Tuesday, January 14, 2014

''ಈ ದೇಶಕ್ಕಾಗಿ ನನ್ನ ಗಂಡನನ್ನೇ ಕೊಟ್ಟವಳಪ್ಪಾ ನಾನು…'' ಎನ್ನುವ ಮಾತಿನ ಹಿಂದೆ

ಈ ಫೆಸ್ ಬುಕ್ಕಿನಲ್ಲಿ ಬೇಕಾದದ್ದು ಮತ್ತು ಬೇಡವಾದದ್ದು ಎಲ್ಲ ಬಂದು ಪೋಸ್ಟ್ ಗಳ ರೂಪದಲ್ಲಿ ನಮ್ಮ ಕಣ್ಣುಗಳಿಗೆ ರಾಚುತ್ತಿರುತ್ತದೆ. ಕೆಲವೊಮ್ಮೆ ಅವುಗಳಿಗೆ ಪ್ರತಿಕ್ರಯಿಸದೇ ನಮ್ಮತನವನ್ನು ಕಾಯ್ದುಕೊಳ್ಳುವುದೇ ಒಂದು ಸವಾಲಾಗಿಬಿಡುತ್ತದೆ. ಕೆಟ್ಟದ್ದಕ್ಕಿಂತ ಒಳಿತು ಹೆಚ್ಚು ದಕ್ಕುವುದರಿಂದ ಈ ಜಾಲತಾಣಗಳನ್ನು ಬಿಟ್ಟು ಬಿಡುವಂತೆಯೂ ಇಲ್ಲ. ವೈಯಕ್ತಿಕ ಅಭಿವ್ಯಕ್ತಿಗೆ ವಿಪುಲವಾದ ಅವಕಾಶವನ್ನು ಈ ವೇದಿಕೆ ನೀಡುವುದರಿಂದ ತಮ್ಮ ಪ್ರತಿಷ್ಠೆ ಹೆಚ್ಚಿಸುವ ಚಿತ್ರಗಳು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ವೈಯಕ್ತಿಕ ನೋವು ತೋಡಿಕೊಂಡು ಗೋಳಾಡುವವರು ಕೂಡ ಪುಷ್ಕಳವಾಗಿ ಕಂಡು ಬರುತ್ತಾರೆ.   ಚಿಕ್ಕ ಮಕ್ಕಳು ತಮ್ಮ ಕಡೆಗೆ ಯಾರೂ ಗಮನ ಕೊಡುತ್ತಿಲ್ಲ ಎಂದೆನಿಸಿದಾಗೆಲ್ಲ ಜೋರಾಗಿ ದ್ವನಿ ಏರಿಸಿ ''ಅಬ್ಬೂ''  ಅಂತ ಅತ್ತು ಎಲ್ಲರನ್ನೂ ತಮ್ಮೆಡೆಗೆ ಸೆಳೆದುಕೊಂಡುಬಿಡುತ್ತವೆ. ಹಾಗೆಯೇ ಈ ಗೋಳು ತೋಡಿಕೊಳ್ಳುವ ಯವಸ್ಕರದ್ದೂ ಒಂಥರಾ ''ಅಬ್ಬೂ'' ಸಿಂಡ್ರೋಮ್. ನಾನು ಕೂಡ ಈ ಗೋಳಿನ ಗೀಳಿನಿಂದ ಹೊರತಾದವನಲ್ಲ. ನಮ್ಮೆಲ್ಲರ ಮನಸ್ಸು ಸ್ವಾನುಕಂಪ ಮತ್ತು ಪರರ ಸಾಂತ್ವನವನ್ನು ಎಂಜಾಯ್ ಮಾಡುತ್ತದೆ. ಜೊತೆಗೆ ಸ್ವಾನುಕಂಪ ಯಥೇಚ್ಚವಾಗಿ ಸುಳ್ಳುಗಳನ್ನು ಕೂಡ ಹೇಳಿಸುತ್ತದೆ. ಹೀಗಾಗಿ ಬಹುತೇಕರು ಹೇಳಿಕೊಳ್ಳುವ ಗೋಳಿನಲ್ಲಿ ಸುಳ್ಳಿನ ಅಂಶ ಎಷ್ಟಿರುತ್ತದೆಯೋ, ಅದಕ್ಕೆ ಪ್ರತಿಯಾಗಿ ಸಿಗುವ ಅನುಕಂಪವೂ ಅದಕ್ಕಿಂತ ಹೆಚ್ಚು ಕೃತಕವಾದ ಸುಳ್ಳಿನ ಮುಖವಾಡವನ್ನು ಹೊಂದಿರುತ್ತದೆ. ಆದರೆ ಆ ಕ್ಷಣದಲ್ಲಿ ಅನುಕಂಪ ಬಯಸಿದ ಮತ್ತು ನೀಡಿದ ವ್ಯಕ್ತಿಗಳಿಬ್ಬರಿಗೂ ಒಂದು ರೀತಿಯ ಸಮಾಧಾನದಂತಹ ಅನುಭವ ಆಗಿರುತ್ತದೆ.
ಮೊನ್ನೆ ಫೆಸ್ ಬುಕ್ ನಲ್ಲಿ ಟಿವಿ ಪತ್ರಕರ್ತರೊಬ್ಬರು ಹಾಕಿದ ಒಂದು ಪೋಸ್ಟ್  ಬಂದು ನನ್ನನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ಕದಡಿ ಹಾಕಿತು. ಮುಂಬೈ ಮೇಲೆ ಉಗ್ರರ ದಾಳಿ ನಡೆದ ದಿನಾಂಕ ಕ್ಯಾಲೆಂಡರಿನಲ್ಲಿ ಮರುಕಳಿಸಿದ ಸಂದರ್ಭವಾಗಿ ಆ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪೋಲಿಸ್ ಅಧಿಕಾರಿ ಸಲಾಸ್ಕರ್ ಅವರ ಪತ್ನಿಯನ್ನು ಈ ಪತ್ರಕರ್ತರು ತಮ್ಮ ಟಿವಿಗಾಗಿ ಸಂದರ್ಶಿಸಲು ಹೋದಾಗ ನಡೆದ ಘಟನೆಯನ್ನು ಅವರು ಫೆಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು.

