Wednesday, July 10, 2013

ಪುರುಷ ಸೂಕ್ತ


ಕಳೆದ ಮೇ ತಿಂಗಳಿನಲ್ಲಿ  ಸಂಜೆ  ಕೆ ಎಚ್ ಕಲಾಸೌಧದಲ್ಲಿ   ಅಭಿಜ್ಞಾನ ತಂಡದವರಿಂದ   ಶ್ರೀನಿವಾಸಮೂರ್ತಿ ಮಾರ್ಗದರ್ಶನದಲ್ಲಿ ಹಾಗೂ ಜೊಸೆಫ್ ಜಾನ್ ರವರ ನಿರ್ದೇಶನದಲ್ಲಿ  ''ಪುರುಷ ಸೂಕ್ತ -ಶ್ರುತಿಗೆ ದೃಶ್ಯ ರೂಪ'' ಎಂಬ ಅಪರೂಪದ ರಂಗಪ್ರಯೋಗವನ್ನು ಪ್ರಸ್ತುತಪಡಿಸಲಾಯಿತು. ಈಗ ಮತ್ತೆ ಇದೇ ಜುಲೈ ೧೪ ಭಾನುವಾರ ರಂಗಶಂಕರದಲ್ಲಿ ಮತ್ತೆರಡು (೩:೩೦- ೭:೩೦) ಪ್ರದಶðನಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ ಬಾರಿಯ ಪ್ರದರ್ಶನದಲ್ಲಿ ಅಭಿಜ್ಞಾನ ತಂಡ  ಅದ್ಭುತವಾಗಿ ನೃತ್ಯ, ಚಾರಿ, ಅಭಿನಯ ಮುಂತಾದ ಅನೇಕ ಕಲಾಪ್ರಕಾರಗಳನ್ನು ಹದವಾಗಿ ಬೆರೆಸಿ ನೋಡುಗರನ್ನು ವಿಸ್ಮಿತಗೊಳಿಸಿದರು. ಅದರಿಂದ ಪ್ರೇಕ್ಷಕರಿಗೆ ಪ್ರದರ್ಶನದ ಕಲಾತ್ಮಕತೆಯ ಮಧುರಾನುಭೂತಿಯಾದರೂ, ಸಂಸ್ಕೃತ ಬಾರದ ಅಥವಾ ಪುರುಷ ಸೂಕ್ತದ ಬಗ್ಗೆ ತಿಳಿಯದ ಸಾಮಾನ್ಯ  ಪ್ರೇಕ್ಷಕರಿಗಾಗಿ  ಹೆಚ್ಚಿನ ಭಾಷಾಂತರ ಮತ್ತು ವಿಸ್ತಾರವಾದ ಪೂರ್ವ ಪೀಠಿಕೆ ಅಥವಾ ಪರಿಚಯ ಕೈಪಿಡಿಯ ಅವಶ್ಯಕತೆ ಇತ್ತು ಅಂತ ಅನಿಸಿದ್ದು ಸುಳ್ಳಲ್ಲ. ಆದರೆ ಈ ಬಾರಿಯ ಪ್ರದರ್ಶನದಲ್ಲಿ ಅನೇಕ ಬದಲಾವಣೆಗಳನ್ನು ಹಾಗೂ ಪರಿಷ್ಕರಣೆಗಳನ್ನು ಮಾಡಿಕೊಂಡಿರುವುದರಿಂದ ಈ ಬಾರಿ ಹಿಂದಿಗಿಂತಲೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ.  

 ''ಪುರುಷ ಸೂಕ್ತ'' ಅನ್ನುವ ಹೆಸರು ಸಮಾಜದ ಕೆಲವೇ ವರ್ಗದ ಜನರಿಗೆ ಪರಿಚಿತ. ಆ ವರ್ಗದ ಜನರಲ್ಲಿಯೂ ನೂರಕ್ಕೆ ತೊಂಭತ್ತೊಂಭತ್ತು ಜನ ಅದು ಅಭಿಷೇಕ ಮಾಡುವಾಗ ಹೇಳುವ ಮಂತ್ರ ಅಂತಷ್ಟೇ ತಿಳಿದುಕೊಂಡಿದ್ದು ನನ್ನ ಗಮನಕ್ಕೆ ಬಂದಿದೆ. ಅದರ ಹೊರತಾಗಿ ಪುರುಷ ಸೂಕ್ತದ ಬಗ್ಗೆ ಹೆಚ್ಚಿನ ಮಾಹಿತಿ ಸಾಮಾನ್ಯವಾಗಿ ಯಾರಲ್ಲಿಯೂ ಇಲ್ಲ.  ಅದಕ್ಕಿಂತಲೂ ಮಿಗಿಲಾಗಿ ''ವೇದ'' ಎಂದರೆನೇ ಪೂಜೆ ಪುನಸ್ಕಾರವಷ್ಟೇ ಎಂಬ ತಪ್ಪು ಮಾಹಿತಿ ಸುಶಿಕ್ಷಿತ ವರ್ಗದಲ್ಲಿಯೇ  ಇರುವುದನ್ನು ನೋಡಿ ನಾನು ಅನೇಕ ಸಾರಿ ಆಶ್ಚರ್ಯಕ್ಕೊಳಪಟ್ಟಿದ್ದೇನೆ. ಹೀಗಾಗಿ ಪುರುಷ ಸೂಕ್ತವನ್ನು ಪೂಜೆಯ ಮಂತ್ರ ಎಂದು ಹೆಚ್ಚಿನವರು ತಿಳಿದಿರುವುದು ಸಹಜ  ಮತ್ತು ವಾಸ್ತವ. 


ಪುರುಷ ಸೂಕ್ತ ಋಗ್ವೇದದ ಹತ್ತನೆಯ ಮಂಡಲದಲ್ಲಿಯ ಹದಿನಾರು ಋಕ್ಕುಗಳ ಒಂದು ಗುಚ್ಛ ಅಥವಾ ವೈದಿಕ ಭಾಷೆಯಲ್ಲಿ ''ಸೂಕ್ತ''. ಈ ಸೂಕ್ತದಲ್ಲಿ ಹದಿನೈದು ಅನುಷ್ಟುಪ್ ಛಂದಸ್ಸಿನ ಋಕ್ಕುಗಳು  ಮತ್ತು ಕೊನೆಯದು ತ್ರಿಷ್ಟುಪ್ ಛಂದಸ್ಸಿನ ಋಕ್ಕು. ಇಂತಹ ಪುರುಷ ಸೂಕ್ತವನ್ನು ಸಾಮಾನ್ಯರಿಗಾಗಿ ಪರಿಚಯಿಸುವ ಪ್ರಯತ್ನವನ್ನುಮಾಡುವುದು ನನ್ನ ಈ ಬರಹದ ಉದ್ದೆಶ.  ಇದು ವಿದ್ವಾಂಸರನ್ನು ಮೆಚ್ಚಿಸಲು ಅಲ್ಲವೇ ಅಲ್ಲ.

 ಎಲ್ಲರಿಗೂ ತಿಳಿದಿರುವ ಹಾಗೆ ವೇದವು   ಋಕ್ಕು, ಯಜುಸ್ಸು, ಸಾಮ ಮತ್ತು ಅಥರ್ವ ಎಂಬ ನಾಲ್ಕು  ವಿಭಾಗಗಳಲ್ಲಿ ಇದೆ. ಮತ್ತು ಒಂದೊಂದು ವೇದಕ್ಕೂ ಅನೇಕ ಶಾಖೆಗಳಿದ್ದು,  ಅವುಗಳಲ್ಲಿನ ಬಹುತೇಕ ಶಾಖೆಗಳು ಈಗ ಲುಪ್ತವಾಗಿ ಹೋಗಿವೆ.
(ನಮ್ಮಲ್ಲಿ ಸಾಮಾನ್ಯವಾಗಿ ಬೈಬಲ್, ಖುರಾನ್ ಮುಂತಾದವುಗಳು ಹೇಗೆ ಒಂದು ಮತದ ಗ್ರಂಥಗಳಾಗಿವೆಯೋ ಹಾಗೆ ವೇದಗಳನ್ನು ಅಂಥಹ ''ಮತಗ್ರಂಥ'' ಎಂದು ಭಾವಿಸುವವರಿದ್ದಾರೆ. ಇನ್ನು ಕೆಲವರಂತೂ ಭಗವದ್ಗೀತೆಯನ್ನು ಅಂತಹ ಮತಗ್ರಂಥ ಅಂತ ಭಾವಿಸಿದ್ದಾರೆ.  ಮತ್ತು ಈ ''ಮತಗ್ರಂಥ'' ವನ್ನು ''ಧರ್ಮಗ್ರಂಥ'' ಎಂದು ಕರೆಯುವ ಅಭ್ಯಾಸ ತಲೆಮಾರುಗಳಿಂದ ಆಗಿ ಹೊಗಿದೆ. ನಮ್ಮ ಸಿನೆಮಾಗಳಲ್ಲಿಯ ನ್ಯಾಯಾಲಯದ ದೃಶ್ಯಗಳಲ್ಲಿ ಈ ಭಗವದ್ಗೀತೆಯ ಮೇಲೆ ಕೈ ಇಟ್ಟು  ಪ್ರಮಾಣ ಮಾಡಿಸುವ ದೃಶ್ಯಗಳು ಕೂಡ ಈ ಭಾವನೆ ಹೆಚ್ಚು ಬೆಳೆಯಲು ಪೂರಕವಾಗಿ ಕೆಲಸ ಮಾಡಿವೆ. ಈ ''ಮತ'' ವನ್ನು ''ಧರ್ಮ'' ಎಂದು ಅನುವಾದಿಸುವ  ಅನಿಷ್ಟ ಪದ್ಧತಿಯಿಂದಾಗಿ ಅನೇಕ  ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳು  ಉದ್ಭವವಾಗಿವೆ. ವಾಸ್ತವವಾಗಿ ''ವೇದ'' ಮತ್ತು ''ಭಗವದ್ಗೀತೆ'' ಎರಡೂ ಕೂಡ ಇಂತಹ ಮತ ಗ್ರಂಥಗಳು ಅಲ್ಲವೇ ಅಲ್ಲ ಮತ್ತು ''ಮತ'' ಹಾಗೂ ''ಧರ್ಮ'' ಎರಡು ಬೇರೆ ಬೆರೆ ಎಂಬುದನ್ನು ಮೊದಲು ಸ್ಪಷ್ಟವಾಗಿ ಅಥð ಮಾಡಿಕೊಳ್ಳಬೇಕು. ಮತವು. ''ಧರ್ಮ''ವನ್ನು  ಆಚರಿಸುವಂತೆ ತಿಳಿಸುತ್ತದೆಯೇ ಹೊರತು ''ಮತ''ವೇ ಧರ್ಮವಲ್ಲ. ಕೆಲ ಮತಗಳಿಗೆ ''ಕುರಾನ್'' ''ಬೈಬಲ್'' ನಂತಹ 'ಮತಗ್ರಂಥ'ಗಳಿರುವ ಹಾಗೆ ಹಿಂದೂಗಳಿಗೆ ಅಂತಹ  ಯಾವುದೇ ಮತಗ್ರಂಥವಿಲ್ಲ. ಯಾಕೆ ಹೀಗೆ ಅಂತ ತಿಳಿಯಬೇಕಾದರೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಸ್ವಲ್ಪ ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಒಂದೆರಡು ಮಾತುಗಳಲ್ಲಿ ವಿವರಿಸಿ ಮುಗಿಸಲು ಸಾಧ್ಯವಾಗುವ ಸಂಗತಿಯಲ್ಲ ಅದು. 

ಇನ್ನು ಪುರುಷ  ಸೂಕ್ತದ ಬಗ್ಗೆ ತಿಳಿಯುವ ಮೊದಲು ಪುರುಷ ಸೂಕ್ತದ ಆಕರ ಗ್ರಂಥವಾದ ವೇದದ ಬಗ್ಗೆ ಸ್ವಲ್ಪ ಪರಿಚಯವಿರಲೇ ಬೇಕು. ಎಲ್ಲರಿಗೂ ತಿಳಿದಿರುವಂತೆ ಋಕ್ಕು, ಯಜುಸ್ಸು, ಸಾಮ ಮತ್ತು ಅಥರ್ವ ಎಂಬ ನಾಲ್ಕು ವಿಭಾಗಗಳಲ್ಲಿ ವೇದರಾಶಿ ವಿಭಾಗವಾಗಿದೆ. ಸನಾತನ ಸಾಂಪ್ರದಾಯಿಕ ನಂಬಿಕೆಯಲ್ಲಿ ವೇದವನ್ನು 'ಅಪೌರುಷೇಯ' ಎಂದರೆ ಯಾವುದೇ ವ್ಯಕ್ತಿಯಿಂದ ರಚಿಸಲ್ಪಟ್ಟದ್ದು ಅಲ್ಲ ಎಂದೇ ಪರಿಗಣಿಸಲಾಗುತ್ತದೆ. ಪ್ರಪಂಚದ ಸೃಷ್ಟಿಗೂ ಮೊದಲೇ ಭಗವಂತನಂತೆಯೆ ವೇದವೂ ಅನಾದಿಕಾಲದಿಂದ ಅಸ್ತಿತ್ವದಲ್ಲಿ ಇತ್ತು. ಅದು  ಋಷಿಗಳ ಮೂಲಕ ಲೋಕದಲ್ಲಿ ಪ್ರಕಟಗೊಂಡಿತು ಅನ್ನುವುದು ಭಾರತದ ಸನಾತನ ನಂಬಿಕೆ. 'ಋಷಯೋ ಮಂತ್ರದ್ರಷ್ಟಾರಃ' ಎನ್ನುವ ಅಥವಾ'ಋಷಿರ್ದರ್ಶನಾತ್'' ಎನ್ನುವ 'ಋಷಿ' ಶಬ್ದದ ಪರಿಭಾಷೆಯಂತೆ ಯಾವನು ದರ್ಶನವನ್ನು ಪಡೆದಿರುತ್ತಾನೋ ಅವನು ಋಷಿ ಎನಿಸಿಕೊಳ್ಳುತ್ತಾನೆ. ಇಲ್ಲಿ 'ದರ್ಶನ' ಎಂದರೆ ವೇದ ಮಂತ್ರದ ದರ್ಶನ ಎಂದೇ ಅರ್ಥ.  ( ನಮ್ಮ ಪೌರಾಣಿಕ ಚಲನ ಚಿತ್ರ ನಾಟಕ ಮುಂತಾದವುಗಳಲ್ಲಿ ಹಾಗೂ ಚಂದಮಾಮಾದಂತಹ ಬಾಲಸಾಹಿತ್ಯದ ಪತ್ರಿಕೆಯ ವರ್ಣಚಿತ್ರ ಮೊದಲುಗೊಂಡು ಎಲ್ಲ ಕಡೆಗಳಲ್ಲಿ ಋಷಿಗಳನ್ನು ಜಟಾಜೂಟ ಸಹಿತರಾಗಿಯೇ ಚಿತ್ರಿಸುವುದರಿಂದ ಸಾಮಾನ್ಯವಾಗಿ ಜನಮಾನಸದಲ್ಲಿ ಜಟೆ ಬೆಳೆಸಿಕೊಂಡು ಉದ್ದದ ಗಡ್ಡ ಬಿಟ್ಟವರೆಲ್ಲ ಋಷಿಗಳು ಅಥವಾ ಋಷಿಗಳು ಎಂದರೆ ಹೀಗೆಯೇ ಇರುತ್ತಾರೆ ಅನ್ನುವ ಭಾವನೆ ಇದೆ. ಆದರೆ 'ಋಷಿ' ಎನ್ನುವ ಶಬ್ದ ವೇಷವನ್ನಲ್ಲ. ಯೋಗ್ಯತೆಯನ್ನಾಧರಿಸಿದ್ದು.)

ಲೊಕದ ಸೃಷ್ಟಿಗೆ ಕಾರಣವಾದ ಭಗವಚ್ಚೈತನ್ಯದೊಡನೆ ತಾದಾತ್ಮ್ಯವನ್ನು ಸಾಧಿಸಿಕೊಂಡ ಸಾಧಕರಿಗೆ ತಮ್ಮ ತಾದಾತ್ಮ್ಯದ ಉಛ್ರಾಯ ಸ್ಥಿತಿಯಲ್ಲಿರುವಾಗ (ನಮಗೆ ನಿದ್ರೆಯಲ್ಲಿ ಕನಸುಗಳು ಕಾಣುವಂತೆ) ವೇದದ ಋಕ್ಕುಗಳು ಗೋಚರವಾದವು. (ಶತಾವಧಾನಿ ಡಾ: ಗಣೆಶ್ ಅವರು ಒಂದು ಉಪನ್ಯಾಸದಲ್ಲಿ ವೇದ ಮಂತ್ರಗಳ ದರ್ಶನದ ಪ್ರಸ್ತಾಪ ಬಂದಾಗ ''cosmic space ನಲ್ಲಿ ಎಲ್ಲವೂ ಇದೆ. ಆ space ಗೆ reach ಆಗುವಂತೆ ನಮ್ಮನ್ನು ನಾವು ಶೃತಿಗೊಳಿಸಿಕೊಂಡರೆ ಅಥವಾ ಟ್ಯೂನ್ ಮಾಡಿಕೊಂಡರೆ ನಮಗೂ ಅದು ದಕ್ಕುತ್ತದೆ'' ಅಂತ ಹೇಳಿದ್ದರು.) ಹಾಗೆ ಮಂತ್ರಗಳ ದರ್ಶನ ಪಡೆದು ವ್ಯಕ್ತಿಯನ್ನು ''ಋಷಿ'' ಎಂದು ಪರಿಗಣಿಸಲಾಗುತ್ತದೆ.  ಆ ಋಷಿಗಳು ಋಕ್ಕುಗಳನ್ನು ಅವ್ಯಕ್ತ ಸ್ರೋತದಿಂದ 'ಕೇಳಿಸಿಕೊಂಡರು' ಹಾಗೂ ಅವುಗಳನ್ನು ತಮ್ಮ ಮುಂದಿನ ಪೀಳಿಗೆ ಕೇಳಿಸಿದರು. ಹೀಗೆ ತಲೆತಲಾಂತರಗಳಿಂದ 'ಶ್ರವಣ' ಮಾಧ್ಯಮದ ಮೂಲಕ ಅವು ಅಸ್ತಿತ್ವದಲ್ಲಿರುವುದರಿಂದ ವೇದಕ್ಕೆ 'ಶೃತಿ' ಎಂಬ ಇನ್ನೊಂದು ಹೆಸರು ಕೂಡ ಪ್ರಸಿದ್ಧವಾಗಿದೆ.  
ಹೀಗೆ ಅನೇಕ ಋಷಿಗಳಿಗೆ ಸಾವಿರಾರು ಋಕ್ಕುಗಳ ದರ್ಶನ ಆಗಿ ಅವುಗಳು ಅವರವರ ಸಂಪರ್ಕದಲ್ಲಿ ಇದ್ದವರಿಗೆ ಮಾತ್ರ ಗೊತ್ತಿದ್ದವು. ಅವುಗಳ ಉಪಯೋಗ ಯಜ್ಞಕರ್ಮಗಳ್ಲಿ ನಡೆಯುತ್ತಿತ್ತು ಮತ್ತು ಅಲ್ಲಲ್ಲಿ ನಡೆಯುತ್ತಿದ್ದ ಋಷಿಸದಸ್ಸುಗಳಲ್ಲಿ ಪರಸ್ಪರ ಆದಾನ-ಪ್ರದಾನಗಳು ನಡೆಯುತ್ತದ್ದವು. (ಯಜ್ಞ ಅಂದರೆ ಈಗಿನ ಕಾಲದಲ್ಲಿ ನಡೆಯುವ ಹೊಮ ಹವನಾದಿಗಳು ಅಲ್ಲ. ಹೋಮ ಹವನ ಪೂಜಾದಿಗಳಿಗೂ ಯಜ್ಞಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ವಿವರಿಸ ಹೊರಟರೆ ವಿಷಯಾಂತರವಾಗುತ್ತದೆ.) ಹೀಗೆ ಎಲ್ಲೆಲ್ಲೋ ಹರಡಿಕೊಂಡಿದ್ದ ವೇದವನ್ನು ಸಾವಿರಾರು ವರ್ಷಗಳ ನಂತರ ವ್ಯಾಸರ ಸಂಗ್ರಹಿಸಿ, ಅವುಳನ್ನು ದ್ರಷ್ಟಾರರಾದ ಋಷಿಗಳು, ವಿಷಯಗಳು ಹಾಗೂ ಆಯಾ ಋಕ್ಕುಗಳ ಅಭಿಮಾನಿ ದೇವತೆಗಳಿಗೆ ಅನುಗುಣವಾಗಿ ಅವುಗಳನ್ನು ಸೂಕ್ತ ಮಂಡಲ ಗಳಾಗಿ ವಿಂಗಡಿಸಿ ಒಟ್ಟು ಸಂಗ್ರಹಿಸಿದ ಗ್ರಂಥಕ್ಕೆ ''ಸಂಹಿತೆ'' ಅಂತ ಕರೆದರು. ಛಂದೋಬದ್ಧವಾದ ಪದ್ಯಾತ್ಮಕ ಋಕ್ಕುಗಳು ಋಗ್ವೇದ ಸಂಹಿತೆಯಾಗಿಯೂ, ಯಜ್ಞಪ್ರಕ್ರಿಯೆಲ್ಲಿಯ ಗದ್ಯಭಾಗವು ಯಜುರ್ವೇದ ಸಂಹಿತೆಯಾಗಿಯೂ, ಯಜ್ಞದಲ್ಲಿ ಉದ್ಗಾತೃ ಉಪಬೃಂಹಿಸಿ ಗಾನ ಮಾಡುತ್ತಿದ್ದ ಋಕ್ಕುಗಳು ಸಾಮವೇದ ಸಂಹಿತೆಯಾಗಿಯೂ ವಿಭಜಿಸಲ್ಪಟ್ಟವು. ಹೀಗೆ ವೇದಗಳ ಸಂಗ್ರಹ-ಸಂಪಾದನೆ ಮಾಡಿದುದರಿಂದಲೇ ವೇದವ್ಯಾಸ ಎನ್ನುವ ಹೇಸರು ಬಾದರಾಯಣರಿಗೆ ಬಂದದ್ದು. (ಅಥರ್ವಾಂಗಿರಸರು ಸಂಗ್ರಹಿಸಿದ್ದು ಅಥರ್ವ ಸಂಹಿತೆ)  

