Wednesday, July 11, 2012

ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್



ಇತ್ತೇಚೆಗೆ ಫೆಸ್ ಬುಕ್ ನ ವೇದಿಕೆಯೊಂದರಲ್ಲಿ ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಯಾರೋ ನನ್ನನ್ನು ಅಲ್ಲಿ ಎಳೆದುಕೊಂಡು ಹೋಗಿ ಸೇರಿಸಿದರು. ನನಗೆ ಅಂತಹ ಚರ್ಚೆಗಳು ಅನಾವಶ್ಯಕ ಅನಿಸಿದ್ದರಿಂದ ನಿರಾಸಕ್ತನಾಗಿದ್ದೆ. ಆದರೆ ಅಲ್ಲಿ ನಡೆಯುವ ಕೆಲ ಅಸಂಬದ್ಧ ವಿಷಯ ಮಂಡನೆಯನ್ನು ನೋಡಿ ಸಹಿಸಲಾಗದೇ ನಾನೂ ಚರ್ಚೆಯಲ್ಲಿ ಧುಮುಕಿದೆ. ಅನೇಕ ವಿಷಯಗಳ ಚರ್ಚೆಯಾದ ನಂತರ ಮತ್ತು ಇತ್ತೀಚಿನ ಕೆಲ ವಿದ್ವಾಂಸರ ಜನಪ್ರಿಯ ಪ್ರವಚನ ಮತ್ತು ಪುಸ್ತಕಗಳನ್ನು ಓದಿದಾಗ, ಹಾಗೂ ಬೆಂಗಳೂರಿನಂಥ ನಗರದ  ಮಧ್ಯಮ  ಮತ್ತು ಮೇಲ್ಮಧ್ಯಮ ವರ್ಗಗಳ ಜನರ ಜೊತೆ ಕೆಲ ದಿನಗಳಿಂದ ಒಡನಾಡಿದ ನಂತರ  ಗಮನಕ್ಕೆ ಬಂದ ವಿಷಯ ಏನೆಂದರೆ,  ಭಾರತದ ಬಹುತೇಕ ಅಕ್ಷರಸ್ಥರು ವಿಚಾರವಂತರು ನಮ್ಮ ಭಾರತೀಯ ಧಾರ್ಮಿಕ ಆಚರಣೆಗಳ ಹಿಂದಿನ ಮರ್ಮಗಳನ್ನು ಅಥವಾ  ಉದ್ದೇಶಗಳನ್ನು ತಿಳಿಯುವಲ್ಲಿ ಆಸಕ್ತರಾಗಿದ್ದಾರೆ. ನಗರಗಳಲ್ಲಿ ಅಂಥವರ ಸಂಖ್ಯೆ ತುಂಬಾ ಬೆಳೆಯುತ್ತಿದೆ. ಆದರೆ ಅಂಥವರಿಗೆ ಅವರಿಗೆ ಬೇಕಾದ ವಿಷಯಗಳನ್ನು ತಿಳಿಯುವ ಸರಿಯಾದ ''ದಾರಿ'' ಗೊತ್ತಿಲ್ಲದ ಕಾರಣ ದೇವಸ್ಥಾನಗಳ ಅರ್ಚಕರು ಹಾಗೂ ಟಿವಿ ಗಳಲ್ಲಿ ಬರುವ ಏನೂ ಓದಿಕೊಳ್ಳದ ನಿರ್ಲಜ್ಜ ಜ್ಯೋತಿಷಿಗಳನ್ನು ಆಶ್ರಯಿಸುತ್ತಿದ್ದಾರೆ.  ಇಂತಹ ಜನ ಸಮೂಹದ ದೃಷ್ಟಿಯಲ್ಲಿ ಟಿವಿಗಳಲ್ಲಿ ಅಲ್ಪ-ಸ್ವಲ್ಪ ಚೆನ್ನಾಗಿ ಮಾತಾಡುವವರು ಕೂಡ ಮಹಾತ್ಮರಾಗಿ ಕಾಣುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗೆ  ವಿಪರೀತ TRP ಬರುತ್ತಿದೆ ಮತ್ತು ಎಲ್ಲ ಚಾನೆಲ್ ಗಳು ಬೆಳಗಿನ ಹೊತ್ತು ಇಂತಹ  ಕಾರ್ಯಕ್ರಮಗಳಿಗೆ ಮೀಸಲಾಗುತ್ತಿವೆ.  ಇತ್ತೀಚಿನ ಶ್ರೀಮಂತ ಆಂಗ್ಲ ಶಾಲೆಗಳಲ್ಲಿ ಕೂಡ ಹಬ್ಬಗಳು ಯಾಕೆ ಮಾಡಬೇಕು ? ಮುಂತಾದ ವಿಷಯಗಳನ್ನು ಹಬ್ಬಗಳ ಮುನ್ನಾ ದಿನಗಳಲ್ಲಿ ಮಕ್ಕಳಿಗೆ ಹೇಳಿ  ಕಳಿಸುತ್ತಿರುವುದು ಆಶ್ಚರ್ಯದ ವಿಚಾರ. ಇತ್ತೀಚೆಗೆ ನಾನು ಭೇಟಿಯಾದ ಮಹಿಳೆಯೊಬ್ಬರು ''ಈ ಯುಗಾದಿ ಹಬ್ಬದ ಬಗ್ಗೆ ನನಗಿಂತ ನನ್ನ ಆರು ವರ್ಷದ ಮಗುವಿಗೆ ಚೆನ್ನಾಗಿ ಗೊತ್ತಿದೆ'' ಎಂದು ಹೇಳಿಕೊಳ್ಳುವಾಗ ಆಕೆಯ ಮುಖದಲ್ಲಿ ಕೀಳರಿಮೆಯ ಜೊತೆಗೆ..''