Sunday, February 9, 2014

ಗೀತಾಭ್ಯಾಸ

ಭಾರತೀಯ ತತ್ವಜ್ಞಾನದ ಸರ್ವಾಂಗೀಣ ಅಭ್ಯಾಸ ಮಾಡುವವರು ಮೊದಲು ಭಗವದ್ಗೀತೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಗೀತೆ ನಿಜವಾಗಿಯೂ ಏನು ಹೇಳುತ್ತದೆ ಎಂದು ನಿಶ್ಚಿತವಾಗಿ ತಿಳಿದುಕೊಳ್ಳುವುದು ಸುಲಭವಲ್ಲ.  ಕಾರಣ: ಗೀತೆ ಪುರಾತನ ಸಂಸ್ಕೃತದಲ್ಲಿದೆ ಮತ್ತು  ಅದರಲ್ಲಿಯೂ ಛಂದೋಬದ್ಧವಾದ ಪದ್ಯದ ರೂಪದಲ್ಲಿದೆ.  ಎರಡನೆಯ ಕಾರಣ: ಗೀತೆಯನ್ನು ಕುರಿತು ಅನೇಕ ಭಾಷ್ಯಗಳು ಹಾಗೂ ಅವುಗಳ ಅನುವಾದಗಳೂ ಲಭ್ಯವಿವೆ. ಆದರೆ ಬಹುತೇಕ ಭಾಷ್ಯಕಾರರು ಹಾಗೂ ಅನುವಾದಕರು ಗೀತೆಯನ್ನು ಹೇಳುವಾಗ ಕೃಷ್ಣನ ಮನಸ್ಸಿನಲ್ಲಿ ಯಾವ ಭಾವವಿತ್ತೋ ಅದಕ್ಕೆ ಬದಲಾಗಿ ತಮ್ಮ ಮನಸ್ಸಿನಲ್ಲಿ ಯಾವ ಭಾವವಿದೆಯೋ ಅದನ್ನು ಗೀತೆಯ ಶ್ಲೋಕಗಳ ಮೇಲೆ ಹೇರುತ್ತಾರೆ. ಆದ್ದರಿಂದ ಗೀತಾಭ್ಯಾಸಿ ಗೊಂದಲಕ್ಕೀಡಾಗುತ್ತಾನೆ.  ಗೀತೆಗೆ ಅನೇಕ ಭಾಷ್ಯಗಳಿದ್ದಾಗಿಯೂ ಶಂಕರಾಚಾರ್ಯರು  ಬರೆದ ಸಂಸ್ಕೃತ ಭಾಷ್ಯ ಮತ್ತು ಜ್ಞಾನೇಶ್ವರರು ಮರಾಠಿಯಲ್ಲಿ ''ಜ್ಞಾನೇಶ್ವರಿ'' ಎಂಬ ಹೆಸರಿನಲ್ಲಿ ಬರೆದ ವ್ಯಾಖ್ಯೆ ಅತ್ಯಂತ ವ್ಯಾಪಕ ಮತ್ತು ಸಮರ್ಪಕವಾಗಿವೆ ಎಂದು ಬಹುಶೃತ ವಿದ್ವಾಂಸರನೇಕರು ಒಮ್ಮತದಿಂದ ಒಪ್ಪುತ್ತಾರೆ ಹಾಗೂ  ಪ್ರಾಚೀನ ಉಪನಿಷತ್ತುಗಳಲ್ಲಿ ಹೇಳಲಾದ ವಿಷಯಗಳನ್ನೇ ಸಾರವಾಗಿ ಗ್ರಹಿಸಿ ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ ಅನ್ನುವುದನ್ನು ಎಲ್ಲ ಭಾಷ್ಯಕಾರರೂ ಒಪ್ಪುತ್ತಾರೆ.

