಂದರೆ ಕುಟುಂಬ ಬಂಧು ಬಾಂಧವರು, ವಸ್ತುಗಳು ಆಸ್ತಿ ಪಾಸ್ತಿ, ಸಾಮಾಜಿಕ ಮಾನ ಸಮಾನ, ಪ್ರತಿಷ್ಥೆ, ವಡವೆ ವಸ್ತ್ರ ಮುಂತಾದ ಭೊಗರೂಪಿ ಪದಾರ್ಥಗಳೆಲ್ಲ ಸಮಯದ ಹೊಡೆತಕ್ಕೆ ಸಿಕ್ಕಿ ನಾಶವಾಗಿ ಹೋಗತಕ್ಕವುಗಳು.  ಆದ್ದರಿಂದ ಆ ಸತ್ಯವನ್ನು ಮನದಟ್ಟು ಮಾಡಿಕೊಂಡು ಅವುಗಳ ಬಗ್ಗೆ ''ಮಮತ್ವ ಅಥವಾ ಮಮತೆ'' ಅಂದರೆ ''ಅದು ನನ್ನದು'' ಎಂಬ ಭಾವವನ್ನು ಹಾಗೂ ಅವುಗಳಲ್ಲಿ ಆಸಕ್ತಿಯನ್ನು ತೊರೆಯುವುದು ಆರನೆಯ ಶ್ರೇಣಿಯ ತ್ಯಾಗವಾಗಿದೆ
(* ಸಮಸ್ತ ಕರ್ಮ ಮತ್ತು ಪದಾರ್ಥಗಳ ಬಗೆಗಿನ ಆಸೆ ಮತ್ತು ಫಲಾಪೆಕ್ಷೆಯ ತ್ಯಾಗ ಮೂರು ಮತ್ತು ಐದನೆಯ ಶ್ರೇಣಿಯ ತ್ಯಾಗದಲ್ಲಿಯೇ ಹೆಳಲಾಗಿದೆ. ಆದರೆ ಆಸೆ ಮತ್ತು ಫಲಾಪೆಕ್ಷೆಯ ತ್ಯಾಗವಾಗಿದ್ದರೂ ಕೂಡ ಅವುಗಳಲ್ಲಿ ಮಮತೆ ಮತ್ತು ಆಸಕ್ತಿ ಉಳಿದುಕೊಂಡಿರುತ್ತದೆ. ಅವುಗಳೆರ ಡನ್ನೂ ಸಹ ತೊಎಯುವುದು ಆರನೆಯ ಹಂತವಾಗಿದೆ. ಒಂದು ಜಿಂಕೆಯನ್ನು ನಾವು ಸಾಕಿಕೊಂದ್ದೇವೆ ಅಂತಿಟ್ಟುಕೊಳ್ಳೋಣ. ಆ ಜಿಂಕೆಯಿಂದ ಯಾವುದೇ ಪ್ರಯೋಜನದ ಆಸೆ ನಮಗೆ ಇಲ್ಲದೆ ಹೋದರೂ ಆ ಜಿಂಕೆ ''ನನ್ನದು'' ಅನ್ನುವ ಭಾವ ಮತ್ತು ಅದರ ಪಾಲನಾ ಕ್ರಮದಲ್ಲಿ  ಆಸಕ್ತಿ  ಹಾಗೆಯೇ ಉಳಿದುಕೊಂಡಿರುತ್ತದೆ. ಅಂತಹ ಆಸಕ್ತಿ ಮತ್ತು ಮಮತೆಯನ್ನು ಧ್ಯಾನ, ಸತ್ಸಂಗ ಮುಂತಾದ ಪ್ರಕ್ರಿಯೆಗಳಿಂದ ಮನಸ್ಸನ್ನು ತಿಳಿ ಮಾಡಿಕೊಳ್ಳುವುದರ ಮೂಲಕ ಕಳೆದುಕೊಳ್ಳಬೇಕೆಂದು ಭರತ ಮುನಿಯು ಹೇಳುತ್ತಾನೆ. ಹೀಗೆ ಸಮಸ್ತ ವಸ್ತುಗಳಲ್ಲಿ ಮತ್ತು ಕರ್ಮಗಳಲ್ಲಿ ಮಮತೆ ಮತ್ತು ಆಸಕ್ತಿಯ ತ್ಯಾಗ ಉಂಟಾಗಿ ಕೇವಲ ಸಚ್ಚಿದಾನಂದ ಘನ ಸ್ವರೂಪನಾದ ಪರಮಾತ್ಮನಲ್ಲಿ ವಿಶುದ್ಧ ಪ್ರೇಮ ಉಂಟಾಗುವಿಕೆ ಜ್ಞಾನದ ಹಂತಗಳಲ್ಲಿ ಎರಡನೆಯ ಹಂತವಾಗಿದೆ )

