Saturday, January 18, 2014


ಸಮರ್ಥ ರಾಮದಾಸರನ್ನು ಛತ್ರಪತಿ ಶಿವಾಜಿ ತನಗೆ ಎಲ್ಲ ರೀತಿಯಿಂದಲೂ ಗುರು ಅಂತ ಒಪ್ಪಿಕೊಂಡು ಅವರ ಆಜ್ಞೆಯಂತೆ ತನ್ನ ಪ್ರಮುಖ ಕೆಲಸಗಳನ್ನು ಮಾಡಿದ. ಅವರು ಅವನಿಗೆ ಆಧ್ಯಾತ್ಮಿಕ ಗುರುಗಳೂ ಕೂಡ ಆಗಿದ್ದರು.   ಈ ರಾಮದಾಸರ ಜೀವನದ ಕಥೆಗಳನ್ನು ಕೇಳುತ್ತಾ ಕೂತರೆ ರೊಮಾಂಚನ ಆಗುತ್ತೆ.  ಭೊಲಾರಾಮ್ ಅನ್ನುವ ಅವರ ಶಿಷ್ಯನೊಬ್ಬನ ಬಗೆಗಿನ ಘಟನೆ ಕೇಳಿ ನಾನು ದಂಗಾಗಿ ಹೋದೆ. ಅದನ್ನು ಮೊದಲ ಬಾರಿ ಕೇಳಿದಾಗಲೂ ನನ್ನ ಕಣ್ಣು ಒದ್ದೆಯಾಗಿದ್ದವು. ನಿನ್ನೆ ರಾತ್ರಿ ಅದನ್ನು ಬರೆಯುವಾಗಲೂ ಕಣ್ಣುಗಳು ಕೊಡಿ ತುಂಬಿ ಹರಿಯುತ್ತಿದ್ದವು. ಹಾಗಾಗಿ ನಿಮ್ಮ ಜೊತೆ ಆ ಘಟನೆಯನ್ನು ಹಂಚಿಕೊಳ್ಳುತ್ತಿದ್ದೇನೆ.

(ಬಹುತೇಕರಿಗೆ ಇದು ಕಟ್ಟು ಕಥೆ ಅಂತ ಅನ್ನಿಸಬಹುದು.. ಆದರೆ ನನಗೆ ಹಾಗನಿಸೊದಿಲ್ಲ. ಏಕೆಂದರೆ ಸಮರ್ಥ ರಾಮದಾಸರು ಅಂದರೆ ಏನು... ಸಂತರು, ಅವಧೂತರು ಅಂದರೆ ಏನು ಅನ್ನುವುದು ನನಗೆ ಚೆನ್ನಾಗಿ ಅನುಭವಕ್ಕೆ ಬಂದಿದೆ. ರಾಮದಾಸರೇ ಈ ಘಟನೆಯನ್ನು  ಒಂದು ಕಡೆ ಉಲ್ಲೇಖಿಸಿದ್ದಾರೆ ಮತ್ತು ಅವರು ಸುಳ್ಳು ಬರೆದಿದ್ದಾರೆ  ಅನ್ನಲು ಸಾಧ್ಯ ಇಲ್ಲ  )

 

ಒಮ್ಮೆ ಸಮರ್ಥರ ಶಿಷ್ಯರನೇಕರು ಸೇರಿ ತಮ್ಮ ಗುರುಗಳನ್ನ್ನು ಕಾಶೀ ಯಾತ್ರೆ ಗೆ ಕರೆದುಕೊಂಡು ಹೋಗಬೇಕು ಅಂತ ಯೋಜನೆ ಮಾಡಿದ್ರು.  