ವೈಖರೀ ಭಾಷೆಯಲ್ಲಿ ಬಳಕೆಯಾಗುವ ಶಬ್ದಗಳಿಗೆ ತಮ್ಮದೇ ಆದ ಒಂದು ಜೀವನವಿದೆ ಹಾಗೂ ಎಲ್ಲ ಶಬ್ದಗಳಿಗೂ ಅವುಗಳದ್ದೇ ಆದ ಒಂದು ಇತಿಹಾಸವಿರುತ್ತದೆ.  ಶಬ್ದಗಳ ಇತಿಹಾಸದಲ್ಲಿ ಜ್ಞಾನದ ಅಥವಾ ಸಂಕಲ್ಪಗಳ ವಿಕಾಸಕ್ರಮ ಆಕಲನವಾಗುತ್ತದೆ. ವಿಕಾಸಕ್ರಮದಲ್ಲಿ ಶಬ್ದಗಳ ಸಮಗ್ರ ಅರ್ಥ ಸೇರಿಕೊಂಡಿರುತ್ತದೆ ಹಾಗೂ ಶಬ್ದಗಳಿಗೆ ಅನೇಕ ಅರ್ಥಗಳ ಸೂಕ್ಷ್ಮಭಾವವಿದೆ. ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡಾಗ ಮಾತ್ರ ಗೀತೆಯಂತಹ ಗ್ರಂಥ ಸರಿಯಾಗಿ ಅರ್ಥವಾಗುತ್ತದೆ. 

ಮಹಾಭಾರತದ ಭೀಷ್ಮಪರ್ವದಲ್ಲಿನ  25ರಿಂದ 42 ರ ವರೆಗಿನ 18 ಅಧ್ಯಾಯಗಳೇ ಭಗವದ್ಗೀತೆ ಅಂತ ಗುರುತಿಸಲ್ಪಟ್ಟಿವೆ. ಈ ಹದಿನೆಂಟು ಎಂಬ ಸಂಖ್ಯೆ ವಿಶೇಷ ಮಹತ್ವ ಹೊಂದಿದೆ ಹಾಗೂ ಸಂಪೂರ್ಣ ಮಹಾಭಾರತ ಕಾವ್ಯವೂ ಕೂಡ ಹದಿನೆಂಟು ಪರ್ವಗಳಲ್ಲಿ ಹರಡಿಕೊಂಡಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧವು 18 ದಿನಗಳ ಕಾಲ ನಡೆದಿದತ್ತು, ಮತ್ತು ಕೌರವ- ಪಾಂಡವರ ಸೈನ್ಯ ಒಟ್ಟು 18 ಅಕ್ಷೌಹಿಣಿಯದ್ದಾಗಿತ್ತು.  ಮನುಷ್ಯನ ಸೂಕ್ಷ್ಮ ಶರೀರದ ತತ್ವಗಳೂ ಕೂಡ ಹದಿನೆಂಟೇ ಅಗಿವೆ. (ಮನಸ್ಸು, ಬುದ್ಧಿ, ಅಹಂಕಾರ,  5 ಜ್ಞಾನೇಂದ್ರಿಯಗಳು, 5 ಕರ್ಮೇಂದ್ರಿಯಗಳು ಹಾಗೂ 5 ತನ್ಮಾತ್ರೆಗಳು ಒಟ್ಟು ಸೇರಿ 18)