ಆ ಪೋಸ್ಟ್ ಹೀಗಿದೆ..
''ಅಶೋಕ್ ಚಕ್ರ ಪುರಸ್ಕೃತರ ಮನೆಯವರೊಬ್ಬರಿಗೆ ಭಾರತದ ಎಲ್ಲಾ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಇರತ್ತೆ. ಅದಕ್ಕೊಂದು ಐಡೆಂಟಿಟಿ ಕಾರ್ಡ್ ಕೊಟ್ಟಿರ್ತಾರೆ. ಅದನ್ನ ಟೋಲ್ನಲ್ಲಿ ಕುಳಿತಿದ್ದ ಹುಡುಗನಿಗೆ ತೋರಿಸಿದೆ.
’ನಿಮ್ಮ ಕಾರಿಗೆ ರೆಡ್ ಲೈಟ್ ಇಲ್ಲ, ಮತ್ತೆ ನೀವ್ಹೆಂಗೆ ವಿ.ಐ.ಪಿ ಆಗ್ತೀರಿ..?’ ಅಂತ ಕೇಳಿದ...
ಏನುತ್ತರ ಕೊಡಬೇಕೋ ಅರ್ಥ ಆಗಲಿಲ್ಲ... ’ನಾನು, ವಿ.ಐ.ಪಿ ಅಲ್ಲಪ್ಪಾ... ಮರಣೋತ್ತರ ಅಶೋಕ ಚಕ್ರ ಪಡೆದ ಅಧಿಕಾರಿಯ ಹೆಂಡತಿ. ನಮಗೆ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಟ್ಟಿರೋ ಸರಕಾರಿ ಆದೇಶ ಇಲ್ಲಿದೆ ನೋಡು’ ಅಂದೆ...

’ಇಲ್ಲಾರೀ... ಇಂಥವಕ್ಕೆಲ್ಲ ಅಲವ್ ಮಾಡಲ್ಲ... ಐವತ್ತು ರುಪಾಯಿ ಕೊಡಿ’ ಅಂದ ಅವನು...