ಸಮರ್ಥರೂ ಕೂಡ ಹೊರಡಲು ಸಿದ್ಧರಾದರು.. ಆದರೆ ಸಮರ್ಥರ ಮನೆಯಲ್ಲಿದ್ದ ರಾಮದೇವರ ನಿತ್ಯ ಪೂಜೆ ಮಾಡೋದು ಯಾರು..? ಅನ್ನೋ ಸಮಸ್ಯೆ ಉದ್ಭವ ಆಯ್ತು. ಆಗಿನ ಕಾಲದಲ್ಲಿ ಈಗಿನಷ್ಟು  Transport ಸೌಲಭ್ಯಗಳು ಇಲ್ಲದೇ ಇದ್ದುದರಿಂದ ಕಾಶೀ ಯಾತ್ರೆ ಮುಗಿಸಿಕೊಂಡು ಬರಲಿಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕು. ಅಷ್ಟು ದಿನಗಳ ಕಾಲ ಇಲ್ಲೇ ಇದ್ದುಕೊಂಡು ದೇವರ ಪೂಜೆ ಮಾಡುವವರು ಯಾರು..? ಎಲ್ಲರೂ ಪ್ರಯಾಣಕ್ಕೆ ಹೊರಡುವ ಉತ್ಸಾಹದಲ್ಲಿದ್ದರು. ಆಗ ಸಮರ್ಥರ ಶಿಷ್ಯರಲ್ಲಿ ಅತೀ ಕಿರಿಯನಾದ ಮತ್ತು ತುಂಬಾ ಅಮಾಯಕನಾದ ಹುಡುಗನೊಬ್ಬನಿದ್ದ. ಅವನಿಗೆ ವಯಸ್ಸಿಗೆ ತಕ್ಕ ಲೋಕಜ್ಞಾನ ಇಲ್ಲದ ಕಾರಣ ಅವನನ್ನು ಎಲ್ಲರೂ ''ಭೋಲಾ ರಾಮ್''  ಅಂತ ಕರೀತಿದ್ರು. ಅವನಿಗೆ ಆಗ ಕೇವಲ ಹತ್ತು ವರ್ಷ ವಯಸ್ಸು. ಅವನ ಮೇಲೆ ಪೂಜೆಯ ಜವಾಬ್ದಾರಿಯನ್ನು ತಳ್ಳಿಹಾಕಿ ಬಾಕೀ ಎಲ್ಲಾ ಶಿಷ್ಯರೂ ಹೊರತು ನಿಂತರು. ನೀನು ಯಾತ್ರೆಗೆ ಬಂದರೆ ದಾಇಯಲ್ಲಿ ಕಳೆದು ಹೋಗ್ತೀಯಾ.. ದಾರಿಯಲ್ಲಿ ಕ್ರೂರ ಮೃಗಗಳು  ಇರ್ತವೆ. ನಿನ್ನನ್ನು ತಿಂದು ಹಾಕ್ತವೆ. ಕಾಶಿಗೆ ಬಂದರೂ ನೀನಗೆನೂ ಗೊತ್ತಾಗೋದಿಲ್ಲ.. ಇಲ್ಲೇ ಇದ್ದುಕೊಂಡು ಪೂಜೆ ಮಾಡು ಅಂತ ಅವನನ್ನು ಒಪ್ಪಿಸಿ  ಗುರುಗಳಿಗೆ  ”ಭೊಲಾ ಪೂಜೆ ಮಾಡ್ತಾನೆ..ನಾವು ನಿಶ್ಚಿಂತೆಯಾಗಿ ಹೊರಡೋಣ ಬನ್ನಿ ಅಂದರು.”’
ಭೋಲಾ ಬಂದು ಗುರುಗಳ ಮುಂದೆ ನಿಂತ. ಸಮರ್ಥರು ಹೇಳಿದ್ರು.. ''ನೋಡು ಭೋಲಾ , ನಾವು ಕಾಶಿಗೆ ಹೋಗಿ ಬರೋವರೆಗೂ ನಮ್ಮ ರಾಮನನ್ನು ಚೆನ್ನಾಗಿ ನೋಡ್ಕೋ..  ಸರಿಯಾಗಿ ಪೂಜೆ ಮಾಡು'' ಅಂದ್ರು.
