Wednesday, July 18, 2012

ಸ್ತ್ರೀಯರು ದುರ್ಗಾ ಸಪ್ತಶತಿ ಪಾರಾಯಣ ಮಾಡಬಹುದೇ?

This question is asked by sri.. shanakr hegade.. a famous astrologer - from Bangalore
This was my  answer to him ( I hope it will be helpful for many. that's why posting here)
ಶಂಕರ್ ಹೆಗಡೆಯವರೇ.. ಇಲ್ಲಿ ಬಹಳ ಗಂಭೀರ ಸಮಸ್ಯೆಯೇ ಆಗಿರುವ ವಿಷಯವನ್ನು ಒಂದೇ ಸಾಲಿನ ಪ್ರಶ್ನೆಯ ಮೂಲಕ ಎತ್ತಿದ್ದೀರಿ. ನನಗೆ ತಿಳಿದಂತೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಅನೇಕರು ಇಂತಹ ವಿಷಯ ಬಂದಕೂಡಲೇ ವೇದಕಾಲೀನ ಸ್ತ್ರೀಯರು ಕೆಲವರು ಮಂತ್ರಗಳನ್ನು ದರ್ಶನ ಮಾಡಿದ್ದನ್ನು ಉದಾಹರಿಸುತ್ತಾರೆ. ಸ್ತ್ರೀಯರಿಗೆ ಉಪನಯನ ನಡೆಯುತ್ತಿದ್ದ ಉದಾಹರಣೆಗಳನ್ನೂ ನೀಡುತ್ತಾರೆ. ಆದರೆ ಎಲ್ಲ ಸ್ತ್ರೀಯರಿಗೂ ಉಪನಯನ ನಡೆಯುತ್ತಿತ್ತೆ? ಯಾವ ಕಾಲಮಾನದಲ್ಲಿ ನಡೆಯುತ್ತಿತ್ತು? ಮತ್ತು ಕನ್ಯಾ ಉಪನಯನ ಯಾವಾಗ ನಿಂತು ಹೋಯಿತು..? ಯಾಕೆ ನಿಂತು ಹೋಯಿತು ಎಂಬುದರ ಬಗ್ಗೆ ಯಾರೂ ವಿವರಣೆ ಕೊಡುವುದಿಲ್ಲ. ಯುಗಧರ್ಮ ಎಂಬುದು ಒಂದು ಇದೆ, ಇವರು ಸ್ತ್ರೀಯರಿಗೆ ಉಪನಯನ ವೇದಾಧ್ಯಯನ ಎಲ್ಲ ಇತ್ತು ಎಂದು ಹೇಳುವ ಕಾಲದಲ್ಲಿ...ಅಂದರೆ ಕೃತ ಮತ್ತು ತ್ರೇತಾ ಯುಗಗಳಲ್ಲಿ ದೇವರೆಣ ಸುತೊತ್ಪತ್ತಿ - ಅಂದರೆ ಪತಿಯಿಂದ ಮಕ್ಕಳಾಗದೇ ಹೋದಲ್ಲಿ ಮೈದುನನ ಜೊತೆ ಮಿಥುನ ನಡೆಸಿ ಗಂಡು ಸಂತಾನ ಪಡೆದರೆ ಅದನ್ನು ಧರ್ಮ ಎಂದು ಒಪ್ಪುವ ಕಾಲ ಅದಾಗಿತ್ತು. ಮತ್ತು ಬ್ರಾಹ್ಮಣರು ನೇರವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಕಾಲಕ್ರಮೇಣ ಇವುಗಳೆಲ್ಲ ಅಧರ್ಮ ಎಂದು ಪರಿಗಣಿಸಲಾಯಿತು. ಜ್ಞಾನ ಬೆಳೆದಂತೆ ನಾಗರೀಕತೆ ಬೆಳೆಯಿತು. ಅದರ ಅಂಗವಾಗಿ ಕಲಿಯುಗಧರ್ಮದಲ್ಲಿ ಸ್ತ್ರೀಯರಿಗೆ ಮಂತ್ರೋಪಾಸನೆ ಬೇಡ. ಅದರಿಂದ ಕೆಡಕು ಹೆಚ್ಚು ಎಂದು ತೀರ್ಮಾನಿಸಲಾಯಿತು. ಮಾಂಸಾಹಾರವನ್ನು ಹೇಯವಾಗಿ ತಿಳಿಯಲಾಯಿತು. ಆದರೆ ಹಳೆಯದನ್ನು ಪೂರ್ತಿ ಬಿಡುವಂತೆಯೂ ಇರಲಿಲ್ಲ. ಹಾಗಾಗಿ ಮಾಂಸದ ಬದಲಿಗೆ ಉದ್ದಿನ ಒಡೆಯನ್ನು ಶ್ರಾದ್ಧಾದಿ ವೈದಿಕ ಕ್ರಿಯೆಗಳಲ್ಲಿ ಕಾಣುತ್ತೇವೆ. ಇನ್ನು ದುರ್ಗಾ ಸಪ್ತಶತಿಯ ವಿಷಯಕ್ಕೆ ಬರುವುದಾದರೆ ಅದು ಮಾರ್ಕಂಡೇಯ ಪುರಾಣದಲ್ಲಿ ಬರುವ ಏಳು ನೂರು ಶ್ಲೋಕಗಳ ಒಂದು ಕಥಾ ಭಾಗ ಭಾಗ ಅಷ್ಟೇ.ಅದನ್ನು ಕಥೆಯ ರೂಪದಲ್ಲಿ ಯಾರು ಬೇಕಾದರೂ ಓದಬಹುದು. ಅದು ಕನ್ನಡದಲ್ಲಿಯೂ ಸಿಗುತ್ತದೆ  ಆದರೆ ಆ ಏಳು ನೂರು ಶ್ಲೋಕಗಳಿಗೆ ಮೂರು ಬೀಜಾಕ್ಷರ ಸೇರಿದಂತೆ ಒಂಭತ್ತು ಅಕ್ಷರಗಳುಳ್ಳ ಒಂದು ಮೂಲ ಮಂತ್ರವನ್ನು ಉಪದೇಶ ಪಡೆದು. ಕವಚ ಅರ್ಗಳ ಕೀಲಕ...ರಹಸ್ಯತ್ರಯ ಸೇರಿಸಿ... ನ್ಯಾಸಗಳನ್ನು ಮಾಡಿ.....ವಿಧಿಪೂರ್ವಕವಾಗಿ ಪಾರಾಯಾಣ ಮಾಡುವ ವಿಧಾನ ..ದಾಮರೀ ತಂತ್ರ ಮತ್ತು..ಕಾತ್ಯಾಯನಿ ತಂತ್ರ ಎಂಬ ಎರಡು ಗ್ರಂಥಗಳಲ್ಲಿ ಹೇಳಲಾಗಿದೆ. ಇಲ್ಲಿ ನೀವು ಕೇಳಿದ್ದು ಸ್ತ್ರೀಯರು ''ಪಾರಾಯಣ'' ಮಾಡಬಹುದೇ ಎಂದು.. ಪಾರಾಯಣಕ್ಕೂ ಮತ್ತು ಓದುವುದಕ್ಕೋ ವ್ಯತ್ಯಾಸವಿದೆ. ಮಂತ್ರದ ಉಪದೇಶ ಪಡೆಯಲು ಇರುವ ವಿಧಾನಗಳನ್ನು ಅನುಸರಿಸಿ ಉಪದೇಶ ಪಡೆದು, ನಿರ್ದಿಷ್ಟ ಗ್ರಂಥಗಳ ಅನುಸಾರ ನಿರ್ದಿಷ್ಟ ಫಲಕ್ಕಾಗಿ ನಡೆಸುವ ಜಪವಿಧಾನವೆ ಪಾರಾಯಣ. ಮತ್ತು ವೈದಿಕ ಅದ್ಯಯನಕ್ಕೆ ಉಪನಯನಾದಿಗಳ ಅವಶ್ಯಕತೆ ಇದೆ. ಸಪ್ತಶತಿ ಪುರಾಣದಲ್ಲಿದೆ. ಪೌರಾಣಿಕ ಉಪಾಸನೆಗಳು ಸ್ತ್ರೀಯರಿಗೆ ವಿಶೇಷವಾಗಿ ಇವೆ ಅಲ್ಲವೇ..ಎಂಬ ಸಂಶಯ ಬರುತ್ತದೆ. ಆದರೆ.. ಆ ಕಥಾ ಭಾಗ ಪುರಾಣದಲ್ಲಿರುವುದು ನಿಜ. ಆದರೂ ಕೂಡ... ಆ ಕಥೆಯ ಭಾಗವನ್ನು ಎತ್ತಿಕೊಂಡು ಅದನ್ನು ಹೇಗೆ ಉಪಾಸನೆ ಮಾಡಿದರೆ ಯಾವ ಫಲ... ಎಂದು ತಂತ್ರ ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗಾಗಿ ಇದು ತಾಂತ್ರಿಕ ಉಪಾಸನೆ. ತಾಂತ್ರಿಕ ಉಪಾಸನೆ ಸ್ತ್ರೀಯರಿಗೆ ನಿಷಿದ್ಧ. ತಾಂತ್ರಿಕದಲ್ಲಿ ಸಾತ್ವಿಕ ತಂತ್ರಗಳ ಜೊತೆ... ಕ್ಷುದ್ರ ತಂತ್ರಗಳನ್ನೂ ಹೇಳಲಾಗಿದೆ. ತಾಂತ್ರಿಕ ಬೀಜಾಕ್ಷರ ಸೇರಿದ ಮಂತ್ರಗಳ ಜಪವನ್ನೂ ಮತ್ತು ನ್ಯಾಸವಿಧಾನ.. ಭೂತ ಶುದ್ಧಿ... ಅಂತರ್ಮಾತ್ರುಕಾ ನ್ಯಾಸ..ಬಹಿರ್ಮಾತ್ರುಕಾ ನ್ಯಾಸ...ಮುಂತಾಗಿ ಹೇಳಿದೆ. ಈ ದುರ್ಗಾ ಸಪ್ತಶತಿ ಪಾರಾಯಣದ ಬಗ್ಗೆ ಅದರ ರಹಸ್ಯಗಳ ಮತ್ತು ವಿಧಾನಗಳ ಬಗ್ಗೆ. ಒಂದು ಸಾವಿರ ಪುಟಗಳ ಬೃಹತ್ ಗ್ರಂಥ ಇದೆ. ಮುಂಬಯಿಯ ಐತಿಹಾಸಿಕ ಮತ್ತು ಪ್ರಸಿದ್ಧ ವೆಂಕಟೇಶ್ವರ ಪ್ರೆಸ್ ೧೯೨೬ ರಲ್ಲಿ ಅದನ್ನು ಪ್ರಕಟಿಸಿದೆ.