’ಈ ದೇಶಕ್ಕಾಗಿ ಗಂಡನ್ನೇ ಕೊಟ್ಟವಳಪ್ಪಾ ನಾನು... ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ ಅಂತಂದು ದುಡ್ಡು ಕೊಟ್ಟು ಟಿಕೆಟ್ ತಗೊಂಡೆ... ಅದೇ ಕೊನೆ... ಮತ್ಯಾವತ್ತೂ ನಾನು ಯಾವ ಟೋಲ್ನಲ್ಲೂ ನನ್ನ ಗಂಡನ ಅಶೋಕ ಚಕ್ರದ ಕಾರ್ಡ್ ತೋರೀಸಲಿಲ್ಲ ಅಂದರು’

ಯಾಕೋ ಕಣ್ಣೀರು ತಡೆಯಲೇ ಇಲ್ಲ... ಕ್ಯಾಮರಾ ಮ್ಯಾನ್ಗೆ ಶೂಟಿಂಗ್ ನಿಲ್ಲಿಸು ಅಂತಂದುಬಿಟ್ಟೆ... ಕೆಲವು ನಿಮಿಷ ಬೇಕಾದವು ಯಥಾಸ್ಥಿತಿಗೆ ಬರೋದಕ್ಕೆ...

’ನಿಮ್ಮ ಗಂಡ ಒಂದು ನಿಯತ್ತಿಲ್ಲದ ಸಮಾಜಕ್ಕಾಗಿ ಬಡಿದಾಡಿ ಸತ್ತು ಹೋದರು ಅಂತ ಈ ಐದು ವರ್ಷಗಳಲ್ಲಿ ಯಾವತ್ತಾದರೂ ಅನ್ನಿಸಿದೆಯಾ..?’ ಮ್ಲಾನವಾಗಿ ಕೇಳಿದೆ...''  


ಹೀಗೆ  ಆ ಪತ್ರಕರ್ತರು ಹಂಚಿಕೊಂಡ ಸಂಗತಿ ಎಂಥವರನ್ನೂ ಕೂಡ ಒಂದು ಕ್ಷಣ ಕಲಕಿ ಹಾಕಬಲ್ಲ ಶಕ್ತಿ ಹೊಂದಿದೆ.  ದೇಶಕ್ಕಾಗಿ ಪ್ರಾಣ ತೆತ್ತ ಒಬ್ಬ ವ್ಯಕ್ತಿಯ ಕುಟುಂಬವನ್ನು ನಮ್ಮ ಭಾರತ ನಡೆಸಿಕೊಳ್ಳುವ ರೀತಿ ಇದೇನಾ ..? ಎಂದು ನಮ್ಮ ಬಗ್ಗೆ ನಮಗೇ  ಕೀಳರಿಮೆ ಮತ್ತು ಆ ಹೆಣ್ಣುಮಗಳ ಬಗ್ಗೆ ಹೆಮ್ಮೆ ಆ ಕ್ಷಣದಲ್ಲಿ ಮೂಡುತ್ತವೆ. ನಮ್ಮ ಭಾರತ ಸರ್ಕಾರದ ಬಗ್ಗೆ, ನಮ್ಮ  ವ್ಯವಸ್ಥೆಯ ಬಗ್ಗೆ ನಮಗೆ ಸಿಟ್ಟು ಬರುತ್ತದೆ. ಇದೆಲ್ಲ ಸರಿ... ನಮ್ಮ ಭಾರತದೇಶ ತನ್ನ ನೆಲದ ಹುತಾತ್ಮರನ್ನು ಎಂದೂ ಸರಿಯಾಗಿ ಗೌರವಿಸಿಲ್ಲ ಅಂತಲೇ ಭಾವಿಸೋಣ, ಈ ಟಿವಿ ಪತ್ರಕರ್ತರ ಪ್ರಕಾರ ''ನಮ್ಮದು ನಿಯತ್ತಿಲ್ಲದ ದೇಶ''. ಅದನ್ನೂ ನಾವು ಒಪ್ಪಿಕೊಳ್ಳೋಣ.  ಭಾರತೀಯ ಪ್ರಜೆಯ ಸ್ಥಾನದಲ್ಲಿ ನಿಂತು ನೋಡಿದರೆ ಇದು ನಿಜಕ್ಕೂ ದುಃಖದ ಸಂಗತಿ. 