ಭೋಲಾಗೆ ಪೂಜೆ ಮಾಡುವ ವಿಧಾನ ಗೊತ್ತಿರಲಿಲ್ಲ. ''ಹೇಗೆ ಮಾಡಲಿ'' ಅಂತ ಕೇಳಿದ.  ಆಗ ಗುರುಗಳು ವಾತ್ಸಲ್ಯದಿಂದ ''ಮುಂಜಾನೆ ಎದ್ದ ಕೂಡಲೇ  ಸುಪ್ರಭಾತ ಹಾಡಿ ದೇವರನ್ನು ಎಬ್ಬಿಸಬೇಕು, ಆಮೇಲೆ ಕಾಕಡಾರತಿ ಮಾಡಬೇಕು. ಸ್ನಾನ ಮಾಡಿ ಊರಿನ ಬೀದಿಗಳಲ್ಲಿ ಮನೆಗಳಿಗೆ ಹೋದರೆ ಧವಸ -ಧಾನ್ಯ ಬಿಕ್ಷೆ ಸಿಗುತ್ತೆ. ಅದನ್ನು ತಂದು ನಿನಗೆ ತಿಳಿದ ಹಾಗೆ ಅಡುಗೆ ಮಾಡು.  ನಿನಗೆ ತಿಳಿದ ಹಾಗೆ ಪೂಜೆ ಮಾಡಿ ನೈವೇದ್ಯ ಮಾಡು. ದೇವರನ್ನ ಉಪವಾಸ ಇರೋ ಹಾಗೆ ಮಾಡಬೇಡ'' ಅಂತ ಹೇಳಿ ಆಶೀರ್ವಾದ ಮಾಡುವಂತೆ ಅವನ ಕೆನ್ನೆಯನ್ನು  ಸವರಿ ಕಾಶಿಗೆ ಹೊರಟು ಹೋದರು.
ಮಾರನೆಯ ದಿನ ಮುಂಜಾನೆ ಭೊಲಾರಾಮ್ ಗುರುಗಳು ಹೇಳಿದಂತೆ ಎಲ್ಲ ಮಾಡಿದ.   ನೈವೇದ್ಯದ ಸಮಯ ಬಂದಾಗ ಭಿಕ್ಷೆಯಿಂದ ಬಂದ ಪದಾರ್ಥಗಳಿಂದ ಅಡುಗೆ ಮಾಡಿ ಅದನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ರಾಮ ದೇವರ ಮುಂದೆ ಇಟ್ಟು ಕೈ ಮುಗಿದು ನಿಂತ. ಅವನ ಗುರುಗಳು  ಪ್ರತಿ ದಿನ ನೈವೇದ್ಯ ಮಾಡುವಾಗ ಪೂಜಾ ಮಂದಿರದ ಬಾಗಿಲು ಮುಚ್ಚಿಕೊಳ್ಳುತ್ತಿದ್ದರಿಂದ ಭೊಲಾನಿಗೆ ನೈವೇದ್ಯ ಮಾಡುವ ವಿಧಾನ ಗೊತ್ತಿರಲಿಲ್ಲ. ಮಧ್ಯಾನ್ಹದ ಸಮಯ ಆದ್ದರಿಂದ  ಭೊಲಾರಾಮನಿಗೂ ಹಸಿವಾಗಿತ್ತು. ಹೀಗಾಗಿ ''ರಾಮ..! ಬೇಗ ಊಟ ಮಾಡು'' .. ಅಂತ ಅವಸರಿಸಿದ.  ಆದರೆ ರಾಮನ ಕಡೆಯಿಂದ ಯಾವುದೇ ಉತ್ತರವಿಲ್ಲ.  ಭೊಲಾ ಬಗೆ ಬಗೆಯಲ್ಲಿ ಬೇಡಿಕೊಂಡ.. ''ನನ್ನ ಗುರುಗಳು ನಿನಗೆ ಊಟ ಮಾಡಿಸದೇ   ಊಟ ಮಾಡಬೇಡ ಅಂತ ಹೇಳಿದ್ದಾರೆ.. ಹಿಂಗಾಗಿ ಬೇಗ ಬಂದು ಊಟ ಮಾಡು.  