ನನ್ನ ಮಗನನ್ನು ಅಂತಹ ಉತ್ತಮ ಶಾಲೆಯಲ್ಲಿ ಒದಿಸುತ್ತಿದ್ದೇವೆ'' ಎಂಬ ಜಂಬ ಹೆಚ್ಚಾಗಿ ಕಾಣುತ್ತಿತ್ತು. ನಿಮ್ಮ ಮಕ್ಕಳಿಗೆ ಇಂಥದ್ದನ್ನೆಲ್ಲ ಕಲಿಸುತ್ತಿದ್ದೇವೆ ಎಂಬ ಪ್ರಲೋಭನೆಯೊಂದಿಗೆ  ಹೆಚ್ಚಿನ ಡೊನೇಶನ್ ಪೀಕುತ್ತಿದ್ದೇವೆ ಎಂಬ ವಿಷವನ್ನು ಗಮನಕ್ಕೆ ಬಾರದ ಹಾಗೆ ಮಾಡುವ ಶಿಕ್ಷಣ ವ್ಯವಸ್ಥೆಯ ಹೊಸ ವ್ಯಾಪಾರ ತಂತ್ರ ಇದು ಎಂದು ಆಕೆಗೆ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ''ನೀನು ದುಡ್ಡು ಕೊಡು,  ನಾವು ಎಲ್ಲ ನೀಡುತ್ತೇವೆ'' ಎನ್ನುವ ವ್ಯಾಪಾರ ತಂತ್ರ.  ಮತ್ತು ''ನಾವು ದೊಡ್ದು ಕೊಡುತ್ತೇವೆ, ಹಾಗಾಗಿ  ನಮ್ಮ ಜವಾಬ್ದಾರಿ ಎಲ್ಲ ಮುಗಿಯಿತು'' ಎನ್ನುವ ಪೋಷಕರ ಮನಸ್ಥಿತಿ- ಈ ಎರಡೂ ಒಟ್ಟೊಟ್ಟಿಗೆ ಕಂಡು ಬರುತ್ತಿವೆ. ಈ ಸ್ಥಿತಿ ಶಿಕ್ಷಣದಲ್ಲಿ ಮಾತ್ರ ಅಲ್ಲ, ಇಡಿಯಾದ ಮಾರುಕಟ್ಟೆ....ಇದೇ  ದಾರಿಯಲ್ಲಿ ಮುನ್ನುಗ್ಗುತ್ತಿದೆ.  ಭಾರತೀಯ ಧಾರ್ಮಿಕ ಆಚರಣೆಗಳ ವಿಷಯಕ್ಕೆ ಮತ್ತೆ ಬರುವುದಾದರೆ,  ನಗರ ಜೀವನ ಹುಟ್ಟು ಹಾಕುವ ಅನೇಕ ಸಮಸ್ಯೆಗಳ ನಿವಾರಣೆ, ನಾಳಿನ ಬಗೆಗಿನ ಭಯ, ಜ್ಞಾನದ ಕೊರತೆ, ಅತಿ ಆಸೆ  ಮುಂತಾದ ಅನೇಕ ಕಾರಣಗಳಿಗಾಗಿ ಜನ ಜ್ಯೋತಿಷಿಗಳ ಮತ್ತು ದೇವಸ್ಥಾನಗಳ ಮುಂದೆ ತಂಡೋಪ ತಂಡವಾಗಿ ಕಾಣಿಸುತ್ತಿದ್ದಾರೆ. ಮಂತ್ರಗಳ -ಸ್ತೋತ್ರಗಳ ಕಲಿಯುವುವಿಕೆ ಮುಂತಾದವುಗಳು ಹೆಚ್ಚುತ್ತಿವೆ. ಇನ್ನು ಅನೇಕರು ಪೂಜಾ-ಆಚರಣೆಗಳ ಹಿನ್ನೆಲೆಯನ್ನು ತಿಳಿಯುವ   ನಿಟ್ಟಿನಲ್ಲಿ ಅತೀ ಉತ್ಸುಕರಾಗಿದ್ದಾರೆ.  ಈ ಎಲ್ಲ ಆಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆಯೇ ಇಲ್ಲವೇ ? ಎಂದು ತಿಳಿಯುವ ಕುತೂಹಲಿಗಳ ಸಂಖ್ಯೆಯೂ ದೊಡ್ಡದಿದೆ. ಈ ಉದ್ದೇಶದ ಹಿಂದೆ....ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಇಲ್ಲ . ಶ್ರದ್ಧೆ ಮತ್ತು ಆಸಕ್ತಿ ಇದ್ಯಾವುದೂ ಇಲ್ಲ. ಒಂದು ದೊಡ್ಡ ಸಮುದಾಯವೇ ಸಂಪೂರ್ಣವಾಗಿ ಒಂದು ಸನ್ನಿಗೆ ಒಳಗಾಗಿದೆ .. ಅದೇನೆಂದರೆ ಭಾರತೀಯೇತರ ಧರ್ಮಗಳಲ್ಲಿ ಅಥವಾ ಹಿಂದೂಯೇತರ ಧರ್ಮಗಳಲ್ಲಿ ಎಲ್ಲ ಪಾರದರ್ಶಕವಾಗಿದೆ,  ನೆರವಾಗಿದೆ.. ವೈಜ್ಞಾನಿಕವಾಗಿದೆ ಮತ್ತು ಎಲ್ಲ ಸರಿಯಾಗಿದೆ...