೭.  ಸಂಸಾರ, ಶರೀರ ಮಾತ್ತು ಎಲ್ಲಾ ಕರ್ಮಗಳಲ್ಲಿ ಸೂಕ್ಷ್ಮವಾಸನಾ ಮತ್ತು ಅಹಂಭಾವದ ತ್ಯಾಗ
ಸಾಂಸಾರಿಕ ಪದಾರ್ಥಗಳೆಲ್ಲ ಮಾಯೆಯ ಕಾರ್ಯವಾದ್ದರಿಂದ ಅವುಗಳು ಅನಿತ್ಯವಾಗಿವೆ.  ಆದರೆ ಅವುಗಳಲ್ಲೆಲ್ಲ ಏಕ ಮಾತ್ರ ಸಚ್ಚಿದಾನಂದ ರೂಪಿಯಾದ ಪರಮಾತ್ಮ ಅಥವಾ ಆತ್ಮತತ್ವವೇ ವ್ಯಾಪಿಸಿದೆ, ಎಲ್ಲೆಲ್ಲಿಯೂ ಆತ್ಮವೇ ವ್ಯಾಪಿಸಿಕೊಂಡಿದೆ ಎಂಬ ಮನವರಿಕೆ ಮಾಡಿಕೊಂಡು ಅದರ ಹೊರತಾಗಿ ನಾಮ ರೂಪಗಳ ಆಧಾರದ ಮೇಲೆ ಮತ್ತೊಂದು ವಸ್ತುವನ್ನು ಗುರುತಿಸದೆ ಎಲ್ಲದರಲ್ಲಿ ಏಕತೆಯನ್ನು ಕಂಡು ವಸ್ತು ಮತ್ತು ಕರ್ಮಗಲ್ಲಿನ ಸೂಕ್ಷ್ಮವಾಸನೆ ಅಂದರೆ ವಸ್ತು-ವಿಷಯಗಳ ಸಂಸ್ಕಾರ ರೂಪಿಯಾದ ನಾಮ-ರೂಪಾತ್ಮಕ ಚಿತ್ರವನ್ನು ಹೊಂದದೇ ಇರುವುದು, ಹಾಗೂ ಶರೀರದಲ್ಲಿ ಅಹಂಭಾವ ಸಂಪೂರ್ಣವಾಗಿ ಇಲ್ಲದಂತಾಗಿ ದೇಹ, ಮನಸ್ಸು ಮತ್ತು ವಾಕ್ಕು ಈ ಮೂರರಿಂದಲೂ ನಡೆಯುವ ಕರ್ಮಗಳಲ್ಲಿ ''ಕರ್ತೃತ್ವ ಭಾವ'' ಅಂದರೆ ''ನಾನು ಅವುಗಳನ್ನು ಮಾಡಿದೆ'' ಎಂಬ  ಭಾವವನ್ನು ತ್ಯಜಿಸುವುದು ಏಳನೆಯ ಹಂತದ ತ್ಯಾಗವಾಗಿದೆ.
ಪ್ರಾಪಂಚಿಕ ವಸ್ತುಗಳಲ್ಲಿ ಮತ್ತು ಕರ್ಮಗಳಲ್ಲಿ ಆಸೆ ಮತ್ತು ಫಲಾಪೇಕ್ಷೆ, ಮಮತೆ ಹಾಗೂ ಆಸಕ್ತಿಗಳು ಸಂಪೂರ್ಣವಾಗಿ ನಾಶವಾಗಿದ್ದರೂ ಸಹ ಅವುಗಳ ಮೇಲೆ ಸೂಕ್ಷ್ಮ ಅಭಿಲಾಷೆ, ಮತ್ತು ಕರ್ತೃತ್ವದ ಅಭಿಮಾನ ಹಾಗೆಯೇ ಉಳಿದುಕೊಂಡಿರುತ್ತದೆ. ಆದುದರಿಂದ ಸೂಕ್ಷ್ಮ ಇಚ್ಛೆ ಮತ್ತು ಅಹಂಭಾವಗಳ ತ್ಯಾಗವನ್ನು ಏಳನೆಯ ಹಂತದ ತ್ಯಾಗವೆಂದು ಹೇಳಿದೆ.

ಈ ರೀಯಲ್ಲಿ ಏಳು ಹಂತದ ತ್ಯಾಗವನ್ನು ರೂಡ್ಹಿಸಿಕೊಂಡಲ್ಲಿ ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ರೀತಿಯ ಕರ್ಮಗಳು ನಾಶವಾಗುತ್ತವೆ. ಇಂತಹ ತ್ಯಾಗದ ಪಾಲನೆಯಿಂದ ಎಲ್ಲ ರೀತಿಯ ಕರ್ಮಗಳನ್ನು ಆಚರಿಸುತ್ತಾ, ಲೋಕವ್ಯವಹಾರಗಳನ್ನು ಮಾಡುತ್ತಲೇ, ಸಾಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಸುಲಭವಾಗಿ ಮುಕ್ತಿಯನ್ನು ಹೊಂದಬಹುದಾಗಿದೆ. ಆದ್ದರಿಂದ ತ್ಯಾಗವೇ ಎಲ್ಲಕ್ಕಿಂತ ಮಿಗಿಲಾದ ತಪಸ್ಸು ಎಂದು ಕರೆಯಲ್ಪಟ್ಟಿದೆ.



 

Saturday, December 28, 2013

ಭಾನುವಾರದ ಬೆಳಗು


ಧೊಪ್ಪನೆ ಬಾಗಿಲಿಗೆ ಬಡಿದು ಬೀಳುವ ಪ್ರಜಾವಾಣಿ
ಅದರ ಮುಖದಲ್ಲೇ ಸಾವುಗಳ ಸರಮಾಲೆ ಸುದ್ದಿ

ಪಕ್ಕದ ಮನೆಯ ಕಾರಿನ ರಿವರ್ಸ್ ಗೇರಿನ  ಟ್ಯುಯ್ ಟ್ಯುಯ್
ರಸ್ತೆಯಲ್ಲಿ ಪೊರಕೆಯ ಪರ ಪರ...  ಮೆಟ್ಟಿಲುಗಳ ಮೇಲೆ ಬೂಟುಗಳ ಧಗ ಧಗ
ಟೀವಿ.. ಎಫ್ಫೇಮ್ಮುಗಳಲ್ಲಿ ಕರ್ಕಶ ಸುಪ್ರಭಾತ.. ಪೊಳ್ಳು ಜ್ಯೋತಿಷ್ಯದ ಹಾವಳಿ