ಉಪಾಸನಾ ಕಾಂಡ, ಕರ್ಮಕಾಂಡ ಮತ್ತು ಮತ್ತು ಜ್ಞಾನ ಕಾಂಡ ಎಂಬ ಮೂರು ವಿಭಾಗಗಳು ನಾಲ್ಕೂ ವೇದಗಳಲ್ಲಿ ಇವೆ. ಸಂಹಿತೆ, ಬ್ರಾಮ್ಹಣ ಮತ್ತು ಆರಣ್ಯಕ-ಇವು ಮೂರು ಕ್ರಮವಾಗಿ ಉಪಾಸನಾ, ಕರ್ಮ ಮತ್ತು ಜ್ಞಾನ ಕಾಂಡಗಳಾಗಿವೆ. ಋಗ್ವೇದಕ್ಕೆ ಪದ ಪಾಠ, ಕ್ರಮಪಾಠ ಎಂಬೆರಡು ಪ್ರಕೃತಿ ಪಾಠಗಳು ಹಾಗೂ ಜಟಾಪಾಠ, ಮಾಲಾಪಾಠ, ಶಿಖಾಪಾಠ, ರೇಖಾಪಾಠ, ಧ್ವಜಪಾಠ, ದಂಡಕ್ರಮ, ಮತ್ತ ಘನಪಾಠಗಳೆಂಬ ಎಂಟು ವಿಕೃತಿ ಪಾಠಗಳು ಇವೆ. ಯಜುರ್ವೇದಕ್ಕೆ ಎರಡು ಪ್ರಕೃತಿ ಪಾಠಗಳು ಹಾಗೂ ಎರಡು ವಿಕೃತಿ ಪಾಠಗಳು ಇವೆ. ಈ ಎಲ್ಲ ಪಾಠಪ್ರಕಾರಗಳಿಗೆ ಉದಾತ್ತ, ಅನುದಾತ್ತ, ಸ್ವರಿತ ಮತ್ತು ಪ್ರಚಯ ಎಂಬ ನಾಲ್ಕು ಪ್ರಧಾನ ಸ್ವರ ಸಂಚಾರಗಳಿವೆ. ಹಗೂ ಎಕಕಂಪ, ತ್ರಿಕಂಪ ಪ್ರಾತಿಹತಸ್ವರಿತ ಮೊದಲಾದ ಉಪ ಸ್ವರಗಳು ಇವೆ. ಸ್ವರಹೀನವಾಗಿ ಶ್ಲೋಕದಂತೆ ವೇದದ ಋಕ್ಕುಗಳನ್ನು ಪಠಿಸುವಂತಿಲ್ಲ.  ಪುರುಷ ಸೂಕ್ತದ ಎಲ್ಲ ವಿಕೃತಿಪಾಠಗಳನ್ನು ಕೂಡ ಪ್ರಸಕ್ತ ರಂಗಪ್ರಯೋಗದಲ್ಲಿ ಬಳಸಿಕೊಳ್ಳಲಾಗಿದೆ. 

ಋಗ್ವೇದದಲ್ಲಿ ಗಾಯತ್ರೀ ಮಂತ್ರವನ್ನು ಬಿಟ್ಟರೆ ಪುರುಷಸೂಕ್ತವೇ ಹೆಚ್ಚಾಗಿ ಬಳಕೆಯಲ್ಲಿದೆ. ಶ್ರೇಷ್ಠತೆಯಲ್ಲಿಯೂ, ವಿಷಯನಿರೂಪಣೆಯಲ್ಲಿಯೂ ಇದರಲ್ಲಿ ವಿವರಿಸಿರುವ ತತ್ತ್ವಗಳು ಅತಿ ಗಹನವಾಗಿರುವುದರಿಂದಲೂ, ಪರಮಪುರುಷನ(ಪರಬ್ರಹ್ಮನ) ಸ್ವರೂಪ, ಶಕ್ತಿ ಸಾಮರ್ಥ್ಯಗಳು, ಸೃಷ್ಟಿಯ ವಿವರಣೆ, ವೇದಾದಿಗಳ ಉತ್ಪತ್ತಿ ಯಜ್ಞದ ಸ್ವರೂಪ ಮೊದಲಾದ ಮಹತ್ತ್ವದ  ಸಂಗತಿಗಳು ಇದರಲ್ಲಿ ಅಡಕವಾಗಿರುವುದರಿಂದಲೂ ಈ ಪುರುಷ ಸೂಕ್ತಕ್ಕೆ ಅತಿಶಯವಾದ ಪ್ರಾಧಾನ್ಯತೆ ಇದೆ. ಇದನ್ನು, ಪೋಜೆ, ಅಭೀಷೇಕ ಮುಂತಾದ ಅನೇಕ ಸಂದರ್ಭಗಳಲ್ಲಿ ಪಠಿಸುತ್ತಾರೆ. 
ಪೂಜೆಯಲ್ಲಿ ಎಕೋಪಚಾರ, ಪಂಚೋಪಚಾರ, ಷೋಡಶೋಪಚಾರ ಮುಂತಾದ ಅನೇಕ ಕ್ರಮಗಳಿವೆ. ಆದರೆ ಷೋಡಶೋಪಚಾರ ಅತ್ಯಂತ ಹೆಚ್ಚು ಪ್ರಚಲಿತದಲ್ಲಿ ಇದೆ. 'ಷೋಡಶ' ಎಂದರೆ ಹದಿನಾರು. ಹದಿನಾರು ಉಪಚಾರಗಳಿಂದ ಮಾಡುವ ಪೂಜೆ ಅತ್ಯಂತ ಪ್ರಶಸ್ತ ಮತ್ತು ಉತ್ತಮ. 16 ಎಂಬುದು ಒಂದು ಪರಿಪೂರ್ಣ ಸಂಖ್ಯೆ. ಸೃಷ್ಟಿಯನ್ನು ಹದಿನಾರು ವಿಧದಲ್ಲಿ ವಿಭಾಗಿಸಿ ನೋಡುವುದು ಬಾರತೀಯ ಕಲ್ಪನೆ. ಷೋಡಶ ಕಲೆಗಳು ಅಂತ ಅದನ್ನು ಕರೆಯುತ್ತೇವೆ. ಕಲೆ ಎಂದರೆ ಇಲ್ಲಿ ವಿಭಾಗ ಎಂಬರ್ಥ. ಆಧುನಿಕ ವ್ಯವಹಾರದಲ್ಲಿಯೂ ಕೂಡ ಇದು ಕಂಡು ಬರುತ್ತದೆ. ರೂಪಾಯಿಯನ್ನು ವಿಭಜಿಸುವಾಗ ಒಂದಾಣೆ, ನಾಲ್ಕಾಣೆ ಎಂಟಾಣೆ ಮುಂತಾಗಿ ಇದೆ. ಹದಿನಾರು ಆಣೆಗೆ ಒಂದು ರೂಪಾಯಿ. ಅದೇ ರೀತಿ ಅಮಾವಾಸ್ಯೆಯಿಂದ ಹದಿನಾರನೇ ದಿನ ಹುಣ್ಣಿಮೆ. ಹೀಗೇ ಅನೇಕ ರೀತಿಯಲ್ಲಿ 16 ಎನ್ನುವು ಒಂದು ಪರಿಪೂರ್ಣತೆಯ, ಏಕತೆಯ ಸಂಕೇತ. ವಿವಿಧ ದೇವತೋಪಾನೆ ನಮ್ಮಲ್ಲಿ ಇದ್ದಾಗಿಯೂ ಅದರ ಆಂತರ್ಯದಲ್ಲಿ ಏಕತೆ ಅಡಗಿದೆ. ಪುರುಷ ಸೂಕ್ತದಲ್ಲಿರುವ ಋಕ್ಕುಗಳು ಕೂಡ ಹದಿನಾರು. ಹೀಗಾಗಿ ಧ್ಯಾನ, ಆವಾಹನ ಮುಂತಾದ ಹದಿನಾರು ಉಪಚಾರಗಳನ್ನು ಪುರುಷಸೂಕ್ತದ ಒಂದೊಂದು ಋಕ್ಕು ಹೇಳಿಕೊಳ್ಳುತ್ತ ಮಾಡುವ ಪೂಜಾವಿಧಾನ ಅತ್ಯಂತ ಪ್ರಸಿದ್ಧ. 

ಈ ಪುರುಷ ಸೂಕ್ತವು ಋಗ್ವೇದ ಸಂಹಿತೆಯ ಹತ್ತನೆಯ ಮಂಡಲದ ತೊಂಭತ್ತನೆಯ ಸೂಕ್ತ. ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ಕೃಷ್ಣಯಜುವೇದದ ತೈತ್ತಿರೀಯ ಆರಣ್ಯಕದಲ್ಲಿಯೂ (ತೈ.ಆ. 3. 12. 12) sಶುಕ್ಲ ಯಜುವೇದದ ವಾಜಸನೇಯ ಸಂಹಿತೆಯಲ್ಲಿಯೂ, ಅಥವೇದದಲ್ಲಿಯೂ ಪಠಿತವಾಗಿವೆ. ಇದಲ್ಲದೆ ಈ ಸೂಕ್ತದ ಕೆಲವು ಭಾಗಗಳ ವಿವರಣೆಯು ಶತಪಥಬ್ರಾಹ್ಮಣ, ತೈತ್ತಿರೀಯಬ್ರಾಹ್ಮಣ, ತೈತ್ತರೀಯ ಆರಣ್ಯಕ, ನಿರುಕ್ತ, ಶ್ವೇತಾಶ್ವತರೋಪನಿಷತ್ತು, ಬೃಹದಾರಣ್ಯಕೋಪನಿಷತ್ತು ಮೊದಲಾದ ಗ್ರಂಥಗಳಲ್ಲಿ ಕಂಡು ಬರುತ್ತದೆ. ಈ ಸೂಕ್ತದ ಪ್ರಾಚೀನತೆಯ ವಿಷಯದಲ್ಲಿ ಆಂಗ್ಲ ಪಂಡಿತರಲ್ಲಿ ವಿಧವಿಧವಾದ ಅಭಿಪ್ರಾಯ ಭೇದವಿದೆ. ಈ ಸೂಕ್ತದಲ್ಲಿ ಬ್ರಾಹ್ಮಣಾದಿ ಚತುರ್ವಣಗಳ ಉತ್ಪತ್ತಿ ಕ್ರಮವನ್ನು ವಿವರಿಸಿರುವುದರಿಂದಲೂ ಅತಿ ಪ್ರಾಚೀನಕಾಲದಲ್ಲಿ ಈ ವಿಧವಾದ ವರ್ಣಭೇದವು ಇರಲಿಲ್ಲವೆಂತಲೂ ಆದ್ದರಿಂದ ಈ ಸೂಕ್ತವು ಅಷ್ಟೇನೂ ಪ್ರಾಚೀನವೆಂದು ಪರಿಗಣಿಸಲ್ಪಡುವುದಕ್ಕೆ ಸಾಧ್ಯವಿಲ್ಲವೆಂದು ಮ್ಯಾಕ್ಸ್ ಮುಲ್ಲರ್ ಮುಂತಾದ ವಿದ್ವಾಂಸರ ಅಭಿಪ್ರಾಯ. ಅದೇ ರೀತಿ ಬ್ರಾಮ್ಹಣಾದಿ ಶಬ್ದಗಳು ಋಗ್ವೇದದ ಇತರ ಭಾಗಗಳಲ್ಲಿಯೂ ಕಂಡುಬರುವುದರಿಂದ, ಹಾಗೂ ಪುರುಷಮೇಧದ ವಿಚಾರದ ಉಲ್ಲೇಖ ಇದರಲ್ಲಿ ಇರುವುದರಿಂದ ಇದೂ ಕೂಡ ಪ್ರಾಚೀನ ಸೂಕ್ತಗಳ ಗುಂಪಿಗೇ ಸೇರಬೇಕಾದ್ದು ಎಂಬುದು ಡಾ: ಹಾಗ್ ಮೊದಲಾದ ಪಂಡಿತರ ಅಭಿಪ್ರಾಯ. 

ಈ ಸೂಕ್ತಕ್ಕೆ ಪುರುಷಸೂಕ್ತ ಅನ್ನುವ ಹೆಸರು ಬರಲು ಕಾರಣ ಇದರಲ್ಲಿ ಸೃಷ್ಟಿಕರ್ತನಾದ ವಿರಾಟ್ ಪುರುಷನ ವರ್ಣನೆ ಇದೆ. ಇಲ್ಲಿ ಪುರುಷ ಶಬ್ದಕ್ಕೆ ಲೋಕವ್ಯವಹಾರದ ಸ್ತ್ರೀ-ಪುರುಷ ಲಿಂಗ ಸೂಚಕ ಅರ್ಥವಲ್ಲ. ಆ ಪರಮಪುರುಷನಿಗೆ ಅಥವಾ ಪರಬ್ರಮ್ಹನಿಗೆ ಲಿಂಗಭೇದವಾಗಲೀ, ಆಕಾರವಾಗಲೀ ಇಲ್ಲ. ಈ ವಿರಾಟ್ ಪುರುಷನ ಉಲ್ಲೇಖ ವೇದಗಳಲ್ಲಿ ಮಾತ್ರವಲ್ಲದೇ ಭಾಗವತ ಪುರಾಣದಲ್ಲಿಯೂ ಕಂಡು ಬರುತ್ತದೆ. 

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ. 
ಕ್ಷರಃಸರ್ವಾಣಿ ಭೂತಾನಿ ಕೂಟಸ್ಥಕ್ಷರ ಉಚ್ಯತೆ .. 
ಉತ್ತಮಃಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ -ಭಗವದ್ ಗೀತಾ 

ಕ್ಷರ ಮತ್ತ ಅಕ್ಷರ  ಎಂಬೆರಡೂ ತತ್ವಗಳು ಈಶ್ವರನ ವಿಭೂತಿ ವಿಶೇಷಗಳು. ಉತ್ಪನ್ನವನ್ನು ಹೊಂದಿ ಅನಂತರ ನಾಶವನ್ನು ಹೊಂದತಕ್ಕ ಜಗತ್ತಿನ ವಸ್ತುಗಳು 'ಕ್ಷರ' ಸಂಜ್ಞಕವಾದ ಪುರುಷರೂಪವುಳ್ಳದ್ದು. ಇದಕ್ಕೆ ವಿರುದ್ಧವಾಗಿ 'ನಿತ್ಯ' ಸ್ಥಿತಿಯಲ್ಲಿದ್ದುಕೊಂಡು ಜಗತ್ತಿನ ಸಂಬಂಧವಿಲ್ಲದೇ ಶುದ್ಧವಾದ ಸ್ವಸ್ವರೂಪ ಸ್ಥಿತಿಯಲ್ಲಿ ಇರತಕ್ಕ ಆತ್ಮನು ಅಕ್ಷರ ಪುರುಷನೆಂದು ಕರೆಯಲ್ಪಡುತ್ತಾನೆ. ಈ ರೀತಿ ಕ್ಷರ ಮತ್ತು ಅಕ್ಷರ ಗುಂಪಿನ ವಸ್ತಗಳಿಗೆ ಅತೀತನಾಗಿರುವವನು ಈಶ್ವರನು. ಅವನನ್ನೇ ಶೃತಿಗಳು ಉತ್ತಮಪುರುಷನೆಂದು ಕರೆದಿವೆ. ಅವನೇ ಪರಮಾತ್ಮನು. ಆ ಉತ್ತಮ ಪುರುಷನು ಅಥವಾ ಪರಮಪುರುಷ ಲೋಕಗಳನ್ನು, ಸೃಷ್ಟಿಯನ್ನು ತನ್ನಲ್ಲಿ ಧರಿಸಿದ್ದಾನೆ(ಅಥವಾ ಧರಿಸಿದೆ). 