ಗೀತೆಯಲ್ಲಿರುವ ಒಟ್ಟು 700 ಶ್ಲೋಕಗಳಲ್ಲಿ 645 ಶ್ಲೋಕಗಳು ಅನುಷ್ಟುಪ್ ಛಂದಸ್ಸಿನಲ್ಲಿದ್ದು ಉಳಿದ 55 ಶ್ಲೋಕಗಳು ಇಂದ್ರವಜ್ರ, ಉಪೇಂದ್ರವಜ್ರ, ಉಪಜಾತಿ  ಹಾಗೂ ವಿಪರೀತಪೂರ್ವ ಎಂಬ ಛಂದಸ್ಸುಗಳಲ್ಲಿ ಇವೆ. 
ಉಪನಿಷತ್ತುಗಳ ನಂತರದ ಕಾಲದಲ್ಲಿ ಗೀತೆಯ ರಚನೆಯಾದ್ದರಿಂದ ಅದರ ಭಾಷೆಯ ಮೇಲೆ ಉಪನಿಷತ್ತುಗಳ ಛಾಯೆಯಿದೆ. ಉಪನಿಷತ್ತುಗಳ ಕಾಲದ ನಂತರ ಭಾರತೀಯ ಸಮಾಜದಲ್ಲಿ ಗಮನಾರ್ಹ ಬದಲಾವಣೆಗಳಾದವು. ಅದು ಬ್ರಹ್ಮವಿದ್ಯೆ, ಯೋಗಶಾಸ್ತ್ರ, ಸಾಂಖ್ಯಶಾಸ್ತ್ರಗಳ ರಚನೆ, ಹಾಗೂ ಸಗುಣಭಕ್ತಿಯನ್ನು ಪ್ರಾಚುರ್ಯಪಡಿಸಿದ ಭಾಗವತ ಪಂಥದ ಉದಯ ಮುಂತಾದವುಗಳು ಘಟಿಸುತ್ತಿದ್ದ ಸಮಯ ಅದಾಗಿತ್ತು. ಹೀಗಾಗಿ ಗೀತೆಯಲ್ಲಿನ ಭಾಷಾ ಶ್ರೀಮಂತಿಕೆ, ಶಬ್ದಬಳಕೆ ಅನನ್ಯವಾಗಿದೆ. ಗೀತೆಯಲ್ಲಿ ಕೆಲವು ಶಬ್ದಗಳ ಹಾಗೂ ವಾಕ್ಯಗಳ ಪುನರಾವೃತ್ತಿ ಆಗಿದ್ದು ಕಂಡುಬರುತ್ತದೆಯಾದರೂ ಅವು ಓದುಗನಿಗೆ ಬೇಸರ ಉಂಟುಮಾಡುವುದರ ಬದಲಾಗಿ ಆ ಜಾಗದಲ್ಲಿ ಹೇಳಲಾದ ವಿಷಯವನ್ನು ನಿಖರವಾಗಿ ಅರ್ಥ ಮಾಡಿಕೊಳ್ಳವಲ್ಲಿ ಸಹಕಾರಿಯಾಗಿವೆ. ಗೀತೆಯು ವಿಶೇಷಣ, ವಿಶೇಷನಾಮ ಹಾಗೂ ಕ್ರಿಯಾಪದಗಳ ಸಮೃದ್ಧ ಭಂಡಾರವಾಗಿದೆ. ವಿಷಯಗಳನ್ನು ಹೇಳುವ ಸಂದರ್ಭದಲ್ಲಿ ಗೀತೆಯು ಅರ್ಜುನ ಹಾಗೂ ಕೃಷ್ಣರ ಅನೇಕ ಸುಂದರ ಹಾಗೂ ಅರ್ಥಪೂರ್ಣ ಹೆಸರುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುತ್ತದೆ.  ಬ್ರಹ್ಮವಿದ್ಯಾ ಸಂಪನ್ನ ಪುರುಷನ ವರ್ಣನೆ ಮಾಡುವಾಗ, ಜ್ಞಾನದ ಲಕ್ಷಣಗಳನ್ನು ಹೇಳುವಾಗ, ದ್ವಂದ್ವಗಳ ಪ್ರಕಾರಗಳನ್ನು ಹೇಳುವಾಗ ಹಾಗೂ ದೈವೀ -ಅಸುರೀ ಸಂಪತ್ತುಗಳ ವಿವರಣೆ ನೀಡುವಾಗ ಗೀತೆಯು ಅನೇಕ ವಿಶೇಷಣಗಳನ್ನು ಸುಂದರವಾಗಿ ಬಳಸುತ್ತದೆ.

 ''ಮನಸ್ಸಿನ ಶಾಂತಿಯೇ ಜೀವನದ ಪರಮಶ್ರೇಷ್ಠ ಮೌಲ್ಯವಾಗಿದೆ, ಅದು ಜೀವನದಲ್ಲಿ ಸಾಕಾರಗೊಳ್ಳಲಿಕ್ಕೆ ಕರ್ಮವು ಸಹಕಾರಿಯಾಗಿದೆ. ಆದರೆ ಆ ಕರ್ಮವನ್ನು 'ಕರ್ತೃತ್ವಭಾವ' ವನ್ನು ಬಿಟ್ಟು 'ಕರ್ತವ್ಯಭಾವ'ದಿಂದ ಭಗವಂತನಿಗಾಗಿ ಹಾಗೂ ಭಗವತ್ ಸ್ಮರಣೆಯಲ್ಲಿಯೇ ಮಾಡಬೇಕು''  ಎಂಬ ಮಾತನ್ನು ಗೀತೆ ಪುನಃ ಪುನಃ ಹೇಳುತ್ತದೆ. 