ಸರ್ವೀಸಿಗೆ ಕೊಡದ ಬೈಕು, ಗುಡಿಸದ ಅಂಗಳ..
ಕಸದ ರಾಶಿಯಂಥ ವಾರ್ಡ್ ರೋಬು..
ತೊಳೆಯದ ಬಾಥ್ ರೂಮು, ವಾಶ್ ಬೇಸನ್ನು
ಹಳೆಯ ಟೂಥ್ ಬ್ರಶ್ಶು.. ಕಮಟು ಚಡ್ಡಿ..
ಏನುಂಟು ..? ಏನಿಲ್ಲ ? ..ಯಾವುದೂ ನೆನಪಿಲ್ಲ

ಅಣಕಿಸುವ ಓದದೇ ಉಳಿದ ಪುಸ್ತಕಗಳು..
ಗಾಭರಿ ಹುಟ್ಟಿಸುವ ಕಳೆದುಕೊಂಡ ರಶೀದಿಗಳು..ಇನ್ಶೂರೆನ್ಸ್ ಬಾಂಡುಗಳು
ಶಪಿಸಲು ಸಿದ್ಧವಾಗುತ್ತಿರುವ್ ಪೂಜೆ ಕಾಣದ ಸಾಲಿಗ್ರಾಮಗಳು..
ಟೇಬಲ್ಲಿನ ಮೇಲೆ ಬೆಸ್ಕಾಂ, ಬಿಎಸ್ಸೆನ್ನೆಲ್ ಬಿಲ್ಲುಗಳು
ಯಾವುದಕ್ಕೂ ಸಮಯ ಉಳಿದಿಲ್ಲ...ನಿದ್ದೆ ಇನ್ನೂ ಮುಗಿದಿಲ್ಲ

ಅಗಿದು ಹಾಕಿದ ರಸ್ತೆ.. ಮೂಗಿಗಡರುವ ಧೂಳು
ಟ್ರಾಫಿಕ್ಕಿನೊಳು ನೀ ತಾಳು.. ಅಷ್ಟರಲೆ ಕ್ರೆಡಿಟ್ ಕಾರ್ಡಿನ ಕಾಲು
ಬೇಕಿದ್ದು.. ಬೇಡದ್ದು ಎಲ್ಲ ತಂದೊಟ್ಟುವ ಸಂತೆ ..
ಐ ಪ್ಯಾಡು.. ಸ್ಮಾರ್ಟ್ ಫೋನು ಇಲ್ಲದವನೇ ಇಲ್ಲಿ ದರಬೇಶಿಯಂತೆ

Thursday, December 26, 2013

ಟೀವಿಯಲ್ಲಿ ಬಿಂಕ ವೈಯ್ಯಾರದಿಂದ
ನೀ ಉಲಿವಾಗ ನಿನ್ನ ಕನ್ನಡಕ್ಕಿಂತ
ನೀ ಚೆಂದ ಕಂಡಿದ್ದೆ..ಎನಗೆ..

ಕನಸುಗಳಲಿ ಬಂದಾಗಲೂ ನೀ
ಅತಿಲೋಕ ಸುಂದರಿಯ ನಾಚಿಸುವ
ತೆರನಾದ ಮಧುರ ಮಾತಿನ ಮಲ್ಲಿ

ಘಲ್ಲೆಂಬ ನಗು ಚೆಲ್ಲಿ ಪಕ್ಕದಲೇ ಸುಳಿದಾಗ
ನಿನ್ನ ಕೂದಲ ಘಮ..ಬೆನ್ನ ಮೇಲಿನ ಗುಳ್ಳೆ
ನವಿರು ತೋಳಿನ ಒನಪು, ತುಟಿಯ ಮೇಲಿನ ಬಣ್ಣ

ಯಾರೋ ಎಂದು ನನ್ನ ತಪ್ಪು ಗುರುತು ಹಿಡಿದ ನೀನು
''ಹೇಗಿದ್ದೀರಿ'' ಎಂದಾಗ ಕಾಲ್ನಡಗಿ.. ಉಸಿರುಡುಗಿ
ನನ್ನ ನಿಜ ಪರಿಚಯವ ಹೇಳಲು ಸೋತಿದ್ದೆ

Wednesday, December 25, 2013

ಸಂಸರ್ಗದಿಂ ಕಾಮವು
ಕಾಮದಿಂ ಕ್ರೋಧವು
ಕ್ರೋಧದ ಸಮ್ಮೋಹದಿ ಸ್ಮ್ರತಿಯಳಿದು
ಬುದ್ಧಿಯ ನಾಶವಂತೆ..ಜೊತೆಗೆ ನಮ್ಮದೂ.. ಸಂಗಾತ್ ಸಂಜಾಯತೆ ಕಾಮಃ

ಜಾಗ್ರುತಿಯಲ್ಲಿ ರೂಪಗಳ ಭ್ರಾಂತು
ಸ್ವಪ್ನದಲಿ ವಾಸನೆಗಳ ಭ್ರಾಂತು
ಸುಷುಪ್ತಿಯ ಆಳದಲಿ ವಿಷಯದ ಮಳೆ ನಿಂತು
ದಕ್ಕುವುದು ಯೋಗ ಅಂತೂ ಇಂತೂ .. ಮುಕ್ತ್ಯೈ ನಿರ್ವಿಷಯಂ ಸ್ಮ್ರುತಂ

