Friday, September 6, 2013

ರಾಮ ಬರುತ್ತಿದ್ದಾನೆ


ಅವತ್ತು ರಾತ್ರಿ ಅಯೋಧ್ಯೆಯೇ ನಿಃಶಬ್ದವನ್ನು ಹೊದ್ದು ಮಲಗಿದಂತಿದೆ. ಆದರೆ ಶ್ರೀಹಿತನಿಗೆ ಮಾತ್ರ ಕಣ್ಣು ಮುಚ್ಚಿಲಿಕ್ಕಾಗುತ್ತಿಲ್ಲ. ಮೆತ್ತಗಿನ ಹಾಸಿಗೆಯಲ್ಲಿದ್ದರೂ ಅದು  ಮುಳ್ಳಿನಿಂದ ಕೂಡಿದೆಯೇನೋ ಏಂಬಂತೆ ಹೊರಳಾಡುತ್ತಿದ್ದಾನೆ. ನಿದ್ರಿಸುವ ಪ್ರಯತ್ನಗಳೆಲ್ಲ ವಿಫಲವಾಗಿ ಎದ್ದು ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲೇ ದೂರದಲ್ಲಿ ಯಾರೋ ರೋದಿಸುತ್ತಿರುವ ಶಬ್ದ ಕೇಳಿಬಂತು. ಮಂಚ ಇಳಿದು ಆ ಧ್ವನಿ ಬಂದ ಕಡೆಗೆ ಹೋಗಿ ನೋಡಿದರೆ ಒಬ್ಬ ಸ್ತ್ರೀ ಸರಯೂ ನದಿಯ ದಂಡೆಯ ಮೇಲೆ ಕುಳಿತು ಅಳುತ್ತಿದ್ದದ್ದು ಕಾಣಿಸಿತು.  “ಯಾರಮ್ಮ ನೀನು? ಯಾಕೆ ಅಳುತ್ತಿದ್ದೀ’’ ಅಂತ ಕೇಳಿದ.  “ನಾನು ನಿದ್ರಾದೇವಿ..  ನಿನ್ನನ್ನು ಸಮೀಪಸಲಿಕ್ಕೆ ಸಾಧ್ಯವಾಗದೇ ಅವಮಾನಭಾರದಿಂದ ಅಳುತ್ತಿದ್ದೇನೆ’’ ಅಂದಳು.  ಅವಳ ಅಳುವಿಗೆ ಸರಯೂ ನದಿಯ ಗಲಗಲ ಶಬ್ದ ಉಪಶೃತಿಯಂತೆ ಕೇಳುತ್ತಿದೆ. ಶ್ರೀಹಿತನಿಗೆ ಏನು ಹೇಳಬೇಕೆಂದು ತೋಚದೇ ನಿಂತುಬಿಟ್ಟ.  ಅಷ್ಟರಲ್ಲೇ ಅವನಿಗೆ ಎಚ್ಚರವಾಯಿತು. ತಾನು ತನ್ನ ಹಾಸಿಗೆಯಲ್ಲೇ ಇರುವುದು ಹಾಗೂ ಅಲ್ಲಿಯವರೆಗಿನದ್ದೆಲ್ಲಾ ಕನಸೆಂದು ಮನವರಿಕೆಯಾಯಿತು. ಆದರೆ ಅಷ್ಟರಲ್ಲೇ ಒಂದು ಅನುಮಾನ. ನಿದ್ರೆ ಬರದೇಹೋದರೆ ಕನಸೇ ಬೀಳುವುದಿಲ್ಲವಲ್ಲ? ಹಾಗಾದರೆ ಅದು ನಿಜವಾಗಿಯೂ ಕನಸಾಗಿತ್ತಾ ?ಅಥವಾ ಅದು ತನ್ನದೇ ಭಾವಾವೇಶದಿಂದ ಉಂಟಾದ ಭ್ರಮೆಯಾ? ಎಲ್ಲವೂ ಸಂದಿಗ್ಧವಾಗಿದೆ. ಈ ಸಂದಿಗ್ಧತೆ ಎಚ್ಚರದಿಂದುಂಟಾದದ್ದು. ಸಂದಿಗ್ಧತೆಯಿಂದಾಗಿ ಯಾವ ಕ್ರಿಯೆಯನ್ನೂ ಸರಿಯಾಗಿ ಮಾಡಲಾಗುತ್ತಿಲ್ಲ. ಕಾಲು ಒಂದುಕಡೆ ನಿಲ್ಲುತ್ತಿಲ್ಲ. ಕಾಲು ನಿಂತರೂ ಮನಸು ನಿಲ್ಲುತ್ತಿಲ್ಲ.  ಹೌದು ಮತ್ತೆ.... ಅವನ ಆ ಹೊಯ್ದಾಟಕ್ಕೆ ಕಾರಣವಿದೆ.  ರಾಮ ಬರುತ್ತಿದ್ದಾನಂತೆ. ಸೀತಾ-ಲಷ್ಮಣ ಸಮೇತನಾಗಿ ಪುಷ್ಪಕವಿಮಾನವೇರಿ ಬರುತ್ತಿದ್ದಾನಂತೆ. ರಾವಣಸಂಹಾರ ಮಾಡಿ, ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿ ಬರುತ್ತಿದ್ದಾನಂತೆ.                                            