 ಆದರೆ ಸದರಿ ಪತ್ರಕರ್ತರು ವಿವರಿಸಿದ ಘಟನೆಯಲ್ಲಿನ ಮಹಿಳೆಯ ಬಗ್ಗೆ ನನಗೆ ತುಂಬಾ ಗಾಢವಾಗಿ ಅನಿಸಿದ್ದು ''ಈ ಹೆಣ್ಣುಮಗಳು ಅನಗತ್ಯವಾಗಿ ಇಲ್ಲದ ದುಃಖವನ್ನು ಮೈಮೇಲೆ ಎಳೆದುಕೊಂಡು ಅದರಲ್ಲಿ ಮುಳುಗುಹಾಕುವುದರಲ್ಲಿ ನಿರತಳಾಗಿದ್ದಾಳೆ'' ಅಂತ.  ಹಾಗೆ ಅನಿಸಿದ ಕೂಡಲೇ ನನ್ನ ಮನಸ್ಸು ಈ ದೇಶಭಕ್ತಿಯಿಂದ,  ಭಾವುಕತೆಯಿಂದ ಅಥವಾ ಕನಿಕರದ ಭಾವದಿಂದ ಹೊರಬಂದುಬಿಟ್ಟಿತು. 
ಆ ತಾಯಿಯ ಜೊತೆಗೆ ನಡೆದದ್ದು ಸರಿಯೋ ತಪ್ಪೋ ಅನ್ನುವುದರ ವಿಮರ್ಶೆಗೆ ಹೋಗುವುದರ ಬದಲಾಗಿ ನನ್ನ ಮನಸ್ಸು '' ಈ ಹೆಣ್ಣುಮಗಳ ದುಃಖಕ್ಕೆ ಕಾರಣವೇನು, ಮತ್ತು ಆ ದುಃಖದ ನಿವೃತ್ತಿ ಹೇಗೆ ..? '' ಅನ್ನುವುದರ ಬಗ್ಗೆ ಮಾತ್ರ ಆಲೋಚಿಸುತ್ತಿತ್ತು. 
ಸಾವುಗಳು ಎಲ್ಲರ ಮನೆಯಲ್ಲೂ ಸಂಭವಿಸುತ್ತವೆ. ಮನೆಯ ಯಜಮಾನ ಯಾವುದೇ ಕಾರಣದಿಂದಾಗಿ ತೀರಿಕೊಂಡರೂ  ಮನೆಯ ಸದಸ್ಯರು ಕಂಗಾಲಾಗುವುದು ಸಹಜ. ಆದರೆ ಇಲ್ಲಿ ಈಕೆಯ ಗಂಡ ಮಡಿದದ್ದು ಉಗ್ರವಾದಿಗಳ ದಾಳಿಯಲ್ಲಿ. ಹೀಗಾಗಿ ಆಕೆಯ ದುಃಖದ ಪ್ರಮಾಣ ಹೆಚ್ಚೋ? ಅಥವಾ ಅವಳ ದುಃಖವನ್ನು ಗಮನಿಸುವವರು, ಅನುಕಂಪ ತೋರುವವರು ಇದ್ದಾರೆ  ಅನ್ನುವ ಕಾರಣಕ್ಕೆ ಇಷ್ಟು ದುಃಖವೋ?  ಇಲ್ಲಿನ ದುಃಖಕ್ಕೆ ಕಾರಣ ಆ ಟೋಲ್ ಗೇಟಿನ ಹುಡುಗನ ಅಜ್ಞಾನವೊ, ಅಥವಾ ಈಕೆಯ ಅಜ್ಞಾನವೊ ? ಮುಂತಾಗಿ ನನ್ನ ಮನಸ್ಸು ಪ್ರಶ್ನೆಗಳನ್ನು ಕೇಳುತ್ತಾ ಅವುಗಳಿಗೆ ತಾನೇ ಉತ್ತರಿಸಿಕೊಳ್ಳುತ್ತಾ ಹೋಯಿತು. 