ಎಲ್ಲಿಂದ ಬಂತು, ಏನೇನು ಬಂತು..
ಏತಕ್ಕೆ ಬಂತು..ಎಲ್ಲಿಗೆ ಹೊರಟಿಹುದು..
ಕಳಿಸಿದ್ದು ಯಾರು.. ಕರೆವವರು ಯಾರು
ಹಿಡಿ ಕಾಲು ಬಿಡಬೇಡ ತಿಳಿ ಅದನು ನೀ ಮೊದಲು.. ತತ್ ವಿದ್ಧಿ ಪ್ರಣಿಪಾತೇನ ...
ಶುದ್ಧವಲ್ಲದ ಜಾಗೃತಿಯ
ಲೋಕದಲ್ಲಿ ನನ್ನಿಟ್ಟು

ಶುದ್ಧವಾದ ಸ್ವಪ್ನವ
ಆಗಾಗ ತೋರುತ್ತ
ಸುಷುಪ್ತಿಯ ಆನಂದವನು
ಕದ್ದು ಕೊಡುವೆಯೇತಕ್ಕೆ

ಬರಸೆಳೆದು ತಬ್ಬಿ
ಪೂರ್ಣ ಆನಂದವನಿತ್ತು
ಕಳೆಯಬಾರದೇ ಮಾಯೆ
ಮಾತಂಗತನಯೇ...