                                                ******************** 

ಶ್ರೀಹಿತನಿಗೆ ಈಗ ಇಪ್ಪತ್ತರ ಹರೆಯ. ಅವನ ತಾಯಿ ಕೈಕೇಯಿ ಮಹಾರಾಣಿಯ ಅಂತಃಪುರದ ಪ್ರಮುಖ ಪರಿಚಾರಕಿ. ತಂದೆ ಅರಮನೆಯ ರಥ ಓಡಿಸುವವ. ರಾಮ ಕಾಡಿಗೆ ಹೊರಟಾಗ ಇವನಿಗೆ ಆರು ವರ್ಷ ವಯಸ್ಸು. ಅರಮನೆ ದಾಸಿಯರ ಜೊತೆ ಗುಳಿಮಣೆ ಆಟ ಹಾಗೂ ಅವರ ಮಕ್ಕಳ ಜೊತೆ ಮರಕೋತಿಯಾಟ ಆಡಿ ದಣಿದು ಮಲಗುತ್ತಿದ್ದ. ಅವನಿಗೆ ಚೆನ್ನಾಗಿ ನೆನಪಿದೆ. ಆ ದಿನ ಅವನ ಜೊತೆಗೆ ಆಟಕ್ಕೆ ಯಾರೂ ಬರಲಿಲ್ಲ. ಇವನು ಕರೆದರೂ ಕೂಡ ಯಾರೂ ಇವನನ್ನು ಮಾತಾಡಿಸಲೂ ಇಲ್ಲ. ಎಲ್ಲರೂ ದುಃಖದಲ್ಲಿ ಮುಳುಗಿದ್ದಾರೆ. ಆಟಕ್ಕೆ ಯಾರೂ ಬಾರದ್ದರಿಂದ ಅವನಿಗೆ ತಡೆಯಲಾಗದಷ್ಟು ಕೋಪ. ಯಾರ ಮೇಲೋ ತಿಳಿಯದ ಆಕ್ರೋಷ. ಬಿಕ್ಕುತ್ತ ಅಮ್ಮನ ಕೋಣೆಗೆ ಹೋದ. ಅಲ್ಲಿ ಒಂದು ಮೂಲೆಯಲ್ಲಿ ಕುಳಿತು ಅಮ್ಮ ಕೂಡ ಅಳುತ್ತಿದ್ದಳು. ಅಮ್ಮನನ್ನು ಮಾತಾಡಿಸಬೇಕಂಬಷ್ಟರಲ್ಲಿ ಅಂತಃಪುರದ ವೀಧಿಯಿಂದ ಎನೋ ಕಲರವ ಕೇಳಿಬಂತು. ಕುತೂಹಲದಿಂದ ಓಡುತ್ತಾ ಹೊರಬಂದ. ಅಲ್ಲಿ ಕಂಡ ದೃಶ್ಯವನ್ನು ಅವನು ತನ್ನ ಜೀವನದಲ್ಲಿ ಮುಂದೆಂದೂ ಮರೆತಿಲ್ಲ.  ನಾರುಬಟ್ಟೆಗಳನ್ನುಟ್ಟ ರಾಮ ಸೀತೆಯ ಜೊತೆ ನಡೆದು ಬರುತ್ತಿದ್ದಾನೆ. ಲಕ್ಷ್ಮಣ ಅವರನ್ನು ಅನುಸರಿಸುತ್ತಿದ್ದಾನೆ. ಇಡೀ ಅಯೋಧ್ಯೆಯೇ ಆ ಮೂವರನ್ನು ಹಿಂಬಾಲಿಸುತ್ತಿದೆ.  ಶ್ರೀಹಿತ ಕಣ್ಣುಗಳನ್ನು ದೊಡ್ಡವು ಮಾಡಿ ನೋಡಿದ. ಅವನ ಎಳೆಯ ಮನಸಿಗೆ ಅರ್ಥವಾಗಲಿಲ್ಲ. ಹಿಂತಿರುಗಿ ಓಡಿ ಅಮ್ಮನ ಬಳಿ ಸೇರಿ “ ಅಮ್ಮಾ.. ಎಲ್ರೂ ಊರು ಬಿಟ್ಟು ಹೋಗ್ತಾ ಇದಾರೆ.. ನೋಡೇ” ಅಂದ.  ಅವನ ಅಮ್ಮ ಅವನನ್ನು ಬಾಚಿ ತಬ್ಬಿ ಭೋರೆಂದು ಅಳತೊಡಗಿದಳು.ಅವಳ ಅಳುವಿಗೆ ಇನ್ನೂ ಒಂದು ಕಾರಣವಿದೆ.
ಇಡೀ ಅಯೋಧ್ಯೆಯಲ್ಲಿ ಕೈಕೇಯಿಯನ್ನು ಬಯ್ಯದವರಿಲ್ಲ. ಅಂತಹ ಕೈಕೇಯಿಯ ಪ್ರಮುಖ ಪರಿಚಾರಕಿ ಆದ್ದರಿಂದ ಶ್ರೀಹಿತನ ಅಮ್ಮನಿಗೂ ಅನೇಕರಿಂದ ಅಪಮಾನವಾಗಿತ್ತು. ಶ್ರೀಹಿತನಿಗೆ ಅಮ್ಮನ ದುಃಖಕ್ಕೆ ಕಾರಣ ತಿಳಿಯಲಿಲ್ಲ. ಯಾಕೆ, ಏನು? ಒಂದೂ ತಿಳಿಯದೇ ಅಮ್ಮನ ಜೊತೆಗೂಡಿ ತಾನೂ ಧ್ವನಿಯೆತ್ತಿ ಅಳತೊಡಗಿದ.

ಆ ಘಟನೆ ನಡೆದ ಮೇಲೆ ಹದಿನಾಲ್ಕು ವರ್ಷಗಳು ಉರುಳಿ ಹೋಗಿವೆ ಈಗ. ಶ್ರೀಹಿತ ಈಗ ಬಾಲಕನಾಗಿ ಉಳಿದಿಲ್ಲ. ಆದರೆ ಕಳೆದ ಆ ಹದಿನಾಲ್ಕು ವರ್ಷಗಳಲ್ಲಿ ರಾಮನ ಬಗೆಗಿನ ಕಥೆಗಳನ್ನೆಲ್ಲ ಕೇಳುತ್ತ ಪುಳಕಗೊಳ್ಳುತ್ತಲೇ ಬೆಳೆದಿದ್ದಾನೆ. ಊಹೆ ವಾಸ್ತವಕ್ಕಿಂತಲೂ ಹೆಚ್ಚು ಸುಂದರವಲ್ಲವೇ..? ಹೀಗಾಗಿ ಕೇಳಿದ ಕಥೆಗಳಿಗಿಂತ ಸುಂದರವಾದ ಕಲ್ಪನೆಗಳನ್ನು ಕಣ್ತುಂಬಿಸಿಕೊಂಡಿದ್ದಾನೆ.
ರಾಮ ಕಲ್ಲನ್ನು ಅಹಲ್ಯೆಯಾಗಿಸಿದ ಕಥೆಯನ್ನು ಬಾಯಿಬಿಟ್ಟುಕೊಂಡು ಕೇಳಿದ್ದ. ಗುಂಪು ಗುಂಪಾಗಿ ಬರುವ ಅಸುರರನ್ನು ಚೆಂಡಾಡುತ್ತಿರುವ ಧೀರ ರಾಮನನ್ನು ತನ್ನ ಕಣ್ತುಂಬ ಊಹಿಸಿಕೊಂಡು ನಿದ್ರೆಗೆಟ್ಟಿದ್ದ. ಹೀಗೆ ಶ್ರೀಹಿತನ ವಯಸ್ಸಿನ ಜೊತೆಯೇ ರಾಮನೂ ಕೂಡ ಅವನ ಮನಸ್ಸಿನಲ್ಲಿ ಬೆಳೆದು ತುಂಬ ಔನ್ನತ್ಯದಲ್ಲಿ ನಿಂತಿದ್ದಾನೆ. ಅಂತಹ ರಾಮ ನಾಳೆ ಅಯೋಧ್ಯೆಗೆ ಮರಳಿ ಬರುತ್ತಿದ್ದಾನಂತೆ. ಇವನಿಗೆ ನಿದ್ದೆಯಾದರೂ ಹೇಗೆ ಬಂದೀತು..?   ಅವನು ಹಾಸಿಗೆಯಿಂದೆದ್ದು ಹೊರಬಂದ
                                                              ********************