 ನನ್ನ ಆ ಕ್ಷಣದ ವಿಚಾರಧಾರೆಯನ್ನಿ ಇಲ್ಲಿ ನಿಮ್ಮ ಮುಂದಿಡುತ್ತೇನೆ.. 
( ನನ್ನ ಆಲೋಚನೆ ಅಮಾನವೀಯ, ಅವಿವೇಕ ಹಾಗೂ ಮುರ್ಖತೆಯಿಂದ ಕೂಡಿದ್ದು, Judicially wrong, ಅಥವಾ ಹುತಾತ್ಮರ ಬಗ್ಗೆ ಕೃತಘ್ನ ಭಾವ ಹೀಗೆ ಬೇರೆ ಬೇರೆ ರೀತಿಯಲ್ಲಿ ನಿಮಗೆ ತೋರಬಹುದು. ಆದರೆ ನಾನು ಮೊದಲೇ ಹೇಳಿದಂತೆ ನನ್ನ ಆ ಕ್ಷಣದ ಆಲೋಚನೆಯ ಉದ್ದೇಶ ಕೇವಲ ಆ ಹೆಣ್ಣುಮಗಳ ದುಃಖದ ನಿವಾರಣೆಯಷ್ಟೇ. ಉಳಿದದ್ದೆಲ್ಲ ನನಗೆ ನಗಣ್ಯವಾಗಿತ್ತು.)

ಅನೇಕ ಭ್ರಮೆಗಳು ಆ ತಾಯಿಯ ಆ ಕ್ಷಣದ ದುಃಖಕ್ಕೆ ಕಾರಣ ಅಂತ ನನಗೆ ತೋರಿತು..
ಮೊದಲನೆಯದಾಗಿ.. ''ಈ ದೇಶಕ್ಕಾಗಿ ನನ್ನ ಗಂಡನನ್ನೇ ಕೊಟ್ಟವಳಪ್ಪಾ ನಾನು…'' ಎನ್ನುವ ಆಕೆಯ ಮಾತನ್ನು ತೆಗೆದುಕೊಂಡು ನೋಡುವುದಾದರೆ ತಾನು ''ಕೊಟ್ಟವಳು'' ಎನ್ನುವ  ಭಾವ ಆಕೆಯಲ್ಲಿ ಗಾಢವಾಗಿ ಬೆರೂರಿದಂತೆ ಕಾಣುತ್ತದೆ. ಹಾಗಾದರೆ ..ತಾನು ''ಕೊಟ್ಟ'' ಗಂಡನನ್ನು ಅವಳು ತಂದಿದ್ದು  ''ಎಲ್ಲಿಂದ'' ?  ಹೀಗಾಗಿ ಆಕೆಯ ''ಕೊಟ್ಟೆ'' ಎಂಬ ಭಾವವೇ ಅವಳ ಮೊದಲ ಶತ್ರುವಾಗಿ ಆಕೆಯ ದುಃಖದ ಮೂಲ ಕಾರಣ ಎಂದು ನನಗೆ ತೋರುತ್ತದೆ. 

ಇನ್ನು, ಉದ್ದೇಶಪೂರ್ವಕವಾಗಿ ಭಾರತ ದೇಶ ಸಂಚು ಮಾಡಿ  ಆಕೆಯ ಗಂಡನನ್ನು ಆಕೆಯಿಂದ  ಕಿತ್ತುಕೊಂಡಿದೆಯೇ ..? ಅಥವಾ ಆಕೆಯೇ ಸರ್ಕಾರವನ್ನು ಕರೆದು ನನ್ನ ಗಂಡನನ್ನು ''ತೆಗೆದುಕೊಂಡು ಹೋಗಿ'' ಅಂತ ''ದಾನ'' ಮಾಡಿದ್ದಾಳೆಯೇ ? .. ಇಲ್ಲ.. ಹಾಗೇನೂ ನಡೆದಿಲ್ಲ. ನಡೆದದ್ದು ಯಾರೂ  ಊಹಿಸಲಾಗದ ಒಂದು ಅಪಘಾತದಂತಹ ಘಟನೆ. ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಿರುವುದನ್ನೆಲ್ಲ ಮಾಡಿದೆ.