Wednesday, November 13, 2013

ಗಾಯತ್ರೀ


ಪ್ರಣವ ಮತ್ತು ಭೂಃ, ಭುವಃ, ಸ್ವಃ ಎಂಬ ಮೂರು ವ್ಯಾಹೃತಿಗಳ ಸಹಿತವಾದ ತತ್ಸವಿತುರ್ವರೇಣ್ಯಂ... ಎಂಬ ಮಂತ್ರದ ಉಪಾಸನೆ ಗಾಯತ್ರೀ ಉಪಾಸನೆ ಎಂದು ಪ್ರಖ್ಯಾತವಾಗಿದೆ.  ತಲಾ ಎಂಟು ಅಕ್ಷರಗಳ ಮೂರು ಪಾದಗಳು ಹಾಗೂ ಒಟ್ಟು ಇಪ್ಪತ್ನಾಲ್ಕು ಅಕ್ಷರಗಳು ಈ ಋಕ್ಕಿನಲ್ಲಿ ಇವೆ. ಈ ರೀತಿ ಮೂರು ಪಾದ ಮತ್ತು ಇಪ್ಪತ್ನಾಲ್ಕು ಅಕ್ಷರಗಳನ್ನು ಹೊಂದಿದ ಗಾಯತ್ರೀ ಛಂದಸ್ಸಿನ ಮಂತ್ರಗಳು ಋಗ್ವೇದ ಸಂಹಿತೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಇವೆ. ಈ ಋಕ್ಕು (ಋಗ್ವೇದ 3-62-10, ಯಜುರ್ವೇದ 1-5-64, ಶುಕ್ಲ 3-43, ಸಾಮ-2-13-9) ನಾಲ್ಕೂ ವೇದಗಳ ಸಂಹಿತೆಯಲ್ಲಿ ಏಕರೂಪವಾಗಿ ಇದೆ. ‘ಗಾಯಂತಂ ತ್ರಾಯತೆ’ ಎಂದರೆ ಗಾನ ಮಾಡುವವರನ್ನು ಅಥವಾ ಜಾಪಕನನ್ನು ರಕ್ಷಿಸುತ್ತದೆ ಎನ್ನುವ ಕಾರಣಕ್ಕೆ ಹಾಗೂ ತನ್ನ ಛಂದಸ್ಸಿನ ಕಾರಣಕ್ಕಾಗಿ ಈ ಮಂತ್ರವು “ಗಾಯತ್ರಿ’’ ಎಂದು ಲೋಕದಲ್ಲಿ ಪರಿಚಿತವಾಗಿದೆಯಾದರೂ ಈ ಋಕ್ಕಿನಲ್ಲಿ ಗಾಯತ್ರಿ ಎಂಬ ದೇವಿಯ ಉಲ್ಲೇಖ ಇಲ್ಲ. ಬದಲಾಗಿ ಸವಿತೃವಿನ ಪ್ರಾರ್ಥನೆ ಇದೆ. 'ಸುವತಿ-ಪ್ರೇರಯತಿ ಕರ್ಮಾಣಿ ಲೋಕಂ' ಎನ್ನುವಂತೆ ಜಗತ್ತಿನ ಜೀವಿಗಳನ್ನು  ತನ್ನ ಜ್ಯೋತಿಯ ಮೂಲಕ ಅವುಗಳಲ್ಲಿ ಚೈತನ್ಯ ತುಂಬಿ ಕಾರ್ಯಪ್ರವೃತ್ತವಾಗಿಸುವ ಕಾರಣಕ್ಕಾಗಿ ಸೂರ್ಯನಿಗೆ ‘ಸವಿತಾ’ ಎಂಬ ಹೆಸರಿದೆ. ಆ ಸವಿತೃವಿನ ಪ್ರಾರ್ಥನೆಯ ಋಕ್ಕು ಇದಾದ್ದರಿಂದ ಗಾಯತ್ರೀ ಮಂತ್ರಕ್ಕೆ ವೈದಿಕ ಸಾಹಿತ್ಯದಲ್ಲಿ ‘ಸಾವಿತ್ರೀ’ ಎಂಬ ಹೆಸರಿದೆ.
ಹೃದಯಾಕಾಶೆ ತು ಯೋ ಜೀವಃ ಸಾಧಕೈರುಪಗೀಯತೆ!
ಸ ಏವಾದಿತ್ಯರೂಪೇಣ ಬಹಿರ್ನಭಸಿ ರಾಜತೆ !! 
ಹೃದಯಾಕಾಶದಲ್ಲಿ ಸಾಧಕರಿಂದ ಸ್ತುತಿಸಲ್ಪಡುವ ಯಾವ ಆತ್ಮನಿದ್ದಾನೋ ಆ ಆತ್ಮವೇ ್ಲ ಬಾಹ್ಯಾಕಾಶದಲ್ಲಿ ಸೂರ್ಯನ ರೂಪದಲ್ಲಿ ಪ್ರಕಾಶಿಸುತ್ತಾನೆ ಎಂದು ಋಷಿಗಳು ತಿಳಿಸಿದ್ದಾರೆ.
ಸ ಯಶ್ಚಾಯಂ ಪುರುಷೆ,  ಯಶ್ಚಾಸಾವಾದಿತ್ಯೆ, ಸ ಏಕಃ - ಎಂಬ ತೈತ್ತರೀಯೋಪನಿಷತ್ತಿನ ಈ ಮಾತು ಕೂಡ ಅದನ್ನೇ ಹೇಳುತ್ತದೆ. ನಿರ್ಗುಣೋಪಾಸನೆಯ ಕಾಲವಾದ ವೇದಕಾಲದ ಸಂಧ್ಯಾವಂದನೆಯ ಕೇಂದ್ರಬಿಂದುವಾದ ಈ ಮಂತ್ರವೂ ಕೂಡ ನಿರ್ಗುಣ ಪರಬ್ರಹ್ಮವನ್ನೇ ಸ್ತುತಿಸುತ್ತದೆ. ಆದರೆ ಕಾಲಾಂತರದಲ್ಲಿ ಸಗುಣೋಪಾಸನೆ ಅನಿವಾರ್ಯವಾದ ಕಾಲಘಟ್ಟದಲ್ಲಿ ಪೌರಾಣಿಕ ಋಷಿಗಳು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆ ಗಾಯತ್ರೀ ಮಂತ್ರದ ಅಧಿದೇವತೆಯನ್ನು ಕೂಡ ಒಂದು ದೇವಿಯ ರೂಪದಲ್ಲಿ ವರ್ಣಿಸಿ ಸ್ತುತಿಸಿದರು. 
ಮುಕ್ತಾವಿದೃಮ ಹೇಮ ನೀಲ ಧವಳಚ್ಛಾಯೈರ್ಮುಖೈಸ್ತ್ರೀಕ್ಷಣೈಃ
ಯುಕ್ತಾಮಿಂದುಕಲಾ ನಿಬದ್ಧ ರತ್ನಮುಕುಟಾಂ ತತ್ವಾರ್ಥ ವರ್ಣಾತ್ಮಿಕಾಂ
ಗಾಯತ್ರೀಂ ವರದಾಭಯಾಂಕುಶ ಕಶಾಃ ಶುಭ್ರಂ ಕಪಾಲಂ ಗದಾಂ
ಶಂಖಂ ಚಕ್ರಮಥಾರವಿಂದಯುಗಳಂ ಹಸ್ತೈರ್ವಹಂತೀಂ ಭಜೆ
ಮೂರು ಸಂಧ್ಯಾಕಾಲಗಳಲ್ಲಿ ಗಾಯತ್ರೀದೇವಿಯ ಮೂರು ವಿವಿಧ ರೂಪಗಳ ವರ್ಣನೆ ಇದೆಯಾದರೂ ಮೇಲಿನ ಧ್ಯಾನಶ್ಲೋಕದಲ್ಲಿ ವರ್ಣಿಸಿದಂತೆ ಸಮಷ್ಟಿಯಾಗಿ ಗಾಯತ್ರೀ ದೇವಿಯನ್ನು ಐದು ಮುಖಗಳುಳ್ಳವಳಾಗಿ ಧ್ಯಾನಿಸುವ ಪದ್ಧತಿ ಹೆಚ್ಚು ಪ್ರಚಲಿತ ಮತ್ತು ಎಲ್ಲರಿಗೂ ಪರಿಚಿತ. ಆ ಪಂಚಮುಖೀ ಗಾಯತ್ರೀದೇವಿಯ ಸ್ವರೂಪದ ಹಿಂದೆ ಗಹನವಾದ ತಾತ್ವಿಕ ಅರ್ಥವಿದೆ.
1.    ಗಾಯತ್ರೀ ದೇವಿಯ ಮೊದಲ ಮುಖ ‘ಮುಕ್ತಾ’ ಎಂದರೆ ಮೌಕ್ತಿಕದ ಅಥವಾ ಮುತ್ತಿನ ವರ್ಣದಿಂದ ಕೂಡಿದೆ. ಕೆಂಪು ಬಣ್ಣದಿಂದ ಪರಿವರ್ತಿತವಾಗಿ ಶ್ವೇತಕ್ಕೆ ತಿರುಗಿದಂತಿರುವ ಈ ಬಣ್ಣವು ರಜೋಗುಣದಿಂದ ಪರಿವರ್ತಿತವಾದ ಸತ್ವಗುಣವನ್ನು ಸೂಚಿಸುತ್ತದೆ. ಈ ಮುಖವು ವ್ಯಾಕರಣ ಶಾಸ್ತ್ರವನ್ನು ಪ್ರತಿನಿಧಿಸುತ್ತದೆ. ಗಣಪತಿಯು ಈ ಮುಖದ ಅಧಿಪತಿಯಾಗಿದ್ದಾನೆ. ‘ಅಭಯ’ ಮತ್ತು ‘ವರಪ್ರದಾ£’Àದ ಮುದ್ರೆಗಳನ್ನು ಹೊಂದಿದ ಎರಡು ಕೈಗಳು ಈ ಮುಖಕ್ಕೆ ಸಂಬಂಧಿಸಿದವುಗಳಾಗಿವೆ ಹಾಗೂ ಈ ಮುಖಕ್ಕೆ ‘ಜಲ’ವು ಸ್ಥಾನವಾಗಿದೆ.

2.    ಎರಡನೇಯ ಮುಖವು ‘ವಿದ್ರುಮ’ ಎಂದರೆ ರಜೋಗುಣಸೂಚಕವಾದ ಕೆಂಪು ವರ್ಣದಿಂದ ಕೂಡಿದೆ. ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆ ಇದರ ಉದ್ದೇಶವಾಗಿದೆ. ‘ಪಾಶ’ ಮತ್ತು ‘ಅಂಕುಶ’ ಗಳನ್ನು ಧರಿಸಿದ ಎರಡು ಕೈಗಳು ಈ ಮುಖಕ್ಕೆ ಸಂಬಂಧಪಟ್ಟಿವೆ. ದುಷ್ಟಶಿಕ್ಷಕಿ-ಶಿಷ್ಟರಕ್ಷಕಿಯಾದ ‘ದುರ್ಗೆ’ಯು ಈ ಮುಖದ ಅಧಿದೇವತೆಯಾಗಿದ್ದಾಳೆ. ಶಿಕ್ಷಾಶಾಸ್ತ್ರವನ್ನು ಪ್ರತಿನಿಧಿಸುವ  ಈ ಮುಖದ ಸ್ಥಾನವು ‘ಅಗ್ನಿ’ ಯಾಗಿದೆ.

3.    ಮೂರನೇಯ ಮುಖವು ‘ಹೇಮ’ ಎಂದರೆ ಬಂಗಾರದ ವರ್ಣದಲ್ಲಿದೆ. ‘ಸೂರ್ಯÀ’ ನು ಈ ಮುಖದ ಅಧಿದೇವತೆಯಾಗಿದ್ದಾನೆ. ಕಲ್ಪಶಾಸ್ತ್ರವನ್ನು ಸೂಚಿಸುವ ಈ ಮುಖದ ಅಧೀನದಲ್ಲಿರುವ ಎಡು ಕೈಗಳು ಕಪಾಲ ಮತ್ತು ಗದೆಯನ್ನು ಧರಿಸಿವೆ. ಅವುಗಳಿಂದ ಆಹಾರ ಮತ್ತು ಸುರಕ್ಷತೆಯು ಲಭಿಸುತ್ತವೆÉ.  ಈ ಮುಖದ ಸ್ಥಾನವು ‘ವಾಯು’ ಆಗಿದೆ.

4.    ಗಾಯತ್ರಿಯ ನಾಲ್ಕನೇಯ ಮುಖವು ಆಕಾಶಸೂಚಕವಾದ ‘ನೀಲ’ ವರ್ಣದಲ್ಲಿದೆ.  ನೀಲ ವರ್ಣ ಹಾಗೂ ಆಕಾಶ  ಇವೆರಡೂ ಕೂಡ ಶೂನ್ಯಸ್ವರೂಪಗಳು ಹಾಗೂ ನಿರ್ಗುಣ ಪರಬ್ರಹ್ಮದ ಸೂಚಕಗಳಾಗಿವೆ. ಆಳವಾದ ನೀರಿನ ಸ್ಥಾವರವೂ ಕೂಡ ನೀಲವರ್ಣದಿಂದಲೇ ಕೂಡಿದ್ದು, ಜಲವು ವಿಷ್ಣುತತ್ವಸೂಚಕವಾಗಿದೆ.  ವಿಷ್ಣು ಈ ಮುಖದ ಅಧಿದೇವತೆಯಾಗಿದ್ದಾನೆ ಹಾಗೂ ಶಂಖ-ಚಕ್ರಗಳನ್ನು ಧರಿಸಿದ ಎರಡು ಕೈಗಳು ಈ ಮುಖಕ್ಕೆ ಸಂಬಂಧಿಸಿವೆ. ಈ ಮುಖವು ‘ನಿರುಕ’್ತ ಗ್ರಂಥವನ್ನು ಪ್ರತಿನಿಧಿಸುತ್ತದೆ. ‘ಆಕಾಶ’ವು ಈ ಮುಖದ ಸ್ಥಾನವಾಗಿದೆ.

5.    ಐದನೇಯ ಮುಖವು ‘ಧವಲ’ ಎಂದರೆ ಬಿಳೀ ಬಣ್ಣವನ್ನು ಹೊಂದಿದೆ. ಶ್ವೇತ ವರ್ಣವು ಶುಧ್ಧತೆ, ಸತ್ವಗುಣ ಹಾಗೂ ತ್ಯಾಗದ ಸಂಕೇತವಾಗಿದೆ. ಈ ಮುಖದ ಅಧೀನದಲ್ಲಿರುವ ಎರಡು ಕೈಗಳಲ್ಲಿ ಎರಡು ಕಮಲ ಪುಷ್ಪಗಳು ಶೋಭಿತವಾಗಿವೆ. ಈ ಪುಷ್ಪಗಳು ಬ್ರಹ್ಮ ಮತ್ತು ಭಾವಸಿದ್ಧಿಯನ್ನು ಸೂಚಿಸುತ್ತವೆ.  ಯೋಗಿಗಳ ಗುರುವಾದ,  ತ್ಯಾಗಮೂರ್ತಿಯಾದ ಶಿವನು ಈ ಮುಖದ ಅಧಿದೇವತೆಯಾಗಿದ್ದಾನೆ. ಜ್ಯೋತಿಸ್ವರೂಪಿಯಾದ ಜ್ಯೋತಿಷ ಶಾಸ್ತ್ರವನ್ನು ಈ ಮುಖವು ಪ್ರತಿನಿಧಿಸುತ್ತದೆ.  ‘ಪೃಥ್ವಿ’ ಅಥವಾ ಭೂಮಿಯು ಈ ಮುಖದ ಸ್ಥಾನವಾಗಿದೆ.
ಮುಖ        ವರ್ಣ          ಸ್ಥಾನ        ದೇವತೆ           ಕೈಗಳು
1             ಮುಕ್ತಾ         ಜಲ         ಗಣೇಶ          ಅಭಯ-ವರದ
2             ವಿದ್ರುಮ       ಅಗ್ನಿ         ದುರ್ಗಾ         ಪಾಶ-ಅಂಕುಶ
3             ಹೇಮ         ವಾಯು      ಸೂರ್ಯ        ಕಪಾಲ-ಗದಾ
4             ನೀಲ          ಆಕಾಶ       ವಿಷ್ಣು           ಶಂಖ-ಚಕ್ರ
5             ಧವಲ         ಪೃಥ್ವಿ         ಶಿವ            ಎರಡು ಕಮಲ ಪುಷ್ಪಗಳು