ಶ್ರೀಹಿತನಿಗೆ ಅಯೋಧ್ಯೆಯ ಮೇಲೆ ತುಂಬಾ ಕೋಪ ಬರುತ್ತಿದೆ. ರಾಮ ಬರಲಿರುವ ಹಿಂದಿನ ರಾತ್ರಿಯೂ ಕೂಡ ಎಲ್ಲರೂ ಎಷ್ಟು ಆರಾಮಾಗಿ ನಿದ್ರಿಸುತ್ತಿದ್ದಾರಲ್ಲ ಅನ್ನೋದು ಅವನ ಕೋಪಕ್ಕೆ ಕಾರಣ. ರಾಮ ಬರುವುದು ವಿಳಂಬವಾದ ಕಾರಣಕ್ಕೆ ಭರತ ಹಿಂದಿನ ದಿನವೇ ಅಗ್ನಿಪ್ರವೇಶ ಮಾಡಹೊಟಿದ್ದ. ಅಷ್ಟರಲ್ಲಿಯೇ ಹನುಮಂತ ಹಾರಿಬಂದು ಭರತನನ್ನು ತಡೆದು ರಾಮಾಗಮನದ ಸಂದೇಶವನ್ನು ತಿಳಿಸಿ ಅಯೋಧ್ಯೆಯನ್ನು ಹರ್ಷದಲ್ಲಿ ಮುಳುಗಿಸಿದ್ದ.
ಆ ಕ್ಷಣದಿಂದಲೇ ಅಯೋಧ್ಯೆಯಲ್ಲಿ ಯಾರಿಗೂ ನಿದ್ರಾಹಾರಗಳ ಪರಿವೇ ಇಲ್ಲ. ಎಲ್ಲರೂ ಸೇರಿ ನಗರವನ್ನು ಸಿಂಗರಿಸುದರಲ್ಲಿ ಮಗ್ನರಾಗಿದ್ದರು.
ಕೌಸಲ್ಯೆಯ ಕಣ್ಣಲ್ಲಿ ಹನಿಮುತ್ತುಗಳ ಸಾಲು, ಸುಮಿತ್ರೆಯ ಕಣ್ಣುಗಳಲ್ಲಿ ಮಣಿದೀಪಗಳು ಬೆಳಗುತ್ತಿದ್ದರೆ, ಕೈಕೇಯಿಯ ಮೈಯೆಲ್ಲ ಕಣ್ಣಾಗಿ ಹೋಗಿದೆ. ಮೂರೂ ಜನ ತಾಯಂದಿರು ತಮ್ಮ ಕಣ್ಣುಗಳ ದೀಪಗಳ ಬೆಳಕಿನಿಂದ ರಾಮ ಬರಲಿರುವ ದಾರಿಯನ್ನು ಬೆಳಗತೊಡಗಿದ್ದರು. 
ಭವನಗಳಿಗೆ ಸುಣ್ಣ ಬಣ್ಣ ಬಳಿಯಲಾಯಿತು. ರಸ್ತೆಗಳನ್ನೆಲ್ಲ ತೊಳೆದು ರಂಗೋಲಿಯ ಚಿತ್ತಾರಗಳಿದ ಸಿಂಗರಿಸಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ರಾಮನಾಗಿ ಅವತರಿಸಿದ ವಿಷ್ಣುವನ್ನು ಬಿಟ್ಟಿರಲಾರದ ಆದಿಶೇಷ ಅಯೋಧ್ಯೆಗೆ ಬಂದು ತನ್ನ ಶರೀರವನ್ನು ಕೋಟೆಯಾಗಿಯೂ, ಹೆಡೆಗಳನ್ನು ರಾಜಸೌಧಗಳನ್ನಾಗಿಯೂ ಮಾಡಿಕೊಂಡು ನಿಂತಿರುವಂತೆಯೂ ಅಯೋಧ್ಯಾ ನಗರ ಇತ್ತು. ಆದರೆ ಆ ಆದಿಶೇಷನ ಒಡೆಯನಾದ ರಾಮ ಮಾತ್ರ ನಗರ ಬಿಟ್ಟು ಕಾಡಿಗೆ ಹೊರಟು ಹೋಗಿದ್ದ. ಅಂದು ಹತಾಶನಾಗಿದ್ದ ಆದಿಶೇಷನೂ ಕೂಡ ಇಂದು ರಾಮಾಗಮನ ವಾರ್ತೆಯನ್ನು ಕೇಳಿ ಮೈಕೊಡವಿ ಪೊರೆ ಬಿಟ್ಟು ಮತ್ತೆ ಮಿರಿಮಿರಿ ಮಿಂಚುತ್ತಿರುವಂತಿದೆ. ಭವನಗಳ ದೀಪಗಳು ಆದಿಶೇಷನ ಹೆಡೆಯಲ್ಲಿನ ಮಣಿಗಳಂತೆ ಕಂಗೊಳಿಸುತ್ತಿವೆ.
ಎಲ್ಲಿ ನೋಡಿದರಲ್ಲಿ ಮಕರ ತೋರಣಗಳೂ, ಗಂಧ ಸೂಸುವ ಮಾಲೆಗಳೂ, ಕಸ್ತೂರಿ ಬೆರೆಸಿದ ನೀರಿನಿಂದ ಸಾರಿಸಿದ ಅಂಗಳಗಳೂ, ಅವುಗಳಲ್ಲಿನ ಮುತ್ತಿನ ರಂಗೋಲಿಗಳೂ ಶೋಭಿಸುತ್ತಿವೆ. ಸಡಗರದ ಕೆಲಸಗಳಿಗೆ ಅಡ್ಡ ಬರುತ್ತಾರೆ ಅನ್ನುವ ಕಾರಣಕ್ಕೆ ತಾಯಂದಿರು ತಮ್ಮ ತಮ್ಮ ಚಿಕ್ಕ ಮಕ್ಕಳಿಗೆ ಬೇಗನೇ ಸ್ತನ್ಯ ಕೊಟ್ಟು ಮಲಗಿಸುವ ಭರದಲ್ಲಿ  ''ಲಾಲೀ..ಲಾಲೀ.. ಮೇಘಶ್ಯಾಮ ಲಾಲೀ..ತಾಮರಸನಯನಾ ಲಾಲೀ..  ದಶರಥ ನಂದನ ಲಾಲೀ.. ರಾಮ ಲಾಲೀ'' ಅಂತ ಹಾಡತೊಡಗಿದರು. ನಿಧಾನವಾಗಿ ನಿದ್ರೆಗೆ ಜಾರುತ್ತಿದ್ದ ಕಂದಮ್ಮಗಳು ಲಾಲಿಹಾಡಿನಲ್ಲಿ ''ರಾಮ'' ಶಬ್ದ ಕಿವಿಗೆ ಬಿದ್ದಕೂಡಲೇ ಬೆಚ್ಚಿದಂತೆ ಕಣ್ಣುಗಳನ್ನು ತೆಗೆದು ಎದ್ದು ಕೂರುತ್ತಿದ್ದಾರೆ. ತಾಯಂದಿರೂ ಕೂಡ ರಾಮಮನನ್ನು ಕಾಣಲೋಸುಗ ಕಾತರರಾಗಿದ್ದಾರೆ. ಹೀಗೆಯೇ ಇದು ಕಳೆದೆರಡು ದಿನಗಳಿಂದ ಇಡೀ ಅಯೋಧ್ಯೆಯಲ್ಲಿ ನಡೆಯುತ್ತಿದೆ.
ಹೀಗೆ ಅಯೋಧ್ಯೆಯನ್ನಲಂಕರಿಸಿದ ಪ್ರಜೆಗಳೆಲ್ಲರೂ ಈಗ ಗಾಢನಿದ್ರೆಗೆ ಜಾರಿರುವಂತೆ ತೋರುತ್ತಿದೆ.  ಪುರವೀಧಿಗಳೆಲ್ಲ ಬಿಕೋ ಎನ್ನುತ್ತಿವೆ. ಆ ನಿರ್ಜನ ವೀಧಿಗಳಲ್ಲಿ ಹಾದು ಬಂದ ಮಧ್ಯರಾತ್ರಿಯ ತಂಗಾಳಿ ಶ್ರೀಹಿತನಿಗೆ ಸೋಕಿ ಮುಂದೆ ಹೋಗುತ್ತಿದೆ. ಆ ಗಾಳಿ ದಕ್ಷಿಣದಿಂದ ಬರುತ್ತಿದೆ. ಎಷ್ಟೋ ಯೋಜನಗಳ ದೂರದಲ್ಲಿರುವ ರಾಮನನ್ನು ಕೂಡ ತಾಕಕೊಂಡು ಬಂದ ಗಾಳಿ ಇದಾಗಿರಬಹುದು ಎಂಬ ಆಲೋಚನೆ ಮನಸಿನಲ್ಲಿ ಮೂಡಿತು. ಆ ಆಲೋಚನೆಯಿಂದಲೇ ಶ್ರೀಹಿತನಿಗೆ ಶರೀರ ಕಂಪಿಸಿದಂತಾಗಿ ರೋಮಾಂಚವಾಯಿತು.