'ಯತೊ ವಾಚೋ ನಿವರ್ತಂತೆ' ಎಂಬ ವಾಕ್ಯ ಯಜುರ್ವೇದದ ಉಪನಿಷತ್ತಿನಲ್ಲಿದೆ. ''ಎಲ್ಲಿಗೆ ಮಾನವನ ವಾಕ್ಕು ನಿಲ್ಲುತ್ತದೋ ಅಲ್ಲಿ ಆ ಪರಮಪುರುಷನ ಅಥವಾ ಪರಮಾತ್ಮನ ವರ್ಣನೆ ಪ್ರಾರಂಭವಾಗುತ್ತದೆ''. ಅನ್ನೂದು ಅದರ ಸಾರಾಂಶ. ಹೀಗೆ ಶೃತಿಯೇ ಹೇಳುವಂತೆ ಭಗವತ್ತತ್ವನ್ನು ಲೌಕಿಕ ಭಾಷೆಯಲ್ಲಿ ಅಷ್ಟು ಸುಲಭವಾಗಿ ಪರಿಚಯಿಸಿಕೊಳ್ಳುವುದು ಕಷ್ಟ. ಹಾಗಾಗಿಯೆ ಅನೇಕ ಸಂದರ್ಭಗಳಲ್ಲಿ ನಮ್ಮ ಆಧುನಿಕ ಭಾಷೆಯ ಪರಿಮಿತಿಗಳಲ್ಲಿ ನಾವು ವ್ಯಾಖ್ಯಾನಿಸಹೋದಾಗಲೇ ಎಡವಿ ಬಿದ್ದು ಅಪಾರ್ಥಗಳಾಗುತ್ತವೆ. 

ಪುರುಷಸೂಕ್ತವನ್ನು 'ದರ್ಶನ' ಮಾಡಿಕೊಂಡವನು ನಾರಾಯಣ ಋಷಿ. ಹದಿನಾರು ಋಕ್ಕುಗಳ ದ್ರಷ್ಟಾರನಾದ ನಾರಾಯಣ ಎಂಬ ಮಹರ್ಷಿ ಯಾರು? ಈತ ಗೌತಮ ವಿಶ್ವಾಮಿತ್ರಾದಿಗಳಂತೆ ಐತಿಹಾಸಿಕ ಋಷಿಯೇ ಎಂಬ ವಿಷಯದಲ್ಲಿ ಸಪಷ್ಟವಾದ ನಿರ್ಣಯಕ್ಕೆ ಬರುವುದು ಸುಲಭವಲ್ಲ. ನಾರಾಯಣ ಎಂಬ ಹೆಸರು ಸಂಹಿತೆಯಲ್ಲೆಲ್ಲೂ ಉಲ್ಲೇಖಗೊಂಡಿಲ್ಲ. ಬ್ರಾಮ್ಹಣ ಹಾಗೂ ಉಪನಿಷತ್ತುಗಳಲ್ಲಿಯೂ ಈ ಋಷಿಯ ಉಲ್ಲೇಖವಿಲ್ಲ. ನಿರುಕ್ತಕಾರರಾಗಲೀ, ಬೃಹದ್ದೇವತಾಕಾರರಾಗಲೀ ಈ ವಿಷಯವನ್ನು ತಿಳಿಸಿಲ್ಲ. ಹೀಗಾಗಿ ಇತರ ಕೆಲವೆಡೆ ಸೂಕ್ತಗಳ ವಿಷಯಕ್ಕನುಗುಣವಾಗಿ ಸೂಕ್ತದ್ರಷ್ಟುವಿನ ಹೆಸರನ್ನು ತಿಳಿಸುವಂತೆ ಈ ಸೂಕ್ತಕ್ಕೂ ಸಹ ನಾರಾಯಣ ಎಂಬ ಋಷಿಯ ನಾಮನಿರ್ದೇಶನವಿದೆ. 
ಆದರೆ ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ಪುರುಷ, ಪರಮಪುರುಷ, ಪರಮಾತ್ಮ ಮುಂತಾದ ಹೆಸರುಗಳುಳ್ಳ ಈಶ್ವರನ ವಿಷಯ ಈ ಸೋಕ್ತದಲ್ಲಿದೆ. ಇದರಲ್ಲಿ ನಾರಾಯಣ ಎಂಬ ಶಬ್ದವೇ ಇಲ್ಲ. (ಇಡೀ ಸಂಹಿತೆಯಲ್ಲಿಯೂ 'ನಾರಾಯಣ' ಎಂಬ ಶಬ್ದವಿಲ್ಲ). ಅದು ಹೇಗೆ ಈ ಸೂಕ್ತದ್ರಷ್ಟುವಿನ ಹೆಸರು ನಾರಾಯಣನೆಂದು ಪ್ರಸಿದ್ಧವಾಗಿದೆ? ಎಂಬುದು. ಆದರೆ ಅದಕ್ಕುತ್ತರ ಪುರುಷ-ನಾರಾಯಣ ಎಂಬೆರಡೂ ಹೆಸರುಗಳೂ ಅದ್ವಿತೀಯನಾದ ಈಶ್ವರನ ವಿಭೂತಿವಿಶೇಷಗಳೇ ವಿನಃ ಬೇರೆಯಲ್ಲ ಅನ್ನೋ ಶೃತಿವಾಕ್ಯಗಳ ಆಧಾರದಿಂದ ಸಿದ್ಧವಾಗುತ್ತದೆ. ರಾಮನಿಗೆ ಸಂಬಂಧಿಸಿದುದು ರಾಮಾಯಣವೆಂಬಂತೆ ನರನಿಗೆ ಸಂಬಂಧಿಸಿದವನು ನಾರಾಯಣನೆಂದು ಹೇಳಬಹುದು. ಇಲ್ಲಿ ನರನ ಪುತ್ರನೆಂದೂ ಅರ್ಥ ಮಾಡಬಹುದು. ಪುರುಷನೆಂಬ ಅರ್ಥದಲ್ಲೇ ನರ ಶಬ್ದದ ಪ್ರಯೋಗವಿರುತ್ತದೆ. ವಿರಾಟ್ ರೂಪಿಯಾದ ಈಶ್ವರನಿಂದ ಪುರುಷನ ಉತ್ಪತ್ತಿ ಮತ್ತು ಪುರುಷನಿಂದ ವಿರಾಟ್ ಪ್ರಪಂಚದ ಉತ್ಪತ್ತಿ ಎಂದು ಪುರುಷಸೂಕ್ತದಲ್ಲೇ ಹೇಳಿರುವುವಂತೆ ಪುರುಷನ ಪುತ್ರನೇ ನಾರಾಯಣನು. ನಾರಾಯಣನೇ ಪುರುಷನು. ಪಿತೃ ಮತ್ತು ಪುತ್ರ ಇಬ್ಬರೂ ಒಂದೇ. ಇದು ಲೌಕಿಕವಾದ ಅರ್ಥದಲ್ಲಿ ಅಲ್ಲ. ಆಧ್ಯಾತ್ಮಿಕ ಅರ್ಥದಲ್ಲಿ. 
ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ
ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣಃಸ್ಮೃತಃ.. 

ಆಪಗಳಿಗೆ(ಜಲ) ನಾರಾ ಎಂಬ ಹೆಸರು ಪ್ರಸಿದ್ಧವಾಗಿದೆ. ಈ ಆಪಗಳು ಅಥವಾ ಉದಕಗಳು ನರಸಂಜ್ಞಕನಾದ ಪರಮಾತ್ಮನಿಂದ ಉತ್ಪನ್ನವಾಗಿವೆ. ಈ ಪರಮಾತ್ಮನಿಗೆ ಅವನು ಬ್ರಮ್ಹರೂಪಿಯಾಗಿದ್ದಾಗ ಉದಕಗಳೇ ಆಶ್ರಯವಾಗಿದ್ದವು. ಆದುದರಿಂದಲೇ ಪರಮಾತ್ಮನಿಗೆ ನಾರಾಯಣ ಎಂಬ ಹೆಸರು. ನಾರಗಳೇ(ಉದಕಗಳೇ) ಅಯನ(ಆಶ್ರಯ)ವಾಗಿ ಉಳ್ಳವನು ನಾರಾಯಣ. ಇಂತಹ ನಾರಾಯಣ ಈ ಪುರುಷಸೂಕ್ತದ ದ್ರಷ್ಟಾರನು. ನರನಾರಾಯಣನೆಂಬ ವ್ಯಕ್ತಿ ಇದರ ದ್ರಷ್ಟಾರನೆಂಬುದು ಕೆಲ ವಿದ್ವಾಂಸರ ಮತ.  ನಾರಾಯಣ ಪ್ರಣೀತ ಮತ್ತು ನಾರಾಯಣ ವಿಷಯಾತ್ಮಕವಾದ್ದರಿಂದ ಪುರುಷಸೂಕ್ತಕ್ಕೆ ನಾರಾಯಣೀಯವೆಂಬ ಹೆಸರು ಕೂಡ ಇದೆ. ಋಗ್ವಿಧಾನ ಎಂಬ ಗ್ರಂಥದಲ್ಲಿ ಶೌನಕ ಮಹರ್ಷಿಯು ಪುರುಷಸೂಕ್ತದ ವಿವಿಧ ಉಪಾಸನಾ ವಿಧಾನಗಳನ್ನು ಹಾಗೂ ಅದರಿಂದುಂಟಾಗುವ ಫಲಗಳನ್ನು ವಿಸ್ತಾರವಾಗಿ ವಿವರಿಸಿದ್ದಾನೆ.



ಇಂತಹ ಪುರುಷಸೂಕ್ತದ ಪರಿಚಯವೇ ಒಂದನೂರು ಪುಟಗಳಷ್ಟು ವಿಸ್ತಾರವಾಗಿ ಬರೆಯಬೇಕಾದ ವಿಷಯ- ಆದರೂ ಈಗಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲ ವಿಷಯಗಳನ್ನಷ್ಟೆ ಬರೆದಿದ್ದೇನೆ. ಇಂತಹ ಅಪರೂಪದ ವಿಷಯವನ್ನು ರಂಗಕ್ಕೆ ಅಳವಡಿಸಿ ಪ್ರಸ್ತುತಪಡಿಸುತ್ತಿರುವ ಅಭಿಜ್ಞಾನ ತಂಡದ ಪ್ರಯತ್ನ ಅತ್ಯಂತ ಶ್ಲಾಘನೀಯವಾದುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರತಿಕ್ರಯಿಸಿದರೆ ಇಂತಹ ಪ್ರಯೋಗಗಳು ವೃದ್ಧಿಸಿಯಾವು. 

ಇನ್ನು ಪುರುಷ ಸೂಕ್ತದ ಹದಿನಾರು ಋಕ್ಕುಗಳನ್ನು ಹಾಗೂ ಅವುಗಳ ಸಂಕ್ಷಿಪ್ತ ಅರ್ಥವನ್ನು ನೋಡೋಣ.

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃಸಹಸ್ರಪಾತ್ ।
 ಸ ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ ।।

ಪುರುಷಃ- ಆದಿ ಪುರುಷನು। ಸಹಸ್ರಶೀರ್ಷಾ- ಅಸಂಖ್ಯಕವಾದ ಶಿರಸ್ಸುಗಳಿಂದ ಕೂಡಿದವನು। ಸಹಸ್ರಾಕ್ಷಃ- ಅಸಂಖ್ಯಕವಾದ ಕಣ್ಣುಗಳುಳ್ಳವನು। ಸಹಸ್ರಪಾತ್ - ಅಸಂಖ್ಯಕವಾದ ಪಾದಗಳುಳ್ಳವನು। ಸಃ - ಈ ಪುರುಷನು। ಭೂಮಿಂ - ಬ್ರಮ್ಹಾಂಡಗೋಳರೂಪವಾದ ಸಮಸ್ತ ವಿಶ್ವವನ್ನು। ವಿಶ್ವತಃ- ಸುತ್ತಲೂ। ವೃತ್ವಾ- ಸುತ್ತುವರಿದು। ದಶಾಂಗುಲಂ- ಅದಕ್ಕಿಂತಲೂ ಹತ್ತು ಅಂಗುಲದಷ್ಟು। ಅತ್ಯತಿಷ್ಠತ್ - ಅತಿಕ್ರಮಿಸಿಯೂ ಸ್ಥಾಪಿತನಾಗಿದ್ದಾನೆ.
 ( ಇಲ್ಲಿ ಸಹಸ್ರವೆಂದರೆ ಸಾವಿರವೆಂದರ್ಥವಲ್ಲ. ಅನಂತವೆಂದರ್ಥ.  ಪರಮೇಶ್ವರನು ಸಕಲ ಪ್ರಾಣಿಗಳಲ್ಲಿಯೂ ಅಂತರ್ಯಾಮಿಯಾಗಿದ್ದಾನೆ. ಆದುದರಿಂದ ಅನಂತ ಸಂಖ್ಯೆಯುಳ್ಳ ಪ್ರಾಣಿಗಳ ಶಿರಸ್ಸೆಲ್ಲವೂ ಪರಮೇಶ್ವರನ ಶಿರಸ್ಸೇ ಆದವು. ಆದುದರಿಂದ ಇಲ್ಲಿ ಸಹಸ್ರ ಶಬ್ದವು ಅನಂತ ಎಂಬ ತಾತ್ಪರ್ಯವನ್ನು ಕೊಡುತ್ತದೆ ಎಂದು ಸಾಯಣರು ವಿವರಿಸಿದ್ದಾರೆ.
ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕಾಗಿದೆ. ಪರಮೇಶ್ವರನಿಗೆ ಅವ್ಯಕ್ತಾವಸ್ಥಯಲ್ಲಿ ನಿರ್ದಿಷ್ಟವಾದ ಆಕಾರವು  ಇರುವುದಿಲ್ಲವೆಂದೂ ಅವನುಉ ಸರ್ವವ್ಯಾಪಿಯೆಂದೂ ವರ್ಣಿಸಲಾಗಿದೆ. ಹೀಗಿರುವಾಗ ಈ ಪರಮಾತ್ಮನಿಗೆ ಶಿರಸ್ಸುಗಳು, ಕಣ್ಣುಗಳು ಕಾಲುಗಳು ಅಸಂಖ್ಯಾಕವಾಗಿ ಇರುವವು ಎಂಬುದರ ಅರ್ಥವೇನು? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ನಮ್ಮ ಅನುಭವದಲ್ಲಿರುವಂತೆ ಎಂದರೆ ನಮಗಿರುವಂತೆ ಪರಮಾತ್ಮನಿಗೆ ಶಿರಸ್ಸುಗಳು ಕಣ್ಣುಗಳು ಕಾಲುಗಳು ಇರುವುದಿಲ್ಲ. ನಮಗೆ ಕಣ್ಣಗಳಿಲ್ಲದಿದ್ದರೆ ನಾವು ಏನನ್ನೂ ನೋಡಲಾರೆವು. ಪರಮಾತ್ಮನ ವಿಷಯದಲ್ಲಿ ಹಾಗಲ್ಲ. ಅವನಿಗೆ ಚಕ್ಷುರಾದಿ ಇಂದ್ರಿಯಗಳ ಹಂಗಿಲ್ಲ. ಚೈತನ್ಯಸ್ವರೂಪವೇ ಅವನಾದ್ದರಿಂದ ಇಂದ್ರಿಯಗಳ ಮೂಲಕ ವಸ್ತುಸ್ವರೂಪವನ್ನು ಅವನು ಗ್ರಹಿಸಬೇಕಾಗಿಲ್ಲ. ಅವಯವಗಳಿಲ್ಲದೇ ಎಲ್ಲಾ ಅವಯವಗಳ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲವನು. ಆದ್ದರಿಂದ ಇಲ್ಲಿ ಹೇಳಿರುವ ಸಹಸ್ರಶೀರ್ಷಾ ಇತ್ಯಾದಿ ಶಬ್ದಗಳು ಪರಮಾತ್ಮನಿಗೆ ಸಾವಿರಾರು ಅಥವಾ ಅಸಂಖ್ಯಾತವಾದ ಶಿರಸ್ಸುಗಳು ಮೊದಲಾದ ಇಂದ್ರಿಯಗಳು ಇವೆ ಎಂದು ವರ್ಣಿಸುವುದಕ್ಕಾಗಿ ಪ್ರಯೋಗಿಸಲ್ಪಟ್ಟಿಲ್ಲ. ಆದರೆ ಅವನ ಅಪಾರತೆಯನ್ನು ನಮಗೆ ಬಳಕೆಯಲ್ಲಿರುವ ಭಾಷೆಯಲ್ಲಿ ಸ್ವಲ್ಪ ಮಟ್ಟಿಗಾದರೂ ತಿಳಿಸುವುದಕ್ಕಾಗಿಯೇ ಆ ಶಬ್ದಗಳ ಪ್ರಯೋಗವಿದೆ ಎಂದು ತಿಳಿಯಬೇಕು.

ಇನ್ನು ''ಸ ಭೂಮಿಂ ವಿಶ್ವತೋ ವೃತ್ವಾ'' ಎಂಬ ವಾಕ್ಯದಲ್ಲಿ ಭೂಮಿ ಎಂಬ ಶಬ್ದ ನಾವು ವಾಸ ಮಾಡುತ್ತಿರುವ ಭೂಮಿ ಅಥವಾ ಪ್ರಪಂಚವನ್ನು ಸೂಚಿಸುವುದಿಲ್ಲ.  ಅಸಂಖ್ಯಾತ ಇತರ ಭೂಮಿ ಅಥವಾ ಬ್ರಮ್ಹಾಂಡಗಳನ್ನೂ ಅಂದರೆ ವಿಶ್ವಸೃಷ್ಟಿಯಲ್ಲಿರುವ ಸಮಸ್ತವನ್ನೂ ಭೂಮಿ ಶಬ್ದ ಸೂಚಿಸುತ್ತದೆ. ಇದರಂತೆಯೆ ದಶಾಂಗುಲ ಎಂಭ ಶಬ್ದದ ಅರ್ಥವೂ ಉಪಲಕ್ಷಣ ಎಮದರೆ ಸಾಮಾನ್ಯಾರ್ಥವನ್ನು ಒಳಗೊಂಡಿದೆ. ದಶಾಂಗುಲ ಎಂದರೆ ಹತ್ತು ಅಂಗುಲ ಉದ್ದ ಎಂಬರ್ಥವಲ್ಲ. ಇಲ್ಲಿ ಅದಕ್ಕೆ ಹತ್ತು ಪಾಲು ಅಧಿಕ ಅಥವಾ ಅಥವಾ ಎಷ್ಟೋ ಪಟ್ಟು ಜಾಸ್ತಿ ಎಂಬರ್ಥದಲ್ಲಿ ಹತ್ತು ಅಂಗುಲ ಎಂಬುದನ್ನು ಗ್ರಹಿಸಬೇಕು.

ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಂ।
  ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ।।

 ಇದಂ ಸರ್ವಂ- ನಮಗೆ ಗೋಚರವಾಗುವ ಸಕಲ ಜಗತ್ತೂ। ಪುರುಷ ಏವ- ಆ ಆದಿಪುರುಷನೇ( ಅವನ ಭಾಗವೇ)। ಯದ್ ಭೂತಂ-  ಯಾವುದು ಹಿಂದೆ ಇತ್ತೋ। ಯಚ್ಚ ಭವ್ಯಂ- ಯಾವುದು ಮುಂದೆ ಸಂಭವಿಸುವುದೋ (ಅದೆಲ್ಲವೂ ಅವನೇ ಆಗಿರುತ್ತಾನೆ)। ಉತ- ಮತ್ತು। ಅಮೃತತ್ವಸ್ಯ- ಅಮೃತತ್ವಕ್ಕೆ। ಈಶಾನಃ - ಅವನೇ ಪ್ರಭುವು। ಯತ್- ಯಾವ ನಿಮಿತ್ತವಾಗಿ। ಅನ್ನೇನ- ಅನ್ನದಿಂದ । ಅತಿರೋಹತಿ- ಅವನು ಬೆಳೆಯುವನೋ। (ಆದುದರಿಂದ ಅವನು ಈಗ ಕಾಣಿಸಿಕೊಳ್ಳುವುದಕ್ಕಿಂತಲೂ ಆಧಿಕ ಮಹತ್ತು ಉಳ್ಳವನು)

  ಏತಾವಾನಸ್ಯ ಮಹಿಮಾತೋ ಜ್ಯಾಯಾಂಶ್ಚ ಪೂರುಷಃ।
   ಪಾದೋಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ. ।।

ಏತಾವಾನ್- ಭೂತ, ವರ್ತಮಾನ ಮತ್ತು ಭವಿಷ್ಯದ್ರೂಪವಾದ ಸಕಲ ಜಗತ್ತೂ। ಅಸ್ಯ- ಇವನ । ಮಹಿಮಾ- ಸಾಮರ್ಥ್ಯವಿಶೇಷವೇ ಆಗಿದೆ। ಚ- ಅಲ್ಲದೇ। ಪುರುಷಃ - ಆದಿ ಪುರುಷನು। ಅತಃ- ಈ ಸಕಲ ಜಗತ್ತಿಗಿಂತಲೂ। ಜ್ಯಾಯಾನ್- ಅಧಿಕನು। ವಿಶ್ವಾ ಭೂತಾನಿ- ಭೂಮಿ- ಆಕಾಶ ಮೊದಲಾದ ಸಕಲ ಭೂತಗಳೂ। ಅಸ್ಯ- ಈ ಪುರುಷನ। ಪಾದಃ- ಕಾಲು ಭಾಗ ಮಾತ್ರ। ಅಸ್ಯ-ಈ ಮಹಾಪುರುಷನ। ತ್ರಿಪಾತ್- (ಉಳಿದ )ಮುಕ್ಕಾಲು ಪಾಲು। ದಿವಿ- ಗೋಚರಾತೀತವಾದ ದ್ಯುಲೋಕದಲ್ಲಿದೆ( ಸ್ವಪ್ರಕಾಶರೂಪದಲ್ಲಿ। ಅಮೃತಂ - (ಅದು) ವಿಕೃತಿಯನ್ನು ಹೊಂದದೇ ಇರುತ್ತದೆ. ( ಯಾವ ಬದಲಾವಣೆ ಹೊಂದದೇ ಸಹಜ ಸ್ಥಿತಿಯಲ್ಲಿರುತ್ತದೆ.)

  ತ್ರಿಪಾದೂರ್ಧ್ವ ಉದೈತ್ ಪುರುಷಃ ಪಾದೋಸ್ಯೇಹಾಭವತ್ ಪುನಃ।
   ತತೊ ವಿಷ್ವಙ್ ವ್ಯಕ್ರಾಮತ್ ಸಾಶನಾಶನೆ ಅಭಿ ।।

ತ್ರಿಪಾತ್ ಪುರುಷಃ - ಇಂದ್ರಿಯಕ್ಕೆ ಗೋಚರವಲ್ಲದ ತನ್ನ ಮುಕ್ಕಾಲು ಭಾಗವನ್ನು ಸ್ವಪ್ರಕಾಶಲೋಕದಲ್ಲಿ ಸ್ಥಾಪಿಸಿರುವ ಪುರುಷನು। ಊರ್ಧ್ವಂ - ಉತ್ಕೃಷ್ಟವಾದ ದಿವ್ಯ ಲೋಕದಲ್ಲಿ । ಉದೈತ್ - ಸಂಸಾರಾತೀತನಾಗಿ ಸ್ಥಾಪಿತನಾಗಿದ್ದಾನೆ।  ಅಸ್ಯ - ಈ ಆದಿ ಪುರುಷನ। ಪಾದಃ - ಉಳಿದ ನಾಲ್ಕನೆಯ ಒಂದು ಭಾಗವು।  ಇಹ - ಸಂಸಾರ ರೂಪದಲ್ಲಿ। ವಿಷ್ವಙ್ -ನಾನಾ ರೂಪಗಳಲ್ಲಿ । ವ್ಯಕ್ರಾಮತ್- ಜಗತ್ತನ್ನು ವ್ಯಾಪಿಸಿದನು।


  ತಸ್ಮಾತ್ ವಿರಾಳಜಾಯತ ವಿರಾಜೋ ಅಧಿ ಪೂರುಷಃ।
  ಸ ಜಾತೋ ಅತ್ಯರಿಚ್ಯತ ಪಶ್ಚಾತ್ ಭೂಮಿಮಥೋ ಪುರಃ।।

ತಸ್ಮಾತ್ - ಆದಿಪುರುಷನಿಂದ। ವಿರಾಟ್- ಅನೇಕ ಪ್ರಕಾರಗಳಲ್ಲಿ ಮೆರೆಯುವ ಬ್ರಮ್ಹಾಂಡವು। ಅಜಾಯತ- ಉತ್ಪನ್ನವಾಯಿತು। ವಿರಾಜಃ ಅಧಿ- ಈ ವಿರಾಟ್ ದೇಹವನ್ನೇ ಆಶ್ರಯಿಸಿ । ಪುರುಷಃ-  ದೇಹಾಭಿಮಾನಿಯಾದ ಪುರುಷನು ಕಾಣಿಸಿಕೊಂಡನು। ಸಃ ಜಾತಃ - ಚೇತನಾ ರೂಪದಲ್ಲಿ ಕಾಣಿಸಿಕೊಂಡ ಪುರುಷನು। ಅತ್ಯರಿಚ್ಯತ- ತನಗಿಂತಲೂ  ಬೇರೆಯಾದ (ದೇವತಾ, ತಿರ್ಯಕ್, ಮನುಷ್ಯ, ಪಶು ಮುಂತಾದ) ರೂಪಗಳನ್ನು ಧರಿಸಿದನು। ಪಶ್ಚಾತ್- ಅನಂತರ । ಭೂಮಿಂ- ಭೂಮಿಯನ್ನೂ । ಅಥೋ- ಅನಂತರ। ಪುರಃ- ಪಾಂಚ ಭೌತಿಕ ಶರೀರಾದಿಗಳನ್ನೂ ನಿರ್ಮಿಸಿದನು।

  ಯತ್ ಪುರುಷೇಣ ಹವಿಷಾ  ದೇವಾ ಯಜ್ಞಮತನ್ವತ।
  ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ।।

 ಯತ್- ಪಾಂಚಭೌತಿಕ ಶರೀರಾದಿಗಳು ಉತ್ಪನ್ನವಾದ ನಂತರ। ದೇವಾಃ- ಪುರುಷನ ಅಂಶಗಳಾದ ದೇವತೆಗಳು। ಪುರುಷೇಣ- ಪುರುಷಸಂಜ್ಞಕವಾದ। ಹವಿಷಾ- ಹವಿಸ್ಸಿನಿಂದ। ಯಜ್ಞಂ - ಯಜ್ಞವನ್ನು। ಅತನ್ವತ- ನೆರವೇರಿಸಿದರು। ಅಸ್ಯ- ಈ ಯಜ್ಞಕ್ಕೆ। ವಸಂತಃ- ವಸಂತ ಋತುವು। ಆಜ್ಯಂ- ತುಪ್ಪವಾಗಿ। ಅಸೀತ್- ಇತ್ತು । ಗ್ರೀಷ್ಮಃ- ಗ್ರೀಷ್ಮವು । ಇಧ್ಮಃ- ಇಧ್ಮವಾಗಿತ್ತು। ಶರದ್ಧವಿಃ - ಶರತ್ತು ಹವಿಸ್ಸಾಗಿತ್ತು।

  ತಂ ಯಜ್ಞಃ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ।
  ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೆ ।।

ಅಗ್ರತಃ- ಸೃಷ್ಟಿಗಿಂತಲೂ ಮೊದಲು।   ಜಾತಂ - ಉತ್ಪನ್ನನೂ। ಯಜ್ಞಂ- ಯಜ್ಞಕ್ಕೆ ಸಾಧನಭೂತನೂ ಆದ । ತಂ ಪುರುಷಃ- ಆ ವಿರಾಟ್ ಪುರುಷನನ್ನು । ಬರ್ಹಿಷಿ- ಬರ್ಹಿಸ್ಸಿನ ಮೇಲೆ ಸ್ಥಾಪಿಸಿ । ಪ್ರೌಕ್ಷನ್- ಪ್ರೋಕ್ಷಣೆ ಮಾಡಿದರು। ತೇನ- ಆ ಪುರುಷಸ್ವರೂಪವಾದ ಪಶುವಿನಿಂದ । ದೇವಾಃ- ದೇವತೆಗಳೂ। ಸಾಧ್ಯಾಃ- ಸಾಧ್ಯರೂ। ಋಷಯಃ- ಋಷಿಗಳೂ ಸೇರಿ। ಯೆ- ಅನ್ಯರೂ ಸೇರಿ। ಅಯಜಂತ- ಯಜ್ಞವನ್ನು ಮಾಡಿದರು।

  ತಸ್ಮಾದ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷದಾಜ್ಯಂ।
  ಪಶೂನ್ತಾಂಶ್ಚಕ್ರೆ ವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚ ಯೆ ।।


ಸರ್ವಹುತಃ- ಜಗದ್ರೂಪಿಯಾದ ವಿರಾಟ್ಪುರುಷನೇ ಆಹುತಿಯಾಗಿ ಉಳ್ಳ। ತಸ್ಮಾತ್ ಯಜ್ಞಾತ್- ಆ ಯಜ್ಞದಿಂದ । ಪೃಷದಾಜ್ಯಂ- ದಧಿ ಮಿಶ್ರಿತವಾದ ಆಜ್ಯವು। ಸಂಭೃತಂ- ಸಂಪಾದಿತವಾಯಿತು। ವಾಯವ್ಯಾನ್ -ವಾಯು ದೇವತಾಕವಾದ ಯಾವ ಪಕ್ಷ್ಯಾದಿಗಳಿವೆಯೋ। ತಾನ್- ಅವುಗಳನ್ನು। ಚಕ್ರೆ- ನಿರ್ಮಿಸಿದನು। ಆರಣ್ಯಾನ್- ಅರಣ್ಯವಾಸಿಗಳಾದ ಮೃಗಗಳನ್ನೂ। ಯೇ ಚ ಗ್ರಾಮ್ಯಾಃ- ಗೋವು ಮೊದಲಾದ ಗ್ರಾಮವಾಸಿಗಳಾದ ಪಶುಗಳನ್ನು ಉತ್ಪನ್ನ ಮಾಡಿದನು।
  

         ತಸ್ಮಾದ್ ಯಜ್ಞಾತ್ ಸರ್ವಹುತ ಋಚಃ ಸಾಮಾನಿ ಜಜ್ಞಿರೆ।
         ಛಂದಾಂಸಿ ಜಜ್ಞಿರೆ ತಸ್ಮಾದ್ ಯಜುಸ್ತಸ್ಮಾದಜಾಯತ ।।


ಸರ್ವಹುತಃ- ಸರ್ವಾತ್ಮಕವಾದ ವಿರಾಟ್ ಪುರುಷನೇ ಆಹಿತಿಯಾಗಿ ಉಳ್ಳ। ತಸ್ಮಾತ್ ಯಜ್ಞಾತ್- ಆ ಯಜ್ಞದಿಂದ। ಋಚಃ- ಋಕ್ಕುಗಳು। ಸಾಮಾನಿ- ಸಾಮ ಮಂತ್ರಗಳೂ। ಜಜ್ಞಿರೆ- ಉತ್ಪನ್ನವಾದವು। ತಸ್ಮಾತ್- ಅದರಿಂದಲೇ। ಛಂದಾಂಸಿ- ಛಂದಸ್ಸುಗಳೂ।  ಜಜ್ಞಿರೆ- ಉತ್ಪನ್ನವಾದವು। ತಸ್ಮಾತ್- ಆ ಯಜ್ಞದಿಂದಲೇ। ಯಜುಃ- ಯಜಯಸ್ಸೂ। ಅಜಾಯತ- ಉತ್ಪನ್ನವಾಯಿತು।

    ಯತ್ ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್।
    ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾಧಾ ಉಚ್ಯೇತೆ ।। 

 ಯತ್- ಯಾವಾಗ। ಪುರುಷಂ- ಪುರುಷನನ್ನು। ವ್ಯದಧುಃ- ಯಜ್ಙಾಹುತಿಯನ್ನಾಗಿ ಸಂಕಲ್ಪಿಸಿದರೋ ಆಗ। ಕತಿಧಾ- ಎಷ್ಟು ಪ್ರಕಾರವಾಗಿ। ವ್ಯಕಲ್ಪಯನ್- ಅವನನ್ನು ವಿಭಾಗಿಸಿದರು। ಅಸ್ಯ- ಈ ಪುರುಷನ। ಮುಖಂ- ಮುಖವು। ಕಿಂ- ಯಾವುದು। ಅಸ್ಯ- ಇವನ। ಬಾಹೂ - ಬಾಹುಗಳು। ಕಾ ಊರೂ- ಯಾವವು ತೊಡೆಗಳು। ಪಾದೌ- ಪಾದಗಳು। ಕೌ- ಯಾವವು ಎಂದು। ಉಚ್ಯೇತೆ- ಹೇಳಲ್ಪಟ್ಟಿವೆ।

    ಬ್ರಾಮ್ಹಣೋಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ।
     ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ।।

ಬ್ರಾಮ್ಹಣಃ -ಬ್ರಾಮ್ಹಣನೇ । ಅಸ್ಯ- ಈ ಪುರುಷನ । ಮುಖಂ- ಮುಖವಾಗಿ। ಆಸೀತ್- ಇದ್ದನು। ಬಾಹೂ- ಬಾಹುಗಳು।ರಾಜನ್ಯಃ- ಕ್ಷತ್ರಿಯ ರೂಪವಾಗಿ।ಕೃತಃ- ಮಾಡಲ್ಪಟ್ಟವು। ತತ್- ಆಗ। ಅಸ್ಯ- ಈ ಪುರುಷನ।ಊರೂ- ತೊಡೆಗಳು।ವೈಶ್ಯಃ- ವೈಶ್ಯರೂಪದಲ್ಲಿ ಪರಿಣಮಿಸಿದವು। ಪದ್ಭ್ಯಾಂ - ಪಾದಗಳಿಂದ। ಶೂದ್ರಃ- ಶೂದ್ರನು।ಅಜಾಯತ- ಉತ್ಪನ್ನನಾದನು।

         ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ।
          ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾತ್ ವಾಯುರಜಾಯತ ।।

ಮನಸಃ-  ಮನಸ್ಸಿನಿಂದ। ಚಂದ್ರಮಾಃ- ಚಂದ್ರನು। ಜಾತಃ- ಹುಟ್ಟಿದನು। ಚಕ್ಷೋಃ- ಕಣ್ಣಿನಿಂದ। ಸೂರ್ಯಃ- ಸೂರ್ಯನು। ಅಜಾಯತ- ಹುಟ್ಟಿದನು। ಮುಖಾತ್- ಮುಖದಿಂದ। ಇಂದ್ರಶ್ಚ- ಅಗ್ನಿಶ್ಚ- ಅಗ್ನಿ ಮತ್ತು ಅಗ್ನಿಗಳು ಹುಟ್ಟಿದರು। ಪ್ರಾಣಾತ್- ಪ್ರಾಣದಿಂದ। ವಾಯುಃ- ವಾಯುವು। ಅಜಾಯತ- ಹುಟ್ಟಿದನು।


  ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ। 
 ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ ತಥಾ ಲೋಕಾಙ್ ಅಕಲ್ಪಯನ್ ।। 

 ನಾಭ್ಯಾಃ - ಪುರುಷನ ಹೊಕ್ಕಳಿನಲ್ಲಿ।  ಅಂತರಿಕ್ಷಂ- ಅಂತರಿಕ್ಷವು। ಆಸೀತ್- ಇತ್ತು।  ಶೀರ್ಷ್ಣಃ -ಶಿರಸ್ಸಿನಿಂದ।  ದೌಃ- ದ್ಯುಲೋಕವು।  ಸಮವರ್ತತ- ಪ್ರಾದುರ್ಭೂತವಾಯಿತು।  ಪದ್ಭ್ಯಾಂ ಭೂಮಿಃ - ಪಾದಗಳಿಂದ ಭೂಮಿಯೂ। ಶ್ರೋತ್ರಾದ್ದಿಶಃ- ಕಿವಿಗಳಿಂದ ದಿಕ್ಕುಗಳೂ ಉತ್ಪನ್ನವಾದವು। ತಥಾ- ಹಾಗೆಯೇ। ಲೋಕಾನ್ - ಲೋಕಗಳನ್ನು । ಅಕಲ್ಪಯನ್- (ದೇವತೆಗಳು ಪುರುಷನ ದೇಹದಿಂದ) ನಿರ್ಮಿಸಿದರು।

 ಸಪ್ತಾಸ್ಯಾಸನ್ ಪರಿಧಯಃ ತ್ರಿಃ ಸಪ್ತ ಸಮಿಧಃ ಕೃತಾಃ।
 ದೇವಾ ಯತ್ ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಂ । ।

ಅಸ್ಯ- ಈ ಯಜ್ಞಕ್ಕೆ। ಸಪ್ತ - ಏಳು( ಛಂದಸ್ಸುಗಳು)।  ಪರಿಧಯಃ- ಪರಿಧಿಗಳಾಗಿ।  ಆಸನ್- ಇದ್ದವು।  ತ್ರಿಃಸಪ್ತ- ಇಪ್ಪತ್ತೊಂದು ತತ್ವಗಳು।  ಸಮಿಧಃಕೃತಾಃ- ಸಮಿತ್ತುಗಳಾಗಿ ಮಾಡಲ್ಪಟ್ಟಿದ್ದವು।  ದೇವಾಃ- ದೇವತೆಗಳು।  ಯತ್- ಯಾವ ಪುರುಷನನ್ನು।  ಯಜ್ಞಂ- ಯಜ್ಞಸಾಧನವನ್ನಾಗಿ ।  ತನ್ವಾನಾಃ- ಮಾಡಲಪೇಕ್ಷಿಸಿದರೋ।  ಪುರುಷಂ- ಆ ಪುರುಷನನ್ನೇ।  ಪಶುಂ- ಪಶುಸ್ಥಾನದಲ್ಲಿ।  ಅಬಧ್ನನ್- ಬಂಧಿಸಿದರು।

ಯಜ್ನೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ।
ತೆ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ। ।

ದೇವಾಃ  - ದೇವತೆಗಳು।  ಯಜ್ಞೇನ- ಮಾನಸಿಕವಾದ ಸಂಕಲ್ಪರೂಪದ ಯಜ್ಞದಿಂದ।  ಯಜ್ಞಂ- ಯಜ್ಞರೂಪನಾದ ಪ್ರಜಾಪತಿಯನ್ನು।  ಅಯಜಂತ- ಯಜಿಸಿದರು।  ತಾನಿ- ಆ ಯಜ್ಞಪ್ರಕಾರಗಳೇ।  ಪ್ರಥಮಾನಿ ಧರ್ಮಾಣಿ- ಆದಿಧರ್ಮಗಳಾಗಿ।  ಆಸನ್- ಇದ್ದವು(ಪ್ರಸಿದ್ಧವಾದವು)। ಯತ್ರ- ಯಾವ ಸ್ವರ್ಗದಲ್ಲಿ । ಪೂರ್ವೇ- ಪುರಾತನರಾದ।  ದೇವಾಃ- ದೇವತೆಗಳೂ। ಸಾಧ್ಯಾಃ- ಸಾಧ್ಯರೂ।  ಸಂತಿ- ಇರುವರೋ।  ನಾಕಂ- ಆ ಸ್ವರ್ಗವನ್ನು।  ತೇ ಮಹಿಮಾನಃ- ವಿರಾಟ್ಪುರುಷನ ುಪಾಸನೆ ಮಾಡುವ ಮಹಾತ್ಮರು।  ಸಚಂತೆ- ಪಡೆಯುತ್ತಾರೆ।