ಪೃಥ್ವಿ, ಆಪ ತೇಜ ಇತ್ಯಾದಿ ಪಂಚಭೂತಗಳಿಗೆ ಅಧಿದೇವತೆಗಳಾದ ಗಣೇಶ, ದುರ್ಗಾ, ಸೂರ್ಯ, ವಿಷ್ಣು ಹಾಗೂ ಶಿವ ಈ ಐದು ದೇವತೆಗಳನ್ನೇ ಒಟ್ಟಿಗೆ ಸೇರಿಸಿ ಸಮಷ್ಟಿಯಾಗಿ ‘ಪಂಚಾಯತನ’ ಎಂದು ಕರೆದು ಪೂಜಿಸುವ ಪದ್ಧತಿ ಬಹುತೇಕ ಎಲ್ಲ ಗೃಹಸ್ಥರ ಮನೆಗಳಲ್ಲಿ ಹಾಗೂ ಮಠಮಾನ್ಯಗಳಲ್ಲಿ ಪ್ರಚಲಿತವಿದೆ. ಈ ಐದು ದೇವತೆಗಳ ಸಮಷ್ಟಿರೂಪವೇ ಪರಬ್ರಹ್ಮತತ್ವ (ಗಾಯತ್ರಿ) ಆಗಿದೆ.  ಗಾಯತ್ರೀ ದೇವಿಯ ಶಿರದಲ್ಲಿರುವ ಚಂದ್ರಮೌಳಿಯು ಸಚ್ಚಿದಾನಂದ ತತ್ವವನ್ನು ಸೂಚಿಸುತ್ತದೆ. ತಾವರೆ ಹೂವಿನ ಮೇಲೆ ಗಾಯತ್ರಿ ಕುಳಿತಿರುತ್ತಾಳೆ. ಈ ತಾವರೆಯು ಕೆಸರಿನಲ್ಲಿ ಹುಟ್ಟಿ ನೀರಿನಲ್ಲೇ ಬೆಳೆದು ನಿಂತಿದ್ದರೂ ಕೆಸರು ಅಥವಾ ನೀರನ್ನು ತನಗೆ ಮೆತ್ತಿಸಿಕೊಳ್ಳುವುದಿಲ್ಲ.  ಹೀಗೆ ಸಂಸಾರಸಾಗರದಲ್ಲಿ ಜನಿಸಿದ ಮಾನವನು ಸಂಸಾರದ ಭಾಗವಾದ ರಾಗ-ದ್ವೇಷಾದಿಗಲನ್ನು ಅಚಿಟಿಸಿಕೊಳ್ಳದೇ ಅಲಿಪ್ತನಾಗಿಯೇ ಉಳಿದು ಬ್ರಹ್ಮತತ್ವವನ್ನು ಹೊಂದಲು ಪ್ರಯತ್ನಿಸಬೇಕೆಂಬುದೇ ಇದರ ಗೂಢಾರ್ಥವಾಗಿದೆ.