ಎಂಬ ಭ್ರಮೆಯ ಜೊತೆಗೆ ಭಾರತೀಯ ಆಚರಣೆಗಳು ಕೂಡ ವೈಜ್ಞಾನಿಕ ಎಂದು ಸಾಬೀತು ಪಡಿಸುವ ಹುಕಿಗೆ ಬಿದ್ದು ಅವುಗಳ ಹಿನ್ನೆಲೆಯನ್ನು ತಿಳಿಯುವವರ ಸಂಖ್ಯೆ ಬೆಳೆಯುತ್ತಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವ ಜನರು ಹುಟ್ಟಿಕೊಂಡಿದ್ದಾರೆ.  ಕಳೆದ ಕೆಲ ಶತಮಾನಗಳಲ್ಲಿ ರಾಜನೈತಿಕ ದಾಸ್ಯದ ಪರಿಣಾಮವಾಗಿ....ಬೌದ್ಧಿಕ ಮತ್ತು ವೈಚಾರಿಕವಾಗಿಯೂ ನಮ್ಮ ಮನಸುಗಲ್ಲಿ ದಾಸ್ಯ ಬೇರೂರಿದೆ. ದಾಸ್ಯ ಮನೋಭಾವದ ಪರಿಣಾಮವಾಗಿ ಪಶ್ಚಿಮ ದೇಶಗಳ ಎಲ್ಲವೂ ಸಾಮಾನ್ಯ ಭಾರತೀಯರ ಕಣ್ಣಿಗೆ sophisticated ಆಗಿ ಕಾಣಿಸುತ್ತದೆ. ನಮ್ಮ ಋಷಿಗಳು ಹೇಳಿದ ಮಾತುಗಳು ನಮಗೆ ಕಾಲ ಕಸವಾದರೆ..ಅದೇ ಮಾತುಗಳನ್ನು ಇಂಗ್ಲಿಷ್ ನಲ್ಲಿ ಹೇಳಿದ ಮ್ಯಾಕ್ಸ್ ಮುಲ್ಲರ್  ಮಾತನ್ನು  ನಾವು ಹೆಮ್ಮೆಯಿಂದ ಕೊಟ್ ಮಾಡುತ್ತೇವೆ. ಕನ್ನಡದ ಒಳ್ಳೆ ಪುಸ್ತಕದ ಹೆಸರುಗಳು ಸರಿಯಾಗಿ ತಿಳಿಯದ ನಾವು ಇಂಗ್ಲಿಷ್ ನಲ್ಲಿ ಬರೆದ ತಲೆಹರಟೆ ಪುಸ್ತಕಗಳನ್ನು ದೊಡ್ಡ ಬುದ್ಧಿಜೀವಿಯಂತೆ ಪೋಸ್ ಕೊಟ್ಟುಕೊಂಡು ಓದುತ್ತೇವೆ. ''ನಾನು ಇಂಗ್ಲಿಷ್  ಪುಸ್ತಕ ಓದುತ್ತೇನೆ'' ಎನ್ನುವುದೇ ದೊಡ್ಡ ಹೆಮ್ಮೆ. ಅದರಲ್ಲಿ ಕಸ ತುಂಬಿದೆ ಎಂಬುದು ಅರ್ಥವಾಗುವುದಿಲ್ಲ. ಆದ್ದರಿಂದಲೇ...ಚೇತನ್ ಭಗತ್ ನನ್ನು  ''ನೀವು ಭಾರತೀಯರಗಿದ್ದೂ ಕೂಡ ನೀವು  ಹಿಂದಿಯಲ್ಲಿ ಯಾಕೆ ಬರೆಯುವುದಿಲ್ಲ''?  ಎಂದು ಕೇಳಿದಾಗ ''it's not considered cool to pick up a Hindi book in India '' ಅಂತ ಹೇಳಿದ್ದ... ಅವನಿಗೆ ಮಾರ್ಕೆಟ್ phycology ಚೆನ್ನಾಗಿ ಗೊತ್ತು. ಕಸ ತುಂಬಿ ಕೊಟ್ಟರೂ ನಮ್ಮ ಜನ ಇಂಗ್ಲಿಷ್ ಪುಸ್ತಕ ಓದುತ್ತಾರೆ. ರಸದ ಬಗ್ಗೆ ಅವರಿಗೆ ಗೊತ್ತಿಲ್ಲ.
ಅದೇ ರೀತಿ ನಮ್ಮ ಈ ಧಾರ್ಮಿಕ ಆಚರಣೆಗಳು ಅವೈಜ್ಞಾನಿಕ, ಮತ್ತು ಮೂಢನಂಬಿಕೆಗಳಿಂದ ಕೂಡಿವೆ ಎಂದು ಬಲವಾಗಿ ನಂಬುವ ದಾಸ್ಯ ಮೊನೋಭಾವದ ಸಮೂಹ ಅವುಗಳ ಹಿನ್ನೆಲೆಯನ್ನು, ಮತ್ತು ವೈಜ್ನಾನಿಕತೆಯನ್ನು ತಿಳಿಯುವ ಮೂಲಕ ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರದ್ದೆಗೆ ಬದಲಾಗಿ ಕೀಳರಿಮೆ ಈ ಬೆಳವಣಿಗೆಗೆ ಕಾರಣವಾಗುತ್ತಿರುವುದು ನಾಚಿಕೆ ಪಡುವ ವಿಚಾರ. ''ಧರ್ಮ'' ಮತ್ತು ''ಆಧ್ಯಾತ್ಮ'' ಎಂಬ ಈ ಎರಡು