ಅವನಿಗೆ ಆಗ ಒಂಟಿಕಾಲಿನ ಬೀರನ ನೆನಪಾಯಿತು. ವೀರೇಶ ಎಂಬ ಅವನ ಹೆಸರು ಅಪಭ್ರಂಶವವಾಗಿ ''ಬೀರ'' ಅಂತಾಗಿತ್ತು.   ರಾಮನೆಂದರೆ ಬೀರನಿಗೆ ಎಲ್ಲಿಲ್ಲದ ಭಕ್ತಿ. ಮರದ ಮೇಲೆ ಹತ್ತಿಕುಳಿತು  ಸುತ್ತಲೂ ಗೆಳೆಯರನ್ನು ಕೂರಿಸಿಕೊಂಡು ಶಿವಧನುಸ್ಸನ್ನು ರಾಮ ಮುರಿದ ಕಥೆಯನ್ನು ಅಭಿನಯಪೂರ್ವಕವಾಗಿ ಹೇಳುವಾಗ ಮರದಿಂದ ಧೊಪ್ಪನೆ ಬಿದ್ದಾಗ ಅವನದೊಂದು ಕಾಲು ಮುರಿದಿತ್ತು.  ಅಂದಿನಿಂದ ಗೆಳೆಯರೆಲ್ಲ ಅವನನ್ನು ಕುಂಟಬೀರ ಅಂತಲೇ ಕರೆಯುತ್ತಿದ್ದರು. ಅದರಲ್ಲಿಯೂ ಕೂಡ ಅವನು ಸಂತೋಷ ಕಾಣುತ್ತಿದ್ದ. ಕುರುಡು ಕಾಗೆಗಿಂತ ತಾನು ಎಷ್ಟೋ ಭಾಗ್ಯವಂತ ಅನ್ನುತ್ತ ಕುಂಟಿಕೊಂಡೇ ಓಡಾಡುತ್ತಿದ್ದ. ಅವನೂ ಕೂಡ ಈಗ ಮಲಗಿ ನಿದ್ರಿಸಿರುವಂತೆ ತೋರುತ್ತಿದೆ.  ನಿನ್ನೆ ಸಂಜೆ ಮೊಳಗಿದ ಭೇರಿ ವಾದ್ಯಗಳೂ, ಮಗಳವಾದ್ಯಗಳೂ ವಿಶ್ರಾಂತಿ ಪಡೆಯುತ್ತಿವೆ.
ಶ್ರೀಹಿತ ಆಕಾಶದ ಕಡೆಗೆ ನೋಡಿದ. ಚಂದ್ರ ಕಾಣುತ್ತಿಲ್ಲ. ಮೇಘಗಳು ಮಾತ್ರ ಮಸುಕಾಗಿ ಗೋಚರವಾಗುತ್ತಿವೆ. ಅಷ್ಟರಲ್ಲೇ ಅವನಿಗೆ ಶುಭ್ರ ಬಿಳುಪಿನ ಚಂದ್ರನ ಮೇಲೆ ಕಪ್ಪು ಮಚ್ಚೆ ಹೇಗುಂಟಾಯಿತು ಅನ್ನುವ ಬಗ್ಗೆ ಬೀರ ಹೇಳಿದ ಮಾತು ನೆನಪಾಯಿತು. ರಾಮನ ಜೈತ್ರಯಾತ್ರೆ ಲಂಕೆಗೆ ಹೊಟಾಗ ವಾನರ ಸೈನ್ಯದ ಕಾಲಿನ ಧೂಳು ಚಂದ್ರನ ಮೇಲೆ ಕಪ್ಪು ಮಚ್ಚೆಯನ್ನು ಉಂಟುಮಾಡಿತಂತೆ.
ಆ ಮಾತು ಕೇಳಿದ ಶ್ರೀಹಿತನಿಗೆ ಅನುಮಾನ ಉಂಟಾಯಿತು. ಚಂದ್ರ ಮೊದಲು ಹುಟ್ಟಿದನಾ?.. ರಾಮಚಂದ್ರ ಮೊದಲು ಹುಟ್ಟಿದನಾ?   ರಾಮ ಶಿಶುವಾಗಿದ್ದಾಗ ಚಂದ್ರ ಬೇಕೆಂದು ಹಟ ಹಿಡಿದಾಗ ಅವನ ತಾಯಿ ಕೌಸಲ್ಯೆ ''ಆ ಚಂದ್ರ ನಿನಗಿಂತ ಏನು ಹೆಚ್ಚು ಸುಂದರನಲ್ಲ.. ಹೋಗಲಿ ಬಿಡು'' ಎಂದು ರಮಿಸುತ್ತಿದ್ದ ಸಂಗತಿ ಇವನಿಗೆ ತನ್ನ ತಾಯಿ ಹೇಳಿದ್ದಳು.  ಅದರ ಆಧಾರದ ಮೇಲೆ ಇವನ ಸಂಶಯ ನಿರ್ಣಯವಾಗಿ ಬದಲಾದೊಡೆ ಮನಸು  ತಡೆಯಲಾರದೇ ಬೀರನನ್ನು ಕೇಳಿಯೇಬಿಟ್ಟ.
ಇವನ ಪ್ರಶ್ನೆ ಕೇಳಿ ಒಂದೇ ಕಾಲಿನಲ್ಲಿ ಛಂಗನೆ ಜಿಗಿದು ಮೇಲೇರಿ ಬಂದಿದ್ದ ಬೀರ. ಭಕ್ತಿ ಇರುವಲ್ಲಿ ಅನುಮಾನವಿರಬಾರದೆಂದು ಬೋಧಿಸಿದ್ದ. ಆ ರೀತಿಯ  ಅನುಮಾನ ಬಂದದಕ್ಕಾಗಿ ಇಬ್ಬರೂ ಸೇರಿ ಕೆನ್ನೆ ತಟ್ಟಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡಿದ್ದರು.
ಅಂತಹ ಬೀರ ಕೂಡ ಇವತ್ತು ಮಲಗಿಬಿಟ್ಟನೇ..? ಅವನಿಗೆ ನಿದ್ರೆಯಾದರೂ ಹೇಗೆ ಬಂದಿದ್ದೀತು..?


ಶ್ರೀಹಿತ ತನ್ನ ನಡಿಗೆಯನ್ನು ಮುಂದುವರೆಸಿದ. ಬೀದಿಗಳಲ್ಲಿ ನಾಯಿಗಳ ಸುಳಿವೂ ಇಲ್ಲ.  ಎಲ್ಲರೂ ಸೇರಿ ನಿದ್ರಿಸುತ್ತಿರುವಂತಿದೆ. ಎಲ್ಲರೂ ಮಲಗಿದ್ದಾರೆ ಸರಿ.. ಈ ಜನಕ ಮಹಾರಾಜನಿಗೇನಾಯಿತು..?  ಮಗಳು ರಾಕ್ಷಸಸೆರೆಯಲ್ಲಿ ನಾನಾ ಕಷ್ಟಗಳನ್ನು ಕಂಡು, ಅಗ್ನಿಯಿಂದ ಪುನೀತಳೆನಿಸಿಕೊಂಡು ಬರುತ್ತಿದ್ದಾಳಲ್ಲ..  ಕಲಶಕನ್ನಡಿಗಳನ್ನು, ಮುತ್ತಿನಾರತಿಗಳನ್ನು ಎತ್ತಿ ಸ್ವಾಗತಿಸಬೇಕಾದ ಮಹಿಳೆಯರು ದಣಿದು ಮಲಗಿರಬಹುದು. ಆದರೆ ಜನಕರಿಗೇನಾಗಿದೆ? ಎದುರುಗೊಳ್ಲಲು ಕಾದು ನಿಲ್ಲಬಹುದಲ್ಲ.? ನೆಲ ಉಳುವಾಗ ಸಿಕ್ಕ ಹುಡುಗಿಯಲ್ಲವೇ. ಅದಕ್ಕೇ ಹೀಗೆ. ರಕ್ತ ಹಂಚಿಕೊಂಡ ಮಗಳಾಗಿದ್ದರೆ  ಹೀಗೆ ನಿಶ್ಚಿಂತೆಯಾಗಿ ನಿದ್ರಿಸುತ್ತಿದ್ದರೇ.?
ಶ್ರೀಹಿತನಿಗೆ ಅಯೋಧ್ಯೆಯ ಮೇಲೆ ಅಸಹ್ಯ ಉಂಟಾಯಿತು.
''ರಾಮ ವನವಾಸಕ್ಕೆ ಹೊರಟಾಗ ಭೂಮಿ ಆಕಾಶ ಒಂದಾಗುವಂತೆ ರೋದಿಸಿದವರು ಇವರೇನಾ?''  ಅಂದುಕೊಂಡ ಆಕ್ರೋಷದಿಂದ.
ಲಾಲಿಹಾಡುಗಳಲ್ಲಿನ ರಾಮನಾಮವನ್ನು ಕೇಳಿ ಏಳುತ್ತಿದ್ದ ಮಕ್ಕಳೂ ಕೂಡ ಹಾಲು ಮುಗಿದಿದ್ದರೂ ಬೆಲ್ಲ ಸವರಿದ ಮೊಲೆಚೀಪಿ ಮಲಗಿದಂತಿದೆ. 
ಮನುಷ್ಯರೆಲ್ಲಾ ಮಲಗಿದ್ದಾರೆ ಸರಿ. ಸ್ವಾರ್ಥಿಗಳಾದ ಮಾನವರು ಮರೆಯುವುದು ಸಹಜ. ಆದರೆ ಪ್ರಾಣಿಗಳಿಗೂ, ಪಕ್ಷಿಗಳಿಗೂ ಏನಾಗಿದೆ.. ಇಂದು?  ಒಂದು ಪಾರಿವಾಳವೂ ಕೂಡ ರಾಮನ ಬರುವಿಗಾಗಿ ''ಕುವಕುವ''ಗುಡುತ್ತಿಲ್ಲ. ಗಜಶಾಲೆಯಿಂದ ಒಂದೂ ಘೀಳಿಡುವ ಶಬ್ದಗಳಿಲ್ಲ. ಮಲಗಿದ ಜಿಂಕೆಗಳು ಬೆದರಿ ಏಳುವ ಸದ್ದಿಲ್ಲ. ಹಸುವಿನ ಅಂಬಾ ಎಂಬ ಕರೆಗಳಿಲ್ಲ.