ಅದೂ ಅಲ್ಲದೆ ಆಕೆಯ ಗಂಡನಿಗೂ ಒಂದು ವ್ಯಕ್ತಿತ್ವ ಅಂತ ಇತ್ತು.. ಬುದ್ಧಿಶಕ್ತಿ ವಿವೇಕ ಎಲ್ಲ ಇತ್ತು. ಈ ಎಲ್ಲದರ ಆಧಾರದ ಮೇಲೆ ಆತ ''ಆ ಉದ್ಯೋಗವನ್ನೇ'' ಮಾಡಲು ಅಥವಾ ಅದೇ ಉದ್ಯೊಗದಲ್ಲೆ ಮುಂದುವರೆಯಲು ತನ್ನ ವಿವೆಚನಾಪುರ್ವಕವಾಗಿ ನಿರ್ಧಸಿರುತ್ತಾನೆ. ಹಾಗೂ ಆ ಉದ್ಯೋಗದಿಂದ ದೊರೆಯುವ ಎಲ್ಲ ರೀತಿಯ ಪ್ರಯೊಜನಗಳನ್ನೂ ಸಹ ವಿವೆಚನಾಪುರ್ವಕವಾಗಿ ಪಡೆದಿರುತ್ತಾನೆ. ಆತ ಆ ಉದ್ಯೋಗದಿಂದ ಪಡೆದ ಪ್ರಯೋಜನಗಳಲ್ಲಿ ಒಂದು ಭಾಗ ಆತನ ಹೆಂಡತಿಗೂ ಕೂಡ ಸಂದಿರುತ್ತದೆ. ಆತನ ಮರಣಾ ನಂತರವೂ ಕೂಡ ಪೆನ್ಶನ್ನು, ಫಂಡು, ಸಮಾಜದಲ್ಲಿ ಗೌರವ ಮುಂತಾಗಿ ಅನೇಕ ಸೌಲಭ್ಯಗಳು ಈಕೆಗೆ ಸಿಕ್ಕಿದೆ. ಹೀಗಾಗಿ ಆಕೆ ತಾನು ''ಗಂಡನನ್ನು ಕೊಟ್ಟೆ'' ಎಂದು ಭಾವಿಸುವುದು ಅತಾರ್ಕಿಕವಾಗುತ್ತದೆ. ಈ ರೀತಿಯ ಯಾವುದೇ ಸೌಲಭ್ಯಗಳನ್ನು ಹಾಗೂ ಸಂಬಳವನ್ನೂ ಆಕೆ ಮತ್ತು ಆಕೆಯ ಗಂಡ ಪಡೆಯದೇ ಇದ್ದಲ್ಲಿ ಆಕೆಯ ಭಾವ ಸರಿಯಾದದ್ದು. ಆದರೆ ಹಾಗಾಗಿಲ್ಲ. 