ನನಗೆ ಹಸಿವು ತಡೆಯಲಾಗುತ್ತಿಲ್ಲ..  '' ಅಂದ. ರಾಮ ಬರಲಿಲ್ಲ. ಭೋಲಾ ಮಾಡಿದ ಎಲ್ಲ ಪ್ರಯತ್ನ ಗಳೂ ವಿಫಲವಾಗುತ್ತಿದ್ದವು. ಸಮಯ ಉರುಳಿ ಹೋಗಿ ಸಂಜೆಯಾಗುತ್ತಾ ಬಂದಿತ್ತು. ಭೋಲಾ ಕಣ್ಣೀರು ಸುರಿಸಿ ಬೇಡಿಕೊಂಡ..  ರಾಮ ಉಣ್ಣಲಿಲ್ಲ. ರಾತ್ರಿಯೂ ಆಗಿ ಹೋಯಿತು. ಆಗ ಆಗಿ ರೋಸಿ ಹೋದ ಭೋಲಾ ತನ್ನ ತಲೆಯನ್ನು ರಾಮನ ವಿಗ್ರಹದ ಕಟ್ಟೆಗೆ ಚಚ್ಚಿಕೊಂಡು ಗಾಯ ಮಾಡಿಕೊಂಡು ಮೂರ್ಛೆ ಹೋದ. ಆಗ ಸೀತೆ, ಲಕ್ಷ್ಮಣ, ಹನುಮಂತನ ಸಮೆತನಾದ ಶ್ರೀರಾಮ ಭೌತಿಕವಾಗಿ ಬಂದು ಆ ಭೊಲರಾಮನನ್ನು ಉಪಚರಿಸಿ ಎಬ್ಬಿಸಿ ಕೂರಿಸಿ ಅವನು ಬಡಿಸಿದ ನೈವೇದ್ಯವನ್ನು ಊಟ ಮಾಡಿದ.   ''ನಾಳೆಯಿಂದ ಇಷ್ಟು ತಡ ಮಾಡಿ ಬರಬಾರದು.. ಬೇಗ ಬರಲೇ ಬೇಕು..'' ಅಂತ ಶ್ರೀರಾಮನಿಗೆ ಭೋಲಾ ಆರ್ಡರ್ ಮಾಡಿದ. ಶ್ರೀರಾಮ ''ಆಗಲಿ ಕಣಪ್ಪಾ'' ಅಂತ ಒಪ್ಪಿಕೊಂಡು ಹೋದ.  ಹೀಗೆ ಪ್ರತೀ ದಿನ ಯಥಾ ಪ್ರಕಾರ ಮಧ್ಯಾನ್ಹದ ಹೊತ್ತಿಗೆ ರಾಮ- ಸೀತೆ  ಬಂದು ಭೋಲಾ ಬಡಿಸುತ್ತಿದ್ದ ಊಟ ಮಾಡಿ ಹೋಗುತ್ತಿದ್ದರು. ನಾಲ್ಕಾರು ದಿನಗಳು ಕಳೆದ ಮೇಲೆ  ಶ್ರೀರಾಮ ಊಟ ಮುಗಿಸಿ  ಕೈ ತೊಳೆಯುವಾಗ ಅವನ ಕೈ ಗೆ ನೀರು ಹಣಿಸುತ್ತಿದ್ದ ಭೋಲಾ ರಾಮನನ್ನು ಕುರಿತು ''ನೋಡು ರಾಮಾ..   ನೀವೆಲ್ಲಾ ನೈವೇದ್ಯದ ಸಮಯಕ್ಕೆ ಬರ್ತೀರಿ. ಅಂದಮೇಲೆ ಈ ನೈವೇದ್ಯವೇ ಪೂಜೆಯ ಪ್ರಮುಖ ಉಪಚಾರ ಅಂತಾಯ್ತು. ಹಾಗಾಗಿ  ನಾನು ಬೆಳಿಗ್ಗೆ ಅಷ್ಟು ಬೇಗ ಎದ್ದು ಸುಪ್ರಭಾತ ಹಾಡೋದು, ಕಾಕಡಾರತಿ ಮಾಡೋದು.. ಇವೆಲ್ಲಾ ಬೇಕಾ..? '' ಅಂತ ಕೇಳಿದ.
''ಅದೆಲ್ಲಾ ಏನು ಬ್ಯಾಡ ಬಿಡು'' ಅಂತ ರಾಮನೂ ಒಪ್ಪಿಕೊಂಡ.

