Tuesday, June 5, 2012

ಹೇಳಿದ್ದು ಪರರಿಗೆ. ಹೇಳುವುದೂ ಪರರಿಗೇ...!ಮೊನ್ನೆ ಸಭೆಯೊಂದರಲ್ಲಿ ವಿದ್ವಾಂಸರೊಬ್ಬರು ಮಾತನಾಡುತ್ತಿದ್ದರು..ಅವರು ಮೀಮಾಂಸಾ ಶಾಸ್ತ್ರವನ್ನು ಗುರು ಮುಖೇನ ಅದ್ಯಯನ ಮಾಡಿದವರು. ಶ್ರಿಂಗೇರಿ ಸಂಸ್ಥಾನದ ಈಗಿನ ಮತ್ತು ಹಿಂದಿನ ಪೀಠಸ್ಥ ಸ್ವಾಮಿಗಳಿಗೆ ಸನ್ನಿಹಿತರು.  ಶೃಂಗೇರಿ ಸ್ವಾಮಿಗಳು ಸ್ವತಃ ವೇದ ಶಾಸ್ತ್ರಗಳನ್ನು ತಿಳಿದವರಾದ್ದರಿಂದ ಅಲ್ಲಿ ನಿಂತು ಶಾಸ್ತ್ರ ವಿಷಯ ಚರ್ಚೆ ಮಾಡಲು ತಾಕತ್ತು ಬೇಕು.. ಅಂತಹ ಮಠದಲ್ಲಿ ಅನೇಕ ವರ್ಷ ಇದ್ದು ಸ್ವಾಮಿಗಳಿಂದ...ಭೇಷ್ ಅನಿಸಿಕೊಂಡ ವಿದ್ವಾಂಸರು ಅವರು.. ಅನೇಕ ಸಂಸ್ಥೆಗಳು ಅವರಿಗೆ ಕೈಗೆ ಬಂಗಾರದ ಕಡಗ ತೊಡಿಸಿ ಗೌರವಿಸಿವೆ. ಅವರು ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು.. ''ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ತೀಯತಾಂ'' ವೇದವನ್ನು ಅನುದಿನವೂ ಅಧ್ಯಯನ ಮಾಡಬೇಕು..ಮತ್ತು ಅದರಲ್ಲಿ ಹೇಳಿದ ಸ್ವಕರ್ಮಗಳನ್ನು ತಪ್ಪದೆ ಆಚರಿಸಬೇಕು..ಸತ್ಪ್ರಜೆಗಳನ್ನು(ಮಕ್ಕಳನ್ನು)  ಪಡೆಯಬೇಕು. ಅವರಿಗೂ ಒಳ್ಳೆಯ ಸಂಸ್ಕಾರ ನೀಡಿ ಅವರನ್ನೂ ಕೂಡ ವೈದಿಕ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು. ನಮ್ಮೆಲ್ಲರ ಮೇಲೆ ಮೂರು ವಿಧವಾದ ಋಣಗಳು ಇರುತ್ತವೆ.. ೧.ಋಷಿ-ಋಣ. ೨.ದೇವ-ಋಣ.. ೩.ಪಿತೃ-ಋಣ . ವೆದಾಧ್ಯಯನದಿಂದ ಋಷಿಗಳ ಋಣವನ್ನು , ಯಜ್ಞ ಕರ್ಮಗಳಿಂದ ದೇವ ಋಣವನ್ನು ಹಾಗೂ ಸತ್ಪ್ರಜೆಗಳ ಉತ್ಪತ್ತಿಯಿಂದ ಪಿತೃಗಳ ಋಣವನ್ನು ಕಳೆದುಕೊಳ್ಳಬೇಕು..ಲೌಕಿಕ ಮಾರ್ಗದಲ್ಲಿ ಹೋಗಬಾರದು. ಉದ್ಯೋಗಕ್ಕಾಗಿ ವೇದಾಧ್ಯಯನ ಅಲ್ಲ... ಕರ್ತವ್ಯ ನಿರ್ವಹಣೆಗಾಗಿ.  ''ಬ್ರಾಹ್ಮಣೆನ ನಿಷ್ಕಾರಣೆನ ಷಡಂಗೋ ವೇದೋ ಅಧ್ಯೇತವ್ಯಃ, ಜ್ನೆಯಶ್ಚ''   ನಿಷ್ಕಾರಣವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ವೇದವನ್ನು ಮತ್ತು ಅದರ ಆರು ಅಂಗಗಳನ್ನು ಅಧ್ಯಯನ ಮಾಡಬೇಕು ಮತ್ತು ತಿಳಿಯಬೇಕು.  ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಭ್ರಷ್ಟರ ಮನೆಗಳಿಗೆ ಹೋಗಬಾರದು..ಸಂಭಾವನೆ ಅಥವಾ ದಕ್ಷಿಣೆಗಾಗಿ  ಹಣವಂತರ ಮುಂದೆ ಹಲ್ಲು  ಕಿರಿಯಬಾರದು. ಮುಂತಾಗಿ ಮಾತನಾಡುತ್ತಾ ಹೋದರು...ಅವರ ಮಾತುಗಳೆಲ್ಲವೂ ಒಪ್ಪಬೇಕಾದವುಗಳೇ ಆಗಿದ್ದರೂ ಕೂಡ ಈ ಎಲ್ಲ ಮಾತುಗಳನ್ನು ನಾವುಗಳು ಬಾಲ್ಯದಿಂದಲೇ ಅನೇಕ ಬಾರಿ ಕೇಳಿ ಕೇಳಿ ರೋಸಿ ಹೋಗಿತ್ತು. ವಿದ್ವಾಂಸರು ತಮ್ಮ ಮಾತಿನುದ್ದಕ್ಕೂ ನನ್ನ ಕಡೆಗೇ ನೋಡಿಕೊಂಡು ಮಾತನಾಡುತ್ತಿದ್ದರು. ಏಕೆಂದರೆ ನಾನು ಅದೇ ದಿನ ಮಧ್ಯಾನ್ಹ ಅವರಲ್ಲಿ ಒಂದು ಮಾತು ಕೇಳಿದ್ದೆ.  ''ಇತ್ತೀಚೆಗೆ ಸಂಪೂರ್ಣ ವೇದಾಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ'' ಎಂಬ  ಮಾತು  ಚರ್ಚೆಗೆ ಬಂದಾಗ..''ಹನ್ನೆರಡು ಅಥವಾ ಹದಿನೈದು ವರ್ಷ ಕಷ್ಟ ಪಟ್ಟು ವೇದ ಓದುವವರಿಗೆ ಆ ವಿದ್ಯೆಗೆ ತಕ್ಕ ಸರಿಯಾದ ಉದ್ಯೋಗವೇ ಕರ್ನಾಟಕದಲ್ಲಿ ಇಲ್ಲ. ಇನ್ನು ಯಾರಾದ್ರು ಯಾಕೆ ಓದುತ್ತಾರೆ''?   ''ಬರೀ ಪೂಜೆ ಮಂತ್ರಗಳನ್ನು ಕಲಿತು ಹೊಟ್ಟೆ ಪಾಡಿಗೆ ಪುರೋಹಿತರಾಗುತ್ತಿದ್ದಾರೆ.. ಹೀಗಾಗಿ ಅವರ ತಪ್ಪು ಇಲ್ಲ''  ವೇದಾಧ್ಯಯನ ಮಾಡುವವರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಯೋಚಿಸಬೇಕು. ದೊಡ್ಡ ಮಠಗಳು ಕೂಡ ಪುರೋಹಿತರ ಮತ್ತು ಅರ್ಚಕರ (ಎರಡೂ ಬೇರೆ ಬೇರೆ ) ಸಮೂಹವನ್ನು ತಯಾರು ಮಾಡುತ್ತಿವೆಯೇ ಹೊರತು.. ವೇದ ವಿದ್ವಾಂಸರನ್ನು ತಯಾರು ಮಾಡುತ್ತಿಲ್ಲ. ಈ ಸಾವಿರಾರು ಕೋಟಿ ಆಸ್ತಿ ಹೊಂದಿರುವ, ವೈದಿಕ ಧರ್ಮ ಉಳಿಸಲಿಕ್ಕಾಗಿಯೇ ಹುಟ್ಟಿಕೊಂಡ ದೊಡ್ಡ ದೊಡ್ಡ ಮಠಗಳು.. ನಿಮ್ಮಂಥ ಹಿರಿಯರು.. ಹಾಗೂ ಸರ್ಕಾರ.. ಹೀಗೇ ಯಾರಿಂದಲೂ ''ಪೂರ್ಣವೆದಾಧ್ಯಯನ'' ಮಾಡಿಸುವ ಮತ್ತು ವೇದ ಓದಿದವರಿಗೆ ತಕ್ಕ ಉದ್ಯೋಗ ದೊರಕಿಸುವ ಪ್ರಯತ್ನ ನಡೆಯುತ್ತಿಲ್ಲ. ''ಈ ಬಗ್ಗೆ ಕಾಳಜಿ ಕಾಣಿಸುತ್ತಿಲ್ಲ'' ಎಂದು ತಿವಿದಿದ್ದೆ.  ಹೀಗಾಗಿ ಸಭೆಯಲ್ಲಿ ನನ್ನನ್ನು ಉದ್ದೇಶವಾಗಿಟ್ಟುಕೊಂಡು ಅನಗತ್ಯ ಧರ್ಮ ಬೋಧನೆ ಮಾಡತೊಡಗಿದ್ದರು. ನನಗೆ ಆಕ್ರೋಷ ತಾಳಲಾರದೆ ಅಲ್ಲೇ ವೇದಿಕೆಯಲ್ಲೇ ತಡವಿಕೊಂಡು ಚರ್ಚೆಗಿಳಿದೆ. ಆದರೆ ಅವರು,  ''ಆಮೇಲೆ ಮಾತಾಡೋಣ'', ''ಆಮೇಲೆ ಮಾತಾಡೋಣ'', ಎಂದು ಸಂಸೃತ ಭಾಷೆಯಲ್ಲಿ ನನಗಷ್ಟೇ ಅರ್ಥವಾಗುವಂತೆ ಹೇಳಿ ನುಣುಚಿಕೊಂಡರು.  ಆ ಸಭೆಯನ್ನು ಆಯೋಜಿಸಿದ ವ್ಯಕ್ತಿ ಒಂದು ಪ್ರಸಿದ್ಧ ದೇವಸ್ಥಾನದ  ಮಾಲೀಕ.   ಪರಮಾತ್ಮನ ಸೇವೆ ಎಂಬ ಸೋಗಿನಲ್ಲಿ ದೋಚಿದ ಹಣವೇ ಅವನ ಬಂಡವಾಳ.  ಆ ದೇವಸ್ಥಾನದ ಮಾಲೀಕ ಎಷ್ಟು ಧೂರ್ತ-ಅಧರ್ಮಿ ಭ್ರಷ್ಟ ಎಂಬುದು ನನಗಿಂತ ಅವರಿಗೇ ಚೆನ್ನಾಗಿ ಗೊತ್ತು. ಆದರೆ ..ಸಬೆ ಮುಗಿದಾಗ ''ಭಾರದ'' ಸಂಭಾವನೆಯ ಕವರ್  ಅನ್ನು  ವಿದ್ವಾಂಸರು ನಗುನಗುತ್ತಲೇ ಪಡೆದರು. ರಾತ್ರಿ ಊಟಕ್ಕೆ ಕುಳಿತಾಗ ಅವರನ್ನು ಮತ್ತೆ ತಡವಿ,  ಮೆಲ್ಲಗೆ ವಿಷಯಾಂತರ ಮಾಡಿ ವಿಶ್ವಾಸಕ್ಕೆ ತಂದುಕೊಂಡು ''ನಿಮ್ಮ ಮಕ್ಕಳು ಎಲ್ಲಿದ್ದಾರೆ ಏನು ಮಾಡಿಕೊಂಡಿದ್ದಾರೆ..? ಎಂದು ಕೇಳಿದೆ. ''ದೊಡ್ಡ ಮಗ ಇನ್ಫೋಸಿಸ್ ನಲ್ಲಿ ಇದಾನೆ. ಎರಡನೆಯವನು ಕೇಟರಿಂಗ್ ಮಾಡುತ್ತಾನೆ. ಮೂರನೆಯವನು ಕೂಡ ಸಾಫ್ಟ್ ವೇರ್ ಇಂಜಿನಿಯರ್..  ಅರವತ್ತು ಸಾವಿರ ಸಂಬಳ''. ಎಂದು ಹೇಳುವಾಗ ಅವರ ಮುಖದಲ್ಲಿ ಅಗತ್ಯಕ್ಕಿಂತ ಹೆಚ್ಚು ಗರ್ವ ಅಸಹ್ಯವಾಗಿ ಕಾಣುತ್ತಿತ್ತು. ನಾನು ಅವರ ಮಕ್ಕಳ ಉದ್ಯೋಗದ ಬಗ್ಗೆ ಯಾಕೆ ಕೇಳಿದೆ ಎಂದು ಅವರಿಗೆ ಗೊತ್ತಾದಂತೆ ತೋರಲಿಲ್ಲ.  ''ನೀವು ಪೂರ್ವ ಮೀಮಾಂಸಾ ಮತ್ತು ಉತ್ತರ ಮೀಮಾಂಸಾ ಎರಡನ್ನು ಓದಿದ್ದೀರಿ. ಆದರೆ ವೇದಾಧ್ಯಯನ ಎಲ್ಲಿಯ ವರೆಗೆ  ಆಗಿದೆ''?  ಎಂದು ಕೇಳಿದೆ.. '' ನಾವು ಓದುವ ಕಾಲದಲ್ಲಿ ಈಗಿನಂತೆ ಒಳ್ಳೆಯ ವೇದ ಪಾಠಶಾಲೆಗಳು  ಇರಲಿಲ್ಲ'' ಎಂಬುದಷ್ಟೇ ಅವರ ಉತ್ತರವಾಗಿತ್ತು. (ಏಕೆಂದರೆ ಕೇವಲ ಪೂಜೆ-ಪುನಸ್ಕಾರಗಳಿಗೆ,  ಹೋಮ-ಹವನಗಳಿಗೆ ಬೇಕಾಗುವಷ್ಟು ಮಂತ್ರಗಳು ಮಾತ್ರ ಅವರಿಗೆ ತಿಳಿದಿವೆ) ಊಟವಾದ ಮೇಲೆ ತಾಂಬೂಲ ಮೆಲ್ಲುತ್ತಾ ಅವರು ತಮಗೆ ಉಪರಾಷ್ಟ್ರಪತಿಗಳಿಂದ ದಿಲ್ಲಿಯಲ್ಲಿ ನಡೆದ ಸನ್ಮಾನದ ಕಥೆಯನ್ನು ಹೇಳತೊಡಗಿದರು. ನನಗೆ ಸಹಿಸಲಾಗದೆ..'' ಈ ಕಥೆಗಳನ್ನೆಲ್ಲಾ..ನಿಮ್ಮ ಮೊಮ್ಮಕ್ಕಳಿಗೆ ಹೇಳಿ..ಚೆನ್ನಾಗಿರುತ್ತೆ..'' ಎಂದು ಕಟುವಾಗಿ ಹೇಳಿ ಅಲ್ಲಿಂದ ಎದ್ದು ಹೊರಟೆ. ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅವಮಾನವಾದಂತಾಗಿ ಅವರು ಅವಾಕ್ಕಾದರು. ಆದರೆ ಅವರಿಗೆ ಅವಮಾನ ಮಾಡಿದೆನೆಂಬ ಭಾವವೇ ನನಗೆ ಬರಲಿಲ್ಲ. ಬದಲಾಗಿ ''ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ'' ಎನ್ನುವ   ಶಾಪ  ನನ್ನ   ಮನಸಿನಲ್ಲಿ ತಾನೇ ತಾನಾಗಿ ಮೂಡಿ ನಿಂತಿತ್ತು.

1 comment:

  1. ಇದು ಕಲಿಕಾಲವಲ್ಲವೇ? ಹಾಗಾಗಿ ಅಂತಹ ಪಾಖಂಡಿಗಳಿಂದಲೇ ತುಂಬಿರುವ ಈ ಸಮಾಜದ ಧರ್ಮ ಮತ್ತು ಸಂಪ್ರದಾಯದ ಪ್ರಾಂಗಣದಲ್ಲಿ ನಡೆಯುವ ಬೂಟಾಟಿಕೆಯ ನಾಟಕ ನೋಡಿದರೆ ಹೇಸಿಗೆ ಬರುತ್ತದೆ. ಅಂತಹದೇ ಚಿತ್ರಣ ನಿಮ್ಮ ಲೇಖನದಲ್ಲೂ ಎದ್ದು ಕಾಣುತ್ತದೆ. ದಕ್ಷಿಣೆ ಕಾಸಿನ ಸಂಪಾದನೆಗಾಗಿಯೇ ಇರುವ ಇಂತಹ ಅಬ್ರಾಹ್ಮಣ್ಯದ ಬ್ರಾಹ್ಮಣರಿಂದಲೇ ಸತ್ಯವಾಗಿಯೂ ಬ್ರಾಹ್ಮಣರಿಗೆ ಇಡೀ ಸಮಾಜದಲ್ಲೇ ಅವಹೇಳನದ ನೋಟ. ನಿಷ್ಕೃತಿ ಎಂದಿಗೋ ಗೊತ್ತಿಲ್ಲ.

    ReplyDelete