Saturday, January 18, 2014

ಅಂಕಣಗಳು
ಪ್ರತಿಸ್ಪಂದನ | ಎಚ್.ಎಸ್.ಶಿವಪ್ರಕಾಶ್ ಆಗಮೋಕ್ತವಾಗಿ ಪ್ರಾರಂಭ­ವಾ­ದರೂ ಮಾ­ದಾರ ಚನ್ನಯ್ಯ-,ದೇವರ ದಾಸಿ­ಮಯ್ಯ -ಬಸವಾದಿ ಪ್ರಮಥರ ಮೂಲಕ ಒಂದು ವಿಶಾಲ­ಭಿತ್ತಿ ಮತ್ತು ವ್ಯಾಪ್ತಿಯನ್ನು ಪಡೆದು­ಕೊಂಡ ವೀರಶೈವ ಲಿಂಗಾಯತ ಸಮಾಜದ ಸ್ವರೂಪ ಮತ್ತೆ ಚರ್ಚೆ­ಯಲ್ಲಿದೆ. ಈಚೆಗೆ ವೀರ­ಶೈವ ಮಹಾ­ಸಭೆ­ಯವರು ತಾವು ಹಿಂದೂ ಧರ್ಮದ ಭಾಗವಲ್ಲ, ತಮ್ಮದು ಒಂದು ಸ್ವತಂತ್ರ ಧರ್ಮ­ವಾಗಿ­ರುವುದರಿಂದ ತಮಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡ­ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ದು ಈಗಾಗಲೇ ಕೇಂದ್ರ ಸರ್ಕಾರ ಈ ಮನವಿಯನ್ನು ನಿರಾಕರಿಸಿದೆ. 
ಮಹಾ­­ಸಭೆಯ ವಿಚಾರವನ್ನು ಅನು­ಮೋದಿಸದ ಪ್ರೊ.ಚಿದಾನಂದ ಮೂರ್ತಿ­ಯವರಂಥ ಹಿರಿ­ಯರೂ ಕೆಲವು ಗೌರವಾನ್ವಿತ ಸಂಪ್ರದಾಯ ಪರಾ­ಯಣ ಮಠಾಧಿಪತಿಗಳೂ ವೀರಶೈವ ಧರ್ಮದ ಪ್ರತ್ಯೇಕ ಅಸ್ತಿತ್ವ­ವನ್ನೊಪ್ಪದೆ ಅದು ಹಿಂದೂ ಧರ್ಮದ ಒಂದು ಭಾಗವೆಂದು ಘಂಟಾ­ಘೋಷವಾಗಿ ಸಾರಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಾನೂ ಯೋಚಿಸ­ತೊಡಗಿದ್ದೇನೆ. ಕಾರಣ ನಾನು ವೀರಶೈವ ಕುಟುಂಬ­­ವೊಂದ­ರಲ್ಲಿ ಹುಟ್ಟಿದ್ದು ಮಾತ್ರವಲ್ಲ. ಹಾಗೆ ಹುಟ್ಟಿದ್ದರೂ ನಾನು ವೀರಶೈವ, ಬೌದ್ಧ, ಶಾಕ್ತ ಸಾಧನಾ ಕ್ರಮಗಳ ಮೂಲಕ ಮುನ್ನ­ಡೆದು ಕಾಶ್ಮೀರ ಶೈವ­ದರ್ಶನದ ಸ್ಪಂದ­ಮತ­ವನ್ನು ನನ್ನ ವಿಶ್ವಾಸಗಳ ಚೌಕಟ್ಟನ್ನಾಗಿ ನಿರ್ಮಿಸಿ­ಕೊಂಡಿ­ದ್ದೇನೆ.
ಒಂದು ಪಕ್ಷ ನಾನು ವೀರಶೈವೇ­ತರನಾಗಿ ಹುಟ್ಟದಿದ್ದರೂ ಈ ಸಮಸ್ಯೆ ನನ್ನನ್ನು ಕಾಡುತ್ತಿತ್ತು. ಯಾಕೆಂದರೆ ಯಾರು ಒಪ್ಪಲಿ ಬಿಡಲಿ, ವೀರಶೈವ  ದೃಷ್ಟಿಯ ಅಭಿವ್ಯಕ್ತಿಯೆಂದು ಗುರುತಿಸಲಾಗಿರುವ ಕನ್ನಡ ವಚನ ವಾಙ್ಮಯ­ವು ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಒಂದು ಬಹು ಮುಖ್ಯ ಸ್ರೋತ­ವಾಗಿದೆ. ಅದೊಂದು ಜೀವಂತ ಧಾರೆ­ಯಾಗಿರುವ ಕಾರಣ ಇಂದೂ ಹಲವು ಮಂದಿ ವೀರಶೈವೇತರ ಚಿಂತಕರಿಗೆ, ಕಲಾವಿದರಿಗೆ, ಸಾಮಾಜಿಕ ಆಂದೋಲನಗಳಿಗೆ ಹೊಸಹೊಸ ಸಂಪನ್ಮೂಲ­­ಗಳನ್ನೂ ಅದು ಇಂದಿಗೂ ನೀಡುತ್ತಿದೆ. ಆದ್ದರಿಂದ ಈ ಬಹು­ಜನಾಭಿವ್ಯಕ್್ತಿ ಸಮು­ಚ್ಚಯದ ತಾತ್ವಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಅರಿತುಕೊಳ್ಳು­ವುದು ಜರೂರಿಯಾಗಿದೆ.
ವೀರಶೈವದ ಸ್ವರೂಪದ ಬಗ್ಗೆ ವೀರ­ಶೈವರಲ್ಲೇ ಇಬ್ಬಗೆಯ ದೃಷ್ಟಿ­ಗಳಿ­ರು­ವುದನ್ನು ಈಗಾಗಲೇ ಸೂಚಿಸಿದ್ದೇನೆ. ವೀರಶೈವ ಮತ್ತು ಹಿಂದೂ­­ಗಳ ಸಂಬಂಧದ ಪ್ರಶ್ನೆ ಮುನ್ನೆಲೆಗೆ ಬಂದಾಗ ಅದರ ಬೆನ್ನಲ್ಲೇ ಇನ್ನೊಂದು ಪ್ರಶ್ನೆ ಏಳು­ತ್ತದೆ: ಹಿಂದೂ­ಧರ್ಮದ ಕುರಿತ  ಸರ್ವಾ­ನು­­ಮತ­ವಾದ ವ್ಯಾಖ್ಯೆ ಯಾವು­ದಾದರೂ ಇದೆಯೆ?
ಹಿಂದೂ ಎಂಬುದರ ಅರ್ಥವಿರಲಿ, ಆ ಶಬ್ದವೇ ಹಾದಿ ತಪ್ಪಿಸುವಂಥದೆಂದು ಕೆಲವು ಜನ ಪ್ರಭೃತಿಗಳು ವಾದಿಸಿ­ದ್ದಾರೆ. ಹಿಂದೂ ಎಂಬ ಶಬ್ದ ಮತ್ತು ಪರಿಕಲ್ಪನೆ ಎರಡೂ ವಸಾಹತು­ಕಾಲ­ದಲ್ಲಿ ನಮ್ಮ ಮೇಲೆ ಹೇರಲ್ಪಟ್ಟವೆಂದು ಪ್ರೊ. ಬಾಲಗಂಗಾಧರ ಅವರು ಸಮರ್ಥ­ವಾಗಿ ವಾದಿಸಿದ್ದಾರೆ. ಅದಕ್ಕೂ ಮುಂಚಿತವಾಗಿ  ಕನ್ನಡದ ಮಹಾನ್ ಚಿಂತಕ-, ವಿದ್ವಾಂಸರಾದ ಶಂಬಾ ಜೋಷಿ­­ಯವರು ತಮ್ಮ ಹಲವು ವಿದ್ವ­ತ್ಪೂರ್ಣ ಬರಹಗಳಲ್ಲಿ ಹೇಳಿದ್ದನ್ನು ಹೀಗೆ ಅಡಕಗೊಳಿಸಬಹುದು: ನಾಲ್ಕು ವೇದಗಳಲ್ಲಾ­ಗಲಿ, ಆರು ಶಾಸ್ತ್ರ­ಗಳ­ಲ್ಲಾಗಲಿ, ಹನ್ನೆರಡು ಪ್ರಧಾನ ಉಪನಿಷತ್ತು­ಗಳಲ್ಲಾಗಲಿ, ಹದಿನೆಂಟು ಪುರಾಣಗಳಲ್ಲಾಗಲಿ, ಇಪ್ಪತ್ನಾಲ್ಕು ದಿವ್ಯಾ­ಗಮಂಗಳಲ್ಲಾಗಲಿ, ಅಸಂಖ್ಯಾತ ತಂತ್ರಾಗಮ­ಗ­ಳ­ಲ್ಲಾಗಲಿ,ಭಕ್ತಿ ವಾಙ್ಮಯ­­­ದಲ್ಲಾಗಲಿ ಎಲ್ಲಿ­ಯೂ ಗೋಚ­ರಿಸದ ಈ ಶಬ್ದವನ್ನು ಗ್ರೀಕರು ಮೊದಲಾಗಿ ಹೊರನಾಡ ಹಲ್ಲೆ­ಕೋರರು ಸಿಂಧೂ­ನದಿ ಇತ್ತಲ ಕಡೆಗೆ ವಾಸಿಸುತ್ತಿದ್ದ ಜನಾಂಗದವರನ್ನು ಗುರು­ತಿಸಲು ಬಳಸತೊಡಗಿ­ದರು.
ಪರಕೀ­ಯರು ಕೊಟ್ಟ ಈ ಪದವನ್ನು ನಾವು ಅವಿಮರ್ಶಾತ್ಮಕ­ವಾಗಿ ಒಪ್ಪಿಕೊಂಡದ್ದು ನಮ್ಮ ಸಾಮೂಹಿಕ ಮಾನಸಿಕ ಅವನತಿಯ ಒಂದು ಕುರುಹು. ಹಲವು ಕೃತಿಗಳಲ್ಲಿ ಅವರು ಮುಂದಿಟ್ಟಿರುವ ಈ ವಾದವನ್ನು ಪ್ರವಾಹ­ಪತಿತರ ಕರ್ಮ ಹಿಂದೂ ಧರ್ಮ ಎಂಬ ಚಿಂತನಾ­­ಪ್ರಚೋದಕ ಪುಸ್ತಕ­ದಲ್ಲಿ ವಿಶೇಷವಾಗಿ ಚರ್ಚಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಹಿಂದೂ ಎಂಬ ಶಬ್ದ ಪ್ರಚಲಿತ­ವಾಗಿದ್ದಕ್ಕೆ ಉದಾಹರಣೆ­ಯೆಂದರೆ ‘ಹಿಂದೂರಾಯ ಸುರತ್ರಾಣ’ ಎಂಬ ಬಿರುದು ಆಗಿನ ದಾಖಲೆಗಳಲ್ಲಿ ವಿಜಯ­ನಗರದ ಅರಸರಿಗೆ ಅನ್ವಯಿ­ಸಲ್ಪಟ್ಟಿರುವುದು. ಆದರೆ ಆ ಕಾಲದ ಬೇರೆ ಕೃತಿಗಳಲ್ಲಿ ಉದಾಹರಣೆಗೆ ಹರಿಹರ, ರಾಘವಾಂಕ, ಕುಮಾರ­ವ್ಯಾಸ, ಚಾಮ­ರಸಾದಿಗಳಲ್ಲಿ-- ಈ ಪದದ ಪ್ರಯೋಗ ಕಾಣ­ಸಿಗುವುದಿಲ್ಲ. ಹೀಗೆ ಕಾವ್ಯ-ಶಾಸ್ತ್ರಾದಿಗಳಲ್ಲಿ ನಾಪತ್ತೆ­ಯಾಗಿರುವ ಈ ಪದವು ಇವತ್ತು ಇಷ್ಟೊಂದು ಪರವಿರೋಧ ನಿಲುವು­ಗಳನ್ನು ಸೃಜಿಸುತ್ತಿರುವುದನ್ನು ಕಂಡಾಗ ಅಲ್ಲಮನ ಒಂದು ಮಾತು ನೆನಪಾಗುತ್ತದೆ: ‘ಇಲ್ಲದ ಮಾಯೆ­ಯನಹುದೆಂದು ಭ್ರಮಿಸಿದರೆ ಕಣ್ಣ ಮುಂದಿನ ಮಾಯೆಯಾಗಿ ಕಾಡಿತ್ತು ನೋಡಾ’.
ಹಲ್ಲೆಕೋರರು ಮತ್ತು ನಂತರದ ಆಡಳಿತ­ಗಾರರು ಹೇರಿದ ಈ ಶಬ್ದವನ್ನು ನಾವು ಈ ಮಟ್ಟಿಗೆ ಸಂಭ್ರಮಿಸುತ್ತಿರು ವುದೇ ಒಂದು ದೊಡ್ಡ ತಮಾಷೆ. ಮಹಾರಾಷ್ಟ್ರದ ದಲಿತ ಗೆಳೆಯ ರೊಬ್ಬರು ನನಗೆ ಹೇಳಿದರು: ಬಾಬಾ­ಸಾಹೇಬರ ಸ್ಫೂರ್ತಿ­ಯಿಂದ ಬೌದ್ಧ­ಧರ್ಮ ಸ್ವೀಕರಿಸಿದ ದಲಿತ ಜನಾಂಗದ ಹಲವರು ಜನಗಣತಿಯವರ ಬಳಿ ನೋಂದಾಯಿಸುವಾಗ ಧರ್ಮ ಎಂಬ ಕಾಲಮಿ­ನಲ್ಲಿ ಬೌದ್ಧ ಎಂದು ಬರೆಸುತ್ತಾರೆ. ಆದರೆ ಈ ವಿಚಾರ ಜನಗಣತಿಯವರಿಗೆ ಅರ್ಥ­-ವಾಗದ ಕಾರಣ ಅವರು ಅದನ್ನು ಹಿಂದೂ ಎಂದು ತಿದ್ದಿಬಿಡುತ್ತಾರೆ. ವೀರಶೈವ ಮಹಾ­ಸಭೆಯವರು ಈಚೆಗೆ ಸಮಸ್ತ ವೀರಶೈವರಿಗೆ ತಾವು ಜನ­ಗಣತಿಯಲ್ಲಿ ಹಿಂದೂಧರ್ಮೀಯರು ಎಂಬುದಕ್ಕೆ ಬದಲಾಗಿ ವೀರಶೈವ ಎಂದು ಬರೆಸಬೇಕೆಂದು ಕರೆ ಕೊಟ್ಟಿದ್ದರಂತೆ.
ಆದರೆ ಅದನ್ನು ಜನಗಣತಿ­ಯವ­ರಾಗಲಿ,  ಸರ್ಕಾರ­ವಾಗಲಿ ಅಂಗೀಕರಿ­ಸಿಲ್ಲ ವೆಂಬುದು ಸ್ಪಷ್ಟ­ವಾಗಿದೆ. ಇನ್ನು ಸಂವಿಧಾನದ ಮತ್ತು ಕಾನೂನಿನ ದೃಷ್ಟಿಯಿಂದ ನೋಡಿದಾಗ ಯಾರು ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀ ಯರಲ್ಲವೋ ಅವರೆಲ್ಲರೂ ಹಿಂದೂ ಗಳೆಂದು ಒಪ್ಪಿಕೊಂಡ ಹಾಗೆ ಕಾಣುತ್ತದೆ. ಆದರೆ ಹಿಂದೂಗಳೆಂದು ಕರೆಯಲಾದ ಹಲಮುಖೀ ಬಹು­ಸ್ತರೀಯ  ಜನಗಳಿಗೆ ಸಮಾನವಾದ ಮತ್ತು ಸಾಮಾನ್ಯ­ವಾದ ನಂಬಿಕೆಗಳು, ಆಚರಣೆಗಳು ಇವೆಯೆ? ಆಧುನಿಕ ಭಾರತದ ನಿರ್ಮಾತೃ ಗಳಾದ ಗಣ್ಯರು ಹಿಂದೂ ಧರ್ಮದ ಬಗ್ಗೆ ಪರಸ್ಪರ ವಿರುದ್ಧವಾದ ವ್ಯಾಖ್ಯೆ­ಗಳನ್ನು ನೀಡಿದ್ದಾರೆ. ಇವರು ಈಗಾ­ಗಲೇ ಅಸ್ತಿತ್ವದಲ್ಲಿರುವ ಒಂದು ಧರ್ಮ­ವನ್ನು ವ್ಯಾಖ್ಯಾನಿಸುತ್ತಿದ್ದಾರೋ ಅಥವಾ ಪರಂಪರೆಯಿಂದ ತಮಗೆ ಅನು­ಕೂಲವಾದದ್ದನ್ನು ಕಲೆಹಾಕಿ ಇದೇ ಹಿಂದೂ ಧರ್ಮ ಅನ್ನು­ತ್ತಿದ್ದಾರೋ ಎಂಬ ಅನುಮಾನ ಮೂಡುತ್ತದೆ.
ಮಹಾತ್ಮಗಾಂಧಿಯವರು ಪ್ರಶಂಸಿಸಿದ ಹಿಂದೂಧರ್ಮ ಅವರದೇ ನಿರ್ಮಾಣ. ಅಹಿಂಸೆ­ಯೇ ಹಿಂದೂಧರ್ಮದ ಸಾರೋ­ದ್ಧಾರ­ವೆಂದು ತಿಳಿದಿದ್ದ ಅವರು ಯುದ್ಧ­ಕರ್ಮ-­ವನ್ನು ಬೋಧಿ­ಸುವ ಭಗವದ್ಗೀತೆಗೂ ಅಹಿಂಸಾ­ಪರ ವ್ಯಾಖ್ಯೆ ನೀಡಿಬಿಟ್ಟರು. ಇದಕ್ಕೆ ವಿರುದ್ಧ ದಿಶೆ­ಯಲ್ಲಿ ಬಾಲಗಂಗಾಧರ ತಿಲಕರು ಗೀತೆ­ಯಲ್ಲಿ ಹೋರಾಟದ ಸಂದೇಶವನ್ನು ಗುರುತಿಸಿದರು. ಆದರೆ ಹಿಂದೂ­ಗಳೆಂದು ಕರೆಯ­ಲಾಗುವ ಬಹು­ಸಂಖ್ಯಾತರಿಗೆ ಭಗ­ವದ್ಗೀತೆ ಏನೆಂಬುದೇ ಗೊತ್ತಿಲ್ಲ. ಭಾರತದ ಅಧಿಕಾಂಶ ಆದಿ­ವಾಸಿಗಳ ಧರ್ಮಾ­ಚರಣೆ­ಗಳಿಗೂ ಹಿಂದೂ­­ಗಳ ಧರ್ಮಾ­ಚರಣೆ­ಗಳೆಂದು ಕರೆಯಲಾಗುವ ಯಜ್ಞ, ಹವನ, ಪೂಜೆ-­­ಪುನಸ್ಕಾರಗಳಿಗೂ ಯಾವುದೇ ಸಂಬಂಧ­ವಿಲ್ಲ. ದಲಿತರು ಹಿಂದೂ ಸಮಾಜದ ಭಾಗ ಖಂಡಿತಾ ಅಲ್ಲವೆಂದು ಬಾಬಾಸಾಹೇಬರು ಸೂರ್ಯ­ ಸ್ಪಷ್ಟ­ವಾಗಿ ವಾದಿಸಿದರು. ಮಹಾತ್ಮ ಗಾಂಧಿ­­ಯವರು ದಲಿತರನ್ನು ಹಿಂದೂ ಸಮು­ದಾಯದ ಹೊರಗಿಡಲು ಎಂದೂ ತಯಾರಿರಲಿಲ್ಲ.
ಹಿಂದೂಧರ್ಮಪರ ಇರುವವರು ಹೀಗೆ ವಾದಿಸಿಯಾರು: ಹಾಗಿದ್ದರೆ ಶಿವ, ರಾಮ, ಕೃಷ್ಣ ಮುಂತಾದ ದೇವರು­ಗಳನ್ನು ಭಾರತದಾದ್ಯಂತ ಆರಾಧಿ­­ಸುತ್ತಾರಲ್ಲ, ಅದನ್ನೇ ಯಾಕೆ ಹಿಂದೂ­ಧರ್ಮದ ಬುನಾದಿಯೆಂದು ಒಪ್ಪ­ಬಾರದು? ಈ ವಾದದಲ್ಲಿ ಹಲವು ಸಂದಿಗ್ಧಗಳಿವೆ. ಬಹುತೇಕ ಆದಿವಾಸಿ ಜನಾಂಗಗಳಿಗೆ ಉದಾ­ಹರಣೆಗೆ ನಾಗಾ ಬುಡಕಟ್ಟಿನವರಿಗೆ ಅಥವಾ ಸಂತಾಲ-ರಿಗೆ ಇದು ಅನ್ವಯಿಸುವುದೇ ಇಲ್ಲ. ಹಿಂದೂ ಪರಂಪರೆ ದೈವತಗಳನ್ನು ಒಪ್ಪಿಕೊಂಡ ಆದಿ­ವಾಸಿಗಳು ಈ ದೇವತೆಗಳಿಗೆ ನೀಡುವ ಉದ್ದೇಶ, ಆಚರಣೆಗಳು ಪೂರ್ತಿ ಭಿನ್ನ. ಉದಾ­ಹರಣೆಗೆ ಅಸ್ಸಾಮಿನ ರಾಭಾ ಜನಾಂಗೀ­ಯರು ತಮ್ಮನ್ನು ಶಿವಧರ್ಮದವರೆಂದು ಕರೆದು­ಕೊಳ್ಳು­ತ್ತಾರೆ. ಆದರೆ ಅವರ ಶಿವ ಅವರ ಬುಡಕಟ್ಟು ದೇವತೆಯ ಸೋದರ.
ಅವರ ವಾರ್ಷಿಕ ವಿಧಿಗಳಲ್ಲಿ ಶಿವನಿಗೆ ಹಂದಿ ಮಾಂಸ ಮತ್ತು ಅಕ್ಕಿಕಳ್ಳುಗಳನ್ನು ಪ್ರಸಾದವಾಗಿ ನೀಡುತ್ತಾರೆ. ಶಿವನನ್ನು ತಮ್ಮ ಕುಲ­ಮೂಲದವನೆಂದು ನಂಬುವ ಹಿಮಾ­ಚಲ­ಪ್ರದೇಶದ ಗದರ್ ಸಮು-­ದಾಯ­ದವರು ಸಂಸ್ಕೃತ ಪರಂಪರೆಗೆ ಭಿನ್ನ­ವಾದ ತಮ್ಮದೇ ಆದಿವಾಸಿ ಶಿವ­ಪುರಾಣ­ವನ್ನು ಒಪ್ಪು­ತ್ತಾರೆ. ಮಣಿಮಾಃಏಶ್ವರ ಂಂದಿರದಲ್ಲಿ ನಡೆ­ಯುವ ಅವರ ವಾರ್ಷಿಕ ವಿಧಿಗಳಲ್ಲಿ ಮಾಂಸಾ­ಹಾರ ಅವಿಭಾಜ್ಯ ಅಂಗ. ಅವರ ಪ್ರಕಾರ ಶಿವ ತಮ್ಮ ಪಶುಪಾಲಕ ಜನಾಂಗದ ಮೂಲ ಪುರುಷ. ಛತ್ತೀಸಗಡದ ಸತನಾಮಿ ಪಂಥ­ದವರನ್ನು- ಇವರೆಲ್ಲಾ ದಲಿತ ಜನಾಂಗ­ದವರು ವೈಷ್ಣವರನ್ನಾಗಿ ನೋಡ­ಲಾಗುವುದಿಲ್ಲ. ಅವರು ರಾಮಭಕ್ತರು. ಆದರೆ ಅವರ ರಾಮ  ಕಬೀರ­ಪಂಥ­ದಲ್ಲಿ­ರುವಂತೆ ಒಬ್ಬ ದೇವತೆ­ಯಲ್ಲ, ಒಂದು ತತ್ವ. ರಾಮಾಯಣದ ರಾಮ ಅವರಿಗೆ ಹೊರತು. ನಿಗಮಾಗ­ಮಾಚರಣೆಗಳನ್ನು ಪಾಲಿಸುವ ಹಿಂದೂ­­ಗಳು ಮತ್ತು ಮೇಲೆ ಹೆಸರಿಸಿ­ದಂತಹ ಬುಡಕಟ್ಟು ಜನಾಂಗ­ಗಳವರೂ ಒಂದೇ ಧರ್ಮಕ್ಕೆ ಸೇರಿ­ದವರೆನ್ನಲು ಯಾವುದೇ ವಸ್ತುನಿಷ್ಠ ಆಧಾರಗಳಿಲ್ಲ.
ರಾಮಾಯಣ, ಮಹಾಭಾರತ­-ಗಳನ್ನೂ ಹಿಂದೂ ಧರ್ಮದ ಸಂಕೇತ­ಗಳೆನ್ನ­ಲಾಗು­-­ವುದಿಲ್ಲ. ಯಾಕೆಂದರೆ ನಮ್ಮಲ್ಲಿ ಹಲವಾರು ಆದಿವಾಸಿ ಮತ್ತು ಜನಪದ ಧರ್ಮೀಯರು ಇಂದಿಗೂ ರಾಮಾ­ಯಣ, ­ಮಹಾಭಾರತಗಳನ್ನು ನಿತ್ಯ­ನೂತನವಾಗಿ ಸೃಜಿಸುತ್ತಿರುತ್ತಾರೆ. ಸಂಸ್ಕೃತ ರಾಮಾಯಣ- ಮಹಾಭಾರತ­ಗಳಿಗೂ ಆದಿ­ವಾಸಿ ಮತ್ತು ಜನಪದ ರಾಮಾಯಣ-, ಮಹಾ­ಭಾರತ­­ಗಳಿಗೂ ಅಜಗಜಾಂತರ ವ್ಯತ್ಯಾಸ. ಉದಾ­ಹರಣೆಗೆ ಗುಜರಾತಿನ ಭಿಲ್ ಜನಾಂಗದ ಮಹಾಭಾರತವಾಗಲಿ ಕರ್ನಾಟಕದ ಹಕ್ಕಿಪಿಕ್ಕೆ ಮಹಾ­ಭಾರತಗಳು ಎತ್ತಿ ಹಿಡಿಯುವುದು ಪುರುಷ­­­ಶೌರ್ಯವನ್ನಲ್ಲ, ಸ್ತ್ರೀ ಶೌರ್ಯ­ವನ್ನು. ಭಿಲ್ ಮಹಾಭಾರತದಲ್ಲಿ ಅರ್ಜುನ ದ್ರೌಪದಿ­ಯನ್ನು ಆದಿಶಕ್ತಿ­ಯೆಂದು ಅರ್ಚಿಸುತ್ತಾನೆ.
ಅಲ್ಲದೆ ರಾಮಾಯಣ-, ಮಹಾ­ಭಾರತದ ಪಾರಮ್ಯ ಹಿಂದೂಗಳೆಂದು ಕರೆಯಲಾಗುವ ಅನೇಕ ಪಂಥೀಯರಿಗೆ ಅಪಥ್ಯ. ಉದಾಹರಣೆಗೆ ನಾನು ಹುಟ್ಟಿದ ವೀರಶೈವ ಸಮುದಾಯದಲ್ಲಿ ರಾಮಾಯಣ-ಮಹಾಭಾರತ-ಭಗವದ್ಗೀತೆಗಳಿಗೆ ಯಾವ ಸ್ಥಾನವೂ ಇಲ್ಲ. ಇದೇ ಮಾತು ಜೈನ, ಬೌದ್ಧ ಮತ್ತು ಸಿಖ್ ಧರ್ಮೀಯರಿಗೆ ಮತ್ತು ಹಲವು ಶೈವ, ವೈಷ್ಣವ, ಶಾಕ್ತ ಪಂಥಗಳಿಗೂ ಅನ್ವಯಿಸುತ್ತದೆ.