Monday, April 22, 2013

ಅಭಿವೃದ್ಧಿ ಎಂಬ ದಾರಿಯ ಮುಳ್ಳುಗಳು

ಒಂದು ವಾರದ ಹಿಂದೆ NDTV ಯವರು ಪ್ರಧಾನ ಮಂತ್ರಿಯನ್ನು ವೇದಿಕೆಯ ಮೇಲೆ ಕೂರಿಸಿಕೊಂಡು ಪ್ರತಿ ವರ್ಷ ಕೊಡುವ ಒಂದಷ್ಟು ಅವಾರ್ಡ್ ಗಳನ್ನು ಕೊಟ್ಟು ತಮ್ಮನ್ನು ತಾವು ದೊಡ್ಡವರನ್ನಾಗಿ ತೋರಿಸಿಕೊಳ್ಳುತ್ತಿದ್ದರು. ಯಾರ್ ಯಾರಿಗೂ, ಯಾತ್ಯಾತಕ್ಕೋ ಅವಾರ್ಡ್ ಗಳು. ನಗು ತಡೆದುಕೊಂಡು ನೊಡುತ್ತಿದ್ದೆ.   ಆದರೆ ಒಮ್ಮೆಲೇ  ಟಿವಿಯವರ ಮೇಲೆ ಅಸಹ್ಯವಾಗತೊಡಗಿತು. ಏಕೆಂದರೆ ಅವರು ಕೊಟ್ಟ ಒಂದು ಅವಾರ್ಡ್. ಕೆಲ ತಿಂಗಳ ಹಿಂದೆ ದಿಲ್ಲಿಯಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೊಳಗಾದ ಯುವತಿಯ ತಂದೆ ತಾಯಿಯರನ್ನು ವೇದಿಕೆಗೆ ಕರೆಸಿ ದುಃಖದಲ್ಲಿ ಮುಳುಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದ ಅವರ ಕೈ ಗೆ ಮೈಕ್ ಕೊಟ್ಟು ಮಾತಾಡಿ ಮಾತಾಡಿ ಅಂತ ಅವರ ಪ್ರಾಣ ತಿಂದು ಅವರ ಕೈಗೆ ''ಅವಾರ್ಡ್'' ಎಂಬ ಹೆಸರಿನ ಒಂದು ಕಬ್ಬಿಣದ ತುಂಡನ್ನು ನೀಡಿದರು. ಆ ಕಬ್ಬಿಣದ ತುಂಡು ಆ ವೃದ್ಧ ದಂಪತಿಗಳಿಗೆ ಯಾವ ರೀತಿ ಉಪಯೋಗಕ್ಕೆ ಬರಬಹುದು ಎಂದು ನಾನು ಯೊಚಿಸಿದೆ. ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚುಅನಿಸಿತು. ಈ ಎಲ್ಲ ಚಾನೆಲ್ ಗಳಿಗೆ  ತಿಂಗಳುಗಟ್ಟಲೆ ಅತಿ ಹೆಚ್ಚು  TRP ಎಂಬ ಕನಸನ್ನು ನನಸಾಗಿಸಿ ಕೋಟಿಗಟ್ಟಲೆ ಹಣವನ್ನು ಈ ಚಾನೆಲ್ ನವರಿಗೆ ನೀಡಿ ಹೋದ ನಿರ್ಭಾಗ್ಯ ಹುಡುಗಿಯ ಹೆತ್ತವರು ಅವರು.

ಹತ್ತು ನಿಮಿಷಗಳ ನಂತರ ಅದೇ ವೇದಿಕೆಯಲ್ಲಿ ಕರೀನಾ ಕಪೂರ್ ಳನ್ನು ಕರೆದು ಹೋಗಳಿ ''ಎಂಟರ್ ಟೈನರ್ ಆಫ್  ದಿ ಡೆಕೇಡ್'' ಅವಾರ್ಡ್ ಪ್ರದಾನ ಮಾಡಲಾಯಿತು. ಶ್ರೀದೆವಿಗೆ ''ಐವತ್ತು ವರ್ಷ ವಯಸ್ಸಿನಲ್ಲಿಯೂ ಕೂಡ ಸೆಕ್ಸಿಯಾಗಿ ಕಾಣಿಸುತ್ತಾಳೆ'' ಅನ್ನುವ ಕಾರಣಕ್ಕಾಗಿ ಅವಾರ್ಡ್  ಕೊಡಲಾಯಿತು. ಪ್ರೇಕ್ಷಕರಾಗಿ ಕುಳಿತಿದ್ದ ದೇಶದ ಮಹಾ ಮಹಿಮರೆಲ್ಲ ಚಪಾಳೆ ತಟ್ಟಿ  ಕರೀನಾ ಮತ್ತು ಶ್ರಿದೆವಿಯರನ್ನು ಅಭಿನಂದಿಸುತ್ತಿದ್ದರು. (ಸಮಾಜದ ಮೇಲೆ ಇದರ ಪರಿಣಾಮದ ಬಗ್ಗೆ ಮುಂದೆ ಬರೆಯುತ್ತೆನೆ.)

ದೆಹಲಿಯ ನಿರ್ಭಯಾ ರೇಪ್ ಪ್ರಕರಣದ ಸಂದರ್ಭದಲ್ಲಿ  ಕೆಲ NGO ಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳು ಉಗ್ರವಾಗಿ  ಪ್ರತಿಭಟಿಸಿದರು. ಅದನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಜ್ಞಾವಂತರು ಕೇವಲ ತಮ್ಮ ಫೆಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ''ಎಲ್ಲದಕ್ಕೂ ಕೇವಲ ದೆಹಲಿ ಪೊಲಿಸರು ಮತ್ತು ಸರ್ಕಾರಗಳು ಹೊಣೆ'' ಅಂತ ಬರೆದದ್ದೇ ಬರೆದದ್ದು.  ತಮ್ಮ ಪ್ರೊಫೈಲ್ ಚಿತ್ರಗಳ ಬದಲಿಗೆ ಕಪ್ಪು ಚುಕ್ಕೆ ಇಟ್ಟು ಪ್ರತಿಭಟಿಸುವುದು, ರೇಪ್ ಗೆ ಸಂಬಂಧಿಸಿದ ಮಾಹಿತಿಗಳನ್ನು, ಪ್ರತಿಭಟನೆಯ ಫೋಟೋಗಳನ್ನು ಶೇರ್ ಮಾಡುವುದು ಮುಂತಾಗಿ ಎಲ್ಲರೂ ತಮ್ಮ ತಮ್ಮ ಬುದ್ಧಿಮಟ್ಟಕ್ಕೆ ತಕ್ಕಂತೆ ಸ್ಪಂದಿಸಿದರು. ಆದರೆ ಇವರೆಲ್ಲ ಗಮನಿಸದ ವಿಷಯವೆಂದರೆ ಪೋಲೀಸಿನವರು ಮತ್ತು ಸರ್ಕಾರ ಇಬ್ಬರೂ ಕೂಡ ಇಂತಹ ಆನ್ ಲೈನ್ ಪ್ರತಿಭಟನೆಗಳಿಗೆ ಜಗ್ಗುವುದಿಲ್ಲ. ಅದು ಏಕೆಂದರೆ ಈ ಆನ್ ಲೈನ್ ಪ್ರತಿಟನೆ ಮಾರನೆ ದಿನದ ಹೊತ್ತಿಗೆ ಸ್ಪಾಮ್ ಆಗಿ ಹೋಗುತ್ತದೆ  . ಹಾಗೂ ಭಾರತದಲ್ಲಿ ನೂರಿಪ್ಪೈತೈದು ಕೋಟಿಗೂ ಮಿಗಿಲಾದ ಜನಸಂಖ್ಯೆಗೆ  ಕೇವಲ ಆರು ಕೋಟಿ ಫೆಸ್ ಬುಕ್  ಪ್ರೊಫೈಲ್ ಗಳು ಇವೆ . ಅವುಗಳಲ್ಲಿ  ನೂರಕ್ಕೆ ಮೂವತ್ತ ರಷ್ಟು ಫ್ಲರ್ಟಿಂಗ್ ಗಾಗಿ ಮಾಡಿಕೊಂಡ ಫೇಕ್ ಪ್ರೊಫೈಲ್ ಗಳು. ಈ ಕಮೆಂಟು ಕುಟ್ಟುವ ಜನ ಆನ್ ಲೈನ್ ನಲ್ಲಿ ಮಾತ್ರ ಶೂರರು. ಇವರೆಂದಿಗೂ  ರಸ್ತೆಗಿಳಿಯಲಾರರು ಮತ್ತು ಇಂಥವರು ಮತ ಚಲಾಯಿಸುವುದು ಕೂಡ ಅಪರೂಪ ಆದ್ದರಿಂದ ಆ ಪ್ರತಿಭಟನೆಯನ್ನು ತನ್ನಷ್ಟಕ್ಕೆ ಸತ್ತುಹೊಗಲು  ಬಿಟ್ಟು ಸರ್ಕಾರ ಸುಮ್ಮನಾಯಿತು. ಸಾಮಾಜಿಕ ಜಾಲತಾಣಗಳಿಂದ ಕೆಲವೊಂದು ವಿಷಯಗಳಲ್ಲಿ ಪರಿಣಾಮಕಾರಿ ಫಲಿತಾಂಶ ಬಂದಿದ್ದು ನಿಜವಾದರೂ ಈ ರೇಪ್ ಪ್ರಕರಣದಲ್ಲಿ ಎನೂ ನಡೆಯಲಿಲ್ಲ. ಮಾಧ್ಯಮದವರು ಉಂಟು ಮಾಡಿದ ಒತ್ತಡಕ್ಕೆ ಮತ್ತು ಪ್ರತಿಪಕ್ಷಗಳ ಗಲಾಟೆಯಿಂದಾಗಿ  ಸಂಸತ್ತಿನಲ್ಲಿ anti rape bill ಪಾಸ್ ಆಯಿತು. (ಅನುಮೋದನೆಗೊಂಡ ಬಿಲ್ ಪರಿಣಾಮಕಾರಿಯಾಗಿಲ್ಲ,  ಅಂತ ಸುಷ್ಮಾ ಸ್ವರಾಜ್ ಈಗ ಮತ್ತೆ ಕೋಗೆಬ್ಬಿಸಿದ್ದಾರೆ.) ಆದರೆ ಮಾಧ್ಯಮಗಳು ಎಲ್ಲವನ್ನೂ ಬಿಟ್ಟು ಈ ಪ್ರಕರಣ ಹಿಂದೆ ಬೀಳುವುದಕ್ಕೂ ಮತ್ತು ಪ್ರತಿಪಕ್ಷಗಳಿಗೂ ಇದರ ಹಿಂದೆ ಅವರದೇ ಆದ  ಹಿತಾಸಕ್ತಿಯ ಕಾರಣಗಳಿವೆ. ರಾಜಕೀಯ ಹಿತಾಸಕ್ತಿಗಾಗಿ ಹಾಗೂ ವಿರೋಧಿಗಳನ್ನು ಹಣಿಯಲು ಮಾಧ್ಯಮಗಳ ಉಪಯೋಗ ಹೇರಳವಾಗಿ ಹೆಚ್ಚಿದೆ.  (ಕರ್ನಾಟಕ ದಲ್ಲಂತೂ ಅತ್ಯಂತ ಭ್ರಷ್ಟ ನ್ಯೂಸ್ ಚಾನಲ್ ಗಳ ಮುಖ್ಯಸ್ಥರು ಜನಸಾಮಾನ್ಯರಿಗೆ ನೈತಿಕತೆಯ ಪಾಠ ಹೇಳಿಕೊಡುತ್ತಿದ್ದಾರೆ.)

ಈ ಬೆಳವಗಿಗಳ ನಂತರ ಈಗ ದಿಲ್ಲಿಯಲ್ಲಿ ಮತ್ತೊಂದು ರೇಪ್ ಆಗಿದೆ, ಅದು ಕೂಡ ಚಿಕ್ಕ ಮಗುವಿನ ಮೇಲೆ. ಮತ್ತೊಂದು ಪ್ರತಿಭಟನೆ. ಮತ್ತಷ್ಟು ಫೆಸ್ ಬುಕ್ ಸ್ಟೇಟಸ್ ಅಪ್ಡೇಟ್ ಗಳು. ಕಾನೂನು ಗಟ್ಟಿ ಮಾಡಬೇಕು, ಸರ್ಕಾರ ಹೊಣೆ ಹೊತ್ತುಕೊಬೇಕು, ಘೋರ ಶಿಕ್ಷೆ ಆಗಬೇಕು ಅನ್ನೋ ಬೆಡಿಕೆಗಳು, ಪೋಲೀಸರ ಅಸಮರ್ಥತೆಯ ಅನಾವರಣಗಳು, ದೊಡ್ಡ ದೊಡ್ಡ ಲೇಖನಗಳು, ಟೀವಿಯವರಿಗೆ ಹೀರೋ ಆಗಲು ಹೊಸ ಚರ್ಚೆಗಳು.
ಈ ದೆಹಲಿಯ ''ಗುಡಿಯಾ'' ರೇಪ್ ನ ವರದಿಗಳು ಹಾಗೂ ಪ್ರತಿಭಟನೆಗಳು ಶುರುವಾದಕೂಡಲೇ ದೇಶದ ವಿವಿಧ ಭಾಗಗಳಿಂದ ಇನ್ನೂ ಏಳು ಮಕ್ಕಳ ಅತ್ಯಾಚಾರಗಳ ಮಾಹಿತಿ ಬರತೊಡಗಿತು. ಎಲ್ಲ ಎಂಟೂ ಘಟನೆಗಳನ್ನು ಒಮ್ಮೆ ಕಾಟಾಚಾರಕ್ಕೆ ವರದಿ ಮಾಡಿ ಮತ್ತೆ ದೆಹಲಿಯ ಪೋಲೀಸರ ಮತ್ತು ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹ ಮುಂದುವರೆಯಿತು. (ಅಂದರೆ ವಾಸ್ತವವಾಗಿ ದೇಶದಾದ್ಯಂತ ಪ್ರತಿನಿತ್ಯ ರೇಪ್ ಗಳು ದೊಡ್ಡ  ಸಂಖ್ಯೆಯಲ್ಲಿ ನಡೆಯುತ್ತವೆ. ಆದರೆ ಮಾಧ್ಯಮದವರ ಬಿಡುವಿಗೆ ಅನುಸಾರವಾಗಿ ಹಾಗೂ ಲಾಭದ ಆಧಾರದ ಮೇಲೆ ಕೆಲ ಪ್ರಕರಣಗಳು ಪ್ರಾಮುಖ್ಯತೆ ಪಡೆದು ದೇಶದಾದ್ಯಂತ ವರದಿಯಾಗುತ್ತವೆ.  NGO ಒಂದಕ್ಕೆ ಸೇರಿದ ಬಾಡಿಗೆ ಪ್ರತಿಭಟನೆಗಾತಿಯೋಬ್ಬಳು ಆಸ್ಪತ್ರೆಯಲ್ಲಿ ಪೊಲೀಸರು ನಿರ್ಬಂಧಿಸಿದ ಪ್ರದೇಶವನ್ನು ಪ್ರವೇಶಿಸಿದಾಗ ಆ ಅಧಿಕಾರಿ  ಆ ಹುಡುಗಿಯನ್ನು ಹಿಂದಕ್ಕೆ ತಳ್ಳಿದರು. ಅಷ್ಟಕ್ಕೇ ಅವಾಚ್ಯ ಶಬ್ದ ಬಳಸಿದ ತನ್ನ ಮೊಮ್ಮಗಳ ವಯವಸಿನ ಹುಡುಗಿಯ ಕೆನ್ನೆಗೆ ಏಟು ನೀಡಿದ್ದಾರೆ. ಪೋಲೀಸ್ ಕೆನ್ನೆಗೆ ಹೊಡೆಯುವ ದೃಶ್ಯಗಳನ್ನು ಮಾತ್ರ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಒತ್ತಡ ತಂದು ಆ ಅಧಿಕಾರಿಯನ್ನು ಅಮಾನತುಗೊಳಿಸಲಾಯಿತು. ಆದರೆ ಆ ಹುಡುಗಿಯ ವರ್ತನೆಯ ಮತ್ತು ಹಿನ್ನೆಲೆಯ ಬಗ್ಗೆ ಯಾರು ಬಾಯಿ ಬಿಡುವುದಿಲ್ಲ. ಕೆನ್ನೆಗೆ ಏಟು ತಿಂದ ಆ ಹುಡುಗಿ ತನ್ನ ಮೂರ್ನಾಲ್ಕು ಗೆಳತಿಯರನ್ನು ಕರೆದುಕೊಂಡು ಮತ್ತೆ ಬಂದು ಆ ಏಟು ನೀಡಿದ ಅಧಿಕಾರಿಗೆ ಮತ್ತೆ ಅವಾಚ್ಯ ಶಬ್ದಗಳಲ್ಲಿ ಬೈದು ಕೊರಳ ಪಟ್ಟಿಗೆ ಕೈ ಹಾಕಿ ಎಳೆದಾಡಿ ಹಲ್ಲೆ ಮಾಡಿದ ವಿಡಿಯೋ ಆ ಆಸ್ಪತ್ರೆಯ ಸಿ ಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅದನ್ನು ತೆಗೆದು ಪೊಲೀಸರು ಇಂಟರ್ನೆಟ್ಟಿಗೆ ಕೂಡ ಹಾಕಿದ್ದಾರೆ. ಆದರೆ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಅದನ್ನು ತೊರಿಸುವುದಿಲ್ಲ. ಈ  ಆಟ ತಿಳಿಯದ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಅಮಾಯಕತೆಯಿಂದ ಪೋಲೀಸರ ವಿರುದ್ಧ ಆಕ್ರೋಷದಿಂದ ಪ್ರತಿಕ್ರಯಿಸುತ್ತಾರೆ)

ಇದೆಲ್ಲ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿದ್ದರೂ ಕೂಡ ಇದರ ಬಗ್ಗೆ ಯಾರೂ ಹಗುರವಾಗಿ ಮಾತಾಡುವಂತೆ ಇಲ್ಲ. ಈ ಸಾಮಾಜಿಕ ತಾಣಗಳಲ್ಲಿನ ಕೆಲ ಸೊ-ಕಾಲ್ಡ್ ಪ್ರಜ್ಞಾವಂತರು ಅಂಥವರ ಮೇಲೆ ಯುದ್ಧವನ್ನೇ ಸಾರಿಬಿಡುತ್ತಾರೆ. ಟಿವಿಯವರ ಕೈಗೆ ಯಾರಾದರೂ ಇಂಥ ಘಟನೆಗಳ ಬಗ್ಗೆ ವಾಸ್ತವದ ನೆಲೆಯಲ್ಲಿ ಮಾತಾಡಿ ಸಿಕ್ಕಿಬಿದ್ದರೆ  ಅವರನ್ನೇ ರೇಪ್ ಮಾಡಿದ ಅಪರಾಧಿ ಎಂಬಂತೆ ಚಿತ್ರಿಸಿ ತೇಜೋವಧೆ ಮಾಡಿಹಾಕಿದ ಉದಾಹರಣೆಗಳು ಇರುವುದರಿಂದ ಯಾರೂ ಕ್ಯಾಮರಾಗಳ ಮುಂದೆ ಬಾಯಿ ಬಿಡುವುದಿಲ್ಲ.

