Monday, February 10, 2014

ಗೀತೆಯಲ್ಲಿ ಯೋಗ (ಗೀತಾಭ್ಯಾಸ 2)

''ಯೋಗಶ್ಚಿತ್ತವೃತ್ತಿರ್ನಿರೋಧಃ'' ಎಂಬ ಈ ಯೋಗಸೂತ್ರದಲ್ಲಿ ಪತಂಜಲಿಯು (ಸಾತ್ವಿಕ, ರಾಜಸಿಕ, ತಾಮಸಿಕ) ಮೂರು ಗುಣಗಳ ಪ್ರಭಾವದಿಂದ ಕೆಲಸ ಮಾಡುವ ''ಚಿತ್ತ''ದ ಸಹಜಚಂಚಲ ವೃತ್ತಿಯ ನಿರೋಧಿಸುವಿಕೆಯೇ ''ಯೋಗ'' ೆಎಂದು ಹೇಳಿದ್ದಾನೆ.  ಚಿತ್ತವೃತ್ತಿಯ ನಿರೋಧ ಅಂದರೆ ಉದ್ದೇಶಿತ ಗುರಿಯೆಡೆಗಿನ ಅದರ ಕೇಂದ್ರೀಕರಣವೇ ಅಥವಾ ಜೋಡಿಸುವಿಕೆಯೇ ಆಗಿದೆ.  ಹೀಗಾಗಿ ''ಯೋಗ'' ಎಂಬ ಶಬ್ದಕ್ಕೆ ಜೋಡಿಸುವಿಕೆ ಅಥವಾ ಸೇರುವಿಕೆ ಎಂಬ ಅರ್ಥ ಬರುತ್ತದೆ. 

ಹೀಗೆ ಪರಮಾತ್ಮತತ್ವದಲ್ಲಿ ಚಿತ್ತದ ವೃತ್ತಿಯ ಲೀನಗೊಳಿಸುವಿಕೆ ಅಥವಾ ಸೇರಿಸುವಿಕೆಯಾದ ''ಯೋಗ''ವನ್ನು  ಸಾಧಿಸಲಿಕ್ಕೆ ಪತಂಜಲಿಯು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಎಂಬ  ಎಂಟು ಮೆಟ್ಟಿಲುಗಳ ಸಾಧನಾವಿಧಾನಗಳನ್ನು ಕ್ರಮವಾಗಿ ಹೇಳಿದ್ದಾನೆ. ಆ ಕ್ರಮವೇ ಅಷ್ಟಾಂಗಯೋಗ, ರಾಜಯೋಗ ಅಥವಾ ಪತಂಜಲಿಯೋಗ ಎಂದು ಪ್ರಖ್ಯಾತವಾಗಿದೆ.

ಪತಂಜಲಿಯ ಯೋಗಸೂತ್ರಗಳಲ್ಲದೇ ಭಗವದ್ಗೀತೆಯೂ ಕೂಡ ಯೋಗಶಾಸ್ತ್ರದ ವ್ಯಾಪ್ತಿಗೆ ಒಳಪಡುತ್ತದೆ.  ಭಗವದ್ಗೀತೆಯು ''ಪ್ರಸ್ಥಾನತ್ರಯ'' ಎಂಬ ವೇದಾಂತಶಾಸ್ತ್ರದ ಮೂರು ಮೆಟ್ಟಿಲುಗಳಲ್ಲಿ ಮೊದಲನೆಯದ್ದಾಗಿದ್ದರೂ ಅದು ಯೋಗಶಾಸ್ತ್ರವೂ ಕೂಡ ಆಗಿದೆ. ಇದೇ ಕಾರಣಕ್ಕೆ ಸಂಪ್ರದಾಯದಲ್ಲಿ ಗೀತಾ ಪಾರಾಯಣ ಮಾಡುವವರು ಎಲ್ಲ ಅಧ್ಯಾಯಗಳ ಕೊನೆಯಲ್ಲಿ ''ಇತಿ ಶ್ರೀಮದ್ಭಗವದ್ಗೀತಾಸು, ಉಪನಿಷತ್ಸು, ಬ್ರಹ್ಮವಿದ್ಯಾಯಾಂ, ಯೋಗಶಾಸ್ತ್ರೇ, ಶ್ರೀಕೃಷ್ಣಾರ್ಜುನ ಸಂವಾದೆ'' ಎಂದು ಹೇಳಿ ಅಧ್ಯಾಯದ ಸಂಖ್ಯೆಯನ್ನು ಹೇಳಿ ಮುಗಿಸುತ್ತಾರೆ.  ಹೀಗೆ ಭಗವದ್ಗೀತೆಯು ವೇದಾಂತಶಾಸ್ತ್ರ ಮತ್ತು ಯೋಗಶಾಸ್ತ್ರ  ಎರಡೂ ಕಡೆಗಳಲ್ಲಿ ಸಲ್ಲುವ ಅನನ್ಯ ಗ್ರಂಥವಾಗಿದ್ದು ಉಪನಿಷತ್ತುಗಳಿಗೆ ಸಮಾನವಾದ ಸ್ಥಾನವನ್ನು ಪಡೆದಿದೆ. 

ನಿರ್ದ್ವಂದ್ವೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್  # 2-15

ಎನ್ನುವ ಕೃಷ್ಣನ ಮಾತಿನ  ''ಯೋಗಕ್ಷೇಮ''  ಎಂಬ ಪದಬಳಕೆಯಲ್ಲಿ ''ಯೋಗ'' ಕ್ಕೆ ಬೇರೆಯದ್ದೇ ಆದ ಅರ್ಥವಿದೆ. ಇಲ್ಲಿ ಅಪ್ರಾಪ್ತ ವಸ್ತುವಿನ ಹೆಸರು - 'ಯೋಗ' ಮತ್ತು ಪ್ರಾಪ್ತವಾಗಿರುವ ವಸ್ತುವಿನ ರಕ್ಷಣೆಯ ಹೆಸರು 'ಕ್ಷೇಮ'. ಈ ಯೋಗ ಮತ್ತು ಕ್ಷೇಮಗಳೆರಡರ ಬಗೆಗೂ ನಿರಾಸಕ್ತಿಯನ್ನು ಹೊಂದಿ ನಿತ್ಯಸತ್ವಸ್ಥನಾಗಿರಬೇಕೆಂಬುದು  ಇಲ್ಲಿನ  ಕೃಷ್ಣನ ಮಾತಿನ ಆಶಯ.

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ.
ಸಿಧ್ಯಸಿಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ  ಉಚ್ಯತೆ. # 2-48

ಆಸಕ್ತಿಯನ್ನು ತ್ಯಜಿಸಿ ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ ''ಯೋಗ''ದಲ್ಲಿ ನೆಲೆ ನಿಂತು ಕರ್ತವ್ಯ-ಕರ್ಮಗಳನ್ನು ಮಾಡು. ಕರ್ಮಗಳು ಯಶಸ್ವಿಯಾಗಲಿ ಅಥವಾ ವಿಫಲವಾಗಲಿ, ಅವೆರಡರ ಕಡೆಗೂ ನೀನು 'ಸಮತ್ವ'ಭಾವವನ್ನು ಹೊಂದಿರು. ಈ ಸಮತ್ವವೇ ಯೋಗ ಎಂದು ಹೇಳಲ್ಪಟ್ಟಿದೆ. -ಎಂತಲೂ ಕೃಷ್ಣ ಹೇಳುತ್ತಾನೆ. ಚಿತ್ತವೃತ್ತಿಯ ನಿರೋಧವನ್ನೇ ಈ ಮೇಲಿನ ಮಾತಿನಲ್ಲಿ ಬೇರೆ ರೀತಿಯಲ್ಲಿ ಹೇಳಲಾಗಿದೆ. 

ಗೀತೆಯಲ್ಲಿ ಮುಂದೆ ''ಜ್ಞಾನಯೋಗ'' ಹಾಗೂ ''ಕರ್ಮಯೋಗ'' ಎಂಬ ಎರಡು ಪ್ರಕಾರದ ಯೋಗಮಾರ್ಗಗಳನ್ನು ಕೃಷ್ಣ ಹೇಳುತ್ತಾನೆ. 
ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಂ # 3-3

ಈ ಲೋಕದಲ್ಲಿ ಎರಡು ಎರಡು ಪ್ರಕಾರದ ನಿಷ್ಠೆಗಳನ್ನು ನಾನೇ ಹಿಂದೆ ಹೇಳಿರುವೆನು.  ಸಾಂಖ್ಯರ ನಿಷ್ಠೆಯು ಜ್ಞಾನಯೋಗದಿಂದ, ಯೋಗಿಗಳ ನಿಷ್ಠೆಯು ಕರ್ಮಯೋಗದಿಂದ ಇರುತ್ತದೆ.
(ಸಾಧನೆಯ ಪರಾಕಾಷ್ಠೆ ಅಥವಾ ಪಕ್ವಾವಸ್ಥೆಯ ಹೆಸರೇ 'ನಿಷ್ಠೆ' ಎಂದಾಗಿದೆ.   # ನಮ್ಮ ಇಂದ್ರಿಯ-ದೇಹ, ಹಾಗೂ ಮನಸ್ಸಿನಿಂದ ನಡೆಯುವ  ಎಲ್ಲಾ ಕ್ರಿಯೆಗಳ ಕರ್ತೃ ನಾನು ಎಂಬ  ಅಭಿಮಾನವನ್ನು ಬಿಟ್ಟು ಸರ್ವವ್ಯಾಪೀ ಸಚ್ಚಿದಾನಂದಘನ ಪರಮಾತ್ಮನಲ್ಲಿ ಏಕಭಾವದಿಂದ ತಲ್ಲೀನನಾಗುವುದೇ ''ಜ್ಞಾನಯೋಗ''.  ಇದನ್ನೇ ಸಂನ್ಯಾಸ, ಸಾಂಖ್ಯಯೋಗ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಸಾಂಖ್ಯರ ಮಾರ್ಗವಾಗಿದೆ.  ## ಕರ್ಮಗಳಿಂದ ಫಲದ ಅಪೇಕ್ಷೆ ಹಾಗೂ ಕರ್ಮಗಳಲ್ಲಿನ ಮಮತೆಯನ್ನು ತ್ಯಜಿಸಿ ಕರ್ತವ್ಯವವನ್ನು ಭಗವದಾಜ್ಞೆಯಂತೆ ಭಾವಿಸಿ ಸಮತ್ವ ಬುದ್ಧಿಯಿಂದ ಕರ್ಮ ಮಾಡುವುದೇ ನಿಷ್ಕಾಮ ಕರ್ಮವನ್ನೇ ''ಕರ್ಮಯೋಗ'', ಸಮತ್ವಯೋಗ, ಅಥವಾ ತದರ್ಥಕರ್ಮ ಮುಂತಾಗಿ ಕರೆಯಲಾಗಿದೆ. ಇದು ಯೋಗಿಗಳ ಮಾರ್ಗವಾಗಿದೆ)



No comments:

Post a Comment