ಒಟ್ಟಿನಲ್ಲಿ ಹಿಂದೂಧರ್ಮೀಯರೆಂದು  ಆಳುವ ವರ್ಗದವರು, ಹಿಂದುತ್ವ­ವಾದಿಗಳು, ಧರ್ಮ­­ನಿರಪೇಕ್ಷ­ವಾದಿ­ಗಳು, ಕ್ರಾಂತಿಕಾರಿಗಳು ಯಾರನ್ನು ಗುರುತಿ­ಸುತ್ತಾರೋ ಅವರ ಆಚಾರ­ಗಳಿಗೂ ಅವರ ಬಗ್ಗೆ ವ್ಯಾಖ್ಯಾ­ನಿಸುವ ಈ ಮಹನೀಯರುಗಳ ವಿಚಾರ­ಗಳಿಗೂ ಯಾವುದೇ ಅಂಟುನಂಟುಗಳಿಲ್ಲ. ಯಹೂದಿ ಧರ್ಮೀಯರಿಗೆ ಸ್ಪಷ್ಟ­ವಾದ ಧರ್ಮ­ಗ್ರಂಥಗಳ ಪರಂಪರೆ­ಯಿದೆ. ಆ ಧರ್ಮಾ­ನು­­ಯಾ­ಯಿಗಳನ್ನು ಗುರುತಿಸಲು ಬೇಕಾದ ಸ್ಪಷ್ಟ ವಸ್ತುನಿಷ್ಠ್ಟ ಆಚರಣೆಗಳು, ಸಂಸ್ಥೆಗಳು, ನಂಬಿಕೆಗಳು ಇವೆ. ಹಿಂದೂ ವಿವಾಹ ಕಾನೂನಿ­ಗೊಳ­ಪಡುವ ಹಲವು ಪಂಥಗಳಿಗೆ- ವೀರ­ಶೈವರಿಗೆ, ಸಿಖ್ಖರಿಗೆ, ಕಬೀರ್ ಪಂಥೀಯರಿಗೆ- ತಮ್ಮದೇ ಆದ ಗ್ರಂಥಾ­ವಳಿಗಳು, ಗುರು­ಪರಂಪರೆಗಳು ಇವೆ. ಆದರೆ ಸಮಸ್ತ ಹಿಂದೂಗಳಿಗೆ ಈ ರೀತಿಯ ಸಾಮಾನ್ಯ ಲಕ್ಷಣ­ಗಳಿಲ್ಲ. ಶಂಕ­ರಾಚಾರ್ಯ ಮಠಗಳನ್ನಾಗಲೀ ಅಷ್ಟ­ಮಠ­ಗಳನ್ನಾಗಲಿ ಮೇಲುಜಾತಿಯವರ ದೇವಸ್ಥಾನಗಳನ್ನಾಗಲಿ  ಸಮಸ್ತ ಹಿಂದುಗಳ ಸಂಸ್ಥೆಗಳೆಂದು ಕರೆಯಬರುವುದಿಲ್ಲ.
ಉದಾರವಾದಿ ಹಿಂದೂಗಳು ಈ ಬಹು­ಕುಳತೆಯನ್ನೇ ಹಿಂದೂ ಧರ್ಮದ ಲಕ್ಷಣವೆಂದು ಕರೆದಿದ್ದಾರೆ. ಇದೇ ತರ್ಕವನ್ನು ಮೂಂಬರಿರಿಸಿ ಗಾಂಧಿ ಮಹಾತ್ಮರು ನಿಜವಾದ ಹಿಂದುವೊಬ್ಬ ನಿಜವಾದ ಕ್ರೈಸ್ತನೂ ನಿಜವಾದ ಮುಸ್ಲಿಮನೂ ಆಗಿರುತ್ತಾನೆ ಅಂದರು. ಸ್ವಾಮಿ ವಿವೇಕಾ­ನಂದರು ತಮ್ಮ ಷಿಕಾಗೋ ಭಾಷಣ­ದಲ್ಲಿ ಹಿಂದೂ ಧರ್ಮದ ಸಾರವೆಂಬೋ­ಪಾದಿಯಲ್ಲಿ ಶಿವಮಹಿಮ್ನ ಸ್ತ್ರೋತ್ರದ  ಋಜು­ಕುಟಿಲ ನಾನಾ ಪಥಜುಷಾಂ ನೃಣಾ­ನೇಕೋ ಗಮ್ಯತ್ವಮಸಿ ನದೀನಾಂ ಸಾಗರಂ ಇವ ಎಂಬ ವಾಕ್ಯವನ್ನು ಉದಾ­ಹರಿಸಿದರು. ಆದರೆ ಈ ವಾಕ್ಯವನ್ನು ವಿಶಾಲಾರ್ಥದಲ್ಲಿ ತೆಗೆದು­ಕೊಂಡರೆ ಎಲ್ಲ ಧರ್ಮಗಳೂ ಒಂದೇ ಎಂಬ ಅಭಿಪ್ರಾಯ ಬರುತ್ತದೆ.  ಅಲ್ಲದೆ ಆ ಸುಂದರ ಸ್ತ್ರೋತ್ರದ ಕರ್ತೃ­ವಾದ ಆಚಾರ್ಯ ಪುಷ್ಪದಂತ ಹಿಂದೂ ಎಂಬ ಪದವನ್ನು ಬಳಸಿಯೇ ಇಲ್ಲ.
ಆಧುನಿಕ ಪ್ರಜಾಸತ್ತಾತ್ಮಕ ವಾತಾ­ವರಣ­ದಲ್ಲಿ ನಮ್ಮ ಅಸ್ತಿತ್ವಗಳನ್ನು ನಾವೇ ನಿರ್ಮಿಸಿ­ಕೊಳ್ಳುವ ಸ್ವಾತಂತ್ರ್ಯ­ವಿದೆ. ಹಿಂದೂ ಧರ್ಮೀ­ಯರೆಂದು ಹಾಗೆ ಕರೆಯಲ್ಪಟ್ಟವರಲ್ಲಿ ಕೆಲವರು ಆ ಹಣೆ­ಪಟ್ಟಿಯನ್ನೇ ಇಚ್ಛಿಸಿದರೆ ಅದು ಅವರ ಇಷ್ಟ. ಆದರೆ ಈ ಹಣೆಪಟ್ಟಿ ವೀರ­ಶೈವರಿಗಾಗಲಿ ,ಜೈನ­ರಿಗಾಗಲಿ, ಬೌದ್ಧರಿಗಾಗಲಿ, ಕಬೀರ, -ರಾಯ್ ದಾಸ್-­ಸತನಾಮೀ ಪಂಥ­ದವರಿ­ಗಾಗಲೀ ಒಪ್ಪಿತ­ವಾಗುವುದೆಂದು ನನಗನಿಸು­ವುದಿಲ್ಲ. ಇವರೆ­ಲ್ಲರೂ ಪ್ರತ್ಯೇಕ ಧರ್ಮಗಳಾಗಿ ಪರಿ­ಗಣಿಸ­ಲ್ಪಟ್ಟರೆ ದೇಶದ ಐಕ್ಯತೆಗೆ ಕುತ್ತು ಬರುವುದೆಂದೂ ಅನಿಸುವುದಿಲ್ಲ.
ಏಕಂ ಸದ್ವಿಪ್ರಾ ನಾಂ ಬಹುದಾ ವದಂತಿ (?//)ಎಂಬ ವೇದೋಕ್ತಿಯು ನಿಜ­ವಾದರೆ ನಾವು ಒಂದು ಧರ್ಮ, ಸಂಹಿತೆ, ಆಚಾರ, ದೇವತೆಯನ್ನು ಯಾರ ಮೇಲೂ ಹೇರಬೇಕಾಗಿಲ್ಲ. ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಬೇಕು. ಈ ನಿಟ್ಟಿನಲ್ಲಿ ಬಸವಾದಿ ಪ್ರಮಥರು ಆಗಮೋಕ್ತ ಶೈವ­ಧರ್ಮವನ್ನು ವಿಸ್ತರಿಸಿ ಪುನಾರಚಿಸಿದ ಪಂಥಾ­ನುಯಾ­ಯಿಗಳಾದ ವೀರಶೈವಧರ್ಮೀಯರು ತಮ್ಮವೇ ಆದ ಸ್ಪಷ್ಟ ಆಚಾರ-ವಿಚಾರ­ಗಳಿರುವಾಗ ಯಾರೋ ಹೇರಿದ ಅಸ್ಪಷ್ಟ ಹಿಂದೂ ಎಂಬ ಅಸ್ತಿತವವನ್ನು ಒಪ್ಪಿ­ಕೊಳ್ಳಬೇಕಿಲ್ಲ.
ಇನ್ನಾದರೂ ವೀರಶೈವ ಧರ್ಮವನ್ನು, ಅದೇ ರೀತಿ ಕಬೀರಪಂಥ, ರಾಯ್ ದಾಸ್ ಪಂಥ, ಭೀಮಾಭೋಯಿ ಇತ್ಯಾದಿ ಪಂಥಗಳನ್ನು  ಸ್ವತಂತ್ರ ಧರ್ಮಗಳೆಂದು ಗುರುತಿಸಿ ಸಮಾನತೆ ಮತ್ತು ಸ್ವಾತಂತ್ರ್ಯಗಳ ಬುನಾದಿಯ ಮೇಲೆ ವಿವಿಧತೆಯಲ್ಲಿ ಒಂದಾಗಿ ನಿಂತ ಒಟ್ಟು ಸಂಸ್ಕೃತಿ ನಿರ್ಮಾಣವಾಗಲು ನೆರವಾಗಲೆಂದು ನನ್ನ ಹಾರೈಕೆ. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ಸರ್ವಜನಾಂಗದ ಸುಂದರ ತೋಟ ಎಂದು ಬಣ್ಣಿಸಿದ್ದಾರೆ.

No comments:

Post a Comment