ಇನ್ನು ಕೆಲ ಉಪಾಸಕರು ಗಾಯತ್ರಿಯ ಧ್ಯಾನಶ್ಲೋಕದಲ್ಲಿ ‘ಮುಖೈಸ್ತ್ರೀಕ್ಷಣೈಃ’ ಎನ್ನುವುದರ ಬದಲಾಗಿ ‘ಮುಖೈಸ್ತ್ರ್ಯಕ್ಷತೈಃ’ ಎಂದು ಹೇಳುತ್ತಾರೆ. ಅವರ ಉಪಾಸನಾ ವಿಧಾನದಲ್ಲಿ ಗಾಯತ್ರೀ ದೇವಿಗೆ ಮೂರೇ ಮುಖಗಳು ಇರುವುದು. ಮುಕ್ತಾ ಇತ್ಯಾದಿ ಐದು ವರ್ಣಗಳು ದೇವಿಯ ದೇಹದ ವರ್ಣಗಳು ಎಂದು ಆ ಪಂಥದ ಉಪಾಸಕರ ಮತ. “ಮುಖೈಃ+ತ್ರೀ+ಅಕ್ಷತೈಃ = ಮುಖೈಸ್ತ್ರ್ಯಕ್ಷತೈಃ’’  ‘ಅಕ್ಷತ’ ಎಂದರೆ ಪರಿಪೂರ್ಣ, ಅಭೇದ ಮುಂತಾದ ಅರ್ಥಗಳಿವೆ. ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಅಭೇದವಾದ ಅಂದರೆ ತ್ರಿಮೂರ್ತಿಗಳ ಮೂರು ಮುಖಗಳೇ ಗಾಯತ್ರಿಯ ಮೂರು ಮುಖಗಳಾಗಿವೆ ಎಂಬುದು ಆ ಸಂಪ್ರದಾಯದ ಮತ.
‘ವರ್ಣ’ ಎಂಬ ಶಬ್ದಕ್ಕೆ ಮೂಲದಲ್ಲಿ ‘ಸ್ಥಿತಿ’ ಎಂಬ ಅರ್ಥವಿದೆ. ಹಿಗಾಗಿ ಮುಕ್ತಾ ಇತ್ಯಾದಿ ಪಂಚವರ್ಣಗಳು ಪಂಚಭೂತಗಳ ಸ್ಥಿತಿಯನ್ನು ಗಾಯತ್ರಿಯ ದೇಹದಲ್ಲಿ ಸೂಚಿಸುತ್ತವೆ. ಶೈವ ಪಂಥದವರು ಗಾಯತ್ರಿಯನ್ನು ಕೂಡ ಶಿವನಂತೆಯೇ ಪಂಚಮುಖಿಯಾಗಿ ಹಾಗೂ ತ್ರಿನೇತ್ರಯುಕ್ತಳಾಗಿ ವರ್ಣಿಸಿದ್ದಾರೆ ಎಂಬು ತ್ರಿಮುಖೀ ಗಾಯತ್ರೀ ಉಪಾಸಕರು ನೀಡುವ ಸ್ಪಷ್ಟನೆ.
ಹೀಗೆ ಗಾಯತ್ರಿಯ ಸ್ವರೂಪದ ಬಗ್ಗೆ ತಿಳಿಯುತ್ತ ಹೋದಾಗ  ಇನ್ನೊಂದು ಆಯಾಮವೂ ಕೂಡ ಸಿಗುತ್ತದೆ.
ಮುಕ್ತಾ- ಎಂದರೆ ಭಸ್ಮದ ವರ್ಣ, ಅಗ್ನಿಯಲ್ಲಿ ಎಲ್ಲ ರೀತಿಯ ಕಲ್ಮಶಗಳೂ ಸುಟ್ಟು ಶುಧ್ಧವಾಗಿ  ‘ಮುಕ್ತ’ವಾದ ಮೇಲೆ ಭಸ್ಮವು ಸಿದ್ಧವಾಗುತ್ತದೆ. ಮಣ್ಣಿನ ಅಥವಾ ಪೃಥ್ವಿಯ ರೂಪವಾದ ಭಸ್ಮದ ‘ಗುಣ’ವು ‘ಗಂಧ’ವಾಗಿದೆ.
ವಿದ್ರುಮ- ದ್ರುಮದಿಂದ ಎಂದರೆ ವೃಕ್ಷದಿಂದ ದ್ಯುತಿಸಂಸ್ಲೇಷಣೆ(ಠಿhoಣo sಥಿಟಿಣhesis) ಕ್ರಿಯಯಿಂದ ಉಂಟಾಗುವ ಆಮ್ಲಜನಕವು ಹಾಗೂ ತನ್ಮೂಲಕವಾಗು ಹೊರಹೊಮ್ಮುವ ನೀರಿನ ಅಂಶವು ಇಲ್ಲಿನ ವಿದ್ರುಮ ಎಂಬ ಶಬ್ದಕ್ಕೆ ಅರ್ಥ. ಪಂಚಭೂತಗಳಲ್ಲಿ ಒಂದಾದ ‘ಜಲ’ದ ಗುಣವು ‘ರಸ’
ಹೇಮ-  ಅಗ್ನಿಯು ಹೇಮವರ್ಣದಿಂದ ಕೂಡಿದೆ ಹಾಗೂ ‘ರೂಪ’ ಅದರ ಗುಣ.
ನೀಲ- ವಾಯುವಿನ ವರ್ಣವು ನೀಲವಾಗಿದ್ದು ‘ಸ್ಪರ್ಶ’ ಅದರ ಗುಣವಾಗಿದೆ.
ಧವಲ- ಆಕಾಶವು ಶ್ವೇತವರ್ಣವನ್ನೂ ಹೊಂದಿದ್ದು ‘ಶಬ್ದ’ ಅದರ ಗುಣವಾಗಿದೆ.
ಹೀಗೆ ಪೃಥ್ವಿ, ಆಪ, ತೇಜ, ವಾಯು, ಆಕಾಶವೆಂಬ ಪಂಚಭೂತಗಳು ಹಾಗು ಅವುಗಳ ಗುಣಗಳಾದ ಶಬ್ದ, ಸ್ಪರ್ಶ, ರೂಪ, ಸ, ಗಂಧ ಗಳೇ ಸಗುಣರೂಪಿಯಾದ ಗಾಯತ್ರೀದೇವಿಯ ಸ್ವರೂಪವಾಗಿವೆ.  ವಿದ್ವಾಂಸರ ಮತಭೇದಗಳೇನೇ ಇದ್ದರೂ ವಾಸ್ತವದಲ್ಲಿ ಸಕಲ ಚರಾಚರ ವಸ್ತುಗಳ ಒಳಗೆ ಮತ್ತು ಹೊರಗೆ ವ್ಯಾಪ್ತವಾಗಿದ್ದು ಜೀವಿಗಳ ಹೃದಯದಲ್ಲಿ ‘ಆತ್ಮಸಾಕ್ಷೀ’ ರೂಪದಲ್ಲಿರು ಚೈತನ್ಯ ತತ್ವವೇ ಗಾಯತ್ರಿಯ ನಿಜಸ್ವರೂಪವಾಗಿದೆ. ಆದ ಕಾರಣದಿಂದಲೇ ಗಾಯತ್ರೀ ಮಂತ್ರೋಪಾಸನೆ ವೇದಕಾಲದಿಂದ ಇಂದಿನವರೆಗೂ ಪ್ರತಿನಿತ್ಯದ ವೈದಿಕ ಉಪಾಸನೆಯ ಕೇಂದ್ರಬಿಂದುವಾಗಿದೆ.