ಇಂತಹ ಅತ್ಯಾಚಾರದ ಘಟನೆಗಳನ್ನು ಸ್ವಲ್ಪ ಕಾಮನ್ ಸೆನ್ಸ್ ಇಟ್ಟುಕೊಂಡು ಗಮನಿಸಿ ನೋಡುವುದಾದರೆ, ಈ ತರಹದ ಪಾಶವಿಕ ರೇಪ್ ಗಳನ್ನು ಮಾಡುವ ಜನ ಸಮಾಜದ ಕೆಳಮಟ್ಟದವರಾಗಿದ್ದಾರೆ. (ಉಳಿದವರು ಮಾಡುವ ಅನೇಕ ಪ್ರಕರಣಗಳು ಹೊರಬರುವುದಿಲ್ಲ ಅನ್ನೋದು ನಗ್ನ ಸತ್ಯ) ದೆಹಲಿಯ ನಿರ್ಭಯಾ  ರೇಪ್ ಪ್ರಕರಣವನ್ನೇ ನೋಡುವುದಾದರೆ ಅಪರಾಧಿಗಳೆಲ್ಲ ವಿದ್ಯೆ, ಸಂಸ್ಕಾರ, ಜವಾಬ್ದಾರಿ ಯಾವುದೂ ಇಲ್ಲದ, ಹಾಗೂ  ಕುಟುಂಬದಿಂದ ದೂರದಲ್ಲಿ ಬದುಕುತ್ತಿದ್ದ ನಿಮ್ನವರ್ಗಕ್ಕೆ ಸೆರಿದವರು.  ನಶೆ, ಸಂಸ್ಕಾರ ಹೀನತೆ, ಸಮಾಜದ  ಒಂದು ವರ್ಗದೆಡೆಗಿನ  ಅನಗತ್ಯ ಆಕ್ರೋಶ, ಲೈಂಗಿಕ ಸುಖದ ಆಸೆಗಿಂತ ಹೆಚ್ಚಾಗಿ ಪಾಶವಿಕವಾಗಿ ವರ್ತಿಸುವಂತೆ ಮಾಡುವ ಮಾನಸಿಕ ದೌರ್ಬಲ್ಯ - ಪುರುಷತ್ವದ ಬಗೆಗಿನ ತಪ್ಪು ಕಲ್ಪನೆಗಳು, ಅಸಹನೆ ಮುಂತಾದ ಅನೇಕ ಕಾರಣಗಳು ಅದರ ಹಿಂದೆ ಇರುತ್ತವೆ.
ಆದರೆ ಅಂಥವರಿಗೆ ಉಗ್ರವಾದ ಶಿಕ್ಷೆ ನೀಡಬೇಕು, ಕೆಲ ಮುಸ್ಲಿಂ ದೇಶಗಳಂತೆ ಶಿಶ್ನಛೆದನ ಶಿಕ್ಷೆ ನೀಡಬೇಕು, ಮರಣದಂಡನೆ ನೀಡಬೇಕು, ಕಾನೂನು ಬದಲಾಯಿಸಬೇಕು ಪೊಲೀಸರು ಬಿಗಿಯಾಗಬೇಕು, ರಾಜಕಾರಣ ಬದಲಾಗಬೇಕು ಎಂದೆಲ್ಲ ಬರೆಯುವ, ಮಾತಾಡುವ ಜನ ಸಮೂಹ ತಮ್ಮ ಉದ್ವೇಗದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಮುನ್ನ ಮರೆತುಬಿಡುವ ಅಂಶವೆಂದರೆ, ಉಗ್ರವಾದ ಶಿಕ್ಷೆಯಿಂದ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ. ಇನ್ನೊಂದು ಪಾರ್ಶ್ವದಿಂದ ನೋಡಿದಾಗ ''ಉಗ್ರವಾದ ಶಿಕ್ಷೆ'' ಬಯಸುತ್ತಿರುವ ಮನಸುಗಳು ಕೂಡ ವಿಕೃತ ಆನಂದಕ್ಕಾಗಿ ಹಾತೊರೆಯುತ್ತಿವೆ ಅನಿಸುತ್ತದೆ.ಮತ್ತು ಒಬ್ಬ ರೇಪಿಸ್ಟ್ ಗೆ ಆದ ಉಗ್ರ ಶಿಕ್ಷೆಯ ಬಗ್ಗೆ ಮಾಹಿತಿ ಇರುವ ಇನ್ನೊಬ್ಬ ರೇಪಿಸ್ಟ್  ಆ ಶಿಕ್ಷೆಯನ್ನು ತನ್ನಂಥವನ ಮೇಲೆ ನಡೆದ ಅನ್ಯಾಯ ಎಂದು ಭಾವಿಸಿ ತಾನು ಇನ್ನೂ ಪಾಶವಿಕ ಉದ್ವೆಗಕ್ಕೊಳಗಾಗುವ ಸಂಭವವೂ ಇದೆ. ಹಿಂಸೆಯಿಂದ ಹಿಂಸೆ ಹೆಚ್ಚುತ್ತದೆಯೇ ಹೊರತು ನಿಲ್ಲುವುದಿಲ್ಲ. ಅದು ಕಾನೂನಿನ ರೂಪದಲ್ಲಿ ಅಥವಾ ಇನ್ಯಾವುದೇ ರೂಪದಲ್ಲಿರಲಿ


 ಇನ್ನು ರೇಪ್ ಮಾಡುವವರು ಕಾನೂನಿಗೆ ಹೆದರುವುದಿಲ್ಲ.. (ಬಹುತೇಕ ಪ್ರಕರಣಗಳಲ್ಲಿ ಕಾನೂನು ಗೊತ್ತಿರುವುದಿಲ್ಲ.) ಮತ್ತು ಅಂತಹ ಪಾಶವಿಕ ಅತ್ಯಾಚಾರಕ್ಕೆ ಮುಂದಾದ ವ್ಯಕ್ತಿ ಇದಕ್ಕಾಗಿ ನನಗೆ ಶಿಕ್ಷೆ ಆಗಬಹುದು ಎಂಬ ಭಯವನ್ನು ಆ ಸಮಯದಲ್ಲಿ ಹೊಂರುವುದಿಲ್ಲ. (''ಕಾಮಾತುರಾಣಾಂ ನ ಭಯಂ ನ ಲಜ್ಜಾ''.) ಮತ್ತು ಸಾಕ್ಷ್ಯ ನಾಶ ಪಡಿಸುವ ಆತ್ಮ ವಿಶ್ವಾಸದಲ್ಲಿ ಅವನಿರುತ್ತಾನೆ. ಅಥವಾ ರೇಪ್ ಮಾಡುವ ಮೊದಲೇ ತಕ್ಕ ಸಿದ್ಧತೆ ಮಾಡಿಕೊಂಡು ಚಾಣಾಕ್ಷತನದಿಂದ ಯಾರ ಕೈಗೂ ಸಿಗದಂತೆ ಪಾರಾಗುತ್ತಾನೆ. ಇನ್ನೊಂದು ಸತ್ಯಾಂಶವೆಂದರೆ ಈಗಿರುವುದಕ್ಕಿಂತ ಹೆಚ್ಚು ಉಗ್ರವಾದ ಶಿಕ್ಷೆಯ ಕಾನೂನು ಬಂದದ್ದೇ ಆದರೆ ಅತ್ಯಾಚಾರದ ಬಳಿಕ ಇನ್ನೂ ಬರ್ಬರವಾದ  ಹತ್ಯೆಗಳು ನಡೆಯುವ ಸಂಭಾವ್ಯತೆ ಹೆಚ್ಚುತ್ತದೆ.
ಇನ್ನು ಪೊಲೀಸರು ಇಂತಹ ರೇಪ್ ಗಳನ್ನ ತಡೆಯಲು ಹೇಗೆ ಸಾಧ್ಯ?  ಯಾವ ಮನುಷ್ಯ ಎಲ್ಲಿ ವಿಕೃತವಾಗಿ ವರ್ತಿಸುತ್ತಾನೆ ಎಂದು ಹೇಗೆ ಪತ್ತೆ ಹಚ್ಚುವುದು? ಎಷ್ಟು ರಸ್ತೆಗಳಲ್ಲಿ ಮತ್ತು ಎಷ್ಟು ಕಡೆಗಳಲ್ಲಿ ರಕ್ಷಣೆ ಒದಗಿಸಲು ಸಾಧ್ಯ? ಅನೇಕ ರೇಪ್ ಗಳು ಮನೆಯಲ್ಲಿಯೇ ನಡೆಯುತ್ತವೆ. ಆದರೆ ಇಂತಹ ಘಟನೆ ನಡೆದಾಗ ಸಹಾಯಕ್ಕೆ ಮುಂದಾಗದ ಮತ್ತು ಪ್ರಕರಣ ದಾಖಲಿಸಿಕೊಳ್ಳದೇ ಪಾರಾಗಲು ಯತ್ನಿಸುವ ಪೊಲೀಸರದು ಅಕ್ಷಮ್ಮ್ಯ ಅಪರಾಧ. (ಅದಕ್ಕಾಗಿ  ಎಲೆಕ್ಟ್ರಾನಿಕ್ ದೂರು ನೀಡುವ ವ್ಯವಸ್ಥೆ ಮಾಡಬೇಕು. ಒಂದು ಸಹಾಯವಾಣಿಯನ್ನು ಮಾಡಿ ಅದಕ್ಕೆ ಕರೆ ಮಾಡಿ ದೂರು ನೀಡಿದ ಕೂಡಲೇ ಅದನ್ನೇ ''ಅಧಿಕೃತ ದೂರು'' ಎಂದು ಪರಿಗಣಿಸಿ  ಪೊಲೀಸರು ವಿಚಾರಣೆ ನಡೆಸಲೆಬೇಕಾದ ಅನಿವಾರ್ಯತೆ ಉಂಟು ಮಾಡಬೆಕು.ಆ ಫೋನ್ ಕರೆಯನ್ನು ದಾಖಲೆಯಾಗಿ ಬಳಸುವಂತಾಗಬೆಕು. )

ಇನ್ನು ಇದೆಲ್ಲವನ್ನು ಬದಿಗಿಟ್ಟು  ಅತ್ಯಾಚಾರಗಳು ಇಷ್ಟು ಯಾಕೆ ಹೆಚ್ಚಾಗಿವೆ ಎಂದು ನೋಡಿದರೆ, ಸಮಾಜದ ''ಏಕಮುಖೀ ಅಭಿವೃದ್ಧಿ'' ಮತ್ತು ''ತಂತ್ರಜ್ಞಾನದ ಮೂಲಕ ಮಾಹಿತಿಯ ಲಭ್ಯತೆ'' ಹೆಚ್ಚಾಗಿದ್ದು ಇದಕ್ಕೆಲ್ಲ ಕಾರಣ ಅಂತ ಅನಿಸದೆ ಇರುವುದಿಲ್ಲ.
ಭಾರತ ಜಾಗತೀಕರಣದ ಪರಿಣಾಮವಾಗಿ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿರುವುದು ನಿಜವೇ ಆದರೂ, ಅದು ದೇಶದ ಕೆಲ ಭಾಗಗಳಲ್ಲಿ ಮಾತ್ರ.  ಕೆಲ ನಗರ ಪ್ರದೇಶಗಳು ಮತ್ತು ಅಲ್ಲಿ ವಾಸಿಸುವ ಕೆಲವೇ ಸಾಮಾಜಿಕ ವರ್ಗಗಳಿಗೆ ಮಾತ್ರವೇ ಒಮ್ಮೆಲೇ ಉತ್ತಮ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮುಂತಾದವುಗಳು ಹೇರಳವಾಗಿ ಹೆಚ್ಚಾಗಿ ಸಾಮಾಜಿಕ-ಆರ್ಥಿಕ ಅಸಮತೋಲನ ಅತಿಯಾಗಿದೆ. ಕೆಲ ವರ್ಗಗಳು ದಿಢೀರ್ ಶ್ರೀಮಂತವಾಗಿವೆ. ಗುರ್ಗಾವ್, ನವದೆಹಲಿ ಲಖನವ್, ಬೆಂಗಳೂರು ಮುಂತಾದ ನಗರಗಳಅಭಿವೃದ್ಧಿಯ ವೇಗ ಬರಾಕ್ ಒಬಾಮಾನಿಗೂ ಕೂಡ ಕಣ್ಣು ಕುಕ್ಕಿಸುವಂತಿವೆ. ಆದರೆ ಅವುಗಳಲ್ಲಿ ವಾಸಿಸುವ ಅನೇಕ ವರ್ಗಗಳ ಜೀವನ ಹಿಂದಿಗಿಂತಲೂ ಬರ್ಬರವಾಗಿ ಹೊಗಿದೆ.  ''ಅಭಿವೃದ್ಧಿ''  ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಎಂಬ ಪಶ್ಚಿಮದ ಚಿಂತನೆ ಭಾರತದ ಮಧ್ಯಮ ವರ್ಗದಲ್ಲಿ ಹೆಚ್ಚಾಯಿತು. ಏಕೆಂದರೆ ಇಂಟರ್ನೆಟ್ಟಿನ ಪ್ರಭಾವದಿಂದಾಗಿ ಪಶ್ಚಿಮದ ಮಾಹಿತಿ ತುಂಬಾ ಸುಲಭವಾಗಿ  ಸಿಗುತ್ತಿದೆ. ''ದೂರದ ಬೆಟ್ಟ ಕಣ್ಣಿಗೆ ನುಣ್ಣ'' ಅನ್ನೋ ಹಾಗೆ  ಆರ್ಥಿಕವಾಗಿ ಸಬಲವಾದ ದೇಶಗಳು ಸುಖವಾದ ದೇಶಗಳು ಎಂಬ ಭ್ರಮೆಗೆ ಬಿದ್ದ ''ಭಾರತದ ಮಧ್ಯಮ ವರ್ಗ '' ಎಲ್ಲ ರೀತಿಯಿಂದಲೂ ಅವರ ಅನುಕರಣೆಗಿಳಿದುಬಿಟ್ಟಿತು. ಅದರ ಪರಿಣಾಮವಾಗಿ ಆರ್ಥಿಕ ಅಭಿವೃದ್ಧಿಯೇ ಜೀವನದ ಅತಿ ಮುಖ್ಯ ಅಂಶವಾಯಿತು. ವರದಕ್ಷಿಣೆ ದಾಹ, ಹೆಣ್ಣು ಭ್ರೂಣ ಹತ್ಯೆ, ಮುಂತಾದ ಅನಿಷ್ಟಗಳು ಈ ಮಧ್ಯಮ ವರ್ಗದ ''ಆರ್ಥಿಕ ಉನ್ನತಿಯ ದಾಹ''ದ  ಕೊಡುಗೆಗಳೇ  ಆಗಿವೆ.  ದೇಶದ ಸಾರ್ವಾಧಿಕಾರಿಯಾದ ಚಕ್ರವರ್ತಿ ರಾಜರುಗಳು ಮೈ ಮೇಲೆ ಕೇವಲ ಲಂಗೋಟಿ ಧರಿಸಿ ಕಾಡಿನಲ್ಲಿ ಜೀವನ ನಡೆಸುತ್ತಿದ್ದ ವ್ಯಕ್ತಿಗಳ ಕಾಲಿಗೆ ಬಿದ್ದು ಅವರಿಂದ ಜೀವನದ ಪಾಠಗಳನ್ನು ಕಲಿಯುತ್ತಿದ್ದ ಈ ಭಾರತ ದೇಶದಲ್ಲಿ ಈಗ ಅತ್ಯಂತ ಶ್ರೀಮಂತರಾದ ಬಿಲ್ ಗೇಟ್ಸ್, ವಾರನ್ ಬಫೆಟ್ ಮುಂತಾದವರನ್ನೇ ಆದರ್ಶಪ್ರಾಯ ವ್ಯಕ್ತಿಗಳಾಗಿ ಪರಿಗಣಿಸಿ  (ಅವರುಗಳು ಕೂಡ ನಿಜವಾದ ಸುಖಕ್ಕಾಗಿ ಸರಳ ಜೀವನ, ತ್ಯಾಗ ಮತ್ತು ಆಧ್ಯಾತ್ಮಗಳ ದಾರಿಯಲ್ಲೇ ಹೊರಟಿದ್ದಾರೆ  ಎಂಬುದನ್ನು ಕಡೆಗಣಿಸಿ) ಕೇವಲ ಅವರ ಆರ್ಥಿಕ ಸಂಪತ್ತನ್ನು ನೋಡಿ ನಾವು ಮರುಳಾಗಿದ್ದೆವೆ.

ನಂಬರ್ 1  ಆಗುವುದು ಹೇಗೆ, ಯು ಕ್ಯಾನ್ ವಿನ್, ಐ ಲವ್ ಮನಿ  ನಂತಹ ವಿದೇಶಿ ಆಮದು ಚಿಂತನೆಗಳನ್ನು ಬೋಧಿಸುವ ಮ್ಯಾನೇಜಮೆಂಟ್  ಮತ್ತು ಆರ್ಥಿಕ ಪುಸ್ತಕಗಳನ್ನು ಮುಗಿಬಿದ್ದು ಓದುತ್ತೆವೆ. ಕೇವಲ ನಾನು ಶ್ರೀಮಂತನಾಗಬೇಕು, ನಾನು ಯಶಸ್ವಿಯಾಗಬೇಕು, ನಾನು ಚೆನ್ನಾಗಿರಬೇಕು ಅಥವಾ ನಮ್ಮವರು ಸುಖವಾಗಿ ಇದ್ದರೆ ಸಾಕು ಎಂಬ ಮನೋಭಾವ ಹೆಚ್ಚುತ್ತಿದೆ. ಶಿಕ್ಷಣದಲ್ಲಿನ ಅತಿಯಾದ ಸ್ಪರ್ಧೆ ಕೇವಲ ದೊಡ್ಡ ಸಂಬಳದ ಕೆಲಸ ಹಿಡಿಯಲು ಉಂಟಾಗಿದೆ. ಮತ್ತು ದೊಡ್ಡ ಸಂಬಳ ನೀಡುವ ಕೆಲಸವನ್ನು ಮಾತ್ರ ಉಚ್ಚ-ಶಿಕ್ಷಣ ಎಂದು ಕರೆಯುತ್ತಿದ್ದೆವೆ. ಅದು ಕೆಲವರಿಗೆ ಮಾತ್ರ  ಎಟಕುತ್ತಿದೆ. ಅದು ಏಟುಕದಿರುವ ವರ್ಗದ ಜನರುಗಳು ತಾವು ಅನ್ಯಾಯಕ್ಕೊಳಗಾಗಿದ್ದೇವೆ ಎಂಬ ಅಸಹನೆಯಲ್ಲಿದ್ದಾರೆ. ಈ ಅಸಹನೆ ಕೋಪದ ರೂಪದಲ್ಲಿ ಪ್ರಕಟವಾಗುತ್ತದೆ. ಮೊದಲು ಭಾರತ ಶ್ರೀಮಂತ ರಾಷ್ಟ್ರವಾಗಿರಲಿಲ್ಲ. ಭಾರತ ಸುಖಜೀವನ ನಡೆಸುವ ಸಂತೃಪ್ತ ಮನೋಭಾವದ ಜನರ ದೆಶವಾಗಿತ್ತು. ಈ ತಂತ್ರಜ್ಞಾನ ''ಆರ್ಥಿಕ ಅಭಿವೃದ್ಧಿ'' ಎಂಬ ಸ್ಟ್ರಾಂಗ್ ಮೆಡಿಸಿನ್ ನೀಡಿದೆ.  ಈಗ ಆ ದೇಶದ ಚಿಂತನೆ ಬದಲಾಗುತ್ತಿದೆ. ಜೀವನದ ಗುರಿಗಳು, ಸುಖದ ಪರಿಕಲ್ಪನೆಗಳು ಬದಲಾಗಿವೆ. ಅದರ ಜೊತೆಯೇ  ಆ ಸ್ಟ್ರಾಂಗ್ ಮೆಡಿಸಿನ್ ನಿಂದ ಉಂಟಾಗುವ ''ಸೈಡ್ ಎಫೆಕ್ಟ್'' ಗಳು ಒಂದೊಂದಾಗಿ ಕಂಡು ಬರುತ್ತಿವೆ.. ಕಳೆದ ಎರಡು ದಶಕಗಳಿಂದ ಈ ಆರ್ಥಿಕತೆಯ ಹಿಂದೆ ಬಿದ್ದು ಭಾರತದ ಮಧ್ಯಮ ವರ್ಗ ಮಾಡಿದ ತಪ್ಪುಗಳಿಗೆ ಇಂದಿನ ಮಕ್ಕಳು ಮತ್ತು ಯುವಕ ಯುವತಿಯರು ದಂಡ ಕಟ್ಟುತ್ತಿದ್ದಾರೆ. ಅದು ಇನ್ನು ಮುಂದಿನ ಜೆನರೆಶನ್ ಗಳಲ್ಲಿ ಹೆಚ್ಚಾಗಲಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಸಮತೋಲನ, ಮತ್ತು ಲಿಂಗಾನುಪಾತದಲ್ಲಿನ ವ್ಯತ್ಯಾಸಗಳು ಮಾನಸಿಕ ವಿಕೃತಿ, ಕಳ್ಳತನ, ಮೋಸ, ದೌರ್ಜನ್ಯ ಮುಂತಾದವುಗಳ ಹೆಚ್ಚುವಿಕೆಗೆ ಕಾರಣವಾಗುತ್ತಿವೆ.  ಮುಖ್ಯಮಂತ್ರಿ ಮತ್ತು ಪೋಲೀಸ್ ಅಧಿಕಾರಿಗಳು ರಾಜೀನಾಮೆ ಕೊಟ್ಟುಬಿಟ್ಟರೆ ಇವೆಲ್ಲ ಒಮ್ಮೆಗೆ ಸರಿಹೊಗುವುದಿಲ್ಲ. ರೇಪ್ ಮಾಡಿದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಕೂಡಲೇ ರೇಪ್ ಗಳು ನಿಲ್ಲುವುದಿಲ್ಲ.

ಇನ್ನು ಮತ್ತೆ ಆ ದೆಹಲಿಯ ಬಾಲಕಿಯ ರೇಪ್ ವಿಷಯಕ್ಕೆ ಬರುವುದಾದರೆ ಭಾರತ ದೇಶಕ್ಕೆ ರೇಪ್ ಪ್ರಕರಣಗಳು, ಶಿಶುಕಾಮ, ಲೈಂಗಿಕ ವಿಕೃತಿ ಇದ್ಯಾವುದೂ ಹೊಸತಲ್ಲ. ಆದರೆ ಅವುಗಳು ನಿಮಿಷಾರ್ಧಗಳಲ್ಲಿ  ಟಿವಿಗಳ ಮೂಲಕ ಇಂಟರ್ನೆಟ್ ಮೂಲಕ ರಸವತ್ತಾಗಿ(ಭೀಭತ್ಸ ರಸವೆ ಹೆಚ್ಚು).ವರದಿಯಾಗುವುದರಿಂದ ಅವುಗಳ ಬಗೆಗಿನ ಭಯ ಹೆಚ್ಚಾಗುತ್ತಿದೆ. ಮತ್ತು  ಅಂತ ಘಟನೆಗಳ ವಿರೋಧಿಸುವ ಪ್ರತಿಭಟನೆ ಕೂಡ ಅಷ್ಟೇ ವೇಗವಾಗಿ ನಮಗೆ ತಿಳಿಯುತ್ತಿದೆ.  ಮೊದಲಾದರೆ ಇಂತಹ ಘಟನೆ  ಎರಡು ಮೂರು ದಿನಗಳ ನಂತರ ರೋಚಕತೆಯನ್ನು ಕಳೆದುಕೊಂಡು ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟ ವಾಗುತ್ತಿತು. ಈಗ ಮಾಹಿತಿಯ ಲಭ್ಯತೆಯ ವೇಗ  ಮತ್ತು ವರದಿ ಮಾಡುವ ರೀತಿ ನಮ್ಮಲ್ಲಿ ಭಯವನ್ನು ಹೆಚ್ಚಿಸುತ್ತಿವೆ. ಅಷ್ಟೇ ...






 

Wednesday, July 18, 2012

ಸ್ತ್ರೀಯರು ದುರ್ಗಾ ಸಪ್ತಶತಿ ಪಾರಾಯಣ ಮಾಡಬಹುದೇ?

This question is asked by sri.. shanakr hegade.. a famous astrologer - from Bangalore
This was my  answer to him ( I hope it will be helpful for many. that's why posting here)
ಶಂಕರ್ ಹೆಗಡೆಯವರೇ.. ಇಲ್ಲಿ ಬಹಳ ಗಂಭೀರ ಸಮಸ್ಯೆಯೇ ಆಗಿರುವ ವಿಷಯವನ್ನು ಒಂದೇ ಸಾಲಿನ ಪ್ರಶ್ನೆಯ ಮೂಲಕ ಎತ್ತಿದ್ದೀರಿ. ನನಗೆ ತಿಳಿದಂತೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಅನೇಕರು ಇಂತಹ ವಿಷಯ ಬಂದಕೂಡಲೇ ವೇದಕಾಲೀನ ಸ್ತ್ರೀಯರು ಕೆಲವರು ಮಂತ್ರಗಳನ್ನು ದರ್ಶನ ಮಾಡಿದ್ದನ್ನು ಉದಾಹರಿಸುತ್ತಾರೆ. ಸ್ತ್ರೀಯರಿಗೆ ಉಪನಯನ ನಡೆಯುತ್ತಿದ್ದ ಉದಾಹರಣೆಗಳನ್ನೂ ನೀಡುತ್ತಾರೆ. ಆದರೆ ಎಲ್ಲ ಸ್ತ್ರೀಯರಿಗೂ ಉಪನಯನ ನಡೆಯುತ್ತಿತ್ತೆ? ಯಾವ ಕಾಲಮಾನದಲ್ಲಿ ನಡೆಯುತ್ತಿತ್ತು? ಮತ್ತು ಕನ್ಯಾ ಉಪನಯನ ಯಾವಾಗ ನಿಂತು ಹೋಯಿತು..? ಯಾಕೆ ನಿಂತು ಹೋಯಿತು ಎಂಬುದರ ಬಗ್ಗೆ ಯಾರೂ ವಿವರಣೆ ಕೊಡುವುದಿಲ್ಲ. ಯುಗಧರ್ಮ ಎಂಬುದು ಒಂದು ಇದೆ, ಇವರು ಸ್ತ್ರೀಯರಿಗೆ ಉಪನಯನ ವೇದಾಧ್ಯಯನ ಎಲ್ಲ ಇತ್ತು ಎಂದು ಹೇಳುವ ಕಾಲದಲ್ಲಿ...ಅಂದರೆ ಕೃತ ಮತ್ತು ತ್ರೇತಾ ಯುಗಗಳಲ್ಲಿ ದೇವರೆಣ ಸುತೊತ್ಪತ್ತಿ - ಅಂದರೆ ಪತಿಯಿಂದ ಮಕ್ಕಳಾಗದೇ ಹೋದಲ್ಲಿ ಮೈದುನನ ಜೊತೆ ಮಿಥುನ ನಡೆಸಿ ಗಂಡು ಸಂತಾನ ಪಡೆದರೆ ಅದನ್ನು ಧರ್ಮ ಎಂದು ಒಪ್ಪುವ ಕಾಲ ಅದಾಗಿತ್ತು. ಮತ್ತು ಬ್ರಾಹ್ಮಣರು ನೇರವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಕಾಲಕ್ರಮೇಣ ಇವುಗಳೆಲ್ಲ ಅಧರ್ಮ ಎಂದು ಪರಿಗಣಿಸಲಾಯಿತು. ಜ್ಞಾನ ಬೆಳೆದಂತೆ ನಾಗರೀಕತೆ ಬೆಳೆಯಿತು. ಅದರ ಅಂಗವಾಗಿ ಕಲಿಯುಗಧರ್ಮದಲ್ಲಿ ಸ್ತ್ರೀಯರಿಗೆ ಮಂತ್ರೋಪಾಸನೆ ಬೇಡ. ಅದರಿಂದ ಕೆಡಕು ಹೆಚ್ಚು ಎಂದು ತೀರ್ಮಾನಿಸಲಾಯಿತು. ಮಾಂಸಾಹಾರವನ್ನು ಹೇಯವಾಗಿ ತಿಳಿಯಲಾಯಿತು. ಆದರೆ ಹಳೆಯದನ್ನು ಪೂರ್ತಿ ಬಿಡುವಂತೆಯೂ ಇರಲಿಲ್ಲ. ಹಾಗಾಗಿ ಮಾಂಸದ ಬದಲಿಗೆ ಉದ್ದಿನ ಒಡೆಯನ್ನು ಶ್ರಾದ್ಧಾದಿ ವೈದಿಕ ಕ್ರಿಯೆಗಳಲ್ಲಿ ಕಾಣುತ್ತೇವೆ. ಇನ್ನು ದುರ್ಗಾ ಸಪ್ತಶತಿಯ ವಿಷಯಕ್ಕೆ ಬರುವುದಾದರೆ ಅದು ಮಾರ್ಕಂಡೇಯ ಪುರಾಣದಲ್ಲಿ ಬರುವ ಏಳು ನೂರು ಶ್ಲೋಕಗಳ ಒಂದು ಕಥಾ ಭಾಗ ಭಾಗ ಅಷ್ಟೇ.ಅದನ್ನು ಕಥೆಯ ರೂಪದಲ್ಲಿ ಯಾರು ಬೇಕಾದರೂ ಓದಬಹುದು. ಅದು ಕನ್ನಡದಲ್ಲಿಯೂ ಸಿಗುತ್ತದೆ  ಆದರೆ ಆ ಏಳು ನೂರು ಶ್ಲೋಕಗಳಿಗೆ ಮೂರು ಬೀಜಾಕ್ಷರ ಸೇರಿದಂತೆ ಒಂಭತ್ತು ಅಕ್ಷರಗಳುಳ್ಳ ಒಂದು ಮೂಲ ಮಂತ್ರವನ್ನು ಉಪದೇಶ ಪಡೆದು. ಕವಚ ಅರ್ಗಳ ಕೀಲಕ...ರಹಸ್ಯತ್ರಯ ಸೇರಿಸಿ... ನ್ಯಾಸಗಳನ್ನು ಮಾಡಿ.....ವಿಧಿಪೂರ್ವಕವಾಗಿ ಪಾರಾಯಾಣ ಮಾಡುವ ವಿಧಾನ ..ದಾಮರೀ ತಂತ್ರ ಮತ್ತು..ಕಾತ್ಯಾಯನಿ ತಂತ್ರ ಎಂಬ ಎರಡು ಗ್ರಂಥಗಳಲ್ಲಿ ಹೇಳಲಾಗಿದೆ. ಇಲ್ಲಿ ನೀವು ಕೇಳಿದ್ದು ಸ್ತ್ರೀಯರು ''ಪಾರಾಯಣ'' ಮಾಡಬಹುದೇ ಎಂದು.. ಪಾರಾಯಣಕ್ಕೂ ಮತ್ತು ಓದುವುದಕ್ಕೋ ವ್ಯತ್ಯಾಸವಿದೆ. ಮಂತ್ರದ ಉಪದೇಶ ಪಡೆಯಲು ಇರುವ ವಿಧಾನಗಳನ್ನು ಅನುಸರಿಸಿ ಉಪದೇಶ ಪಡೆದು, ನಿರ್ದಿಷ್ಟ ಗ್ರಂಥಗಳ ಅನುಸಾರ ನಿರ್ದಿಷ್ಟ ಫಲಕ್ಕಾಗಿ ನಡೆಸುವ ಜಪವಿಧಾನವೆ ಪಾರಾಯಣ. ಮತ್ತು ವೈದಿಕ ಅದ್ಯಯನಕ್ಕೆ ಉಪನಯನಾದಿಗಳ ಅವಶ್ಯಕತೆ ಇದೆ. ಸಪ್ತಶತಿ ಪುರಾಣದಲ್ಲಿದೆ. ಪೌರಾಣಿಕ ಉಪಾಸನೆಗಳು ಸ್ತ್ರೀಯರಿಗೆ ವಿಶೇಷವಾಗಿ ಇವೆ ಅಲ್ಲವೇ..ಎಂಬ ಸಂಶಯ ಬರುತ್ತದೆ. ಆದರೆ.. ಆ ಕಥಾ ಭಾಗ ಪುರಾಣದಲ್ಲಿರುವುದು ನಿಜ. ಆದರೂ ಕೂಡ... ಆ ಕಥೆಯ ಭಾಗವನ್ನು ಎತ್ತಿಕೊಂಡು ಅದನ್ನು ಹೇಗೆ ಉಪಾಸನೆ ಮಾಡಿದರೆ ಯಾವ ಫಲ... ಎಂದು ತಂತ್ರ ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗಾಗಿ ಇದು ತಾಂತ್ರಿಕ ಉಪಾಸನೆ. ತಾಂತ್ರಿಕ ಉಪಾಸನೆ ಸ್ತ್ರೀಯರಿಗೆ ನಿಷಿದ್ಧ. ತಾಂತ್ರಿಕದಲ್ಲಿ ಸಾತ್ವಿಕ ತಂತ್ರಗಳ ಜೊತೆ... ಕ್ಷುದ್ರ ತಂತ್ರಗಳನ್ನೂ ಹೇಳಲಾಗಿದೆ. ತಾಂತ್ರಿಕ ಬೀಜಾಕ್ಷರ ಸೇರಿದ ಮಂತ್ರಗಳ ಜಪವನ್ನೂ ಮತ್ತು ನ್ಯಾಸವಿಧಾನ.. ಭೂತ ಶುದ್ಧಿ... ಅಂತರ್ಮಾತ್ರುಕಾ ನ್ಯಾಸ..ಬಹಿರ್ಮಾತ್ರುಕಾ ನ್ಯಾಸ...ಮುಂತಾಗಿ ಹೇಳಿದೆ. ಈ ದುರ್ಗಾ ಸಪ್ತಶತಿ ಪಾರಾಯಣದ ಬಗ್ಗೆ ಅದರ ರಹಸ್ಯಗಳ ಮತ್ತು ವಿಧಾನಗಳ ಬಗ್ಗೆ. ಒಂದು ಸಾವಿರ ಪುಟಗಳ ಬೃಹತ್ ಗ್ರಂಥ ಇದೆ. ಮುಂಬಯಿಯ ಐತಿಹಾಸಿಕ ಮತ್ತು ಪ್ರಸಿದ್ಧ ವೆಂಕಟೇಶ್ವರ ಪ್ರೆಸ್ ೧೯೨೬ ರಲ್ಲಿ ಅದನ್ನು ಪ್ರಕಟಿಸಿದೆ.

ಇಂತಹ.. ಸಾತ್ವಿಕ ಮತ್ತು ತಾಮಸಿಕ ಎರಡೂ ರೀತಿಯ ತಾಂತ್ರಿಕ ವಿಧಾನಗ ಹೊಂದಿರುವ ಸಪ್ತಶತಿಯ ಪಾರಾಯನವನ್ನು ಮೂಲ ಮಂತ್ರದ ಉಪದೇಶ ಪಡೆದು... ಒಂಭತ್ತು ಲಕ್ಷ ಜಪ ಮಾಡಿ... ಆಮೇಲೆ ನ್ಯಾಸ ಸಹಿತವಾಗಿ ಪಾರಾಯಣ ಮಾಡುವ ಶ್ರದ್ದೆ ಮತ್ತು ಅದರಿಂದಾಗುವ ಎಲ್ಲ ರೀತಿಯ ಪರಿಣಾಮಗಳನ್ನು ಎದುರಿಸುವ ಧೈರ್ಯ...ಯಾವುದಾದರೂ ಹೆಂಗಸಿಗೆ ಇದ್ದರೆ... ಅವರನ್ನು ತಡೆಯಬೇಡಿ.. ಮಾಡಲು ಹೇಳಿ... ಧೈರ್ಯ ಮತ್ತು ಶ್ರದ್ದೆ ಎರಡೂ ಇಲ್ಲದೇ... ನಾನ್ಯಾಕೆ ಮಾಡಬಾರದು..? ಎಂಬ ಹುಂಬತನ ಅವರಲ್ಲಿದ್ದರೆ ಅಂಥವರು ಮಾಡದೇ ಇರುವುದು ಉತ್ತಮ ಎಂಬುದು ನನ್ನ ಭಾವನೆ. ತಾಂತ್ರಿಕ ಸಿದ್ಧಿಗಾಗಿ ಹಂಬಲಿಸಿ...ಮಂತ್ರೋಪಾಸನೆಗೆ ಇಳಿದು ಜೀವನವನ್ನು ನರಕ ಮಾಡಿಕೊಂಡ ಅನೇಕ ಸ್ತ್ರೀಯರನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ.
ಕಥೆ ಓದಲು ಅಡ್ಡಿ ಇಲ್ಲ. ಪಾರಾಯಣ ಬೇಡ ಅಷ್ಟೇ.