ಇನ್ನು ಆಕೆ ''ಕೊಟ್ಟೆ'' ಎಂದು ಒತ್ತಿ ಹೇಳುವಾಗ ಮರೆತು ಹೋಗುತ್ತಿರುವ ಸಂಗತಿ ಏನೆಂದರೆ ಆಕೆ ಮದುವೆ ಆಗುವುದಕ್ಕೂ ಮುಂಚಿನಿಂದಲೂ ಆಕೆಯ ಗಂಡ ಆ ಉದ್ಯೋಗವನ್ನು ಮಾಡುತ್ತಿದ್ದ ಮತ್ತು ಆತ ತನ್ನ ಸ್ವಂತ ನಿರ್ಧಾರದಿಂದ ಸಂತೋಷ ಪೂರ್ವಕವಾಗಿ ಆ ಉದ್ಯೋಗಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದ. ಹೀಗಾಗಿ ಆತ ತನ್ನನ್ನು ತಾನು ದೇಶಕ್ಕೆ 'ಕೊಟ್ಟುಕೊಂಡ' ಎನ್ನುವುದು ಒಂದು ಮಟ್ಟದಲ್ಲಿ ಸಮಂಜಸವಾಗಿ ತೋರುತ್ತದೆ. ಆದರೆ ಆತನ ಪತ್ನಿ ತಾನು ''ಆತನನ್ನು ಕೊಟ್ಟೆ' ಎಂದು ಹೇಳುವುದು ಅಷ್ಟು ಸಮಂಜಸವಲ್ಲ. ಆತನಿಗೆ ತನ್ನದೇ ಆದ ಅಸ್ತಿತ್ವ ಇತ್ತು. ಈಕೆ 'ತಾನು ಕೊಟ್ಟೆ' ಎಂದು ಹೇಳುವುದರ ಮೂಲಕ ಅದೆಲ್ಲವನ್ನು ನಿರಾಕರಿಸಿ ತನ್ನ ಪತಿಯನ್ನು ತನ್ನ ಸ್ವಂತ ಸೊತ್ತು ಅಥವಾ ತನ್ನ ಕೈಗೊಂಬೆ ಎಂದು ಭಾವಿಸಿದಂತಾಗುತ್ತದೆ. ಈ ಉದ್ಯೋಗದಲ್ಲಿ ಇಂತಹ ಅಪಾಯವಿದೆ ಅಂತ ಆಕೆಗೆ ಮೊದಲೇ ತಿಳಿದಿತ್ತು. ಹೀಗಾಗಿ ಮೊದಲೇ ಆ ಉದ್ಯೋಗ ಮತ್ತು ಆ ಉದ್ಯೋಗದ ಕಾರಣಕ್ಕಾಗಿ ದೊರೆಯುವ ಎಲ್ಲ ಸುಖ ಸೌಲಭ್ಯಗಳನ್ನು ನಿರಾಕರಿಸಿದ್ದರೆ ಇವತ್ತಿನ ಈ ದುಃಖದ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ.
 (ನಮಗೆ ಏನಾದರೂ ಅನಾಯಾಸವಾಗಿ ಸಿಕ್ಕರೆ ''ಇದು ಯಾಕೆ ? ನನಗೆ ಯಾಕೆ ಸಿಗುತ್ತಿದೆ? ನಾನು ಅದಕ್ಕೆ ಯೋಗ್ಯನೇ/ಳೇ ? ನಾನು ಸ್ವೀಕರಿಸಬಹುದೇ ? ಇದು ನಮಗೆ ಸಿಗಲಿಕ್ಕೆ ಯಾರು ಕಾರಣ ..? ಯಾರು ಜವಾಬ್ದಾರಿ ? '' ಮುಂತಾಗಿ ನಾವು ಯೋಚಿಸುವುದಿಲ್ಲ. ಕೈ ಚಾಚಿ ಎಲ್ಲವನ್ನೂ ಬಾಚಿಕೊಳ್ಳುತ್ತೆವೆ. ಆದರೆ ಕಷ್ಟ ಬಂದಾಗ ಮಾತ್ರ  ಇದು ಯಾಕೆ ಹೀಗೆ ..? ನಮಗೆ ಯಾಕೆ ಈ ಕಷ್ಟ ? ಇದಕ್ಕೆ ಅವರು ಜವಾಬ್ದಾರರು.. ಅವರಿಂದ ಹಿಂಗಾಯಿತು ಅನ್ನುವ ಆಪಾದನೆಗಳನ್ನು ಮಾಡ್ತೇವೆ. ''ಸುಖ ಬಂದಾಗ ಮೈ ಮರೆತು ವಿಮರ್ಶೆ ಮಾಡದೇ ಅನುಭವಿಸುವುದು''  ಮನುಷ್ಯ ಸಹಜ ಸ್ವಭಾವ ಮತ್ತು ಆ ಅಜ್ಞಾನವೇ ದುಃಖಕ್ಕೆ ಕಾರಣ.)


ಇನ್ನು, ಆಕೆ ತನ್ನ ಗಂಡನನ್ನು ದೇಶಕ್ಕೆ ''ಕೊಟ್ಟಿದ್ದಾಳೆ'' ಅಂತಲೇ ಒಪ್ಪಿಕೊಂಡು ನೋಡುವುದಾದರೆ ಅದಕ್ಕೆ ''ಪ್ರತಿಯಾಗಿ'' ಆಕೆಗೆ ದೇಶದಿಂದ ಎನೂ ಸಿಗಲೇ ಇಲ್ಲವೇ ..?  ಅಥವಾ ಆಕೆ ಸಿಕ್ಕಿದ್ದನ್ನು ತಿರಸ್ಕರಿಸಿದ್ದಾಳೆಯೇ ..?  ಇದರ ಬಗ್ಗೆ ಎಲ್ಲವೂ ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಿದೆ. 

ಇನ್ನು ಆ ಟೋಲ್  ಗೇಟಿನ ವಿಷಯಕ್ಕೆ ಸಂಬಂಧಿಸಿದಂತೆಯೂ ಕೂಡ ನೀಡಬೇಕಾದ ಗುರುತಿನ  ಪತ್ರವನ್ನೂ  ಸರ್ಕಾರ ನೀಡಿದೆ. ಸಾಮಾನ್ಯವಾಗಿ ಟೋಲ್  ಗೆಟ್ ಗಳಲ್ಲಿ ಯಾವ ಯಾವ ಅಧಿಕಾರಿಗಳ ವಾಹನಗಳನ್ನು ಉಚಿತವಾಗಿ ಬಿಡಬೇಕು ಎಂಬ ಬಗ್ಗೆ ಒಂದು ಪಟ್ಟಿ ಮಾಡಿ ಬೋರ್ಡ್ ಹಾಕಿರುತ್ತಾರೆ ಹಾಗೂ ಟೋಲ್ ನಲ್ಲಿ ಕೂರುವ ವ್ಯಕ್ತಿಗಳಿಗೆ ಅದರ ಬಗ್ಗೆ ಮಾಹಿತಿ ಇರುತ್ತದೆ. ಈ ಶ್ರೀಮತಿ ಸಲಸ್ಕರ್ ರವರು ಹೋದಾಗ ಅಲ್ಲಿ ಕುಳಿತಿದ್ದ ವ್ಯಕ್ತಿಗೆ ಅದರ ಬಗ್ಗೆ ಮಾಹಿತಿ ಇರಲಿಕ್ಕಿಲ್ಲ.. ಅಥವಾ ಅವರ ಮೇಲಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಅಶೋಕ ಚಕ್ರ ಪಡೆದವರಿಗೆ ಇರುವ ವಿನಾಯಿತಿಯ ಉಲ್ಲೇಖ ಇರಲಿಕ್ಕಿಲ್ಲ. ಆ ಒಂದು ಬಾರಿಗೆ ಟೋಲ್ ನಲ್ಲಿ ಹಣ ಪಾವತಿ ಮಾಡಿ  ಆಮೇಲೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಆ ತೊಡಕನ್ನು ಸರಿಪಡಿಸಬಹುದಿತ್ತು. ಅಲ್ಲಿನ ಟೋಲ್ ನಲ್ಲಿ ಹಾಕಿದ ವಿನಾಯಿತಿಯ ಫಲಾನುಭವಿಗಳ ಸಾಲಿನಲ್ಲಿ ಅಶೋಕ ಚಕ್ರ ಪಡೆದವರ ವರ್ಗವನ್ನು ಸೇರಿಸುವ ವ್ಯವಸ್ಥೆ ಮಾಡಲು ಕೋರಬಹುದಾಗಿತ್ತು.

 ಇಷ್ಟು ಚಿಕ್ಕ ಘಟನೆಗೆ ಅಷ್ಟೊಂದು ಮಹತ್ವ ಕೊಟ್ಟು "ದೇಶಕ್ಕಾಗಿ ಗಂಡನನ್ನೇ ಕೊಟ್ಟವಳಪ್ಪಾ ನಾನು” ಎಂದೆಲ್ಲ ಅನಗತ್ಯವಾಗಿ  ಟಿವಿಯ ಕ್ಯಾಮೆರಾಗಳ ಮುಂದೆ ಹೇಳಿಕೊಂಡು ದುಃಖಿಸುವ ಅಗತ್ಯ ಇರಲಿಲ್ಲ. ಅದನ್ನು ನಮ್ಮ ವರದಿಗಾರರು ಅತಿರಂಜಕವಾಗಿ ಚಿತ್ರಿಸಿ, ಅದರ ಬಗ್ಗೆ ಬರೆದು ನಮ್ಮೆಲ್ಲರನ್ನು ಭಾವುಕ ಕಲಕುವಿಕೆಗೆ ಒಳಪಡಿಸುವ ಅಗತ್ಯವಿರಲಿಲ್ಲ.  ಆದರೆ ನಾನು ಮೊದಲೇ ಹೇಳಿದಂತೆ ನಾವೆಲ್ಲರೂ ಸ್ವಾನುಕಂಪದ ಗೀಳಿಗೆ ಬಿದ್ದು ಇಲ್ಲದ ದುಃಖವನ್ನು ಮೈ ಮೇಲೆ ಎಳೆದುಕೊಂಡು ಅದರಲ್ಲಿ ಹೊರಳಾಡಿ ಸುಖಿಸುತ್ತೇವೆ. ನಮಗೆ ''ಅಬ್ಬೂ'' ಸಿಂಡ್ರೋಮ್ ಬಹಳ ಇಷ್ಟ. ನಾವು ಅದನ್ನು ಎಂಜಾಯ್ ಮಾಡತೊಡಗಿದ್ದೇವೆ.


No comments:

Post a Comment