ಮತ್ತೆ ಒಂದೆರಡು ದಿನ ಕಳೆದ ಮೇಲೆ   '' ರಾಮಾ.. ನಾನಿನ್ನೂ ಚಿಕ್ಕ ಹುಡುಗ.. ಕಾಡಿನಿಂದ ಸೌದೆ ಆರಿಸಿಕೊಂಡು ಬರೋದು, ಊರಲ್ಲಿ ಭಿಕ್ಷೆ ಬೇಡಿ ತರೋದು, ಹಸುಗಳನ್ನು ನೋಡಿಕೊಂಡು ಹಾಲು ಕರೆಯೊದು .. ಇವೆಲ್ಲ ತುಂಬಾ ಕಷ್ಟ ಆಗ್ತಾ ಇದೆ. ನಿನ್ನ ಜೊತೆಗೆ ಯಾವಗಲೂ ಈ ಹನುಮಂತ ಮತ್ತು ಲಕ್ಷ್ಮಣ ಖಾಲಿ ಖಾಲಿಯಾಗಿ ಒಡಾಡಿಕೊಂಡಿರ್ತಾರೆ.. ಅವರಿಬ್ಬರಿಗೂ ನನ್ನ ಸಹಾಯ ಮಾಡು ಅಂತ ಹೇಳಬಾರದಾ..?''  ಅಂತ ತನ್ನ ಅಮಾಯಕ ಬೇಡಿಕೆ ಮುಂದಿಟ್ಟ.   ಮಾರನೆ ದಿನದಿಂದಮಾರುತಿ ಮತ್ತು ಲಕ್ಷ್ಮಣನಿಗೆ ಫುಲ್ ಟೈಮ್ ಡ್ಯುಟಿ ಬಿತ್ತು . ಅವರಿಬ್ಬರೂ ಬೆಳಿಗ್ಗೆಯೇ ಬಂದು ಭೋಲಾ ಹೇಳಿದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದರು. ಮತ್ತೆ ನಾಲ್ಕಾರು ದಿನಗಳು ಕಳೆದ ಮೇಲೆ ಭೋಲಾ '' ರಾಮಾ... ನಮ್ ಸೀತಮ್ಮನೊರಿಗೆ ಅಡುಗೆ ಮಾಡೋ ಅಭ್ಯಾಸ ಇದೆಯಾ. ಅಥವಾ ಮರೆತು ಹೋಗಿದೆಯಾ ..?''  ಅಂತ ಮೆಲ್ಲನೆ ಕೇಳಿದ.   ರಾಮ ನಗುತ್ತ .. ''ಆಗಲಿ ನಾಳೆಯಿಂದ ಅವಳು ಅಡುಗೆ ಮಾಡ್ತಾಳೆ ಬಿಡು'' ಅಂದ. ಭೌತಿಕ ನಿಯಮಕ್ಕೆ ಕಟ್ಟುಬಿದ್ದ ಸೀತೆ ಓಲೆ ಹೊತ್ತಿಸಿ ಹೊಗೆಯಿಂದ ಕಣ್ಣು ಮೂಗು ಕೆಂಪಗೆ ಮಾಡಿಕೊಂಡು ಅಡುಗೆ ಮಾಡತೊಡಗಿದಳು. ಸೀತಮ್ಮ ಅಡುಗೆ ಸಿದ್ಧ ಮಾಡುವ ವರೆಗೂ ಶ್ರೀರಾಮನ  ಜೊತೆಗೆ  ಭೋಲಾ ಹರಟೆ ಹೊಡೆಯುತ್ತಾ ಕೂರುತ್ತಿದ್ದ. ಹೀಗೇ ದಿನಗಳು ಸಾಗಿದ್ದವು. ಒಂದು ದಿನ ಸೀತಮ್ಮ ಅಡುಗೆ ಮಾಡುವಾಗ ಹಿಂದಿನ ದಿನ ರೊಟ್ಟಿ ಮಾಡಲಿಕ್ಕೆ ಕಲಸಿದ ಹಿಟ್ಟು ಉಳಿದಿತ್ತು. ಅದಕ್ಕೆ ನೀರು ಹಾಕಿ ಕುದಿಸಿ ಮಜ್ಜಿಗೆ ಮತ್ತು ಒಗ್ಗರಣೆ ಹಾಕಿ ''ಕಾಳಾ'' ಅನ್ನುವ ಮರಾಠಿಗರು ಇಷ್ಟ ಪಟ್ಟು ಕುಡಿಯುವ ಪೇಯ ಸಿದ್ದ ಪಡಿಸಿದಳು. ಯಥಾ ಪ್ರಕಾರವಾಗಿ ರಾಮನ ಪಕ್ಕದಲ್ಲಿ ಭೋಲಾ ಕೂಡ  ಊಟಕ್ಕೆ ಕುಳಿತಿದ್ದ . ಸೀತಮ್ಮ ನಾಲ್ಕೂ ಜನರಿಗೆ ಊಟ ಬಡಿಸುತ್ತಿದ್ದಳು. ಒಂದು ಊಟದೆಲೆಯ ಮುಂದೆ ಎಲ್ಲರಿಗೂ ಬಟ್ಟಲುಗಳನ್ನು ಇಟ್ಟು ಅದರಲ್ಲಿ ''ಕಾಳಾ'' ಅನ್ನು ಬಡಿಸಿದಳು.   ತನ್ನ ಪಾಲಿನ ''ಕಾಳಾ'' ತುಂಬಿದ ಬಟ್ಟಲನ್ನು ಹಿಡಿದು ಎದ್ದು ನಿಂತ. ಪಕ್ಕದಲ್ಲಿ ಕುಳಿತಿದ್ದ ರಾಮ. ''ಯಾಕೋ ಭೋಲಾ.. ಬಟ್ಟಲು ತೊಗೊಂಡು ಎಲ್ಲಿಗೆ ಹೊರಟೆ.. ?'' ಅಂತ ಕೇಳಿದ
''ಈ ಕಾಳಾ ನಮ್ ಗುರುಗಳಿಗೆ ಭಾಳ ಇಷ್ಟ.. ಅವರಿಗೆ ಒಂದು ಬಟ್ಟಲು ಕೊಟ್ಟು ಬರ್ತೀನಿ'' ಅಂದ
ಅದಕ್ಕೆ ಪ್ರತಿಯಾಗಿ ರಾಮ ''ಅಯ್ಯೋ ಪೆದ್ದ.. ನಿಮ್ ಗುರುಗಳು ಕಾಶಿಯಲ್ಲಿ ಇದ್ದಾರಲ್ಲೋ..  ನೀನು ಅಲ್ಲಿಗೆ ಹೋಗಿ ಕೊಟ್ಟು ಬರೋಕೆ ಆಗೋದಿಲ್ಲ'' ಅಂದ
ಆಗ ಭೋಲಾ ತುಂಟ ನಗೆ ನಗುತ್ತಾ ''ರಾಮಾ...  ಈ ಮಾರುತಿ ಇದಾನಲ್ಲ ಜೊತೆಯಲ್ಲಿ.. ಆರಾಮಾಗಿ ಕಾಶಿಗೆ ಹೋಗಿ ಬರಬಹುದು'' ಅಂದ
ಭಗವಂತ ಭಕ್ತಿಗೆ ಬದ್ಧನಲ್ಲವೇ..?   ರಾಮ ಒಪ್ಪಿದ.
ಮಾರುತಿ ಭೊಲಾನನ್ನು ಹೊತ್ತುಕೊಂಡು ಕಾಶಿಯ ಗಂಗೆಯ ಹತ್ತಿರ ಇಳಿಸಿ ಹೇಳಿದ. ''ಅಲ್ಲಿ ನೋಡು.. ನಿಮ್ಮ ಗುರುಗಳು ಮಧ್ಯಾನ್ಹದ ಅಹ್ನಿಕ ಮಾಡಿ ಬ್ರಮ್ಹಯಜ್ಞದ ತರ್ಪಣಗಳನ್ನ ಮಾಡ್ತಾ ಇದ್ದಾರೆ. ಅವರಿಗೆ ಬಟ್ಟಲು ಕೊಟ್ಟು ಬೇಗ ಬಂದುಬಿಡು. ಅವರಿಗೆ ನಾನು ನಿನ್ನನ್ನು ಇಲ್ಲಿಗೆ ಕರೆತಂದಿದ್ದು ಅಂತ ಹೇಳಬೇಡ.'' ಅಂತ ತಾಕೀತು ಮಾಡಿ ಕಳಿಸಿದ.