ಇಂತಹ.. ಸಾತ್ವಿಕ ಮತ್ತು ತಾಮಸಿಕ ಎರಡೂ ರೀತಿಯ ತಾಂತ್ರಿಕ ವಿಧಾನಗ ಹೊಂದಿರುವ ಸಪ್ತಶತಿಯ ಪಾರಾಯನವನ್ನು ಮೂಲ ಮಂತ್ರದ ಉಪದೇಶ ಪಡೆದು... ಒಂಭತ್ತು ಲಕ್ಷ ಜಪ ಮಾಡಿ... ಆಮೇಲೆ ನ್ಯಾಸ ಸಹಿತವಾಗಿ ಪಾರಾಯಣ ಮಾಡುವ ಶ್ರದ್ದೆ ಮತ್ತು ಅದರಿಂದಾಗುವ ಎಲ್ಲ ರೀತಿಯ ಪರಿಣಾಮಗಳನ್ನು ಎದುರಿಸುವ ಧೈರ್ಯ...ಯಾವುದಾದರೂ ಹೆಂಗಸಿಗೆ ಇದ್ದರೆ... ಅವರನ್ನು ತಡೆಯಬೇಡಿ.. ಮಾಡಲು ಹೇಳಿ... ಧೈರ್ಯ ಮತ್ತು ಶ್ರದ್ದೆ ಎರಡೂ ಇಲ್ಲದೇ... ನಾನ್ಯಾಕೆ ಮಾಡಬಾರದು..? ಎಂಬ ಹುಂಬತನ ಅವರಲ್ಲಿದ್ದರೆ ಅಂಥವರು ಮಾಡದೇ ಇರುವುದು ಉತ್ತಮ ಎಂಬುದು ನನ್ನ ಭಾವನೆ. ತಾಂತ್ರಿಕ ಸಿದ್ಧಿಗಾಗಿ ಹಂಬಲಿಸಿ...ಮಂತ್ರೋಪಾಸನೆಗೆ ಇಳಿದು ಜೀವನವನ್ನು ನರಕ ಮಾಡಿಕೊಂಡ ಅನೇಕ ಸ್ತ್ರೀಯರನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ.
ಕಥೆ ಓದಲು ಅಡ್ಡಿ ಇಲ್ಲ. ಪಾರಾಯಣ ಬೇಡ ಅಷ್ಟೇ.

No comments:

Post a Comment