ಶಬ್ದಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ಹಾಗೂ ದುರುಪಯೋಗಕ್ಕೊಳಗಾದ ಶಬ್ದಗಳು. ಅವುಗಳ ನಿಜವಾದ ಅರ್ಥ ಸಾಮಾನ್ಯರಿಗೆ ತಿಳಿಸಬೇಕಾದ,  ಆಧ್ಯಾತ್ಮ ಬೋಧಿಸಬೇಕಾದ ಪುರಾತನ ಗುರುಪೀಠಗಳು ಶುಲ್ಕ ವಿಧಿಸಿ ಪಾದಪೂಜೆ,  ಅಭಿಷೇಕ, ಕುಂಕುಮಾರ್ಚನೆ, ಶ್ರಾದ್ಧ ಮುಂತಾದವುಗಳನ್ನು ಮಾಡಿಸುವ ಸೇವಾ ಕೌಂಟರ್ ಗಳಾಗಿ ಪರಿವರ್ತನೆಗೊಂಡಿವೆ. ರಾಜರ ಆಶ್ರಯದಲ್ಲಿ ಜ್ಞಾನ ಕೇಂದ್ರ ಗಳಾಗಿ  ಕೆಲಸ ಮಾಡುತ್ತಿದ್ದ ದೇವಸ್ಥಾನಗಳು ಈಗಿಲ್ಲ.  ಈಗ ಸರ್ಕಾರಗಳ ಕೈಯಲ್ಲಿರುವ ಹಾಗೂ  ಶ್ರೀಮಂತರು ಮತ್ತು  ಮಾಡಲು ಕೆಲಸವಿಲ್ಲದ ವೃದ್ಧ ಟ್ರಸ್ಟಿಗಳು ಕಟ್ಟಿಸುವ ದೇವಸ್ಥಾನಗಳಲ್ಲಿ ಅಜ್ಞಾನದ  ಪೋಷಣೆ ನಡೆಯುತ್ತಿದೆಯೇ ಹೊರತು ಆಧ್ಯಾತ್ಮದ ಪರಿಚಯವೂ ಸಾಮಾನ್ಯರಿಗಾಗುತ್ತಿಲ್ಲ. ''ಧರ್ಮ'' ಎನ್ನುವ ಶಬ್ದ  ಹಿಂದೂ-ಮುಸ್ಲಿಂ ಜಗಳಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು, ಆಧ್ಯಾತ್ಮ- ಧರ್ಮ ಬೊಧಿಸದೇ ಹೋದರೂ ಕೂಡ ಅವುಗಳ ಮುಸುಕಿನಲ್ಲಿ  ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿಯಂತ್ರಿಸುವ,  ಯೋಗಾಸನ ಹೇಳಿಕೊಡುವ ಹಾಗೂ ಗಿಡಮೂಲಿಕೆ ಔಷಧಿ ಕೊಡುವ ಆಧುನಿಕ ಮಠಗಳು ಅಥವಾ ''ಮಲ್ಟಿ ಸ್ಪೆಷಾಲಿಟಿ ಆಶ್ರಮಗಳು'' ಶ್ರೀಮಂತರ ಜೇಬಿಗೆ ಮಾತ್ರ ನಿಲುಕುವಂಥವುಗಳು. ಈ ವಿಚಿತ್ರ ಸ್ಥಿತಿಯಲ್ಲಿರುವ  ''ಜನಸಾಮಾನ್ಯ'' ಗಲಿಬಿಲಿಗೊಂಡು ಸಿಕ್ಕ ಸಿಕ್ಕವರನ್ನು ''ಗುರೂಜಿ'' ''ಸ್ವಾಮೀಜಿ'' ಎಂದು ಕರೆಯುತ್ತಿದ್ದಾನೆ. ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವುದನ್ನೇ ''ಧಾರ್ಮಿಕತೆ'' ಮತ್ತು, ಹನುಮಾನ್ ಚಾಲೀಸಾ ಪಠಿಸುವುದನ್ನೇ ''ಆಧ್ಯಾತ್ಮಿಕತೆ''  ಎಂದು ತಿಳಿಯುತ್ತಿದ್ದಾನೆ. ಆದರೆ ಪ್ರಪಂಚದ ಎಲ್ಲ ಧರ್ಮಗಳಿಗಿಂತ ಭಾರತೀಯ ಸನಾತನ ಧರ್ಮ ಅತ್ಯಂತ ಪ್ರಾಚೀನವಾದದ್ದು. ಮತ್ತು ಅತೀ ಶ್ರೇಷ್ಠವಾದದ್ದು ಎಂದು ಭಾಷಣ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂಥವರನ್ನು ಪಕ್ಕಕ್ಕೆ ಕರೆದು ''ಸ್ವಾಮೀ, ಧರ್ಮ ಎಂದರೇನು ? ಎಂದು ಕೇಳಿ ನೋಡಿ...'' ನಿಮಗೆ ಸರಿಯಾದ ಉತ್ತರೆ ಸಿಕ್ಕರೆ ಅದು ಈ ದಶಕದ ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ .  