ನೀರಲ್ಲಿ ನಿಂತು ತರ್ಪಣ ಮಾದುತ್ತಿದ್ದ ಸಮರ್ಥರ ಮುಂದೆ ಚಂಗನೆ ಹಾರಿ ಬಂದು ನಿಂತು '' ತುಮಚ್ಯಾ ಸಾಠಿ ಕಾಳಾ ಆಣ್ಲೋ .. ಬಗಾ''  ''ನಿಮಗಾಗಿ ಕಾಳಾ ತಂದಿದೀನಿ ನೋಡಿ''  ಅಂತ ಅವರ ಮುಂದೆ ಹಿಡಿದ.
ಸಮರ್ಥರು ಒಮ್ಮೆಲೇ ದಂಗಾಗಿ ''ಇಲ್ಲಿಗೆ ಹೇಗೆ ಬಂದ್ಯೋ  ನೀನು ? '' ಅಂತ ಕೇಳಿದರು. ಆಗ ಭೋಲಾ ದೂರದಲ್ಲಿ ನಿಂತಿದ್ದ ಮಾರುತಿಯನ್ನು ಗುರುಗಳಿಗೆ  ತೋರಿಸಿ ''ನಿಮಗೆ ಹೇಳಬೇಡ ಅಂದಿದಾನೆ'' ಅಂತ ಮಾರುತಿಯ ಬಗ್ಗೆ ದೂರು ಕೂಡ ಕೊಟ್ಟ. ಮಾರುತಿಯ ಹತ್ತಿರ ಬಂದ ಸಮರ್ಥರು ಅವನ ಕಾಲಿಗೆರಗಿದರು. ನಡೆದಿದ್ದೆಲ್ಲವನ್ನೂ ಅರ್ಥ ಮಾಡಿಕೊಂಡ ಸಮರ್ಥರು ''ನನ್ನ ಶಿಷ್ಯನಿಂದಾಗಿ ನಿನಗೆ ತುಂಬಾ ತೊಂದರೆ ಆಯ್ತು ಮಾರುತಿ..'' ಎಂದು ಕ್ಷಮೆ ಕೇಳಿದರು. ಆಗ ಮಾರುತಿ ''ನನಗೇನೂ ತೊಂದರೆಯಿಲ್ಲ ರಾಮದಾಸರೇ. .. ಆದರೆ ನಿಮ್ಮ ಶಿಷ್ಯನಿಂದ  ನಮ್ಮ ಸೀತಮ್ಮನವರಿಗೆ ಮಾತ್ರ ಬಹಳ ತೊಂದರೆ ಆಗ್ತಾ ಇದೆ'' ಅಂತ ದೂರಿದ.  ಗಂಗೆಯ ದಡದಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತ ಇವರಿಬ್ಬರ  ಮಾತು ಕೇಳುತ್ತ ನಿಂತಿದ್ದ ಅಮಾಯಕ ಭೊಲಾರಾಮನನ್ನು ಸಮರ್ಥ ರಾಮದಾಸರು ಅಪ್ಪಿಕೊಂಡು   ''ಎಂಥಾ ಭ್ಯಾಗ್ಯ ಸಿಕ್ತಲ್ಲೊ ಭೋಲಾ ನಿನಗೆ.. '' ಅಂತ ಅವನನ್ನು ಮುದ್ದಾಡಿದರು.

 (ಸಮರ್ಥ ರಾಮದಾಸರು ಇನ್ನೂ ಅಧ್ಯಾತ್ಮಿಕ ಸಾಧನೆಯ ಪ್ರಾರಂಭದಲ್ಲಿದ್ದಾಗ ನಡೆದ ಘಟನೆ ಇದು. ಮುಂದೆ ಸಮರ್ಥರು  ಆಗಾಧವಾಗಿ ಬದಲಾದರು. ಸನ್ಯಾಸ ಪಡೆದರು. ಅವರ ಊರು ''ಟಾಕಳಿ'' ಯಲ್ಲಿ ಸೀತಮ್ಮನವರು ಬಂದು ಅಡುಗೆ ಮಾಡಿದ ಅಡುಗೆ ಮನೆ ಇಂದಿಗೂ ಇದೆ.)

No comments:

Post a Comment