ತಾನೆಂಥ ಹುಚ್ಚ.? ಊರ್ಮಿಳೆಯೊಬ್ಬಳನ್ನು ಬಿಟ್ಟು, ಅವಳ ಸಾಕು ಮೊಲವೂ ಸೇರಿದಂತೆ ಇಡೀ ಅಯೋಧ್ಯೆಯೇ ರಾಮನ ಬರುವಿಕೆಗೆ  ರಾತ್ರಿಯಿಡೀ ಜಾಗಾರ ಮಾಡಿ ಕಾಯುತ್ತದೆಯೆಂದುಕೊಂಡಿದ್ದ.
''ಹೇ ನಿದ್ರಾದೇವಿ.. ನೀನು ನಿಜವಾಗಿಯೂ ಮಹಿಮೆಯುಳ್ಳವಳು.  ಹದಿನಾಲ್ಕು ವರ್ಷಗಳಿಂದ ಕಣ್ಣು ಮುಚ್ಚಿದರೂ, ತೆರೆದರೂ ರಾಮನ ಪಾದಪದ್ಮಗಳನ್ನೇ ದರ್ಶಿಸುತ್ತ, ರಾಮನನ್ನು ಸ್ಮರಿಸುತ್ತ ಕಾಯುತ್ತಿದ್ದವರನ್ನೆಲ್ಲ ನಿನ್ನ ಮಾಯೆಯಿಂದ ಅಲುಗಾಡದಂತೆ ಮಾಡಿ ನಿನ್ನ ತೆಕ್ಕೆಗೆ ತೆಗೆದುಕೊಂಡಿಬಿಟ್ಟಿದ್ದೀಯಲ್ಲ.. ?  ಸರಯೂನದಿಯ ಗಲಗಲ ಶಬ್ದವನ್ನು ನಿನ್ನ ವಿಜಯಕ್ಕೆ ಸಿಗುತ್ತಿರುವ ಮಂಗಳಧ್ವನಿಗಳೆಂದು ಭಾವಿಸಬೇಡ. ಅಯೋಧ್ಯೆಯ ಮೇಲಿನ ನಿನ್ನ ವಿಜಯಕ್ಕೆ ಅಸ್ತಿತ್ವವಿಲ್ಲದಂತೆ ಮಾಡಲು ನಾನು ಇದೋ..   ರಾಮನನ್ನು ನನ್ನ ಕಣ್ಣುಗಳಲ್ಲಿ, ಉಸಿರಿನಲ್ಲಿ, ರಕ್ತದಲ್ಲಿ ತುಂಬಿಕೊಳ್ಳಲು ಅನಿಮೇಷನಾಗಿ ಹೊರಟಿದ್ದೇನೆ.'' ಅಂದುಕೊಂಡ.
ಅದಕ್ಕೆ ಪ್ರತಿಯಾಗಿ ''ಜಯೋಸ್ತು'' ಎಂಬಂತೆ  ಮಳೆಹನಿಗಳು ಬೀಳತೊಡಗಿದವು.
ಅವನ ಶರೀರ ಪುಳಕಿಸಿತು.  ತಲೆಯೆತ್ತಿ ಆಕಾಶದ ಕಡೆಗೆ ನೋಡಿದ. ಮಳೆ ಏಕೆ ಬೀಳುತ್ತಿದೆಯೆಂಬುದು ತನಗೆ ಅರ್ಥವಾದಂತೆ ಮುಗುಳ್ನಕ್ಕ.
ಭೂದೇವಿಗೆ ಸಿಟ್ಟು ಬಂದಿದೆ.
ಬಾರದೇ ಇರುತ್ತದೆಯೇ ಮತ್ತೇ..?
ಅವಳು ಅಂದುಕೊಡಿರಬಹುದು ''ವನವಾಸಕ್ಕೆ ಹೋಗುವಾಗ ಅಳಿಯ ನನ್ನನ್ನು ಸ್ಪರ್ಶಿಸುತ್ತ, ಗಿರಿಗಳನ್ನೂ, ಝರಿಗಳನ್ನೂ ದಾಟಿಕೊಂಡು ನ..ಡೆ..ಯು..ತ್ತ  ಹೋಗಿದ್ದ.  ಪಟ್ಟಾಭಿಷೇಕವಾಗಲಿದೆ ಎಂದಕೂಡಲೇ ಗಾಳಿಯಲ್ಲಿ ಹಾರಿಕೊಂಡು ಬರುತ್ತಿದ್ದಾನೆ. ಪುಷ್ಪಕ ವಿಮಾನವೇರಿ ಗಾಳಿಯ ಜೊತೆಗೆ, ಮೇಘಗಳ ಜೊತೆಗೆ ಸರಸವಾಡುತ್ತ ಬರುತ್ತಿದ್ದಾನೆ. ಅಳಿಯನನ್ನು ಎಂದಿಗೂ ನಂಬಬಾರದು'' ಎನ್ನುವ ಮಾತು ಲೋಕದಲ್ಲಿ ಚಾಲ್ತಿಯಲ್ಲಿರುವುದು ಇದಕ್ಕಾಗಿಯೇ'' ಅಂದುಕೊಂಡು ವ್ಯಗ್ರಗೊಂಡ ಭೂದೇವಿಯನ್ನು ಸಂತೈಸಲು ಮೇಘಗಳು ಮಳೆಹನಿಗಳ ರೂಪದಲ್ಲಿ ರಾಯಭಾರವನ್ನು ಕಳಿಸಿವೆ. ''ತಾಯೀ.. ನಿನ್ನ ಮಗಳೂ, ಅಳಿಯನೂ ಎಂದಿಗೂ ನಿನ್ನ ಜೊತೆಗಿರುವವರೇ ಅಲ್ಲವೇ..? ಸ್ವಲ್ಪ ಸಮಯವಾದರೂ ನಮ್ಮ ಜೊತೆಗಿರಲಿಕ್ಕ ಬಿಡು'' ಎಂದು.

ಇದೇ ರೀತಿ ಗುಹನೂ ಕೂಡ ಬೇಸರಿಸಿಕೊಂಡಿರಬಹುದಲ್ಲವೇ..? ಅವನ ಬೇಸರವೂ ಕೂಡ ಸಹೇತುಕವೇ. ಅವನನ್ನು ಈ ಮೇಘಗಳು ಹೇಗೆ ಸಂತೈಸುತ್ತವಯೋ.. ಎನೋ. ?'' ಎಂದುಕೊಳ್ಳುತ್ತಾ ಆಕಾಶದ ಕಡೆಗೆ ನೋಡತೊಡಗಿದ. ಅಲ್ಲೆಲ್ಲಿಯೂ  ಚಂದ್ರನ ಸುಳಿವಿಲ್ಲ.   ವಿಜಯದಶಮಿಯಂದು ರಾವಣ ವಧೆಯಾಗಿದೆ.  ರಾಮ ಅಮವಾಸ್ಯೆಗೆ ಅಯೋಧ್ಯೆಗೆ ಬಂದು ಸೇರಲಿದ್ದಾನೆ. ಆದರೆ ಶ್ರೀಹಿತ ಹಾಗಂದುಕೊಳ್ಳಲಿಲ್ಲ. '' ಎನಯ್ಯಾ.. ಚಂದ್ರಯ್ಯಾ.. ಅಮ್ಮನವರ ಸೋದರಾ.. ಭಾವನವರನ್ನು ಎದುರುಗೊಳ್ಳಲಿಕ್ಕೆ ಹೋಗಿರುವೆಯಾ'' ಅಂದುಕೊಂಡ.

ಪೂರ್ವಕ್ಕೆ ತಿರುಗಿ ರಾಜಮಾರ್ಗವನ್ನು ಪ್ರವೇಶಿಸಿದ. ಅದರ ಇಕ್ಕೆಲಗಳಲ್ಲಿನ ಅಶೋಕವೃಕ್ಷಗಳು ಗಾಳಿಗೆ ತಲೆಯಾಡಿಸುತ್ತಿವೆ. ಅವನಿಗೆ ಹನುಮಂತನು ಹೇಳಿದ ''ಸೀತಾದೇವಿ ಅಶೋಕವೃಕ್ಷದ ಕೆಳಗೆ ಕುಳಿತು ದುಃಖಿಸುತ್ತಿದ್ದಳೆಂಬ'' ಸಂಗತಿ ಸ್ಮೃತಿಗೆ ಬಂದಿತು. ಆರ್ದ್ರವಾಗಿ ಆ ಮರಗಳ ಕಡೆಗೆ ನೋಡತೊಡಗಿದ.
''ಲೋಕಪಾವನಿಗೆ ನೆರಳು ನೀಡಿದ ಪುಣ್ಯತರುವು ನೀನು, ಅದಕ್ಕೇ ಭೂದೇವಿ ತನ್ನ ಮಗಳಿಗೆ ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯಾವ ಋತುವಿನಲ್ಲೂ ಕೂಡ ಎಲೆಗಳು ಉದುರದಂತೆ ನಿತ್ಯವಸಂತದ ವರವನ್ನು ನಿನಗೆ ನೀಡಿದ್ದಾಳಲ್ಲವೇ'' ಅಂದ. ನಾಲ್ಕಾರು ಹೆಜ್ಜೆ ಮುಂದೆ ಹೋಗುವಷ್ಟರಲ್ಲೇ ಅಂತಃಪುರದ ಕಡೆಯಿಂದ ಕಸ್ತೂರಿ ಹಾಗೂ ಮೃಗಮದ ಬೆರೆಸಿದ ಸುಗಂಧ ನಾಸಿಕಾಪುಟಗಳನ್ನು ಸೋಕಿತು.  ಆ ಸುಗಂಧದಿಂದ  ಶ್ರೀಹಿತನಿಗೆ ಆ ದಿನ ಮುಂಜಾನೆ ತನ್ನ ಅಮ್ಮ ಪಕ್ಕದ ಮನೆಯಾಕೆಗೆ ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದವು.
''ಸೀತಾ ರಾಮ ಲಕ್ಷ್ಮಣರು ವನವಾಸದಿಂದ ಬಂದಕೂಡಲೇ ನಾಲ್ಕೂ ಜನ ಅಣ್ಣ-ತಮ್ಮಂದಿರಿಗೆ ನಿಷೇಕದ ಮುಹೂರ್ತವಂತೆ''
ಅವನಮ್ಮ ಕೈಕೇಯಿಯ ಪರಿಚಾರಕಿಯಾದ್ದರಿಂದ ಅದು ಅವಳಿಗೆ ತಿಳಿದಿತ್ತು. ಈ ನಿಷೇಕದ ಏರ್ಪಾಟಿನ ಜವಾಬ್ದಾರಿಯೆಲ್ಲ ಕೈಕೇಯಿದಾದರೆ, ಓಡಾಡಿ ದುಡಿಯುವುದೆಲ್ಲ ಇವನಮ್ಮನೇ. ಆದ್ದರಿಂದಲೇ ಈಗಲೇ ನಡೆಯುತ್ತಿರುವ ಏರ್ಪಾಟುಗಳನ್ನ ಬಣ್ಣಿಸಿದ್ದಳು.
ಶ್ರೀಹಿತನದ್ದು ಇಪ್ಫತ್ತೇ ವರ್ಷಗಳ ವಯಸ್ಸು. ಈಗಲಷ್ಟೇ ಕಾಲಿಟ್ಟಿರುವ ಯೌವನ. ಕುತೂಹಲದಿಂದ ಮರೆಯಲ್ಲಿ ನಿಂತು ಅಮ್ಮ ಹೇಳುತ್ತಿದ್ದನಿಷೇಕದ ಬಗೆಗಿನ ಮಾತುಗಳನ್ನೆಲ್ಲ ಕೇಳಿಸಿಕೊಂಡಿದ್ದ. ಭಗವಂತನ ಬಗೆಗಿನ ಎಲ್ಲವನ್ನೂ ಭಕ್ತನು ಅಲೋಚಿಸಬಹುದು. ಅದರಲ್ಲೇನು ತಪ್ಪು?  ಹೀಗಾಗಿ ಅದನ್ನೂ ಊಹಿಸಿಕೊಂಡ.
ಸೀತಾಪತಿ ಅರ್ಧಾಂಗಿಗೆ ಮೊದಲಚುಂಬನವನ್ನು ಎಲ್ಲಿಗೆ ನೀಡುತ್ತಾನೆ..?
''ಸಿರಿ'' ಅಂದರೆ ಎಲ್ಲರಿಗೂ ಇಷ್ಟವಲ್ಲವೇ.   ಶ್ರೀಕಾರವನ್ನು ನಾಚಿಸುವಂತಿರುವ ಅವಳ ಕಿವಿಗಳದ್ದಾ  ಆ ಅದೃಷ್ಟ..?
ಶಂಖಚಕ್ರಗಳು ವಿಷ್ಣುವಿನ ಭೂಷಣಗಳು. ಅವುಗಳಲ್ಲಿ ಶಂಖವಾದರೆ ಕಂಠದ್ದೇ ಪ್ರಥಮಚುಂಬನ ಭಾಗ್ಯ, ಚಕ್ರವಾದಲ್ಲಿ ಮನ್ಮಥನ ರಥಚಕ್ರಗಳಂತಿರುವ ಅವಳ ನಿತಂಬಗಳದ್ದೇ ಆ ಪುಣ್ಯ. ಅಥವಾ ರಾಮ ಕೌಮೋದಕೀಧಾರಿಯಾದ್ದರಿಂದ ಅವಳ ಊರುಗಳದ್ದಾ ಆ ಭಾಗ್ಯ..?
ವನವಾಸ ಸಮಯದಲ್ಲಿ ಶಬರಿ ಸಮರ್ಪಿಸಿದ ಮಧುರಫಲಗಳನ್ನು ಇಷ್ಟದಿಂದ ಸೇವಿಸಿದನಂತೆ ರಾಮ. ಹೀಗಾಗಿ ಮಧುರ ಬಿಂಬಾಧರಗಳನ್ನು ಚುಂಬಿಸುತ್ತಾನೋ, ಇಲ್ಲವೇ ಕೋದಂಡಪಾಣಿಯದ್ದರಿಂದ ಬಿಲ್ಲನ್ನು ಪರಿಹಾಸ ಮಾಡುವ ಅವಳ ನಡುವನ್ನು ಮೊದಲು ಚುಂಬಿಸುತ್ತಾನಾ?
''ಅಮೃತಂ ತ್ವಮಂಗೇ'' ಅನ್ನುತ್ತಿದ್ದಾನೆ ರಾಮ. ಅವನ ಶರೀರಕ್ಕೆ ಅವಳೇ ಅಮೃತವಂತೆ.
''ತ್ವಂ ನಯನಯೋಃ ಕೌಮುದೀ'' ಎನ್ನುತ್ತಿದ್ದಾಳೆ ಮೈಥಿಲಿ. ಅವಳ ಕಣ್ಣಿಗೆ ಅವನೇ ಬೆಳದಿಂಗಳಂತೆ.

ಈ ವಿಧವಾಗಿ ಆಲೋಚಿಸುತ್ತ ಸಾಗುತ್ತಿದ್ದ ಶ್ರೀಹಿತನು ಕವಿತಾವೇಶದಿಂದ ಹೊರಬಂದು ನೋಡುವಷ್ಟರಲ್ಲೇ ಸರಯೂ ತೀರವನ್ನು ತಲುಪಿಬಿಟ್ಟಿದ್ದ. ಪ್ರಕೃತಿ ನಿಃಶಬ್ದದ ಜೊತೆ ಸ್ನೇಹ ಮಾಡಿದಂತಿದೆ. ಸರಯೂ ಮಾಡುತ್ತಿರುವ ಶಬ್ದದ ಹೊರತಾಗಿ ಎಲ್ಲವೂ ನಿಃಶಬ್ದವಾಗಿದೆ.

ನಿಃಶಬ್ದದಿಂದಾಗಿ ಅವನಿಗೆ ದಿಗಿಲಾಯಿತು. ಸ್ವಪುರವಾಸಿಗಳ ಮೇಲೆ ಮತ್ತೆ ಮತ್ತೆ ಕೋಪ ಬರುತ್ತಿದೆ. ಕನಸಿನಲ್ಲಿ ಕಾಣಿಸಿದ ನಿದ್ರಾದೇವಿ ಸರಯೂ ದಂಡೆಯಲ್ಲಿಲ್ಲ.
ಯಾಕಿರುತ್ತಾಳೆ..?  ಅಯೋಧ್ಯೆಯ ಪ್ರಜೆಗಳ ಕಣ್ ರೆಪ್ಪೆಗಳ ಮೇಲೆ ನರ್ತಿಸುತ್ತಿದ್ದಾಳಲ್ಲವೇ?
ಅಯೋಧ್ಯಾವಾಸಿಗಳ . ಮೇಲಿನ ಆಕ್ರೋಷವೋ, ರಾಮನನ್ನು ತಾನೇ ಮೊದಲು ನೋಡಬೇಕೆಂಬ ಆತುರವೋ.. ತನಗೇ ತಿಳಿಯುವಷ್ಟರಲ್ಲಿ ಉತ್ತರೀಯವನ್ನು ಸೊಂಟಕ್ಕೆ ಬಿಗಿದು ನೀರಿಗೆ ಹಾರಿ ಈಜತೊಡಗಿದ.
ದೇಹದಲ್ಲಿ ಭೂತಸಂಚಾರವಾದಂತೆ ಉದ್ರೇಕಕ್ಕೊಳಗಾಗಿದ್ದರಿಂದ ಈಜುವ ಆಯಾಸ ತಿಳಿಯುವ ಮುನ್ನವೇ ಆಚೆಯ ದಡವನ್ನು ತಲುಪಿಬಿಟ್ಟಿದ್ದ.   ಅಲ್ಲಿ......
''ರಾಮನನ್ನು ಸೇರುವುದು ಅಷ್ಟು ಸುಲಭವೇ..?" ಎಂದು ಅಣಕಿಸುತ್ತಿರುವಂತೆ ಪರ್ವತವೊಂದು ಎದೆ ಸೆಟೆಸಿಕೊಂಡು ಅಡ್ಡ ನಿಂತಿದೆ.
ಅವನ ಕಾಲುಗಳು ನಿಲ್ಲಲಿಲ್ಲ. ತಾನೊಬ್ಬನೇ..  ರಾಮದರ್ಶನಾಮೃತವನ್ನೆಲ್ಲ ತಾನೊಬ್ಬನೇ ಸವಿಯಬೇಕೆಂಬ ತರಾತುರಿಯಲ್ಲಿರುವಂತೆ, ತನ್ನ ಬೆನ್ನ ಹಿಂದಿರುವ ಅಯೋಧ್ಯೆಯ ಕಡೆಗೆ ನಿಕೃಷ್ಟಭಾವದ ನೋಟ ಬೀರುತ್ತ ಆ ಪರ್ವತವನ್ನು ಧಾವಂತದಲ್ಲಿ ಏರತೊಡಗಿದ.
ಶಿಖರದ ತುದಿಯ ಆಚೆಯಿಂದ ಪ್ರಜ್ವಲವಾದ ಬೆಳಕೊಂದು ಕಾಣಿಸುತ್ತಿದೆ. ''ಬರುತ್ತಿದ್ದಾನೆ.. ರಾಮ ಬರುತ್ತಿದ್ದಾನೆ.. ಪುಷ್ಪಕವಿಮಾನ ಇದೋ ಬಂತು.. ''
ಎಂದೆನಿಸಿ ಶಿಖರದ ಕಡೆಗೆ ಓಟದಂತಹ ನಡಿಗೆಯಲ್ಲಿ ಏರತೊಡಗಿದ. ಕೆಲವೇ ಕ್ಷಣಗಳಲ್ಲಿ ಆ ನಡಿಗೆ ಓಟವೇ ಆಯಿತು.
''ಪಾಹಿಮಾಂ.. ರಾಜರಾಜೇಶ್ವರಿ.. ನಮ್ಮನನುಗ್ರಹಿಸು..''
''ರಾಮನಿಗೆ ಸ್ವಾಗತವನೂ ಮಾಡದ ನಮ್ಮೂರಿನವರ ಅಜ್ಞಾನವನ್ನು ಮನ್ನಿಸು ತಾಯೇ..''
ನಮ್ಮವರ ಅಮರ್ಯಾದೆಯನ್ನು ಕ್ಷಮಿಸು.. ವಾಹಿನಿ..ದಯಾಪ್ರವಾಹಿನಿ.. ಭಂಡ ಚಂಡ ನಿಮಹಿಷಭಂಜಿನಿ.. ನಿರಂಜನಿ..ಜನರಂಜನಿ ಪಾಹಿಮಾಂ.''
ಎಂದು ಆವೇಶದಲ್ಲಿ ಪ್ರಾರ್ಥಿಸಿಕೊಳ್ಳುತ್ತ.. ಪ್ರಯಾಸದಿಂದ ಓಡೋಡಿ.. ಶಿಖರವನ್ನು ತಲುಪಿದ.

ಶಿಖರದ ಮೇಲಿನ ದಿಬ್ಬದ ಆಚೆಗಿನ ದೃಶ್ಯವನ್ನು ನೋಡಿ ನಂಬದಾದ.

ಆಶ್ಚರ್ಯದಿಂದ ದಿಕ್ಕೆಟ್ಟಂತಾಗಿ ಕಂಬದಂತೆ ನಿಂತುಬಿಟ್ಟ.

ಏನಿದೆ ಅಲ್ಲಿ..?

ಇಡೀ ಅಯೋಧ್ಯೆಯೇ ಅಲ್ಲಿದೆ. ಕೂಸು-ಕುನ್ನಿಗಳ ಸಮೇತ. ಪ್ರಾಣಿ ಪಕ್ಷಿಸಹಿತರಾಗಿ ಸಮಸ್ತ ಅಯೋಧ್ಯಾವಾಸಿಗಳು ಅಲ್ಲಿ ಸೇರಿ ಕೈಗಳಲ್ಲಿ ದೀವಿಗೆಗಳನ್ನು ಹಿಡಿದು.. ಆಕಾಶದ ಕಡೆಗೆ ದೃಷ್ಟಿ ನೆಟ್ಟು ಕುಳಿತಿದ್ದಾರೆ. ಅನಿಮೇಷತ್ವದಿಂದ ರಾಮನನ್ನು ನಿರೀಕ್ಷಿಸುತ್ತಿದ್ದಾರೆ.
ಎಲ್ಲರಿಗಿಂತ ದೂರದಲ್ಲಿ ಒಂದು ಬಂಡೆಯ ಮೇಲೆ ಕುಳಿತಿದ್ದ ಕುಂಟ ಬೀರ ಇವನನ್ನು ''ಈಗ ಬಂದೆಯಾ..? ಎಲ್ಲಿ ಹಾಳಾಗಿ ಹೋಗಿದ್ದೆ?'' ಎನ್ನುವಂತೆ ನೋಡಿದ.










7 comments:

  1. ವಾಹ್.. ಅದ್ಭುತ ಪರಿಕಲ್ಪನೆ

    ReplyDelete
  2. ಭಾವಪರವಷದಿಂದ, ಕ್ಷಣಕಾಲ ಶ್ರೀಹಿತನಾಗಿಬಿಟ್ಟಿದ್ದೆ. ಒಮ್ಮೆಗೆ, ತ್ರೇತಾಯುಗದ ಅನುಭವ ಸಂತಸ ತರಿಸಿತು...

    ReplyDelete
  3. ಅಧ್ಭುತವಾದ ಪರಿಕಲ್ಪನೆ !! ಭೂತಾಯಿ ಶ್ರೀ ರಾಮಚಂದ್ರನನ್ನು ಅಳಿಯನಾಗಿ ಕರೆವ ವಿವರಣೆ ಹಾಗು ರಾಮ ಸೀತಯರ ಪ್ರಣಯದ ಊಹಾ ಕಲ್ಪನೆ, ನಿಜಕ್ಕೂ ಪ್ರಶಂಸನೀಯ.

    ReplyDelete
  4. " ರಾಮ ಬರುತಿದ್ದಾನೆ " ಚೆನ್ನಾಗಿದೆ. ಆದರೆ ರಾಮ ಬಂದಾಗ ಹೇಗಿತ್ತು..? ರಾಮ ಬಂದನೇ..? ಮುಂದಿನದನ್ನೂ ವಿವರಿಸಿ, ಇಷ್ಟೆಲ್ಲಾ ರಸಗಳ ಜೊತೆಗೆ , ಆ ಕುತೂಹಲಕ್ಕೂ ಮುಕ್ತಿ ಕರುಣಿಸಿ...ಒಳ್ಳೆ ಕಾದಂಬರಿ ಬರೆಯಬಹುದು ನೀವು., ಪ್ರಯತ್ನ ಮಾಡಿ. ನಾಯಕನಾಧಾರಿತ ಕಥೆಯಲ್ಲಿ ಲೋಕಾರೂಢಿ ಬಿಟ್ಟು ಸುತ್ತಲಿನ ಪೋಷಕ ಪಾತ್ರಗಳ ಜೀವನವನ್ನು ಕೆದಕಿ, ಕುತೂಹಲದಿಂದ ನೋಡುವ ಅಭ್ಯಾಸಕ್ಕೆ ನೀವು ಏನೆಂದು ಕರೆಯುತ್ತೀರಿ..?

    (ಪೋಷಕ) ಅಂತಹ ಒಂದು ಪಾತ್ರಗಳಿಗೆ ನಿಜವಾದ ವೇದಿಕೆ ಸಿಕ್ಕಿದ್ದು ಆ ನಾಯಕ ಒಂದು ಕತೆ ಮಾಡಬೇಕು ಎಂದು ತೀರ್ಮಾನಿಸಿದ್ದರಿಂದ ಅಲ್ವೇ..? ಆ ಪಾತ್ರ ಏನಕ್ಕಾಗಿ ಕಾಯುತ್ತಿತ್ತೊ , ಅದನ್ನು ಅದಕ್ಕೆ ತೋರಿಸಿ, ಅದರ ಕಲ್ಪನೆಗೂ ಕಂಡ ವಾಸ್ತವಕ್ಕೂ ಪಾತ್ರ ನಿರ್ಧರಿಸಿದ ತೀರ್ಮಾನ ತಿಳಿಸಿ..ತಪ್ಪೇನು..?
    ಪಾತ್ರಕ್ಕೆ ಸಿಕ್ಕ ವಾತಾವರಣ, ಸಮೂಹ ಸನ್ನಿಯು ಅದರ ಜ್ಞಾನಕ್ಕೆ ತಡೆಗೋಡೆ ನಿರ್ಮಿಸಿವೆ. ಈಗ ರಾಮನನ್ನು ವಾಸ್ತವದಲ್ಲಿ ಕಾಣಲಿ, ನಂತರವೇ ಅದರ ಅನುಭವ ಆಧಾರಿತ ನಿಜವಾದ ವಯಕ್ತಿಕ ಜ್ಞಾನ ಹೊರಬೀಳಲಿದೆ..ಅದನ್ನು ನಾವು ಗಣನೆಗೆ ತೆಗೆದುಕೊಂಡರೆ ಸರಿಯಲ್ಲವೇ..?

    ಸಾಹಿತ್ಯ ಅಪೂರ್ಣವಾಗಿ ಓದುಗನನ್ನು ಬರೀ ಭಾವನಾತ್ಮಕವಾಗಿ ರಂಜಿಸಿದರೆ ಸಾಲದು., ಹಾಗಾಗಿಯೇ ಸಾಹಿತ್ಯ ತನ್ನ ಮಿತಿಯನ್ನು ತಾನೇ ಚೌಕಟ್ಟಿಗೆ ಸಿಲುಕಿಸಿದೆ. ಒಂದು ದಿಟ್ಟ ಹೆಜ್ಜೆ ಶ್ರೀಹಿತ ಇಡಲಿ, ಹೇಳಲಿ.. ಹೇಳಿಸಿ...ನೀವು ಪುರಾನ ಓದಿದ್ದೀರಿ, ನಿಮಗೆ ಹಾಘೇ ಅನ್ನಿಸುತ್ತದೆ, ಅದರ ಬಗ್ಗೆ ಗೊತ್ತಿಲ್ಲದವರಿಗೆ...? ಅಂಥವರಿಗೆ ಶ್ರೀಹಿತ ಬರೀ ಕಲ್ಪನೆಯ, ಭಾವನಾತ್ಮಕ ಗೊಂಬೆಯಾಗಿ ಹೋಗುತ್ತಾನೆ., ಸ್ವಂತಿಕೆಯ ಇಲ್ಲದವನಾಗಿ..ನೋಡಿ ನೀವೆ ಯೋಚಿಸಿ.

    ReplyDelete
  5. ವಾಹ್.. ಅದ್ಭುತ ಕಲ್ಪನೆ ನಮ್ಮನ್ನೆಲ್ಲಾ ರಾಮನ ಬರುವಿಕೆಯ ದೃಶ್ಯರೂಪಕ್ಕೆ ಕರೆದೊಯ್ದಿದ್ದೀರಿ

    ReplyDelete
  6. ಇದೊಂದು ದೃಶ್ಯವೈಭವ.. ಎಂತಹ ನಾಸ್ತಿಕನಿಗೂ ರಾಮನ ಮೇಲೆ ಗೌರವಾದರ ಬರುವಂತೆ ಬರೆದಿದ್ದೀರಿ.
    ರಾಮ ಬಂದೇ ಬರ್ತಾನೆ :-) ನಿಮ್ಮ ಈ ಕಥೆ ಬರೀ ಇಂಟರ್ನೆಟ್ ಗೆ ಸೀಮಿತವಾಗದಿರಲಿ

    ReplyDelete