14 comments:

  1. ಪ್ರಸಕ್ತ ಸಮಾಜದಲ್ಲಿ "ದೇವರು ಧರ್ಮ ಆಧ್ಯಾತ್ಮ" ಎನ್ನುವ ಪದಗಳ ದುರುಪಯೋಗ ಮತ್ತು ನಿಜ ಆಸ್ಥೆ ಇರುವವರನ್ನು ತಪ್ಪುದಾರಿಗೆ ಎಳೆಯುವ ದುರ್ಮಾರ್ಗರ ಮಗ್ಗೆ ಅತ್ಯಂತ ನೇರ ನುಡಿಗಳಲ್ಲಿ ಶ್ರೀ ದತ್ತರಾಜರು ವಿಮರ್ಶೆ ಮಾಡಿದ್ದರೆ. ಎಲ್ಲ ಸಹೃದಯ ವಿಚಾರವನ್ತರೂ ಆಲೋಚಿಸಲೆಬೇಕಾದ ವಿಚಾರ.

    ReplyDelete
  2. ಆಧ್ಯಾತ್ಮ ಮತ್ತು ಧರ್ಮ ದ ವಿಷಯದಲ್ಲಿರುವ ಅಂಧ ಕಲ್ಪನೆಗಳ ಮೇಲೆ ಬೆಳಕು ಚೆಲ್ಲಿದ ಸಕಾಲಿಕ ಮತ್ತು ಸಮರ್ಥ ಲೇಖನ.. ಶುಭವಾಗಲಿ :)

    ReplyDelete
  3. ಪ್ರಸ್ತುತ ಸಮಾಜದ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ ಈ ಲೇಖನ. ಪ್ರತಿಯೊಬ್ಬನೂ ಓದಿ ಅರ್ಥೈಸಿಕೊಂಡಲ್ಲಿ ನಮ್ಮ ಢೋಂಗಿತನಕ್ಕೆ ಕಡಿವಾಣ ಬೀಳಬಹುದೋ ಏನೋ.

    ReplyDelete
  4. ನಾವು ಬರಬರುತ್ತಾ ಮೂಢರಾಗಿದ್ದೇವೆ. ಶೋ ಬಿಸಿನೆಸ್ಸ್ ಆಗಿ ಬಿಟ್ಟಿದೆ ಧರ್ಮ ಅಂದರೆ. ತುಂಬಾ ಪರಿಣಾಮಕಾರಿಯಾಗಿ ವಿವರಿಸಿದ್ದೀರಿ . ಧನ್ಯವಾದಗಳು

    -ಅಕುವ

    ReplyDelete
  5. ಧರ್ಮವು ಮತಗಳಾಗಿ ಒಡೆದು ಮೂಲ ಸಿದ್ಧಾಂತವನ್ನು ಕಲಸು ಮೇಲೋಗರ ಮಾಡಿರುವುದು, ಪಾಶ್ಚಾತ್ಯ ಸಂಸ್ಕೃತಿಯ ದಾಳಿ ಹಾಗೂ ಶಿಕ್ಷಣ ವ್ಯವಸ್ಥೆ, ರಾಜಕೀಯ ಪಕ್ಷಗಳ ಜಾತಿ ಓಲೈಸುವಿಕೆಯ ಪ್ರಭಾವ ಕೂಡಾ ಧರ್ಮದ ಬಗ್ಗೆ ಅಜ್ಞಾನವನ್ನು ಪ್ರಚಾರ ಮಾಡುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ...

    ReplyDelete
  6. ಲೇಖನ ತುಂಬಾ ಚೆನ್ನಾಗಿದೆ.....ಇಂದು ಧರ್ಮ ಅಂದರೆ ಒಂದು ವ್ಯಾಪಾರ ಆಗಿದೆ . ಇಲ್ಲಿ ಪರದೇಶದಲ್ಲಿ ಕೆಲವರನ್ನು ನೋಡಿದ್ದರೆ ನನಗೆ ತುಂಬಾ ಆಶ್ಚರ್ಯ ಆಗುತ್ತದೆ. ಅವರು ತಮ್ಮ ಮಕ್ಕಳಿಗೆ ಧರ್ಮದ ಬಗ್ಗೆ ತಾವು ಬೋಧಿಸದೆ ಅವರನ್ನು religious training class ಗೆ ಕಳಿಸುತ್ತಾರೆ. ಇದನ್ನು ನೋಡಿ ಬೇಜಾರಾಗುತ್ತದೆ. ಒಬ್ಬ ನನ್ನ ಸಂಬಂಧಿಕರು ನನಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು, ನಾನು ನನ್ನ ಮಗನಿಗೆ religious training ಕ್ಲಾಸ್ ಗೆ ಕಳಿಸುತ್ತಿದ್ದೇನೆ. ನಾನು ತುಂಬಾ ಆಶ್ಚರ್ಯದಿಂದ ಅವರಿಗೆ ನೋಡಿದೆ, ಮನಸ್ಸಲ್ಲಿ ಕೋಪ ತುಂಬಿ ಬಂತು " ಎಂಥ ಇಡಿಯಟ್ ಜನರು ಎಂದು, ಸ್ವಂತ ಮಕ್ಕಳಿಗೆ ತನ್ನ ಧರ್ಮದ ಬಗ್ಗೆ ಕಲಿಸದೆ class ge ಕಳಿಸುತ್ತಾರಂತೆ

    ReplyDelete
  7. ಧರ್ಮ ಅಂದರೆ ಏನು ಅಂತ ಕೇಳಬೇಕಾಗಿರೋದು ಯಾವುದೋ ಸ್ವಾಮಿನ,ಅಂತ ನಾವು ಅಂದುಕೊಳ್ಳೊದೇ ನಮ್ಮ ಟೊಳ್ಳು ತನವನ್ನು ತೋರಿಸುತ್ತೆ. ಯಾಕೆ ನಮಗೆ (ಪ್ರತಿಯೊಬ್ಬರಿಗೂ) ಯಾವುದು ನಮ್ಮ 'ಧರ್ಮ' ಅಂತ ಗೊತ್ತಿರುವುದು ಸಾಧ್ಯವಿಲ್ಲವೇ?
    ನಮ್ಮ ಧಾರ್ಮಿಕ ಭಾವನೆಗಳನ್ನು ವ್ಯಾಪಾರಕ್ಕಾಗಿ ಬಳಸಿಕೊಳ್ಳುತ್ತಾರೆನ್ನುವುದು ನಾವೆಷ್ಟು ದುರ್ಬಲರು ಎನ್ನುವುದನ್ನು ತೋರಿಸುತ್ತದೆ.
    ನಮ್ಮ ನಮ್ಮ ಧರ್ಮದ ಬಗ್ಗೆ ನಾವು ಸರಿಯಾಗಿ ತಿಳಿದುಕೊಳ್ಳದೇ ಇನ್ನೂ ಇರುವುದೇಕೆ? ಇದನ್ನು ತಿಳಿಸುವುದಕ್ಕೆ ಮೂರನೆ ವ್ಯಕ್ತಿ(ಸ್ವಾಮಿ)ಯ ಮೇಲೆ ಅವಲಂಬನೆ ಯಾಕೆ? ಹೀಗಿದ್ದೂ ಮತ್ತೊಬ್ಬರು ನಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿದ್ದಾರೆಂದು ಹಳಹಳಿಸಿದರೆ, ನಮ್ಮ ಮೂರ್ಖತನವಲ್ಲದೆ ಬೇರಲ್ಲ. ಮತ್ತೊಬ್ಬರನ್ನು ದೂರುವುದರ ಬದಲು ನಾವೇ ಎಚ್ಚರಿಕೆಯಿಂದ ಇರಬಹುದಲ್ಲ್.!!!

    ReplyDelete
  8. ಉತ್ತಮ ಬರಹ
    ಬದಲಾಗುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವಲ್ಲ
    ಸ್ವರ್ಣಾ

    ReplyDelete
  9. Poornima Hejamadi ಹೌದು ದತ್ತ ರಾಜರೆ ನಿಮ್ಮಲೇಖನ ತುಂಬಾ ಚೆನ್ನಾಗಿದೆ, ಜನ ಸಾಮಾನ್ಯರಿಗೆ ಅರ್ಥವಾಗುವಂತಿದೆ. ನಿಜವಾಗಿ ಧರ್ಮ ಎಂದರೇನು?

    ReplyDelete
    Replies
    1. ಸ್ನೇಹಿತರೆ..
      ಈ ಲೇಖನ ಪ್ರಕಟವಾದ ಎಲ್ಲ ಮಾಧ್ಯಮಗಳಲ್ಲಿಯೂ ಎಲ್ಲರೂ ಒಂದು ಪ್ರಶ್ನೆ ಎತ್ತುತ್ತಿದ್ದಾರೆ.
      ಹಾಗಾದರೆ ನಿಜವಾದ ಧರ್ಮ ಯಾವುದು ? ಎಂದು.
      ನಿಜ...ನಾನು ಅದನ್ನು ಹೇಳಲು ಹೋಗಿಲ್ಲ. ಹೇಳುವ ಪ್ರಯತ್ನವನ್ನೂ ಮಾಡುವುದಿಲ್ಲ ಏಕೆಂದರೆ ಈ ಫೆಸ್ ಬುಕ್ಕಿನ ಪುಟಗಳ ಇತಿ ಮಿತಿಗಳ ಮಧ್ಯೆ ಒಂದೆರಡು ಸಾಲಿನ ತುರ್ತು ಚರ್ಚೆಗಳಲ್ಲಿ ''ಧರ್ಮ'' ದಂತಹ ವಿಷಯವನ್ನು ವಿವರಿಸುವುದು ಮೂರ್ಖತನ ಎಂಬುದು ನನ್ನ ಭಾವನೆ. ''ಧರ್ಮ'' ಎಂದರೆ ಏನು ಎಂದು ತಿಳಿಸಲಿಕ್ಕಾಗಿಯೇ ರಾಮನು ಹುಟ್ಟಿ ಬಾಳಿ ತೋರಿಸಿದ್ದು ಎಂದು ಹಿರಿಯರು ಹೇಳುತ್ತಾರೆ. ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ವಾಲ್ಮೀಕಿ ಬರೆದ ಮೂಲ ರಾಮಾಯಣ ಕೃತಿಯನ್ನು ಓದಿ ಅದರ ಪ್ರತಿ ಸನ್ನಿವೇಶವನ್ನೂ ವಿಚಾರ ವಿಮರ್ಶೆ ಮಾಡಿದಾಗ.. ಅನುಭವಸ್ಥರ ಬಳಿ ಅದರ ಬಗ್ಗೆ ಮಾತನಾಡಿ ಚಿಂತನ ಮಂಥನ ಮಾಡಿದಾಗ ಧರ್ಮದ ಸ್ವರೂಪ ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತದೆ ಎನ್ನುವುದು ನನ್ನ ಸ್ವಂತ ಅನುಭವ. ಇನ್ನು ಆ ಅನುಭವವನ್ನು ಒಂದೆರಡು ವಾಕ್ಯಗಳಲ್ಲಿ ಹೇಗೆ ಹೇಳಲಿ...? ಧರ್ಮದ ಮತ್ತು ಅಧ್ಯಾತ್ಮದ ನಿಜಸ್ವರೂಪವನ್ನು ತಿಳಿಯಬಯಸುವ ಯಾರೇ ಆಗಲಿ... ಮಹಾ ಭಾರತ ..ರಾಮಾಯಣ... ಗೀತೆ..ವೇದಗಳು.... ವೇದದ ಅಂಗ ಗ್ರಂಥಗಳು... ಇತ್ಯಾದಿಗಳ ಅನುವಾದವನ್ನಾದರೂ ಕನಿಷ್ಠ ಪಕ್ಷ ಓದಿಕೊಂಡರೆ ಮೂಢರಂತೆ ಬೇರೆಯವರ ಅಭಿಪ್ರಾಯಗಳ ಮೇಲೆ ಭಾಷಣಗಳ ಮೇಲೆ ನಮ್ಮ ಜ್ಞಾನ ಅದಾರಪಡುವುದಿಲ್ಲ. ಬಾಲ್ಯದಿಂದಲೇ...ಓದಿನ ಕೊರತೆ ಈ ಎಲ್ಲ ಅನರ್ಥಗಳಿಗೆ ಕಾರಣ. ಮಕ್ಕಳ ಕೈಗೆ... ಪುಸ್ತಕಗಳನ್ನು ಕೊಡಿ. ಧರ್ಮಾಚರಣೆ ಮನೆಯಲ್ಲಿ ಪ್ರಾರಂಭ ಮಾಡಿ. ಎಲ್ಲ ಸರಿ ಹೋಗುತ್ತದೆ. ದೇವಸ್ಥಾನಗಳು. ಮಠಗಳು.. ಜ್ಯೋತಿಷಿಗಳು ಯಾರೂ ಬೇಕಾಗಿಲ್ಲ. ವಿದ್ವಾಂಸರ ಮತ್ತು ಸಾಧುಗಳ ಸಹವಾಸದ ಮಹತ್ವವನ್ನು ಮನಗಾಣಬೇಕು. ವಿದ್ವಾಂಸರನ್ನು ಗುರುತಿಸುವಷ್ಟಾದರೂ ನಮಗೆ ಜ್ಞಾನ ಇರಬೇಕು. ಅಲ್ಲವೇ...?

      Delete
  10. ಧರ್ಮದ ಬಗ್ಗೆ ತಿಳಿಯದ ಜನರ ರಂಪಾಟ ಈ ದಿನಗಳಲ್ಲಿ ಹೆಚ್ಚಾಗಿದೆ ,ಆದ ಕಾರಣ ನಿಮ್ಮ ಲೇಖನ ಸಾಮಾನ್ಯ ಜನರಿಗೆ ಒಳ್ಳೇ ಸಂದೇಶ ತಂದಿದೆ ,ಧನ್ಯವಾದಗಳು .

    ReplyDelete
  11. ಸ್ನೇಹಿತರೆ
    ನಾನು ನನ್ನ ವೈಯಕ್ತಿಕ ಬ್ಲಾಗ್ ನಲ್ಲಿ ಸುಮ್ಮನೆ ಮನಸು ಹಗುರ ಮಾಡಿಕೊಳ್ಳಲಿಕ್ಕೆ ಬರೆದ ಈ ಮೇಲಿನ ಲೇಖನವನ್ನು ಸಹೃದಯಿ ಸದ್ಯೋಜಾತರು ಮೆಚ್ಚಿಕೊಂಡು ಒಡ್ಡೋಲಗದಲ್ಲಿ ಎಲ್ಲರಿಗೂ ಓದಲು ಅವಕಾಶವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಅದನ್ನು ಹಾಕಿದರು ಮತ್ತು ನೀವುಗಳೆಲ್ಲ ಆಸ್ಥೆಯಿಂದ ಪ್ರತಿಕ್ರಯಿಸಿದ್ದೀರಿ. ನಿಮ್ಮ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ನನ್ನ ಗಮನಕ್ಕೆ ಬಂದ ಸಂಗತಿಯೆಂದರೆ ನಾನು ಜ್ಯೋತಿಷಿಗಳ ಬಗ್ಗೆ ಮತ್ತು ಮಠಗಳ ಬಗ್ಗೆ ಸ್ವಲ್ಪ ಖಾರವಾದ ಭಾಷೆಯನ್ನೂ ಬಳಸಿರುವುದು ಅನೇಕರಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಆದರೆ ವಾಸ್ತವವಾಗಿ ಮಠಗಳನ್ನಾಗಲೀ ಜ್ಯೋತಿಷಿಗಳನ್ನಾಗಲೀ ನಿಂದಿಸುವ ಉದ್ದೇಶ ನನ್ನದಾಗಿರಲಿಲ್ಲ. ಲೇಖನದ ಮುಖ್ಯ ವಿಷಯ ಬೇರೆಯದೇ ಆಗಿತ್ತು. ಅನೇಕರು ನಾನು ಹೇಳ ಹೊರಟ ಮುಖ್ಯವಿಷಯದ ಕಡೆಗೇ ಗಮನ ಕೊಡದೆ ಹೋದದ್ದು ಬೇಸರದ ಸಂಗತಿ.

    ReplyDelete
  12. ನಾನು ಬರೆದದ್ದು ಮಠ ಮಂದಿರಗಳು ಕೆಲವರ ಹಿತಾಸಕ್ತಿಯನ್ನು ಕಾಯುವ ಬಗ್ಗೆ ಅಲ್ಲ, ಸಾಮೂಹಿಕವಾಗಿ ಸಮಾಜ ಪ್ರತಿಯೊಂದು ಭಾರತೀಯ ಆಚಂರನೆಯ ಹಿಂದಿನ ವೈಜ್ಞಾನಿಕತೆಯನ್ನು ತಿಳಿಯುವಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಒಬ್ಬ ಸ್ನೇಹಿತ ನನನ್ನು, ವೇದದಲ್ಲಿ ವಿಜ್ಞಾನದ ಬಗ್ಗೆ ಏನಾದರೂ ಹೇಳಿದ್ದಾರೆಯೇ? ಅದರ ಬಗ್ಗೆ ಬರೆಯಿರಿ ಎಂದು ಕೇಳಿದ. ಯಾಕೆ..? ವೇದದಲ್ಲಿ ವಿಜ್ಞಾನದ ಬಗ್ಗೆ ಮಾತ್ರ ನೀವು ಕೇಳುತ್ತಿದ್ದೀರಿ..? ವೇದದಲ್ಲಿ ವಿಜ್ಞಾನದ ಹೊರತಾಗಿ ಲಕ್ಷಗಟ್ಟಲೆ ವಿಷಯಗಳನ್ನು ಹೇಳಲಾಗಿದೆ. ವಾಸ್ತವವಾಗಿ ''ವೇದ'' ಎನ್ನುವ ಶಬ್ದದ ಅರ್ಥವೇ ವಿಜ್ಞಾನ. ಸಂಪೂರ್ಣವಾಗಿ ವೇದವೇ ವಿಜ್ಞಾನವಾಗಿರುವಾಗ ಅದರಲ್ಲಿ ವಿಜ್ಞಾನದ ಹುಡುಕಾಟ ಏಕೆ...? western scale ನಿಂದ ಭಾರತೀಯ ಅಧ್ಯಾತ್ಮವಿದ್ಯೆಯನ್ನು ಅಳೆಯುವುದು ಎಷ್ಟು ಸರಿ? ತಿಳಿದು, ನಂಬಿ ಶ್ರದ್ಧೆಯಿಂದ ಮಾಡಬೇಕಾದ ಆಚರಣೆಯ ಹಿಂದಿನ ಮರ್ಮವನ್ನು ಕೇವಲ ಇನ್ನೂರು ವರ್ಷಗಳ ಕೂಸಾದ ''ಆಧುನಿಕ ವಿಜ್ಞಾನ'' ನ ಮಾನದಂಡದ ಮೂಲಕ ಯಾಕೆ ಅಳೆಯಬೇಕು?. ನಮ್ಮ ವಿಜ್ಞಾನ ಸಾವಿರಾರು ವರ್ಷ ಹಳೆಯದು. ಈ ಸಾಮೂಹಿಕ ಮಾನಸಿಕ ರೋಗದ ಬಗ್ಗೆ ಬೆಳಕು ಚೆಲ್ಲಲು ನಾನು ಪ್ರಯತಿನಿಸಿದ್ದು. ಬಹುಶಃ ಅನುಭವದ ಕೊರತೆಯಿಂದಾಗಿ ನಾನು ಅದನ್ನು ಪ್ರಖರವಾಗಿ ಹೇಳದೇ ಹೋದದ್ದರಿಂದ ಉಳಿದ ಉಪವಿಶಯಗಳ ಮೇಲೆಯೇ ಎಲ್ಲರೂ ಗಮನ ಹರಿಸುವಂತಾಗಿರಬಹುದು.

    ReplyDelete
  13. ಮತ್ತು ಮಠಗಳು ಕಾರ್ಪೋರೆಟ್ ಆಗಲು ಕಾರಣ ಯಾರು? ಅಂತಹ ಮಠಗಳಿಗೆ ಹೋಗುವ ಜನರ ಅಜ್ಞಾನ ತಾನೇ ? ಅಜ್ಞಾನಕ್ಕೆ ಹಲವು ಮುಖಗಳು. ಬಾಲ್ಯದಲ್ಲೇ ಸಿಗಬೇಕಾದ ಸಂಸ್ಕಾರ, ವಿವೇಕ, ಮತ್ತು ಸಾಮಾನ್ಯ ಧಾರ್ಮಿಕ ಜ್ಞಾನ ಸಿಗದೇ ಹೋದಾಗ ಅಂತಹ ವ್ಯಕ್ತಿಗಳಿಗೆ ಮುದಿವಯಸಿನಲ್ಲಿ ಈ ಶ್ರೀ ಶ್ರೀ ಗಳು ಗುರುವಾಗಿ ಕಾಣಿಸುತ್ತಾರೆ. ತಪ್ಪು ನಮ್ಮಲ್ಲಿ ಇದೇ. ಶ್ರೀ ಶ್ರೀಗಳಲ್ಲಿ ಅಲ್ಲ. ನೋಡುವ ಬೆಕ್ಕು ಕುರುಡಾಗಿದ್ದಾಗ ಇಲಿಯೂ ಕೂಡ ಅದರ ಮುಂದೆ ಕುಣಿದಾಡಿ ಡ್ಯಾಶ್ ...ತೋರಿಸಿ ಹೋಗುತ್ತದೆ.

    ಇದರಲ್ಲಿ ಇಲಿಯ ತಪ್ಪು ಏನೂ ಇಲ್ಲ. ಬೆಕ್ಕು ತನ್ನ ಕಣ್ಣು ತೆರೆಯಬೇಕಷ್ಟೇ.

    ReplyDelete