 ಗೀತೆಯು ಆತ್ಮಸತ್ತಾವಾದವನ್ನು ಅಂದರೆ ಸೃಷ್ಟಿಯ ಎಲ್ಲ ಚರ-ಅಚರ ವಸ್ತುಗಳ ಒಳ-ಹೊರಗನ್ನು ವ್ಯಾಪಿಸಿರುವ ಆತ್ಮಸ್ವರೂಪವನ್ನು ಹೇಳುತ್ತದೆಯಾದರೂ ಅದನ್ನು ಹೇಳುವ ಕ್ರಮದಲ್ಲಿ ಒಂದು ಸಾಧನೆಯ ದೃಷ್ಟಿ ಇದೆ.  ಗೀತೆ ಕೇವಲ ತಾತ್ವಿಕ ವಿಚಾರ-ವಿಮರ್ಶೆಗೆ ಆಹಾರ ಒದಗಿಸುವ ಶುಷ್ಕ ತತ್ವವಾದದ ಗ್ರಂಥವಲ್ಲ.  ಉನ್ಮನೀ ಅವಸ್ಥೆ (ಉತ್ + ಮನ =ಉನ್ಮನ.  ಉತ್ - ಅಂದರೆ ಮೇಲೆ.  ಮನಸ್ಸಿನ ಎತ್ತರಿಸಿದ ಅಥವಾ ಮೇಲಕ್ಕೆತ್ತಲ್ಪಟ್ಟ ಸ್ಥಿತಿ) ಅಥವಾ ''ಬ್ರಾಹ್ಮೀ'' ಅವಸ್ಥೆಯ ಪ್ರತ್ಯಕ್ಷ ಅನುಭವ ಪಡೆಯಲಿಕ್ಕೆ ಜೀವನದಲ್ಲಿ ಎಂತಹ ಮಾರ್ಗವನ್ನು ಅನುಸರಿಸಬೇಕು ಎಂದು ಸ್ಪಷ್ಟವಾಗಿ ಗೀತೆ ಹೇಳುತ್ತದೆ. ನಮ್ಮ ಈ ''ಜಡ'' ದೇಹಕ್ಕೂ ಹಾಗೂ ಅದರಲ್ಲಿ ಸೇರಿಕೊಂಡಿರುವ ''ಚಿತ್'' ಅಥವಾ ''ಚೈತನ್ಯ''ಕ್ಕೂ ಇರುವ ಗಂಟನ್ನು (ಚಿಜ್ಜಡ ಗ್ರಂಥಿಯನ್ನು) ಬಿಚ್ಚುವ ನಿಟ್ಟಿನಲ್ಲಿ  ಅನೇಕ ವೈಜ್ಞಾನಿಕ ಸಾಧನಾಕ್ರಮಗಳ ವಿವರವನ್ನು  ಸಮಗ್ರವಾಗಿ ಹೇಳಲಾಗಿದೆ. ಈ ''ಚಿತ್'' ಹಾಗೂ ''ಜಡ''ಗಳ ಪರಸ್ಪರ ತಾದಾತ್ಮ್ಯವನ್ನು ಅಥವಾ ಬೆಸುಗೆಯನ್ನು ಬಿಡಿಸುವ ವಿಜ್ಞಾನವೇ ಆಧ್ಯಾತ್ಮಶಾಸ್ತ್ರವಾಗಿದೆ. ಅದೇ ''ಭಾರತೀಯ ವಿಜ್ಞಾನ''ದ ಸರ್ವೋಚ್ಚ ಸಂಶೋಧನೆಯಾಗಿದೆ.

No comments:

Post a Comment