Wednesday, July 11, 2012

ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್



ಇತ್ತೇಚೆಗೆ ಫೆಸ್ ಬುಕ್ ನ ವೇದಿಕೆಯೊಂದರಲ್ಲಿ ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಯಾರೋ ನನ್ನನ್ನು ಅಲ್ಲಿ ಎಳೆದುಕೊಂಡು ಹೋಗಿ ಸೇರಿಸಿದರು. ನನಗೆ ಅಂತಹ ಚರ್ಚೆಗಳು ಅನಾವಶ್ಯಕ ಅನಿಸಿದ್ದರಿಂದ ನಿರಾಸಕ್ತನಾಗಿದ್ದೆ. ಆದರೆ ಅಲ್ಲಿ ನಡೆಯುವ ಕೆಲ ಅಸಂಬದ್ಧ ವಿಷಯ ಮಂಡನೆಯನ್ನು ನೋಡಿ ಸಹಿಸಲಾಗದೇ ನಾನೂ ಚರ್ಚೆಯಲ್ಲಿ ಧುಮುಕಿದೆ. ಅನೇಕ ವಿಷಯಗಳ ಚರ್ಚೆಯಾದ ನಂತರ ಮತ್ತು ಇತ್ತೀಚಿನ ಕೆಲ ವಿದ್ವಾಂಸರ ಜನಪ್ರಿಯ ಪ್ರವಚನ ಮತ್ತು ಪುಸ್ತಕಗಳನ್ನು ಓದಿದಾಗ, ಹಾಗೂ ಬೆಂಗಳೂರಿನಂಥ ನಗರದ  ಮಧ್ಯಮ  ಮತ್ತು ಮೇಲ್ಮಧ್ಯಮ ವರ್ಗಗಳ ಜನರ ಜೊತೆ ಕೆಲ ದಿನಗಳಿಂದ ಒಡನಾಡಿದ ನಂತರ  ಗಮನಕ್ಕೆ ಬಂದ ವಿಷಯ ಏನೆಂದರೆ,  ಭಾರತದ ಬಹುತೇಕ ಅಕ್ಷರಸ್ಥರು ವಿಚಾರವಂತರು ನಮ್ಮ ಭಾರತೀಯ ಧಾರ್ಮಿಕ ಆಚರಣೆಗಳ ಹಿಂದಿನ ಮರ್ಮಗಳನ್ನು ಅಥವಾ  ಉದ್ದೇಶಗಳನ್ನು ತಿಳಿಯುವಲ್ಲಿ ಆಸಕ್ತರಾಗಿದ್ದಾರೆ. ನಗರಗಳಲ್ಲಿ ಅಂಥವರ ಸಂಖ್ಯೆ ತುಂಬಾ ಬೆಳೆಯುತ್ತಿದೆ. ಆದರೆ ಅಂಥವರಿಗೆ ಅವರಿಗೆ ಬೇಕಾದ ವಿಷಯಗಳನ್ನು ತಿಳಿಯುವ ಸರಿಯಾದ ''ದಾರಿ'' ಗೊತ್ತಿಲ್ಲದ ಕಾರಣ ದೇವಸ್ಥಾನಗಳ ಅರ್ಚಕರು ಹಾಗೂ ಟಿವಿ ಗಳಲ್ಲಿ ಬರುವ ಏನೂ ಓದಿಕೊಳ್ಳದ ನಿರ್ಲಜ್ಜ ಜ್ಯೋತಿಷಿಗಳನ್ನು ಆಶ್ರಯಿಸುತ್ತಿದ್ದಾರೆ.  ಇಂತಹ ಜನ ಸಮೂಹದ ದೃಷ್ಟಿಯಲ್ಲಿ ಟಿವಿಗಳಲ್ಲಿ ಅಲ್ಪ-ಸ್ವಲ್ಪ ಚೆನ್ನಾಗಿ ಮಾತಾಡುವವರು ಕೂಡ ಮಹಾತ್ಮರಾಗಿ ಕಾಣುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗೆ  ವಿಪರೀತ TRP ಬರುತ್ತಿದೆ ಮತ್ತು ಎಲ್ಲ ಚಾನೆಲ್ ಗಳು ಬೆಳಗಿನ ಹೊತ್ತು ಇಂತಹ  ಕಾರ್ಯಕ್ರಮಗಳಿಗೆ ಮೀಸಲಾಗುತ್ತಿವೆ.  ಇತ್ತೀಚಿನ ಶ್ರೀಮಂತ ಆಂಗ್ಲ ಶಾಲೆಗಳಲ್ಲಿ ಕೂಡ ಹಬ್ಬಗಳು ಯಾಕೆ ಮಾಡಬೇಕು ? ಮುಂತಾದ ವಿಷಯಗಳನ್ನು ಹಬ್ಬಗಳ ಮುನ್ನಾ ದಿನಗಳಲ್ಲಿ ಮಕ್ಕಳಿಗೆ ಹೇಳಿ  ಕಳಿಸುತ್ತಿರುವುದು ಆಶ್ಚರ್ಯದ ವಿಚಾರ. ಇತ್ತೀಚೆಗೆ ನಾನು ಭೇಟಿಯಾದ ಮಹಿಳೆಯೊಬ್ಬರು ''ಈ ಯುಗಾದಿ ಹಬ್ಬದ ಬಗ್ಗೆ ನನಗಿಂತ ನನ್ನ ಆರು ವರ್ಷದ ಮಗುವಿಗೆ ಚೆನ್ನಾಗಿ ಗೊತ್ತಿದೆ'' ಎಂದು ಹೇಳಿಕೊಳ್ಳುವಾಗ ಆಕೆಯ ಮುಖದಲ್ಲಿ ಕೀಳರಿಮೆಯ ಜೊತೆಗೆ..''ನನ್ನ ಮಗನನ್ನು ಅಂತಹ ಉತ್ತಮ ಶಾಲೆಯಲ್ಲಿ ಒದಿಸುತ್ತಿದ್ದೇವೆ'' ಎಂಬ ಜಂಬ ಹೆಚ್ಚಾಗಿ ಕಾಣುತ್ತಿತ್ತು. ನಿಮ್ಮ ಮಕ್ಕಳಿಗೆ ಇಂಥದ್ದನ್ನೆಲ್ಲ ಕಲಿಸುತ್ತಿದ್ದೇವೆ ಎಂಬ ಪ್ರಲೋಭನೆಯೊಂದಿಗೆ  ಹೆಚ್ಚಿನ ಡೊನೇಶನ್ ಪೀಕುತ್ತಿದ್ದೇವೆ ಎಂಬ ವಿಷವನ್ನು ಗಮನಕ್ಕೆ ಬಾರದ ಹಾಗೆ ಮಾಡುವ ಶಿಕ್ಷಣ ವ್ಯವಸ್ಥೆಯ ಹೊಸ ವ್ಯಾಪಾರ ತಂತ್ರ ಇದು ಎಂದು ಆಕೆಗೆ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ''ನೀನು ದುಡ್ಡು ಕೊಡು,  ನಾವು ಎಲ್ಲ ನೀಡುತ್ತೇವೆ'' ಎನ್ನುವ ವ್ಯಾಪಾರ ತಂತ್ರ.  ಮತ್ತು ''ನಾವು ದೊಡ್ದು ಕೊಡುತ್ತೇವೆ, ಹಾಗಾಗಿ  ನಮ್ಮ ಜವಾಬ್ದಾರಿ ಎಲ್ಲ ಮುಗಿಯಿತು'' ಎನ್ನುವ ಪೋಷಕರ ಮನಸ್ಥಿತಿ- ಈ ಎರಡೂ ಒಟ್ಟೊಟ್ಟಿಗೆ ಕಂಡು ಬರುತ್ತಿವೆ. ಈ ಸ್ಥಿತಿ ಶಿಕ್ಷಣದಲ್ಲಿ ಮಾತ್ರ ಅಲ್ಲ, ಇಡಿಯಾದ ಮಾರುಕಟ್ಟೆ....ಇದೇ  ದಾರಿಯಲ್ಲಿ ಮುನ್ನುಗ್ಗುತ್ತಿದೆ.  ಭಾರತೀಯ ಧಾರ್ಮಿಕ ಆಚರಣೆಗಳ ವಿಷಯಕ್ಕೆ ಮತ್ತೆ ಬರುವುದಾದರೆ,  ನಗರ ಜೀವನ ಹುಟ್ಟು ಹಾಕುವ ಅನೇಕ ಸಮಸ್ಯೆಗಳ ನಿವಾರಣೆ, ನಾಳಿನ ಬಗೆಗಿನ ಭಯ, ಜ್ಞಾನದ ಕೊರತೆ, ಅತಿ ಆಸೆ  ಮುಂತಾದ ಅನೇಕ ಕಾರಣಗಳಿಗಾಗಿ ಜನ ಜ್ಯೋತಿಷಿಗಳ ಮತ್ತು ದೇವಸ್ಥಾನಗಳ ಮುಂದೆ ತಂಡೋಪ ತಂಡವಾಗಿ ಕಾಣಿಸುತ್ತಿದ್ದಾರೆ. ಮಂತ್ರಗಳ -ಸ್ತೋತ್ರಗಳ ಕಲಿಯುವುವಿಕೆ ಮುಂತಾದವುಗಳು ಹೆಚ್ಚುತ್ತಿವೆ. ಇನ್ನು ಅನೇಕರು ಪೂಜಾ-ಆಚರಣೆಗಳ ಹಿನ್ನೆಲೆಯನ್ನು ತಿಳಿಯುವ   ನಿಟ್ಟಿನಲ್ಲಿ ಅತೀ ಉತ್ಸುಕರಾಗಿದ್ದಾರೆ.  ಈ ಎಲ್ಲ ಆಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆಯೇ ಇಲ್ಲವೇ ? ಎಂದು ತಿಳಿಯುವ ಕುತೂಹಲಿಗಳ ಸಂಖ್ಯೆಯೂ ದೊಡ್ಡದಿದೆ. ಈ ಉದ್ದೇಶದ ಹಿಂದೆ....ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಇಲ್ಲ . ಶ್ರದ್ಧೆ ಮತ್ತು ಆಸಕ್ತಿ ಇದ್ಯಾವುದೂ ಇಲ್ಲ. ಒಂದು ದೊಡ್ಡ ಸಮುದಾಯವೇ ಸಂಪೂರ್ಣವಾಗಿ ಒಂದು ಸನ್ನಿಗೆ ಒಳಗಾಗಿದೆ .. ಅದೇನೆಂದರೆ ಭಾರತೀಯೇತರ ಧರ್ಮಗಳಲ್ಲಿ ಅಥವಾ ಹಿಂದೂಯೇತರ ಧರ್ಮಗಳಲ್ಲಿ ಎಲ್ಲ ಪಾರದರ್ಶಕವಾಗಿದೆ,  ನೆರವಾಗಿದೆ.. ವೈಜ್ಞಾನಿಕವಾಗಿದೆ ಮತ್ತು ಎಲ್ಲ ಸರಿಯಾಗಿದೆ...ಎಂಬ ಭ್ರಮೆಯ ಜೊತೆಗೆ ಭಾರತೀಯ ಆಚರಣೆಗಳು ಕೂಡ ವೈಜ್ಞಾನಿಕ ಎಂದು ಸಾಬೀತು ಪಡಿಸುವ ಹುಕಿಗೆ ಬಿದ್ದು ಅವುಗಳ ಹಿನ್ನೆಲೆಯನ್ನು ತಿಳಿಯುವವರ ಸಂಖ್ಯೆ ಬೆಳೆಯುತ್ತಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವ ಜನರು ಹುಟ್ಟಿಕೊಂಡಿದ್ದಾರೆ.  ಕಳೆದ ಕೆಲ ಶತಮಾನಗಳಲ್ಲಿ ರಾಜನೈತಿಕ ದಾಸ್ಯದ ಪರಿಣಾಮವಾಗಿ....ಬೌದ್ಧಿಕ ಮತ್ತು ವೈಚಾರಿಕವಾಗಿಯೂ ನಮ್ಮ ಮನಸುಗಲ್ಲಿ ದಾಸ್ಯ ಬೇರೂರಿದೆ. ದಾಸ್ಯ ಮನೋಭಾವದ ಪರಿಣಾಮವಾಗಿ ಪಶ್ಚಿಮ ದೇಶಗಳ ಎಲ್ಲವೂ ಸಾಮಾನ್ಯ ಭಾರತೀಯರ ಕಣ್ಣಿಗೆ sophisticated ಆಗಿ ಕಾಣಿಸುತ್ತದೆ. ನಮ್ಮ ಋಷಿಗಳು ಹೇಳಿದ ಮಾತುಗಳು ನಮಗೆ ಕಾಲ ಕಸವಾದರೆ..ಅದೇ ಮಾತುಗಳನ್ನು ಇಂಗ್ಲಿಷ್ ನಲ್ಲಿ ಹೇಳಿದ ಮ್ಯಾಕ್ಸ್ ಮುಲ್ಲರ್  ಮಾತನ್ನು  ನಾವು ಹೆಮ್ಮೆಯಿಂದ ಕೊಟ್ ಮಾಡುತ್ತೇವೆ. ಕನ್ನಡದ ಒಳ್ಳೆ ಪುಸ್ತಕದ ಹೆಸರುಗಳು ಸರಿಯಾಗಿ ತಿಳಿಯದ ನಾವು ಇಂಗ್ಲಿಷ್ ನಲ್ಲಿ ಬರೆದ ತಲೆಹರಟೆ ಪುಸ್ತಕಗಳನ್ನು ದೊಡ್ಡ ಬುದ್ಧಿಜೀವಿಯಂತೆ ಪೋಸ್ ಕೊಟ್ಟುಕೊಂಡು ಓದುತ್ತೇವೆ. ''ನಾನು ಇಂಗ್ಲಿಷ್  ಪುಸ್ತಕ ಓದುತ್ತೇನೆ'' ಎನ್ನುವುದೇ ದೊಡ್ಡ ಹೆಮ್ಮೆ. ಅದರಲ್ಲಿ ಕಸ ತುಂಬಿದೆ ಎಂಬುದು ಅರ್ಥವಾಗುವುದಿಲ್ಲ. ಆದ್ದರಿಂದಲೇ...ಚೇತನ್ ಭಗತ್ ನನ್ನು  ''ನೀವು ಭಾರತೀಯರಗಿದ್ದೂ ಕೂಡ ನೀವು  ಹಿಂದಿಯಲ್ಲಿ ಯಾಕೆ ಬರೆಯುವುದಿಲ್ಲ''?  ಎಂದು ಕೇಳಿದಾಗ ''it's not considered cool to pick up a Hindi book in India '' ಅಂತ ಹೇಳಿದ್ದ... ಅವನಿಗೆ ಮಾರ್ಕೆಟ್ phycology ಚೆನ್ನಾಗಿ ಗೊತ್ತು. ಕಸ ತುಂಬಿ ಕೊಟ್ಟರೂ ನಮ್ಮ ಜನ ಇಂಗ್ಲಿಷ್ ಪುಸ್ತಕ ಓದುತ್ತಾರೆ. ರಸದ ಬಗ್ಗೆ ಅವರಿಗೆ ಗೊತ್ತಿಲ್ಲ.
ಅದೇ ರೀತಿ ನಮ್ಮ ಈ ಧಾರ್ಮಿಕ ಆಚರಣೆಗಳು ಅವೈಜ್ಞಾನಿಕ, ಮತ್ತು ಮೂಢನಂಬಿಕೆಗಳಿಂದ ಕೂಡಿವೆ ಎಂದು ಬಲವಾಗಿ ನಂಬುವ ದಾಸ್ಯ ಮೊನೋಭಾವದ ಸಮೂಹ ಅವುಗಳ ಹಿನ್ನೆಲೆಯನ್ನು, ಮತ್ತು ವೈಜ್ನಾನಿಕತೆಯನ್ನು ತಿಳಿಯುವ ಮೂಲಕ ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರದ್ದೆಗೆ ಬದಲಾಗಿ ಕೀಳರಿಮೆ ಈ ಬೆಳವಣಿಗೆಗೆ ಕಾರಣವಾಗುತ್ತಿರುವುದು ನಾಚಿಕೆ ಪಡುವ ವಿಚಾರ. ''ಧರ್ಮ'' ಮತ್ತು ''ಆಧ್ಯಾತ್ಮ'' ಎಂಬ ಈ ಎರಡು ಶಬ್ದಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ಹಾಗೂ ದುರುಪಯೋಗಕ್ಕೊಳಗಾದ ಶಬ್ದಗಳು. ಅವುಗಳ ನಿಜವಾದ ಅರ್ಥ ಸಾಮಾನ್ಯರಿಗೆ ತಿಳಿಸಬೇಕಾದ,  ಆಧ್ಯಾತ್ಮ ಬೋಧಿಸಬೇಕಾದ ಪುರಾತನ ಗುರುಪೀಠಗಳು ಶುಲ್ಕ ವಿಧಿಸಿ ಪಾದಪೂಜೆ,  ಅಭಿಷೇಕ, ಕುಂಕುಮಾರ್ಚನೆ, ಶ್ರಾದ್ಧ ಮುಂತಾದವುಗಳನ್ನು ಮಾಡಿಸುವ ಸೇವಾ ಕೌಂಟರ್ ಗಳಾಗಿ ಪರಿವರ್ತನೆಗೊಂಡಿವೆ. ರಾಜರ ಆಶ್ರಯದಲ್ಲಿ ಜ್ಞಾನ ಕೇಂದ್ರ ಗಳಾಗಿ  ಕೆಲಸ ಮಾಡುತ್ತಿದ್ದ ದೇವಸ್ಥಾನಗಳು ಈಗಿಲ್ಲ.  ಈಗ ಸರ್ಕಾರಗಳ ಕೈಯಲ್ಲಿರುವ ಹಾಗೂ  ಶ್ರೀಮಂತರು ಮತ್ತು  ಮಾಡಲು ಕೆಲಸವಿಲ್ಲದ ವೃದ್ಧ ಟ್ರಸ್ಟಿಗಳು ಕಟ್ಟಿಸುವ ದೇವಸ್ಥಾನಗಳಲ್ಲಿ ಅಜ್ಞಾನದ  ಪೋಷಣೆ ನಡೆಯುತ್ತಿದೆಯೇ ಹೊರತು ಆಧ್ಯಾತ್ಮದ ಪರಿಚಯವೂ ಸಾಮಾನ್ಯರಿಗಾಗುತ್ತಿಲ್ಲ. ''ಧರ್ಮ'' ಎನ್ನುವ ಶಬ್ದ  ಹಿಂದೂ-ಮುಸ್ಲಿಂ ಜಗಳಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು, ಆಧ್ಯಾತ್ಮ- ಧರ್ಮ ಬೊಧಿಸದೇ ಹೋದರೂ ಕೂಡ ಅವುಗಳ ಮುಸುಕಿನಲ್ಲಿ  ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿಯಂತ್ರಿಸುವ,  ಯೋಗಾಸನ ಹೇಳಿಕೊಡುವ ಹಾಗೂ ಗಿಡಮೂಲಿಕೆ ಔಷಧಿ ಕೊಡುವ ಆಧುನಿಕ ಮಠಗಳು ಅಥವಾ ''ಮಲ್ಟಿ ಸ್ಪೆಷಾಲಿಟಿ ಆಶ್ರಮಗಳು'' ಶ್ರೀಮಂತರ ಜೇಬಿಗೆ ಮಾತ್ರ ನಿಲುಕುವಂಥವುಗಳು. ಈ ವಿಚಿತ್ರ ಸ್ಥಿತಿಯಲ್ಲಿರುವ  ''ಜನಸಾಮಾನ್ಯ'' ಗಲಿಬಿಲಿಗೊಂಡು ಸಿಕ್ಕ ಸಿಕ್ಕವರನ್ನು ''ಗುರೂಜಿ'' ''ಸ್ವಾಮೀಜಿ'' ಎಂದು ಕರೆಯುತ್ತಿದ್ದಾನೆ. ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವುದನ್ನೇ ''ಧಾರ್ಮಿಕತೆ'' ಮತ್ತು, ಹನುಮಾನ್ ಚಾಲೀಸಾ ಪಠಿಸುವುದನ್ನೇ ''ಆಧ್ಯಾತ್ಮಿಕತೆ''  ಎಂದು ತಿಳಿಯುತ್ತಿದ್ದಾನೆ. ಆದರೆ ಪ್ರಪಂಚದ ಎಲ್ಲ ಧರ್ಮಗಳಿಗಿಂತ ಭಾರತೀಯ ಸನಾತನ ಧರ್ಮ ಅತ್ಯಂತ ಪ್ರಾಚೀನವಾದದ್ದು. ಮತ್ತು ಅತೀ ಶ್ರೇಷ್ಠವಾದದ್ದು ಎಂದು ಭಾಷಣ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂಥವರನ್ನು ಪಕ್ಕಕ್ಕೆ ಕರೆದು ''ಸ್ವಾಮೀ, ಧರ್ಮ ಎಂದರೇನು ? ಎಂದು ಕೇಳಿ ನೋಡಿ...'' ನಿಮಗೆ ಸರಿಯಾದ ಉತ್ತರೆ ಸಿಕ್ಕರೆ ಅದು ಈ ದಶಕದ ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ .