Wednesday, July 10, 2013

ಪುರುಷ ಸೂಕ್ತ


ಕಳೆದ ಮೇ ತಿಂಗಳಿನಲ್ಲಿ  ಸಂಜೆ  ಕೆ ಎಚ್ ಕಲಾಸೌಧದಲ್ಲಿ   ಅಭಿಜ್ಞಾನ ತಂಡದವರಿಂದ   ಶ್ರೀನಿವಾಸಮೂರ್ತಿ ಮಾರ್ಗದರ್ಶನದಲ್ಲಿ ಹಾಗೂ ಜೊಸೆಫ್ ಜಾನ್ ರವರ ನಿರ್ದೇಶನದಲ್ಲಿ  ''ಪುರುಷ ಸೂಕ್ತ -ಶ್ರುತಿಗೆ ದೃಶ್ಯ ರೂಪ'' ಎಂಬ ಅಪರೂಪದ ರಂಗಪ್ರಯೋಗವನ್ನು ಪ್ರಸ್ತುತಪಡಿಸಲಾಯಿತು. ಈಗ ಮತ್ತೆ ಇದೇ ಜುಲೈ ೧೪ ಭಾನುವಾರ ರಂಗಶಂಕರದಲ್ಲಿ ಮತ್ತೆರಡು (೩:೩೦- ೭:೩೦) ಪ್ರದಶðನಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ ಬಾರಿಯ ಪ್ರದರ್ಶನದಲ್ಲಿ ಅಭಿಜ್ಞಾನ ತಂಡ  ಅದ್ಭುತವಾಗಿ ನೃತ್ಯ, ಚಾರಿ, ಅಭಿನಯ ಮುಂತಾದ ಅನೇಕ ಕಲಾಪ್ರಕಾರಗಳನ್ನು ಹದವಾಗಿ ಬೆರೆಸಿ ನೋಡುಗರನ್ನು ವಿಸ್ಮಿತಗೊಳಿಸಿದರು. ಅದರಿಂದ ಪ್ರೇಕ್ಷಕರಿಗೆ ಪ್ರದರ್ಶನದ ಕಲಾತ್ಮಕತೆಯ ಮಧುರಾನುಭೂತಿಯಾದರೂ, ಸಂಸ್ಕೃತ ಬಾರದ ಅಥವಾ ಪುರುಷ ಸೂಕ್ತದ ಬಗ್ಗೆ ತಿಳಿಯದ ಸಾಮಾನ್ಯ  ಪ್ರೇಕ್ಷಕರಿಗಾಗಿ  ಹೆಚ್ಚಿನ ಭಾಷಾಂತರ ಮತ್ತು ವಿಸ್ತಾರವಾದ ಪೂರ್ವ ಪೀಠಿಕೆ ಅಥವಾ ಪರಿಚಯ ಕೈಪಿಡಿಯ ಅವಶ್ಯಕತೆ ಇತ್ತು ಅಂತ ಅನಿಸಿದ್ದು ಸುಳ್ಳಲ್ಲ. ಆದರೆ ಈ ಬಾರಿಯ ಪ್ರದರ್ಶನದಲ್ಲಿ ಅನೇಕ ಬದಲಾವಣೆಗಳನ್ನು ಹಾಗೂ ಪರಿಷ್ಕರಣೆಗಳನ್ನು ಮಾಡಿಕೊಂಡಿರುವುದರಿಂದ ಈ ಬಾರಿ ಹಿಂದಿಗಿಂತಲೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ.  

 ''ಪುರುಷ ಸೂಕ್ತ'' ಅನ್ನುವ ಹೆಸರು ಸಮಾಜದ ಕೆಲವೇ ವರ್ಗದ ಜನರಿಗೆ ಪರಿಚಿತ. ಆ ವರ್ಗದ ಜನರಲ್ಲಿಯೂ ನೂರಕ್ಕೆ ತೊಂಭತ್ತೊಂಭತ್ತು ಜನ ಅದು ಅಭಿಷೇಕ ಮಾಡುವಾಗ ಹೇಳುವ ಮಂತ್ರ ಅಂತಷ್ಟೇ ತಿಳಿದುಕೊಂಡಿದ್ದು ನನ್ನ ಗಮನಕ್ಕೆ ಬಂದಿದೆ. ಅದರ ಹೊರತಾಗಿ ಪುರುಷ ಸೂಕ್ತದ ಬಗ್ಗೆ ಹೆಚ್ಚಿನ ಮಾಹಿತಿ ಸಾಮಾನ್ಯವಾಗಿ ಯಾರಲ್ಲಿಯೂ ಇಲ್ಲ.  ಅದಕ್ಕಿಂತಲೂ ಮಿಗಿಲಾಗಿ ''ವೇದ'' ಎಂದರೆನೇ ಪೂಜೆ ಪುನಸ್ಕಾರವಷ್ಟೇ ಎಂಬ ತಪ್ಪು ಮಾಹಿತಿ ಸುಶಿಕ್ಷಿತ ವರ್ಗದಲ್ಲಿಯೇ  ಇರುವುದನ್ನು ನೋಡಿ ನಾನು ಅನೇಕ ಸಾರಿ ಆಶ್ಚರ್ಯಕ್ಕೊಳಪಟ್ಟಿದ್ದೇನೆ. ಹೀಗಾಗಿ ಪುರುಷ ಸೂಕ್ತವನ್ನು ಪೂಜೆಯ ಮಂತ್ರ ಎಂದು ಹೆಚ್ಚಿನವರು ತಿಳಿದಿರುವುದು ಸಹಜ  ಮತ್ತು ವಾಸ್ತವ. 


ಪುರುಷ ಸೂಕ್ತ ಋಗ್ವೇದದ ಹತ್ತನೆಯ ಮಂಡಲದಲ್ಲಿಯ ಹದಿನಾರು ಋಕ್ಕುಗಳ ಒಂದು ಗುಚ್ಛ ಅಥವಾ ವೈದಿಕ ಭಾಷೆಯಲ್ಲಿ ''ಸೂಕ್ತ''. ಈ ಸೂಕ್ತದಲ್ಲಿ ಹದಿನೈದು ಅನುಷ್ಟುಪ್ ಛಂದಸ್ಸಿನ ಋಕ್ಕುಗಳು  ಮತ್ತು ಕೊನೆಯದು ತ್ರಿಷ್ಟುಪ್ ಛಂದಸ್ಸಿನ ಋಕ್ಕು. ಇಂತಹ ಪುರುಷ ಸೂಕ್ತವನ್ನು ಸಾಮಾನ್ಯರಿಗಾಗಿ ಪರಿಚಯಿಸುವ ಪ್ರಯತ್ನವನ್ನುಮಾಡುವುದು ನನ್ನ ಈ ಬರಹದ ಉದ್ದೆಶ.  ಇದು ವಿದ್ವಾಂಸರನ್ನು ಮೆಚ್ಚಿಸಲು ಅಲ್ಲವೇ ಅಲ್ಲ.

 ಎಲ್ಲರಿಗೂ ತಿಳಿದಿರುವ ಹಾಗೆ ವೇದವು   ಋಕ್ಕು, ಯಜುಸ್ಸು, ಸಾಮ ಮತ್ತು ಅಥರ್ವ ಎಂಬ ನಾಲ್ಕು  ವಿಭಾಗಗಳಲ್ಲಿ ಇದೆ. ಮತ್ತು ಒಂದೊಂದು ವೇದಕ್ಕೂ ಅನೇಕ ಶಾಖೆಗಳಿದ್ದು,  ಅವುಗಳಲ್ಲಿನ ಬಹುತೇಕ ಶಾಖೆಗಳು ಈಗ ಲುಪ್ತವಾಗಿ ಹೋಗಿವೆ.
(ನಮ್ಮಲ್ಲಿ ಸಾಮಾನ್ಯವಾಗಿ ಬೈಬಲ್, ಖುರಾನ್ ಮುಂತಾದವುಗಳು ಹೇಗೆ ಒಂದು ಮತದ ಗ್ರಂಥಗಳಾಗಿವೆಯೋ ಹಾಗೆ ವೇದಗಳನ್ನು ಅಂಥಹ ''ಮತಗ್ರಂಥ'' ಎಂದು ಭಾವಿಸುವವರಿದ್ದಾರೆ. ಇನ್ನು ಕೆಲವರಂತೂ ಭಗವದ್ಗೀತೆಯನ್ನು ಅಂತಹ ಮತಗ್ರಂಥ ಅಂತ ಭಾವಿಸಿದ್ದಾರೆ.  ಮತ್ತು ಈ ''ಮತಗ್ರಂಥ'' ವನ್ನು ''ಧರ್ಮಗ್ರಂಥ'' ಎಂದು ಕರೆಯುವ ಅಭ್ಯಾಸ ತಲೆಮಾರುಗಳಿಂದ ಆಗಿ ಹೊಗಿದೆ. ನಮ್ಮ ಸಿನೆಮಾಗಳಲ್ಲಿಯ ನ್ಯಾಯಾಲಯದ ದೃಶ್ಯಗಳಲ್ಲಿ ಈ ಭಗವದ್ಗೀತೆಯ ಮೇಲೆ ಕೈ ಇಟ್ಟು  ಪ್ರಮಾಣ ಮಾಡಿಸುವ ದೃಶ್ಯಗಳು ಕೂಡ ಈ ಭಾವನೆ ಹೆಚ್ಚು ಬೆಳೆಯಲು ಪೂರಕವಾಗಿ ಕೆಲಸ ಮಾಡಿವೆ. ಈ ''ಮತ'' ವನ್ನು ''ಧರ್ಮ'' ಎಂದು ಅನುವಾದಿಸುವ  ಅನಿಷ್ಟ ಪದ್ಧತಿಯಿಂದಾಗಿ ಅನೇಕ  ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳು  ಉದ್ಭವವಾಗಿವೆ. ವಾಸ್ತವವಾಗಿ ''ವೇದ'' ಮತ್ತು ''ಭಗವದ್ಗೀತೆ'' ಎರಡೂ ಕೂಡ ಇಂತಹ ಮತ ಗ್ರಂಥಗಳು ಅಲ್ಲವೇ ಅಲ್ಲ ಮತ್ತು ''ಮತ'' ಹಾಗೂ ''ಧರ್ಮ'' ಎರಡು ಬೇರೆ ಬೆರೆ ಎಂಬುದನ್ನು ಮೊದಲು ಸ್ಪಷ್ಟವಾಗಿ ಅಥð ಮಾಡಿಕೊಳ್ಳಬೇಕು. ಮತವು. ''ಧರ್ಮ''ವನ್ನು  ಆಚರಿಸುವಂತೆ ತಿಳಿಸುತ್ತದೆಯೇ ಹೊರತು ''ಮತ''ವೇ ಧರ್ಮವಲ್ಲ. ಕೆಲ ಮತಗಳಿಗೆ ''ಕುರಾನ್'' ''ಬೈಬಲ್'' ನಂತಹ 'ಮತಗ್ರಂಥ'ಗಳಿರುವ ಹಾಗೆ ಹಿಂದೂಗಳಿಗೆ ಅಂತಹ  ಯಾವುದೇ ಮತಗ್ರಂಥವಿಲ್ಲ. ಯಾಕೆ ಹೀಗೆ ಅಂತ ತಿಳಿಯಬೇಕಾದರೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಸ್ವಲ್ಪ ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಒಂದೆರಡು ಮಾತುಗಳಲ್ಲಿ ವಿವರಿಸಿ ಮುಗಿಸಲು ಸಾಧ್ಯವಾಗುವ ಸಂಗತಿಯಲ್ಲ ಅದು. 

ಇನ್ನು ಪುರುಷ  ಸೂಕ್ತದ ಬಗ್ಗೆ ತಿಳಿಯುವ ಮೊದಲು ಪುರುಷ ಸೂಕ್ತದ ಆಕರ ಗ್ರಂಥವಾದ ವೇದದ ಬಗ್ಗೆ ಸ್ವಲ್ಪ ಪರಿಚಯವಿರಲೇ ಬೇಕು. ಎಲ್ಲರಿಗೂ ತಿಳಿದಿರುವಂತೆ ಋಕ್ಕು, ಯಜುಸ್ಸು, ಸಾಮ ಮತ್ತು ಅಥರ್ವ ಎಂಬ ನಾಲ್ಕು ವಿಭಾಗಗಳಲ್ಲಿ ವೇದರಾಶಿ ವಿಭಾಗವಾಗಿದೆ. ಸನಾತನ ಸಾಂಪ್ರದಾಯಿಕ ನಂಬಿಕೆಯಲ್ಲಿ ವೇದವನ್ನು 'ಅಪೌರುಷೇಯ' ಎಂದರೆ ಯಾವುದೇ ವ್ಯಕ್ತಿಯಿಂದ ರಚಿಸಲ್ಪಟ್ಟದ್ದು ಅಲ್ಲ ಎಂದೇ ಪರಿಗಣಿಸಲಾಗುತ್ತದೆ. ಪ್ರಪಂಚದ ಸೃಷ್ಟಿಗೂ ಮೊದಲೇ ಭಗವಂತನಂತೆಯೆ ವೇದವೂ ಅನಾದಿಕಾಲದಿಂದ ಅಸ್ತಿತ್ವದಲ್ಲಿ ಇತ್ತು. ಅದು  ಋಷಿಗಳ ಮೂಲಕ ಲೋಕದಲ್ಲಿ ಪ್ರಕಟಗೊಂಡಿತು ಅನ್ನುವುದು ಭಾರತದ ಸನಾತನ ನಂಬಿಕೆ. 'ಋಷಯೋ ಮಂತ್ರದ್ರಷ್ಟಾರಃ' ಎನ್ನುವ ಅಥವಾ'ಋಷಿರ್ದರ್ಶನಾತ್'' ಎನ್ನುವ 'ಋಷಿ' ಶಬ್ದದ ಪರಿಭಾಷೆಯಂತೆ ಯಾವನು ದರ್ಶನವನ್ನು ಪಡೆದಿರುತ್ತಾನೋ ಅವನು ಋಷಿ ಎನಿಸಿಕೊಳ್ಳುತ್ತಾನೆ. ಇಲ್ಲಿ 'ದರ್ಶನ' ಎಂದರೆ ವೇದ ಮಂತ್ರದ ದರ್ಶನ ಎಂದೇ ಅರ್ಥ.  ( ನಮ್ಮ ಪೌರಾಣಿಕ ಚಲನ ಚಿತ್ರ ನಾಟಕ ಮುಂತಾದವುಗಳಲ್ಲಿ ಹಾಗೂ ಚಂದಮಾಮಾದಂತಹ ಬಾಲಸಾಹಿತ್ಯದ ಪತ್ರಿಕೆಯ ವರ್ಣಚಿತ್ರ ಮೊದಲುಗೊಂಡು ಎಲ್ಲ ಕಡೆಗಳಲ್ಲಿ ಋಷಿಗಳನ್ನು ಜಟಾಜೂಟ ಸಹಿತರಾಗಿಯೇ ಚಿತ್ರಿಸುವುದರಿಂದ ಸಾಮಾನ್ಯವಾಗಿ ಜನಮಾನಸದಲ್ಲಿ ಜಟೆ ಬೆಳೆಸಿಕೊಂಡು ಉದ್ದದ ಗಡ್ಡ ಬಿಟ್ಟವರೆಲ್ಲ ಋಷಿಗಳು ಅಥವಾ ಋಷಿಗಳು ಎಂದರೆ ಹೀಗೆಯೇ ಇರುತ್ತಾರೆ ಅನ್ನುವ ಭಾವನೆ ಇದೆ. ಆದರೆ 'ಋಷಿ' ಎನ್ನುವ ಶಬ್ದ ವೇಷವನ್ನಲ್ಲ. ಯೋಗ್ಯತೆಯನ್ನಾಧರಿಸಿದ್ದು.)

ಲೊಕದ ಸೃಷ್ಟಿಗೆ ಕಾರಣವಾದ ಭಗವಚ್ಚೈತನ್ಯದೊಡನೆ ತಾದಾತ್ಮ್ಯವನ್ನು ಸಾಧಿಸಿಕೊಂಡ ಸಾಧಕರಿಗೆ ತಮ್ಮ ತಾದಾತ್ಮ್ಯದ ಉಛ್ರಾಯ ಸ್ಥಿತಿಯಲ್ಲಿರುವಾಗ (ನಮಗೆ ನಿದ್ರೆಯಲ್ಲಿ ಕನಸುಗಳು ಕಾಣುವಂತೆ) ವೇದದ ಋಕ್ಕುಗಳು ಗೋಚರವಾದವು. (ಶತಾವಧಾನಿ ಡಾ: ಗಣೆಶ್ ಅವರು ಒಂದು ಉಪನ್ಯಾಸದಲ್ಲಿ ವೇದ ಮಂತ್ರಗಳ ದರ್ಶನದ ಪ್ರಸ್ತಾಪ ಬಂದಾಗ ''cosmic space ನಲ್ಲಿ ಎಲ್ಲವೂ ಇದೆ. ಆ space ಗೆ reach ಆಗುವಂತೆ ನಮ್ಮನ್ನು ನಾವು ಶೃತಿಗೊಳಿಸಿಕೊಂಡರೆ ಅಥವಾ ಟ್ಯೂನ್ ಮಾಡಿಕೊಂಡರೆ ನಮಗೂ ಅದು ದಕ್ಕುತ್ತದೆ'' ಅಂತ ಹೇಳಿದ್ದರು.) ಹಾಗೆ ಮಂತ್ರಗಳ ದರ್ಶನ ಪಡೆದು ವ್ಯಕ್ತಿಯನ್ನು ''ಋಷಿ'' ಎಂದು ಪರಿಗಣಿಸಲಾಗುತ್ತದೆ.  ಆ ಋಷಿಗಳು ಋಕ್ಕುಗಳನ್ನು ಅವ್ಯಕ್ತ ಸ್ರೋತದಿಂದ 'ಕೇಳಿಸಿಕೊಂಡರು' ಹಾಗೂ ಅವುಗಳನ್ನು ತಮ್ಮ ಮುಂದಿನ ಪೀಳಿಗೆ ಕೇಳಿಸಿದರು. ಹೀಗೆ ತಲೆತಲಾಂತರಗಳಿಂದ 'ಶ್ರವಣ' ಮಾಧ್ಯಮದ ಮೂಲಕ ಅವು ಅಸ್ತಿತ್ವದಲ್ಲಿರುವುದರಿಂದ ವೇದಕ್ಕೆ 'ಶೃತಿ' ಎಂಬ ಇನ್ನೊಂದು ಹೆಸರು ಕೂಡ ಪ್ರಸಿದ್ಧವಾಗಿದೆ.  
ಹೀಗೆ ಅನೇಕ ಋಷಿಗಳಿಗೆ ಸಾವಿರಾರು ಋಕ್ಕುಗಳ ದರ್ಶನ ಆಗಿ ಅವುಗಳು ಅವರವರ ಸಂಪರ್ಕದಲ್ಲಿ ಇದ್ದವರಿಗೆ ಮಾತ್ರ ಗೊತ್ತಿದ್ದವು. ಅವುಗಳ ಉಪಯೋಗ ಯಜ್ಞಕರ್ಮಗಳ್ಲಿ ನಡೆಯುತ್ತಿತ್ತು ಮತ್ತು ಅಲ್ಲಲ್ಲಿ ನಡೆಯುತ್ತಿದ್ದ ಋಷಿಸದಸ್ಸುಗಳಲ್ಲಿ ಪರಸ್ಪರ ಆದಾನ-ಪ್ರದಾನಗಳು ನಡೆಯುತ್ತದ್ದವು. (ಯಜ್ಞ ಅಂದರೆ ಈಗಿನ ಕಾಲದಲ್ಲಿ ನಡೆಯುವ ಹೊಮ ಹವನಾದಿಗಳು ಅಲ್ಲ. ಹೋಮ ಹವನ ಪೂಜಾದಿಗಳಿಗೂ ಯಜ್ಞಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ವಿವರಿಸ ಹೊರಟರೆ ವಿಷಯಾಂತರವಾಗುತ್ತದೆ.) ಹೀಗೆ ಎಲ್ಲೆಲ್ಲೋ ಹರಡಿಕೊಂಡಿದ್ದ ವೇದವನ್ನು ಸಾವಿರಾರು ವರ್ಷಗಳ ನಂತರ ವ್ಯಾಸರ ಸಂಗ್ರಹಿಸಿ, ಅವುಳನ್ನು ದ್ರಷ್ಟಾರರಾದ ಋಷಿಗಳು, ವಿಷಯಗಳು ಹಾಗೂ ಆಯಾ ಋಕ್ಕುಗಳ ಅಭಿಮಾನಿ ದೇವತೆಗಳಿಗೆ ಅನುಗುಣವಾಗಿ ಅವುಗಳನ್ನು ಸೂಕ್ತ ಮಂಡಲ ಗಳಾಗಿ ವಿಂಗಡಿಸಿ ಒಟ್ಟು ಸಂಗ್ರಹಿಸಿದ ಗ್ರಂಥಕ್ಕೆ ''ಸಂಹಿತೆ'' ಅಂತ ಕರೆದರು. ಛಂದೋಬದ್ಧವಾದ ಪದ್ಯಾತ್ಮಕ ಋಕ್ಕುಗಳು ಋಗ್ವೇದ ಸಂಹಿತೆಯಾಗಿಯೂ, ಯಜ್ಞಪ್ರಕ್ರಿಯೆಲ್ಲಿಯ ಗದ್ಯಭಾಗವು ಯಜುರ್ವೇದ ಸಂಹಿತೆಯಾಗಿಯೂ, ಯಜ್ಞದಲ್ಲಿ ಉದ್ಗಾತೃ ಉಪಬೃಂಹಿಸಿ ಗಾನ ಮಾಡುತ್ತಿದ್ದ ಋಕ್ಕುಗಳು ಸಾಮವೇದ ಸಂಹಿತೆಯಾಗಿಯೂ ವಿಭಜಿಸಲ್ಪಟ್ಟವು. ಹೀಗೆ ವೇದಗಳ ಸಂಗ್ರಹ-ಸಂಪಾದನೆ ಮಾಡಿದುದರಿಂದಲೇ ವೇದವ್ಯಾಸ ಎನ್ನುವ ಹೇಸರು ಬಾದರಾಯಣರಿಗೆ ಬಂದದ್ದು. (ಅಥರ್ವಾಂಗಿರಸರು ಸಂಗ್ರಹಿಸಿದ್ದು ಅಥರ್ವ ಸಂಹಿತೆ)  

ಉಪಾಸನಾ ಕಾಂಡ, ಕರ್ಮಕಾಂಡ ಮತ್ತು ಮತ್ತು ಜ್ಞಾನ ಕಾಂಡ ಎಂಬ ಮೂರು ವಿಭಾಗಗಳು ನಾಲ್ಕೂ ವೇದಗಳಲ್ಲಿ ಇವೆ. ಸಂಹಿತೆ, ಬ್ರಾಮ್ಹಣ ಮತ್ತು ಆರಣ್ಯಕ-ಇವು ಮೂರು ಕ್ರಮವಾಗಿ ಉಪಾಸನಾ, ಕರ್ಮ ಮತ್ತು ಜ್ಞಾನ ಕಾಂಡಗಳಾಗಿವೆ. ಋಗ್ವೇದಕ್ಕೆ ಪದ ಪಾಠ, ಕ್ರಮಪಾಠ ಎಂಬೆರಡು ಪ್ರಕೃತಿ ಪಾಠಗಳು ಹಾಗೂ ಜಟಾಪಾಠ, ಮಾಲಾಪಾಠ, ಶಿಖಾಪಾಠ, ರೇಖಾಪಾಠ, ಧ್ವಜಪಾಠ, ದಂಡಕ್ರಮ, ಮತ್ತ ಘನಪಾಠಗಳೆಂಬ ಎಂಟು ವಿಕೃತಿ ಪಾಠಗಳು ಇವೆ. ಯಜುರ್ವೇದಕ್ಕೆ ಎರಡು ಪ್ರಕೃತಿ ಪಾಠಗಳು ಹಾಗೂ ಎರಡು ವಿಕೃತಿ ಪಾಠಗಳು ಇವೆ. ಈ ಎಲ್ಲ ಪಾಠಪ್ರಕಾರಗಳಿಗೆ ಉದಾತ್ತ, ಅನುದಾತ್ತ, ಸ್ವರಿತ ಮತ್ತು ಪ್ರಚಯ ಎಂಬ ನಾಲ್ಕು ಪ್ರಧಾನ ಸ್ವರ ಸಂಚಾರಗಳಿವೆ. ಹಗೂ ಎಕಕಂಪ, ತ್ರಿಕಂಪ ಪ್ರಾತಿಹತಸ್ವರಿತ ಮೊದಲಾದ ಉಪ ಸ್ವರಗಳು ಇವೆ. ಸ್ವರಹೀನವಾಗಿ ಶ್ಲೋಕದಂತೆ ವೇದದ ಋಕ್ಕುಗಳನ್ನು ಪಠಿಸುವಂತಿಲ್ಲ.  ಪುರುಷ ಸೂಕ್ತದ ಎಲ್ಲ ವಿಕೃತಿಪಾಠಗಳನ್ನು ಕೂಡ ಪ್ರಸಕ್ತ ರಂಗಪ್ರಯೋಗದಲ್ಲಿ ಬಳಸಿಕೊಳ್ಳಲಾಗಿದೆ. 

ಋಗ್ವೇದದಲ್ಲಿ ಗಾಯತ್ರೀ ಮಂತ್ರವನ್ನು ಬಿಟ್ಟರೆ ಪುರುಷಸೂಕ್ತವೇ ಹೆಚ್ಚಾಗಿ ಬಳಕೆಯಲ್ಲಿದೆ. ಶ್ರೇಷ್ಠತೆಯಲ್ಲಿಯೂ, ವಿಷಯನಿರೂಪಣೆಯಲ್ಲಿಯೂ ಇದರಲ್ಲಿ ವಿವರಿಸಿರುವ ತತ್ತ್ವಗಳು ಅತಿ ಗಹನವಾಗಿರುವುದರಿಂದಲೂ, ಪರಮಪುರುಷನ(ಪರಬ್ರಹ್ಮನ) ಸ್ವರೂಪ, ಶಕ್ತಿ ಸಾಮರ್ಥ್ಯಗಳು, ಸೃಷ್ಟಿಯ ವಿವರಣೆ, ವೇದಾದಿಗಳ ಉತ್ಪತ್ತಿ ಯಜ್ಞದ ಸ್ವರೂಪ ಮೊದಲಾದ ಮಹತ್ತ್ವದ  ಸಂಗತಿಗಳು ಇದರಲ್ಲಿ ಅಡಕವಾಗಿರುವುದರಿಂದಲೂ ಈ ಪುರುಷ ಸೂಕ್ತಕ್ಕೆ ಅತಿಶಯವಾದ ಪ್ರಾಧಾನ್ಯತೆ ಇದೆ. ಇದನ್ನು, ಪೋಜೆ, ಅಭೀಷೇಕ ಮುಂತಾದ ಅನೇಕ ಸಂದರ್ಭಗಳಲ್ಲಿ ಪಠಿಸುತ್ತಾರೆ. 
ಪೂಜೆಯಲ್ಲಿ ಎಕೋಪಚಾರ, ಪಂಚೋಪಚಾರ, ಷೋಡಶೋಪಚಾರ ಮುಂತಾದ ಅನೇಕ ಕ್ರಮಗಳಿವೆ. ಆದರೆ ಷೋಡಶೋಪಚಾರ ಅತ್ಯಂತ ಹೆಚ್ಚು ಪ್ರಚಲಿತದಲ್ಲಿ ಇದೆ. 'ಷೋಡಶ' ಎಂದರೆ ಹದಿನಾರು. ಹದಿನಾರು ಉಪಚಾರಗಳಿಂದ ಮಾಡುವ ಪೂಜೆ ಅತ್ಯಂತ ಪ್ರಶಸ್ತ ಮತ್ತು ಉತ್ತಮ. 16 ಎಂಬುದು ಒಂದು ಪರಿಪೂರ್ಣ ಸಂಖ್ಯೆ. ಸೃಷ್ಟಿಯನ್ನು ಹದಿನಾರು ವಿಧದಲ್ಲಿ ವಿಭಾಗಿಸಿ ನೋಡುವುದು ಬಾರತೀಯ ಕಲ್ಪನೆ. ಷೋಡಶ ಕಲೆಗಳು ಅಂತ ಅದನ್ನು ಕರೆಯುತ್ತೇವೆ. ಕಲೆ ಎಂದರೆ ಇಲ್ಲಿ ವಿಭಾಗ ಎಂಬರ್ಥ. ಆಧುನಿಕ ವ್ಯವಹಾರದಲ್ಲಿಯೂ ಕೂಡ ಇದು ಕಂಡು ಬರುತ್ತದೆ. ರೂಪಾಯಿಯನ್ನು ವಿಭಜಿಸುವಾಗ ಒಂದಾಣೆ, ನಾಲ್ಕಾಣೆ ಎಂಟಾಣೆ ಮುಂತಾಗಿ ಇದೆ. ಹದಿನಾರು ಆಣೆಗೆ ಒಂದು ರೂಪಾಯಿ. ಅದೇ ರೀತಿ ಅಮಾವಾಸ್ಯೆಯಿಂದ ಹದಿನಾರನೇ ದಿನ ಹುಣ್ಣಿಮೆ. ಹೀಗೇ ಅನೇಕ ರೀತಿಯಲ್ಲಿ 16 ಎನ್ನುವು ಒಂದು ಪರಿಪೂರ್ಣತೆಯ, ಏಕತೆಯ ಸಂಕೇತ. ವಿವಿಧ ದೇವತೋಪಾನೆ ನಮ್ಮಲ್ಲಿ ಇದ್ದಾಗಿಯೂ ಅದರ ಆಂತರ್ಯದಲ್ಲಿ ಏಕತೆ ಅಡಗಿದೆ. ಪುರುಷ ಸೂಕ್ತದಲ್ಲಿರುವ ಋಕ್ಕುಗಳು ಕೂಡ ಹದಿನಾರು. ಹೀಗಾಗಿ ಧ್ಯಾನ, ಆವಾಹನ ಮುಂತಾದ ಹದಿನಾರು ಉಪಚಾರಗಳನ್ನು ಪುರುಷಸೂಕ್ತದ ಒಂದೊಂದು ಋಕ್ಕು ಹೇಳಿಕೊಳ್ಳುತ್ತ ಮಾಡುವ ಪೂಜಾವಿಧಾನ ಅತ್ಯಂತ ಪ್ರಸಿದ್ಧ. 

ಈ ಪುರುಷ ಸೂಕ್ತವು ಋಗ್ವೇದ ಸಂಹಿತೆಯ ಹತ್ತನೆಯ ಮಂಡಲದ ತೊಂಭತ್ತನೆಯ ಸೂಕ್ತ. ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ಕೃಷ್ಣಯಜುವೇದದ ತೈತ್ತಿರೀಯ ಆರಣ್ಯಕದಲ್ಲಿಯೂ (ತೈ.ಆ. 3. 12. 12) sಶುಕ್ಲ ಯಜುವೇದದ ವಾಜಸನೇಯ ಸಂಹಿತೆಯಲ್ಲಿಯೂ, ಅಥವೇದದಲ್ಲಿಯೂ ಪಠಿತವಾಗಿವೆ. ಇದಲ್ಲದೆ ಈ ಸೂಕ್ತದ ಕೆಲವು ಭಾಗಗಳ ವಿವರಣೆಯು ಶತಪಥಬ್ರಾಹ್ಮಣ, ತೈತ್ತಿರೀಯಬ್ರಾಹ್ಮಣ, ತೈತ್ತರೀಯ ಆರಣ್ಯಕ, ನಿರುಕ್ತ, ಶ್ವೇತಾಶ್ವತರೋಪನಿಷತ್ತು, ಬೃಹದಾರಣ್ಯಕೋಪನಿಷತ್ತು ಮೊದಲಾದ ಗ್ರಂಥಗಳಲ್ಲಿ ಕಂಡು ಬರುತ್ತದೆ. ಈ ಸೂಕ್ತದ ಪ್ರಾಚೀನತೆಯ ವಿಷಯದಲ್ಲಿ ಆಂಗ್ಲ ಪಂಡಿತರಲ್ಲಿ ವಿಧವಿಧವಾದ ಅಭಿಪ್ರಾಯ ಭೇದವಿದೆ. ಈ ಸೂಕ್ತದಲ್ಲಿ ಬ್ರಾಹ್ಮಣಾದಿ ಚತುರ್ವಣಗಳ ಉತ್ಪತ್ತಿ ಕ್ರಮವನ್ನು ವಿವರಿಸಿರುವುದರಿಂದಲೂ ಅತಿ ಪ್ರಾಚೀನಕಾಲದಲ್ಲಿ ಈ ವಿಧವಾದ ವರ್ಣಭೇದವು ಇರಲಿಲ್ಲವೆಂತಲೂ ಆದ್ದರಿಂದ ಈ ಸೂಕ್ತವು ಅಷ್ಟೇನೂ ಪ್ರಾಚೀನವೆಂದು ಪರಿಗಣಿಸಲ್ಪಡುವುದಕ್ಕೆ ಸಾಧ್ಯವಿಲ್ಲವೆಂದು ಮ್ಯಾಕ್ಸ್ ಮುಲ್ಲರ್ ಮುಂತಾದ ವಿದ್ವಾಂಸರ ಅಭಿಪ್ರಾಯ. ಅದೇ ರೀತಿ ಬ್ರಾಮ್ಹಣಾದಿ ಶಬ್ದಗಳು ಋಗ್ವೇದದ ಇತರ ಭಾಗಗಳಲ್ಲಿಯೂ ಕಂಡುಬರುವುದರಿಂದ, ಹಾಗೂ ಪುರುಷಮೇಧದ ವಿಚಾರದ ಉಲ್ಲೇಖ ಇದರಲ್ಲಿ ಇರುವುದರಿಂದ ಇದೂ ಕೂಡ ಪ್ರಾಚೀನ ಸೂಕ್ತಗಳ ಗುಂಪಿಗೇ ಸೇರಬೇಕಾದ್ದು ಎಂಬುದು ಡಾ: ಹಾಗ್ ಮೊದಲಾದ ಪಂಡಿತರ ಅಭಿಪ್ರಾಯ. 

ಈ ಸೂಕ್ತಕ್ಕೆ ಪುರುಷಸೂಕ್ತ ಅನ್ನುವ ಹೆಸರು ಬರಲು ಕಾರಣ ಇದರಲ್ಲಿ ಸೃಷ್ಟಿಕರ್ತನಾದ ವಿರಾಟ್ ಪುರುಷನ ವರ್ಣನೆ ಇದೆ. ಇಲ್ಲಿ ಪುರುಷ ಶಬ್ದಕ್ಕೆ ಲೋಕವ್ಯವಹಾರದ ಸ್ತ್ರೀ-ಪುರುಷ ಲಿಂಗ ಸೂಚಕ ಅರ್ಥವಲ್ಲ. ಆ ಪರಮಪುರುಷನಿಗೆ ಅಥವಾ ಪರಬ್ರಮ್ಹನಿಗೆ ಲಿಂಗಭೇದವಾಗಲೀ, ಆಕಾರವಾಗಲೀ ಇಲ್ಲ. ಈ ವಿರಾಟ್ ಪುರುಷನ ಉಲ್ಲೇಖ ವೇದಗಳಲ್ಲಿ ಮಾತ್ರವಲ್ಲದೇ ಭಾಗವತ ಪುರಾಣದಲ್ಲಿಯೂ ಕಂಡು ಬರುತ್ತದೆ. 

ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ. 
ಕ್ಷರಃಸರ್ವಾಣಿ ಭೂತಾನಿ ಕೂಟಸ್ಥಕ್ಷರ ಉಚ್ಯತೆ .. 
ಉತ್ತಮಃಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ -ಭಗವದ್ ಗೀತಾ 

ಕ್ಷರ ಮತ್ತ ಅಕ್ಷರ  ಎಂಬೆರಡೂ ತತ್ವಗಳು ಈಶ್ವರನ ವಿಭೂತಿ ವಿಶೇಷಗಳು. ಉತ್ಪನ್ನವನ್ನು ಹೊಂದಿ ಅನಂತರ ನಾಶವನ್ನು ಹೊಂದತಕ್ಕ ಜಗತ್ತಿನ ವಸ್ತುಗಳು 'ಕ್ಷರ' ಸಂಜ್ಞಕವಾದ ಪುರುಷರೂಪವುಳ್ಳದ್ದು. ಇದಕ್ಕೆ ವಿರುದ್ಧವಾಗಿ 'ನಿತ್ಯ' ಸ್ಥಿತಿಯಲ್ಲಿದ್ದುಕೊಂಡು ಜಗತ್ತಿನ ಸಂಬಂಧವಿಲ್ಲದೇ ಶುದ್ಧವಾದ ಸ್ವಸ್ವರೂಪ ಸ್ಥಿತಿಯಲ್ಲಿ ಇರತಕ್ಕ ಆತ್ಮನು ಅಕ್ಷರ ಪುರುಷನೆಂದು ಕರೆಯಲ್ಪಡುತ್ತಾನೆ. ಈ ರೀತಿ ಕ್ಷರ ಮತ್ತು ಅಕ್ಷರ ಗುಂಪಿನ ವಸ್ತಗಳಿಗೆ ಅತೀತನಾಗಿರುವವನು ಈಶ್ವರನು. ಅವನನ್ನೇ ಶೃತಿಗಳು ಉತ್ತಮಪುರುಷನೆಂದು ಕರೆದಿವೆ. ಅವನೇ ಪರಮಾತ್ಮನು. ಆ ಉತ್ತಮ ಪುರುಷನು ಅಥವಾ ಪರಮಪುರುಷ ಲೋಕಗಳನ್ನು, ಸೃಷ್ಟಿಯನ್ನು ತನ್ನಲ್ಲಿ ಧರಿಸಿದ್ದಾನೆ(ಅಥವಾ ಧರಿಸಿದೆ). 

'ಯತೊ ವಾಚೋ ನಿವರ್ತಂತೆ' ಎಂಬ ವಾಕ್ಯ ಯಜುರ್ವೇದದ ಉಪನಿಷತ್ತಿನಲ್ಲಿದೆ. ''ಎಲ್ಲಿಗೆ ಮಾನವನ ವಾಕ್ಕು ನಿಲ್ಲುತ್ತದೋ ಅಲ್ಲಿ ಆ ಪರಮಪುರುಷನ ಅಥವಾ ಪರಮಾತ್ಮನ ವರ್ಣನೆ ಪ್ರಾರಂಭವಾಗುತ್ತದೆ''. ಅನ್ನೂದು ಅದರ ಸಾರಾಂಶ. ಹೀಗೆ ಶೃತಿಯೇ ಹೇಳುವಂತೆ ಭಗವತ್ತತ್ವನ್ನು ಲೌಕಿಕ ಭಾಷೆಯಲ್ಲಿ ಅಷ್ಟು ಸುಲಭವಾಗಿ ಪರಿಚಯಿಸಿಕೊಳ್ಳುವುದು ಕಷ್ಟ. ಹಾಗಾಗಿಯೆ ಅನೇಕ ಸಂದರ್ಭಗಳಲ್ಲಿ ನಮ್ಮ ಆಧುನಿಕ ಭಾಷೆಯ ಪರಿಮಿತಿಗಳಲ್ಲಿ ನಾವು ವ್ಯಾಖ್ಯಾನಿಸಹೋದಾಗಲೇ ಎಡವಿ ಬಿದ್ದು ಅಪಾರ್ಥಗಳಾಗುತ್ತವೆ. 

ಪುರುಷಸೂಕ್ತವನ್ನು 'ದರ್ಶನ' ಮಾಡಿಕೊಂಡವನು ನಾರಾಯಣ ಋಷಿ. ಹದಿನಾರು ಋಕ್ಕುಗಳ ದ್ರಷ್ಟಾರನಾದ ನಾರಾಯಣ ಎಂಬ ಮಹರ್ಷಿ ಯಾರು? ಈತ ಗೌತಮ ವಿಶ್ವಾಮಿತ್ರಾದಿಗಳಂತೆ ಐತಿಹಾಸಿಕ ಋಷಿಯೇ ಎಂಬ ವಿಷಯದಲ್ಲಿ ಸಪಷ್ಟವಾದ ನಿರ್ಣಯಕ್ಕೆ ಬರುವುದು ಸುಲಭವಲ್ಲ. ನಾರಾಯಣ ಎಂಬ ಹೆಸರು ಸಂಹಿತೆಯಲ್ಲೆಲ್ಲೂ ಉಲ್ಲೇಖಗೊಂಡಿಲ್ಲ. ಬ್ರಾಮ್ಹಣ ಹಾಗೂ ಉಪನಿಷತ್ತುಗಳಲ್ಲಿಯೂ ಈ ಋಷಿಯ ಉಲ್ಲೇಖವಿಲ್ಲ. ನಿರುಕ್ತಕಾರರಾಗಲೀ, ಬೃಹದ್ದೇವತಾಕಾರರಾಗಲೀ ಈ ವಿಷಯವನ್ನು ತಿಳಿಸಿಲ್ಲ. ಹೀಗಾಗಿ ಇತರ ಕೆಲವೆಡೆ ಸೂಕ್ತಗಳ ವಿಷಯಕ್ಕನುಗುಣವಾಗಿ ಸೂಕ್ತದ್ರಷ್ಟುವಿನ ಹೆಸರನ್ನು ತಿಳಿಸುವಂತೆ ಈ ಸೂಕ್ತಕ್ಕೂ ಸಹ ನಾರಾಯಣ ಎಂಬ ಋಷಿಯ ನಾಮನಿರ್ದೇಶನವಿದೆ. 
ಆದರೆ ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ಪುರುಷ, ಪರಮಪುರುಷ, ಪರಮಾತ್ಮ ಮುಂತಾದ ಹೆಸರುಗಳುಳ್ಳ ಈಶ್ವರನ ವಿಷಯ ಈ ಸೋಕ್ತದಲ್ಲಿದೆ. ಇದರಲ್ಲಿ ನಾರಾಯಣ ಎಂಬ ಶಬ್ದವೇ ಇಲ್ಲ. (ಇಡೀ ಸಂಹಿತೆಯಲ್ಲಿಯೂ 'ನಾರಾಯಣ' ಎಂಬ ಶಬ್ದವಿಲ್ಲ). ಅದು ಹೇಗೆ ಈ ಸೂಕ್ತದ್ರಷ್ಟುವಿನ ಹೆಸರು ನಾರಾಯಣನೆಂದು ಪ್ರಸಿದ್ಧವಾಗಿದೆ? ಎಂಬುದು. ಆದರೆ ಅದಕ್ಕುತ್ತರ ಪುರುಷ-ನಾರಾಯಣ ಎಂಬೆರಡೂ ಹೆಸರುಗಳೂ ಅದ್ವಿತೀಯನಾದ ಈಶ್ವರನ ವಿಭೂತಿವಿಶೇಷಗಳೇ ವಿನಃ ಬೇರೆಯಲ್ಲ ಅನ್ನೋ ಶೃತಿವಾಕ್ಯಗಳ ಆಧಾರದಿಂದ ಸಿದ್ಧವಾಗುತ್ತದೆ. ರಾಮನಿಗೆ ಸಂಬಂಧಿಸಿದುದು ರಾಮಾಯಣವೆಂಬಂತೆ ನರನಿಗೆ ಸಂಬಂಧಿಸಿದವನು ನಾರಾಯಣನೆಂದು ಹೇಳಬಹುದು. ಇಲ್ಲಿ ನರನ ಪುತ್ರನೆಂದೂ ಅರ್ಥ ಮಾಡಬಹುದು. ಪುರುಷನೆಂಬ ಅರ್ಥದಲ್ಲೇ ನರ ಶಬ್ದದ ಪ್ರಯೋಗವಿರುತ್ತದೆ. ವಿರಾಟ್ ರೂಪಿಯಾದ ಈಶ್ವರನಿಂದ ಪುರುಷನ ಉತ್ಪತ್ತಿ ಮತ್ತು ಪುರುಷನಿಂದ ವಿರಾಟ್ ಪ್ರಪಂಚದ ಉತ್ಪತ್ತಿ ಎಂದು ಪುರುಷಸೂಕ್ತದಲ್ಲೇ ಹೇಳಿರುವುವಂತೆ ಪುರುಷನ ಪುತ್ರನೇ ನಾರಾಯಣನು. ನಾರಾಯಣನೇ ಪುರುಷನು. ಪಿತೃ ಮತ್ತು ಪುತ್ರ ಇಬ್ಬರೂ ಒಂದೇ. ಇದು ಲೌಕಿಕವಾದ ಅರ್ಥದಲ್ಲಿ ಅಲ್ಲ. ಆಧ್ಯಾತ್ಮಿಕ ಅರ್ಥದಲ್ಲಿ. 
ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ
ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣಃಸ್ಮೃತಃ.. 

ಆಪಗಳಿಗೆ(ಜಲ) ನಾರಾ ಎಂಬ ಹೆಸರು ಪ್ರಸಿದ್ಧವಾಗಿದೆ. ಈ ಆಪಗಳು ಅಥವಾ ಉದಕಗಳು ನರಸಂಜ್ಞಕನಾದ ಪರಮಾತ್ಮನಿಂದ ಉತ್ಪನ್ನವಾಗಿವೆ. ಈ ಪರಮಾತ್ಮನಿಗೆ ಅವನು ಬ್ರಮ್ಹರೂಪಿಯಾಗಿದ್ದಾಗ ಉದಕಗಳೇ ಆಶ್ರಯವಾಗಿದ್ದವು. ಆದುದರಿಂದಲೇ ಪರಮಾತ್ಮನಿಗೆ ನಾರಾಯಣ ಎಂಬ ಹೆಸರು. ನಾರಗಳೇ(ಉದಕಗಳೇ) ಅಯನ(ಆಶ್ರಯ)ವಾಗಿ ಉಳ್ಳವನು ನಾರಾಯಣ. ಇಂತಹ ನಾರಾಯಣ ಈ ಪುರುಷಸೂಕ್ತದ ದ್ರಷ್ಟಾರನು. ನರನಾರಾಯಣನೆಂಬ ವ್ಯಕ್ತಿ ಇದರ ದ್ರಷ್ಟಾರನೆಂಬುದು ಕೆಲ ವಿದ್ವಾಂಸರ ಮತ.  ನಾರಾಯಣ ಪ್ರಣೀತ ಮತ್ತು ನಾರಾಯಣ ವಿಷಯಾತ್ಮಕವಾದ್ದರಿಂದ ಪುರುಷಸೂಕ್ತಕ್ಕೆ ನಾರಾಯಣೀಯವೆಂಬ ಹೆಸರು ಕೂಡ ಇದೆ. ಋಗ್ವಿಧಾನ ಎಂಬ ಗ್ರಂಥದಲ್ಲಿ ಶೌನಕ ಮಹರ್ಷಿಯು ಪುರುಷಸೂಕ್ತದ ವಿವಿಧ ಉಪಾಸನಾ ವಿಧಾನಗಳನ್ನು ಹಾಗೂ ಅದರಿಂದುಂಟಾಗುವ ಫಲಗಳನ್ನು ವಿಸ್ತಾರವಾಗಿ ವಿವರಿಸಿದ್ದಾನೆ.



ಇಂತಹ ಪುರುಷಸೂಕ್ತದ ಪರಿಚಯವೇ ಒಂದನೂರು ಪುಟಗಳಷ್ಟು ವಿಸ್ತಾರವಾಗಿ ಬರೆಯಬೇಕಾದ ವಿಷಯ- ಆದರೂ ಈಗಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲ ವಿಷಯಗಳನ್ನಷ್ಟೆ ಬರೆದಿದ್ದೇನೆ. ಇಂತಹ ಅಪರೂಪದ ವಿಷಯವನ್ನು ರಂಗಕ್ಕೆ ಅಳವಡಿಸಿ ಪ್ರಸ್ತುತಪಡಿಸುತ್ತಿರುವ ಅಭಿಜ್ಞಾನ ತಂಡದ ಪ್ರಯತ್ನ ಅತ್ಯಂತ ಶ್ಲಾಘನೀಯವಾದುದು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರತಿಕ್ರಯಿಸಿದರೆ ಇಂತಹ ಪ್ರಯೋಗಗಳು ವೃದ್ಧಿಸಿಯಾವು. 

ಇನ್ನು ಪುರುಷ ಸೂಕ್ತದ ಹದಿನಾರು ಋಕ್ಕುಗಳನ್ನು ಹಾಗೂ ಅವುಗಳ ಸಂಕ್ಷಿಪ್ತ ಅರ್ಥವನ್ನು ನೋಡೋಣ.

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃಸಹಸ್ರಪಾತ್
  ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಂ ।।

ಪುರುಷಃ- ಆದಿ ಪುರುಷನು ಸಹಸ್ರಶೀರ್ಷಾ- ಅಸಂಖ್ಯಕವಾದ ಶಿರಸ್ಸುಗಳಿಂದ ಕೂಡಿದವನು ಸಹಸ್ರಾಕ್ಷಃ- ಅಸಂಖ್ಯಕವಾದ ಕಣ್ಣುಗಳುಳ್ಳವನು ಸಹಸ್ರಪಾತ್ - ಅಸಂಖ್ಯಕವಾದ ಪಾದಗಳುಳ್ಳವನು ಸಃ - ಪುರುಷನು ಭೂಮಿಂ - ಬ್ರಮ್ಹಾಂಡಗೋಳರೂಪವಾದ ಸಮಸ್ತ ವಿಶ್ವವನ್ನು ವಿಶ್ವತಃ- ಸುತ್ತಲೂ ವೃತ್ವಾ- ಸುತ್ತುವರಿದು ದಶಾಂಗುಲಂ- ಅದಕ್ಕಿಂತಲೂ ಹತ್ತು ಅಂಗುಲದಷ್ಟು ಅತ್ಯತಿಷ್ಠತ್ - ಅತಿಕ್ರಮಿಸಿಯೂ ಸ್ಥಾಪಿತನಾಗಿದ್ದಾನೆ.
 ( ಇಲ್ಲಿ ಸಹಸ್ರವೆಂದರೆ ಸಾವಿರವೆಂದರ್ಥವಲ್ಲ. ಅನಂತವೆಂದರ್ಥಪರಮೇಶ್ವರನು ಸಕಲ ಪ್ರಾಣಿಗಳಲ್ಲಿಯೂ ಅಂತರ್ಯಾಮಿಯಾಗಿದ್ದಾನೆ. ಆದುದರಿಂದ ಅನಂತ ಸಂಖ್ಯೆಯುಳ್ಳ ಪ್ರಾಣಿಗಳ ಶಿರಸ್ಸೆಲ್ಲವೂ ಪರಮೇಶ್ವರನ ಶಿರಸ್ಸೇ ಆದವು. ಆದುದರಿಂದ ಇಲ್ಲಿ ಸಹಸ್ರ ಶಬ್ದವು ಅನಂತ ಎಂಬ ತಾತ್ಪರ್ಯವನ್ನು ಕೊಡುತ್ತದೆ ಎಂದು ಸಾಯಣರು ವಿವರಿಸಿದ್ದಾರೆ.
ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕಾಗಿದೆ. ಪರಮೇಶ್ವರನಿಗೆ ಅವ್ಯಕ್ತಾವಸ್ಥಯಲ್ಲಿ ನಿರ್ದಿಷ್ಟವಾದ ಆಕಾರವು  ಇರುವುದಿಲ್ಲವೆಂದೂ ಅವನುಉ ಸರ್ವವ್ಯಾಪಿಯೆಂದೂ ವರ್ಣಿಸಲಾಗಿದೆ. ಹೀಗಿರುವಾಗ ಪರಮಾತ್ಮನಿಗೆ ಶಿರಸ್ಸುಗಳು, ಕಣ್ಣುಗಳು ಕಾಲುಗಳು ಅಸಂಖ್ಯಾಕವಾಗಿ ಇರುವವು ಎಂಬುದರ ಅರ್ಥವೇನು? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ನಮ್ಮ ಅನುಭವದಲ್ಲಿರುವಂತೆ ಎಂದರೆ ನಮಗಿರುವಂತೆ ಪರಮಾತ್ಮನಿಗೆ ಶಿರಸ್ಸುಗಳು ಕಣ್ಣುಗಳು ಕಾಲುಗಳು ಇರುವುದಿಲ್ಲ. ನಮಗೆ ಕಣ್ಣಗಳಿಲ್ಲದಿದ್ದರೆ ನಾವು ಏನನ್ನೂ ನೋಡಲಾರೆವು. ಪರಮಾತ್ಮನ ವಿಷಯದಲ್ಲಿ ಹಾಗಲ್ಲ. ಅವನಿಗೆ ಚಕ್ಷುರಾದಿ ಇಂದ್ರಿಯಗಳ ಹಂಗಿಲ್ಲ. ಚೈತನ್ಯಸ್ವರೂಪವೇ ಅವನಾದ್ದರಿಂದ ಇಂದ್ರಿಯಗಳ ಮೂಲಕ ವಸ್ತುಸ್ವರೂಪವನ್ನು ಅವನು ಗ್ರಹಿಸಬೇಕಾಗಿಲ್ಲ. ಅವಯವಗಳಿಲ್ಲದೇ ಎಲ್ಲಾ ಅವಯವಗಳ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲವನು. ಆದ್ದರಿಂದ ಇಲ್ಲಿ ಹೇಳಿರುವ ಸಹಸ್ರಶೀರ್ಷಾ ಇತ್ಯಾದಿ ಶಬ್ದಗಳು ಪರಮಾತ್ಮನಿಗೆ ಸಾವಿರಾರು ಅಥವಾ ಅಸಂಖ್ಯಾತವಾದ ಶಿರಸ್ಸುಗಳು ಮೊದಲಾದ ಇಂದ್ರಿಯಗಳು ಇವೆ ಎಂದು ವರ್ಣಿಸುವುದಕ್ಕಾಗಿ ಪ್ರಯೋಗಿಸಲ್ಪಟ್ಟಿಲ್ಲ. ಆದರೆ ಅವನ ಅಪಾರತೆಯನ್ನು ನಮಗೆ ಬಳಕೆಯಲ್ಲಿರುವ ಭಾಷೆಯಲ್ಲಿ ಸ್ವಲ್ಪ ಮಟ್ಟಿಗಾದರೂ ತಿಳಿಸುವುದಕ್ಕಾಗಿಯೇ ಶಬ್ದಗಳ ಪ್ರಯೋಗವಿದೆ ಎಂದು ತಿಳಿಯಬೇಕು.

ಇನ್ನು '' ಭೂಮಿಂ ವಿಶ್ವತೋ ವೃತ್ವಾ'' ಎಂಬ ವಾಕ್ಯದಲ್ಲಿ ಭೂಮಿ ಎಂಬ ಶಬ್ದ ನಾವು ವಾಸ ಮಾಡುತ್ತಿರುವ ಭೂಮಿ ಅಥವಾ ಪ್ರಪಂಚವನ್ನು ಸೂಚಿಸುವುದಿಲ್ಲಅಸಂಖ್ಯಾತ ಇತರ ಭೂಮಿ ಅಥವಾ ಬ್ರಮ್ಹಾಂಡಗಳನ್ನೂ ಅಂದರೆ ವಿಶ್ವಸೃಷ್ಟಿಯಲ್ಲಿರುವ ಸಮಸ್ತವನ್ನೂ ಭೂಮಿ ಶಬ್ದ ಸೂಚಿಸುತ್ತದೆ. ಇದರಂತೆಯೆ ದಶಾಂಗುಲ ಎಂಭ ಶಬ್ದದ ಅರ್ಥವೂ ಉಪಲಕ್ಷಣ ಎಮದರೆ ಸಾಮಾನ್ಯಾರ್ಥವನ್ನು ಒಳಗೊಂಡಿದೆ. ದಶಾಂಗುಲ ಎಂದರೆ ಹತ್ತು ಅಂಗುಲ ಉದ್ದ ಎಂಬರ್ಥವಲ್ಲ. ಇಲ್ಲಿ ಅದಕ್ಕೆ ಹತ್ತು ಪಾಲು ಅಧಿಕ ಅಥವಾ ಅಥವಾ ಎಷ್ಟೋ ಪಟ್ಟು ಜಾಸ್ತಿ ಎಂಬರ್ಥದಲ್ಲಿ ಹತ್ತು ಅಂಗುಲ ಎಂಬುದನ್ನು ಗ್ರಹಿಸಬೇಕು.

ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಂ
  ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ।।

 ಇದಂ ಸರ್ವಂ- ನಮಗೆ ಗೋಚರವಾಗುವ ಸಕಲ ಜಗತ್ತೂ ಪುರುಷ ಏವ- ಆದಿಪುರುಷನೇ( ಅವನ ಭಾಗವೇ) ಯದ್ ಭೂತಂಯಾವುದು ಹಿಂದೆ ಇತ್ತೋ ಯಚ್ಚ ಭವ್ಯಂ- ಯಾವುದು ಮುಂದೆ ಸಂಭವಿಸುವುದೋ (ಅದೆಲ್ಲವೂ ಅವನೇ ಆಗಿರುತ್ತಾನೆ) ಉತ- ಮತ್ತು ಅಮೃತತ್ವಸ್ಯ- ಅಮೃತತ್ವಕ್ಕೆ ಈಶಾನಃ - ಅವನೇ ಪ್ರಭುವು ಯತ್- ಯಾವ ನಿಮಿತ್ತವಾಗಿ ಅನ್ನೇನ- ಅನ್ನದಿಂದ ಅತಿರೋಹತಿ- ಅವನು ಬೆಳೆಯುವನೋ (ಆದುದರಿಂದ ಅವನು ಈಗ ಕಾಣಿಸಿಕೊಳ್ಳುವುದಕ್ಕಿಂತಲೂ ಆಧಿಕ ಮಹತ್ತು ಉಳ್ಳವನು)

  ಏತಾವಾನಸ್ಯ ಮಹಿಮಾತೋ ಜ್ಯಾಯಾಂಶ್ಚ ಪೂರುಷಃ
   ಪಾದೋಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ. ।।

ಏತಾವಾನ್- ಭೂತ, ವರ್ತಮಾನ ಮತ್ತು ಭವಿಷ್ಯದ್ರೂಪವಾದ ಸಕಲ ಜಗತ್ತೂ ಅಸ್ಯ- ಇವನ ಮಹಿಮಾ- ಸಾಮರ್ಥ್ಯವಿಶೇಷವೇ ಆಗಿದೆ - ಅಲ್ಲದೇ ಪುರುಷಃ - ಆದಿ ಪುರುಷನು ಅತಃ- ಸಕಲ ಜಗತ್ತಿಗಿಂತಲೂ ಜ್ಯಾಯಾನ್- ಅಧಿಕನು ವಿಶ್ವಾ ಭೂತಾನಿ- ಭೂಮಿ- ಆಕಾಶ ಮೊದಲಾದ ಸಕಲ ಭೂತಗಳೂ ಅಸ್ಯ- ಪುರುಷನ ಪಾದಃ- ಕಾಲು ಭಾಗ ಮಾತ್ರ ಅಸ್ಯ- ಮಹಾಪುರುಷನ ತ್ರಿಪಾತ್- (ಉಳಿದ )ಮುಕ್ಕಾಲು ಪಾಲು ದಿವಿ- ಗೋಚರಾತೀತವಾದ ದ್ಯುಲೋಕದಲ್ಲಿದೆ( ಸ್ವಪ್ರಕಾಶರೂಪದಲ್ಲಿ ಅಮೃತಂ - (ಅದು) ವಿಕೃತಿಯನ್ನು ಹೊಂದದೇ ಇರುತ್ತದೆ. ( ಯಾವ ಬದಲಾವಣೆ ಹೊಂದದೇ ಸಹಜ ಸ್ಥಿತಿಯಲ್ಲಿರುತ್ತದೆ.)

  ತ್ರಿಪಾದೂರ್ಧ್ವ ಉದೈತ್ ಪುರುಷಃ ಪಾದೋಸ್ಯೇಹಾಭವತ್ ಪುನಃ
   ತತೊ ವಿಷ್ವಙ್ ವ್ಯಕ್ರಾಮತ್ ಸಾಶನಾಶನೆ ಅಭಿ ।।

ತ್ರಿಪಾತ್ ಪುರುಷಃ - ಇಂದ್ರಿಯಕ್ಕೆ ಗೋಚರವಲ್ಲದ ತನ್ನ ಮುಕ್ಕಾಲು ಭಾಗವನ್ನು ಸ್ವಪ್ರಕಾಶಲೋಕದಲ್ಲಿ ಸ್ಥಾಪಿಸಿರುವ ಪುರುಷನು ಊರ್ಧ್ವಂ - ಉತ್ಕೃಷ್ಟವಾದ ದಿವ್ಯ ಲೋಕದಲ್ಲಿ ಉದೈತ್ - ಸಂಸಾರಾತೀತನಾಗಿ ಸ್ಥಾಪಿತನಾಗಿದ್ದಾನೆ  ಅಸ್ಯ - ಆದಿ ಪುರುಷನ ಪಾದಃ - ಉಳಿದ ನಾಲ್ಕನೆಯ ಒಂದು ಭಾಗವು  ಇಹ - ಸಂಸಾರ ರೂಪದಲ್ಲಿ ವಿಷ್ವಙ್ -ನಾನಾ ರೂಪಗಳಲ್ಲಿ ವ್ಯಕ್ರಾಮತ್- ಜಗತ್ತನ್ನು ವ್ಯಾಪಿಸಿದನು


  ತಸ್ಮಾತ್ ವಿರಾಳಜಾಯತ ವಿರಾಜೋ ಅಧಿ ಪೂರುಷಃ
  ಜಾತೋ ಅತ್ಯರಿಚ್ಯತ ಪಶ್ಚಾತ್ ಭೂಮಿಮಥೋ ಪುರಃ।।

ತಸ್ಮಾತ್ - ಆದಿಪುರುಷನಿಂದ ವಿರಾಟ್- ಅನೇಕ ಪ್ರಕಾರಗಳಲ್ಲಿ ಮೆರೆಯುವ ಬ್ರಮ್ಹಾಂಡವು ಅಜಾಯತ- ಉತ್ಪನ್ನವಾಯಿತು ವಿರಾಜಃ ಅಧಿ- ವಿರಾಟ್ ದೇಹವನ್ನೇ ಆಶ್ರಯಿಸಿ ಪುರುಷಃದೇಹಾಭಿಮಾನಿಯಾದ ಪುರುಷನು ಕಾಣಿಸಿಕೊಂಡನು ಸಃ ಜಾತಃ - ಚೇತನಾ ರೂಪದಲ್ಲಿ ಕಾಣಿಸಿಕೊಂಡ ಪುರುಷನು ಅತ್ಯರಿಚ್ಯತ- ತನಗಿಂತಲೂ  ಬೇರೆಯಾದ (ದೇವತಾ, ತಿರ್ಯಕ್, ಮನುಷ್ಯ, ಪಶು ಮುಂತಾದ) ರೂಪಗಳನ್ನು ಧರಿಸಿದನು ಪಶ್ಚಾತ್- ಅನಂತರ ಭೂಮಿಂ- ಭೂಮಿಯನ್ನೂ ಅಥೋ- ಅನಂತರ ಪುರಃ- ಪಾಂಚ ಭೌತಿಕ ಶರೀರಾದಿಗಳನ್ನೂ ನಿರ್ಮಿಸಿದನು

  ಯತ್ ಪುರುಷೇಣ ಹವಿಷಾ  ದೇವಾ ಯಜ್ಞಮತನ್ವತ
  ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ।।

 ಯತ್- ಪಾಂಚಭೌತಿಕ ಶರೀರಾದಿಗಳು ಉತ್ಪನ್ನವಾದ ನಂತರ ದೇವಾಃ- ಪುರುಷನ ಅಂಶಗಳಾದ ದೇವತೆಗಳು ಪುರುಷೇಣ- ಪುರುಷಸಂಜ್ಞಕವಾದ ಹವಿಷಾ- ಹವಿಸ್ಸಿನಿಂದ ಯಜ್ಞಂ - ಯಜ್ಞವನ್ನು ಅತನ್ವತ- ನೆರವೇರಿಸಿದರು ಅಸ್ಯ- ಯಜ್ಞಕ್ಕೆ ವಸಂತಃ- ವಸಂತ ಋತುವು ಆಜ್ಯಂ- ತುಪ್ಪವಾಗಿ ಅಸೀತ್- ಇತ್ತು ಗ್ರೀಷ್ಮಃ- ಗ್ರೀಷ್ಮವು ಇಧ್ಮಃ- ಇಧ್ಮವಾಗಿತ್ತು ಶರದ್ಧವಿಃ - ಶರತ್ತು ಹವಿಸ್ಸಾಗಿತ್ತು

  ತಂ ಯಜ್ಞಃ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ
  ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೆ ।।

ಅಗ್ರತಃ- ಸೃಷ್ಟಿಗಿಂತಲೂ ಮೊದಲು   ಜಾತಂ - ಉತ್ಪನ್ನನೂ ಯಜ್ಞಂ- ಯಜ್ಞಕ್ಕೆ ಸಾಧನಭೂತನೂ ಆದ ತಂ ಪುರುಷಃ- ವಿರಾಟ್ ಪುರುಷನನ್ನು ಬರ್ಹಿಷಿ- ಬರ್ಹಿಸ್ಸಿನ ಮೇಲೆ ಸ್ಥಾಪಿಸಿ ಪ್ರೌಕ್ಷನ್- ಪ್ರೋಕ್ಷಣೆ ಮಾಡಿದರು ತೇನ- ಪುರುಷಸ್ವರೂಪವಾದ ಪಶುವಿನಿಂದ ದೇವಾಃ- ದೇವತೆಗಳೂ ಸಾಧ್ಯಾಃ- ಸಾಧ್ಯರೂ ಋಷಯಃ- ಋಷಿಗಳೂ ಸೇರಿ ಯೆ- ಅನ್ಯರೂ ಸೇರಿ ಅಯಜಂತ- ಯಜ್ಞವನ್ನು ಮಾಡಿದರು

  ತಸ್ಮಾದ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷದಾಜ್ಯಂ
  ಪಶೂನ್ತಾಂಶ್ಚಕ್ರೆ ವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚ ಯೆ ।।


ಸರ್ವಹುತಃ- ಜಗದ್ರೂಪಿಯಾದ ವಿರಾಟ್ಪುರುಷನೇ ಆಹುತಿಯಾಗಿ ಉಳ್ಳ ತಸ್ಮಾತ್ ಯಜ್ಞಾತ್- ಯಜ್ಞದಿಂದ ಪೃಷದಾಜ್ಯಂ- ದಧಿ ಮಿಶ್ರಿತವಾದ ಆಜ್ಯವು ಸಂಭೃತಂ- ಸಂಪಾದಿತವಾಯಿತು ವಾಯವ್ಯಾನ್ -ವಾಯು ದೇವತಾಕವಾದ ಯಾವ ಪಕ್ಷ್ಯಾದಿಗಳಿವೆಯೋ ತಾನ್- ಅವುಗಳನ್ನು ಚಕ್ರೆ- ನಿರ್ಮಿಸಿದನು ಆರಣ್ಯಾನ್- ಅರಣ್ಯವಾಸಿಗಳಾದ ಮೃಗಗಳನ್ನೂ ಯೇ ಗ್ರಾಮ್ಯಾಃ- ಗೋವು ಮೊದಲಾದ ಗ್ರಾಮವಾಸಿಗಳಾದ ಪಶುಗಳನ್ನು ಉತ್ಪನ್ನ ಮಾಡಿದನು
  

         ತಸ್ಮಾದ್ ಯಜ್ಞಾತ್ ಸರ್ವಹುತ ಋಚಃ ಸಾಮಾನಿ ಜಜ್ಞಿರೆ
         ಛಂದಾಂಸಿ ಜಜ್ಞಿರೆ ತಸ್ಮಾದ್ ಯಜುಸ್ತಸ್ಮಾದಜಾಯತ ।।


ಸರ್ವಹುತಃ- ಸರ್ವಾತ್ಮಕವಾದ ವಿರಾಟ್ ಪುರುಷನೇ ಆಹಿತಿಯಾಗಿ ಉಳ್ಳ ತಸ್ಮಾತ್ ಯಜ್ಞಾತ್- ಯಜ್ಞದಿಂದ ಋಚಃ- ಋಕ್ಕುಗಳು ಸಾಮಾನಿ- ಸಾಮ ಮಂತ್ರಗಳೂ ಜಜ್ಞಿರೆ- ಉತ್ಪನ್ನವಾದವು ತಸ್ಮಾತ್- ಅದರಿಂದಲೇ ಛಂದಾಂಸಿ- ಛಂದಸ್ಸುಗಳೂ  ಜಜ್ಞಿರೆ- ಉತ್ಪನ್ನವಾದವು ತಸ್ಮಾತ್- ಯಜ್ಞದಿಂದಲೇ ಯಜುಃ- ಯಜಯಸ್ಸೂ ಅಜಾಯತ- ಉತ್ಪನ್ನವಾಯಿತು

    ಯತ್ ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್
    ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾಧಾ ಉಚ್ಯೇತೆ ।। 

 ಯತ್- ಯಾವಾಗ ಪುರುಷಂ- ಪುರುಷನನ್ನು। ವ್ಯದಧುಃ- ಯಜ್ಙಾಹುತಿಯನ್ನಾಗಿ ಸಂಕಲ್ಪಿಸಿದರೋ ಆಗ। ಕತಿಧಾ- ಎಷ್ಟು ಪ್ರಕಾರವಾಗಿ। ವ್ಯಕಲ್ಪಯನ್- ಅವನನ್ನು ವಿಭಾಗಿಸಿದರು। ಅಸ್ಯ- ಪುರುಷನ। ಮುಖಂ- ಮುಖವು। ಕಿಂ- ಯಾವುದು। ಅಸ್ಯ- ಇವನ। ಬಾಹೂ - ಬಾಹುಗಳು। ಕಾ ಊರೂ- ಯಾವವು ತೊಡೆಗಳು। ಪಾದೌ- ಪಾದಗಳು। ಕೌ- ಯಾವವು ಎಂದು। ಉಚ್ಯೇತೆ- ಹೇಳಲ್ಪಟ್ಟಿವೆ

    ಬ್ರಾಮ್ಹಣೋಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ
     ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ।।

ಬ್ರಾಮ್ಹಣಃ -ಬ್ರಾಮ್ಹಣನೇ ಅಸ್ಯ- ಪುರುಷನ ಮುಖಂ- ಮುಖವಾಗಿ। ಆಸೀತ್- ಇದ್ದನು। ಬಾಹೂ- ಬಾಹುಗಳು।ರಾಜನ್ಯಃ- ಕ್ಷತ್ರಿಯ ರೂಪವಾಗಿ।ಕೃತಃ- ಮಾಡಲ್ಪಟ್ಟವು। ತತ್- ಆಗ। ಅಸ್ಯ- ಪುರುಷನಊರೂ- ತೊಡೆಗಳು।ವೈಶ್ಯಃ- ವೈಶ್ಯರೂಪದಲ್ಲಿ ಪರಿಣಮಿಸಿದವು। ಪದ್ಭ್ಯಾಂ - ಪಾದಗಳಿಂದ। ಶೂದ್ರಃ- ಶೂದ್ರನು।ಅಜಾಯತ- ಉತ್ಪನ್ನನಾದನು

         ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ
          ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾತ್ ವಾಯುರಜಾಯತ ।।

ಮನಸಃಮನಸ್ಸಿನಿಂದ ಚಂದ್ರಮಾಃ- ಚಂದ್ರನು ಜಾತಃ- ಹುಟ್ಟಿದನು ಚಕ್ಷೋಃ- ಕಣ್ಣಿನಿಂದ ಸೂರ್ಯಃ- ಸೂರ್ಯನು ಅಜಾಯತ- ಹುಟ್ಟಿದನು ಮುಖಾತ್- ಮುಖದಿಂದ ಇಂದ್ರಶ್ಚ- ಅಗ್ನಿಶ್ಚ- ಅಗ್ನಿ ಮತ್ತು ಅಗ್ನಿಗಳು ಹುಟ್ಟಿದರು ಪ್ರಾಣಾತ್- ಪ್ರಾಣದಿಂದ ವಾಯುಃ- ವಾಯುವು ಅಜಾಯತ- ಹುಟ್ಟಿದನು


  ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ 
 ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ ತಥಾ ಲೋಕಾಙ್ ಅಕಲ್ಪಯನ್ ।। 

 ನಾಭ್ಯಾಃ - ಪುರುಷನ ಹೊಕ್ಕಳಿನಲ್ಲಿ  ಅಂತರಿಕ್ಷಂ- ಅಂತರಿಕ್ಷವು ಆಸೀತ್- ಇತ್ತು  ಶೀರ್ಷ್ಣಃ -ಶಿರಸ್ಸಿನಿಂದ  ದೌಃ- ದ್ಯುಲೋಕವು  ಸಮವರ್ತತ- ಪ್ರಾದುರ್ಭೂತವಾಯಿತು  ಪದ್ಭ್ಯಾಂ ಭೂಮಿಃ - ಪಾದಗಳಿಂದ ಭೂಮಿಯೂ ಶ್ರೋತ್ರಾದ್ದಿಶಃ- ಕಿವಿಗಳಿಂದ ದಿಕ್ಕುಗಳೂ ಉತ್ಪನ್ನವಾದವು ತಥಾ- ಹಾಗೆಯೇ ಲೋಕಾನ್ - ಲೋಕಗಳನ್ನು ಅಕಲ್ಪಯನ್- (ದೇವತೆಗಳು ಪುರುಷನ ದೇಹದಿಂದ) ನಿರ್ಮಿಸಿದರು

 ಸಪ್ತಾಸ್ಯಾಸನ್ ಪರಿಧಯಃ ತ್ರಿಃ ಸಪ್ತ ಸಮಿಧಃ ಕೃತಾಃ
 ದೇವಾ ಯತ್ ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಂ

ಅಸ್ಯ- ಯಜ್ಞಕ್ಕೆ ಸಪ್ತ - ಏಳು( ಛಂದಸ್ಸುಗಳು)  ಪರಿಧಯಃ- ಪರಿಧಿಗಳಾಗಿ  ಆಸನ್- ಇದ್ದವು  ತ್ರಿಃಸಪ್ತ- ಇಪ್ಪತ್ತೊಂದು ತತ್ವಗಳು  ಸಮಿಧಃಕೃತಾಃ- ಸಮಿತ್ತುಗಳಾಗಿ ಮಾಡಲ್ಪಟ್ಟಿದ್ದವು  ದೇವಾಃ- ದೇವತೆಗಳು  ಯತ್- ಯಾವ ಪುರುಷನನ್ನು  ಯಜ್ಞಂ- ಯಜ್ಞಸಾಧನವನ್ನಾಗಿ   ತನ್ವಾನಾಃ- ಮಾಡಲಪೇಕ್ಷಿಸಿದರೋ  ಪುರುಷಂ- ಪುರುಷನನ್ನೇ  ಪಶುಂ- ಪಶುಸ್ಥಾನದಲ್ಲಿ  ಅಬಧ್ನನ್- ಬಂಧಿಸಿದರು

ಯಜ್ನೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್
ತೆ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ

ದೇವಾಃ  - ದೇವತೆಗಳು  ಯಜ್ಞೇನ- ಮಾನಸಿಕವಾದ ಸಂಕಲ್ಪರೂಪದ ಯಜ್ಞದಿಂದ  ಯಜ್ಞಂ- ಯಜ್ಞರೂಪನಾದ ಪ್ರಜಾಪತಿಯನ್ನು  ಅಯಜಂತ- ಯಜಿಸಿದರು  ತಾನಿ- ಯಜ್ಞಪ್ರಕಾರಗಳೇ  ಪ್ರಥಮಾನಿ ಧರ್ಮಾಣಿ- ಆದಿಧರ್ಮಗಳಾಗಿ  ಆಸನ್- ಇದ್ದವು(ಪ್ರಸಿದ್ಧವಾದವು) ಯತ್ರ- ಯಾವ ಸ್ವರ್ಗದಲ್ಲಿ ಪೂರ್ವೇ- ಪುರಾತನರಾದ  ದೇವಾಃ- ದೇವತೆಗಳೂ ಸಾಧ್ಯಾಃ- ಸಾಧ್ಯರೂ  ಸಂತಿ- ಇರುವರೋ  ನಾಕಂ- ಸ್ವರ್ಗವನ್ನು  ತೇ ಮಹಿಮಾನಃ- ವಿರಾಟ್ಪುರುಷನ ುಪಾಸನೆ ಮಾಡುವ ಮಹಾತ್ಮರು  ಸಚಂತೆ- ಪಡೆಯುತ್ತಾರೆ


1 comment: